ಸುಖವೆ೦ಬುದು ಸಂಪತ್ತಿನಲ್ಲಿ ಇಲ್ಲ...

  •  
  •  
  •  
  •  
  •    Views  

ಹಳ ದಿನಗಳ ಹಿಂದೆ ಓದಲು ಕೈಗೆತ್ತಿಕೊಂಡಿದ್ದ ಆ ಪುಸ್ತಕದ ಕೆಲವು ಪುಟಗಳ ಮೇಲೆ ಕಣ್ಣು ಹಾಯಿಸಿದಾಗ ಗಾತ್ರದಲ್ಲಿ ಚಿಕ್ಕದಾದರೂ ಒಂದೆರಡು ಗಂಟೆಗಳಲ್ಲಿ ಓದಿ ಮುಗಿಸಿ ಮರೆಯಬಹುದಾದ ಪುಸ್ತಕ ಅದಾಗಿರಲಿಲ್ಲ. ನಂತರ ಓದಬೇಕೆಂದು ಪಕ್ಕದಲ್ಲಿ ಇಟ್ಟುಕೊಂಡಿದ್ದರೂ ದೈನಂದಿನ ವ್ಯವಹಾರಗಳ ಫೈಲುಗಳ ದಟ್ಟಣಿಯಲ್ಲಿ ಮೂಲೆ ಸರಿದು ಕಾಣೆಯಾಗಿತ್ತು. ಮೊನ್ನೆ ನೆನಪಾಗಿ ಅಂತರಜಾಲವನ್ನು ಜಾಲಾಡಿದಾಗ ಕೆಲವೇ ಕ್ಷಣಗಳಲ್ಲಿ ದೊರೆಯಿತು. ಅದುವೇ ಅನುಭಾವಿ ಕವಿ, ಕಥೆಗಾರ, ಚಿತ್ರಕಾರ ಖಲೀಲ್ ಗಿಬ್ರಾನ್ ರಚಿಸಿದ Spirits Rebellious (ಸಿಡಿದೆದ್ದ ಚೇತನಗಳು) ಎಂಬ ಕೃತಿ. ವಿಶ್ವದ ಈ ಶ್ರೇಷ್ಠ ಕವಿ ಮತ್ತು ಚಿಂತಕನನ್ನು ಕನ್ನಡಿಗರಿಗೆ ಪರಿಚಯಿಸುವ ಮಹಾನ್ ಕಾರ್ಯವನ್ನು ಮಾಡಿದ ಮೈಸೂರು ಮಹರಾಜಾ ಕಾಲೇಜಿನಲ್ಲಿ ನಮ್ಮ ಮೆಚ್ಚಿನ ಕನ್ನಡ ಪ್ರಾಧ್ಯಾಪರಲ್ಲೊಬ್ಬರಾದ ಡಾ. ಪ್ರಭುಶಂಕರ್ ಅವರ ಅಮೂಲ್ಯ ಕೃತಿಯೂ (1970) ನಂತರ ದೊರೆಯಿತು.

ಖಲೀಲ್ ಗಿಬ್ರಾನ್ ಜನಿಸಿದ್ದು ಲೆಬನಾನಿನಲ್ಲಿ 1883ರಲ್ಲಿ. ತಾಯಿ: ಕಮಿಲಾ ರಾಹ್ಮಿ, ಆತನ ತಂದೆಯ ಹೆಸರೂ ಸಹ ಖಲೀಲ್ ಗಿಬ್ರಾನ್! ಅಸಾಧಾರಣ ಬುದ್ಧಿವಂತೆಯಾದ ತಾಯಿ ಹೇಳುತ್ತಿದ್ದ ರಷೀದರ ಕಥೆಗಳನ್ನು ಗಿಬ್ರಾನ್ ತನ್ಮಯತೆಯಿಂದ ಕೇಳುತ್ತಿದ್ದ. ತನ್ನ 20ರ ತಾರುಣ್ಯದಲ್ಲಿ ರಚಿಸಿದ ಸಿಡಿದೆದ್ದ ಚೇತನಗಳು (Spirits Rebellious) ಕ್ರಾಂತಿಕಾರಿ ಕೃತಿ. ಅಂದಿನ ಪುರೋಹಿತಶಾಯಿಯು ಈ ಕೃತಿಯನ್ನು ರಸ್ತೆಯ ಚೌಕದಲ್ಲಿ ಸಾರ್ವಜನಿಕವಾಗಿ ಸುಟ್ಟು ಹಾಕಿತು. ಅದಕ್ಕೆ ಕೊಟ್ಟ ಕಾರಣ: “ಇದು ಯುವಕರಿಗೆ ವಿಷಪ್ರಾಶನ ಮಾಡಿಸುತ್ತದೆ. ಅತ್ಯಂತ ಅಪಾಯಕಾರಿ ಗ್ರಂಥ; ತುರ್ಕಿ ಸಾಮ್ರಾಜ್ಯವನ್ನು ಬುಡಮೇಲು ಮಾಡಲು ಪ್ರಯೋಗಿಸಿದ ಮೊದಲ ಗದಾಪ್ರಹಾರ. ಆಗ ಪ್ಯಾರಿಸ್ನಲ್ಲಿ ತಣ್ಣಗೆ ಚಿತ್ರ ಬಿಡಿಸುತ್ತಾ ಕುಳಿತಿದ್ದ ಗಿಬ್ರಾನ್ ಈ ಸುದ್ದಿಯನ್ನು ಕೇಳಿ "ಒಳ್ಳೆಯದೇ ಆಯಿತು. ಗ್ರಂಥದ ಎರಡನೆಯ ಆವೃತ್ತಿಯನ್ನು ಪ್ರಕಟಿಸಲು ಎಂಥ ಸುವರ್ಣಾವಕಾಶ ಲಭಿಸಿತು" ಎಂದು ಉದ್ಧರಿಸಿದನಂತೆ! ಅಷ್ಟ ನಿಲ್ಲದೆ ಚರ್ಚಿನ ಬಹಿಷ್ಕಾರ ಮತ್ತು ತುರ್ಕಿ ಸರಕಾರದ ಗಡಿಪಾರು ಶಿಕ್ಷೆಗಳು ಜಾರಿಯಾದರೂ ಜಗ್ಗಲಿಲ್ಲ. ಹೊಸ ಸರಕಾರ ಬಂದಾಗ ಗಡಿಪಾರು ಶಿಕ್ಷೆ ರದ್ದಾಯಿತು.

