ಇಲಿಯ ಕಂಡು ಪುಟನೆಗೆಯುವ "ಮಠದ ಬೆಕ್ಕುಗಳು"!

  •  
  •  
  •  
  •  
  •    Views  

"ಗುರುವಿಗಿಂ ಪರವಿಲ್ಲವೋ, ಸದ್ಗುರುವಿಗಿಂ ಮಿಗಿಲಿಲ್ಲವೋ? ಎನ್ನುವ ಕಾಲ ಹೋಯಿತು. ಗುರುವಿನ ಅಂತಸ್ತು ಹೋಯಿತು. ಹೆಂಗಸರೆಂದರೆ ಬಾಯ್ದೆರೆಯುತ್ತಾ ಇದೆ ಗುರುವರ್ಗ, ಗುರುಗಳು ಸ್ತ್ರೀಯರ ಪದತಲದಲ್ಲಿ ಬಿದ್ದರು. ಯಾರಾರೆಂದು ಹೇಳೋಣ? ಎಲ್ಲರೂ ವ್ಯಭಿಚಾರಿಗಳು. ಈಗಿನ ಗುರುಗಳು ಮಾಡಿದಷ್ಟು ಪಾಪವನ್ನು ಮತ್ತಾರೂ ಮಾಡುತ್ತಾ ಇಲ್ಲ. ಈಗಿನ ಸಂನ್ಯಾಸಿಗಳಿಂದ ಜಗತ್ತಿಗೆ ಭಯಂಕರವಾದ ಹಾನಿಯಾಗಿದೆ. ಸಂನ್ಯಾಸಿಗಳು ಕೆಡಲು ಭಕ್ತರಲ್ಲಿರುವ ಅಜ್ಞಾನವೇ ಕಾರಣ.

“ಅಯ್ಯೋ ಮೂಢ ಭಕ್ತರೇ! ನಿಮ್ಮ ಭಕ್ತಿಗೆ ಸರಿಯಾದ ಗುರುಗಳನ್ನು ಪಡೆದಿರುವಿರಿ. ನಿಮಗೇನು ಹುಚ್ಚು ಹಿಡಿದಿದೆ. ಭ್ರಷ್ಟರನ್ನು ಪೂಜಿಸಿ ಪರಮೇಶ್ವರನ ರಾಜ್ಯದಲ್ಲಿ ಅಸತ್ಯಕ್ಕೆ ಬೆಲೆಯನ್ನೇರಿಸುತ್ತಿರುವಿರಲ್ಲಾ! ಸತ್ಯವನ್ನು ಜೀವಸಹಿತ ಹೂಳುತ್ತಿರುವಿರಲ್ಲಾ! ನೀವು ಭ್ರಾಂತರಾಗಿರುವಿರಿ. ಅಯ್ಯೋ ನಿರ್ದಯಿ ಗುರುವರ್ಗವೇ! ನಿಮಗಾದರೂ ಪಾಪವನ್ನು ಮಾಡಿ ಜಗತ್ತನ್ನು ಹಾಳು ಮಾಡುತ್ತಿರುವಿರಲ್ಲಾ ದಯೆ ಬೇಡವೇ? ಶಿವ ಶಿವ! ಜಗತ್ತಿನ ಸೂತ್ರವೆಲ್ಲಾ ವ್ಯಭಿಚಾರಿಗಳ ಕೈಯಲ್ಲಿದೆ. ವ್ಯಭಿಚಾರಿಗಳು ಗುರುಗಳೆಂದು ಹೇಳಿಸಿಕೊಳ್ಳಲು ನಾಚಿಕೆಗೊಳ್ಳುವುದಿಲ್ಲವಲ್ಲಾ! ಹರ ಹರ! ಶಿವ ಶಿವ!”

