ಸ್ನೇಹವಿದ್ದ ಠಾವಿನಲ್ಲಿ ದ್ರೋಹವಾದ ಬಳಿಕ!....
ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಸುತ್ತ ತಂದೆ-ತಾಯಿ, ಮಗ-ಮಗಳು, ಅಣ್ಣ-ತಮ್ಮ, ಅಕ್ಕ-ತಂಗಿ, ಅತ್ತೆ-ಸೊಸೆ, ಮಾವ-ಮೈದುನ ಇತ್ಯಾದಿ ಬಂಧು ಬಾಂಧವ್ಯದ, ಸ್ನೇಹ ವಿಶ್ವಾಸದ ನಾನಾ ಸಂಬಂಧಗಳ ವರ್ತುಲಗಳಿರುತ್ತವೆ. ಜೀವನದುದ್ದಕ್ಕೂ ಈ ನಂಟಿನ ವರ್ತುಲಗಳು ಜೇಡರ ಬಲೆಯಂತೆ ಹಿಗ್ಗುತ್ತಾ ಹರಿಯುತ್ತಾ ಹೋಗುತ್ತವೆ. ವ್ಯಕ್ತಿ ವ್ಯಕ್ತಿಗಳ ನಡುವಣ ಈ ಸಂಬಂಧಗಳು ತುಂಬಾ ವಿಚಿತ್ರ! ಅನೇಕ ವೇಳೆ ವ್ಯಕ್ತಿಯು ಹತ್ತಿರದ ಪರಿಧಿಯಿಂದ ದೂರದ ಪರಿಧಿಗೆ ಸರಿದುಹೋಗುತ್ತಾನೆ. "ತೆರಣಿಯ ಹುಳು ತನ್ನ ಸ್ನೇಹದಿ ಮನೆ ಮಾಡಿ ತನ್ನ ನೂಲು ತನ್ನನೇ ಸುತ್ತಿ ಸಾವಂತೆ" ಎಂದು ಅಕ್ಕಮಹಾದೇವಿಯ ಹೇಳುವಂತೆ ಪ್ರೀತಿಯ ತಳಹದಿಯ ಮೇಲೆ ರೂಪುಗೊಳ್ಳಬೇಕಾದ ಈ ಸಾಂಸಾರಿಕ ಸಂಬಂಧಗಳು ದ್ವೇಷದ ತಾಣಗಳಾಗಿ ಪರಿಣಮಿಸಿ ಮನುಷ್ಯನ ಮಾನಸಿಕ ನೆಮ್ಮದಿಯನ್ನೇ ಹಿಂಡಿ ಹಿಪ್ಪೆ ಮಾಡಿಬಿಡುತ್ತವೆ.
ಇತ್ತೀಚಿಗಷ್ಟೇ ನಡೆದ ಅದ್ದೂರಿ ಮದುವೆಯಲ್ಲಿ ವಧೂ-ವರರನ್ನು ಹರಸಿ ಮೃಷ್ಟಾನ್ನ ಭೋಜನ ಸವಿದು ಸಂಭ್ರಮಿಸಿದ ಬಂಧುಗಳೇ ನವ ದಂಪತಿಗಳ ವೈವಾಹಿಕ ಬದುಕಿನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಸಣ್ಣ ಬಿರುಕು ಉಂಟಾದರೆ ಅದನ್ನು ಸರಿಪಡಿಸುವ ಗೋಜಿಗೆ ಹೋಗದೆ ಪರಸ್ಪರ ಶತ್ರುಗಳಂತೆ ವರ್ತಿಸುತ್ತಾರೆ. ವಿರಸದ ಜ್ವಾಲೆಗೆ ಆರೋಪ ಪ್ರತ್ಯಾರೋಪಗಳ ತುಪ್ಪ ಸುರಿದು ಎರಡೂ ಮನೆತನಗಳು ಹತ್ತಿ ಉರಿಯುವಂತೆ ಮಾಡುತ್ತಾರೆ. ಹುಟ್ಟುತ್ತಾ ಒಂದೇ ತಾಯಿಯ ಎದೆ ಹಾಲು ಕುಡಿದು ಅಣ್ಣತಮ್ಮಂದಿರದಾಗಿ ಬೆಳೆದವರು ವಯಸ್ಸಿಗೆ ಬಂದ ಮೇಲೆ ದಾಯಾದಿಗಳಾಗಿ ದ್ವೇಷದ ಹಾಲಾಹಲ ಕಾರುತ್ತಾರೆ. ಪಿತ್ರಾರ್ಜಿತ ಆಸ್ತಿಗಾಗಿ ಮಹಾಭಾರತದ "ಕುರುಕ್ಷೇತ್ರ"ವನ್ನೂ ಮೀರಿಸುವಂತೆ ಕೋರ್ಟುಕಛೇರಿಗಳಲ್ಲಿ ವರ್ಷಾನುಗಟ್ಟಲೆ ಕಾದಾಡುತ್ತಾರೆ. ರಕ್ತಮಾಂಸಗಳನ್ನು ತುಂಬಿ ಶರೀರ ಮತ್ತು ಪ್ರಾಣ ನೀಡಿದ ತಂದೆ ತಾಯಿಗಳನ್ನು ಇಳಿ ವಯಸ್ಸಿನಲ್ಲಿ ಕಾಳಜಿಯಿಂದ ನೋಡಿಕೊಳ್ಳದೆ ಸರಿಯಾಗಿ ಪಾಲುವಿಭಾಗ ಮಾಡಿಕೊಟ್ಟಿಲ್ಲವೆಂದ ಗೋಳುಹೊಯ್ದುಕೊಳ್ಳುತ್ತಾರೆ; ಕೋರ್ಟಿನ ಕಟಕಟೆಯಲ್ಲಿ ನಿಲ್ಲಿಸಿ ಮಾನ ಹರಾಜು ಹಾಕುತ್ತಾರೆ. “ನಿಮ್ಮ ಪಾದವೇ ಎನಗೆ ಗತಿಮತಿ" ಎನ್ನುತ್ತಿದ್ದ "ನಿಷ್ಠಾವಂತ" ಶಿಷ್ಯರು ಗುರುಪಾದಗಳನ್ನೇ ಎಳೆದು ಬೀಳಿಸುವ ಷಡ್ಯಂತ್ರ ಮಾಡುತ್ತಾರೆ. ನಿನ್ನೆ ಮೊನ್ನೆಯವರೆಗೂ ಜೀವಕ್ಕೆ ಜೀವ ಕೊಡುವ ಗೆಳೆಯರಾಗಿದ್ದವರು ಈ ದಿನ ಜೀವ ತೆಗೆಯಲು ಹವಣಿಸಿ ಕತ್ತಿಮಸೆಯುವ ಕಡು ವೈರಿಗಳಾಗಿಬಿಡುತ್ತಾರೆ. ಎದುರಿಗೆ ಬಂದಾಗ "ಸಲಾಂ ಆಲೇ ಕುಂ" ಎಂದು ಹಲ್ಲುಕಿರಿದು ಬೆನ್ನ ಹಿಂದೆ ಸರಿದಾಗ "ಮಾರ್ ಸಾಲೇ ಕೋ" ಎಂದು ಹೂಂಕರಿಸುವವರಿದ್ದಾರೆ. "ನಾನು ಅತ್ಯಂತ ಪ್ರೀತಿಯಿಂದ ಗೌರವಿಸುವ ವ್ಯಕ್ತಿ ನೀವು, ನಾನು ನಿಮಗೆ ಸದಾ ನಿಷ್ಠ, ಋಣಿ, ನಾವೆಲ್ಲಾ ನಿಮ್ಮೊಂದಿಗಿದ್ದೇವೆ" ಎಂದೆಲ್ಲಾ ಹೇಳುತ್ತಲೇ ತೆರೆಮರೆಯಲ್ಲಿ ನಿಮ್ಮ ವಿರುದ್ಧ ಬೇರೆಯವರನ್ನು ಎತ್ತಿಕಟ್ಟುವ, ಅವರ ಬೆನ್ನ ಹಿಂದೆಯೂ ಇರುವುದಾಗಿ ಸಾರುವ ಎರಡು ನಾಲಿಗೆಯ ಧೂರ್ತರೂ ಇರುತ್ತಾರೆ. ನಿಮ್ಮ ಮೇಲೆ ಕೆಸರೆರಚುವ, ಮುಸುಕಿನ ಗುದ್ದು ಕೊಡುವ, ತೇಜೋವಧೆ ಮಾಡುವ ಅನಾಮಧೇಯ ಪತ್ರಗಳ ಸರಣಿಯೇ ಹರಿದಾಡುವಂತೆ ಮಾಡುತ್ತಾರೆ. ಇದಕ್ಕಾಗಿ ಸಾಮಾಜಿಕ ಜಾಲತಾಣಗಳ ದುರ್ಬಳಕೆ ಮಾಡಿಕೊಳ್ಳಲೂ ಅವರು ಹಿಂಜರಿಯುವುದಿಲ್ಲ. "ತುತ್ತಿಟ್ಟವರ ಬಟ್ಟು ಕಚ್ಚಿದರು" ಎಂಬಂತೆ ಅವರ ದುರ್ವರ್ತನೆ ಎಗ್ಗಿಲ್ಲದೆ ಸಾಗುತ್ತದೆ.
