ಮಾಡದ ತಪ್ಪಿಗೆ ಶಿಕ್ಷೆ ವಿಧಿಸಬಹುದೇ?

  •  
  •  
  •  
  •  
  •    Views  

ಮುಂಬಯಿ ನಗರದ ಪ್ರಸಿದ್ಧ ಕಾಲೇಜಿನಲ್ಲಿ ಪ್ರಾಧ್ಯಾಪಕರೊಬ್ಬರು ಪಾಠ ಮಾಡುತ್ತಿದ್ದರು. ವಿಶೇಷವೆಂದರೆ ಅವರು ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಭೌತಶಾಸ್ತ್ರ ಪಾಠ ಮಾಡುವುದಲ್ಲದೆ ಹೈಕೋರ್ಟಿನಲ್ಲಿ ವಕೀಲರಾಗಿಯೂ ಕೆಲಸ ಮಾಡುತ್ತಿದ್ದರು. ಪಾಠ ಮಾಡುವ ವಿಷಯದಲ್ಲಿ ತುಂಬಾ ಪರಿಣತಿ ಹೊಂದಿದ್ದರು. ಅಷ್ಟೇ ಶಿಸ್ತಿನ ಸಿಪಾಯಿಯಾಗಿದ್ದ ಅವರನ್ನು ಕಂಡರೆ ವಿದ್ಯಾರ್ಥಿಗಳಿಗೆ ಎಲ್ಲಿಲ್ಲದ ಭಯ. ಒಮ್ಮೆ ಅವರು ತರಗತಿಯನ್ನು ಪ್ರವೇಶಿಸಿ ಪಾಠ ಮಾಡುತ್ತಿರುವಾಗ ಏನನ್ನೋ ಬರೆಯಲೆಂದು ಬೋರ್ಡ್ ಕಡೆ ತಿರುಗಿದರು. ಆ ಸಮಯದಲ್ಲಿ ಎರಡನೆಯ ಸಾಲಿನಲ್ಲಿ ಕುಳಿತಿದ್ದ ಶ್ರೀಮಂತ ಮನೆತನದ ಪುಡಾರಿ ಹುಡುಗನೊಬ್ಬ ಬೆಂಚ್ ಮೇಲೆ ತನ್ನ ಎರಡೂ ಕಾಲುಗಳನ್ನಿಟ್ಟು ಹಿಂದಕ್ಕೆ ಒರಗಿ ಕೈಯಿಂದ ಡ್ರಂ ಬಾರಿಸಿದಂತೆ ಕುಟ್ಟಿ ಕೀಟಲೆ ಮಾಡತೊಡಗಿದ. ಶಬ್ದ ಕೇಳಿದ ಅಧ್ಯಾಪಕರು ಅಸಹನೆಯಿಂದ ಹಿಂತಿರುಗಿ ನೋಡುವಷ್ಟರಲ್ಲಿ ಕಾಲುಗಳನ್ನು ಸರ್ರನೆ ಎಳೆದುಕೊಂಡು ಏನೂ ಮಾಡದವನಂತೆ ಮೌನ ಮುಖಮುದ್ರೆ ಧರಿಸಿದ್ದ. ಅಧ್ಯಾಪಕರು ಅವನ ಪಕ್ಕದಲ್ಲಿ ಕುಳಿತಿದ್ದ ಹುಡುಗನನ್ನು ಎದ್ದು ನಿಲ್ಲಲು ಹೇಳಿ "ಆ ಶಬ್ದ ನಿನ್ನ ಕಡೆಯಿಂದಲೇ ಬಂತು. ಆದರೆ ನೀನು ಸಭ್ಯ ಹುಡುಗ ಹಾಗೆ ಮಾಡಿಲ್ಲವೆಂದು ನನಗೆ ಚೆನ್ನಾಗಿ ಗೊತ್ತು. ಹಾಗೆಯೇ ಶಬ್ದ ಮಾಡಿದವನು ಯಾರೆಂದು ನಿನಗೂ ಗೊತ್ತು. ಹೇಳು ಯಾರವನು?" ಎಂದು ಕೇಳಿದರು. ಆದರೆ ಆ ಸಭ್ಯ ಹುಡುಗ ಯಾರ ಹೆಸರನ್ನೂ ಹೇಳಲು ನಿರಾಕರಿಸಿದ. ಇದರಿಂದ ಕುಪಿತರಾದ ಅಧ್ಯಾಪಕರು ಆ ಹುಡುಗನನ್ನು "Get