“ಗುರುಗಳಾಗುವುದೆಂದರೆ ನಾಟಕದಲ್ಲಿ ವೇಷ ಹಾಕಿಕೊಂಡು ಪಾರ್ಟು ಮಾಡುವುದೆಂದು ಜನರು ಭಾವಿಸಿರುವಂತೆ ತೋರುತ್ತದೆ. ಶಿವ ಶಿವ! ದನ ಕಾಯುವವರೆಲ್ಲಾ, ಸುಳ್ಳು ಹೇಳುವವರೆಲ್ಲಾ ವಿಧವಾ ಪ್ರಿಯರೆಲ್ಲಾ ನಿನ್ನ ಹೆಸರಿನಿಂದ ಈ ದೇಶದಲ್ಲಿ ಮೆರೆಯುತ್ತಾರಲ್ಲಾ! ನೀಚ ಗುರುವರ್ಗ! ಅಧಮ ಗುರುವರ್ಗ! ಪತಿತ ಗುರುವರ್ಗ! ಜಗದ್ರೋಹಿ! ನಿನಗೆ ಧಿಕ್ಕಾರ! ಧಿಕ್ಕಾರ! ಧಿಕ್ಕಾರ! ನಿಮಗೇನು ಮಾಡಿದರೂ ನಿಮ್ಮ ಪಾಪಕ್ಕೆ ಪ್ರಾಯಶ್ಚಿತ್ತವಾಗುವುದಿಲ್ಲ. ಅಘೋರ ನಾಯಕ" ನರಕದಲ್ಲಿ ಬೀಳುವಿರಿ.  ಅಧಮರೇ ಶೀಘ್ರವಾಗಿ ತೊಲಗಿರಿ.

ಇತ್ತೀಚೆಗೆ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಧರ್ಮದ ಹೆಸರಿನಲ್ಲಿ ನಡೆದ ಅಪರಾಧಗಳು ಮತ್ತು ಹಿಂಸಾಚಾರಗಳನ್ನು ಕುರಿತು ಇಷ್ಟು ಕಟುವಾದ ಹಾಗೂ ನಿಷ್ಟುರವಾದ ಮಾತುಗಳನ್ನು ಬರೆದವರು ಯಾರೆಂದು ನಿಮಗೆ ಕುತೂಹಲವೇ? ಇವು ನಿನ್ನೆ ಮೊನ್ನೆ ಬರೆದ ಮಾತುಗಳಲ್ಲ. ಯಾವುದೇ ಬಂಡಾಯ ಸಾಹಿತಿಗಳು ಮಾಡಿದ ಟೀಕೆಯೂ ಅಲ್ಲ. ಇಲ್ಲಿಗೆ 80 ವರ್ಷಗಳ ಹಿಂದೆ ನಮ್ಮ ಗುರುವರ್ಯರಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ತಮ್ಮ ಖಾಸಗಿ ದಿನಚರಿಯಲ್ಲಿ (1938) ಅಂದಿನ "ಧರ್ಮ ದುರಂಧರರ ತೆರೆಮರೆಯ ಅನೈತಿಕ ನಡವಳಿಕೆಗಳನ್ನು ಖಂಡಿಸಿ ಬರೆದ ನಿಷ್ಠುರವಾದ ಮಾತುಗಳು. ಒಂದು ಮತದ ಯುವ ಸ್ವಾಮಿಗಳಾಗಿ ಜೀವನಾದರ್ಶನಗಳನ್ನು ಮೈಗೂಡಿಸಿಕೊಂಡಿದ್ದ ಅವರಿಗೆ ಆಗ ಕೇವಲ 24 ವರ್ಷ ವಯಸ್ಸು. 1914ನೆಯ ಇಸವಿ ರೋಹಿಣೀ ನಕ್ಷತ್ರದಲ್ಲಿ ಬಸವ ಜಯಂತಿಯಂದೇ ಜನಿಸಿದ ನಮ್ಮ ಗುರುವರೇಣ್ಯರು ಬಸವಣ್ಣನವರ ನಡೆನುಡಿಗಳ ಪಡಿಯಚ್ಚಿನಂತೆಯೇ ಅವರನ್ನು ತೀರಾ ಹತ್ತಿರದಿಂದ ಬಲ್ಲವರಿಗೆ ಕಾಣಿಸುತ್ತಿದ್ದರು. ಅಂದು ಅವರು ಬರೆದ ಖಾಸಗಿ ಡೈರಿ ಆಕಸ್ಮಿಕವಾಗಿ ನಮ್ಮ ಕೈಗೆ ಸಿಕ್ಕು ಪುಳಕಿತರಾಗಿ ಓದಿ ಸಂಪಾದಿಸಿ "ಆತ್ಮನಿವೇದನೆ" ಎಂಬ ಹೆಸರಿನಲ್ಲಿ ಪ್ರಕಟಿಸಿದ ಪುಸ್ತಕದ ವಿಚಾರವಾಗಿ ಈ ಅಂಕಣದಲ್ಲಿ ಬಹಳ ವರ್ಷಗಳ ಹಿಂದೆಯೇ ವಿವರವಾಗಿ ಬರೆಯಲಾಗಿದೆ. ಅಂದು ಅವರು ಬರೆದ ಮೇಲ್ಕಂಡ ಮೊನಚಾದ ಮಾತುಗಳು ಇಂದಿಗೂ ಎಷ್ಟೊಂದು ಪ್ರಸ್ತುತವಾಗಿವೆ!

