ದಾರಿ ಯಾವುದಯ್ಯಾ ನೆಮ್ಮದಿಯ ತಾಣವಾವುದಯ್ಯಾ!

  •  
  •  
  •  
  •  
  •    Views  

"ಲ್ಲಾ ನನ್ನ ಹಣೆಯ ಬರೆಹ" ಎಂದು ಕೆಲವರು ಗೊಣಗುವುದನ್ನು ನೀವು ಕೇಳಿದ್ದೀರಿ. ಇದೊಂದು ಅಸಹಾಯಕತೆಯ/ಅಸಹನೆಯ ಉದ್ಗಾರ! ಎಲ್ಲವೂ ಕಣ್ಣಿಗೆ ಕಾಣದ ದೈವನಿಯಾಮಕ ಶಕ್ತಿಯಿಂದ ಪೂರ್ವನಿರ್ಧಾರಿತವಾಗಿದ್ದರೆ ಒಬ್ಬ ಕ್ರಿಮಿನಲ್ ಕೈದಿಯೂ ಸಹ ನ್ಯಾಯಾಲಯಗಳಲ್ಲಿ ತನ್ನದೇನೂ ತಪ್ಪಿಲ್ಲವೆಂದು ದೇವರ ಮೇಲೆ ಹಾಕಿ ಜಾರಿಕೊಳ್ಳಬಹುದು. ದಾರ್ಶನಿಕರು ಜೀವನವನ್ನು ಒಂದು ನಾಟಕವೆಂದು ಬಣ್ಣಿಸುತ್ತಾರೆ, ನಿಜ. ಆದರೆ ನಾಟಕದಲ್ಲಿ ನಿರ್ದೇಶಕ ತರಬೇತುಗೊಳಿಸಿದ ರೀತಿಯಲ್ಲಿ ನಟ ಅಭಿನಯಿಸಿದಂತೆ ಜೀವನವೆಂಬ ನಾಟಕದಲ್ಲಿ ವ್ಯಕ್ತಿ ಅನುಸರಿಸುವುದಿಲ್ಲ. "ಆಡುವೆನಯ್ಯಾ ಆಡುವೆನು, ನೀನಾಡಿಸಿದಂತೆ ಆಡುವೆನು, ಜಗದಯಂತ್ರವಾಹಕ ಚೆನ್ನಮಲ್ಲಿಕಾರ್ಜುನ" ಎನ್ನುವ ಅಕ್ಕಮಹಾದೇವಿಯ ಸರ್ವಾರ್ಪಣ ಭಾವದ ಆಧ್ಯಾತ್ಮಿಕ ನಡೆಗೂ, ಸಾಮಾನ್ಯ ಜನರ ಸ್ವಾರ್ಥಪೂರಿತ ವ್ಯಾವಹಾರಿಕ ನಡೆಗೂ ಬಹಳ ಅಂತರವಿದೆ.

