ಪ್ರಾಚೀನ ಶಿಲಾಶಾಸನಗಳು v/s ಆಧುನಿಕ ಶಿಲಾನ್ಯಾಸಗಳು

  •  
  •  
  •  
  •  
  •    Views  

ಮ್ಮ ನಾಡಿನ ಹಿರಿದಾದ ಸಂಸ್ಕೃತಿಯ ದಾಖಲೆಗಳೆಂದರೆ ಶಿಲಾಶಾಸನಗಳು, ಇತಿಹಾಸದ ಪ್ರಜ್ಞೆ ಇಲ್ಲದ ಅಜ್ಞಾನಿ ಜನರು ಅವುಗಳನ್ನು ಬಟ್ಟೆ ಸೆಳೆಯುವ ಕಲ್ಲುಗಳನ್ನಾಗಿ, ಮನೆಯ ತಳಪಾಯದ ಭರ್ತಿಯ ಕಲ್ಲುಗಳನ್ನಾಗಿ ಬಳಸಿಕೊಂಡ ಉದಾಹರಣೆಗಳು ಸಾಕಷ್ಟಿವೆ. ಶಾಸನಗಳ ಮಹತ್ವ ನಮ್ಮ ಜನರಿಗೆ ಇಲ್ಲ; ಮುಂದೆಯೂ ಇರುತ್ತದೆಯೆಂದು ಹೇಳಲಾಗದು. ಶಾಸನಗಳ ಮಹತ್ವವನ್ನು ಅರಿಯದ ನಮ್ಮ ಜನರ ಅವಜ್ಞೆಯನ್ನು ಕುರಿತು ಎಚ್ಚರಿಸುವ ಕುವೆಂಪು ಅವರ ಕವಿತೆಯೊಂದು ಹೀಗಿದೆ:

ಕೂಗುತಿವೆ ಕಲ್ಲು 
ಕಿವಿವೆತ್ತ ಕಿವುಡರಿರ ಕೇಳಿ ಆ ಸೊಲ್ಲು...
ಪಾಳು ದೇಗುಲದಲ್ಲಿ, ಲಂಟಾನ ಪೊದೆಯಲ್ಲಿ 
ಕಲ್ಲುರುಳಿ ಮುರಿದರಳಿಕಟ್ಟೆ ಹಳು ಬೆಳೆದಲ್ಲಿ, 
ಇಲ್ಲಿ ಏನಿಲ್ಲವೆಂದು ಇಲ್ಲಿ ಯಾರಿಲ್ಲವೆಂದು 
ಸಾಗುತಿರಲು... 
ಇಲ್ಲಿ ದೇವರಿಗಾಗಿ, ಅಲ್ಲಿ ಹದಿಬದೆಗಾಗಿ, 
ಇಲ್ಲಿ ಒಡೆಯನಿಗೊಡಲನಿಲ್ಲಿ ನಾಡಿಂಗಾಗಿ,
 ಬಲಿದಾನಗೈದ ಕನ್ನಡತನದ ತುತ್ತೂರಿ 
ಭೋರಿಡುತಿದೆ ಶಿಲಾಭೇರಿ,
ಪ್ರಾಣ ಸಂಚಾರಿ!

