ಹಿಂದಿನ ತಲೆಮಾರಿನ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು

  •  
  •  
  •  
  •  
  •    Views  

ಹಿಂದಿನ ತಲೆಮಾರಿನ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಸಂಬಂಧ ತುಂಬಾ ಮಧುರವಾಗಿತ್ತು. ಎಷ್ಟೋ ಜನ ಅಧ್ಯಾಪಕರು ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು. ಅಂತಹ ಪ್ರೀತಿಯ ಕಾರಣದಿಂದಲೇ ಅನೇಕ ಅತ್ಯದ್ಭುತ ಪ್ರತಿಭೆಗಳು ಬೆಳಕಿಗೆ ಬರಲು ಕಾರಣವಾಯಿತು. ಅವರು ವಿದ್ಯಾರ್ಥಿಯ ಜಾತಿ ಮತವನ್ನು ನೋಡದೆ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ, ಸಹಾಯ ಮಾಡುತ್ತಿದ್ದರು. ಉದಾಹರಣೆಗೆ ತರಗತಿಯಲ್ಲಿ ಬಾಡಿದ ಮುಖಹೊತ್ತು ಕುಳಿತಿದ್ದ ವಿದ್ಯಾರ್ಥಿಯನ್ನು ಅಧ್ಯಾಪಕ ತ.ಸು. ಶಾಮರಾಯರು ಗಮನಿಸಿದರು. ತರಗತಿ ಮುಗಿದ ಮೇಲೆ ಅವನನ್ನು ವಿಚಾರಿಸಿದರು. ಆತ ಹಳ್ಳಿಯಿಂದ ಮೈಸೂರು ಮಹಾರಾಜ ಕಾಲೇಜಿಗೆ ಓದಲು ಬಂದಿದ್ದ ಬಡ ಪ್ರೈಮರಿ ಶಾಲೆಯ ಮಾಸ್ತರರ ಮಗ. ಕೈಯಲ್ಲಿ ಹಣವಿರಲಿಲ್ಲ. ಊಟ ಮತ್ತು ವಸತಿಗಾಗಿ ಪರದಾಡುತ್ತಿದ್ದ. ಸಂಕೋಚ ಸ್ವಭಾವದ ಹುಡುಗ. ಶಾಮರಾಯರು ಕನಿಕರಗೊಂಡು ಆತನನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಒತ್ತಾಯ ಮಾಡಿ ಊಟ ಮಾಡಿಸಿದರು. ಆತನಿಗೆ ಸುತ್ತೂರು ಮಠದಲ್ಲಿ ಊಟ ವಸತಿ ವ್ಯವಸ್ಥೆಯನ್ನು ಮುಂದೆ ನಿಂತು ಮಾಡಿಸಿದರು. ಹೀಗೆ ಆ ಕನ್ನಡ ಅಧ್ಯಾಪಕರ ಕಳಕಳಿಯಿಂದ ಓದಿ ಮುಂದೆ ಬಂದ ಆ ವಿದ್ಯಾರ್ಥಿ ಬೇರೆ ಯಾರೂ ಅಲ್ಲ. ಕನ್ನಡದ ಹೆಮ್ಮೆಯ ರಾಷ್ಟ್ರಕವಿಯಾಗಿ ಹೆಸರು ಮಾಡಿದ ಜಿ.ಎಸ್. ಶಿವರುದ್ರಪ್ಪನವರು!

