ದೆಹಲಿಯಿಂದ ಒಂದು ಪತ್ರ
ಬೆಂಗಳೂರಿನಿಂದ ದೆಹಲಿಗೆ ಬಾನಂಗಳದಲ್ಲಿ ಮೋಡಗಳ ಬೆನ್ನೇರಿ ವಿಮಾನ ಹಾರುತ್ತಿತ್ತು. ಕಳೆದ ನಾಲ್ಕು ದಶಕಗಳ ಅವಧಿಯಲ್ಲಿ ಈ ಲೋಹದ ಹಕ್ಕಿಗಳ ಒಡಲಲ್ಲಿ ಅದೆಷ್ಟು ಬಾರಿ ಕುಳಿತು ಖಂಡ ಖಂಡಾಂತರಗಳನ್ನು ದಾಟಿದ್ದೇವೋ ಲೆಕ್ಕವಿಲ್ಲ. ಆದರೆ ಹಿಂದೆಂದೂ ಆಗದ ವಿಶೇಷ ಅನುಭವ ಈ ಬಾರಿಯ ಪ್ರಯಾಣದಲ್ಲಿ ಆಯಿತು. ವಿಮಾನವನ್ನೇರಿ ನಮ್ಮ ಆಸನದಲ್ಲಿ ಕುಳಿತುಕೊಳ್ಳಲು ಹೋದಾಗ ಆ ವೇಳೆಗಾಗಲೇ ನಮ್ಮ ಪಕ್ಕದ ಆಸನದಲ್ಲಿ ಪೈಲೆಟ್ ಕುಳಿತಿದ್ದರು! ಗಗನಸಖಿ ಹತ್ತಿರ ಬಂದು ಅವರನ್ನು ಉಪಚರಿಸಿ "Thank you captain" ಎಂದಾಗ ಅವರು ಪೈಲೆಟ್ ಎಂಬುದು ಮತ್ತಷ್ಟೂ ಖಾತ್ರಿಯಾಯಿತು. ಕಾಕ್ಪಿಟ್ನಲ್ಲಿ ಇರಬೇಕಾದ ಪೈಲೆಟ್ ಇಲ್ಲೇಕೆ ಕುಳಿತಿದ್ದಾರೆಂದು ಸೋಜಿಗ ಉಂಟಾಯಿತು. ಮೊನ್ನೆ ಲಾಹೋರ್ನಿಂದ ಲಂಡನ್ಗೆ ಪ್ರಯಾಣಿಸುತ್ತಿದ್ದ ಪಾಕಿಸ್ತಾನದ ವಿಮಾನದ ಮುಖ್ಯ ಕ್ಯಾಪ್ಟನ್ ವಿಮಾನ ಚಾಲನೆಯ ಜವಾಬ್ದಾರಿಯನ್ನು ಕೋಪೈಲೆಟ್ಗೆ ವಹಿಸಿ ಪ್ರಯಾಣಿಕರ ಸೀಟಿನಲ್ಲಿ ಮೈತುಂಬಾ ಬೆಚ್ಚನೆಯ ಹೊದಿಕೆ ಹೊದ್ದು ಆರಾಮವಾಗಿ ನಿದ್ರಿಸುತ್ತಿದ್ದ ಸಚಿತ್ರ ವರದಿ ನೆನಪಾಯಿತು. ಆದರೆ ಈ ಪೈಲೆಟ್ ನಾವು ಪ್ರಯಾಣಿಸುತ್ತಿದ್ದ ಜೆಟ್ ಏರ್ವೇಸ್ ವಿಮಾನಯಾನದ ಮುಖ್ಯಚಾಲಕ ಆಗಿರಲಿಲ್ಲ. ಇದೇ ಕಂಪನಿಯ ಬೇರೊಂದು ವಿಮಾನವನ್ನು ಬೆಂಗಳೂರಿಗೆ ಚಾಲನೆಮಾಡಿಕೊಂಡು ಬಂದು ಮರಳಿ ದೆಹಲಿಗೆ ನಮ್ಮ ವಿಮಾನದಲ್ಲಿ ಸಹಪ್ರಯಾಣಿಕರಾಗಿದ್ದರು.
