ಮೌಢ್ಯ ಮತ್ತು ವಿಚಾರವಾದ: ಎರಡು ಜರ್ಮನ್ ಕಥೆಗಳು

ಜರ್ಮನಿಯ ಹೈಡೆಲ್ಬೆರ್ಗ್, ಮ್ಯೂನಿಚ್, ಟ್ಯೂಬಿಂಗೆನ್, ಬಾನ್, ಹಾಂಬುರ್ಗ್ ಮೊದಲಾದ ಅನೇಕ ಪ್ರಸಿದ್ಧ ವಿಶ್ವವಿದ್ಯಾನಿಲಯಗಳಲ್ಲಿ ನೂರಾರು ವರ್ಷಗಳಿಂದ ಸಂಸ್ಕೃತ ಅಧ್ಯಯನ ನಡೆಯುತ್ತಾ ಬಂದಿದೆ. ವ್ಯಾಕರಣದ ದೃಷ್ಟಿಯಿಂದ ಜರ್ಮನ್ ಭಾಷೆಗೂ ಮತ್ತು ಸಂಸ್ಕೃತಕ್ಕೂ ಬಹಳ ಹತ್ತಿರದ ಸಂಬಂಧವಿದೆ. ಜರ್ಮನಿಯ ಮೊಟ್ಟಮೊದಲ ಸಂಸ್ಕೃತ ವಿದ್ವಾಂಸರೆಂದರೆ ಹದಿನೇಳನೆಯ ಶತಮಾನದಲ್ಲಿದ್ದ Heinrich Roth (1620-1668). ಇವರು ಸಂಸ್ಕೃತ ವ್ಯಾಕರಣವನ್ನು ಲ್ಯಾಟಿನ್ ಭಾಷೆಯಲ್ಲಿ ಬರೆದವರು. ಕಾಳಿದಾಸನ ಪ್ರಸಿದ್ಧ ನಾಟಕವಾದ ಅಭಿಜ್ಞಾನ ಶಾಕುಂತಲವನ್ನು ಜರ್ಮನ್ ಭಾಷೆಗೆ ತರ್ಜುಮೆ ಮಾಡಿದವರು Georg Forster (1754-1794). ಜರ್ಮನಿಯಲ್ಲಿ ಲ್ಯಾಟಿನ್ ಭಾಷೆಯ ಅನುವಾದದೊಂದಿಗೆ 1820ರಲ್ಲಿ ಪ್ರಕಟವಾದ ಸಂಸ್ಕೃತ ಗ್ರಂಥವೆಂದರೆ ಭಗವದ್ಗೀತೆ. ಅನುವಾದಕರು ಬಾನ್ ವಿಶ್ವವಿದ್ಯಾನಿಲಯದ ಮೊಟ್ಟಮೊದಲ ಸಂಸ್ಕೃತ ಪ್ರೊಫೆಸರಾದ Schlegel ಅವರು. ಕ್ರಿ.ಪೂ 5ನೆಯ ಶತಮಾನದಲ್ಲಿ ಮಹರ್ಷಿ ಪಾಣಿನಿಯಿಂದ ವಿರಚಿತವಾದ 'ಅಷ್ಟಾಧ್ಯಾಯೀ' ಎಂಬ ಅದ್ಭುತ ವ್ಯಾಕರಣ ಗ್ರಂಥವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿ ಜರ್ಮನ್ ಭಾಷೆಯಲ್ಲಿ ಅನುವಾದಿಸಿದ ಸಂಸ್ಕೃತ ವಿದ್ವಾಂಸರೆಂದರೆ Otto Boehtlingk (1887). ಇನ್ನು ಋಗ್ವೇದವನ್ನು ಸಂಪಾದಿಸಿದ "ಮೋಕ್ಷಮೂಲರ ಭಟ್ಟ" ಎಂದು ತಮ್ಮ ಹೆಸರನ್ನು ಬ್ರಾಹ್ಮಣೀಕರಣಗೊಳಿಸಿಕೊಂಡ ಮ್ಯಾಕ್ಸ್ ಮುಲ್ಲರ್ ರವರ ಹೆಸರನ್ನು ಕೇಳದವರಿಲ್ಲ. ಹೀಗೆ ಜರ್ಮನಿಯಲ್ಲಿ ಸಂಸ್ಕೃತ ಭಾಷೆ, ಸಾಹಿತ್ಯ ಮತ್ತು ಭಾರತೀಯ ದಾರ್ಶನಿಕ ತತ್ವಗಳನ್ನು ಕುರಿತಂತೆ ಆಳವಾದ ಅಧ್ಯಯನ ಮಾಡಿದ ಸಂಸ್ಕೃತ ವಿದ್ವಾಂಸರ ಒಂದು ದೊಡ್ಡ ಪರಂಪರೆಯೇ ಇದೆ. ನಮ್ಮ ದೇಶದಲ್ಲಿ "ಮೃತಭಾಷೆ"ಯೆಂದು ಅವಜ್ಞೆಗೆ ಗುರಿಯಾದ ಸಂಸ್ಕೃತಕ್ಕೆ "ಎರಡನೆಯ ಮಾತೃದೇಶ" ವೆಂದು ಪ್ರಸಿದ್ಧಿಯನ್ನು ಪಡೆದ ಜರ್ಮನಿಗೆ ಅನೇಕ ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ಇತ್ತೀಚೆಗೆ ಧಾವಿಸುತ್ತಿದ್ದಾರೆ.
ಜರ್ಮನಿಯ ಪಕ್ಕದ ದೇಶವೇ ಆಸ್ಟ್ರಿಯಾ, ಆಲ್ಫಸ್ ಪರ್ವತ ಶ್ರೇಣಿಯ ತಪ್ಪಲಿನಲ್ಲಿ ಪ್ರಾಕೃತಿಕ ಸೊಬಗಿನಿಂದ ಕೂಡಿದ ಸುಂದರ ದೇಶ. ನಾಲ್ಕು ದಶಕಗಳ ಹಿಂದೆ (1976) ಕಾಶೀ ಹಿಂದೂ ವಿಶ್ವವಿದ್ಯಾನಿಲಯದಲ್ಲಿ (BHU) ಸಂಶೋಧನಾ ಪ್ರಬಂಧವನ್ನು ಮಂಡಿಸಿ ಡಾಕ್ಟರೇಟ್ ಪದವಿಯನ್ನು ಗಳಿಸಿದ ಮೇಲೆ ಆಸ್ಟ್ರಿಯಾದ ವಿಯೆನ್ನಾ ವಿಶ್ವವಿದ್ಯಾನಿಲಯದಲ್ಲಿ ಉನ್ನತ ವ್ಯಾಸಂಗ ಮಾಡಲು ಅಲ್ಲಿಯ ಆಫ್ರೋ ಏಷ್ಯನ್ ಸಂಸ್ಥೆಯಿಂದ ನಮಗೆ ಎರಡು ವರ್ಷಗಳ ಕಾಲಾವಧಿಗೆ ಫೆಲೋಷಿಪ್ ದೊರೆತಿತ್ತು. ಆ ಫೆಲೋಷಿಪ್ ದೊರೆಯಲು ಕಾರಣರಾದವರೆಂದರೆ ಆಗ ವಿಯೆನ್ನಾ ವಿಶ್ವವಿದ್ಯಾನಿಲಯದ ಸಂಸ್ಕೃತ ಪ್ರೊಫೆಸರ್ ಆಗಿದ್ದ Gerhard Oberhammer ಅವರು. ನಮಗೆ ವೈಯಕ್ತಿಕವಾಗಿ ತೀರಾ ಅಪರಿಚಿತರಾಗಿದ್ದರೂ ಅವರು ನಮ್ಮ ಹೆಸರನ್ನು ಶಿಫಾರಸ್ಸು ಮಾಡಲು ಕಾರಣ ನಮ್ಮ ಪಿ.