ಹಿಂದಿನ ಕಾಲದ ಅಧ್ಯಾಪಕರುಗಳಿಗೆ ಬರುತ್ತಿದ್ದ ವೇತನವೂ ಅತ್ಯಲ್ಲವೇ! ಮಡದಿ ಮಕ್ಕಳನ್ನು ಸಾಕಲು ಹೆಣಗಾಡಬೇಕಾದ ಆ ಅಲ್ಪವೇತನದಲ್ಲಿಯೇ ತಮ್ಮ ವಿದ್ಯಾರ್ಥಿಗಳ ಯೋಗಕ್ಷೇಮವನ್ನೂ ಅವರು ನೋಡಿಕೊಳ್ಳುತ್ತಿದ್ದರೆಂದರೆ ಆಶ್ಚರ್ಯವಾಗುತ್ತದೆ. ಈಗ ಅಧ್ಯಾಪಕರಾದವರಿಗೆ ಅಂದು ಇದ್ದ ಅಲ್ಪ ವೇತನದ ಸಮಸ್ಯೆ ಇಲ್ಲ. ಆದರೂ ಅಂದಿನ ವಿದ್ಯಾರ್ಥಿ-ಅಧ್ಯಾಪಕರ ಸುಮಧುರ ಸಂಬಂಧ ಈಗ ಕಾಣೆಯಾಗಿದೆ. ವಿದ್ಯಾರ್ಥಿಗಳಿಗೂ ಸಹ ನಾನಾ ರೀತಿಯ ವಿದ್ಯಾರ್ಥಿ ವೇತನಗಳು, ಹಾಸ್ಟೆಲ್ ಸೌಲಭ್ಯಗಳು ದಂಡಿಯಾಗಿವೆ. ಯಾವುದೇ ಕಷ್ಟ ಅಧ್ಯಾಪಕರಿಗೆ ಬರಬಾರದು, ಅವರು ನಿರುಮ್ಮಳವಾಗಿ ಅಧ್ಯಯನ, ಅಧ್ಯಾಪನ, ಸಂಶೋಧನೆಗಳಲ್ಲಿ ತೊಡಗಿಕೊಳ್ಳಬೇಕೆಂಬ ಉದ್ದೇಶದಿಂದ ಸರಕಾರವು ಈಗ ಕೈತುಂಬ ವೇತನವನ್ನು ನೀಡುತ್ತಿದೆ. ಆದರೆ ಹಿಂದಿನ ತಲೆಮಾರಿನವರು ಮಾಡಿದಂತಹ ಅಮೂಲ್ಯ ಸಂಶೋಧನೆಗಳನ್ನು ಈಗಲೂ ಮಾಡಲಾಗುತ್ತಿದೆಯೇ? ಎಂದರೆ ಇಲ್ಲವೆಂದು ಹೇಳಲು ವಿಷಾದವೆನಿಸುತ್ತದೆ. ಈಗ ಹೊರಬರುವ ಸಂಶೋಧನಾ ಗ್ರಂಥಗಳ ಗುಣಮಟ್ಟವನ್ನು ಕುರಿತು ಹೇಳುವುದೇ ಬೇಡ. ಪ್ರಾಧ್ಯಾಪಕರು ಬಡ್ತಿಗಾಗಿ ಸಂಶೋಧನೆಯನ್ನು ಕಡ್ಡಾಯವಾಗಿ ಮಾಡಬೇಕೆಂಬ ಸರಕಾರದ ನಿಯಮವನ್ನು ಪಾಲಿಸಲೆಂದೇ ಈಗಲೂ ಸಂಶೋಧನ ಗ್ರಂಥಗಳು ಹೊರಬರುತ್ತಿವೆ. ನಿಯಮ ಪೂರೈಕೆಯ ಸೀಮಿತ ಏಕೋದ್ದೇಶದ ಈ ಗ್ರಂಥಗಳ ಗುಣಮಟ್ಟ ಹೇಗೆ ತಾನೇ ಉನ್ನತವಾಗಿದ್ದೀತು!