ವ್ಯಕ್ತಿ ತನ್ನ ಬದುಕಿನಲ್ಲಿ ಎರಡು ರೀತಿಯ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ. 1)ತಾನಾಗಿಯೇ ತಂದುಕೊಳ್ಳುವ ಸನ್ನಿವೇಶಗಳು ಮತ್ತು 2)ತಾವಾಗಿಯೇ ಬಂದೊದಗುವ ಸನ್ನಿವೇಶಗಳು. ತಾನಾಗಿಯೇ ತಂದುಕೊಳ್ಳುವ ಸನ್ನಿವೇಶಗಳ ಅರಿವು ವ್ಯಕ್ತಿಗೆ ಇದ್ದರೂ ಧಿಕ್ಕರಿಸಿ ನಡೆಯುತ್ತಾನೆ. ತಾವಾಗಿಯೇ ಎದುರಾಗುವ ಸನ್ನಿವೇಶಗಳನ್ನು ಊಹೆ ಮಾಡುವುದು ಕಷ್ಟ. ಅಂತಹ ಸನ್ನಿವೇಶಗಳು ಬಂದೊದಗಿದಾಗ ಅವುಗಳನ್ನು ಎದುರಿಸುವ ಎದೆಗಾರಿಕೆ ಅನೇಕರಿಗೆ ಇರುವುದಿಲ್ಲ. ಕೆಲವೊಮ್ಮೆ ನಿಮ್ಮ ವಿಷಯದಲ್ಲಿ ಎಲ್ಲ ನಿರ್ಧಾರಗಳನ್ನು ನೀವೇ ತೆಗೆದುಕೊಳ್ಳಲು ಆಗುವುದಿಲ್ಲ. ಕೆಲವು ನಿರ್ಧಾರಗಳನ್ನು ಬೇರೆಯವರು ತೆಗೆದುಕೊಳ್ಳುತ್ತಾರೆ. ಅವುಗಳನ್ನು ನೀವು ಅನಿವಾರ್ಯವಾಗಿ ಒಪ್ಪಿಕೊಂಡು ನಡೆಯಬೇಕಾಗುತ್ತದೆ. ಆ ನಿರ್ಧಾರಗಳ ಮೇಲೆ ನಿಮಗೆ ಯಾವುದೇ ಹಿಡಿತವಿರುವುದಿಲ್ಲ. ವೈಯಕ್ತಿಕ ಬದುಕಿನಲ್ಲಿ ಕೆಲವೊಂದು ಘಟನಾವಳಿಗಳ ವಿರುದ್ಧ ಹೋಗಲು ವ್ಯಕ್ತಿಗೆ ಅಧಿಕಾರವೂ ಇರುವುದಿಲ್ಲ. ಅವಕಾಶವೂ ಇರುವುದಿಲ್ಲ. ಹೀಗಾಗಿ ಎದುರಾದ ಸನ್ನಿವೇಶಗಳಿಗೆ ತಲೆಬಾಗದೆ  ಗತ್ಯಂತರವಿಲ್ಲ. 

ಬೇರೆಯವರ ಆಯ್ಕೆಯಿಂದ ನಾನು ಕೆಟ್ಟೆ ಎಂದು ದೂರುವಂತಿಲ್ಲ, ಅಂತಹ ನಿಮ್ಮ ಕೈಲಿಲ್ಲದ ನಿರ್ಧಾರಗಳಿಂದಲೂ ನಿಮ್ಮ ಜೀವನ ಬಹುಮಟ್ಟಿಗೆ ಚೆನ್ನಾಗಿ ರೂಪುಗೊಳ್ಳುವ ಸಾಧ್ಯತೆ ಇದೆ. ಹಾಗಾಗದಿದ್ದಾಗ ನಿಮ್ಮ ಆಯ್ಕೆಗೆ ಸ್ವಾತಂತ್ರ್ಯವಿದ್ದಿದ್ದರೆ ಅನುಕೂಲಕರವಾಗುತ್ತಿತ್ತು ಎಂದು ಹಳಹಳಿಸುವುದೂ ಸರಿಯಲ್ಲ. ಏಕೆಂದರೆ ನಿಮ್ಮ ನಿರ್ಧಾರದಿಂದಲೇ ಎಲ್ಲವೂ ನಿಮ್ಮ ನಿರೀಕ್ಷೆಯಂತೆ ಫಲಕಾರಿಯಾಗುತ್ತದೆಯೆಂದು ಹೇಳಲು ಬರುವುದಿಲ್ಲ. ನಿಮಗೆ ಬೇಕಾದ ದಾರಿಯನ್ನು ನೀವೇ ಆಯ್ಕೆ ಮಾಡಿಕೊಂಡಿದ್ದರೂ ಬರಬಹುದಾದ ಫಲ ಅದಕ್ಕಿಂತಲೂ ಕೆಟ್ಟದ್ದಾಗಬಹುದಿತ್ತು! ವ್ಯಕ್ತಿಯ ಬದುಕಿನಲ್ಲಿ "ಕಾಣದ ಕೈ" ಕೆಲಸ ಮಾಡುತ್ತದೆ ಎಂಬ ಮಾತು ಎಲ್ಲ ಸಂದರ್ಭಗಳಲ್ಲಿಯೂ ಅನ್ವಯಿಸುವುದಿಲ್ಲ. ಕಣ್ಣ ಮುಂದೆ ಇರುವ ವಿಭಿನ್ನ ಮಾರ್ಗಗಳಲ್ಲಿ ಸೂಕ್ತವಾದುದನ್ನು ಆಯ್ಕೆ ಮಾಡಿಕೊಳ್ಳುವುದು ಪ್ರತಿಯೊಬ್ಬ ವ್ಯಕ್ತಿಯ ಆದ್ಯ ಕರ್ತವ್ಯ. ಸರಿಯೋ ತಪ್ಪೋ ಒಮ್ಮೆ ಆಯ್ಕೆ ಮಾಡಿಕೊಂಡ ಮೇಲೆ ಮುಂದಿನ ಆಗುಹೋಗುಗಳಿಗೆ ಆ ವ್ಯಕ್ತಿಯೇ ಸಂಪೂರ್ಣ ಹೊಣೆಗಾರ. ಆ ದಾರಿಯಲ್ಲಿ ನಡೆದಾಗ ದೊರಕುವ ಫಲಾಫಲಗಳಿಗೂ ಅವನೇ ಜವಾಬುದಾರ. ತನ್ನ ತಪ್ಪು ಆಯ್ಕೆಯಿಂದ ಮುಂದೆ ಆಗಬಹುದಾದ ಅನಾಹುತಗಳಿಗೆ ತನ್ನ ಹಣೆಯ ಬರೆಹವನ್ನು ಹಳಿಯುವುದು ಎಳ್ಳಷ್ಟೂ ಸರಿಯಲ್ಲ.

