ಭಗವದ್ಗೀತಾ v/s ಗೂಗಲ್ ಗೀತಾ
ಯಾವುದೇ ವಿಷಯವನ್ನು ನೇರವಾಗಿ ಹೇಳಿದರೆ ಅದರಲ್ಲಿ ಸ್ವಾರಸ್ಯವಿರುವುದಿಲ್ಲ; ತಲೆಗೂ ನಾಟುವುದಿಲ್ಲ. ಒಂದು ವಿಷಮ ಪರಿಸ್ಥಿತಿಯನ್ನು ನಿರೂಪಿಸಿ ಆಲೋಚನೆ ಮಾಡಲು ಹಚ್ಚಿ ಉತ್ತರ ದೊರೆಯದೆ ತಬ್ಬಿಬ್ಬಾದಾಗ ಹೇಳಿದರೆ ಅದು ಮನಸ್ಸಿಗೆ ಹೆಚ್ಚು ನಾಟುತ್ತದೆ. ಕೇಳುಗರ ಮನಸ್ಸಿನಲ್ಲಿ ತಿಳಿದುಕೊಳ್ಳಬೇಕೆಂಬ ಕುತೂಹಲ ಉಂಟಾಗುವುದಲ್ಲದೆ ಉತ್ತರವನ್ನು ಕೇಳಿ ಸಂತೃಪ್ತಿಯೂ ಉಂಟಾಗುತ್ತದೆ. ಅನುಭವಕ್ಕೆ ಬಾರದ ಜಟಿಲವಾದ ದಾರ್ಶನಿಕ ವಿಚಾರಗಳನ್ನು ಮನಂಬುಗುವಂತೆ ಮಾಡಲು ಭಾರತೀಯ ದಾರ್ಶನಿಕರು ಕಂಡುಕೊಂಡ ವಿಶಿಷ್ಟ ನಿರೂಪಣಾ ಶೈಲಿ ಇದು. ಇದಕ್ಕೆ ಒಳ್ಳೆಯ ಉದಾಹರಣೆ ಭಗವದ್ಗೀತೆಯ ಆರಂಭದ ಅಧ್ಯಾಯವಾದ ಅರ್ಜುನವಿಷಾದ ಯೋಗ. ಅಪ್ರತಿಮ ವೀರನಾದ ಅರ್ಜುನ ಕುರುಕ್ಷೇತ್ರದಲ್ಲಿ ಯುದ್ಧಸನ್ನದ್ಧರಾಗಿ ನಿಂತಿದ್ದ ಗುರು ದ್ರೋಣಾಚಾರ್ಯರನ್ನೂ, ಭೀಷ್ಮಪಿತಾಮಹರನ್ನೂ ನೋಡಿ ಭಾವುಕನಾಗಿ "ನಾನು ಸತ್ತರೂ ಪರವಾಗಿಲ್ಲ ಇವರನ್ನು ಕೊಲ್ಲಲಾರೆ, ತ್ರೈಲೋಕ್ಯ ಪದವಿ ದೊರೆಯುವುದಾದರೂ ನನಗೆ ಈ ಯುದ್ಧ ಬೇಡ” ಎಂದು ವಿಷಾದದಿಂದ ಶಸ್ತ್ರಾಸ್ತ್ರಗಳನ್ನು ಕೆಳಗೆ ಬಿಸಾಡುತ್ತಾನೆ. ಅವನ ಗಾಂಢೀವ ನಡುಗಿದ್ದು ಹೇಡಿತನದಿಂದ ಅಲ್ಲ; ತನಗೆ ಬಿಲ್ಲುವಿದ್ಯೆ ಕಲಿಸಿದ ಗುರುವನ್ನೂ, ಪಾಲನೆ ಪೋಷಣೆ ಮಾಡಿದ ಹಿರಿಯರನ್ನೂ, ಒಡಹುಟ್ಟಿದವರನ್ನೂ ಕೊಂದು ಯಾವ ಪಾಪಕೂಪಕ್ಕೆ ಹೋಗಲಿ ಎಂಬ ಪಾಪಭೀರುತ್ವದಿಂದ. ಇವರನ್ನು ಕೊಲ್ಲುವುದಕ್ಕಿಂತ ಭಿಕ್ಷೆ ಬೇಡಿಯಾದರೂ ಜೀವನ ನಡೆಸುವುದು ಎಷ್ಟೋ ವಾಸಿ ಎಂಬ ತೀರ್ಮಾನಕ್ಕೆ ಅವನು ಬರುತ್ತಾನೆ. ಹಿಂದೆ ಎಷ್ಟೋ ಯುದ್ಧಗಳನ್ನು ಮಾಡಿ ಅಪ್ರತಿಮ ವೀರನೆನಿಸಿದ್ದ ಅರ್ಜುನನನ್ನು ಬಂಧುತ್ವದ ಮೋಹ ಕ್ಷಾತ್ರಧರ್ಮದಿಂದ ವಿಚಲಿತನನ್ನಾಗಿ ಮಾಡುತ್ತದೆ. "ಕ್ಷುದ್ರಂ ಹೃದಯ ದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ ಪರಂತಪ" ಎಂದು ಶ್ರೀಕೃಷ್ಣ ವಿಷಾದ ಆವರಿಸಿದ ಅರ್ಜುನನ ಮನಸ್ಸಿನಲ್ಲಿ ಉತ್ಸಾಹ ಮತ್ತು ಆತ್ಮವಿಶ್ವಾಸವನ್ನು ತುಂಬುತ್ತಾನೆ. ಶ್ರೀಕೃಷ್ಣ ಭಗವದ್ಗೀತೆಯ 18 ಅಧ್ಯಾಯಗಳಲ್ಲಿ ಬರುವ 700 ಶ್ಲೋಕಗಳನ್ನು ಅರ್ಜುನನಿಗೆ ಬೋಧಿಸುವವರೆಗೂ ರಣರಂಗದಲ್ಲಿ ತನ್ನ ಹನ್ನೊಂದು ಅಕ್ಷೌಹಿಣೀ ಸೈನ್ಯದೊಂದಿಗೆ ದುರ್ಯೋಧನ ಸುಮ್ಮನೆ ಕಾದು ಕುಳಿತಿದ್ದನೇ? ಎಂಬ ಕುಹಕದ ಮಾತುಗಳನ್ನಾಡುವವರು ಸಾಹಿತ್ಯ ಮತ್ತು ಕಲೆಯನ್ನು ಬಲ್ಲವರಲ್ಲ ಎಂದೇ ಹೇಳಬೇಕಾಗುತ್ತದೆ. ಸಿನೇಮಾದಲ್ಲಿ ವಿವಿಧ ಹಾವಭಾವಗಳಿಂದ ನರ್ತಿಸಿ ನಲಿದಾಡುವ ನಾಯಕ-ನಾಯಕಿಯರು ಐದು ನಿಮಿಷಗಳಲ್ಲಿ ಒಂದು ಹಾಡು ಮುಗಿಯುವುದರೊಳಗೆ ಆಗ್ರಾದ ತಾಜ್ಮಹಲ್ನಿಂದ ಪ್ಯಾರಿಸ್ಸಿನ ಐಫೆಲ್ ಟವರ್ವರೆಗೆ ರಂಗುರಂಗಿನ ಬೇರೆ ಬೇರೆ ಬಟ್ಟೆಗಳನ್ನು ಧರಿಸಿ ನರ್ತಿಸುವುದು ಹೇಗೆ ಸಾಧ್ಯ? ಎಂದು ಯಾರಾದರೂ ಕೇಳುತ್ತಾರೆಯೇ?