ಹಿಂದಿನ ತಲೆಮಾರಿನ ಅಧ್ಯಾಪಕರು ಒಳ್ಳೆಯ ಅಧ್ಯಾಪಕರೆಂದು ವಿದ್ಯಾರ್ಥಿಗಳಿಂದ ಮೆಚ್ಚುಗೆ ಪಡೆದಿದ್ದರಲ್ಲದೆ ಒಳ್ಳೆಯ ಸಾಹಿತಿಗಳು ಮತ್ತು ಲೇಖಕರೂ ಆಗಿದ್ದರು. ಒಳ್ಳೆಯ ಲೇಖಕರಾದ ಮಾತ್ರಕ್ಕೆ ಒಳ್ಳೆಯ ಅಧ್ಯಾಪಕರಾಗಲು ಸಾಧ್ಯವೆಂದು ಹೇಳಲು ಬರುವುದಿಲ್ಲ. ವಾಕ್ ಪಟುತ್ವ ಬೇರೆ, ಲೇಖನ ಸಾಮರ್ಥ್ಯ ಬೇರೆ, ಬೋಧನಾ ಸಾಮರ್ಥ್ಯವೂ ಬೇರೆ. ಡಿ.ಎಲ್.ಎನ್. ಅವರು ಅಪ್ರತಿಭ ಪಾಂಡಿತ್ಯ ಹೊಂದಿದ್ದರೂ ಉತ್ತಮ ಭಾಷಣಕಾರರೇನೂ ಆಗಿರಲಿಲ್ಲ. ಆದರೆ ಅವರು ಸಮರ್ಥ ಅಧ್ಯಾಪಕರಾಗಿದ್ದರು. ವಾಕ್ ಪಟುತ್ವ ಇರುವವರು ಅರಳು ಹುರಿದಂತೆ ವೇದಿಕೆಯ ಮೇಲೆ ಮಾತನಾಡಬಲ್ಲರು. ಆದರೆ ಅವರಿಗೆ ವಿದ್ಯಾರ್ಥಿಗಳ ಮನಸ್ಸು ಅರಳುವ ಹಾಗೆ ಬೋಧನೆ ಮಾಡುವ ಕ್ಷಮತೆ ಇರುತ್ತದೆ ಎಂದು ಹೇಳಲಾಗದು. ಸಾರ್ವಜನಿಕವಾಗಿ ಅತ್ಯಾಕರ್ಷಕವಾಗಿ ಭಾಷಣ ಮಾಡುವ ಯಶಸ್ವೀ ವಾಗಿಗಳೇ ಬೇರೆ. ತರಗತಿಗಳಲ್ಲಿ ವಿದ್ಯಾರ್ಥಿಗಳ ಮನಸ್ಸನ್ನು ಆಕರ್ಷಿಸುವಂತೆ ಪಾಠ ಮಾಡುವ ಅಧ್ಯಾಪಕರೇ ಬೇರೆ.

ಬಹಳ ಹಿಂದೆ ಬೆಂಗಳೂರಿನ ಹೈಕೋರ್ಟಿನಲ್ಲಿ ಅಡ್ವೊಕೇಟ್ ಜನರಲ್ ಆಗಿದ್ದ ದಿವಂಗತ ಜಿ.ಚನ್ನಪ್ಪನವರ ಅಪ್ರಕಟಿತ ಜೀವನ ಚರಿತ್ರೆಯ ಹಸ್ತಪ್ರತಿಯನ್ನು ಮೊನ್ನೆ ಓದುತ್ತಿದ್ದಾಗ ಕಂಡು ಬಂದ ಹಿರಿಯ ತಲೆಮಾರಿನ ಪ್ರಾಧ್ಯಾಪಕರನ್ನು ಕುರಿತ ಕೆಲವು ಸ್ಮರಣೀಯ ಘಟನೆಗಳು ಹೀಗಿವೆ: ಅವರು ಇಲ್ಲಿಗೆ ಸುಮಾರು ನೂರು ವರ್ಷಗಳ (1919) ಹಿಂದೆ ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿ.ಎ. ಓದಲು ಪ್ರವೇಶ ಪಡೆದರು. ಆಗ ಕಾಲೇಜಿನ ಪ್ರಿನ್ಸಿಪಾಲರಾಗಿದ್ದವರು ಎನ್.