ಹಿಂದಿನ ದಿನಮಾನಗಳಲ್ಲಿ ಪ್ರಯಾಣಿಕರು ವಿಶೇಷ ಅನುಮತಿ ಪಡೆದು ಪೈಲೆಟ್ ಕುಳಿತಿರುವ ಕಾಕ್ ಪಿಟ್ ನೋಡಲು ಅವಕಾಶವಿತ್ತು. ಈಗೀಗ ಭದ್ರತೆಯ ಕಾರಣದಿಂದ ಅದು ಸಾಧ್ಯವೇ ಇಲ್ಲ. ಕಾಕ್ಪಿಟ್ ಬಾಗಿಲು ಲಾಕ್ ಆಗಿರುತ್ತದೆ. ಅದರಲ್ಲಿರುವ ಪೈಲೆಟ್ ಸಾಕ್ಷಾತ್ ಭಗವಂತನಂತೆ ಪ್ರಯಾಣಿಕರಿಗೆ ಅಗೋಚರ! ಅವನ ಅಶರೀರವಾಣಿಯನ್ನು ಮಾತ್ರ ಕೇಳಬಹುದಷ್ಟೇ! ದೇವರೂ ಸಹ ಪೈಲೆಟ್ ಇದಂತೆ! ಅಕ್ಕಮಹಾದೇವಿ ಹೇಳುವಂತೆ ಅವನ್ನು ಜಗದ ಯಂತ್ರ ವಾಹಕ ಅವನ ನೆನಪಾಗುವುದು ಕಷ್ಟದಲ್ಲಿ ಮಾತ್ರ. ಜಗದ ಉದ್ದಾರಕ್ಕೆ ಅವನು ಆಗಾಗ ಅವತಾರ ಎತ್ತಿ ಬರುತ್ತಾನೆಂದು ಆಸ್ತಿಕರು ನಂಬುತ್ತಾರೆ. ಆದರೆ ದೇವರು ದೇವರಾಗಿ ಕೈಲಾಸ/ವೈಕುಂಠದಲ್ಲಿದ್ದರೆ ಕ್ಷೇಮ ಅವನೇನಾದರೂ ಈಗ ಭೂಮಿಗೆ ಮಾನವನ ವೇಷ ಧರಿಸಿ ಬಂದರೆ ಪೀಕಲಾಟ ತಪ್ಪಿದ್ದಲ್ಲ. ನಿನ್ನ ಆಧಾರ್ ಕಾರ್ಡು ಕೊಡು, ವೋಟರ್ ಐ.ಡಿ. ಕೊಡು, ಪಾನ್ ಕಾರ್ಡು ತೋರಿಸು ಎಂದು ಅಧಿಕಾರಿಗಳು ಸತಾಯಿಸದೆ ಬಿಡುವುದಿಲ್ಲ, ಕೈಯಲ್ಲಿರುವ ತ್ರಿಶೂಲ, ಶಂಖ, ಚಕ್ರ, ಗದಗಳನ್ನಂತೂ Security Check ವೇಳೆ ತಮ್ಮ ವಶಕ್ಕೆ ತೆಗೆದುಕೊಂಡರೆ ಆಶ್ಚರ್ಯವಿಲ್ಲ.