ಭಗವದ್ಗೀತೆಯು ರಚನೆಯಾಗಿದ್ದು ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಅಲ್ಲ; ಅದರ ಭೂಮಿಕೆಯಲ್ಲಿ. ಇದರ ಕರ್ತೃವು ತಾತ್ವಿಕ ವಿಚಾರಗಳನ್ನು ಹೇಳಲು ಯುದ್ಧಭೂಮಿಯ ಸನ್ನಿವೇಶವನ್ನು ಬಹಳ ಜಾಣ್ಮೆಯಿಂದ ಬಳಸಿಕೊಂಡಿದ್ದಾನೆ. ಅರ್ಜುನ ಎಲ್ಲ ತಯಾರಿಯನ್ನು ನಡೆಸಿ ಯುದ್ಧ ಮಾಡಲೆಂದೇ ಕುರುಕ್ಷೇತ್ರಕ್ಕೆ ಬಂದಿರುತ್ತಾನೆ. “ಸೇನಯೋರುಭಯೋರ್ಮಧ್ಯೆ ರಥಂ ಸ್ಥಾಪಯ ಮೇsಚ್ಯುತ. ಕೈರ್ಮಯಾ ಸಹ ಯೋದ್ಧವ್ಯಮಸ್ಮಿನ್ ರಣಸಮುದ್ಯಮೇ?” ನನ್ನೊಂದಿಗೆ ಯುದ್ಧ ಮಾಡಲು ಯಾರು ಸಮರ್ಥರು ನೋಡುತ್ತೇನೆ, ಎರಡೂ ಸೈನ್ಯಗಳ ಮಧ್ಯೆ ರಥವನ್ನು ನಿಲ್ಲಿಸು ಎಂದು ಅರ್ಜುನ ಕೇಳಿಕೊಂಡಾಗ ಸಾರಥಿಯಾದ ಶ್ರೀಕೃಷ್ಣನು ಗುರು ದ್ರೋಣಾಚಾರ್ಯ ಮತ್ತು ಭೀಷ್ಮ ಪಿತಾಮಹರ ಮುಂದೆ ತಂದು ನಿಲ್ಲಿಸುತ್ತಾನೆ. ಅದರ ಬದಲು ಆ ಜನ್ಮವೈರಿಯಾದ ದುರ್ಯೋಧನನ ಮುಂದೆ ನಿಲ್ಲಿಸಿದ್ದರೆ ಭಗವದ್ಗೀತೆಯು ಹುಟ್ಟುತ್ತಲೇ ಇರಲಿಲ್ಲ! ಅರ್ಜುನ ಕ್ಷತ್ರಿಯನಾಗಿ ಯುದ್ಧವನ್ನು ಮಾಡಬೇಕೇ ಅಥವಾ ಶಿಷ್ಯನಾಗಿ ಗುರುವಿನ ಪದತಲದಲ್ಲಿ ಶರಣಾಗಬೇಕೇ ಎಂಬ ದ್ವಂದ್ವವನ್ನು ಸೃಷ್ಟಿಸಿ ತಾತ್ವಿಕ ವಿಚಾರಗಳನ್ನು ಹೇಳಲು ಭಗವದ್ಗೀತಾಕಾರ ಮುಂದಾಗುತ್ತಾನೆ.