ಎಸ್.ಸುಬ್ಬರಾವ್ ಅವರು. ಇಂಗ್ಲೆಂಡ್ ಮೂಲದ ಪ್ರೊಫೆಸರುಗಳಾದ J.C. Rollo ಮತ್ತು Albert Mackintosh  ಅವರಲ್ಲದೇ "ಕನ್ನಡದ ಕಣ್ವ" ಎನಿಸಿದ ಬಿ.ಎಂ.ಶ್ರೀಕಂಠಯ್ಯನವರು ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದರು. ಅಸಿಸ್ಟೆಂಟ್ ಪ್ರೊಫೆಸರಾದ ಬಿ.ಕೃಷ್ಣಪ್ಪನವರು ಮತ್ತು ಪಂಡಿತರಾದ ವರದಾಚಾರ್ಯರು ಕನ್ನಡ ಬೋಧಿಸುತ್ತಿದ್ದರು. ರಾಜ್ಯಶಾಸ್ತ್ರವನ್ನು ಪ್ರೊ. ವಾಡಿಯಾ ಬೋಧಿಸುತ್ತಿದ್ದರೆ ತತ್ವಶಾಸ್ತ್ರವನ್ನು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರು ಬೋಧಿಸುತ್ತಿದ್ದರು. ಇಂತಹ ಹೆಸರಾಂತ ಪ್ರಾಧ್ಯಾಪಕರ ವ್ಯಕ್ತಿತ್ವ ಮತ್ತು ಅವರು ಮಾಡುತ್ತಿದ್ದ ಪಾಠ ಪ್ರವಚನಗಳನ್ನು ಕುರಿತು ಚೆನ್ನಪ್ಪನವರು ವಿದ್ಯಾರ್ಥಿಗಳಾಗಿ ದಾಖಲಿಸಿದ ಅಂದಿನ ಮಹಾರಾಜ ಕಾಲೇಜಿನ ದಿನಮಾನಗಳು ಸ್ಮರಣೀಯವಾಗಿವೆ:

ಆಗ ಕಾಲೇಜಿನಲ್ಲಿ "ವಾರ್ಡ್" ಪದ್ಧತಿ ಇತ್ತು. ಅಂದರೆ ಪ್ರತಿಯೊಬ್ಬ ಪ್ರೊಫೆಸರಿಗೂ ಕೆಲವು ವಿದ್ಯಾರ್ಥಿಗಳು ಅವರ ಮೇಲುಸ್ತುವಾರಿಯಲ್ಲಿ ಇರಬೇಕಾಗಿತ್ತು. ಆ ವಿದ್ಯಾರ್ಥಿಗಳು ತಮ್ಮ ಕಷ್ಟಸುಖಗಳನ್ನು ಅವರಲ್ಲಿಗೆ ಹೋಗಿ ನಿಸ್ಸಂಕೋಚವಾಗಿ ಹೇಳಿ ಅವರ ಸಹಾಯ ಬುದ್ದಿವಾದಗಳನ್ನು ಪಡೆಯಬಹುದಾಗಿತ್ತು. 15 ದಿವಸ ಅಥವಾ ತಿಂಗಳಿಗೊಮ್ಮೆ ಅವರು ಆ ವಿದ್ಯಾರ್ಥಿಗಳನ್ನು ತಮ್ಮ ಮನೆಗೆ ಆಹ್ವಾನಿಸಿ ಚಹಾಪಾನೀಯ ಕೊಟ್ಟು ಕಷ್ಟಸುಖಗಳನ್ನು ವಿಚಾರಿಸುತ್ತಿದ್ದರು. ಚೆನ್ನಪ್ಪನವರು ಬಿ.ಎ. ಓದು ಪೂರೈಸುವವರೆಗೂ ಪ್ರೊ ವಾಡಿಯಾರವರ ವಾರ್ಡ್ ಆಗಿದ್ದರಂತೆ.