ಶಾಸನಗಳು ಬಹುಕಾಲ ಉಳಿಯುವಂತಹ ಶಿಲೆ, ಲೋಹ ಮೊದಲಾದವುಗಳ ಮೇಲೆ ರಚಿತವಾದ ಬರಹಗಳು, ಶಿಲಾಶಾಸನಗಳು ಮತ್ತು ತಾಮ್ರಪಟಗಳು ಗತಕಾಲದ ಇತಿಹಾಸದ ಅತ್ಯಮೂಲ್ಯ ದಾಖಲೆಗಳು, ತಾಮ್ರಪಟಗಳಿಗಿಂತ ಶಿಲಾಶಾಸನಗಳೇ ಹೆಚ್ಚು ವಿಶ್ವಾಸನೀಯ ಎಂದು ಪರಿಗಣಿತವಾಗಿವೆ. ನಮ್ಮ ದೇಶದಲ್ಲಿ ಅತಿ ಹೆಚ್ಚು ಶಾಸನಗಳು ದೊರೆಯುವುದು ತಮಿಳುನಾಡಿನಲ್ಲಿ. ಕರ್ನಾಟಕ ಎರಡನೆಯ ಸ್ಥಾನದಲ್ಲಿದೆ. ಶಾಸನಗಳು ಆಯಾ ಕಾಲದ ಸಾಮಾಜಿಕ ಬದುಕಿನ ಕೈಗನ್ನಡಿಗಳಾಗಿರುತ್ತವೆ. ಅಂದಿನ ಸಾಮಾಜಿಕ ಮೌಲ್ಯಗಳನ್ನು ಅವು ಒಳಗೊಂಡಿರುತ್ತವೆ. ಕನ್ನಡ ಸಾಹಿತ್ಯ ಚರಿತ್ರೆಯನ್ನು ಕಟ್ಟಿಕೊಡಲು ಶಾಸನಗಳು ನೆರವಾಗಿವೆ. ದೇವಾಲಯವನ್ನು ಕಟ್ಟಿದಾಗ, ಕೆರೆಯನ್ನು ನಿರ್ಮಿಸಿದಾಗ, ಸಾಮಾಜಿಕ ಕಾರ್ಯಕ್ಕಾಗಿ ದತ್ತಿ ದಾನ ನೀಡಿದಾಗ, ಯುದ್ಧದಲ್ಲಿ ಹೋರಾಡಿ ಗೆದ್ದಾಗ ಅಥವಾ ಮಡಿದಾಗ, ಒಡೆಯನಿಗಾಗಿ ಪ್ರಾಣಾರ್ಪಣೆ ಮಾಡಿದಾಗ, ಮಡಿದ ಯೋಧನ ಸತಿ ಸಹಗಮನ ಮಾಡಿದಾಗ ಹೀಗೆ ಹಲವು ಹತ್ತು ವಿಶೇಷ ಸಂದರ್ಭಗಳಲ್ಲಿ ಶಾಸನಗಳು ರಚನೆಯಾಗಿವೆ.

ಬೆಂಗಳೂರಿನಲ್ಲಿಯೇ ಹುಟ್ಟಿ (1837) ಬೆಳೆದ ಪಾಶ್ಚಾತ್ಯ ವಿದ್ವಾಂಸರಾದ ಬಿ.ಎಲ್. ರೈಸ್ ಅವರು 16 ವರ್ಷಗಳ ಕಾಲ ಪ್ರತಿ ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲಿ ತಿರುಗಾಡಿ ಸಂಗ್ರಹಿಸಿ 12 ಸಂಪುಟಗಳಲ್ಲಿ ಪ್ರಕಟಿಸಿದ ಶಾಸನಗಳ ಒಟ್ಟು ಸಂಖ್ಯೆ ಸುಮಾರು ಒಂಬತ್ತು ಸಾವಿರ. ಡಾ. ಎಂ. ಚಿದಾನಂದಮೂರ್ತಿಯವರು "ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ" ಎಂಬ ಸಂಶೋಧನಾ ಕೃತಿಯನ್ನು ರಚಿಸಿದ್ದಾರೆ. ಅವರೇನಾದರೂ ಇಂದು ನಮ್ಮ ನಾಡಿನ ಗಣ್ಯಮಾನ್ಯ ವ್ಯಕ್ತಿಗಳ "ಅಮೃತ ಹಸ್ತ"ದಿಂದ ನೆರವೇರುತ್ತಿರುವ ಕಟ್ಟಡಗಳ ಶಂಖುಸ್ಥಾಪನೆ ಮತ್ತು ಉದ್ಘಾಟನೆಯ ಶಿಲಾಫಲಕಗಳನ್ನು ಸಂಗ್ರಹಿಸಲು ಹೊರಟರೆ ಸಿಗುವುದಾದರೂ ಏನು? ಶಿಲಾಫಲಕದ ಮೇಲೆ ಗಣ್ಯರ ಹೆಸರುಗಳ ಉದ್ದನೆಯ ಪಟ್ಟಿ. ಆ ಹೆಸರುಗಳನ್ನು ಸೇರಿಸಲು ನಡೆಸಿದ ಅವರ ಚೇಲಾಗಳ ತೆರೆಮರೆಯ "ಕಾದಾಟ"ದ ಇತಿಹಾಸ. ಹೋಟೆಲಿನ ತಿಂಡಿ ತಿನಿಸುಗಳ ಪಟ್ಟಿಯಂತೆಯೋ ವೋಟರ್ ಲಿಸ್ಟಿನಂತೆಯೋ ಕಂಡುಬರುವ ಈ ಕಲ್ಲುಗಳಲ್ಲಿ ಯಾವ ಸಾಹಿತ್ಯ, ಸಂಸ್ಕೃತಿಯ ಪರಿಮಳ ತಾನೆ ಕಾಣಸಿಗಲು ಸಾಧ್ಯ!