ಈ ಅಧ್ಯಾಯ ಮೂಲಗ್ರಂಥದಲ್ಲಿ ಮೊದಲು ಇರಲಿಲ್ಲವೆಂದೂ ನಂತರ ಬರೆದು ಮಹಾಭಾರತದ ಭೀಷ್ಮಪರ್ವದಲ್ಲಿ ಸೇರ್ಪಡೆ ಮಾಡಲಾಗಿದೆಯೆಂದೂ ಕೆಲವು ವಿದ್ವಾಂಸರ ಅಭಿಪ್ರಾಯ. ಅದೇನೇ ಇರಲಿ, ಭಗವದ್ಗೀತೆಯು ಮಹಾಭಾರತದ ಭಾಗವಾಗಿದ್ದರೂ ಒಂದು ಸ್ವತಂತ್ರ ಧಾರ್ಮಿಕ ಕೃತಿಯಾಗಿ ಭಾರತೀಯರ ಭಕ್ತಿಗೌರವಗಳಿಗೆ ಪಾತ್ರವಾಗಿದೆ. ಪಂಡಿತರಿಂದ ಹಿಡಿದು ಪಾಮರರವರೆಗೆ ಭಗವದ್ಗೀತೆ ಭಾರತೀಯರ ಬದುಕಿನಲ್ಲಿ ಹಾಸು ಹೊಕ್ಕಾಗಿ ಸೇರಿ ಹೋಗಿದೆ. ಅದನ್ನು ಭಕ್ತಿಯಿಂದ ಪಾರಾಯಣ ಮಾಡುವ ಜನರಿದ್ದಾರೆ. ವಿವಿಧ ಶಾಸ್ತ್ರಗಳ ನೆಲೆಯಲ್ಲಿ, ವಿವಿಧ ದೃಷ್ಟಿಕೋನಗಳಿಂದ ವಿಶ್ಲೇಷಿಸುವ ಪಂಡಿತರು ಮತ್ತು ವಿದ್ವಾಂಸರೂ ಇದ್ದಾರೆ. ಆಮೂಲಾಗ್ರವಾಗಿ ಓದದ ಜನಸಾಮಾನ್ಯರ ಮನೋಭೂಮಿಕೆಯಲ್ಲಿಯೂ ಸಹ ಭಗವದ್ಗೀತೆ ಜೀವಂತವಾಗಿದೆ. ಅದರಲ್ಲಿ ನಿರ್ದೇಶಿತವಾದ ತತ್ವಗಳನ್ನು ದೈನಂದಿನ ಜೀವನದಲ್ಲಿ ಅವರಾಡುವ ಮಾತುಗಳಲ್ಲಿ ಕಾಣಬಹುದು. ಉದಾಹರಣೆಗೆ "ಮಾಮೇಕಂ ಶರಣಂ ವ್ರಜ" ಎಂಬ ಗೀತೆಯ ಸಂದೇಶ. ಬದುಕಿನಲ್ಲಿ ಸಂದಿಗ್ಧತೆಗಳು ಎದುರಾದಾಗ ಜನರಾಡುವ ಮಾತೆಂದರೆ "ದೇವರ ಮೇಲೆ ಭಾರ ಹಾಕಿ ಈ ಕೆಲಸ ಮಾಡಿಬಿಡೋಣ; ದೇವರ ಇಚ್ಛೆ ಇದ್ದಂತೆ ಆಗಲಿ” ಎಂಬುದು. ಕಷ್ಟಕರವಾದ ಸಂದರ್ಭ ಬಂದಾಗ, ಮಾಡುವ ಕೆಲಸ ಯಶಸ್ವಿಯಾಗುತ್ತದೋ ಇಲ್ಲವೋ ಎಂಬ ಆತಂಕವಿದ್ದಾಗ ಆಡುವ ಈ ಮಾತಿನಲ್ಲಿ ದೇವರ ಮೇಲಿನ ನಂಬಿಕೆ ಮತ್ತು ಶರಣಾಗತಿಯ ಭಾವ ಗೋಚರಿಸುತ್ತದೆ. “ದೇವರು ಹಾಲಲ್ಲಾದರೂ ಹಾಕಲಿ ನೀರಲ್ಲಾದರೂ ಹಾಕಲಿ” ಎಂದು ಆರಂಭಿಸುವ ಕೆಲಸದ ಹಿಂದಿರುವ ಮನೋಭೂಮಿಕೆ ಭಗವದ್ಗೀತೆಗೆ ಬರೆದ ಭಾಷ್ಯದಂತಿದೆ. ಸರ್ವಾರ್ಪಣ ಭಾವ ಇಲ್ಲಿರುವುದನ್ನು ಕಾಣಬಹುದು. ಭಕ್ತಿಪಂಥದ ಮೂಲ ಆಶಯ ಭಗವಂತನಿಗೆ ಇಂಥ ಸಂಪೂರ್ಣ ಶರಣಾಗತಿಯಲ್ಲದೆ ಬೇರೇನೂ ಇಲ್ಲ.