ಕಾಲೇಜು ಪ್ರಿನ್ಸಿಪಾಲರಾದ ಎನ್.ಎಸ್.ಸುಬ್ಬರಾಯರು ತುಂಬಾ ಕಟ್ಟುನಿಟ್ಟಾದ ಉಪಾಧ್ಯಾಯರು. ಇವರು ಯಾವಾಗಲೂ European Dressನಲ್ಲಿಯೇ ಇರುತ್ತಿದ್ದರು. ಅವರ ಉಡುಪಿನಲ್ಲಿ ಯಾವ ನ್ಯೂನ್ಯತೆಯನ್ನು ಯಾರೂ ಯಾವಾಗಲೂ ಕಂಡುದಿಲ್ಲ. ಅವರಿಗೆ ತುಂಬಾ ಜ್ಞಾಪಕ ಶಕ್ತಿ, ಕಾಲೇಜಿನ ಯಾವ ವಿದ್ಯಾರ್ಥಿಯನ್ನಾದರೂ ಎಲ್ಲಿ ನೋಡಿದರೂ ಗುರ್ತಿಸುತ್ತಿದ್ದರು. ಯಾರಾದರೂ ಕಾಲೇಜ್ ಆವರಣ ಬಿಟ್ಟು ಬೇರೆ ಸ್ಥಳದಲ್ಲಿ ಕಂಡರೆ ಮಾರನೆಯ ದಿನ ತರಗತಿಯಲ್ಲಿ "ನೀನು ಇಂಥ ಸ್ಥಳದಲ್ಲಿ ನಿನ್ನೆ ಸಾಯಂಕಾಲ ಇರಲಿಲ್ಲವೇ?" ಎಂದು ಕೇಳಿ ಛೇಡಿಸುತ್ತಿದ್ದರು. ವಿದ್ಯಾರ್ಥಿಗಳಿಗೆಲ್ಲ ಅವರಲ್ಲಿ ತುಂಬಾ ಭಯ ಭಕ್ತಿ ಇರುತ್ತಿದ್ದಿತು. ಅವರ ಜ್ಞಾಪಕ ಶಕ್ತಿ ಅಮೋಘವಾದದ್ದು. ಅರ್ಥಶಾಸ್ತ್ರವನ್ನು ಚೆನ್ನಾಗಿ ಪಾಠ ಮಾಡುತ್ತಿದ್ದ ಅವರಿಗೆ ಕ್ಲಾಸಿನಲ್ಲಿ ಸ್ವಲ್ಪವೂ ಸದ್ದಿಲ್ಲದೆ ಎಲ್ಲರೂ ಇರಬೇಕಾಗಿತ್ತಲ್ಲದೆ ಅಲ್ಲಿ ಯಾವ ಗುಬ್ಬಿಯಾಗಲೀ ಪಾರಿವಾಳವಾಗಲೀ ಸದ್ದುಮಾಡಿದರೆ ಅವರಿಗೆ ತುಂಬಾ ಸಿಟ್ಟು ಬರುತ್ತಿತ್ತು. ಆದುದರಿಂದ ಅವರು ಪಾಠಕ್ಕೆ ಬಂದಾಗಲೆಲ್ಲ ಒಬ್ಬ ಜವಾನನು ಒಂದು ದೊಡ್ಡದೊಂದು ಗಳಕ್ಕೆ ಬಟ್ಟೆ ಕಟ್ಟಿಕೊಂಡು ತರಗತಿಯ ಪ್ಲಾಟ್ಫಾರಂ ಮೇಲೆ ನಿಂತು ಮೇಲೆ ಇರುತ್ತಿದ್ದ ಗುಬ್ಬಿ ವಗೈರೆ ಪ್ರಾಣಿಗಳನ್ನು ಬೆದರಿಸಿ ಓಡಿಸುತ್ತಿದ್ದನಂತೆ!