ಇದಕ್ಕೆಲ್ಲ ಕಾರಣವೇನು ಎಂದು ಯೋಚಿಸಿದಾಗ ದೊರೆಯುವ ಉತ್ತರ: ಮನುಷ್ಯನ ಸ್ವಾರ್ಥ ಲಾಲಸೆ. ವ್ಯಕ್ತಿ ವ್ಯಕ್ತಿಗಳ ಮಧ್ಯೆ ಇರುವ ವ್ಯಾವಹಾರಿಕ/ಔಪಚಾರಿಕ ಸಂಬಂಧ. ತಂದೆ-ತಾಯಿ, ಮಗ-ಮಗಳು ಇತ್ಯಾದಿಯಾಗಿ ಅವರವರ ಮಧ್ಯೆ ಇರುವ ಇರಬೇಕಾದ ಸಂಬಂಧವನ್ನು ಸೂಚಿಸುವ ಶಬ್ದಗಳ ಅರ್ಥವ್ಯಾಪ್ತಿಗೆ ಅನುಗುಣವಾಗಿ ಅವರವರ ಸಂಬಂಧ ಇಲ್ಲದಿರುವುದು. ಒಂದು ಬಹಿರಂಗವಾಗಿ ಕಾಣುವ ಶಾಬ್ದಿಕ ಸಂಬಂಧ ಇನ್ನೊಂದು ಅಂತರಂಗದಲ್ಲಿರುವ ತದ್ವಿರುದ್ಧವಾದ ಸಂಬಂಧ. ನಿಜವಾದ ಪ್ರೀತಿ, ಭಕ್ತಿ, ಸ್ನೇಹಗಳಿಲ್ಲದ ಡಾಂಭಿಕ ಬದುಕು. ಎಲ್ಲಿ ತಮಗೆ ಲಾಭವಿಲ್ಲವೋ ಆ ಸ್ಥಳವನ್ನು ಬಿಟ್ಟು ಲಾಭ ಗಿಟ್ಟುವ "ಫಲವತ್ತಾದ ಸ್ಥಳ"ವನ್ನು ಅನ್ವೇಷಿಸಿ ಆ ಸ್ವಾರ್ಥಿಗಳು ಹೊರಡುತ್ತಾರೆ - ಬೇಟೆ ಸಿಗುವಲ್ಲಿಗೆ ಹಾರಿ ಹೋಗಿ ಹೊಂಚು ಹಾಕುವ ರಣಹದ್ದುಗಳಂತೆ !