out" ಎಂದು ತರಗತಿಯಿಂದ ಹೊರಗೆ ಹೋಗುವಂತೆ ಗದರಿಸಿದರು. ವಿಧೇಯನಾದ ಆ ಹುಡುಗ ಮರು ಮಾತಾಡದೆ ತಲೆ ತಗ್ಗಿಸಿಕೊಂಡು ಕ್ಲಾಸಿನಿಂದ ಹೊರನಡೆದ. ಅವನ ಗೆಳೆಯರೆಲ್ಲರೂ ಗಹಗಹಿಸಿ ನಗತೊಡಗಿದರು. ತರಗತಿ ಮುಗಿದ ಮೇಲೆ ಸಂಜೆ ವೇಳೆ ಆ ಹುಡುಗ ಪ್ರಾಧ್ಯಾಪಕರ ಕೊಠಡಿಗೆ ಹೋಗಿ ವಿನಮ್ರನಾಗಿ ಕೇಳಿದ:

"ಸಾರ್, ನಾನೇನೂ ತಪ್ಪು ಮಾಡಿಲ್ಲವೆಂದು ನಿಮಗೆ ಗೊತ್ತಿದ್ದರೂ ನನಗೆ ಈ ರೀತಿ ಶಿಕ್ಷೆ ಕೊಡಬಹುದೇ?""
"ಹಾಗಾದರೆ ತಪ್ಪು ಮಾಡಿದವನ ಹೆಸರನ್ನು ನೀನು ಏಕೆ ಹೇಳಲಿಲ್ಲ?""
"ನನ್ನ ಗೆಳೆಯರ ವಿರುದ್ಧ ಬೇಹುಗಾರಿಕೆ ಮಾಡುವುದು ಸರಿಯಲ್ಲವೆಂದು ಹೇಳಲಿಲ್ಲ".
“ತಪ್ಪಿತಸ್ಥ ಯಾರೆಂದು ಗೊತ್ತಿದ್ದರೂ ಮರೆಮಾಚಿದ ನಿನಗೆ ತರಗತಿಯಲ್ಲಿ ಶಿಸ್ತು ಮೂಡಿಸಲು ನಾನು ಕೊಟ್ಟ ಶಿಕ್ಷೆ ಸರಿಯಾಗಿಯೇ ಇದೆ!"

ತಾನು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿದ ಆ ಹುಡುಗ ಬೇರೆ ಯಾರೂ ಅಲ್ಲ. ಮುಂಬೈ ಉಚ್ಚ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿಗಳಾಗಿದ್ದ ಎಂ.ಸಿ. ಛಾಗಲಾ, ಶಾಲೆಯಲ್ಲಿ ಅವರಿಗೆ ಶಿಕ್ಷೆ ವಿಧಿಸಿದ್ದ ಅಧ್ಯಾಪಕರಾದ ಜೋಷಿ ಮುಂದೊಂದು ದಿನ ಯಾವುದೋ ಕೇಸಿನಲ್ಲಿ ವಕೀಲರಾಗಿ ಕೋರ್ಟಿನಲ್ಲಿ ವಾದಿಸಲು ಹಾಜರಾದಾಗ ಇಬ್ಬರ ಕಣ್ಣುಗಳು ಸಂಧಿಸಿ ಗತಕಾಲದ ದಿನಗಳು ಸ್ಮರಣೆಗೆ ಬಂದವು. ನಂತರ ಕೋರ್ಟ್ ಹೊರಗೆ ಅವರ ಭೇಟಿಯಾದಾಗಲೆಲ್ಲಾ "ನಾನು ತಪ್ಪು ಮಾಡದಿದ್ದರೂ ನನಗೆ ಶಿಕ್ಷೆ ವಿಧಿಸಿದ ಅಧ್ಯಾಪಕರು ಇವರು" ಎಂದು ಇತರರಿಗೆ ವಿನೋದವಾಗಿ ಹೇಳುತ್ತಿದ್ದರಂತೆ! ಇದೇ ಸೆಪ್ಟೆಂಬರ್ 30ರಂದು ಅವರ ಜನ್ಮದಿನ. ಅವರು ಬದುಕಿದ್ದರೆ ಇಲ್ಲಿಗೆ 117 ವರ್ಷ ವಯಸ್ಸು ಆಗಿರುತ್ತಿತ್ತು.