ಒಂದು ಕಾಲಘಟ್ಟದಲ್ಲಿ ಯಾವುದೇ ಹೊಸ ಸಿದ್ಧಾಂತವನ್ನು ಪ್ರತಿಪಾದಿಸಬೇಕಾದರೆ "ಪ್ರಸ್ಥಾನತ್ರಯ"ಗಳೆಂದು ಪರಿಗಣಿಸಲ್ಪಟ್ಟ "ಉಪನಿಷತ್ತು, ವೇದಾಂತ ಸೂತ್ರ ಮತ್ತು ಭಗವದ್ಗೀತೆ"ಯ ಮೇಲೆ ಭಾಷ್ಯಗಳನ್ನು ಬರೆಯಬೇಕೆಂಬ ಕಟ್ಟುಪಾಡು ಇತ್ತು. ವೇದೋಪನಿಷತ್ತುಗಳನ್ನು "ಶ್ರುತಿ" ಎಂದು ಕರೆದರೆ "ಸ್ಮೃತಿ" ಎನಿಸಿದಭಗವದ್ಗೀತೆಯನ್ನು ಉಪನಿಷತ್ತುಗಳ ಸಾರವೆಂದೇ ಈ ಮುಂದಿನ ಶ್ಲೋಕ ಬಣ್ಣಿಸುತ್ತದೆ:
ಸರ್ವೋಪನಿಷದೋ ಗಾವೋ ದೋಗ್ದಾ ಗೋಪಾಲನಂದನಃ |
ಪಾರ್ಥೋ ವತ್ಸಃ ಸುಧೀರ್ಭೋಕ್ತಾ ದುಗ್ಧಂ ಗೀತಾಮೃತಂ
ಮಹತ್||
ಉಪನಿಷತ್ತುಗಳೆಂಬ ಹಸುಗಳ ಕೆಚ್ಚಲಿಗೆ ಅರ್ಜುನನೆಂಬ ಕರುವನ್ನು ಬಿಟ್ಟು ಗವಳಿಗನಾದ ಶ್ರೀಕೃಷ್ಣ ಕರೆದುಕೊಟ್ಟ ಹಾಲೇ ಭಗವದ್ಗೀತೆ, ಅದನ್ನು ಸಜ್ಜನರು ಆಸ್ವಾದಿಸುತ್ತಾರೆಂದು ತುಂಬಾ ಮಾರ್ಮಿಕವಾಗಿ ಈ ಶ್ಲೋಕ ಬಣ್ಣಿಸುತ್ತದೆ. ಆಚಾರ್ಯ ಶಂಕರರು ತಮ್ಮ "ಭಜ ಗೋವಿಂದಮ್" ಕೃತಿಯಲ್ಲಿ ಈ ಗ್ರಂಥ ಹೇಗೆ ಮುಮುಕ್ಷುಗಳಿಗೆ ಮುಕ್ತಿಪಥವನ್ನು ತೋರಿಸುತ್ತದೆಯೆಂದು ಕೊಂಡಾಡಿದ್ದಾರೆ. ಲೌಕಿಕ ಜ್ಞಾನವನ್ನು ನೀಡುವ ವ್ಯಾಕರಣಾದಿ ಶಾಸ್ತ್ರ ಗ್ರಂಥಗಳು ಭವಸಾಗರವನ್ನು ದಾಟಿಸಲಾರವು. ಅದನ್ನು ದಾಟಬೇಕಾದರೆ ಭಗವಂತನನ್ನು ಧ್ಯಾನಿಸಬೇಕು ಎಂದು ಶಂಕರಾಚಾರ್ಯರು ಭಕ್ತಿಯ ಮಹತ್ವವನ್ನು ಇಲ್ಲಿ ವಿವರಿಸಿದ್ದಾರೆ.