ಆಗಿನ ಕಾಲದಲ್ಲಿ ವಿದ್ಯಾರ್ಥಿಗಳೆಲ್ಲ ಬಹುಮಟ್ಟಿಗೆ ಪಂಚೆ ಲುಂಗಿ ಕಟ್ಟಿಕೊಂಡು ಕೋಟು ವಗೈರೆ ಹಾಕಿಕೊಳ್ಳುತ್ತಿದ್ದರು ಮತ್ತು ಆಗಿನ ವಿದ್ಯಾರ್ಥಿಗಳಲ್ಲಿ ಬಹುತೇಕ ಹುಡುಗರು ತಲೆಯಲ್ಲಿ ಜುಟ್ಟು ಬಿಟ್ಟುಕೊಂಡಿರುತ್ತಿದ್ದರು. ಆದುದರಿಂದ ಇಂಗ್ಲೀಷ್ ಪ್ರಾಧ್ಯಾಕರಾಗಿದ್ದ Prof. Albert Mackintosh  ಅವರು ಮೊದಲ ಸಾರಿ ಪರದೇಶದಿಂದ ಬಂದು ಕಾಲೇಜಿಗೆ ಹೋದಾಗ ಅವರು ಅಪ್ಪಿತಪ್ಪಿ Ladies College ಗೆ ಬಂದೆನೆಂದು ತಿಳಿದುಕೊಂಡಿದ್ದರಂತೆ. ಇವರು ಮುಂದೆ Central Colleನಲ್ಲಿ ಪ್ರಿನ್ಸಿಪಾಲರಾಗಿ ನಿವೃತ್ತರಾದ ಮೇಲೆ ಸ್ವದೇಶಕ್ಕೆ ಹಿಂತಿರುಗಿದರು. ಇವರು ತುಂಬಾ ಕನಿಕರ ಉಳ್ಳವರು. ಬಡ ವಿದ್ಯಾರ್ಥಿಗಳನ್ನು ಕಂಡರೆ ಅನೇಕ ವಿಧದಲ್ಲಿ ಹಣ ವಗೈರೆ ಸಹಾಯ ಮಾಡುತ್ತಿದ್ದರು. ಕಾಲೇಜ್ ಫೀ ಇಲ್ಲ, ಪುಸ್ತಕವಿಲ್ಲ ವಗೈರೆ ಬೇಕೆಂದು ಕೇಳಿದ ಯಾವ ವಿದ್ಯಾರ್ಥಿಗೂ ಅವರು ಇಲ್ಲವೆನ್ನುತ್ತಿರಲಿಲ್ಲ. ಇದನ್ನು ತಿಳಿದ ಕೆಲವು ವಿದ್ಯಾರ್ಥಿಗಳು 2-3 ಸಾರಿ ಹೋಗಿ ಹಣ ಪಡೆಯುತ್ತಿದ್ದರು ಮತ್ತು ಬಡವರಲ್ಲದವರೂ ಸಹಾ ಇವರ ಉದಾರವನ್ನು ತಮ್ಮ ಸ್ವಾರ್ಥತೆಗಾಗಿ ಉಪಯೋಗಿಸಿಕೊಳ್ಳುತ್ತಿದ್ದರು.