ಜಸ್ಟೀಸ್ ಛಾಗಲಾ ಅವರು ತಮ್ಮ ಇಳಿ ವಯಸ್ಸಿನಲ್ಲಿ ಬರೆದ "Roses in December" (ಪ್ರಕಾಶಕರು: ಭಾರತೀಯ ವಿದ್ಯಾಭವನ, ಮುಂಬಯಿ) ಎಂಬ ಆತ್ಮಚರಿತ್ರೆಯಲ್ಲಿ ಮೇಲ್ಕಂಡ ತಮ್ಮ ಬಾಲ್ಯ ಜೀವನದ ಘಟನೆಯನ್ನು ಸ್ಮರಿಸಿಕೊಂಡು ತಮಗೆ ತಾವೇ ಕೇಳಿಕೊಂಡಿರುವ ಪ್ರಶ್ನೆ: "Which of us was right when we get down to the fundamentals - Joshi or I? ನಮ್ಮೀರ್ವರಲ್ಲಿ ಯಾರು ಸರಿ ಎಂಬ ಈ ಪ್ರಶ್ನೆಗೆ ಅವರ ಆತ್ಮಚರಿತ್ರೆಯಲ್ಲಿ ಉತ್ತರವಿಲ್ಲ. ಮುಖ್ಯನ್ಯಾಯಮೂರ್ತಿಗಳಾಗಿ ಅದೆಷ್ಟೋ ಜಟಿಲವಾದ ಕೇಸುಗಳಲ್ಲಿ ತೀರ್ಪು ನೀಡಿದ ಜಸ್ಟೀಸ್ ಛಾಗಲಾ ಅವರು ಮೇಲ್ಕಂಡ ಪ್ರಶ್ನೆಗೆ ತೀರ್ಪು ನೀಡಲು ತಮ್ಮ ಆತ್ಮಚರಿತ್ರೆಯ ಓದುಗರಿಗೇ ಬಿಟ್ಟಿದ್ದಾರೆ. ಈ ಪುಸ್ತಕದ ಬಗ್ಗೆ ನಮ್ಮ ಗಮನ ಸೆಳೆದವರು ನಮ್ಮ ಅಂಕಣದ ಸಹೃದಯ ಓದುಗರಾದ ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಅಶೋಕ್ ಪೂಜಾರ್ ರವರು. ಹತ್ತಾರು ಆವೃತ್ತಿಗಳನ್ನು ಕಂಡ ಈ ಅಪರೂಪದ ಪುಸ್ತಕವು ತಿಲಕ್ ಮತ್ತು ಜಿನ್ನಾ ಅವರ ಕಾಲದಿಂದ ಹಿಡಿದು ನೆಹರೂ ಮತ್ತು ಇಂದಿರಾಗಾಂಧಿಯವರೆಗೆ ಸ್ವಾತಂತ್ರ್ಯಪೂರ್ವೋತ್ತರ ಭಾರತದ ಅರ್ಧಶತಮಾನದಷ್ಟು ಕಾಲಾವಧಿಯ ನ್ಯಾಯಾಲಯ ಮತ್ತು ರಾಜಕೀಯ ರಂಗಗಳ ಸಂಕೀರ್ಣ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತದೆ.

ಛಾಗಲಾ ಅವರು “ಇಲ್ಲಿ ತಪ್ಪು ನನ್ನದೋ, ನನ್ನನ್ನು ಹೊರಗೆ ಕಳಿಸಿದ ಜೋಷಿಯವರದೋ?” ಎಂಬ ಪ್ರಶ್ನೆಯನ್ನು ಓದುಗರ ಮುಂದೆ ಇಟ್ಟಿದ್ದು ನ್ಯಾಯಾಧೀಶರಾಗಿ ಯಾರದು ಸರಿ, ಯಾರದು ತಪ್ಪು ಎಂಬ ಸ್ಪಷ್ಟವಾದ ತೀರ್ಪು ನೀಡಲು ಹೋಗಿಲ್ಲ. ಯಾವುದೇ ಪ್ರಕರಣದ ವಿಚಾರಣೆಯನ್ನು ನಡೆಸುವ ನ್ಯಾಯಾಧೀಶರು ವಾದ-ವಿವಾದಗಳನ್ನು ಆಲಿಸಿದ ಮೇಲೆ ವಿವಾದಾಂಶಗಳನ್ನು ಕುರಿತು ರೂಪಿಸಿದ ಪ್ರಶ್ನೆಗಳಿಗೆ (issues) ಸಕಾರಾತ್ಮಕ (affirmative) ಅಥವಾ ನಕಾರಾತ್ಮಕ (negative) ಉತ್ತರವನ್ನು ಕೊಡಲೇಬೇಕಾಗುತ್ತದೆ. ಅವುಗಳಿಗೆ ವಿವರವಾದ ಕಾರಣಗಳನ್ನು ಕೊಟ್ಟು ಅಂತಿಮ ತೀರ್ಪು ನೀಡಬೇಕಾಗುತ್ತದೆ. ಆದರೆ ಇಲ್ಲಿ ಸ್ವತಃ ನ್ಯಾಯಧೀಶರೇ "ಕಟಕಟೆ"ಯಲ್ಲಿ ನಿಲ್ಲುವುದರಿಂದ ನ್ಯಾಯನಿರ್ಣಯ ಮಾಡಲು ಬರುವುದಿಲ್ಲ. ಅಷ್ಟರಮಟ್ಟಿಗೆ ಅವರು ತೀರ್ಮಾನ ಹೇಳದಿರುವುದು ಸರಿ. ಆದರೆ ಮಾಡದ ತಪ್ಪಿಗೆ ತಾನು ಶಿಕ್ಷೆಯನ್ನು ಅನುಭವಿಸುವಂತಾಯಿತು ಎಂಬ ಹಳಹಳಿ ಛಾಗಲಾ ಅವರ ಮನಸ್ಸಿನಲ್ಲಿದ್ದಂತೆ ತೋರುತ್ತದೆ. ಇದು ತಪ್ಪು. ಏಕೆಂದರೆ ತರಗತಿಯಿಂದ ಹೊರ ಹೋಗಲು ಜೋಷಿ ಶಿಕ್ಷೆ ವಿಧಿಸಿದ್ದು ಛಾಗಲಾ ಮೇಜು ಕುಟ್ಟಿ ಅವಿಧೇಯತೆಯನ್ನು ತೋರಿದರೆಂದು ಅಲ್ಲ, ಹಾಗೆ ಮಾಡಿದವನು ಪಕ್ಕದ ಹುಡುಗ ಎಂದು ಗೊತ್ತಿದ್ದರೂ ಆ ಉಡಾಳನ ಹೆಸರನ್ನು ಹೇಳಲು ನಿರಾಕರಿಸಿದ ತಪ್ಪಿಗಾಗಿ. ಜೋಷಿಗೆ ನಿಜವಾದ ಅಪರಾಧಿಯನ್ನು ಶಿಕ್ಷಿಸುವ ಇರಾದೆ ಇತ್ತೇ ಹೊರತು ಛಾಗಲಾ ಅವರನ್ನು ದಂಡಿಸುವ ದುರುದ್ದೇಶ ಇರಲಿಲ್ಲ. ಉಡಾಳ ವಿದ್ಯಾರ್ಥಿಯ ದುರ್ನಡತೆಯ ಬಗ್ಗೆ ಅವರಿಗೆ ಪುರಾವೆ ಬೇಕಾಗಿತ್ತು. ಅದು ಗೊತ್ತಿದ್ದೂ ಹೇಳದ ಛಾಗಲಾ ತಪ್ಪಿತಸ್ಥರಾಗುತ್ತಾರೆ. ಅಪರಾಧ ಮಾಡಿದರಷ್ಟೇ ಅಪರಾಧಿಯಲ್ಲ; ಅಪರಾಧಿಯನ್ನು ರಕ್ಷಿಸುವುದೂ ಸಹ ಅಪರಾಧ ಎನ್ನುತ್ತದೆ ದಂಡಸಂಹಿತೆ! ಅಪರಾಧಿಗೆ ಕೊಟ್ಟಷ್ಟೇ ಶಿಕ್ಷೆಯನ್ನು ಅಪರಾಧಿಯನ್ನು ರಕ್ಷಿಸುವವನಿಗೂ ಕೊಡುತ್ತದೆ.

