ಜನರಿಗೆ ಬೇಕಾಗಿರುವುದು ನೀರು; ಸರಕಾರ ಕೊಡುತ್ತಿರುವುದು ಬೀರು!
ಪಾಶ್ಚಿಮಾತ್ಯ ದೇಶಗಳ ಜನರು ಮುಂಬಾಗಿಲಿನಿಂದ ಮನೆಯನ್ನು ಪ್ರವೇಶಿಸುವುದೇ ಅಪರೂಪ. ಕಾರಿನಲ್ಲಿ ಮನೆಯ ಸಮೀಪ ಬರುತ್ತಿದ್ದಂತೆಯೇ ಕೈಯಲ್ಲಿರುವ ರಿಮೋಟ್ ಬಟನ್ ಒತ್ತುತ್ತಾರೆ. ಅಲಿಬಾಬಾ ಮತ್ತು ನಲವತ್ತು ಮಂದಿ ಕಳ್ಳರ ಕಥೆಯಲ್ಲಿ “ಬಾಗಿಲು ತೆರೆಯೇ ಶೇಷಮ್ಮಾ!" ಎಂದಾಕ್ಷಣ ಬೆಟ್ಟದ ಗುಹೆಯ ಹೆಬ್ಬಂಡೆ ಪಕ್ಕಕ್ಕೆ ಸರಿಯುವಂತೆ ಗರಾಜಿನ ಬಾಗಿಲು ತೆರೆದುಕೊಳ್ಳುತ್ತದೆ. ಕಾರನ್ನು ಅದರೊಳಗೆ ಬಿಡುತ್ತಾರೆ. ನಂತರ ಕಾರಿನಿಂದಿಳಿದು ಮತ್ತೆ ಗುಂಡಿ ಒತ್ತಿದರೆ ಷಟರ್ ಮುಚ್ಚುತ್ತದೆ. ಮತ್ತೊಂದು ಗುಂಡಿ ಒತ್ತಿದರೆ ಗರಾಜಿನ ಒಳಭಾಗದಲ್ಲಿ ಅಡುಗೆ ಮನೆಯ ಪಕ್ಕದಲ್ಲಿರುವ ಇನ್ನೊಂದು ಬಾಗಿಲು ತೆರೆದುಕೊಳ್ಳುತ್ತದೆ. ಸಾಮಾನು ಸರಂಜಾಮುಗಳೊಂದಿಗೆ ಆ ಬಾಗಿಲಿನಿಂದಲೇ ಮನೆಯೊಳಗೆ ಹೋಗುತ್ತಾರೆ. ಹೀಗೆ ಗರಾಜ್ ಎಂಬುದು ಅವರ ಮನೆಯ ಹೊರಗೆ ಇರುವಂಥದ್ದಲ್ಲ, ಅದು ಮನೆಯ ಒಳಗೇ ಇರುವ ಒಂದು ಅವಿಭಾಜ್ಯ ಭಾಗ.
ನಮ್ಮ ನಾಡಿನ ಉತ್ತರ ಕರ್ನಾಟಕದ ಹಳ್ಳಿಗಳ ಮನೆಗಳು ಇದಕ್ಕೆ ವಿಭಿನ್ನವಾದರೂ ಸಾಮ್ಯತೆಯನ್ನು ಹೊಂದಿವೆ. ಈಗಲೂ ಈ ಪ್ರದೇಶದ ಹಳ್ಳಿಗಳಲ್ಲಿ ರೈತರ ಮನೆಯೊಳಗೆ ಮುಂಬಾಗಿಲಿಂದ ಕಾಲಿಡುತ್ತಿದ್ದಂತೆಯೇ ಎರಡು ಭಾಗಗಳು ಕಣ್ಣಿಗೆ ಗೋಚರಿಸುತ್ತವೆ. ಮೊದಲು ಸಿಗುವುದು ದನಕರುಗಳ ಕೊಟ್ಟಿಗೆ, ಒಂದೆರಡು ಮೆಟ್ಟಿಲುಗಳನ್ನು ಹತ್ತಿದರೆ ಎತ್ತರದಲ್ಲಿ ವಿಶಾಲವಾದ ಪಡಸಾಲೆ, ಪೇರಿಸಿಟ್ಟ ದವಸ ಧಾನ್ಯದ ಚೀಲಗಳು, ಅಡುಗೆ ಮನೆ, ದೇವರ ಮನೆ, ತಿಜೋರಿ ಮತ್ತು ಕುಟುಂಬದ ಸದಸ್ಯರ ವಾಸದ ಕೊಠಡಿಗಳು. ತಾವು ಉಣ್ಣುವಂತೆಯೇ ದನಕರುಗಳಿಗೂ ಹೊತ್ತು ಹೊತ್ತಿಗೆ ಮೇವು, ನೀರು ಮತ್ತು ಕಲಗಚ್ಚನ್ನು ಅವರು ಪ್ರೀತಿಯಿಂದ ಒದಗಿಸುತ್ತಾರೆ. ಮನೆಯ ಮಕ್ಕಳಂತೆಯೇ ಇರುವ ನೆಚ್ಚಿನ ಜಾನುವಾರುಗಳು ತಮ್ಮ ಕಣ್ಣೆದುರಿಗೇ ಇರಬೇಕೆಂಬ ಅವರ ಕಕ್ಕುಲಾತಿ ಅನನ್ಯವಾದುದು. ಎತ್ತುಗಳೆಂದರೆ ನಮ್ಮ ಜನಪದರಿಗೆ ಪಂಚಪ್ರಾಣ. ಗೃಹಿಣಿಯರ ಪಾಲಿಗೆ ಅವು ಕೇವಲ ಎತ್ತುಗಳಲ್ಲ; ಬಸವಣ್ಣನ ಅವತಾರ ಅವುಗಳನ್ನು ಕಟ್ಟಿದ ಕೊಟ್ಟಿಗೆಯನ್ನು ಗುಡಿಸಿ ಸಗಣಿ ಮೆತ್ತಿದ ಕೈಗಳಿಂದ ಹೊರಸೂಸುವುದು ದುರ್ಗಂಧವಲ್ಲ ನಗರ ಪ್ರದೇಶಗಳ ಲಲನೆಯರು ನಿಲುಗನ್ನಡಿಯ ಮುಂದೆ ನಿಂತು ಪೂಸಿಕೊಳ್ಳುವ ಸುಗಂಧದ್ರವ್ಯಗಳನ್ನು ನಾಚಿಸುವ ಸುಗಂಧ!
ಕಸವ ಹೊಡೆದಾ ಕೈಯಿ ಯಾತಾರ ನಾತವ
ಬಸವಣ್ಣ ನಿನ್ನ ಸಗಣೀಯ। ಹೊಡೆದಾ ಕೈ
ಎಸಳು ಯಾಲಕ್ಕಿ ಗೊನೆ ನಾತ
ಕೃಷಿಗೆ ಎತ್ತುಗಳೇ ಆಧಾರ. ಅವಿಲ್ಲದೆ ಕೃಷಿಯೂ ಇಲ್ಲ; ಕೃಷಿಕನೂ ಇಲ್ಲವೆಂಬ ಸ್ಥಿತಿ ಹಿಂದೆ ಇದ್ದಿತು. ಕೃಷಿಗೆ ಎತ್ತುಗಳನ್ನು ಬಳಸುವ ತಂತ್ರವನ್ನು ಯಾರು ಯಾವಾಗ ಕಂಡುಹಿಡಿದರೋ ತಿಳಿಯದು. ಆದರೆ ರೈತರ ನೆಚ್ಚಿನ ಬಂಟನಾಗಿ, ಜೀವನಾಡಿಯಾಗಿ, ಅನ್ನದಾತನಾಗಿ ಎತ್ತು ಜೀವನವಿಡೀ ತೊತ್ತಾಗಿ ದುಡಿಯುತ್ತದೆ. ನೋವು ನಲಿವುಗಳಲ್ಲಿ ಅದು ಮಿಳಿತಗೊಂಡು ನೇಗಿಲಯೋಗಿಯ ಹೆಗಲಿಗೆ ಹೆಗಲು ಕೊಟ್ಟು ಬದುಕಿನ ಬಂಡಿಯನ್ನು ದಣಿವರಿಯದೆ ಎಳೆಯುತ್ತದೆ. ಹೀಗಾಗಿ ಎತ್ತು ಕೃಷಿಕರಿಗೆ ಜೀತದಾಳಲ್ಲ; ಜೀವದ ಗೆಳೆಯ!