ಎಚ್.ಡಿ. ಮಹಾಪ್ರಬಂಧದ ಮೂವರು ಪರೀಕ್ಷಕರಲ್ಲಿ ಅವರು ಬಾಹ್ಯಪರೀಕ್ಷಕರಾಗಿದ್ದರೆಂಬ ಸಂಗತಿ ಅಲ್ಲಿಗೆ ಹೋದ ಮೇಲೆ ತಿಳಿಯಿತು. ಅಲ್ಲಿಯ ವಿಶ್ವವಿದ್ಯಾನಿಲಯದಲ್ಲಿ ಪ್ರವೇಶ ಪಡೆಯಲು ಜರ್ಮನ್ ಭಾಷಾ ಜ್ಞಾನ ಅನಿವಾರ್ಯವಾಗಿತ್ತು. ಅದಕ್ಕಾಗಿ ವಿಯೆನ್ನಾಕ್ಕೆ ಹೋಗುವ ಮೊದಲು ಜರ್ಮನ್ ಭಾಷಾ ಪರಿಣತಿಯನ್ನು ಪಡೆಯಲು ಪುಣೆಯ ಮ್ಯಾಕ್ಸ್ ಮುಲ್ಲರ್ ಸಂಸ್ಥೆಯನ್ನು ಸೇರಿದಾಗ ಓದಿದ ಎರಡು ರೋಚಕ ಕಥೆಗಳು ಹೀಗಿವೆ:
ಒಂದು ನಗರದ ಹೊರ ವಲಯದಲ್ಲಿ ದೊಡ್ಡ ಬಂಗಲೆಯಿತ್ತು. ಅದರಲ್ಲಿ ವಾಸವಾಗಿದ್ದ ಕುಟುಂಬದ ಸದಸ್ಯರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಪ್ರೇತಾತ್ಮ ನಿತ್ಯವೂ ಕಾಡಿಸುತ್ತಿದೆಯೆಂದು ಕುಟುಂಬದವರು ಆ ಬಂಗಲೆಯನ್ನು ತೊರೆದು ಬೇರೆಡೆ ಮನೆ ಮಾಡಿದರು. ಹೀಗಾಗಿ ಅದಕ್ಕೆ ಭೂತ ಬಂಗಲೆಯೆಂಬ ಅಪಖ್ಯಾತಿ ಅಂಟಿಕೊಂಡಿತ್ತು. ಅದರಲ್ಲಿ ಯಾರೂ ವಾಸ ಮಾಡಲು ಮುಂದಾಗುತ್ತಿರಲಿಲ್ಲ. “ಭೂತ ಗೀತ ಎಲ್ಲ ಸುಳ್ಳು ಕಟ್ಟುಕಥೆ'' ಎಂದೊಬ್ಬ ವಿಚಾರವಾದಿ ವಾದಿಸಿದ. "ಹಾಗಾದರೆ, ಭೂತ ಎಂಬುದು ಸುಳ್ಳು ಎಂದು ಹೇಳುವ ನೀನು ಆ ಬಂಗಲೆಯ ಮಂಚದ ಮೇಲೆ ಒಂದು ರಾತ್ರಿ ಮಲಗಿ ಬದುಕಿ ಬಾ ನೋಡೋಣ" ಎಂದು ಸವಾಲು ಹಾಕಿದರು. ಆ ಪಣವನ್ನು ಸ್ವೀಕರಿಸಿದ ಆ ವಿಚಾರವಾದಿ ಒಂದು ರಾತ್ರಿ ಬಂಗಲೆ ಪ್ರವೇಶಿಸಿ ಕೋಣೆಯ ಮಂಚದ ಮೇಲೆ ಮಲಗಿದ. ಆದರೆ ಅವನಿಗೆ ಒಳಗೊಳಗೇ ಅವ್ಯಕ್ತ ಭಯ ಕಾಡುತ್ತಲೇ ಇತ್ತು. ತನ್ನ ರಕ್ಷಣೆಗೆಂದು ತಲೆದಿಂಬಿನ ಪಕ್ಕದಲ್ಲಿ ಒಂದು ಪಿಸ್ತೂಲನ್ನು ಇಟ್ಟುಕೊಂಡಿದ್ದ. ಅಂತಹ ಸನ್ನಿವೇಶದಲ್ಲಿ ಅವನಿಗೆ ನಿದ್ದೆ ಎಲ್ಲಿಂದ ಬರಬೇಕು! ಮಧ್ಯರಾತ್ರಿ ಗಾಳಿ ಜೋರಾಗಿ ಬೀಸತೊಡಗಿತು. ಕಿಟಕಿ ಬಾಗಿಲುಗಳು ಬಡಿದುಕೊಳ್ಳಲಾರಂಭಿಸಿದುವು. ಮಬ್ಬುಗತ್ತಲಲ್ಲಿ ಕಿಟಕಿಯತ್ತ ಕಣ್ಣು ಹಾಯಿಸಿದಾಗ ವಿಕೃತ ಆಕೃತಿಯೊಂದು ಕಾಣಿಸಿತು. ಅವನ ಎದೆ ಹೊಡೆದುಕೊಳ್ಳಲಾರಂಭಿಸಿತು. ಮಿಸುಕಾಡದೆ ತನ್ನ ತಲೆದಿಂಬಿನ ಪಕ್ಕ ಇಟ್ಟುಕೊಂಡಿದ್ದ ಪಿಸ್ತೂಲನ್ನು ಕೈಗೆತ್ತಿಕೊಂಡ. "ಯಾರು ನೀನು? ಇಲ್ಲಿಂದ ತೊಲಗು. ಮೂರು ಎಣಿಸುವುದರೊಳಗೆ ಹೋಗದಿದ್ದರೆ ಶೂಟ್ ಮಾಡುತ್ತೇನೆ" ಎಂದು ಏರುದನಿಯಲ್ಲಿ ಎಚ್ಚರಿಕೆ ಕೊಟ್ಟು ಎಣಿಸತೊಡಗಿದ: "ಒಂದು...ಎರಡು...ಮೂರು!" ಉಹುಂ, ಆ ಭೂತ ಹಿಂದೆ ಸರಿಯಲಿಲ್ಲ. ಒಂದಲ್ಲ ಎರಡಾಗಿ ಮೂರಾಗಿ ಕಿಟಿಕಿಯೊಳಗೆ ನುಗ್ಗಿ ಹತ್ತಿರ ಬರತೊಡಗಿದವು. "ಢಮಾರ್" ಎಂದು ಪಿಸ್ತೂಲಿನಿಂದ ಗುಂಡು ಹಾರಿಸಿಯೇ ಬಿಟ್ಟ. ಅದು ಭೂತವೂ ಆಗಿರಲಿಲ್ಲ, ಪ್ರೇತವೂ ಆಗಿರಲಿಲ್ಲ. ಮೈಮೇಲೆ ತುಂಬ ಹೊದ್ದುಕೊಂಡು ಕಿಟಕಿಯತ್ತ ಕಾಲು ಮಾಡಿಕೊಂಡು ಮಲಗಿದ್ದ ಅವನಿಗೆ ಕಾಲು ಬುಡದತ್ತ ಹೊದಿಕೆ ಸರಿದು ಭಯದಿಂದ ಅದುರುತ್ತಿದ್ದ ಅವನ ಕಾಲ್ಬೆರಳುಗಳೇ ಭೂತವಾಗಿ ಕಾಣಿಸಿದ್ದವು! ಗುರಿ ಇಟ್ಟು ಹೊಡೆದ ಗುಂಡು ಕಾಲಿಗೆ ತಗುಲಿ ತೀವ್ರ ರಕ್ತಸ್ರಾವವಾಗಿ ರಕ್ತದ ಮಡುವಿನಲ್ಲಿ ಬಿದ್ದು ಅವನ ಪ್ರಾಣಪಕ್ಷಿ ಹಾರಿಹೋಯಿತು!