ಇಲ್ಲೊಂದು ಕಾಲ್ಪನಿಕ ಕಥೆ ಚಿಂತನಾರ್ಹ. ಒಬ್ಬ ವರ್ತಕ ಧನಕನಕ ವಸ್ತುಗಳೊಂದಿಗೆ ಕಾಡಿನ ಮಾರ್ಗವಾಗಿ ಪಯಣಿಸುವಾಗ ಕಳ್ಳರು ಬೆನ್ನುಹತ್ತಿದರು. ವರ್ತಕ ಹತ್ತಿರದಲ್ಲಿ ಕಾಣಿಸಿದ ಋಷಿಗಳ ಪರ್ಣಕುಟೀರಕ್ಕೆ ಓಡಿಹೋಗಿ ಆಶ್ರಯ ಪಡೆಯುತ್ತಾನೆ. ಸ್ವಲ್ಪ ಸಮಯದ ನಂತರ ಕಳ್ಳರು ಋಷಿಯ ಬಳಿಗೆ ಬರುತ್ತಾರೆ. ಇಲ್ಲಿ ಯಾರಾದರೂ ಬಂದಿದ್ದರೇ, ಅವರು ಯಾವ ಮಾರ್ಗವಾಗಿ ಹೋದರು ಎಂದೆಲ್ಲಾ ವಿಚಾರಿಸುತ್ತಾರೆ. ಆಗ ಋಷಿಯು ವರ್ತಕನೊಬ್ಬ ಇಲ್ಲಿಗೆ ಬಂದಿದ್ದ. ಅಗೋ ಆ ದಾರಿಯಲ್ಲಿ ಹೋದ ಎಂದು ಹೇಳಿ ಕಳ್ಳರನ್ನು ದಾರಿತಪ್ಪಿಸುತ್ತಾರೆ. ಈಗ ಪ್ರಶ್ನೆ: ಋಷಿಯು ತನ್ನ ಆಶ್ರಮ ಧರ್ಮಕ್ಕೆ ವಿರುದ್ಧವಾಗಿ ಸುಳ್ಳು ಹೇಳಬಹುದೆ? ನಿಜವನ್ನು ಹೇಳಿದ್ದರೆ ಏನಾಗುತ್ತಿತ್ತು? ವರ್ತಕನು ಕಳ್ಳರಿಗೆ ಬಲಿಯಾಗಿ ತನ್ನ ಸಂಪತ್ತು ಮತ್ತು ಪ್ರಾಣವನ್ನು ಕಳೆದುಕೊಳ್ಳುತ್ತಿದ್ದ. ಇಲ್ಲಿ ಸುಳ್ಳು ಹೇಳುವುದರ ಹಿಂದೆ ಋಷಿಯ ಸ್ವಾರ್ಥವೇನೂ ಇರಲಿಲ್ಲ, ವರ್ತಕನ ಪ್ರಾಣ ಉಳಿಸುವ ಪರಹಿತವಿತ್ತು.