ಈ ಗ್ರಂಥ ನಾಲ್ಕು ಕಥೆಗಳ ಒಂದು ಗುಚ್ಛ. ಕಥೆಗಳಲ್ಲಿ ಮರಿಕಥೆಗಳೂ ಸಹ ಇರುವುದುಂಟು. ಮೊದಲ ಮೂರು ಕಥೆಗಳಲ್ಲಿರುವುದು ಲೇಖಕನ ವಯೋಧರ್ಮಕ್ಕೆ ಅನುಗುಣವಾಗಿ ಪ್ರೇಮ ಮೀಮಾಂಸೆ, ಕೊನೆಯದು ಅಂದು ಚರ್ಚು ಮತ್ತು ಸರ್ಕಾರಗಳು ನಡೆಸುತ್ತಿದ್ದ ಸರ್ವಾಧಿಕಾರದ ವಿಡಂಬನೆ, ಇದನ್ನು ಗಿಬ್ರಾನ್ ರಚಿಸಿದ್ದು ತನ್ನ ಮಾತೃಭಾಷೆ ಅರಬ್ಬಿಯಲ್ಲಿ, ಕವಿ ತೀರಿಕೊಂಡ 18 ವರ್ಷಗಳ ಬಳಿಕ ಎನ್.ಎಂ. ನಹ್ಮದ್ ಎಂಬುವವರು ಇಂಗ್ಲೀಷಿಗೆ ಅನುವಾದಿಸಿ 1949ರಲ್ಲಿ ಪ್ರಕಟಿಸಿದರು. * ಭಾಷಾಂತರ ಸುಂದರವಾಗಿದೆ. ಮೂಲ ಇನ್ನೆಷ್ಟು ಸೊಗಸಾಗಿರಬಹುದೋ" ಎನ್ನುತ್ತಾರೆ ಡಾ. ಪ್ರಭುಶಂಕರ್. ಮೂಲ ಅರಬ್ಬಿಯಲ್ಲಿ ಗ್ರಂಥದ ಶಿರೋನಾಮೆ ಏನಿದೆಯೋ ಏನೋ ಆಂಗ್ಲ ಅನುವಾದವನ್ನು (Spirits Rebellious) ಆಧರಿಸಿ ಇದನ್ನು "ಅದುಮಿಡಲಾರದ ಚೇತನಗಳು" ಎಂದು ಪ್ರಭುಶಂಕರ್ ಅನುವಾದಿಸಿರುತ್ತಾರೆ. ಅದರ ಬದಲು "ಸಿಡಿದೆದ್ದ ಚೇತನಗಳು" ಎಂದು ಭಾಷಾಂತರಿಸಿದರೆ ಹೆಚ್ಚು ಸಮಂಜಸವಾದೀತು.

ಈ ಗ್ರಂಥದ ಮೊದಲ ಕತೆ ಹೀಗಿದೆ: ಅವನೊಬ್ಬ ಆಗರ್ಭ ಶ್ರೀಮಂತ, ಅವನ ಪತ್ನಿ ಕಡು ಬಡತನದಲ್ಲಿ ಬೆಳೆದುಬಂದವಳು. ತುಂಬಾ ಚೆಲುವೆ. ಅವಳ ಸೌಂದರ್ಯಕ್ಕೆ ಮಾರುಹೋಗಿ ಮದುವೆಯಾಗಿದ್ದ ಅವನು ಬೆವರು ಸುರಿಸಿ ಸಂಪಾದಿಸಿದ ತನ್ನೆಲ್ಲ ಸಂಪತ್ತನ್ನು ಆಕೆಯ ಪದತಲದಲ್ಲಿ ಸಮರ್ಪಿಸುತ್ತಾನೆ. ಭವ್ಯವಾದ ಬಂಗಲೆ, ಪತ್ನಿಗೆ ಯಾವುದೇ ಕೊರತೆಯಾಗದಂತೆ ಅವಳು ಸುಖದ ಸುಪ್ಪತ್ತಿಗೆಯಲ್ಲಿ ಓಲಾಡುವಂತೆ ಮಾಡಿದ್ದ. ತುಂಬಾ ಉದಾರಿ, ಹೃದಯವಂತಿಕೆಯುಳ್ಳವನು. ಆದರೆ ಯಾವುದೇ ವಸ್ತುವಿನಬಾಹ್ಯರೂಪವನ್ನಷ್ಟೇ ಗ್ರಹಿಸುತ್ತಿದ್ದ ಅವನು ವಾಸ್ತವತೆಗೆ ಕುರುಡಾಗಿದೆ. ತಲಿನ ಸದ್ದನ್ನು ಕೇಳಿಸಿಕೊಳ್ಳುವ ಪ್ರವೃತ್ತಿಯೇ ಹೊರತು ಹೃದಯಿದ ಕರೆಯನ್ನು ಕೇಳಿಸಿಕೊಳ್ಳಲಾಗದ ಕಿವುಡನಾಗಿದ್ದ. ಸಂಪತ್ತಿನ ಸಂಗ್ರಹಣೆಯ ನಾಗಾಲೋಟದಲ್ಲಿ ತನ್ನನ್ನು ತಾನೇ ಮರೆತಿದ್ದ. ಮದುವೆಯಾವ ಎರಡು ವರ್ಷಗಳ ನಂತರ ಅವನಿಗೆ ಇದ್ದಕ್ಕಿದ್ದಂತೆಯೇ ಸಿಡಿಲು ಬಡಿದಂತಾಯಿತು. ಬಿರುಗಾಳಿಗೆ ಸಿಕ್ಕಿದ ತರಗೆಲೆಯಂತೆ ತತ್ತರಿಸಿ ಹೋದ, ಅವನ ಹೆಂಡತಿ ಭವ್ಯವಾದ ಬಂಗಲೆಯನ್ನು ತೊರೆದು ಒಪ್ಪತ್ತಿನ ಊಟಕ್ಕೂ ಗತಿ ಇಲ್ಲದ ಯುವಕನೊಂದಿಗೆ ಓಡಿಹೋಗಿ ಗುಡಿಸಲು ಸೇರಿದ್ದಳು. ಅದೇ ಚಿಂತೆಯಲ್ಲಿ ಶ್ರೀಮಂತ ಕೊರಗಿ ಕೊರಗಿ ಬೆಂಡಾದ. ಮುಖ ಪೇಲವವಾಯಿತು. ಕಣ್ಣುಗಳು ಗುಳಿಬಿದ್ದವು. ಶ್ರೀಮಂತಿಕೆಯ ಎಲ್ಲ ಸಿರಿಸಂಪತ್ತು ಇದ್ದರೂ ಅವನ ಹೃದಯದಲ್ಲಿ ಶೂನ್ಯ ಕವಿದಿತ್ತು. ಹತಾಶೆಯಿಂದ ಕೂಡಿದ ಅವನ ಪ್ರಶ್ನೆ: "ನಾನೇನು ಆಕೆಗೆ ಕಡಿಮೆ ಮಾಡಿದ್ದೆ?" ಅವಳನ್ನು ಬಡತನದ ಬೇಗೆಯಿಂದ ಪಾರುಮಾಡಿ ಅಂಗೈ ಮೇಲಿನ ಅರಗಿಳಿಯಂತೆ ಸಾಕಿದ್ದೆನಲ್ಲಾ! ನನ್ನ ಹೃದಯಪಂಜರದಲ್ಲಿಟ್ಟುಕೊಂಡು ಉಣಿಸಿ ತಿನಿಸಿ ಅದರ ರೆಕ್ಕೆಗಳನ್ನು ನೇವರಿಸಿದ ನನ್ನ ಪ್ರೀತಿಯ ಕೈಗಳಿಗೆ ಆ ಮನಮೋಹಕವಾದ ಗಿಳಿ ಮೋಸ ಮಾಡಿ ಆಕಾಶಕ್ಕೆ ಹಾರಿ ಬೇರೊಬ್ಬನ ಅಂಗೈ ಸೇರಿತಲ್ಲಾ! ನನ್ನ ಅಪರಾಧವಾದರೂ ಏನು?”

