ಸದ್ಧರ್ಮ ನ್ಯಾಯಪೀಠಕ್ಕೆ ಸಹೃದಯತೆಯೇ ಸಂವಿಧಾನ

  •  
  •  
  •  
  •  
  •    Views  

ರಡು ತಿಂಗಳ ಹಿಂದೆ ನಮಗೊಂದು ಅನಿರೀಕ್ಷಿತ ಮಿಂಚೋಲೆ ಬಂದಿತ್ತು. ಅದನ್ನು ಬರೆದವರು "DAKSH" ಎಂಬ ನಾಗರಿಕ ಸಂಸ್ಥೆಯವರು. ಸಾಮಾಜಿಕ ಬದುಕಿನ ಎಲ್ಲ ವರ್ಗದ ಪ್ರತಿನಿಧಿಗಳಿರುವ ಈ ಸಂಸ್ಥೆ 2008ರಲ್ಲಿ ಸ್ಥಾಪಿತಗೊಂಡಿದ್ದು ನಮ್ಮ ನಾಡಿನ ನ್ಯಾಯಾಲಯಗಳಲ್ಲಿ ತೀರ್ಮಾನವಾಗದೆ ಉಳಿದಿರುವ ಪ್ರಕರಣಗಳು ಬೆಟ್ಟದಂತೆ ಬೆಳೆಯುತ್ತಿರುವುದಕ್ಕೆ ಕಾರಣಗಳೇನೆಂದು ಶೋಧಿಸುತ್ತಿದೆ. ಅಲ್ಲದೆ ನ್ಯಾಯಾಲಯಗಳ ಹೊರಗೆ ದೇಶಾದ್ಯಂತ ನಡೆಯುತ್ತಿರುವ ನ್ಯಾಯದಾನದ ಬಗ್ಗೆಯೂ ಈ ಸಂಸ್ಥೆ ವಿಶೇಷ ಅಧ್ಯಯನ ನಡೆಸುತ್ತಿದೆ. ಪ್ರತಿ ಸೋಮವಾರ ನಡೆಯುವ ನಮ್ಮ "ಸದ್ಧರ್ಮ ನ್ಯಾಯಪೀಠ"ದ ಬಗ್ಗೆ ಹೇಗೋ ವಿಷಯ ತಿಳಿದು ಹತ್ತಾರು ಪ್ರಶ್ನೆಗಳನ್ನು ಕೇಳಿ ಮಿಂಚೋಲೆ ಬರೆದು ಉತ್ತರ ಪಡೆದಿದ್ದರು. ಎರಡು ದಿನಗಳ ಹಿಂದೆಯಷ್ಟೇ ಪ್ರತ್ಯಕ್ಷವಾಗಿ ನಮ್ಮ ನ್ಯಾಯಪೀಠದ ಕಾರ್ಯಕಲಾಪಗಳನ್ನು ವೀಕ್ಷಣೆ ಮಾಡಲು ಮತ್ತು ಸಂದರ್ಶನ ನಡೆಸಲು ಈ ಸಂಸ್ಥೆಯ ಪರವಾಗಿ ಕಾಶ್ಮೀರ ಮೂಲದ ಅರುಣವ್ ಕೌಲ್ ಮತ್ತು ಬೆಂಗಳೂರಿನ ದಿವ್ಯಾ ತಂಡದವರು ಸಿರಿಗೆರೆಗೆ ಬಂದಿದ್ದರು. ಸೋಮವಾರ ಬೆಳಗಿನಿಂದ ತಡ ಸಂಜೆಯವರೆಗೆ ನಮ್ಮ ನ್ಯಾಯಪೀಠದ ಮುಂದೆ ಕಿಕ್ಕಿರಿದು ಸೇರಿದ್ದ ಜನರ ಅಹವಾಲುಗಳನ್ನು ಸಮಾಧಾನಚಿತ್ತದಿಂದ ಆಲಿಸಿ ನಡೆಸಿದ ವಿಚಾರಣೆಯನ್ನು ಅಚ್ಚರಿಯಿಂದ ಚಿತ್ರೀಕರಿಸಿಕೊಂಡರು. ದಿನವಿಡೀ ಜನರ ಸ್ವಾರ್ಥ, ರೋಷ, ದ್ವೇಷ, ಅಸೂಯೆ, ಹಠಮಾರಿತನಗಳನ್ನು ಹತ್ತಿರದಿಂದ ನೋಡಿ ಮಾರನೆಯ ದಿನ ಮಂಗಳವಾರ ಮನುಷ್ಯರ ಮುಖವನ್ನೇ ನೋಡಬಾರದೆನ್ನುವಷ್ಟು ಅಸಹನೆ ಮತ್ತು ದಣಿವು ಉಂಟಾದ ನಮ್ಮನ್ನು ನಿರ್ಜೀವಿ ಕ್ಯಾಮರಾದ ಕಣ್ಣುಗಳ ಮುಂದೆ ಕೂರಿಸಿ ಪ್ರಶ್ನೆಗಳ ಸುರಿಮಳೆಗೈದು ನಮ್ಮ "ವಿಚಾರಣೆ" ನಡೆಸಿ ಉತ್ತರವನ್ನು ದಾಖಲಿಸಿಕೊಂಡರು.

"Justice delayed is justice denied" ಅಂದರೆ ವಿಳಂಬವಾಗಿ ನೀಡುವ ನ್ಯಾಯದಾನ ನ್ಯಾಯವಂಚನೆಯಲ್ಲದೆ ಬೇರೆಯಲ್ಲ ಎಂಬ ಕಟುವಾದ ಉಕ್ತಿ ಇದೆ. ಆದರೂ ನ್ಯಾಯ ವಿಳಂಬವನ್ನು ತಪ್ಪಿಸಲು ಮಾತ್ರ ದೇಶದ ನ್ಯಾಯಾಲಯಗಳಿಗೆ ಸಾಧ್ಯವಾಗಿಲ್ಲ. ಈ ಕಾರಣಕ್ಕಾಗಿಯೇ ಹುಟ್ಟಿಕೊಂಡ ಕನ್ನಡದ ಗಾದೆ ಮಾತು: ನ್ಯಾಯಾಲಯಗಳಲ್ಲಿ ಕೇಸುಗಳನ್ನು ನಡೆಸುವವರಿಗೆ ಬ್ರಹ್ಮನಷ್ಟು ಆಯುಷ್ಯ ಬೇಕು, ಕುಬೇರನಷ್ಟು ಖಜಾನೆ ಬೇಕು ”ಹತ್ತಾರು ವರ್ಷಗಳ ಕಾಲ ಎಳೆದಾಡಿಸಿ ಕೊನೆಗೆ ಕೇಸು ತೀರ್ಮಾನವಾದಾಗ ಗೆದ್ದವರು ಖುಷಿಪಟ್ಟರೂ "ಗೆದ್ದವನು ಸೋತ; ಸೋತವನು ಸತ್ತ!" ಎಂದು ಮತ್ತೊಂದು ಗಾದೆ ಮಾತು ವಸ್ತುಸ್ಥಿತಿಯನ್ನು ಚಿತ್ರಿಸುತ್ತದೆ.