ಛಾಗಲಾ ಪ್ರಕರಣಕ್ಕೆ ಬಂದರೆ ಅವರು ಸುಳ್ಳು ಹೇಳುವುದಿಲ್ಲ. ಯಾರೆಂದು ಹೇಳಲು ಧೈರ್ಯವಾಗಿ ನಿರಾಕರಿಸುತ್ತಾರೆ. ಋಷಿ ಮತ್ತು ಛಾಗಲಾ ಇಬ್ಬರೂ ಪರಹಿತವನ್ನೇ ಬಯಸಿದ್ದರೂ ಋಷಿ ಕಾಪಾಡಿದ್ದು ಅಮಾಯಕ ವರ್ತಕನನ್ನು, ಛಾಗಲಾ ಕಾಪಾಡಿದ್ದು ಉಡಾಳ ಹುಡುಗನನ್ನು. ಹಾಗೆಂದು ಅವನ ಹೆಸರನ್ನು ಹೇಳದ ಛಾಗಲಾ ಸಂಪೂರ್ಣ ತಪ್ಪಿತಸ್ಥರೆಂದು ನಿರ್ಣಯಿಸಲಾಗದು. ಒಂದು ಪಕ್ಷ ನಿಜ ಸಂಗತಿಯನ್ನು ಅವರು ಹೇಳಿದ್ದರೆ ತರಗತಿಯ ಹೊರಗೆ ಅವರಿಬ್ಬರ ಮಧ್ಯೆ ಘರ್ಷಣೆ ಉಂಟಾಗುತ್ತಿತ್ತು. ಶಿಸ್ತು ಇರಬೇಕಾದ್ದು ಕೇವಲ ತರಗತಿಯ ಒಳಗಷ್ಟೇ ಅಲ್ಲ; ಹೊರಗೂ ಸಹ. ಅಂತಹ ಘರ್ಷಣೆಗೆ ಅವಕಾಶ ಮಾಡಿಕೊಡದೆ ಪ್ರಜ್ಞಾಪೂರ್ವಕವಾಗಿಯೇ ಸಹಪಾಠಿಯ ಹೆಸರನ್ನು ಹೇಳದೆ ಶಿಕ್ಷೆಯನ್ನು ಛಾಗಲಾ ಸ್ವತಃ ಅನುಭವಿಸಿ ದೊಡ್ಡತನವನ್ನು ಮೆರೆಯುತ್ತಾರೆ. ಒಟ್ಟಾರೆ ಈ ಪ್ರಕರಣವನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಿದಾಗ ಛಾಗಲಾ ಮತ್ತು ಜೋಷಿ ಇಬ್ಬರ ನಿಲವೂ ಸರಿ.

ಹಾಗಾದರೆ ನಿಜವಾದ ತಪ್ಪಿತಸ್ಥ ಯಾರು? ವಿನಾ ಕಾರಣ ಶಿಕ್ಷೆಯನ್ನು ಮೈಮೇಲೆ ಎಳೆದುಕೊಂಡ ಛಾಗಲಾ ತರಗತಿಯಿಂದ ಹೊರಗೆ ಹೋಗುವ ದೃಶ್ಯ ಆ ಉಡಾಳ ವಿದ್ಯಾರ್ಥಿಯ ಹೃದಯದಲ್ಲಿ ತಲ್ಲಣವನ್ನು ಸೃಷ್ಟಿಸಬೇಕಾಗಿತ್ತು. ಎದ್ದುನಿಂತು ತನ್ನ ತಪ್ಪನ್ನು ಒಪ್ಪಿಕೊಂಡು “ಸಾರ್, ಅವನದೇನೂ ತಪ್ಪಿಲ್ಲ, ನನ್ನದೇ ತಪ್ಪು, ನನಗೆ ಶಿಕ್ಷೆ ಕೊಡಿ” ಎಂದು ಕೇಳಿದ್ದರೆ ಆತ ನಿಜವಾಗಿಯೂ "ಗಾಂಧಿ" ಎನಿಸಿಕೊಳ್ಳುತ್ತಿದ್ದ. ಆದರೆ ತನ್ನ ಹಿತವನ್ನು ಕಾಯಲು ಯಾರೋ ಒಬ್ಬ "ಬಕರಾ" ಸಿಕ್ಕ ಬಿಡು ಎಂಬುದು ಆ ಉಡಾಳನ ಮನೋಭಾವವಾಗಿತ್ತು. ಇನ್ನು ಆ ತರಗತಿಯ ಇತರೆ ವಿದ್ಯಾರ್ಥಿಗಳು? ಛಾಗಲಾ ಹೊರನಡೆದಾಗ ಸಂಭ್ರಮಿಸಿದರು, ಖುಷಿಯಿಂದ ಅಧ್ಯಾಪಕರ ತೀರ್ಮಾನವನ್ನು ಸ್ವಾಗತಿಸಿ ಕೇಕೆ ಹಾಕಿದರು! ಈ ದೃಷ್ಟಿಯಿಂದ ನಿಜವಾದ ತಪ್ಪಿತಸ್ಥರು ಇಡೀ ತರಗತಿಯ ವಿದ್ಯಾರ್ಥಿಗಳು! ಛಾಗಲಾ ಆಗಲೀ ಜೋಷಿ ಆಗಲೀ ಅಲ್ಲ. ಉಡಾಳ ಹುಡುಗನದು ತಪ್ಪೇ ಆಗಿದ್ದರೂ ಸ್ವಹಿತ ಕಾಯ್ದುಕೊಳ್ಳಲು ಆತ ಪಾರಾಗಬಯಸಿದ್ದು ಸಹಜ ಮಾನವ ಗುಣ. ಆದರೆ ಇತರೆ ವಿದ್ಯಾರ್ಥಿಗಳು ಗುಣಗ್ರಾಹಿಗಳಾಗದೆ ವಿಘ್ನಸಂತೋಷಿಗಳಾಗಿದ್ದು ನಿಜವಾಗಿಯೂ ಕ್ಷಮಾರ್ಹರಲ್ಲ; ದಂಡನಾರ್ಹರು. ನ್ಯಾಯವಾಗಿ ವಿದ್ಯಾರ್ಥಿಗಳು ಒಕ್ಕೊರಲಿನಿಂದ ಉಡಾಳ ಹುಡುಗನನ್ನು ಹಿಡಿದುಕೊಡಬೇಕಾಗಿತ್ತು, ಛಾಗಲಾ ರಕ್ಷಣೆಗೆ ಧಾವಿಸಬೇಕಾಗಿತ್ತು. ಹಾಗೆ ಮಾಡದ ವಿದ್ಯಾರ್ಥಿಗಳನ್ನು ಮುಂದೊಂದು ತರಗತಿಯಲ್ಲಿ ಜೋಷಿ ತರಾಟೆಗೆ ತೆಗೆದುಕೊಳ್ಳಬೇಕಾಗಿತ್ತು. ಛಾಗಲಾದು ಏನೂ ತಪ್ಪಿಲ್ಲ ಎಂದು ಹೇಳಿ ಉಳಿದವರನ್ನು ಎಚ್ಚರಿಸಬೇಕಾಗಿತ್ತು! ಆಗ ಛಾಗಲಾಗೂ ಸಮಾಧಾನವಾಗುತ್ತಿತ್ತು; ಇತರೆ ವಿದ್ಯಾರ್ಥಿಗಳೂ ತಲೆತಗ್ಗಿಸುವಂತಾಗುತ್ತಿತ್ತು! ಸರಿಯಾದ ನ್ಯಾಯವನ್ನು ಒದಗಿಸಿ ವಿದ್ಯಾರ್ಥಿಗಳಿಗೆ ಜೀವನ ಮೌಲ್ಯವನ್ನು ಕಲಿಸಿಕೊಟ್ಟಂತಾಗುತ್ತಿತ್ತು!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 28.9.2017