ಎರಡನೆಯ ಜರ್ಮನ್ ಕಥೆ: ಅದೊಂದು ಗುಡ್ಡದ ಮೇಲಿದ್ದ ಅತಿ ಹಳೆಯ ಕಾಲದ ಕೋಟೆ. ಅಲ್ಲಿ ದೆವ್ವವಿದೆ ಎಂದೇ ಜನರೆಲ್ಲರ ನಂಬಿಕೆ. ಅದೂ ಅಮಾವಾಸ್ಯೆಯ ದಿನ ಕೋಟೆಯೊಳಗೆ ಹೋದವರು ಯಾರೂ ಜೀವಸಹಿತ ಹಿಂದಿರುಗುವುದಿಲ್ಲ ಎಂಬುದು ಎಲ್ಲರ ಅಂಬೋಣ. ಇನ್ನೊಬ್ಬ ವಿಚಾರವಾದಿ "ಅದನ್ನು ನಾನು ನಂಬುವುದಿಲ್ಲ. ಅದೆಲ್ಲ ಡೋಂಗಿ ಕಟ್ಟು ಕಥೆ'' ಎಂದು ಉಡಾಫೆ ಮಾತನಾಡಿದ. "ಹಾಗಾದರೆ ಮುಂದಿನ ಅಮಾವಾಸ್ಯೆ ರಾತ್ರಿ ನೀನು ಆ ಕೋಟೆಯೊಳಗೆ ಹೋಗಿ ವಾಪಾಸು ಬಾ ನೋಡೋಣ!" ಎಂದು ಜನ ಸವಾಲು ಹಾಕಿದರು. “ಓಹೋ! ಅದಕ್ಕೇನಂತೆ, ಅದರೊಳಗೆ ಹೋಗಿ ವಾಪಾಸು ಬರುತ್ತೇನೆ, ನೋಡುತ್ತಿರಿ” ಎಂದನು ಆ ವಿಚಾರವಾದಿ. "ಹೇ ಬುರುಡೆ ಬಿಡಬೇಡ. ನೀನು ಒಳಗೆ ಹೋಗದೆಯೇ, ಬೆಳಗ್ಗೆ ಹೋಗಿ ಬಂದೆ ಎಂದು ಸುಳ್ಳು ಹೇಳಿದರೆ ಏನು ಮಾಡುವುದು? ನೀನು ಕೋಟೆಯೊಳಗೆ ಹೋಗಿ ಬಂದುದಕ್ಕೆ ಸಾಕ್ಷಿಗಾಗಿ ಅಲ್ಲಿರುವ ಹಳೆಯ ಮರದ ಕೆಳಗೆ ಗುರುತಿಗಾಗಿ ಒಂದು ಮೊಳೆ ಹೊಡೆದು ಬರಬೇಕು” ಎಂದು ಜನರು ಷರತ್ತು ಹಾಕಿದರು. ಅದಕ್ಕೆ ಒಪ್ಪಿಕೊಂಡ ಆ ವಿಚಾರವಾದಿ ಅಮಾವಾಸ್ಯೆಯ ಮಧ್ಯರಾತ್ರಿ ಮೊಳೆ ಮತ್ತು ಸುತ್ತಿಗೆ ಸಮೇತ ಕೋಟೆಯೊಳಗೆ ಪ್ರವೇಶಿಸಿದ. ಗವ್ವೆನ್ನುವ ಕತ್ತಲು, ಕೈಯಲ್ಲಿ ಮಿಣಮಿಣವೆನ್ನುವ ಕಂದೀಲು ಹಿಡಿದು ಮರವನ್ನು ಹುಡುಕಿಕೊಂಡು ಹೊರಟ. ಮರ ಸಿಕ್ಕಿತು. ಅದರ ಕೆಳಗೆ ಕುಳಿತು ನೆಲಕ್ಕೆ ಮೊಳೆಯಿಟ್ಟು ಸುತ್ತಿಗೆಯಿಂದ ಹೊಡೆದೊಡನೆಯೇ ಭಯ ಹುಟ್ಟಿಸುವ ವಿಚಿತ್ರ ಶಬ್ದವೊಂದು ಕೇಳಿಸತೊಡಗಿತು. ಬೇಗನೆ ಮೇಲೆದ್ದು ಹೊರಡಲು ಪ್ರಯತ್ನಿಸಿದ. ಆದರೆ ಮುಂದೆ ಹೋಗಲು ಆಗಲಿಲ್ಲ. ಹೆಜ್ಜೆ ಕಿತ್ತಿಡದಂತೆ ಭೂತ ಕಾಲು ಎಳೆಯುತ್ತಿರುವಂತೆ ಭಾಸವಾಯಿತು. ಶತಪ್ರಯತ್ನ ಮಾಡಿದರೂ ಒಂದು ಹೆಜ್ಜೆ ಮುಂದಿಡಲು ಆಗಲಿಲ್ಲ! ಎದೆ ನಗಾರಿ ಬಾರಿಸತೊಡಗಿತು. ಅಲ್ಲಿಯೇ ಕುಸಿದು ಬಿದ್ದ. ಬೆಳಗ್ಗೆ ಕೋಟೆಯೊಳಗೆ ಜನ ಬಂದು ನೋಡಿದಾಗ ಆತ ಸತ್ತುಬಿದ್ದಿರುವುದು ಕಂಡಿತು. ಅವನು ಮೊಳೆ ಹೊಡೆದಿದ್ದೇನೋ ನಿಜ. ಆದರೆ ಆತ ಕತ್ತಲಲ್ಲಿ ತನ್ನ ಬೆಲ್ ಬಾಟಂ ಪ್ಯಾಂಟಿನ ಅಂಚನ್ನು ಸೇರಿಸಿ ನೆಲಕ್ಕೆ ಮೊಳೆ ಹೊಡೆದಿದ್ದರಿಂದ ಮುಂದೆ ಹೆಜ್ಜೆ ಇಡಲು ಆಗಿರಲಿಲ್ಲ!
ಮೇಲಿನ ಎರಡೂ ಕಥೆಗಳಲ್ಲಿ ನಾವು ಅಗತ್ಯವಾಗಿ ಗಮನಿಸಬೇಕಾದ ಒಂದು ಮನೋವೈಜ್ಞಾನಿಕ ಸಂಗತಿಯಿದೆ. ಈ ಕಥೆಗಳಲ್ಲಿ ಬರುವ ವಿಚಾರವಾದಿಗಳು ನಿಜವಾಗಿಯೂ ವಿಚಾರವಾದಿಗಳೇ ಎಂಬುದು ಪ್ರಶ್ನಾರ್ಹ. ಕೆಲವರು ತಮ್ಮನ್ನು ತಾವು ವಿಚಾರವಾದಿಗಳು ಎಂದೇ ಭಾವಿಸುತ್ತಾರೆ, ಬೇರೆಯವರನ್ನೂ ನಂಬಿಸುತ್ತಾರೆ. ಆದರೆ ಅವರ ಸುಪ್ತ ಮನಸ್ಸು ಮಾತ್ರ ಇದಕ್ಕೆ ವಿರುದ್ಧವಾಗಿಯೇ ವರ್ತಿಸುತ್ತದೆ. ಭೂತ ಬಂಗಲೆಯಲ್ಲಿ ಮಲಗಿದ ವಿಚಾರವಾದಿ ತನ್ನ ಕಾಲಿಗೇ ಗುಂಡು ಹಾರಿಸಿಕೊಂಡು ಸತ್ತದ್ದೇಕೆ? ಮನೆಯಲ್ಲಿ ನಿರುಮ್ಮಳವಾಗಿ ಮಲಗಿ ನಿದ್ದೆ ಮಾಡಿದಂತೆ ಅಲ್ಲಿ ನಿದ್ರೆ ಮಾಡಲು ಏಕೆ ಆಗಲಿಲ್ಲ? ನಿದ್ದೆಯಿಲ್ಲದೆ ಭಯದಿಂದ ತೊಳಲುತ್ತಿದ್ದ ಅವನಿಗೆ ಕಾಲಿನ ಬೆರಳುಗಳೇ ಭೂತದ ಕೋರೆ ದಾಡೆಗಳಂತೆ ಕಂಡವು. ಇದಕ್ಕೆ ಆತನ ಸುಪ್ತಮನಸ್ಸಿನಲ್ಲಿದ್ದ ಭಯ ಕಾರಣವೇ ಹೊರತು ಬೇರೆಯಲ್ಲ.