ನಮ್ಮ "ಸದ್ಧರ್ಮ ನ್ಯಾಯಪೀಠ"ದಿಂದ ನೀಡುತ್ತಾ ಬಂದಿರುವ ನ್ಯಾಯದಾನವು ನಮ್ಮಿಂದ ಆರಂಭವಾದ ಹೊಸ ಉಪಕ್ರಮವೇನೂ ಅಲ್ಲ. ನಮ್ಮ ಮಠದ ಪರಂಪರೆಯಲ್ಲಿ ಹಿಂದಿನ ಎಲ್ಲ ಗುರುವರ್ಯರೂ ಆಯಾ ಕಾಲದ ಧಾರ್ಮಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ನ್ಯಾಯಾಲಯಗಳ ಮಾದರಿಯಲ್ಲಿಯೇ ವಿಚಾರಣೆ ನಡೆಸಿ ತೀರ್ಮಾನ ಮಾಡುತ್ತಾ ಬಂದಿರುವುದಕ್ಕೆ ಮಠದ ಪತ್ರಾಗಾರದಲ್ಲಿ ಸಾಕಷ್ಟು ಹಳೆಯ ದಾಖಲೆಗಳಿವೆ. ಅರಸೊತ್ತಿಗೆಯ ಕಾಲದಲ್ಲಿ ಹೀಗೆ ನಡೆದಿರಬಹುದು; ಆದರೆ ಪ್ರಜಾಪ್ರಭುತ್ವ ಬಂದ ಮೇಲೆ ಮಠಗಳಿಗೆ ಹೀಗೆ ನ್ಯಾಯದಾನ ಮಾಡಲು ಮಾನ್ಯತೆ ಇದೆಯೇ?

ಒಮ್ಮೆ ನಿವೃತ್ತ ಅಧಿಕಾರಿಯೊಬ್ಬರು ನಮ್ಮ ನ್ಯಾಯಪೀಠದ ಮುಂದೆ ಹಾಜರಾದರು. ಅವರು ಸರಕಾರದ ಸೇವೆಯಲ್ಲಿದ್ದಾಗ ಒಂದು ಆಸ್ತಿಯನ್ನು ಖರೀದಿ ಮಾಡಿದ್ದು ತನ್ನ ಪತ್ನಿಯ ಹೆಸರಿಗೆ ನೋಂದಣಿ ಮಾಡಿಸಿದ್ದರು. ನಿವೃತ್ತರಾದ ಮೇಲೆ ಅದನ್ನು ಮಾರಾಟ ಮಾಡಲು ಬಯಸಿದ್ದರು. ಈ ಮಧ್ಯೆ ಅವರ ದಾಂಪತ್ಯ ಜೀವನದಲ್ಲಿ ವಿರಸ ಉಂಟಾಗಿ ಪತಿ-ಪತ್ನಿ ದೂರಾದರು. ಮಕ್ಕಳು ಇರಲಿಲ್ಲ. ಆಸ್ತಿಯು ಪತ್ನಿಯ ಹೆಸರಿನಲ್ಲಿ ಇದ್ದುದರಿಂದ ಮಾರಾಟ ಮಾಡಲು ಬರುವಂತಿರಲಿಲ್ಲ. ನಿವೃತ್ತ ಅಧಿಕಾರಿ ನಮ್ಮ ಮುಂದೆ ಹಾಜರಾಗಿ ಪತ್ನಿಯ ವಿರುದ್ಧ ದೂರು ಸಲ್ಲಿಸಿದರು. ಅವರ ಪತ್ನಿಗೆ ನೋಟೀಸು ಜಾರಿ ಮಾಡಿ ಕರೆಸಿ ವಿಚಾರಣೆ ನಡೆಸಿ ಸಾಕಷ್ಟು ತಿಳಿ ಹೇಳಿದ ಮೇಲೆ ವಿವಾದಿತ ಆಸ್ತಿಯನ್ನು ಮಾರಾಟಮಾಡಿ ಬಂದ ಹಣವನ್ನು ಉಭಯತರು ಸಮನಾಗಿ ಹಂಚಿಕೆ ಮಾಡಿಕೊಳ್ಳಲು ಒಪ್ಪಿದರು. ಅದರಂತೆ ಆಸ್ತಿ ಮಾರಾಟದ ವಿಚಾರವಾಗಿ ಪತ್ರಿಕೆಯಲ್ಲಿ ಪ್ರಕಟಣೆ ಹೊರಡಿಸಿ ಖರೀದಿಸಲು ಬಂದವರೊಂದಿಗೆ ಮಾತುಕತೆ ನಡೆಸಲಾಯಿತು. ನಿಗದಿಪಡಿಸಿದ ಮೌಲ್ಯವನ್ನು ಖರೀದಿದಾರರು ನ್ಯಾಯಪೀಠಕ್ಕೆ ಸಂದಾಯ ಮಾಡಿದ ಮೇಲೆ ಅವರ ಹೆಸರಿಗೆ ಆ ಆಸ್ತಿಯನ್ನು ಪತಿ-ಪತ್ನಿ ನೋಂದಣಿ ಮಾಡಿಸಿಕೊಡಬೇಕೆಂಬ ನಮ್ಮ ತೀರ್ಮಾನಕ್ಕೆ ಎಲ್ಲರೂ ಒಪ್ಪಿ ರುಜು ಹಾಕಿದರು. ಅದರಂತೆ ಖರೀದಿದಾರನು ನಮ್ಮ ನ್ಯಾಯಪೀಠಕ್ಕೆ ಹಣ ಜಮಾ ಮಾಡಿದರೂ ಅರ್ಜಿದಾರನ ಪತ್ನಿ ನಂತರ ತನ್ನ ಮನಸ್ಸು ಬದಲಾಯಿಸಿ ವಿವಾದಿತ ಆಸ್ತಿಯನ್ನು ನೋಂದಣಿ ಮಾಡಿಸಿ ಕೊಡಲಿಲ್ಲ. ಇದರಿಂದ ಕ್ರುದ್ಧನಾದ ಖರೀದಿದಾರನು ಪತಿ-ಪತ್ನಿಯಿಂದ ಬರೆಸಿಕೊಟ್ಟಿದ್ದ ಕ್ರಯದ ಕರಾರು ಪತ್ರದ ಆಧಾರದ ಮೇಲೆ ಅವರ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿದನು. ಸುಮಾರು ಎರಡು ವರ್ಷಗಳ ಕಾಲ ವಿಚಾರಣೆ ನಡೆಯಿತು. ನ್ಯಾಯಾಲಯವು ನಮ್ಮ ನ್ಯಾಯಪೀಠದ ಕಾರ್ಯಕಲಾಪದ ದಾಖಲೆಗಳನ್ನು ತರಿಸಿಕೊಂಡು ಪರಿಶೀಲಿಸಿ ‘Arbitration and Conciliation Act 1996" ಪ್ರಕಾರ ಈ ಪ್ರಕರಣದ ವಿಚಾರಣೆ  ನಡೆಸಲು ಸಿವಿಲ್ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲವೆಂದು ಘೋಷಿಸಿ ನಮ್ಮ ನ್ಯಾಯಪೀಠದಲ್ಲಿಯೇ ಬಗೆಹರಿಸಿಕೊಳ್ಳಲು ಆದೇಶಿಸಿ ಆತನ ಅರ್ಜಿಯನ್ನು ವಜಾಗೊಳಿಸಿತು. ನಮ್ಮ ನ್ಯಾಯಪೀಠಕ್ಕೆ ನೈತಿಕ ಅಧಿಕಾರ (moral authority) ಮಾತ್ರ ಇದೆಯೇ ಹೊರತು ಕಾನೂನಿನನ್ವಯ ಅಧಿಕಾರ (legal authority) ಇಲ್ಲ ಎಂದು ಭಾವಿಸಿದ್ದ ನಮಗೆ ಕಾನೂನಿನ ಬೆಂಬಲವೂ ಇದೆಯೆಂದು ತಿಳಿದು ಬಂದದ್ದು ಇಲ್ಲಿಗೆ ಸುಮಾರು ಹತ್ತು ವರ್ಷಗಳ ಹಿಂದೆ ನ್ಯಾಯಾಲಯ ನೀಡಿದ ಮೇಲ್ಕಂಡ ತೀರ್ಪಿನಿಂದ.