ಭಗವದ್ಗೀತೆಯ ಈ ಕೆಳಕಂಡ ಶ್ಲೋಕ ಸಂಸ್ಕೃತ ಬಾರದವರಿಗೂ ಗೊತ್ತು:
ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ 
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ

ಧರ್ಮದ ಗ್ನಾನಿ ಉಂಟಾದಾಗ ಸಾಕ್ಷಾತ್ ಭಗವಂತನೇ ಸ್ವತಃ ಅವತಾರವೆತ್ತಿ ಬಂದು ಅಧರ್ಮವನ್ನು ಹತ್ತಿಕ್ಕಿ ಧರ್ಮವನ್ನು ಎತ್ತಿಹಿಡಿಯುತ್ತಾನೆಂಬುದು ತಲೆತಲಾಂತರಗಳಿಂದ ಈ ದೇಶದ ಧಾರ್ಮಿಕ ಶ್ರದ್ಧಾಳುಗಳು ಬಲವಾದ ನಂಬಿಕೆ ಇಟ್ಟುಕೊಂಡು ಬಂದಿರುವ ನಿರೀಕ್ಷೆ. ಈ ನಿರೀಕ್ಷೆಯಲ್ಲಿ ಕೆಲವು ಡೋಂಗಿ ವ್ಯಕ್ತಿಗಳು ದೇವ ಮಾನವರಾಗಿ ಕಾಣಿಸಿಕೊಳ್ಳುವ ಅಪಾಯದ ವಿಚಾರವಾಗಿ ಭಾಗವತ ಪುರಾಣವು ತನ್ನ 12ನೆಯ ಸ್ಕಂಧದಲ್ಲಿ ನೀಡಿರುವ ಎಚ್ಚರಿಕೆಯ ಮಾತುಗಳನ್ನು ಜನಸಾಮಾನ್ಯರು ಗಮನಿಸಿದಂತೆ ಕಾಣುವುದಿಲ್ಲ. ಅಂಥವರನ್ನು ತಪೋವೇಷೋಪಜೀವಿನಃ ಅಂದರೆ ತಮ್ಮ ಜೀವನ ನಿರ್ವಹಣೆಗಾಗಿ ಸಾಧು-ಸಂತರಂತೆ ತಪಸ್ವಿಗಳಂತೆ ಕಾಣಿಸಿಕೊಳ್ಳುವ ವೇಷಧಾರಿಗಳು ಎಂದು ಭಾಗವತ ಬಣ್ಣಿಸುತ್ತದೆ. ಧರ್ಮಂ ವಕ್ಷಂತ್ಯಧರ್ಮಜ್ಞಾ ಅಧಿರುಹ್ಯೋತ್ತಮಾಸನಮ್ (ಭಾಗವತ 12.3.38) ಅಂದರೆ ಧರ್ಮದ ಗಂಧ ಗಾಳಿ ಇಲ್ಲದ ಇಂತಹ ಅಧರ್ಮಜ್ಞರು ಉನ್ನತ ಆಸನಗಳಲ್ಲಿ ಕುಳಿತು ಧರ್ಮದ ಬಗ್ಗೆ ಪ್ರವಚನ ಮಾಡುತ್ತಾರೆಂದು ಭಾಗವತ ಬಲವಾಗಿ ಖಂಡಿಸಿದೆ. ಧರ್ಮದ ಕಟ್ಟೆಯನ್ನೇರಿ ಕುಳಿತು ಜನರ ಭಾವನೆಗಳ ಮೇಲೆ ಸವಾರಿ ಮಾಡುವ ಈ ಜನರು ಜಗತ್ತಿನ ಅತಿ ದೊಡ್ಡ ಭಯೋತ್ಪಾದಕರೇ ಸರಿ.