ಭಜ ಗೋವಿಂದಂ ಭಜ ಗೋವಿಂದಂ
ಭಜ ಗೋವಿಂದಂ ಮೂಢಮತೇ।
ಸಂಪ್ರಾಪ್ತೇ ಸಂನಿಹಿತೇ ಕಾಲೇ
ನಹಿ ನಹಿ ರಕ್ಷತಿ "ಡುಕೃಞ್ ಕರಣೇ" |
ಲೌಕಿಕ ವಿದ್ಯೆಗಳಿಂದ ಎಷ್ಟೇ ಉಪಯೋಗವಿದೆ ಎಂದರೂ, ಅವು ಎಷ್ಟೇ ಆಕರ್ಷಣೀಯವಾಗಿ ಕಂಡರೂ ಆತ್ಮಜ್ಞಾನವನ್ನು ನೀಡಲಾರವು; ಮನುಷ್ಯನ ಆತ್ಯಂತಿಕ ಗಂತವ್ಯವಾದ ಮೋಕ್ಷವನ್ನು ದೊರಕಿಸಿಕೊಡಲಾರವು. ಅದನ್ನು ಪಡೆಯಲು ಭಗವಂತನಿಗೆ ಶರಣಾಗುವ ಭಕ್ತಿಮಾರ್ಗವೇ ಶ್ರೇಷ್ಠ ಎಂಬುದು ಶಂಕರಾಚಾರ್ಯರ ಅಭಿಮತವಾಗಿದೆ.
ಶಂಕರಾಚಾರ್ಯರ ಕಾಲದಲ್ಲಿ ಈಗಿನ ಕಂಪ್ಯೂಟರ್ ಆಗಲೀ ಅಂತರಜಾಲವಾಗಲೀ ಇರಲಿಲ್ಲ. "ನಹಿ ನಹಿ ರಕ್ಷತಿ ಡುಕೃಞ್ ಕರಣೇ" ಎಂದು ಅವರು ವೈಯಾಕರಣಿಗಳನ್ನು ಕುರಿತು ಆಡಿರುವಮಾತು ನಮಗೆ ನೆನಪಾಗಿದ್ದು ಇತ್ತೀಚೆಗೆ ಸಂಸ್ಕೃತದ ಗೂಗಲ್ ಗ್ರೂಪ್ನಲ್ಲಿ ಪ್ರಕಟವಾದ ಒಂದು ಆಧುನಿಕ ಸಂಸ್ಕೃತ ಕವಿತೆಯನ್ನು ಓದಿದಾಗ:
ಆತ್ಮಾನಂದಂ ಮನಃಶಾಂತಿಂ ತೃಪ್ತಿಂ ವಾಂಛಸಿ ವಾ ಯದಿ ।
ಗೂಗಲಂ ಸಂಪರಿತ್ಯಜ್ಯ ಶ್ರೀಹರಿಂ ಶರಣಂ ವ್ರಜ||
"ಗೂಗಲ್ ಗೀತಾ" ಎಂಬ ಶಿರೋನಾಮೆಯಲ್ಲಿ ತುಂಬಾ ಸ್ವಾರಸ್ಯಕರವಾಗಿ ಬರೆದು ತಮ್ಮ ಬ್ಲಾಗಿನಲ್ಲಿ ಪ್ರಕಟಿಸಿರುವವರು ಬೆಂಗಳೂರಿನವರೇ ಆದ ಜಿ.ಎಸ್.