ಖಾಸಗಿಯಾಗಿ ವಿಚಾರಣೆ ಮಾಡಿದಾಗ ಜನರು ಸುಲಭವಾಗಿ ಒಪ್ಪಿಕೊಂಡಂತೆ ನ್ಯಾಯಾಲಯಗಳಲ್ಲಿ ಒಪ್ಪಿಕೊಳ್ಳುವುದಿಲ್ಲ. “ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನಲ್ಲದೆ ಬೇರೆ ಏನನ್ನೂ ಹೇಳುವುದಿಲ್ಲ, ನಾನು ಹೇಳುವುದೆಲ್ಲಾ ಸತ್ಯ" ಎಂದು ಕೋರ್ಟಿನಲ್ಲಿ ಪ್ರಮಾಣ ಮಾಡಿಸಿದರೂ ಹಿಂದಿನ ದಿನ ತಮ್ಮ ಕಕ್ಷಿದಾರರಿಗೆ ಕೇಸನ್ನು ಗೆಲ್ಲಬೇಕೆಂದರೆ ಕೋರ್ಟಿನಲ್ಲಿಹೇಗೆ ಸುಳ್ಳು ಹೇಳಬೇಕೆಂದು "ನ್ಯಾಯವಾದಿ"ಗಳೇ ತರಬೇತು ಕೊಟ್ಟಿರುತ್ತಾರೆ. ನ್ಯಾಯವಾದಿಗಳಿಗೆ ತಮ್ಮ ಕಕ್ಷಿದಾರರನ್ನು ರಕ್ಷಣೆ ಮಾಡುವುದು ಮುಖ್ಯವಾಗಿದೆಯೇ ಹೊರತು ಸತ್ಯವನ್ನು ಪ್ರತಿಪಾದಿಸುವುದು ಮುಖ್ಯವಾಗಿಲ್ಲ ಅದು ತಮ್ಮ ವೃತ್ತಿ ಧರ್ಮ ಎನ್ನುವ ಅವರು ಹೇಗೆ ನ್ಯಾಯವಾದಿಗಳಾಗುತ್ತಾರೆ?  "Lawyers are liars" ಎಂಬ ಪ್ರಸಿದ್ಧ ಆಂಗ್ಲ ನುಡಿ ಬಂದದ್ದು ಇದೇ ಕಾರಣಕ್ಕಾಗಿ.

ನ್ಯಾಯಾಧೀಶರು ಸಾಕ್ಷಾಧಾರಗಳನ್ನು ಆಧರಿಸಿ ಕಾನೂನಿನ ಚೌಕಟ್ಟಿನಲ್ಲಿ ತೀರ್ಮಾನಿಸಬೇಕಾಗುತ್ತದೆಯೇ ಹೊರತು ತಮ್ಮ ಹೃದಯಕ್ಕೆ ಎನೆನ್ನಿಸುತ್ತದೆಯೆಂಬ ಆಧಾರದ ಮೇಲೆ ತೀರ್ಪು ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ. ಖಾಸಗಿಯಾಗಿ ವಿಚಾರಣೆ ಮಾಡುವಾಗ ಪರಸ್ಪರರ ಸೌಹಾರ್ದತೆಯ ತಳಹದಿಯ ಮೇಲೆ ನ್ಯಾಯ ದೊರೆಯುತ್ತದೆ. ಕೋರ್ಟುಗಳಲ್ಲಿ ಒಬ್ಬ ಗೆಲ್ಲುತ್ತಾನೆ, ಮತ್ತೊಬ್ಬ ಸೋಲುತ್ತಾನೆ. ಆದರೆ ಖಾಸಗಿಯಾಗಿ ವಿಚಾರಣೆ ನಡೆಸುವಾಗ ಇಬ್ಬರೂ ಗೆಲ್ಲುತ್ತಾರೆ. ಇಬ್ಬರೂ ಸೋಲಬೇಕಾಗುತ್ತದೆ. ಕೊಟ್ಟು ತೆಗೆದುಕೊಳ್ಳುವ ಆಧಾರದ ಮೇಲೆ ರಾಜಿಸಂಧಾನವಾಗುತ್ತದೆ. ಈಗಾಗಲೇ ಕೋರ್ಟುಗಳಲ್ಲಿ ನಡೆಯುತ್ತಿರುವ ಪ್ರಕರಣಗಳನ್ನೂ ಖಾಸಗಿಯಾಗಿ ರಾಜಿ ಮಾಡಿಸಲು ಬರುತ್ತದೆ. ಅದಕ್ಕಾಗಿಯೇ "Arbitration and Conciliation Act 1996" ಎಂಬ ಕಾನೂನು ತಂದಿದ್ದರೂ ಜನರ ವೈಯಕ್ತಿಕೆ ವಿವಾದಗಳನ್ನು ಬಗೆಹರಿಸುವಲ್ಲಿ ಅದರ ಬಳಕೆ ಅಷ್ಟಾಗಿ ಆಗುತ್ತಿಲ್ಲ. ಪ್ರಕರಣಗಳ ಶೀಘ್ರ ವಿಚಾರಣೆ ಮತ್ತು ವಿಲೇವಾರಿಗೆ ಬಹು ದೊಡ್ಡ ಅಡೆತಡೆಗಳೆಂದರೆ ಮನುಷ್ಯನ ಸ್ವಾರ್ಥ, ಅಸೂಯೆ, ದ್ವೇಷ ಮತ್ತು ಅಹಂಕಾರ, ಕಾನೂನುಗಳು ಜನರ ಹಿತಕ್ಕಾಗಿ ರೂಪಿತಗೊಂಡಿದ್ದರೂ ಕೆಲವೊಮ್ಮೆ ಕಾನೂನುಗಳೇ ಜನರ ಅಹಿತಕ್ಕೆ ಕಾರಣವಾಗುತ್ತವೆ. ರಾಷ್ಟ್ರೀಯ ಹೆದ್ದಾರಿಗಳಿಂದ ಮದ್ಯದ ಅಂಗಡಿಗಳನ್ನು ಸುಪ್ರೀಂ ಕೋರ್ಟು ಎತ್ತಂಗಡಿ ಮಾಡಿದ್ದರೂ ಸರಕಾರ ಹೆದ್ದಾರಿಗಳನ್ನೇ ಬಾನಂಗಡಿ ಮಾಡಿರುವುದು ಇದಕ್ಕೆ ಜ್ವಲಂತ ಉದಾಹರಣೆ!

ನಮ್ಮ ಸಂದರ್ಶನದಲ್ಲಿ ಕೇಳಿದ ಕ್ಲಿಷ್ಟಕರವಾದ ಪ್ರಶ್ನೆಯೆಂದರೆ "ನ್ಯಾಯ ಎಂದರೇನು?" ಮೇಲುನೋಟಕ್ಕೆ ಇದು ಸರಳವಾದ ಪ್ರಶ್ನೆ ಎಂದು ಕಂಡುಬಂದರೂ ಒಂದೇ ವಾಕ್ಯದಲ್ಲಿ ಉತ್ತರ ನೀಡುವುದು ಕಷ್ಟ. ನ್ಯಾಯ ಎಂದರೆ ಆಡುಭಾಷೆಯಲ್ಲಿ "ಜಗಳ" ಎಂಬ ಅರ್ಥವೂ ಇದೆ. "ಅವರು ತುಂಬಾ ನ್ಯಾಯ ಮಾಡುತ್ತಾರೆ" ಎಂಬ ಮಾತಿನಲ್ಲಿ ಈ ಅರ್ಥವನ್ನು ಕಾಣಬಹುದು. “ನನಗೆ ನ್ಯಾಯ ಒದಗಿಸಿ ಕೊಡಿ” ಎಂದು ಕೇಳುವಾಗ ಇರುವ "ನ್ಯಾಯ" ಶಬ್ದದ ಅರ್ಥವೇ ಬೇರೆ ಏನ್ ನ್ಯಾಯ ಆಡ್ತಾರೆ ಅವರು ಬೇರೆ. ಎನ್ನುವಾಗ ಇರುವ ಅರ್ಥವೇ ಈ ಶಬ್ದಕ್ಕೆ "ಜಗಳ" ಎಂಬ ಅಪಾರ್ಥ ಬರಲು ಕಾರಣ ಜನರು ನ್ಯಾಯದ ಕಟ್ಟೆಗೆ ಹೋಗುವ ಮೊದಲು ತಮ್ಮ ಮಧ್ಯೆ ಇರುವ ಯಾವುದೋ ವಿವಾದವನ್ನು ಕುರಿತು ಪರಸ್ಪರ ಮಾಡುವ ದೋಷಾರೋಪಣೆ, ಪರ-ವಿರೋಧಗಳ ಆವೇಶದ ಮಾತುಗಳೆಂದು ತೋರುತ್ತದೆ. ಸಂವಿಧಾನ ತಜ್ಞರು ನಾಗರಿಕರ ಮೂಲಭೂತ ಹಕ್ಕುಗಳ ಸಂರಕ್ಷಣೆಯೇ "ನ್ಯಾಯ" ಎಂದು ಹೇಳಬಹುದು. ಆದರೆ ಅದು ಕಾನೂನಿನ ವಿವಿಧ ಅಂಶಗಳನ್ನು ಸಂವಿಧಾನದ ವಿವಿಧ ಕಲಮುಗಳನ್ನು ವಿಶ್ಲೇಷಿಸುವ ವಕೀಲರ ಬುದ್ಧಿಮತ್ತೆಯನ್ನು ಅವಲಂಬಿಸಿರುತ್ತದೆ. ನ್ಯಾಯ-ಅನ್ಯಾಯಗಳ ವಿಚಾರದಲ್ಲಿ ಒಬ್ಬ ನುರಿತ ಬುದ್ಧಿವಂತ ವಕೀಲ ತನ್ನ ಚಾಣಾಕ್ಷತನದ ವಾದದಿಂದ ನ್ಯಾಯಾಧೀಶರನ್ನೂ ದಿಕ್ಕುತಪ್ಪಿಸಬಲ್ಲ. ನಮ್ಮ ದೃಷ್ಟಿಯಲ್ಲಿ ನ್ಯಾಯವೆಂದರೆ ಯಾವುದೇ ಸಾಮಾಜಿಕ ಮತ್ತು ಆರ್ಥಿಕ ಸ್ಥಾನಮಾನಗಳನ್ನು ಗಣನೆಗೆ ತೆಗೆದುಕೊಳ್ಳದೆ ವ್ಯಕ್ತಿಯೊಬ್ಬನಿಗೆ ಅಥವಾ ಒಂದು ಸಮೂಹಕ್ಕೆ ಬೇರೊಬ್ಬ ವ್ಯಕ್ತಿಯಿಂದ ಅಥವಾ ಸಮುದಾಯದಿಂದ ಆಗುವ ನೋವು ಮತ್ತು ನರಳಾಟವನ್ನು ತಪ್ಪಿಸುವುದು. ಒಳ್ಳೆಯವರನ್ನು ದುಷ್ಟರಿಂದ ರಕ್ಷಿಸುವುದು. ಒಬ್ಬ ಸಾಮಾನ್ಯ ನಾಗರಿಕನಿಗೂ ಈ ನಾಡಿನಲ್ಲಿ ಯಾರ ಹಿಂಸೆಯೂ, ಕಿರುಕುಳವೂ ಇಲ್ಲದೆ ನೆಮ್ಮದಿಯಿಂದ ಗೌರವಯುತವಾಗಿ ತಲೆ ಎತ್ತಿ ಬದುಕುವ ಅವಕಾಶ ಕಲ್ಪಿಸಿಕೊಡುವುದೇ "ನ್ಯಾಯ" (Justice)!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 14.9.2017