ನಮ್ಮ ಪಕ್ಕದಲ್ಲಿದ್ದ ಮುಂಬೈ ಮೂಲದ ಯುವ ಪೈಲೆಟ್ ಪರಾಗ ಅವರೊಂದಿಗೆ ವಿಮಾನಯಾನದುದ್ದಕ್ಕೂ ಸುದೀರ್ಘ ಸಂಭಾಷಣೆ. ನಮ್ಮ ಕುತೂಹಲ ಭರಿತ ಪ್ರಶ್ನೆಗಳಿಗೆ ಅವರಿಂದ ಸಮರ್ಪಕ ಉತ್ತರ. ಪ್ರಯಾಣಿಕರಾರೂ ವಿಮಾನದಿಂದ ಕೆಳಗೆ ಇಳಿಯುವಾಗ ನಿಮಗೆ ಧನ್ಯವಾದಗಳನ್ನು ಹೇಳುವುದಿಲ್ಲ ಎಂದಾಗ ನಸುನಕ್ಕರು. ಬಾಲ್ಯದಲ್ಲಿಯೇ ಅವರಿಗೆ ಪೈಲೆಟ್ ಆಗಬೇಕೆಂಬ ಕನಸು ಇತ್ತು. ಒಬ್ಬ ಪೈಲೆಟ್ ಆಗಲು ತರಬೇತಿ ಅವಧಿ ಸೇರಿ ಕನಿಷ್ಟ ಮೂರ್ನಾಲ್ಕು ವರ್ಷಗಳಾದರೂ ಬೇಕು. ಸುಮಾರು 50 ರಿಂದ 60 ಲಕ್ಷ ರೂ. ಖರ್ಚು ಬರುತ್ತದೆ. ನಮ್ಮ ದೇಶದಲ್ಲಿ ಪೈಲೆಟ್ ತರಬೇತಿ ಪಡೆದ ಸುಮಾರು ಏಳು ಸಾವಿರ ಜನ ನಿರುದ್ಯೋಗಿಗಳಿದ್ದಾರೆ. ಪ್ರತಿಕೂಲ ಹವಾಮಾನದ ಸಂದರ್ಭಲ್ಲಿ ವಿಮಾನ ಚಾಲನೆಯ ಸವಾಲುಗಳನ್ನು ಕುರಿತ ನಮ್ಮ ಪ್ರಶ್ನೆಗಳಿಗೆ ಸುದೀರ್ಘ ವಿವರಣೆ ನೀಡಿದರು. ತಮ್ಮ ಐ-ಪ್ಯಾಡ್ ತೆರೆದು ಅಪಾಯಕಾರಿ ಹವಾಮಾನದ ಮೂನ್ಸೂಚನೆ ಹೇಗೆ ಪೈಲೆಟ್ಗೆ ಕಂಪ್ಯೂಟರ್ ಪರದೆ ಮೇಲೆ ಕಾಣಿಸುತ್ತದೆ ಎಂಬ ಚಿತ್ರವನ್ನು ತೋರಿಸಿದರು: ಮಧ್ಯೆ ಕೆಂಪು ಬಣ್ಣ ತುಂಬಿದ ವರ್ತುಲ, ಅದರ ಸುತ್ತ ಹಳದಿ ಬಣ್ಣದ ವರ್ತುಲ, ಮತ್ತೆ ಅದರ ಸುತ್ತ ಬಿಳಿ ಬಣ್ಣದ ವರ್ತುಲ. ಕೆಂಪು ಮತ್ತು ಹಳದಿ ಬಣ್ಣದ ವರ್ತುಲದೊಳಗೆ ಹಾಯದಂತೆ ಪೈಲೆಟ್ ಎಚ್ಚರವಹಿಸಿ ವಿಮಾನಯಾನದ ದಿಕ್ಕನ್ನು ಬದಲಾಯಿಸುತ್ತಾನೆ. ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಸಂದರ್ಭಗಳೇ ಪೈಲೆಟ್ಗೆ ದೊಡ್ಡ ಸವಾಲುಗಳು. ಅವುಗಳನ್ನು ಆತ ಮೈಯೆಲ್ಲಾ ಕಣ್ಣಾಗಿ ನಿಭಾಯಿಸಬೇಕಾಗುತ್ತದೆ. ಅಂತೂ ಮೋಡ ಮುಸುಕಿದ ದೆಹಲಿ ವಿಮಾನ ನಿಲ್ದಾಣವನ್ನು ತಲುಪುವ ವೇಳೆಗೆ ಪೈಲೆಟ್ ವೃತ್ತಿ ಬದುಕಿನ ವಿವಿಧ ಆಯಾಮಗಳ ಕಿರು ಪರಿಚಯ ನಮಗೆ ಉಂಟಾಯಿತು.