ರೈತರು ಹಬ್ಬ ಹುಣ್ಣಿಮೆಗಳಲ್ಲಿ ಎತ್ತುಗಳ ಕೋಡುಗಳನ್ನು ಹೆರೆದು, ಬಣ್ಣಹಚ್ಚಿ, ಕೋಡಣಸುಗಳನ್ನು ಹಾಕಿ, ಜೂಲು ಹೊದಿಸಿ ಮೆರವಣಿಗೆ ಮಾಡಿ ಸಂಭ್ರಮಿಸುತ್ತಿದ್ದರು. ಅವುಗಳೊಂದಿಗೆ ದೌಡಾಯಿಸಿ ಓಡುತ್ತಿದ್ದರು, ಸೆಣಸಾಡುತ್ತಿದ್ದರು. ಕೃಷಿಗೆ ಅನುಕೂಲವಾಗಲೆಂದು ಬಳಸಿಕೊಂಡ ಎತ್ತುಗಳು ರೈತನ ವಾಹನಗಳಾದವು. ಸಿಂಗಾರಗೊಂಡ ಕಮಾನು ಬಂಡಿಗಳ ಮದುವೆ ದಿಬ್ಬಣ! ಅವುಗಳಲ್ಲಿ ಕುಳಿತ ಸರ್ವಾಲಂಕಾರ ಭೂಷಿತರಾದ ಹೆಣ್ಣು ಗಂಡುಗಳು, ಅವರ ಹಾಡು, ನಗೆಚಾಟಿಕೆ! ಮದುವಣಿಗನಂತೆ ಸಿಂಗಾರಗೊಂಡ ಕೊರಳ ಕಿರುಗಂಟೆಗಳ ಕಿಂಕಿಣಿನಾದಗೈಯುತ್ತ ಗಾಡಿಗಳನ್ನು ಎಳೆಯುವ ಎತ್ತುಗಳು!..ಎಲ್ಲಿ ಹೋಯಿತ ಆ ಕಾಲ ಎಂದೀಗ ಹಲಬುವಂತಾಗಿದೆ!