ಪ್ರಾಚೀನ ಶಿಲಾಶಾಸನ ಮತ್ತು ಈಗಿನ ಶಿಲಾಫಲಕಗಳನ್ನು ಗಮನಿಸಿದರೆ ಎರಡರ ಮಧ್ಯೆ ಇರುವ ವ್ಯತ್ಯಾಸ ಅಜಗಜಾಂತರ. ಪ್ರಾಚೀನ ಶಿಲಾಶಾಸನಗಳಲ್ಲಿ ಕಾವ್ಯದ ಅಭಿವ್ಯಕ್ತಿ ಇತ್ತು; ದೈವೀಭಾವನೆಯಿತ್ತು. ಕಲಾರಾಧನೆ, ದೇವತಾರಾಧನೆ, ಮಾನವೀಯ ಸ್ಪಂದನೆಯ ಉದಾತ್ತ ಭಾವನೆಗಳಿದ್ದವು. ಆ ಶಾಸನಗಳು ಸಾಹಿತ್ಯದ ಖನಿಗಳಾಗಿದ್ದವು. ಆ ಜನರು ಹೆಸರಿಗಾಗಿ ಬದುಕಲಿಲ್ಲ; ಸೇವೆಗಾಗಿ ಬದುಕಿದವರು. ಆದರೆ ಈಗ ಹೇಗಿದೆ! ಶಿಲೆಯಲ್ಲ ಈ ಗುಡಿಯು ಕಲೆಯ ಬಲೆಯು" ಎಂದು ಕಾವ್ಯರ್ಷಿ ಕುವೆಂಪು ಬಣ್ಣಿಸಿದ ಬೇಲೂರು, ಹಳೇಬೀಡು ಮೊದಲಾದ ಪ್ರಾಚೀನ ದೇಗುಲಗಳಲ್ಲಿ ಕಂಡುಬರುವ ಹಿಂದಿನವರ ಆ ಕಲಾಸೌಂದರ್ಯ ಪ್ರಜ್ಞೆ ಎತ್ತ! ಆ ದೇಗುಲಗಳಿಗೆ ಹೋಗಿ ಅಲ್ಲಿರುವ ಕಲ್ಲಿನ ಕಲಾತ್ಮಕ ಕಂಭಗಳ ಮೇಲೆ ತಮ್ಮ ಹೆಸರನ್ನು ಕೆತ್ತಿ ಅಂದಗೆಡಿಸುವ ಇಂದಿನ ಪ್ರವಾಸಿಗರ ಕಿರಾತ ಬುದ್ದಿ ಎತ್ತ! ಇಂದು ಯಾವುದೇ ಕಟ್ಟಡದ ಉದ್ಘಾಟನೆಯ ಕಲ್ಲಿನಲ್ಲಿ ತಮ್ಮ ಹೆಸರನ್ನು ಸರಿಸದಿದ್ದರೆ ದೊಡ್ಡ ಕಾಳಗವನ್ನೇ ಮಾಡುವ "ವೀರಪುರುಷರು" ಇದ್ದಾರೆ. ಜನಸಾಮಾನ್ಯರ ತೆರಿಗೆಯ ಹಣದಿಂದ ನಿರ್ಮಾಣವಾದ ರಸ್ತೆಗಳಿಗೆ, ತಂಗುದಾಣಗಳಿಗೆ ಇಂಥವರ ಅನುದಾನದಿಂದ ಆಯಿತೆಂದು ತಮ್ಮ ಹೆಸರುಗಳನ್ನು ಬರೆಸಿ ವಿಜೃಂಭಿಸುವ ಸಂಸದರು ಮತ್ತು ಶಾಸಕರು ಇದ್ದಾರೆ. ಅವರ ಹೆಸರಿನ ಫಲಕವನ್ನು ಬರೆಸಿ ಅವರಿಂದಲೇ ಉದ್ಘಾಟನೆ ಮಾಡಿಸಿ ಅವರನ್ನು ಓಲೈಸುವ ಅಧಿಕಾರಿಗಳಿದ್ದಾರೆ. ಈ ಮನೋಧರ್ಮ ಬೆಳೆದಿರುವುದು