ನಾ ನಾನೆಂಬುದು ನಾನಲ್ಲ v/s I am not what I am
ಸಂತ ಶಿಶುನಾಳ ಷರೀಫರು ತಮ್ಮ ಒಂದು ತತ್ತ್ವ ಪದದಲ್ಲಿ "ನಾನಾನೆಂಬುದು ನಾನಲ್ಲ" ಎನ್ನುತ್ತಾರೆ. ಇದೇ ಧಾಟಿಯಲ್ಲಿ ಶೇಕ್ಸ್ಪಿಯರ್ನ 'ಒಥೆಲೋ' ನಾಟಕದ ಮೊದಲ ದೃಶ್ಯದಲ್ಲಿ “I am not what I am" ಎಂದು ಇಯಾಗೋ ಹೇಳುತ್ತಾನೆ. ಮೇಲ್ನೋಟಕ್ಕೆ ಎರಡೂ ನುಡಿಗಟ್ಟಗಳು ಒಂದೇ ಎಂಬ ಭ್ರಮೆ ಉಂಟಾಗುತ್ತದೆ. ಆದರೆ ವಿಚಾರ ಮಾಡಿದಾಗ ಎರಡರ ಅರ್ಥ ಮತ್ತು ಹಿನ್ನೆಲೆ ಬೇರೆ ಬೇರೆಯೇ. ಒಂದು ಆಧ್ಯಾತ್ಮಿಕ ಸಾಧಕ ಹೇಳಿದ ಅನುಭಾವದ ಮಾತಾದರೆ, ಮತ್ತೊಂದು ಸಮಯಸಾಧಕ ಹೇಳಿದ ನಯವಂಚನೆಯ ಮಾತು. ನಯವಂಚಕರು ಬಹಿರಂಗದಲ್ಲಿ ತೋರಿಸಿಕೊಳ್ಳುವುದೇ ಒಂದು. ಅಂತರಂಗದಲ್ಲಿ ಇರುವುದೇ ಒಂದು. ಅವರದು ಊಸರವಳ್ಳಿಯಂತಹ ಬದುಕು. ಪರಿಸರಕ್ಕೆ ಹೊಂದಾಣಿಕೆಯಾಗುವಂತೆ ವೇಷವನ್ನು ಬದಲಿಸುತ್ತಾ ಕೇವಲ ವೈಯಕ್ತಿಕ ಲಾಭಕ್ಕಾಗಿ ಜಾಲ ಹೆಣೆಯುವ ನಿಪುಣರಿವರು. ಇವರಿಗೆ ಯಾವುದೇ ಬದ್ಧತೆ ಇರುವುದಿಲ್ಲ.
ತನ್ನನ್ನು ಸೇನಾಪತಿಯನ್ನಾಗಿ ಮಾಡಲಿಲ್ಲವೆಂಬ ಅಸಮಾಧಾನದಿಂದ ಕುದಿಯತೊಡಗಿದ ಖಳನಾಯಕನಾದ ಇಯಾಗೋ ಮಹಾದಂಡನಾಯಕನಾದ ಒಥೆಲೋ ವಿರುದ್ಧ ಒಳಗೊಳಗೇ ಕತ್ತಿ ಮಸೆಯುತ್ತಾನೆ. ಅವನನ್ನು ನೀನು ದ್ವೇಷಿಸುವುದಾದರೆ ಅವನ ಹತ್ತಿರ ಏಕೆ ಇರುತ್ತೀಯಾ? ಹೊರಗೆ ಬಂದು ಬಿಡು ಎಂದು ಹೇಳಿದ ತನ್ನ ಆತ್ಮೀಯ ಸ್ನೇಹಿತನಾದ ರೋಡ್ರಿಗೋ ಎದುರಿಗೆ ಇಯಾಗೋ ಆಡುವ ಅಂತರಂಗದ ಮಾತುಗಳು ಇವು : "I follow him to serve my turn upon him!” ಅಂದರೆ ಅವನಿಂದ ಲಾಭ ಪಡೆಯಲು ಅವನ ಸೇವೆ ಮಾಡುತ್ತಿದ್ದೇನೆ. ಎಲ್ಲರೂ ಯಜಮಾನರಾಗಲು ಬರುವುದಿಲ್ಲ. ಹಾಗೆಯೇ ಎಲ್ಲ ಯಜಮಾನರನ್ನೂ ಅನುಸರಿಸಲು ಬರುವುದಿಲ್ಲ, ಸೇವಕರಲ್ಲಿ ಎರಡು ಬಗೆಯ ಜನರಿದ್ದಾರೆ. ತಮ್ಮ ಹೊಟ್ಟೆಪಾಡಿಗಾಗಿ, ಜೀವನದುದ್ದಕ್ಕೂ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಮಾಡುವ ಜನರ ಒಂದು ವರ್ಗ, ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಮಾಡುತ್ತಿರುವವರಂತೆ ನಟಿಸಿ ತಮ್ಮ ಶ್ರೇಯೋಭಿವೃದ್ಧಿಯನ್ನು ಸಾಧಿಸಿಕೊಳ್ಳಬಯಸುವ ಜನರ ಇನ್ನೊಂದು ವರ್ಗ. ಈ ವರ್ಗದ ಜನರು ಕ್ರಮೇಣ ಸ್ವಂತಕ್ಕೆ ಶ್ರೀಮಂತರಾದ ನಂತರ ಹೊರಬಂದು ತಮಗೆ ತಾವೇ ಯಜಮಾನರಾಗುತ್ತಾರೆ. ಈ ಎರಡನೆಯ ವರ್ಗಕ್ಕೆ ಸೇರಿದವನು ನಾನು; ನಾನು ಅವನ ಸೇವೆ ಮಾಡುತ್ತಿರುವುದು ನಾನು ಬಯಸಿದ್ದನ್ನು ಪಡೆಯಲು. ಅವನಿಗೆ ನಿಷ್ಟನಾಗಿರುವಂತೆ ತೋರಿಸಿಕೊಳ್ಳುತ್ತೇನೆ. ಆದರೆ "ಎಲ್ಲರ ಕಣ್ಣಿಗೆ ಕಂಡಂತೆ ನಾನಿಲ್ಲ” ಎಂದು ಇಯಾಗೋ ಎಗ್ಗಿಲ್ಲದೆ ಹೇಳಿಕೊಳ್ಳುತ್ತಾನೆ (I may seem to love and obey him, but in fact, I'm just serving him to get what I want. I am not what I am!). ವ್ಯಾವಹಾರಿಕ ಬದುಕಿನಲ್ಲಿ ತುಂಬಿರುವ ಮೋಸ, ವಂಚನೆ, ದಗಲ್ಬಾಜಿತನಗಳ ಅನಾವರಣ ಇಲ್ಲಿದೆ.
ಒಥೆಲೋ ನಾಟಕದಲ್ಲಿ ಶೇಕ್ಸ್ ಪಿಯರ್ ಚಿತ್ರಿಸಿರುವ ಈ ಇಯಾಗೋ ಪಾತ್ರ ಸಮಾಜದಲ್ಲಿ ಬಹುಸಂಖ್ಯಾತರನ್ನು ಪ್ರತಿನಿಧಿಸುತ್ತದೆ. ಸಮಾಜದ ವಿವಿಧ ರಂಗಗಳಲ್ಲಿ ನಿತ್ಯ ನಡೆಯುವ ನಾಟಕವೇ ಇದು. ರಾಜಕೀಯ, ಸಾಮಾಜಿಕ, ಕೌಟುಂಬಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಇಯಾಗೋನ ಸೋದರ ಸಂಬಂಧಿಗಳು ಹೇರಳವಾಗಿ ಸಿಗುತ್ತಾರೆ. ಅಡಿಗಡಿಗೆ ತಾವು ಹಿತೈಷಿಯೆಂಬ ಪೋಸು ಕೊಡುತ್ತಾ ಸಾಗುತ್ತಾರೆ. ಕಂಕುಳಲ್ಲಿ ಸದಾ ದೊಣ್ಣೆಯೊಂದಿಗೆ ಸಿದ್ದರಾಗಿ ಅವಕಾಶಕ್ಕಾಗಿ ಹದ್ದಿನ ಕಣ್ಣಿಟ್ಟು ಕಾಯುತ್ತಿರುತ್ತಾರೆ!