ಕೌಟುಂಬಿಕ ಮತ್ತು ಸಾಮಾಜಿಕ ಬದುಕಿನಲ್ಲಿ ಎರಡು ಬಗೆಯ ಜನರನ್ನು ಕಾಣಬಹುದು: 1)ವೈಯಕ್ತಿಕ ಹಿತ್ತಾಸಕ್ತಿ ಉಳ್ಳವರು, 2)ಸಾಮಾಜಿಕ ಹಿತಚಿಂತನೆ ಮಾಡುವವರು. ಮೊದಲ ವರ್ಗದವರು ಸದಾಕಾಲ ತಮ್ಮ ಕ್ಷೇಮಾಭಿವೃದ್ಧಿಯತ್ತ ಗಮನ ಹರಿಸುತ್ತಾರೆ. ಇವರಿಗೆ ವೈಯಕ್ತಿಕ ಹಿತಚಿಂತನೆಯೇ ಮುಖ್ಯ, ಸಾಮಾಜಿಕ ಹಿತಚಿಂತನೆ ಗೌಣ. ಎರಡನೆಯ ವರ್ಗದ ಜನರಿಗೆ ವೈಯಕ್ತಿಕ ಹಿತಚಿಂತನೆ ಗೌಣ, ಸಮಾಜದ ಹಿತಚಿಂತನೆಯೇ ಪ್ರಧಾನ. ಸಮಾಜದ ಹಿತಕ್ಕಾಗಿ ಇಂಥವರು ಎಂತಹ ತ್ಯಾಗಕ್ಕಾದರೂ ಸಿದ್ಧರಾಗಿರುತ್ತಾರೆ. ತಮಗೆ ವೈಯಕ್ತಿಕ ಲಾಭವಿಲ್ಲದಿದ್ದರೂ ಸಮಾಜದ ಒಳಿತಿಗಾಗಿ ಆತ್ಮಾರ್ಪಣೆ ಮಾಡಿಕೊಳ್ಳಲು ಇವರು ಹಿಂಜರಿಯುವುದಿಲ್ಲ. ಇಂಥವರ ಬಲಿದಾನದಿಂದ ಮಾತ್ರ ರಾಷ್ಟ್ರನಿರ್ಮಾಣ ಕಾರ್ಯ ಸಾಧ್ಯ. ವೈಯಕ್ತಿಕ ಹಿತಾಸಕ್ತಿಯುಳ್ಳವರು ಸ್ವಹಿತಾಸಕ್ತಿಗಾಗಿ ಯಾರನ್ನು ಬೇಕಾದರೂ ಬಲಿತೆಗೆದುಕೊಳ್ಳಲು ಹಿಂಜರಿಯುವುದಿಲ್ಲ. ಸ್ವಾತಂತ್ರ್ಯಪೂರ್ವ ಕಾಲದಲ್ಲಿ ವೈಯಕ್ತಿಕ ಹಿತಾಸಕ್ತಿಗಳನ್ನು ಕಡೆಗಣಿಸಿ ದೇಶದ ಹಿತಕ್ಕಾಗಿ ಆತ್ಮಾರ್ಪಣೆ ಮಾಡಿಕೊಳ್ಳುವ ಮನಃಸ್ಥೈರ್ಯವುಳ್ಳ ಜನರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಸ್ವಾತಂತ್ರೋತ್ತರ ಭಾರತದಲ್ಲಿ ಇಂಥವರ ಸಂಖ್ಯೆ ಕಡಿಮೆಯಾಗಿ ಸ್ವಂತ ಹಿತಕ್ಕಾಗಿ ದೇಶದ ಸಂಪತ್ತನ್ನೇ ನುಂಗಿ ನೀರು ಕುಡಿಯುವ ಸ್ವಾರ್ಥಿಜನರ ಸಂಖ್ಯೆ ಅಧಿಕವಾಗಿದೆ.
ವ್ಯಾವಹಾರಿಕ ಸಂಬಂಧ ಇಟ್ಟುಕೊಂಡಿರುವವರು ನಿರೀಕ್ಷಿತ ವ್ಯವಹಾರ ಕುದುರದೇ ಹೋದಾಗ ಹಿಂದೆ ಅನೇಕ ರೀತಿಯ ಉಪಕಾರ ಪಡೆದಿದ್ದರೂ ಉಪಕಾರ ಮಾಡಿದವರ ಬಗ್ಗೆ ಅನಾದರಣೆ ತೋರಲು ಆರಂಭಿಸುತ್ತಾರೆ. ಹಿತೈಷಿಗಳು ಎಷ್ಟೇ ತಿಳಿಹೇಳಿದರೂ ಕೇಳುವುದಿಲ್ಲ. ಅದೇ ಬೇರೆಯವರು ಆಡುವ ಹೊಗಳಿಕೆ/ಪ್ರಚೋದನೆಯ ಮಾತುಗಳು ಅವರಿಗೆ ಆಪ್ಯಾಯಮಾನವಾಗುತ್ತವೆ. ಅಂಥವರ ಮಾತುಗಳ ಹಿಂದೆ ತಮ್ಮ ಸ್ವಾರ್ಥಸಾಧನೆಯ ಹುನ್ನಾರವಿರುತ್ತದೆಯೆಂಬ ಅರಿವು ಅವರಿಗಿರುವುದಿಲ್ಲ. ಅವಿಚಾರಿಯು ತನ್ನದೆಲ್ಲವೂ ಸರಿ, ತನ್ನದೇನೂ ತಪ್ಪಿಲ್ಲ ಎಂಬ ನಿಲುವನ್ನು ತಾಳಿ ಅಶಾಂತಿಗೆ ಒಳಗಾಗುತ್ತಾನೆ. ಕಪಿಯೊಂದು ಬಿಂದಿಗೆಯೊಳಗೆ ಕೈಹಾಕುತ್ತದೆ. ಅದರೊಳಗೆ ಸಿಕ್ಕ ಕಸುಗಾಯಿಯನ್ನು ಮುಷ್ಠಿಯಲ್ಲಿ ಬಿಗಿಯಾಗಿ ಹಿಡಿದುಕೊಳ್ಳುತ್ತದೆ. ಕೈ ಹೊರತೆಗೆಯಲು ಬರುವುದಿಲ್ಲ. ಮುಷ್ಠಿಯನ್ನು ಬಿಚ್ಚಿ ಕಸುಗಾಯಿಯನ್ನು ಕೆಳಗೆ ಬಿಟ್ಟರೆ ಕೈ ಸಲೀಸಾಗಿ ಹೊರಬರುತ್ತದೆ ಹೆಣಗಾಡುತ್ತದೆ! ಇಂತ ಸ್ಥಿತಿಯನ್ನು ಅನೇಕರು ತಮ್ಮ ಅಹಮ್ಮಿನ ಕಾರಣದಿಂದ ತಾವೇ ಸೃಷ್ಟಿಸಿಕೊಳ್ಳುತ್ತಾರೆ. ಅಹಂಕಾರದ ಕಪಿಮುಷ್ಟಿ ಸಡಿಲಗೊಳ್ಳದ ಹೊರತು ಮನುಷ್ಯನಿಗೆ ಮನಃಶಾಂತಿ ದೊರೆಯುವುದಿಲ್ಲ. ತನ್ನ ತಪ್ಪುಗಳೇನೆಂದು ಆತ್ಮಾವಲೋಕನ ಮಾಡಿಕೊಂಡು ತನ್ನೊಳಗೇ ಮನಃಶಾಂತಿಯನ್ನು ಹೋಗುತ್ತಾರೆ. "ಕಟ್ಟಿದ ಲಿಂಗವ ಬಿಟ್ಟು ಬೆಟ್ಟದ ಲಿಂಗಕ್ಕೆ ಹೋಗಿ ಹೊಟ್ಟೆ ಅಡಿಯಾಗಿ ಬೀಳುವ ಲೊಟ್ಟೆ ಮೂಳ ನಂತೆ! ಅಂಥವರನ್ನು ಕಂಡು ಮೆಟ್ಟಿದ ಎಡಪಾದರಕ್ಷೆಯಿಂದ ಲಟಲಟನೆ ಹೊಡೆ ಎನ್ನುತ್ತಾರೆ ಅಂಬಿಗರ ಚೌಡಯ್ಯ. ಆಧ್ಯಾತ್ಮ ಸಾಧನೆಗಾಗಿ ಗುರುವನ್ನು ಅರಸಿಕೊಂಡು ಹೋಗುವುದು ಬೇರೆ, ತನ್ನದೇ ಸರಿಯೆಂದು ಸಾಧಿಸುವ ಛಲದಿಂದ ಅಲ್ಲಿ, ಇಲ್ಲಿ, ಎಲ್ಲೆಲ್ಲಿಗೋ ದೌಡಾಯಿಸುವುದು ಬೇರೆ. "ಬೆಲ್ಲವ ತಿಂದ ಕೋಡಗನಂತೆ, ಕಬ್ಬು ತಿಂದ ನರಿಯಂತೆ, ಗಗನವನಡರಿದ ಕಾಗೆಯಂತೆ" ಗತಕಾಲದ ಮಧುರ ಸಂಬಂಧವನ್ನು ನೆನೆಸಿಕೊಂಡು ಕೆಲವರು ಹಪಹಪಿಸುತ್ತಾರೆ. ಮತ್ತೆ ಕೆಲವರು ಅವೆಲ್ಲವನ್ನೂ ಮರೆತು ದ್ವೇಷಿಸುತ್ತಾರೆ. ತಾಳ್ಮೆಯುಳ್ಳವನು ಉದ್ವೇಗಕ್ಕೆ ಒಳಗಾಗದೆ ತನ್ನ ಪಾಡಿಗೆ ತಾನು ಇರಲು ಬಯಸುತ್ತಾನೆಯೇ ಹೊರತು ದ್ವೇಷ ಸಾಧಿಸಲು ಮುಂದಾಗುವುದಿಲ್ಲ. "ಅಂತರಂಗ ಶುದ್ಧವಿಲ್ಲದವರ ಸಂಗ ಸಿಂಗಿ, ಕಾಳಕೂಟ ವಿಷವೋ ಅಯ್ಯಾ" ಎಂದು ದೂರವಿರಲು ಬಯಸುತ್ತಾನೆ.