ಕೆಟ್ಟದಾರಿ ಆಯ್ಕೆ ಮಾಡಿಕೊಂಡಾಗ ಎದುರಾಗುವ ಸನ್ನಿವೇಶಗಳು ಅನುಕೂಲವಾಗಿದ್ದರೆ ವ್ಯಕ್ತಿಯು ಅತಿ ಎತ್ತರಕ್ಕೆ ಹೋಗಿ ತಲುಪಬಹುದು. ಆದರೆ ಯಾವ ಕ್ಷಣದಲ್ಲಾದರೂ ಅವನು ಕೆಳಗೆ ಜಾರಬಹುದು. ಅದು ಜಾರುಬಂಡೆಯಾಟ! ಎತ್ತರದಲ್ಲಿದ್ದರೂ ತಾನು ಆಯ್ಕೆಮಾಡಿಕೊಂಡ ಕೆಟ್ಟದಾರಿಯ ಅರಿವಿರುವುದರಿಂದ ವ್ಯಕ್ತಿಯು ಸದಾ ಕೆಳಗೆ ಬೀಳುವ ಅಳುಕಿನಲ್ಲಿಯೇ ಬದುಕಬೇಕಾಗುತ್ತದೆ. ಸದಾ ಅವನ ಆತ್ಮಸಾಕ್ಷಿ ಕುಟುಕುತ್ತಿರುತ್ತದೆ. ವ್ಯಕ್ತಿಯು ಸರಿದಾರಿಯನ್ನು ಆಯ್ಕೆ ಮಾಡಿಕೊಂಡರೂ ಸನ್ನಿವೇಶಗಳ ವೈಪರೀತ್ಯದ ಕಾರಣದಿಂದ ಮೇಲಕ್ಕೆ ಏರಲು ಸಾಧ್ಯವಾಗದಿರಬಹುದು. ಆದರೆ ಅವನಿಗೆ ಯಾವ ಅಳುಕೂ ಇರುವುದಿಲ್ಲ; ಬದಲಾಗಿ ಆತ್ಮ ತೃಪ್ತಿಯಿರುತ್ತದೆ. ಅಂತಹವನಿಗೆ ಬಿ.ಎಂ.ಶ್ರೀ. ಅವರ ಅನುವಾದ ಕವಿತೆ (ಕರುಣಾಳು ಬಾ ಬೆಳಕೆ) ಹೇಳುವಂತೆ “ಏರುವಾಸೆಗಳಿಲ್ಲ, ಬೀಳುವಳುಕಿಲ್ಲ” ಏನೇ ಸಂಕಟ, ಸಂಕಷ್ಟ, ವಿಪತ್ತುಗಳು ಬಂದರೂ ಅವುಗಳನ್ನು ಆತ್ಮವಿಶ್ವಾಸದಿಂದ ಎದುರಿಸುವ ತೃಪ್ತಿ ಅವನಿಗಿರುತ್ತದೆ. ತಾನೇನೂ ತಪ್ಪು ಮಾಡಿಲ್ಲವೆಂಬ ನಿರುಮ್ಮಳ ಭಾವ ಅವನಲ್ಲಿರುತ್ತದೆ. ಅದೇ ಅಡ್ಡದಾರಿಯಲ್ಲಿ ನಡೆದು ಏನೇ "ದೊಡ್ಡ ಸಾಧನೆ" ಮಾಡಿದರೂ ವ್ಯಕ್ತಿಗೆ ಆತ್ಮತೃಪ್ತಿ ಇರುವುದಿಲ್ಲ. ಬದಲಾಗಿ ಅಪರಾಧಿ ಪ್ರಜ್ಞೆ ಕಾಡುತ್ತಲೇ ಇರುತ್ತದೆ, ಆತ್ಮಸಾಕ್ಷಿ ಚುಚ್ಚುತ್ತಲೇ ಇರುತ್ತದೆ.