"Religion is the opium of the mass" (ಧರ್ಮವೆಂಬುದು  ಜನಸಾಮಾನ್ಯರ ಅಫೀಮು) ಎಂಬ ಕಾರ್ಲ್ ಮಾಕ್ಸ್ನ ಪ್ರಸಿದ್ಧ ನುಡಿ ಧರ್ಮದ ನಿಂದನೆಗಾಗಿ ಹೇಳಿದ್ದಲ್ಲ. ಧರ್ಮದ "ಅಮಲಿ"ನಲ್ಲಿ ಜನರು ಹೇಗೆ ನೀತಿಭ್ರಷ್ಟರಾಗುತ್ತಿದ್ದಾರೆ, ಮಾನವೀಯತೆಯನ್ನು ಮರೆಯುತ್ತಿದ್ದಾರೆ ಎಂಬುದನ್ನು ಧ್ವನಿಸುವ ಮಾತಿದು. ಮೇಲು ನೋಟಕ್ಕೆ ಧರ್ಮದ ನಿಂದನೆಯೆಂಬಂತೆ ಕಂಡುಬಂದರೂ ಜನಸಮುದಾಯದ ವಿವೇಕಹೀನ ಅಧಾರ್ಮಿಕ ನಡವಳಿಕೆ ಕುರಿತು ಮಾಡಿದ ವಿಡಂಬನೆ. ಸಂಪತ್ತಿನ ಸಮಾನ ಹಂಚಿಕೆಯಾಗಬೇಕೆಂಬ ಕಾರ್ಲ್ಮಾರ್ಕ್ಸ್ನ ಸಿದ್ಧಾಂತವು ಕೂಡಿಡಬಾರದೆಂದು ಬೋಧಿಸುವ "ಅಪರಿಗ್ರಹ" ಎಂಬ ಧರ್ಮದ ನಿರ್ದೇಶನಕ್ಕಿಂತ ಭಿನ್ನವೇನೂ ಅಲ್ಲ. ಅದು ಧರ್ಮದ ಅವಿಭಾಜ್ಯ ಅಂಗವೇ ಆಗಿವೆ. ಇದೇ ಅಲ್ಲವೆ "ಹೊನ್ನಿನೊಳಗೊಂದೊರೆಯ ವಸ್ತ್ರದೊಳಗೊಂದೆಳೆಯ ಇಂದಿಂಗೆ ನಾಳಿಂಗೆ ಬೇಕೆಂದೆನಾದೊಡೆ ನಿಮ್ಮಾಣೆ ನಿಮ್ಮ ಪುರಾತರಾಣೆ!” ಎಂದು ಬಸವಣ್ಣನವರು ಶಪಥ ಮಾಡಿದ್ದು.

ಹದಿನೈದು ವರ್ಷಗಳ ಹಿಂದೆ ನಡೆಸಿದ ಎರಡು ಅತ್ಯಾಚಾರ ಪ್ರಕರಣಗಳು ಸಾಬೀತಾಗಿ ಇಪ್ಪತ್ತು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಡೇರಾ ಸಚ್ಚಾ ಸೌಧ ಪಂಥದ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಂ ಸಿಂಗ್ ತನ್ನನ್ನು ತಾನು ದೇವಮಾನವನೆಂದು ಬಿಂಬಿಸಿಕೊಳ್ಳುತ್ತಿರುವ ವಿಕ್ಷಿಪ್ತ ಮನಸ್ಸಿನ ವರ್ಣರಂಜಿತ ವ್ಯಕ್ತಿ. ಇಂಥ ದೇವಮಾನವರ ಸಂಖ್ಯೆ ಜಗತ್ತಿನಲ್ಲಿ ದಿನೇ ದಿನೇ ಬೆಳೆಯುತ್ತಲೇ ಇದೆ. "ಧಾರ್ಮಿಕ ಗುರುವೊಬ್ಬರು ಅತ್ಯಾಚಾರದಂತಹ ಹೀನ ಕೃತ್ಯ ಎಸಗಿದರೆ ಅನಾದಿಯಿಂದಲೂ ಇರುವ ಭಾರತದ ಸಾಂಸ್ಕೃತಿಕ, ಧಾರ್ಮಿಕ ನಂಬಿಕೆಗೆ ದೊಡ್ಡ ಏಟು ಬೀಳುತ್ತದೆ" ಎಂದು ಸಿ.ಬಿ.ಐ ವಿಶೇಷ ನ್ಯಾಯಾಧೀಶ ಜಗದೀಪ್ ಸಿಂಗ್ ತಮ್ಮ ತೀರ್ಪಿನಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಆತನ ಅನುಯಾಯಿಗಳು ನಡೆದುಕೊಂಡ ರೀತಿ ಮಾತ್ರ ನಾಗರಿಕ ಸಮಾಜಕ್ಕೆ ಹೇಸಿಗೆ ಹುಟ್ಟಿಸುವಂತಿದೆ. ನಮ್ಮ ಜನರು ತಾವು ನಂಬಿದ ಗುರುವನ್ನು ಹೇಗೆ ಮೌಡ್ಯದಿಂದ ಆರಾಧಿಸುತ್ತಾರೆ; ಅವನ ಅಪರಾಧಗಳನ್ನು, ಪಾಪಗಳನ್ನು ಲೆಕ್ಕಿಸದೆ ಅವನ ಬೆಂಬಲಕ್ಕೆ ನಿಲ್ಲುತ್ತಾರೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ತಮ್ಮ ಶ್ರದ್ಧಾಭಕ್ತಿಗಳಿಗೆ ಧಕ್ಕೆಯನ್ನುಂಟುಮಾಡಿದ ಅಂತಹ ವಂಚಕರ ವಿರುದ್ಧ ಸೆಟೆದು ನಿಲ್ಲದೆ ಅವರ ಪರವಾಗಿಯೇ ನಿಂತು ದಂಗೆ ಏಳುವ ಜನರ ಅಜ್ಞಾನಕ್ಕೆ ಏನೆನ್ನಬೇಕು! ದಾರಿಬೀದಿಯಲ್ಲಿ ಹೆಣ್ಣುಮಕ್ಕಳೊಂದಿಗೆ ಅಸಭ್ಯರೀತಿಯಲ್ಲಿ ನಡೆದುಕೊಳ್ಳುವ ಪಡ್ಡೆ ಹುಡುಗರನ್ನು ಥಳಿಸಲು ಮುಂದಾಗುವ ಇದೇ ಜನ ಧಾರ್ಮಿಕ ಕಟ್ಟೆಯ ಮೇಲೆ ಕುಳಿತ ಇಂತಹ ಡೋಂಗಿ ಬಾಬಾಗಳ ವಿರುದ್ಧ ಏಕೆ ದನಿ ಎತ್ತುವುದಿಲ್ಲ? ಇದಕ್ಕೆ ಕಾರಣ ಹುಡುಕುತ್ತಾ ಹೋದರೆ ಮತ್ತೊಂದು ಪುರಾಣ ಗ್ರಂಥದಲ್ಲಿ ಸಿಗುವ ಉತ್ತರ:

ಸುವೃತ್ತೋ ವಾ ದುರ್ವೃತ್ತೋ ವಾ ಮೂರ್ಖೋ ವಾ 
ಪಂಡಿತೋಪಿ ವಾ । 
ವೇಷಮಾತ್ರೇಣ ಸಂನ್ಯಾಸೀ ಪೂಜ್ಯಃ ಸರ್ವೇಶ್ವರೋ ಯಥಾ ॥

ಸದಾಚಾರಿಯೋ ದುರಾಚಾರಿಯೋ, ದಡ್ಡನೋ ಪಂಡಿತನೋ, ಅವನು ಧರಿಸಿರುವ ಕಾವಿಬಟ್ಟೆಗಾದರೂ ಬೆಲೆಕೊಟ್ಟು ದೇವರಂತೆ ಪೂಜಿಸಬೇಕು ಎಂದು ಜನರ ಹೃದಯದಲ್ಲಿ ಅನಾದಿಕಾಲದಿಂದ ನೆಲೆಗೊಂಡಿರುವ ಗಾಢವಾದ ಧಾರ್ಮಿಕ ಮೌಢ್ಯ. "ಮಾಡಿದವರ ಪಾಪ ಆಡಿದವರ ಬಾಯಲ್ಲಿ" ಎಂಬ ಪಾಪಭೀರುತ್ವ, ಭಕ್ತರ ಹೃದಯದಲ್ಲಿರುವ ಈ ಪಾಪಭೀರುತ್ವ ಅವರಿಂದ ಪೂಜಿಸಿಕೊಳ್ಳುವ ಧರ್ಮಗುರುಗಳಲ್ಲಿ ಇಲ್ಲದೇ ಇರುವುದು ವಿಷಾದನೀಯ. ಧರ್ಮವೆಂದರೆ ಸನ್ನಡತೆ ಮತ್ತು ಸದಾಚಾರ. ಅದನ್ನು ಬೋಧಿಸುವವರ ನಡೆನುಡಿ ಮೊದಲು ಶುದ್ಧವಾಗಿರಬೇಕು. ಇಲ್ಲದಿದ್ದರೆ "ಹೇಳೋದು ಶಾಸ್ತ್ರ, ತಿನ್ನೋದು ಬದನೇಕಾಯಿ" ಎಂಬಂತಾಗುತ್ತದೆ. ನಡೆ ನುಡಿ ಶುದ್ಧವಿಲ್ಲದವರನ್ನು "ಮಠದೊಳಗಣ ಬೆಕ್ಕು ಇಲಿಯ ಕಂಡು ಪುಟನೆಗೆದಂತಾಯಿತ್ತು" ಎಂದು ದಾಸಿಮಯ್ಯನವರು ವಿಡಂಬಿಸುತ್ತಾರೆ. "ಮಠದೊಳಗಿನ ಇಂತಹ ಬೆಕ್ಕುಗಳಿಗೆ" ಬಸವಣ್ಣನವರು ನೀಡುವ ಸ್ಪಷ್ಟ ನಿರ್ದೇಶನ:

ತೊರೆಯ ಮೀವ ಅಣ್ಣಗಳಿರಾ, 
ತೊರೆಯ ಮೀವ ಸ್ವಾಮಿಗಳಿರಾ 
ತೊರೆಯಿಂ ಭೋ, ತೊರೆಯಿಂ ಭೋ 
ಪರನಾರಿಯರ ಸಂಗವ ತೊರೆಯಿಂ ಭೋ 
ಪರಧನದಾಮಿಷವ ತೊರೆಯಿಂ ಭೋ 
ಇವ ತೊರೆಯದೆ ಹೋಗಿ ತೊರೆಯ ಮಿಂದರೆ 
ಬರುದೊರೆ ಹೋಹುದು ಕೂಡಲಸಂಗಮದೇವಾ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 31.8.2017