ತನ್ನನ್ನು ಜೀವದಂತೆ ಪ್ರೀತಿಸುತ್ತಿದ್ದ ಗಂಡ, ಅಷ್ಟೇ ಪ್ರೀತಿಯಿಂದ ಇದ್ದ ಹೆಂಡತಿ. ಸುಂದರ ಸಂಸಾರ. ಗಂಡ ಪೇಟೆ ಪಟ್ಟಣಕ್ಕೆ ಹೋದಾಗಲೆಲ್ಲಾ ಮಡದಿಯ ಮುಡಿಗೆ ಘಮಘಮಿಸುವ ಮಲ್ಲಿಗೆ ಹೂ ತರುತ್ತಿದ್ದ. ಮಕ್ಕಳಿಗೆ ಸಿಹಿ ತಿಂಡಿ ತಿನಿಸುಗಳನ್ನು ತಂದು ಖುಷಿ ಪಡಿಸುತ್ತಿದ್ದ. ಮಾತಿನಲ್ಲಿ ಪ್ರೀತಿಯ ಹಾಲು ಜೇನನ್ನೇ ಸುರಿಸುತ್ತಿದ್ದ. ಆದರೆ ಒಂದು ದಿನ ಏಕಾಏಕಿ ಗಂಡ ತನ್ನ ಪ್ರೀತಿಗೆ ದ್ರೋಹ ಬಗೆದಿದ್ದಾನೆ, ಬೇರೊಂದು ಹೆಣ್ಣಿನ ಸಂಗ ಇಟ್ಟುಕೊಂಡಿದ್ದಾನೆಂಬ ಸತ್ಯ ಸಂಗತಿ ತಿಳಿದು ಹೆಂಡತಿಗೆ ಗರಬಡಿದಂತಾಗುತ್ತದೆ. ಗಂಡ ಮನೆಗೆ ಬಂದರೆ ಅವನನ್ನು ಹತ್ತಿರ ಬಿಟ್ಟುಕೊಳ್ಳುವಳೇ? ಅವನು ತಂದ ಮಲ್ಲಿಗೆಯ ಹೂವನ್ನು ಮುಡಿವಳೇ? ಅವಳ ಸುದೀರ್ಘ ದಾಂಪತ್ಯ ಜೀವನದಲ್ಲಿ ಅವನು ತೋರಿದ ಪ್ರೀತಿ ಬರೀ ನಾಟಕವೆಂದು ಅನ್ನಿಸುವುದಿಲ್ಲವೆ? ಅಪರಂಜಿ ಎಂದು ನಂಬಿದ್ದು ಚಿನ್ನವಲ್ಲ ಕಾಗೆ ಬಂಗಾರವೆಂಬ ಕರಾಳ ಸತ್ಯ ಅರಿವಿಗೆ ಬಂದಾಗ ಅವಳ ಮನಃಸ್ಥಿತಿಯನ್ನು, ಅವಳಿಗಾದ ಆಘಾತವನ್ನು ಬಣ್ಣಿಸಲು ಶಬ್ದಗಳಿವೆಯೇ?! ಅಕ್ಕ ಹೇಳುವಂತೆ
ಹೂವು ಕಂದಿದಲ್ಲಿ ಪರಿಮಳವನರಸುವರೇ?
ಸ್ನೇಹವಿದ್ದ ಠಾವಿನೊಳು ದ್ರೋಹವಾದ ಬಳಿಕ
ಮರಳಿ ಸದ್ಗುಣವನರಸುವರೆ?...
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 22.6.2017