ಈಗ ಗಾಡಿ-ಎತ್ತುಗಳ ಸ್ಥಾನವನ್ನು ಟ್ರಾಕ್ಟರುಗಳು ಆಕ್ರಮಿಸಿವೆ. ಮದುವೆಯ ದಿಬ್ಬಣ ಟ್ರಾಕ್ಟರುಗಳಲ್ಲಿ ಸಾಗುತ್ತದೆ. ಅದರಲ್ಲಿ ಕುಳಿತವರು ಬೆಳಗ್ಗೆ ಬಂದು ಮದುವೆ ಮುಗಿಸಿಕೊಂಡು ಮಧ್ಯಾಹ್ನ ಮೃಷ್ಟಾನ್ನ ಉಂಡು ವಾಪಸಾಗುತ್ತಾರೆ. ಟ್ರಾಕ್ಟರ್ ಓಡಿಸುವವನ ಏರು ಧ್ವನಿ ಕ್ಯಾಸೆಟ್ ಖಯಾಲಿಯಲ್ಲಿ ಅದರಲ್ಲಿ ಕುಳಿತವರು ಹಾಡುವುದು ಎಲ್ಲಿಲ್ಲದ ಬಂತು! ರೈಲ್ವೆ ಗೇಟು ದಾಟುವಾಗ ಅವನ ಬೇಜವಾಬ್ದಾರಿಯಿಂದ ಎಷ್ಟೋ ಸಾರಿ ಮದುವೆಗೆ ಹೋದವರು ಮಸಣ ಸೇರಿರುವುದು ಉಂಟು! "ಇಟ್ಟರೆ ಸಗಣಿಯಾದ, ತಟ್ಟಿದರೆ ಕುರುಳಾದ, ಸುಟ್ಟರೆ ನೊಸಲ ವಿಭೂತಿಯಾದ" ಎತ್ತುಗಳಿಂದ ಪರಿಸರ ಮಾಲಿನ್ಯವಾಗಲೀ ಶಬ್ದ ಮಾಲಿನ್ಯವಾಗಲೀ ಇರಲೇ ಇಲ್ಲ. ಅವುಗಳಂತೆ ಟ್ರಾಕ್ಟರ್ ಸಗಣಿ ಹಾಕುವುದಿಲ್ಲ. ಅದು ಉಗುಳುವ ಹೊಗೆ, ಕಿವಿಗಡಚಿಕ್ಕುವ ಅದರ ಆರ್ಭಟ ಅಸಹನೀಯ!
ಈಗೀಗ ಟ್ರ್ಯಾಕ್ಟರುಗಳು ವಿಚ್ಛಿದ್ರಕಾರಕ ಕೆಲಸಗಳಿಗೂ ದುರ್ಬಳಕೆಯಾಗುತ್ತಿರುವುದು ತೀರಾ ವಿಷಾದನೀಯ. ದಶಕಗಳ ಹೋರಾಟದ ಫಲವಾಗಿ ಚನ್ನಗಿರಿ ಮತ್ತು ತರೀಕೆರೆ ತಾಲ್ಲೂಕುಗಳ ಅನೇಕ ಕೆರೆಗಳನ್ನು ತುಂಬಿಸಲು ಸರಕಾರದಿಂದ ಮುಂಜೂರು ಮಾಡಿಸಿದ ಉಬ್ರಾಣಿ-ಅಮೃತಾಪುರ ಏತ ನೀರಾವರಿ ಯೋಜನೆಯನ್ನು ಕುರಿತು "ಬೆಟ್ಟವೇರಿ ಕೆರೆಗೆ ದುಮ್ಮಿಕ್ಕಿದಳು ಭದ್ರೆ" ಎಂದು ಇದೇ ಅಂಕಣದಲ್ಲಿ ಹಿಂದೆ ಬರೆಯಲಾಗಿದೆ. ತಾಳ್ಮೆಯಿಂದ ಅದರ ಸದುಪಯೋಗವನ್ನು ಮಾಡಿಕೊಳ್ಳುವ ಬದಲು ಸ್ವಾರ್ಥಕ್ಕೆ ಬಿದ್ದ ಹಳ್ಳಿಯ ಜನ ನೀರು ಹರಿಯುವ ಪೈಪುಗಳನ್ನು ತೂತುಮಾಡಿ ತಮ್ಮ ತೋಟಗಳಿಗೆ ಹಾಯಿಸಿಕೊಳ್ಳುತ್ತಿದ್ದಾರೆ. ಟ್ರಾಕ್ಟರ್ಗಳಿಂದ ಗುದ್ದಿಸಿ ವಾಲ್ವ್ಗಳ ಕಾಂಕ್ರೀಟ್ ಗೋಡೆಗಳನ್ನು ಒಡೆದು ತಮ್ಮೂರ ಕೆರೆಗೆ ಮಾತ್ರ ನೀರು ಹರಿಸಿಕೊಳ್ಳುತ್ತಿದ್ದಾರೆ, ತಡೆಯಲು ಬಂದವರೊಂದಿಗೆ ಕಣಿಗೆಗಳಿಂದ ಹೊಡೆದಾಡುತ್ತಿದ್ದಾರೆ. ತುಂಬಿದ ಸಿಮೆಂಟು ಚೀಲಗಳನ್ನು ತುರುಕಿ ಪೈಪುಗಳಲ್ಲಿ ಮುಂದೆ ನೀರು ಹರಿಯದಂತೆ ಮಾಡುತ್ತಿದ್ದಾರೆ. ಎಂದೂ ಕೇಳರಿಯದ ಈ ವಿಚ್ಛಿದ್ರಕಾರಕ ಕೆಲಸಗಳನ್ನು ಹಳ್ಳಿಯ ರೈತರು ಯಾರ ಹೆದರಿಕೆಯೂ ಇಲ್ಲದಂತೆ ರಾಜರೋಷವಾಗಿ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ರೈತರ ನೀರಿನ ದಾಹವನ್ನು ಪೂರೈಸಲಾಗದ ಸರಕಾರದ ನಿರ್ಲಕ್ಷ್ಯ.
ಜನರಿಗೆ ಬೇಕಾಗಿರುವುದು ನೀರು, ಆದರೆ ಸರಕಾರ ಧಾರಾಳವಾಗಿ ನೀಡುತ್ತಿರುವುದು ಬೀರು, ಬ್ರಾಂಡಿ, ಕಳೆದ ಸೋಮವಾರ ನಮ್ಮ ನ್ಯಾಯಪೀಠಕ್ಕೆ ಹೊನ್ನಾಳಿ ತಾಲ್ಲೂಕು ಚೀಲೂರು ಪಂಚಾಯಿತಿ ವ್ಯಾಪ್ತಿಯ ನಾಲ್ಕಾರು ಹಳ್ಳಿಗಳಿಂದ ನೂರಾರು ಜನ ಬಂದಿದ್ದರು. ಅವರಲ್ಲಿ ಮಹಿಳೆಯರು, ಹರಿಜನರು, ಮುಸ್ಲಿಮರು ಮತ್ತಿತರ ಎಲ್ಲ ಜನಾಂಗದವರು ಇದ್ದರು. ಅವರ ಗ್ರಾಮದಲ್ಲಿ ಅನೇಕ ವರ್ಷಗಳಿಂದ ಮದ್ಯದ ಅಂಗಡಿ ನಡೆಯುತ್ತಿತ್ತು. ಇತ್ತೀಚೆಗೆ ಸುಪ್ರೀಂ ಕೋರ್ಟ್ ರಾಜ್ಯದ ಹೆದ್ದಾರಿಗಳಿಂದ 500 ಮೀಟರ್ ಒಳಗೆ ಮದ್ಯದ ಮಾರಾಟವನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ಮದ್ಯದಂಗಡಿಯ ಮಾಲೀಕರು ಊರ ಹತ್ತಿರದ ಜಮೀನಿನಲ್ಲಿ ಮದ್ಯದಂಗಡಿಯನ್ನು ಸ್ಥಳಾಂತರಿಸಲು ಸಿದ್ಧತೆ ನಡೆಸಿದ್ದಾರೆ. ಇದಕ್ಕೆ ಸಮಾಜದ ಗಣ್ಯವ್ಯಕ್ತಿಗಳೇ ಬೆಂಬಲಿಸುತ್ತಿದ್ದಾರೆ. ಇದನ್ನು ತಡೆಗಟ್ಟಬೇಕೆಂದು ಅವರ ದೂರು. ಈ ಭಾಗದ ಅನೇಕ ಮಹಿಳೆಯರು ವಿಧವೆಯರಾಗಿರುವುದು ಅವರ ಗಂಡಂದಿರು ಕುಡಿತದ ಚಟಕ್ಕೆ ಬಲಿಯಾಗಿದ್ದರಿಂದ ಎಂಬ ಮಾಹಿತಿಯನ್ನೂ ನೀಡಿದರು. ದೂರು ಸಲ್ಲಿಸಲು ಬಂದವರಲ್ಲಿ ಮುಂದುವರಿದ ಜನಾಂಗದವರಿಗಿಂತ ಹಿಂದುಳಿದ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.