ತೀರಾ ಇತ್ತೀಚೆಗೆ ಸ್ವಾತಂತ್ರ್ಯಪೂರ್ವದಲ್ಲಿ ಈ ಮನೋಭಾವ ಇರಲಿಲ್ಲ. ನಮ್ಮ ಗುರು ಪಿತಾಮಹರಾದ ಶ್ರೀ ಗುರುಶಾಂತ ರಾಜ ದೇಶಿಕೇಂದ್ರ ಮಹಾಸ್ವಾಮಿಗಳವರ ಕಾಲದಲ್ಲಿ ಸಿರಿಗೆರೆಯ ಪೋಲೀಸು ಠಾಣೆಯ ಬದಿಯ ಸೇತುವೆಯ ನಿರ್ಮಾಣವಾಯಿತು. ಅಲ್ಲಿ ಹಾಕಿರುವ ಶಿಲಾಫಲಕದಲ್ಲಿ (1940) ಸೇತುವೆಯನ್ನು ಉದ್ಘಾಟಿಸಿದ ಅಂದಿನ ಮೈಸೂರು ದಿವಾನ ಮಿರ್ಜಾ ಇಸ್ಮಾಯಿಲ್ ಅವರ ಹೆಸರು ಇದೆಯೇ ಹೊರತು ಗುರುಗಳವರ ಹೆಸರೇ ಅಲ್ಲಿಲ್ಲ! ನಮ್ಮ ಗುರುವರ್ಯರಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಸ್ವಾತಂತ್ರ್ಯ ಪೂರ್ವದಲ್ಲಿ ವಿದ್ಯಾರ್ಥಿಗಳೊಡಗೂಡಿ ಗಾರೆ, ಸಿಮೆಂಟು, ಸೈಜುಗಲ್ಲುಗಳನ್ನು ಸ್ವತಃ ತಲೆಯ ಮೇಲೆ ಹೊತ್ತು ಕಟ್ಟಿಸಿದ ಪ್ರೌಢಶಾಲೆಯ ಕಟ್ಟಡದ ಶಂಕುಸ್ಥಾಪನೆಯ ಕಲ್ಲಿನಲ್ಲಿ (1947) ಅಂದಿನ ದಿವಾನರಾದ ಸರ್ ಎ. ರಾಮಸ್ವಾಮಿ ಮೊದಲಿಯಾರ್ ರವರ ಹೆಸರು ಇದೆ, ನಮ್ಮ ಗುರುವರ್ಯರ ಹೆಸರೇ ಇಲ್ಲ. ಚಿಕ್ಕಮಗಳೂರಿನ ನಮ್ಮ ಮಠದಪ್ರಸಾದ ನಿಲಯ ಕಟ್ಟಡದ ಉದ್ಘಾಟನಾ ಶಿಲಾಫಲಕದಲ್ಲೂ (1913) ಸಹ ಅಂದಿನ ಮೈಸೂರು ಮಹಾರಾಜರಾದ ಶ್ರೀಕೃಷ್ಣರಾಜ ಒಡೆಯರವರ ಹೆಸರಿದೆಯೇ ಹೊರತು ಭಕ್ತಾದಿಗಳಿಂದ ಭಕ್ತಿ ಕಾಣಿಕೆಯನ್ನು ಸಂಗ್ರಹಿಸಿ ಕಟ್ಟಡ ಕಟ್ಟಿಸಿದ ಆಗಿನ ಗುರುಗಳಾದ ಶ್ರೀ ಶಿವನಂಜುಂಡೇಶ್ವರ ಮಹಾಸ್ವಾಮಿಗಳವರ ಹೆಸರೇ ಇಲ್ಲ! ಇದು ಮಕ್ಕಳ ಭವಿತವ್ಯವನ್ನು ರೂಪಿಸಿದ ಅವರ ನಿಸ್ವಾರ್ಥಮಯ ಜೀವನದ ಪ್ರತೀಕವಾಗಿದೆ.