ಓಡಿಹೋದ ಅವನ ಪತ್ನಿಯನ್ನು ವಿಚಾರಿಸಿದರೆ ಅವಳ ಉತ್ತರವೇ ಬೇರೆ: ಅವಳೊಬ್ಬ ಹದಿಹರೆಯದ ಸುಂದರ ಯುವತಿ. "ನನ್ನ ತಂದೆಯ ವಯಸ್ಸಿನವನಾದ ಈ ಶ್ರೀಮಂತನ ಕೈಹಿಡಿದಾಗ ನನಗೆ ಮದುವೆ ಎಂದರೇನೆಂಬುದೇ ಗೊತ್ತಿರಲಿಲ್ಲ. ಅವನದು ಪ್ರೀತಿಯಲ್ಲಿ, ವ್ಯವಹಾರ ಮಾತ್ರ. ನನ್ನ ಮೇಲೆ ತನ್ನ ಐಶ್ವರ್ಯವನ್ನೇ ಸುರಿದು ಮನೆಯ ಒಡತಿಯನ್ನಾಗಿಸಿ ಈ ಸುಂದರಿ ನನ್ನ ಹೆಂಡತಿ ಎಂದ ಪ್ರದರ್ಶಿಸಿ ಬೀಗಿದ. "ಈಕೆ ಇವನ ಹೆಂಡತಿಯೋ, ದತ್ತು ಮಗಳೋ?", "ಇವನು ಸರಿಯಾದ ವಯಸ್ಸಿನಲ್ಲಿ ಮದುವೆಯಾಗಿದ್ದರೆ ಇವಳಿಗಿಂತ ಹೆಚ್ಚಿನ ವಯಸ್ಸಿನ ಮಗಳು ಇರುತ್ತಿದ್ದಳು!” ಎಂದು ಜನ ಪಿಸುದನಿಯಲ್ಲಿ ಆಡಿಕೊಳ್ಳುತ್ತಿದ್ದುದು ಅವನ ಕಿವಿಗೆ ಕೇಳಿಸಲೇ ಇಲ್ಲ. "ಸುಖ ಇರುವುದು ಸಂಪತ್ತಿನಲ್ಲಿ ಅಲ್ಲ. ಆತ್ಮಗಳನ್ನು ಬೆಸೆಯುವ ಪ್ರೀತಿಯಲ್ಲಿ, ಅಂತಹ ಪ್ರೀತಿಯನ್ನು ಗಂಡನಲ್ಲಿ ಹುಡುಕಿ ನಾನು ಸೋತೆ. ಬದುಕಿನಲ್ಲಿ ಕತ್ತಲೆಯೇ ತುಂಬಿತ್ತು. ಅಂತಹ ಸಂದರ್ಭದಲ್ಲಿ ಒಬ್ಬ ಯುವಕ ನನ್ನ ಬಾಳಿಗೆ ಬೆಳಕಾಗಿ ಬಂದ. ಬಹಳ ಹೊಯ್ದಾಟದ ನಂತರ ಇವನನ್ನ ನನ್ನ ಪ್ರಿಯತಮನನ್ನಾಗಿ ಆಯ್ಕೆ ಮಾಡಿಕೊಂಡು ಇವನ ಗುಡಿಸಲಿಗೆ ಬಂದೆ. ನನಗೆ ಈಗ ಎಳ್ಳಷ್ಟೂ ವಿಷಾದವಿಲ್ಲ. ಗುಡಿಸಿಲಿನಲ್ಲಿದ್ದರೂ ಸುಖವಾಗಿದ್ದೇನೆ. ಹೌದು, ನಾನು ಜಾರಿಣಿ ನಿಜ. ಈಗ ಅಲ್ಲ ಆಗ. ಅವನ ಸಂಪತ್ತನ್ನು ಸವಿದು ಇವನಿಗೆ ಮನಸೋತಾಗ, ಪತಿವ್ರತೆ ಎಂದು ಜನ ಭಾವಿಸಿದ್ದಾಗ ನಾನು ನಿಜವಾಗಿಯೂ ಕುಲಟೆಯಾಗಿದ್ದೆ. ಈಗ ನಾನು ನಿಜವಾದ ಪತಿನಿಷ್ಠೆಯಿಂದ ಬದುಕನ್ನು ಸವಿಯುತ್ತಿದ್ದೇನೆ. ಆದರೆ ಜನ ಈಗ ನನ್ನನ್ನು ಕುಲಟೆ ಎನ್ನುತ್ತಿದ್ದಾರೆ. ಹೌದು, ಮನುಷ್ಯನಿರ್ಮಿತ ಕಾನೂನು ಮತ್ತು ಸಂಪ್ರದಾಯಗಳ ದೃಷ್ಟಿಯಲ್ಲಿ ನಾನು ಕುಲಟೆ, ದೈವೀನಿಯಾಮಕ ಸೃಷ್ಟಿಯಲ್ಲಿ ನಾನು ಸಾದ್ವಿ, ನಿಷ್ಕಳಂಕಿತೆ!"