ಬಹಳ ವರ್ಷಗಳ ಹಿಂದೆ ನಡೆದ ಒಂದು ರೋಚಕ ಘಟನೆ ನಮಗೆ ನೆನಪಾಯಿತು. ಹಳ್ಳಿ ಹಳ್ಳಿಗಳಲ್ಲಿ ಪಾದಯಾತ್ರೆ ಮಾಡಿ ಪಾನ ನಿಷೇಧ ಆಂದೋಲನವನ್ನು ತೀವ್ರವಾಗಿ ಕೈಗೊಂಡಿದ್ದ ಕಾಲವದು (1990). ಈ ವಿಚಾರವಾಗಿ ಇದೇ ಅಂಕಣದಲ್ಲಿ ಹಿಂದೆ ಬರೆದ ನೆನಪು. ಒಮ್ಮೆ ರಾಣೇಬೆನ್ನೂರು ತಾಲ್ಲೂಕು ಹಲಗೇರಿಯಿಂದ ದೇವಸ್ಥಾನದ ಕಾರ್ಯಕ್ರಮಕ್ಕೆ ಗ್ರಾಮದ ಹಿರಿಯರು ನಮ್ಮನ್ನು ಆಹ್ವಾನಿಸಲು ಮಠಕ್ಕೆ ಬಂದಿದ್ದರು. ಒಂದು ಕಡೆ ಭಕ್ತಿಯಿಂದ ದೇವರನ್ನು ಆರಾಧಿಸುತ್ತೀರಿ, ಮತ್ತೊಂದು ಕಡೆ ಮತ್ತು ಬರುವಂತೆ ಕಂಠಪೂರ್ತಿ ಕುಡಿಯುತ್ತೀರಿ. ಇದು ಯಾವ ದೇವರಿಗೆ ಪ್ರೀತಿ ಹೇಳಿ? ನಿಮ್ಮ ಗ್ರಾಮದಲ್ಲಿ ಮದ್ಯದ ಅಂಗಡಿಗಳನ್ನು ಬಂದ್ ಮಾಡಿದರೆ ಮಾತ್ರ ಬರುವುದಾಗಿ ಷರತ್ತು ವಿಧಿಸಿದಾಗ ಊರ ಹಿರಿಯರು ಅವಾಕ್ಕಾದರು. ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿ ನಂತರ ಬರುವುದಾಗಿ ಹೇಳಿ ಹೋದರು. ಊರಿಗೆ ಹಿಂದಿರುಗಿದ ಮೇಲೆ ಹಲಗೆ ಸಾರಿಸಿದರು. ಪಂಚಾಯಿತಿ ಕಟ್ಟೆಗೆ ಗ್ರಾಮಸ್ಥರೆಲ್ಲರನ್ನೂ ಸೇರಿಸಿ ನಮ್ಮ ಷರತ್ತನ್ನು ಸಭೆಯ ಮುಂದಿಟ್ಟರು. ಸಭೆಯಲ್ಲಿದ್ದ ಹರಿಜನ ಮುಖಂಡನನ್ನು ನೋಡಿದ ಊರ ಗೌಡರು ಏನೋ ದುರ್ಗಪ್ಪಾ! ನಮ್ಮ ಗುರುಗಳು ಇಂತಹ ಷರತ್ತನ್ನು ಹಾಕಿದ್ದಾರೆ, ಏನು ಹೇಳುತ್ತೀಯೋ ಎಂದು ಕೇಳಿದರು? ಅದಕ್ಕೆ ದುರ್ಗಪ್ಪ ಎದ್ದು ನಿಂತು ಕೈಮುಗಿದು "ಸ್ವಾಮಿ, ನಮ್ ಜನ ಕುಡಿಯುವುದನ್ನು ಬಿಟ್ಟು ಬಹಳ ವರ್ಷಗಳಾದವು. ನಿಮ್ಮ ಜನರೇ ಹೆಚ್ಚು ಕುಡಿಯುತ್ತಿದ್ದಾರೆ, ಅವರನ್ನೇ ಕೇಳಿ” ಎಂದ ಹೇಳಿದಾಗ ಗೌಡರು ತಲೆತಗ್ಗಿಸುವಂತಾಯಿತು.