ಇನ್ನು ಎರಡನೆಯ ಕಥೆಯ ನಾಯಕನ ಪಾಡೂ ಇದೇ ಆಗಿದೆ. ತಾನು ಮೊಳೆ ಹೊಡೆದು ವಾಪಾಸು ಹೊರಟಾಗ ಕಾಲನ್ನು ಹಿಡಿದು ಹಿಂದಕ್ಕೆ ಜಗ್ಗುತ್ತಿದ್ದುದೇನೆಂಬ ಶೋಧನೆಗೆ ಆತ ಹೋಗಲೇ ಇಲ್ಲ. ದೆವ್ವ ಎಂಬುದು ಕೇವಲ ಭ್ರಮೆ ಎಂಬುದು ಅವನ ಮನಸ್ಸಿಗಲ್ಲಿ ಗಟ್ಟಿಗೊಂಡಿದ್ದರೆ ಕಾಲು ಹಿಡಿದು ಜಗ್ಗುತ್ತಿರುವುದಕ್ಕೆ ಕಾರಣವೇನೆಂದು ಕಾಲನ್ನು ಮುಟ್ಟಿ ಪರೀಕ್ಷಿಸುತ್ತಿದ್ದ. ಆ ಯಾವ ಗೋಜಿಗೂ ಹೋಗದಂತೆ ಮಾಡಿದ್ದು ಅವನ ಸುಪ್ತ ಮನಸ್ಸಿನಲ್ಲಿ ಅವ್ಯಕ್ತವಾಗಿ ಕುಳಿತಿದ್ದ ಪ್ರಾಣಭಯವೆಂಬ ಭೂತ! ಆ ಅವ್ಯಕ್ತ ಭಯ ಅವಕಾಶಕ್ಕಾಗಿ ಕಾಯುತ್ತಿರುವ ಡ್ಯಾಮಿನ ನೀರಿನಂತೆ ಮನಸ್ಸಿನ ಕ್ರೆಸ್ಟ್ ಗೇಟನ್ನು ತೆರೆದುಕೊಂಡು ರಭಸವಾಗಿ ಹೊರನುಗ್ಗುತ್ತದೆ. ಅಲ್ಲಿಗೆ ಅವನ ವಿಚಾರವಾದ ಸಮಾಧಿಯಾಗುತ್ತದೆ, ಅವನೂ ಸಮಾಧಿಯಾಗುತ್ತಾನೆ. ಈ ಕಥೆಗಳನ್ನು ನಿರೂಪಿಸುವಾಗ ನಮಗೆ ನೆನಪಾಗಿದ್ದು ಅಲ್ಲಮಪ್ರಭು ಮತ್ತು ಬಸವಣ್ಣನವರ ಈ ಮುಂದಿನ ವಚನಗಳು:
ಇಲ್ಲದ ಶಂಕೆಯನು ಉಂಟೆಂದು ಭಾವಿಸಿದಡೆ
ಅದು ಕಣ್ಣ ಮುಂದೆ ರೂಪಾಗಿ ಕಾಡುತ್ತಿಪ್ಪುದು. - ಅಲ್ಲಮ
ಸಂಜೆಯ ಮಂಜಿನ ಕಪ್ಪು-
ಅಂಜಿದಡೆ ಶಂಕೆ ತದ್ರೂಪವಾಗಿ ನಿಂದಿತ್ತು.
ತನ್ನ ಭವದ ನಟನೆ ನಡೆವನ್ನಕ್ಕ ನಡೆಯಿತ್ತು,
ಅದು ನಿಂದಲ್ಲಿಯೇ ನಿಂದಿತ್ತು.
ಅದರಂತುವನರಿದಡೆ ಹಿಂದೆ ಹುಸಿ,
ಮುಂದೆ ಕೂಡಲಸಂಗಮ ದೇವನ ನಿಲವು ತಾನೆ! - ಬಸವಣ್ಣ
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 23.11.2017