ಅನೇಕರು ತಾವು ಮಾಡಿದ ಪ್ರಯತ್ನದಿಂದಲೇ ಉನ್ನತ ಸ್ಥಾನಮಾನವನ್ನು ಹೊಂದಿದ ಭ್ರಮೆಯಲ್ಲಿರುತ್ತಾರೆ. ಅವರು ಮಾಡಿದ ಪ್ರಯತ್ನಕ್ಕಿಂತ ಅವರ ಸುತ್ತ ಒದಗಿ ಬಂದ ಅವಕಾಶಗಳು, ಸಂದರ್ಭಗಳು ಅವರನ್ನು ಮೇಲಕ್ಕೆ ಕರೆದೊಯ್ಯುತ್ತವೆ. ಹೀಗೆ ಮೇಲೆ ಹೋದ ವ್ಯಕ್ತಿ ತನ್ನ ಸಾಧನೆಯಿಂದಲೇ ಅದನ್ನು ಪಡೆದುಕೊಂಡೆ ಎಂದು ಜಂಭ ಕೊಚ್ಚಿಕೊಳ್ಳುವುದು ಸರಿಯಲ್ಲ. ಪ್ರಯತ್ನ ಮಾಡದೆ ಯಾವ ಕೆಲಸವೂ ಕೈಗೂಡುವುದಿಲ್ಲ ನಿಜ. ಮಂತ್ರಿಸಿದರೆ ಮಾವಿನಕಾಯಿ ಉದುರುವುದೇ ಎಂಬ ಗಾದೆಯ ಮಾತೇ ಇದೆ. ಆದರೆ ಎಲ್ಲವನ್ನೂ ಸಾಧಿಸುತ್ತೇನೆಂಬ ಆಹಮ್ಮಿಕೆಯೂ ಸರಿಯಲ್ಲ. ಎಲ್ಲ ಪ್ರಯತ್ನ ಮಾಡಿದ ಮೇಲೂ ಕೈಗೊಂಡ ಕಾರ್ಯ ಕೈಗೂಡುತ್ತದೆಯೆಂದು ಹೇಳಲು ಬರುವುದಿಲ್ಲ. ಪುರುಷ ಪ್ರಯತ್ನವು ಬೀಜವಿದ್ದಂತೆ. ಬೀಜವು ಎಷ್ಟೇ ಉತ್ಕೃಷ್ಟವಾಗಿದ್ದರೂ ಬೀಜಾಂಕುರ ಮಾಡಿದ ಭೂಮಿಯು ಫಲವತ್ತಾಗಿರದೆ ಹೋದರೆ ಸಕಾಲದಲ್ಲಿ ನೀರು, ಗೊಬ್ಬರವನ್ನು ಪೂರೈಸದೆ ಹೋದರೆ ಅಲ್ಲಿ ಬೆಳೆದ ಕಳೆಯನ್ನು ತೆಗೆಯದೇ ಹೋದರೆ ಉತ್ತಮ ಬೆಳೆಯನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ. ಮನುಷ್ಯನ ಪ್ರಯತ್ನ ಹೀಗೆ ಬೀಜ ಬಿತ್ತಿದಂತೆ, ಕಳೆ ತೆಗೆದಂತೆ. ಅದು ಬೆಳೆಯಲು ಬೇಕಾದ ನೀರು, ಗೊಬ್ಬರ ಇಲ್ಲದೆ ಹೋದರೆ ಬೀಜ ಎಷ್ಟೇ ಉತ್ತಮ ಗುಣಮಟ್ಟದ್ದಾಗಿದ್ದರೂ ಫಲಕಾರಿಯಾಗುವುದಿಲ್ಲ. ಹಾಗೇ ಮನುಷ್ಯನ ಪ್ರಯತ್ನಕ್ಕೆ ಪೂರಕವಾದ ಸನ್ನಿವೇಶಗಳು ಸಂದರ್ಭಗಳು ಒದಗಿ ಬಂದಾಗ ಮಾತ್ರ ಅವನ ಪ್ರಯತ್ನ ಯಶಸ್ವಿಯಾಗುತ್ತದೆ.