ಎಸ್. ಮೂರ್ತಿಯವರು. ಇಂಜಿನಿಯರಾಗಿ ನಿವೃತ್ತರಾದರೂ ಪ್ರವೃತ್ತಿಯಲ್ಲಿ ಸಂಸ್ಕೃತ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ. ಅವರ "ಗೂಗಲ್ ಗೀತಾ" ಮಹಾಭಾರತದ ಕುರುಕ್ಷೇತ್ರದಿಂದ ಆರಂಭವಾಗದೆ ಅಂತರಜಾಲದಲ್ಲಿ ಸಿಲುಕಿದ ಗೆಳೆಯನ ಮನಸ್ಸಿನ "ಕುರುಕ್ಷೇತ್ರ"ದಿಂದ ಆರಂಭವಾಗುತ್ತದೆ. ಭಗವದ್ಗೀತೆಯ "ಮಾಮೇಕಂ ಶರಣಂ ವ್ರಜ" ಎಂಬ ಪಂಕ್ತಿಯನ್ನು ಪ್ರತಿಧ್ವನಿಸುವಂತಿರುವ "ಗೂಗಲಂ ಶರಣಂ ವ್ರಜ” ಎಂಬ ದೀರ್ಘವಾದ ಅವರ ಸಂಸ್ಕೃತ ಪದ್ಯದ ಆಯ್ದ ಸಾಲುಗಳ ನಮ್ಮ ಕನ್ನಡಾನುವಾದ:
ಗೂಗಲ್ ಗೀತೆ
ಸರಕುಗಳ ಮಾರುವುದೆಲ್ಲಿ?
ಸರಕುಗಳ ಕೊಳ್ಳುವುದೆಲ್ಲಿ?
ಬೆಲೆಗಳು ಏನು ಎಷ್ಟೆಂದು ತಿಳಿಯಬೇಕೆ?
ಗೆಳೆಯನೆ "ಗೂಗಲಿಗೆ ಶರಣಾಗು"!
ಹೆಂಡಿರು ಮಕ್ಕಳಿಗೆ ಕಾಯಿಲೆಯೆ?
ಯಾವ ಕಾಯಿಲೆಗೆ ಏನು ಔಷಧಿ
ನುರಿತ ವೈದ್ಯರು ಎಲ್ಲಿರುವರೆಂದು ತಿಳಿಯಬೇಕೆ?
ಗೆಳೆಯನೆ "ಗೂಗಲಿಗೆ ಶರಣಾಗು"!
ಈಗ ನಾನೆಲ್ಲಿದ್ದೇನೆ? ಮನೆ ಎಷ್ಟು ದೂರವಿದೆ?
ಯಾವ ದಾರಿಯ ಹಿಡಿದು ಮನೆಯ
ತಲುಪಲಿ ನಾನು? ಗೊಂದಲ ಬೇಡ
ಗೆಳೆಯನೆ "ಗೂಗಲಿಗೆ ಶರಣಾಗು"!
ಕೈಹಿಡಿಯಲು ಕನ್ನೆಯನು ಹುಡುಕಬೇಕೆ?
ಭಾವಿ ಅಳಿಯನ ಆರಿಸಲು ಬೇಕೆ?
ಉದ್ಯೋಗದ ಹುಡುಕಾಟದ ಚಿಂತೆಯೆ?
ಗೆಳೆಯನೆ "ಗೂಗಲಿಗೆ ಶರಣಾಗು"!
ಆತ್ಮಾನಂದ ಮನಶ್ಯಾಂತಿ ತೃಪ್ತಿಯನು
ನೀ ಬಯಸುವೆಯಾ ಗೆಳೆಯಾ?
ಗೂಗಲಿಗೆ ಶರಣು ಹೊಡೆದು
ಶ್ರೀ ಹರಿಯ ಚರಣಗಳಿಗೆ ಶರಣಾಗು!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 26.10.2017