ಇದಕ್ಕೆ ತದ್ವಿರುದ್ಧವಾಗಿ ಪಂಪನ ಆದಿಪುರಾಣದಲ್ಲಿ ಒಂದು ಪ್ರಸಂಗ ಬರುತ್ತದೆ. ಭರತ ಚಕ್ರವರ್ತಿಯು ಪಟ್ಖಂಡ ಭೂಮಂಡಲವನ್ನು ಗೆದ್ದು ಹಿಮಾಲಯ ಪರ್ವತದವರೆಗೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿ ದಿಗ್ವಿಜಯವನ್ನು ಸಾಧಿಸುತ್ತಾನೆ. ತನ್ನ ಸೇನಾಪತಿಯನ್ನು ಕರೆದು ಹಿಮಾಲಯದ ಎತ್ತರದ ಬಂಡೆಯ ಮೇಲೆ ತನ್ನ ಹೆಸರನ್ನು ಕೆತ್ತಿಸಲು ಆಜ್ಞಾಪಿಸುತ್ತಾನೆ. ಕೆಲವು ಗಂಟೆಗಳ ನಂತರ ಸೇನಾಪತಿಯು ಹಿಂದಿರುಗಿ ತಲೆಬಾಗಿ "ಮಹಾಪ್ರಭು! ಇಲ್ಲಿಗೆ ಬಂದ ಹಿಂದಿನ ರಾಜಮಹಾರಾಜರುಗಳೆಲ್ಲರೂ ಅವರವರ ಹೆಸರುಗಳನ್ನು ಕೆತ್ತಿಸಿದ್ದಾರೆ. ತಮ್ಮ ಹೆಸರನ್ನು ಕೆತ್ತಿಸಲು ಹಿಮಾಲಯ ಪರ್ವತದ ಯಾವ ಬಂಡೆಯ ಮೇಲೂ ಜಾಗವಿಲ್ಲ"" ಎಂದು ವಿನೀತನಾಗಿ ವಿಜ್ಞಾಪಿಸಿಕೊಳ್ಳುತ್ತಾನೆ. ಇದರಿಂದ ಲಜ್ಜೆಗೊಳಗಾಗಬೇಕಾಗಿದ್ದ ಭರತ ಚಕ್ರವರ್ತಿಯು ಸಿಟ್ಟಿಗೆದ್ದು ತನ್ನ ಕೈಯಲ್ಲಿದ್ದ ರತ್ನದಂಡದಿಂದ ಅವೆಲ್ಲ ಹೆಸರುಗಳನ್ನು ಅಳಿಸಿಹಾಕಿ ತನ್ನ ಹೆಸರು ಮತ್ತು ಬಿರುದು ಬಾವಲಿಗಳನ್ನು ಕೆತ್ತಿಸಲು ಸೇನಾಪತಿಗೆ ಆಜ್ಞಾಪಿಸುತ್ತಾನೆ. (ಅಂತು ಗಲಿತಗರ್ವನಾಗಿ ಸಿಗ್ಗಾಗಿ ಪೂರ್ವಾವನಿಪಾಲಪ್ರಶಸ್ತಿಯೊಳೊಂದೊಂದಂ ದಂಡರತ್ನದಿಂ ಸೀಂಟಿ ಕಳೆದು ನಿಜಪ್ರಶಸ್ತಿಗೆಡೆಮಾಡಿ - ಆದಿಪುರಾಣ, ಅಧ್ಯಾಯ ೧೩). ಆ ಭರತ ಚಕ್ರವರ್ತಿಯ ಅಹಂಭಾವವೇ ಇಂದು ಅನೇಕ ಭಾರತೀಯರ ಮನಸ್ಸಿನಲ್ಲಿ ಮೂಡಿಬಂದಿರುವಂತೆ ಕಾಣಿಸುತ್ತದೆ. ತನ್ನಿಂದಲೇ ಇದೆಲ್ಲಾ ಆಯಿತು ಎಂದು ಬೀಗುವ ಈ ಜನರು ಪುರಂದರ ದಾಸರ ಈ ಮುಂದಿನ ವಿವೇಕದ ಮಾತನ್ನು ನೆನಪಿಟ್ಟುಕೊಳ್ಳುವುದು ಶ್ರೇಯಸ್ಕರ:

ಮುನ್ನ ಶತಕೋಟಿ ರಾಯರುಗಳಾಳಿದ ನೆಲನ
ತನ್ನದೆಂದೆನುತ ಶಾಸನವ ಬರೆಸಿ
ಬಿನ್ನಣದ ಮನೆಕಟ್ಟಿ ಕೋಟೆ ಕೊತ್ತಳವಿಕ್ಕಿ 
ಚೆನ್ನಿಗನು ಅಸುವಳಿಯೆ ಹೊರಗೆ ಹಾಕುವರು 
ಅಸ್ಥಿರದ ದೇಹವನು ನೆಚ್ಚಿ ನೀ ಕೆಡಬೇಡ 
ಸ್ವಸ್ಥದಲಿ ನೆನೆ ಕಂಡ್ಯ ಪರಮಾತ್ಮನ 
ಚಿತ್ತದೊಳು ಶುದ್ಧಿಯಿಂ ಪುರಂದರವಿಠಲನೆ 
ಉತ್ತಮೋತ್ತಮನೆಂದು ಸುಖಿಯಾಗೊ ಮನುಜ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 6.7.2017