ಪ್ರೀತಿ, ಶ್ರದ್ದೆ ಮತ್ತು ನಿಷ್ಠೆಯಿಂದ ಯಜಮಾನನ ಸೇವೆ ಮಾಡುವವನಿಗೆ ತಾನೆಷ್ಟು ಶುದ್ಧ ಅಪರಂಜಿ ಎಂದು ತೋರಿಸಿಕೊಳ್ಳುವ ಅಗತ್ಯವಿರುವುದಿಲ್ಲ. ಅವನು ಮಹತ್ವಾಕಾಂಕ್ಷೆಗಳಿಲ್ಲದ ಅಲ್ಪತೃಪ್ತ. ತನ್ನ ಸೇವೆ ನಿಷ್ಕಳಂಕ ಎಂದು ಆತ ಎಂದೂ ತೋರಿಸಿಕೊಳ್ಳಲು ಹೋಗುವುದೇ ಇಲ್ಲ, ತಾನಾಯಿತು, ತನ್ನ ಸೇವೆಯಾಯಿತು; ತನ್ನ ಯಜಮಾನ ಮೆಚ್ಚುವಂತೆ ಸೇವೆ ಮಾಡಿದರೆ ಸಾಕು. "ಆಳ್ದನು ಬರಲು ಆಳುಮಂಚದ ಮೇಲಿಪ್ಪುದು ಗುಣವೇ? ಹೇಳಾ. ಎಂದೆಂದೂ ನಾನು ಮಂಚವನೇರದ ಭಾಷೆ!" ಎಂದು ಬಸವಣ್ಣನವರು ಹೇಳುವಂತೆ ಅಪ್ಪಿ ತಪ್ಪಿ ಯಜಮಾನ ಬಂದಾಗಲೂ ತಾನು ಮಂಚದ ಮೇಲೆ ಕುಳಿತು ಅವಿಧೇಯತೆಯಿಂದ ವರ್ತಿಸಿದೆನೆಂಬ ಅಪಾರ್ಥಕ್ಕೆ ಎಡೆಯಾಗಬಾರದೆಂದು ತಾನೇ ಸಜ್ಜುಗೊಳಿಸಿದ ಮಂಚವನ್ನು ಕುತೂಹಲಕ್ಕಾದರೂ ಒಮ್ಮೆಯೂ ಏರದ ಭಾಷೆಯನ್ನು ತೊಡುತ್ತಾನೆ. ಎರಡನೆಯ ವರ್ಗದ ನಯವಂಚಕ ಸೇವಕನಾಗಿ ಇಯಾಗೋ ಇದ್ದರೆ ಮೊದಲನೆಯ ವರ್ಗದ ನಿಷ್ಠಾವಂತ ಸೇವಕಿಯಾಗಿ ಇದೇ ನಾಟಕದಲ್ಲಿ ಬರುವವಳೇ ಇಯಾಗೋನ ಪತ್ನಿ ಎಮಿಲಿ, ಒಥೆಲೋ ಪತ್ನಿ ಡೆಸ್ನಿಮೋನಾಳ ಆಪ್ತ ಸೇವಕಿ. ಒಥೆಲೋ ಮನಸ್ಸಿನಲ್ಲಿ ಸಂಶಯ ಮೂಡುವಂತೆ ಮಾಡಿ ತನ್ನ ಒಡತಿಗೆ ದ್ರೋಹ ಬಗೆದ ತನ್ನ ಗಂಡನ ದುಷ್ಕೃತ್ಯವನ್ನು ಬಯಲು ಮಾಡುವವಳೇ ಇವಳು. ಕೊನೆಗೆ ಗಂಡನ ಕತ್ತಿಯ ಇರಿತಕ್ಕೆ ಒಳಗಾಗಿ ಅಸುನೀಗುತ್ತಾಳೆ."
ಇಯಾಗೋನಂತಹ ಸಮಯ ಸಾಧಕರು, ಕಪಟಿಗಳು ಧಾರ್ಮಿಕ ಕ್ಷೇತ್ರದಲ್ಲಿಯೂ ಇದ್ದಾರೆಂಬುದನ್ನು ಬಸವಣ್ಣನವರ ಈ ಮುಂದಿನ ವಚನದಲ್ಲಿ ಕಾಣಬಹುದು:
ಏತ ತಲೆವಾಗಿದರೇನು, ಗುರುಭಕ್ತನಾಗಬಲ್ಲುದೆ?