ಮೊನ್ನೆ ನಮ್ಮ "ಸದ್ಧರ್ಮ ನ್ಯಾಯಪೀಠ"ದ ಮುಂದೆ ಇಂಥದೇ ಒಂದು ಪ್ರಕರಣ ವಿಚಾರಣೆಗೆ ಬಂದಿತ್ತು. ಅಣ್ಣ-ತಮ್ಮ ಹತ್ತಿರದ ಸಂಬಂಧದಲ್ಲಿ ಅಕ್ಕ-ತಂಗಿಯರನ್ನು ಮದುವೆಯಾಗಿದ್ದರು. ಮದುವೆಯಾದ ಕೆಲವೇ ತಿಂಗಳಲ್ಲಿ ವಿರಸ ಉಂಟಾಗಿ ಅಕ್ಕ-ತಂಗಿ ತವರು ಮನೆ ಸೇರಿದರು. ಎಷ್ಟೇ ತಿಳಿಹೇಳಿದರೂ ಕೇಳಲಿಲ್ಲ. ಒಂದಲ್ಲ ಎರಡು ಮೂರು ಬಾರಿ ಹತ್ತಿರದ ಬಂಧುಗಳೊಂದಿಗೆ ಖಾಸಗಿಯಾಗಿ ಅವರ ಮನದಾಳದ ನೋವನ್ನು ತಿಳಿದುಕೊಂಡು ಮುಂದಿನ ಆಗು-ಹೋಗುಗಳ ಬಗ್ಗೆ ಕಿವಿಮಾತು ಹೇಳಿದರೂ ತಮ್ಮ ನಿಲುವು ಸಡಿಲಿಸಲಿಲ್ಲ. ಹೆಚ್ಚು ಒತ್ತಾಯಿಸಿದರೆ ಇಲ್ಲೇ ಪ್ರಾಣ ಕಳೆದುಕೊಳ್ಳುವುದಾಗಿ ತಮ್ಮ ಕಠಿಣ ನಿರ್ಧಾರ ವ್ಯಕ್ತಪಡಿಸಿದರು. ಹೆತ್ತ ತಂದೆ-ತಾಯಂದಿರನ್ನು ಕೇಳಿದರೆ ನಮಗೆ ಬೇರೆ ಗಂಡುಮಕ್ಕಳಿಲ್ಲ, ಇವರೊಂದಿಗೆ ನಾವೂ ಸಾಯುತ್ತೇವೆ ಎಂದು ಕಣ್ಣೀರು ಸುರಿಸಿದರು. ಗಂಡಿನ ಕಡೆಯವರು ನಮಗೆ ಏನೂ ಪರಿಹಾರ ಕೊಡುವುದು ಬೇಡ. ಹಾಗೆಂದು ಬೇಕಾದರೆ ಈಗಲೇ ಬರೆದುಕೊಡುತ್ತೇವೆ. ನಮ್ಮ ಪಾಡಿಗೆ ನಾವು ನೆಮ್ಮದಿಯಿಂದ ಇರಲು ನಮ್ಮನ್ನು ಬಿಟ್ಟುಬಿಡಿ ಎಂದು ಅಂಗಲಾಚಿ ಬೇಡಿಕೊಂಡರು. ಈ ಪ್ರಕರಣದಲ್ಲಿ ಗಂಡುಮಕ್ಕಳು ಹೆಣ್ಣುಮಕ್ಕಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಮುಂದೆ ಬಂದಿದ್ದರು. ನಮ್ಮ ನ್ಯಾಯಪೀಠದ ಮುಂದೆ ಬಂದ ಇತರ ಅನೇಕ ಪ್ರಕರಣಗಳಲ್ಲಿ ಗಂಡನೊಂದಿಗೆ ಹೊಂದಿಕೊಡು. ಬಾಳುವೆ ಮಾಡಲು ಹೆಣ್ಣಮಕ್ಕಳು ಎಷ್ಟೇ ಸಿದರಿದ್ದರೂ ಗಂಡುಮಗಳು ಸಿದ್ಧರಿರುವುದಿಲ್ಲ. ಈ ಕೌಟುಂಬಿಕ ಸಮಸ್ಯೆ ಒಂದು ಜನಾಂಗಕ್ಕೆ ಸೀಮಿತವಾಗಿಲ್ಲ. ಇದಕ್ಕೆ ದೇಶದ ವರಿಷ್ಠ ನ್ಯಾಯಾಲಯದ ಮುಂದೆ ಇರುವ "ತೀನ್ ತಲಾಖ್ ಪ್ರಕರಣವೇ ಸಾಕ್ಷಿ.