ಮೇಲ್ಕಂಡ ಮಾತುಗಳನ್ನು ಬರೆಯಲು ನಮಗೆ ಪ್ರೇರೇಪಣೆ ನೀಡಿದ್ದು ಕಳೆದ ಅಂಕಣದಲ್ಲಿ ಉಲ್ಲೇಖಿಸಿದ ನ್ಯಾಯಮೂರ್ತಿ ಎಂ.ಸಿ. ಛಾಗಲಾ ಅವರ ಆತ್ಮಚರಿತ್ರೆ. ಅವರ ಮಾತುಗಳಲ್ಲಿಯೇ ಹೇಳುವುದಾದರೆ: "It is both folly and vanity to ascribe the achievements of one"s life as entirely due to one"s own effort. because the result is always conditioned by certain circumstances and contingencies over which one has no control." ಈ ಮಾತುಗಳಿಗೆ ಕೊಡಬಹುದಾದ ಉದಾಹರಣೆಯೆಂದರೆ ಅವರ ಜೀವನದಿಂದಲೇ ಹೆಕ್ಕಿ ತೆಗೆದ ಕೆಳಕಂಡ ಘಟನೆ:

ಎಂ.ಸಿ. ಛಾಗಲಾ ಅವರು ಮುಂಬಯಿ ಉಚ್ಚನ್ಯಾಯಾಲಯದ ಮುಖ್ಯನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಲು ಆರಂಭಿಸಿದ್ದು ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ 1947ರ ಆಗಸ್ಟ್ 15 ರಂದು. ಸ್ವತಂತ್ರ ಭಾರತದ ಮೊದಲ ಭಾರತೀಯ ಮುಖ್ಯನ್ಯಾಯಾಧೀಶರೆಂಬ ಹೆಗ್ಗಳಿಕೆ ಅವರದು. ಆದರೆ ದೇಶ ಸ್ವತಂತ್ರಗೊಂಡಿತೆಂಬ ಕಾರಣಕ್ಕಾಗಿ ಹೊಸದಾಗಿ ನೇಮಕಗೊಂಡವರಲ್ಲ. ಭಾರತಕ್ಕೆ ಸ್ವಾತಂತ್ರ್ಯ ದೊರೆತ ಮೇಲೂ ಅನೇಕ ಬ್ರಿಟಿಷ್ ನ್ಯಾಯಾಧೀಶರುಗಳು ತಮ್ಮ ತಮ್ಮ ಸ್ಥಾನಗಳಲ್ಲಿ ಮುಂದುವರಿದು ಕಾರ್ಯ ನಿರ್ವಹಿಸಿದರು. ತಕ್ಷಣವೇ ಯಾರೂ ಬದಲಾಗಲಿಲ್ಲ. ಆದರೆ ಮುಂಬೈ ಉಚ್ಚನ್ಯಾಯಾಲಯದ ಮುಖ್ಯನ್ಯಾಯಾಧೀಶರಾಗಿದ್ದ ಸರ್ ಲಿಯೊನಾರ್ಡ್ ಸ್ಟೋನ್ (Justice Leonard Stone) ಅವರಿಗೆ ಭಾರತ ಸ್ವತಂತ್ರಗೊಂಡ ಮೇಲೆ ಬ್ರಿಟಿಷ್ ನ್ಯಾಯಾಧೀಶರು ತಮ್ಮ ಸ್ಥಾನದಲ್ಲಿ ಮುಂದುವರಿಯುವುದು ಸರಿಯಲ್ಲವೆಂದು ಅನ್ನಿಸಿತು. ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಲು ಅವರು ತೀರ್ಮಾನಿಸಿ ತಮ್ಮ ಸ್ಥಾನವನ್ನು ಸ್ವಪ್ರೇರಣೆಯಿಂದ ತ್ಯಜಿಸಿದರು. ಎಂ.ಸಿ.ಛಾಗಲಾ ಅವರನ್ನು ಹತ್ತಿರ ಕರೆದು ತಮ್ಮ ಮನೋ ಇಂಗಿತವನ್ನು ತಿಳಿಸಿ ಅಧಿಕಾರ ವಹಿಸಿಕೊಟ್ಟರು. ಯಾರೂ ಅವರನ್ನು ಕೆಳಗಿಳಿಯಲು ಒತ್ತಾಯಪಡಿಸಿರಲಿಲ್ಲ. ಅವರು ಬಯಸಿದ್ದರೆ ಬೇರೆ ಬ್ರಿಟಿಷ್ ನ್ಯಾಯಾಧೀಶರಂತೆ ಮುಂದುವರಿಯಬಹುದಿತ್ತು. ಹಾಗೆ ಮುಂದುವರಿಯದೆ ತಮ್ಮನ್ನು ಅವರ ಸ್ಥಾನದಲ್ಲಿ ನಿಯುಕ್ತಿಗೊಳಿಸಿದ್ದು ಅವರ ದೊಡ್ಡತನವೇ ಹೊರತು ತನ್ನ ಸಾಧನೆಯೇನೂ ಅಲ್ಲ ಎನ್ನುತ್ತಾರೆ ಛಾಗಲಾ.

ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿಯೂ ಗತಕಾಲದ ಘಟನಾವಳಿಗಳನ್ನು ಮೆಲುಕು ಹಾಕಿದಾಗ ತಮ್ಮ ಜೀವನದ ಗತಿಯನ್ನೇ ಬದಲಿಸಿದ ಇಂತಹ ಅನೇಕ ಪ್ರಸಂಗಗಳು ಕಾಣಸಿಗುತ್ತವೆ. ಸಂದರ್ಭಗಳಲ್ಲಿ ಅವರು ತೆಗೆದುಕೊಂಡ ಗಟ್ಟಿ ನಿರ್ಧಾರಗಳು ಬೇರೆಯವರಿಗೆ ಮಾರ್ಗದರ್ಶಕವಾಗಿ ಉಳಿಯುತ್ತವೆ. ಪ್ರಖ್ಯಾತ ಆಂಗ್ಲ ಕವಿ Robert Frost  ಬರೆದ "The Road Not Taken"  ಎಂಬ ಈ ಮುಂದಿನ ಕವಿತೆ ಇಲ್ಲಿ ಸ್ಮರಣೀಯ:

Two roads diverged in a wood, and I- 
I took the one less traveled by,
 And that has made all the difference.

(ಕಾಡಿನೊಳಗೆ ದಾರಿಗಳಿದ್ದವೆರಡು 
ಬಹು ಜನರು ತುಳಿದ ದಾರಿ 
ಕೆಲವೇ ಕೆಲವರು ತುಳಿದ ದಾರಿ
 ನಡೆದೆ ನಾನು ಕೆಲವರು ತುಳಿದ ದಾರಿಯಲಿ
 ಕಂಡೆ ನಾನು ಎರಡರ ಭೇದವನು
 ದುರ್ಗಮವಾದರೂ ಬಾಳ ಬೆಳಕನು!)

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 12.10.2017