ಇಂಗ್ಲೀಷ್ ಪಾಠ ಮಾಡುತ್ತಿದ್ದ ಮತ್ತೊಬ್ಬ ಪ್ರಾಧ್ಯಾಪಕರಾದ ಪ್ರೊಫೆಸರ್ ರೋಲೋ ತುಂಬಾ ದೊಡ್ಡ ಮನುಷ್ಯರು. ವಿದ್ಯಾರ್ಥಿಗಳನ್ನು ಕಂಡರೆ ತುಂಬಾ ವಿಶ್ವಾಸ. ಪಾಠ ಮಾಡುವಾಗ ಯಾವಾಗಲೂ ನಗುತ್ತಲೇ ಮಧ್ಯೆ ಮಧ್ಯೆ ಹಾಸ್ಯ ಚಟಾಕಿ ಹಾರಿಸುತ್ತ ಪಾಠ ಮಾಡುವ ವಿಧಾನ ತುಂಬಾ ಚೆನ್ನಾಗಿರುತ್ತಿತ್ತು. ಅವರ ಕ್ಲಾಸಿನ ಪಾಠಕ್ಕೆ ಯಾವ ವಿದ್ಯಾರ್ಥಿಯೂ ತಪ್ಪಿಸಿಕೊಳ್ಳುವ ಯೋಚನೆ ಸಹ ಮಾಡುತ್ತಿರಲಿಲ್ಲ! ತರಗತಿಗೆ ಬರುತ್ತಲೇ ತಮ್ಮ ಜೇಬು ಗಡಿಯಾರವನ್ನು ಮೇಜಿನ ಮೇಲಿಟ್ಟು ಪಾಠ ಆರಂಭಿಸುತ್ತಿದ್ದರು. ಇವರು ಮೂಲತಃ ಸ್ಕಾಟ್ಲೆಂಡಿನವರು. ಅವರು ಪಾಠಮಾಡುತ್ತಿದ್ದ ಇಂಗ್ಲೀಷ್ ಪುಸ್ತಕ ಒಬ್ಬ ಸ್ಕಾಟ್ಲೆಂಡಿನವನ ಜೀವನ ಚರಿತ್ರೆ. ಅದನ್ನು ಬರೆದ ಲೇಖಕನೂ ಸ್ಕಾಟ್ಲೆಂಡಿನವನು. ಹೀಗಾಗಿ ಅವರು ಪಾಠ ಆರಂಭಿಸುವಾಗ ಹೇಳಿದ್ದು: “You are all very fortunate in having a Scot to teach the biography of a very great Scot author written by a Scotch man!"

ಇವರು ಮುಂದೆ ಮಹಾರಾಜ ಕಾಲೇಜ್ ಪ್ರಿನ್ಸಿಪಾಲರಾಗಿ ನಿವೃತ್ತರಾದರು. ಇವರ ವಿಚಾರವಾಗಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಹೇಳಿಕೊಂಡು ನಗುತ್ತಿದ್ದ ಒಂದು ರೋಚಕ ಪ್ರಸಂಗ ಹೀಗಿದೆ: ಒಂದು ದಿನ ಒಬ್ಬ ವಿದ್ಯಾರ್ಥಿ ಇವರನ್ನು ನೋಡಲು ಮನೆಗೆ ಹೋಗಿದ್ದ. ಮನೆಯಲ್ಲಿದ್ದ ಹಿರಿಯ ವಯಸ್ಸಿನ ಮಹಿಳೆ "ಅವರು ಮನೆಯಲ್ಲಿಲ್ಲ, ಕಾಲೇಜಿಗೆ ಹೋಗಿರಬಹುದು" ಎಂದು ಹೇಳಿದರಂತೆ. ಅವನು ಕಾಲೇಜಿಗೆ ಬಂದು “ಸರ್ ನಿಮ್ಮ ಮನೆಗೆ ಹೋಗಿದ್ದೆ, ನೀವು ಮನೆಯಲ್ಲಿಲ್ಲವಾಗಿ ನಿಮ್ಮ "ತಾಯಿ" ಹೇಳಿದರು” ಎಂದ. ಅದನ್ನು ಕೇಳಿ ಪ್ರೊಫೆಸರ್ ರೋಲೋ ಅವರು ನಕ್ಕು ನಕ್ಕು ಬಿದ್ದು ಹೇಳಿದರಂತೆ "O Gentleman! She is not my mother but she is my lawfully wedded wife"! (ಸಶೇಷ)

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 7.12.2017