ದೆಹಲಿಯಲ್ಲಿದ್ದ ನಮ್ಮ ಕಾರ್ಯಕ್ರಮ ಬೃಂದಾವನದಲ್ಲಿರುವ ಚೈತನ್ಯ ಸಂಪ್ರದಾಯದ ಆಚಾರ್ಯರಾದ ಶ್ರೀವತ್ಸ ಗೋಸ್ವಾಮಿಯವರ ಆಹ್ವಾನದ ಮೇರೆಗೆ, ಬಸವಜಯಂತಿಯ ಮುನ್ನಾ ದಿನ ದೆಹಲಿಗೆ ಆಗಮಿಸುವ ವಿಷಯ ಹೇಗೋ ತಿಳಿದ ಬಸವ ಸಮಿತಿಯ ಅಧ್ಯಕ್ಷರಾದ ಅರವಿಂದ ಜತ್ತಿಯವರಿಂದ ಸಿರಿಗೆರೆಯಿಂದ ಹೊರಡುವಾಗಲೇ ದೂರವಾಣಿ ಕರೆ. ಬಸವ ಸಮಿತಿಯ ಸುವರ್ಣ ಮಹೋತ್ಸವದ ನಿಮಿತ್ತ ಎಂ.ಎಂ. ಕಲಬುರ್ಗಿಯವರ ನಿರ್ದೇಶನದಲ್ಲಿ ಬಸವಾದಿ ಶಿವಶರಣರ ಆಯ್ದ 2500 ವಚನಗಳನ್ನು 23 ಭಾಷೆಗಳಿಗೆ ಅನುವಾದಿಸಿದ ವಚನ ಸಂಪುಟದ ಬಿಡುಗಡೆ ಸಮಾರಂಭವು ದೆಹಲಿಯ ವಿಜ್ಞಾನ ಭವನದಲ್ಲಿ ಆಯೋಜನೆಗೊಂಡಿದ್ದು, ಪ್ರಧಾನ ಮಂತ್ರಿ ಮೋದಿಯವರಿಂದ ಲೋಕಾರ್ಪಣೆಗೊಳ್ಳುತ್ತಿರುವ ಸಂತಸದ ಸಂಗತಿಯನ್ನು ಅರಿಕೆ ಮಾಡಿಕೊಂಡರು. ಪ್ರಧಾನ ಮಂತ್ರಿಯವರ ರಕ್ಷಣಾ ವ್ಯವಸ್ಥೆಯ ಹಿನ್ನೆಲೆಯಲ್ಲಿ ಬೆಳಗಿನ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ನಿವೇದಿಸಿಕೊಳ್ಳಲು ಅವಕಾಶವಾಗದಿರುವುದಕ್ಕೆ ವಿಷಾದ ವ್ಯಕ್ತಪಡಿಸಿ ಮಧ್ಯಾಹ್ನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವರು ಕೋರಿದರು. ಅಧಿಕೃತ ಆಹ್ವಾನಪತ್ರಿಕೆಯಲ್ಲಿ ನಮ್ಮ ಹೆಸರು ಅಚ್ಚಾಗದಿದ್ದರೂ ಬಸವಣ್ಣನವರ ತತ್ವಗಳ ಪ್ರಚಾರಕ್ಕೆ ಅವರು ಮಾಡುತ್ತಿರುವ ಮಹಾಮಣಿಹಕ್ಕೆ ಮೆಚ್ಚಿ ಅವರ ಅನೌಪಚಾರಿಕ ಆಹ್ವಾನಕ್ಕೆ ನಮ್ಮಿಂದ ಸಮ್ಮತಿ. ಬೆಳಗಿನ ಹೊತ್ತು ದೆಹಲಿಯ ನಮ್ಮ ನಿವಾಸದಲ್ಲಿಯೇ ದೂರದರ್ಶನದಲ್ಲಿ ಕಾರ್ಯಕ್ರಮದ ವೀಕ್ಷಣೆ. ಪುಸ್ತಕ ಬಿಡುಗಡೆ ಮಾಡಿ ನಿರರ್ಗಳವಾಗಿ ಮಾತನಾಡಿದ ಪ್ರಧಾನ ಮಂತ್ರಿ ಮೋದಿಯವರ ಭಾಷಣ ಬಸವತತ್ವಾಭಿಮಾನಿಗಳ ಹೃದಯವನ್ನು ಮೋಡಿಗೊಳಿಸಿತ್ತು. ಮಾತುಮಾತಿಗೂ ಸಭಿಕರಿಂದ ಚಪ್ಪಾಳೆಯ ಸುರಿಮಳೆ! ಅಂದಿನ ಸಭೆಯಲ್ಲಿ ಪಾಲ್ಗೊಂಡಿದ್ದರೆ ಇಂದು ನೀವು ಭಾರತದ ಪ್ರಧಾನಿಯಾಗಿ ಸ್ವಚ್ಛ ಭಾರತದ ಕರೆ ಕೊಟ್ಟಿದ್ದರೆ ಅಂದು ಬಸವಣ್ಣನವರು ಕಲ್ಯಾಣದ ಪ್ರಧಾನಿಯಾಗಿ ಪ್ರತಿಯೊಬ್ಬ ವ್ಯಕ್ತಿಯ ಅಂತರಂಗ ಶುದ್ಧಿಗೆ ಕರೆ ನೀಡಿದರು, ಅಂತರಂಗ ಶುದ್ಧಿ ಇಲ್ಲದೆ ಬಹಿರಂಗ ಶುದ್ಧಿ ಸಾಧ್ಯವಾಗದು" ಎಂದು ಮೋದಿಯವರಿಗೆ ಹೇಳಬೇಕೆನಿಸಿತ್ತು. ಪ್ರಧಾನ ಮಂತ್ರಿ ನಿರ್ಗಮಿಸಿದ ಮೇಲೆ ಮಧ್ಯಾಹ್ನದ ಗೋಷ್ಠಿಯಲ್ಲಿ ಭಾಗವಹಿಸಲು ಹೊರಟು ನಿಂತಾಗ ಅಧಿಕೃತವಾದ ಆಹ್ವಾನಪತ್ರಿಕೆ ಮತ್ತು ಪಾಸ್ ಇಲ್ಲದೆ "ವಿಜ್ಞಾನ ಭವನ"ದೊಳಗೆ ಯಾರನ್ನೂ (ಅವರು ಸಚಿವರೇ ಆಗಿದ್ದರೂ) ಬಿಡುವುದಿಲ್ಲವೆಂಬ ಭದ್ರತಾ ನಿಯಮಗಳನ್ನು ಕರ್ನಾಟಕದ ಅಧಿಕಾರಿಗಳ ನಮ್ಮ ಗಮನಕ್ಕೆ ತಂದರು. ಆಗ ಅರವಿಂದ ಜತ್ತಿಯವರಿಗೆ ಕಳುಹಿಸಿದ ನಮ್ಮ SMS ಸಂದೇಶಕ್ಕೆ ಯಾವ ಉತ್ತರವೂ ಬಾರದ ಕಾರಣ ವಿಜ್ಞಾನ ಭವನದ ಸನಿಹದ ನಿವಾಸದಲ್ಲಿದ್ದರೂ ಭಾಗವಹಿಸಲು ಆಗಲಿಲ್ಲ. “ಅರಸುವ ಬಳ್ಳಿ ಕಾಲ ತೊಡರಿದಂತಾಯಿತ್ತು" ಎಂದು ಬಸವಣ್ಣನವರು ಹೇಳುವಂತೆ ಹುಡುಕುತ್ತಿದ್ದ ಬಳ್ಳಿ ಸಿಕ್ಕರೂ Security ಎಂಬ ಬಳ್ಳಿ ಮುಂದೆ ಹೆಜ್ಜೆ ಇಡದಂತೆ ತೊಡರಾಗಿತ್ತು.
ಹಳೆಯ ನೆನಪುಗಳ ಸುರುಳಿ ಬಿಚ್ಚತೊಡಗಿ 60ರ ದಶಕದ ಒಂದು ಘಟನೆ ಸ್ಮರಣೆಗೆ ಬಂದಿತು. ನಮ್ಮ ಗುರುವರ್ಯರು ಬಸವಣ್ಣನವರ ಸಮಗ್ರ ವಚನಗಳನ್ನು ಅಂಗ್ಲಭಾಷೆಗೆ ಅನುವಾದ ಮಾಡಿಸುವ ಸಂಕಲ್ಪವನ್ನು ಮಾಡಿ ಧಾರವಾಡದ ಪ್ರೊಫೆಸರುಗಳಾದ ಮೆನೆಜೆಸ್ ಮತ್ತು ಅಂಗಡಿಯವರಿಗೆ ಅನುವಾದ ಕಾರ್ಯವನ್ನು ವಹಿಸಿದರು. 1964 ರಲ್ಲಿ ಅರಸೀಕೆರೆಯಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಬಸವಣ್ಣನವರ ಅಷ್ಟ ಶತಮಾನೋತ್ಸವವನ್ನು ಕಲ್ಯಾಣದಲ್ಲಿ ಆಚರಿಸಬೇಕೆಂದು ಕರೆಕೊಟ್ಟರು. ಸಮಾರಂಭದಲ್ಲಿ ಪಾಲ್ಗೊಂಡಿದ್ದ ಆಸ್ಥಾನ ವಿದ್ವಾನ್ ಬಿ. ಶಿವಮೂರ್ತಿ ಶಾಸ್ತ್ರಿಗಳು ಬಸವ ಸಮಿತಿಯ ಅಂದಿನ ಅಧ್ಯಕ್ಷರಾಗಿದ್ದ ಬಿ.