ಹೊನ್ನಾಳಿ ತಾಲ್ಲೂಕಿನ ಚೀಲೂರು ಗ್ರಾಮ ಪಂಚಾಯಿತಿಯವರು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲ ಹಳ್ಳಿಗಳಲ್ಲಿ ಮದ್ಯದ ಅಂಗಡಿ ನಡೆಸಲು ಪರವಾನಗಿಯನ್ನಾಗಲೀ ನಿರಾಕ್ಷೇಪಣಾ ಪತ್ರವನ್ನಾಗಲೀ ನೀಡಬಾರದೆಂದು ಸರ್ವಾನುಮತದಿಂದ ತೀರ್ಮಾನಿಸಿದ್ದಾರೆ. “ಜನರ ಅಭಿಪ್ರಾಯವೇ ನಮ್ಮ ಅಭಿಪ್ರಾಯ, ಜನರ ತೀರ್ಮಾನವೇ ಅಂತಿಮ ತೀರ್ಮಾನ, ಅವರ ತೀರ್ಮಾನಕ್ಕೆ ಮನ್ನಣೆ ನೀಡುವುದು ಅವರಿಂದ ಆಯ್ಕೆಯಾದ ಜನಪ್ರತಿನಿಧಿಗಳಾದ ನಮ್ಮ ಜವಾಬ್ದಾರಿ" ಎಂದು ತಮ್ಮ ಗೊತ್ತುವಳಿಯಲ್ಲಿ ಸ್ಪಷ್ಟವಾಗಿ ನಮೂದಿಸಿರುವ ಈ ಹಳ್ಳಿಯ ಪಂಚಾಯಿತಿ ಸದಸ್ಯರ ಜನಪರ ಕಾಳಜಿ ರಾಜ್ಯದ ಆಡಳಿತ ನಡೆಸುವ ಮಂತ್ರಿಮಹೋದಯರಿಗೆ ಏಕಿಲ್ಲ? ಒಂದೆರಡು ಕೋಟಿ ರೂ. ಗಳ ಬೆಳೆ ಪರಿಹಾರವನ್ನು ಸರಕಾರ ನೀಡಿದೆ, ನಿಜ. ಆದರೆ ಅದೇ ರೈತರಿಗೆ ಬೀರು, ಬ್ರಾಂಡಿ ಕುಡಿಸಿ ಸಾಯಿಸಿ ಅಬಕಾರಿ ಬಾಬತ್ತಿನಿಂದ ಸಂಗ್ರಹಿಸಿದ ತೆರಿಗೆ ಎಷ್ಟು ಸಾವಿರ ಕೋಟಿ! ಕಳ್ಳಭಟ್ಟಿ ಸರಾಯಿ ಕುಡಿದು ಸಾಯುತ್ತಾರೆಂಬ ನೆಪ ಒಡ್ಡಿ ಅಸಂಖ್ಯಾತ ಹಳ್ಳಿಗರು ನಿತ್ಯವೂ ಕುಡಿದ ಸಾಯುವಂತೆ ಮಾಡಿರುವ ಸರಕಾರದ ಈ "ಅಬಕಾರಿ ನೀತಿ" ಬೇಕೆಂದು ಒತ್ತಾಯಿಸುತ್ತಿರುವವರಾದರೂ ಯಾರು? ಯಾರ ಉದ್ಧಾರಕ್ಕಾಗಿ? ಮೊನ್ನೆ 71ನೆಯ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಈ ನಾಡಿನ ಜನರಿಗೆ ಕುಡಿದು ಓಲಾಡುವ ಸ್ವಾತಂತ್ರ್ಯ ಸಿಕ್ಕಿದೆಯೇ ಹೊರತು ನೆಮ್ಮದಿಯಿಂದ ಬದುಕುವ ಸ್ವಾತಂತ್ರ್ಯ ಇನ್ನೂ ಸಿಕ್ಕಿಲ್ಲ. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸರಕಾರ ಡೀನೋಟಿಫೈ ಮಾಡಬೇಕಾಗಿರುವುದು ರಾಜ್ಯದ ಹೆದ್ದಾರಿಗಳನ್ನಲ್ಲ; ಮದ್ಯದ ಅಂಗಡಿಗಳನ್ನು ಈ ಮದ್ಯದ ದಾಸ್ಯದಿಂದ ನಮ್ಮ ನಾಡಿನ ಜನರಿಗೆ ಮುಕ್ತಿ ಎಂದು? ರೈತರ ಬವಣೆಯನ್ನು ಕುರಿತು ಎಲ್ಲಿಯೋ ಓದಿದ ಒಂದು ಹಿಂದೀ ಪದ್ಯ ಇಲ್ಲಿ ಚಿಂತನಾರ್ಹ. “ಮೈ ಭಾರತ್ ಕಾ ಕಿಸಾನ್ ಹೂಂ; ಮೈ ಹರ್ ರೋಜ್ ಮರ್ ತಾ ಹೂಂ,” ಎಂದು ಆರಂಭವಾಗುವ ಆ ಪದ್ಯದ ಕೆಲವು ಸಾಲುಗಳ ಕನ್ನಡ ಭಾವಾನುವಾದ:
ನಾನು ಈ ಪುಣ್ಯಭಾರತದ ರೈತ
ನಿತ್ಯವೂ ಸಾಯುತ್ತಿದ್ದೇನೆ
ಪತ್ರಿಕೆಗಳು ಹೇಳುತ್ತಿವೆ:
ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ
ನಾನು ಹೇಳುತ್ತೇನೆ:
ನನ್ನ ಕತ್ತನ್ನು ಹಿಸುಕಲಾಗುತ್ತಿದೆ.
ಸರಕಾರದ ಯೋಜನೆಗಳಲ್ಲಿ
ಕೋಟಿ ಕೋಟಿ ರೂಪಾಯಿ ನನ್ನ ಮೇಲೆ ಖರ್ಚಾಗುತ್ತಿದೆ
ಆದರೆ ನಾನು ಮಾತ್ರ ಎರಡು ಹೊತ್ತಿನ ರೊಟ್ಟಿಗಾಗಿ
ಸಾಯುತ್ತಿದ್ದೇನೆ, ನಿತ್ಯವೂ ಸಾಯುತ್ತಿದ್ದೇನೆ. ಕೆಮ್ಮಿ ಕೆಮ್ಮಿ ನನಗೆ ಸಾಕಾಗಿಹೋಗಿದೆ
ಬತ್ತಿಹೋಗಿದೆ ನನ್ನ ಕಣ್ಣೀರ ಹನಿ
ಸಾಯುವುದು ನನಗೀಗ ಸುಲಭವೆನಿಸಿದೆ!
ನನ್ನ ಕೂಗು ಯಾರಿಗೂ ಕೇಳದಾಗಿದೆ
ಏಕೆಂದರೆ ಈ ಪುಣ್ಯಭಾರತದ ರೈತ ನಾನು!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 17.8.2017