ಮೇಲಿನ ಗಿಬ್ರಾನರ ಕತೆಯಂತೆ ಇವರ ಮಧ್ಯೆ ವಯಸ್ಸಿ ಅಂತರವೇನೂ ಇಲ್ಲ. ಆದರೂ ಪತಿಪತ್ನಿಯರ ಮಧ್ಯೆ ಮನಸ್ಸಿನ ಅಂತರದ ಮತ್ತೊಂದು ಮಜಲು ಇರುವುದು ನಿಚ್ಚಳವಾಗಿ ಗೋಚರಿಸುತ್ತದೆ ಇದಕ್ಕೆ ಕಾರಣರು ಯಾರು? ಪರಿಹಾರವೆಂತು? ಶತಮಾನಗಳ ಹಿಂದೆ ಬಸವಣ್ಣನವರ ಈ ಮುಂದಿನ ವಚನದಲ್ಲಿ ದಾಖಲಾಗಿರುವ ಸದ್ಗೃಹಿಣಿಯೊಬ್ಬಳ ವೇದನೆಯಂತೆ ಈಗಲೂ ಮರ್ಯಾದೆಗೆ ಅಂಜಿ ಒಳಗೊಳಗೇ ಅನುಭವಿಸುತ್ತಿರುವ ಈ ದೇಶದ ಲಕ್ಷಾಂತರ ಮಹಿಳೆಯ ಮೂಕವೇದನೆಯನ್ನು ದೆಹಲಿಯ ವರಿಷ್ಠ ನ್ಯಾಯಾಲಯ ಬಗೆಹರಿಸಬಲ್ಲುದೇ? ಅಥವಾ "ಬಾಳಿಲ್ಲದೆ ಓಲೆ" ಧರಿಸಿದ ಹತಭಾಗ್ಯ ಮಹಿಳೆಯರೇ ಪುರುಷ ದೌರ್ಜನ್ಯದ ವಿರುದ್ಧ ಒಗ್ಗಟ್ಟಾಗಿ ಬಂಡೇಳಬೇಕೆ!

ಅರಿಶಿನವನೆ ಮಿಂದು ಹೊಂದೊಡಿಗೆಯನೆ ತೊಟ್ಟು 
ಪುರುಷನ ಒಲವಿಲ್ಲದ ಲಲನೆಯಂತಾಗಿರ್ದೆನಯ್ಯಾ! 
ಕೆಟ್ಟು ಬಾಳುವರಿಲ್ಲಾ ಎಮ್ಮವರ ಕುಲದಲ್ಲಿ 
ನೀನೊಲಿದಂತೆ ಸಲಹಯ್ಯಾ ಕೂಡಲಸಂಗಮ ದೇವಾ! |

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 25.5.2017