ಡಿ. ಜತ್ತಿಯವರ ಗಮನಕ್ಕೆ ತರುವುದಾಗಿ ಹೇಳಿದರು. ಸ್ವತಃ ಗುರುವರ್ಯರೂ ಸಹ ಬಿ.ಡಿ. ಜತ್ತಿಯವರ ಮೂಲಕ ಅಂದಿನ ಮುಖ್ಯಮಂತ್ರಿಗಳಾದ ಎಸ್. ನಿಜಲಿಂಗಪ್ಪನವರ ಮೇಲೆ ಪ್ರಭಾವ ಬೀರಿ ಸರಕಾರದಿಂದ ರಾಜ್ಯ ಮಟ್ಟದ ಸಮಿತಿಯನ್ನು ರಚಿಸುವಂತೆಮಾಡಿ ಅಷ್ಟ ಶತಮಾನೋತ್ಸವದ ಆಚರಣೆಗೆ ಮುಂದಾದರು. 1965 ರಲ್ಲಿ ಚಿತ್ರದುರ್ಗದಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಧಾರವಾಡದ ಪ್ರೊಫೆಸರುಗಳಿಂದ ಮಾಡಿಸಿದ 108 ವಚನಗಳ ಆಂಗ್ಲ ಅನುವಾದ ಕೃತಿಯನ್ನು ಆಗಿನ ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ ಅವರಿಂದ ಬಿಡುಗಡೆ ಮಾಡಿಸಿದರು. ನಂತರ 1967ರ ಹೊತ್ತಿಗೆ ಬಸವಣ್ಣನವರ ಸಮಗ್ರ ವಚನಗಳ ಇಂಗ್ಲೀಷ್ ಅನುವಾದ ಕೃತಿಯನ್ನು ಪ್ರಕಟಿಸಿ ಕಲ್ಯಾಣದಲ್ಲಿ ಸರಕಾರ ಏರ್ಪಡಿಸಿದ ಅಷ್ಟಶತಮಾನೋತ್ಸವ ಸಮಾರಂಭದಲ್ಲಿ ಬಿಡುಗಡೆ ಮಾಡಿಸಲು ಬಯಸಿ ಬಿ.ಡಿ ಜತ್ತಿಯವರ ಗಮನಕ್ಕೆ ತಂದಾಗ ಫಲಕಾರಿಯಾಗಲಿಲ್ಲ. ಅದಕ್ಕೆ ಕಾರಣ ಒಂದು ಕಾಲದಲ್ಲಿ ಮಠದ ವಕೀಲರಾಗಿದ್ದ ನಿಜಲಿಂಗಪ್ಪನವರು ಮುಖ್ಯಮಂತ್ರಿಗಳಾದ ಮೇಲೆ ನಮ್ಮ ಗುರುವರ್ಯರೊಂದಿಗೆ ಉಂಟಾಗಿದ್ದ ಮನಸ್ತಾಪ. ಆಗ ನಮ್ಮ ಗುರುವರ್ಯರು ಕಲ್ಯಾಣದಲ್ಲಿ ಸರಕಾರದ ಸಮಾರಂಭಕ್ಕೆ ಸಮಾನಾಂತರವಾಗಿ ಅಷ್ಟಶತಮಾನೋತ್ಸವವನ್ನು ಏರ್ಪಡಿಸಿ ಮಠದಿಂದ ಪ್ರಕಟಿಸಿದ ಬಸವಣ್ಣನವರ ಸಮಗ್ರ ವಚನಗಳ ಆಂಗ್ಲ ಅನುವಾದ ಕೃತಿಯನ್ನು ಸನ್ಮಾನ್ಯ ಬಿ.ಡಿ ಜತ್ತಿಯವರಿಂದಲೇ ಬಿಡುಗಡೆ ಮಾಡಿಸಿದರು.
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 11.5.2017