ಇಕ್ಕುಳ ಕೈ-ಮುಗಿದರೇನು, ಭೃತ್ಯಾಚಾರಿಯಾಗಬಲ್ಲುದೆ?
ಗುರುವಿನ ಪಾದಕ್ಕೆ ಅಡ್ಡಬೀಳುವವರೆಲ್ಲರೂ ಗುರುಭಕ್ತರೆನಿಸಿಕೊಳ್ಳಲು ಸಾಧ್ಯವಿಲ್ಲ. ಅವರಲ್ಲಿ ಅನೇಕರು ತಲೆಬಾಗುವುದು ಯಾವುದೋ ಸ್ವಾರ್ಥಸಾಧನೆಗಾಗಿ - ಬಾವಿಯಲ್ಲಿರುವ ನೀರನ್ನು ಎತ್ತಲು ಏತ ತಲೆಬಾಗಿದಂತೆ. ಕೈಮುಗಿಯುವವರೆಲ್ಲರೂ ಸಜ್ಜನರೆನಿಸಿಕೊಳ್ಳಲು ಸಾಧ್ಯವಿಲ್ಲ. ಅವರು ಕೈಮುಗಿಯುವುದು ಎಷ್ಟೋವೇಳೆ ಇಕ್ಕುಳ ಕೈಮುಗಿದಂತೆ! ಈ ಶಿಷ್ಟಾಚಾರದ ಹಿಂದೆ ಇಕ್ಕುಳದಂತೆ ಕೈಮುಗಿಸಿಕೊಂಡವನಿಂದ ಏನನ್ನೋ ಕೀಳುವ ಹುನ್ನಾರವಿರುತ್ತದೆ!
"I am not what I am!" ಎಂಬುದು ಆಧ್ಯಾತ್ಮಿಕ ಸಾಧಕರನ್ನೂ ಕಾಡುತ್ತದೆ. ಆದರೆ ಅದು ಇನ್ನೊಬ್ಬರಿಗೆ ಮಾಡುವ ನಯವಂಚನೆಯಲ್ಲ, ವಿಷಾದದ ಹಾಡಾಗಿ ಹೊರಹೊಮ್ಮಿ ಜೀವಿ ಪರಿಪಕ್ವಗೊಳ್ಳುವ ಆತ್ಮನಿರೀಕ್ಷಣೆ! ಬಸವಣ್ಣನವರ ಈ ಮುಂದಿನ ವಚನವನ್ನು ಗಮನಿಸಿ:
ಎನ್ನಲ್ಲಿ ಭಕ್ತಿ ಸಾಸವೆಯ ಷಡ್ಭಾಗದನಿತಿಲ್ಲ.
ಎನ್ನ ಭಕ್ತನೆಂಬರು, ಎನ್ನ ಸಮಯಾಚಾರಿಯೆಂಬರು
ನಾನೇನು ಪಾಪವ ಮಾಡಿದೆನೊ.
ಬೆಳೆಯದ ಮುನ್ನವೆ ಕೊಯ್ವರೆ? ಹೇಳಾ ಅಯ್ಯಾ!
ಇರಿಯದ ವೀರ, ಇಲ್ಲದ ಸೊಬಗ
ಎಲ್ಲಾ ಒಡೆಯರೂ ಏರಿಸಿ ನುಡಿವರು! <
ಎನಗಿದು ವಿಧಿಯೆ, ಕೂಡಲ-ಸಂಗಮ-ದೇವಾ?
ಜನರು ನನ್ನನ್ನು ಮಹಾಸದ್ಭಕ್ತನೆಂದು ಕೊಂಡಾಡುತ್ತಾರೆ. ಆದರೆ ನಾನು ಹಾಗಿದ್ದೇನೆಯೇ ಎಂದು ಆತ್ಮಾವಲೋಕನ ಮಾಡಿಕೊಂಡು ನೊಂದುಕೊಳ್ಳುತ್ತಾರೆ ಬಸವಣ್ಣನವರು. ಜನರು ನನ್ನನ್ನು ನೋಡುವ ಹಾಗೆ ನಾನಿಲ್ಲವಲ್ಲಾ ಎಂಬ ಆಧ್ಯಾತ್ಮಿಕ ಕೊರಗು ಈ ವಚನದಲ್ಲಿ ಮಡುಗಟ್ಟಿ ನಿಂತಿದೆ. ಅಧ್ಯಾತ್ಮ ಸಾಧಕರು ತಮ್ಮ ಮನಸ್ಸಿನ ಕಳವಳಗಳನ್ನು ಬಹಿರಂಗವಾಗಿ ಬಿಚ್ಚಿಡುತ್ತಾ ಪರಿಪೂರ್ಣತೆಯತ್ತ ಸಾಗುವ ರೀತಿ ಇದು. ಇದು ಸಾಧನಾವಸ್ಥೆಯ ಸ್ತರ. ಪರತತ್ವದತ್ತ ಇಡುವ ದೃಢವಾದ ಹೆಜ್ಜೆಗಳಿವು. ಇಯಾಗೋನದು ಅವನೇ ಒಪ್ಪಿಕೊಳ್ಳುವ ಹಾಗೆ ಧೂರ್ತತನ; ಬಸವಣ್ಣನವರದು ಆಧ್ಯಾತ್ಮ ಸಾಧನೆ. ಒಂದು ವ್ಯಾವಹಾರಿಕ ಜೀವನಕ್ಕೆ ಹಿಡಿದ ಕನ್ನಡಿ ಮತ್ತೊಂದು ಪಾರಮಾರ್ಥಿಕ ಬದುಕಿನ ಮಣಿಮುಕುರ.
ಆರಂಭದಲ್ಲಿ ಉಲ್ಲೇಖಿಸಿದ ಶಿಶುನಾಳ ಷರೀಫರ ತತ್ವಪದದಲ್ಲಿ ಎಲ್ಲ ಸಾಂಸಾರಿಕ ಸಂಬಂಧಗಳ ಸಂಕೋಲೆಯಿಂದ ಹೊರಬಂದು ಈ ಶರೀರದೊಳಗೆ ಅಡಗಿರುವ ಆತ್ಮವನ್ನು ಕಂಡುಕೊಂಡ ಪರಿಪಕ್ವ ಆಧ್ಯಾತ್ಮಿಕ ದೃಷ್ಟಿ ಇದೆ. ವ್ಯಾವಹಾರಿಕ ಬದುಕಿನಲ್ಲಿ ಮುಳುಗಿದ ಅಥವಾ ನೊಂದು ಬೆಂದ ಜೀವಿಗಳಿಗೆ ಜೀವನದ ಆತ್ಯಂತಿಕ ಸತ್ಯದ ಅರಿವನ್ನು ಮೂಡಿಸುವ ಬದುಕಿನ ಒಳ ಎಚ್ಚರವೂ ಇದೆ!
ನಾ ನಾನೆಂಬುದು ನಾನಲ್ಲ ಈ ಮಾನುಷ ಜನ್ಮವು ನಾನಲ್ಲ
ನಾರಾಯಣ ಪರ ಬ್ರಹ್ಮ ಸದಾಶಿವ ನೀ ಎಣಿಸುವ ಗುಣ
ನಾನಲ್ಲ
ಮಾತಾ-ಪಿತ-ಸುತ ನಾನಲ್ಲ ಬಹು ಪ್ರೀತಿಯ ಸತಿಪತಿ ನಾನಲ್ಲ
ಜಾತಿಗೋತ್ರಗಳು ನಾನಲ್ಲ ಭೂನಾಥನಾದವ ನಾನಲ್ಲ
ನಾನೀ ಭೇದವು ನಾನಲ್ಲ ನಾ ಶಿಶುನಾಳಧೀಶನ ಬಿಡಲಿಲ್ಲ!
ನಾನಳಿಯದೆ ನೀ ತಿಳಿಯಲುಬಾರದು ನೀ ಎಣಿಸುವ ಗುಣ
ನಾನಲ್ಲ.
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 20.7.2017