ಸಮೂಹ ಮಾಧ್ಯಮ: ಸದ್ಬಳಕೆ ಮತ್ತು ದುರ್ಬಳಕೆ

  •  
  •  
  •  
  •  
  •    Views  

ಮಾನವನ ಇತಿಹಾಸದುದ್ದಕ್ಕೂ ಅವರವರ ಸಂಸ್ಕಾರ ಮತ್ತು ಕುಸಂಸ್ಕಾರಕ್ಕೆ ಅನುಗುಣವಾಗಿ ಒಳ್ಳೆಯ ಮತ್ತು ಕೆಟ್ಟ ವ್ಯಕ್ತಿಗಳ ಮಧ್ಯೆ ನಿರಂತರವಾಗಿ ಸಂಘರ್ಷ ನಡೆಯುತ್ತಲೇ ಬಂದಿದೆ. ಸದ್ಗುಣ ಮತ್ತು ದುರ್ಗುಣಗಳಲ್ಲಿ ಪ್ರಬಲವಾದುದು ಪ್ರಕಟಗೊಂಡು ಒಳ್ಳೆಯವನು ಅಥವಾ ಕೆಟ್ಟವನು ಎಂದು ಕರೆಸಿಕೊಳ್ಳುತ್ತಾನೆ.

ಶ್ರೇಯಶ್ಚ ಪ್ರೇಯಶ್ಚ ಮನುಷ್ಯಮೇತಃ
ತೌ ಸಂಪರೀತ್ಯ ವಿವಿನಕ್ತಿ ಧೀರಃ | 
ಶ್ರೇಯೋ ಹಿ ಧೀರೋಽಭಿಪ್ರೇಯಸೋ ವೃಣೀತೇ
ಪ್ರೇಯೋ ಮಂದೋ ಯೋಗಕ್ಷೇಮಾದ್ ವೃಣೀತೇ
(ಕಠೋಪನಿಷತ್ 1.2.2)

ಮೇಲಿನ ಕಠೋಪನಿಷತ್ತಿನ ಪ್ರಕಾರ “ಶ್ರೇಯಸ್ಸು” (ಒಳ್ಳೆಯದು) ಮತ್ತು “ಪ್ರೇಯಸ್ಸು” (ಕೆಟ್ಟದ್ದು) ಎರಡೂ ಒಟ್ಟೊಟ್ಟಿಗೇ ಮನುಷ್ಯನ ಹತ್ತಿರ ಬರುತ್ತವೆ. ವಿವೇಕಿಯು ಸಾಕಷ್ಟು ಆಲೋಚಿಸಿ ತನಗೆ ಶಾಶ್ವತ ಸುಖವನ್ನು ನೀಡುವ ಒಳ್ಳೆಯದನ್ನು ಆಯ್ಕೆಮಾಡಿಕೊಳ್ಳುತ್ತಾನೆ. ಅವಿವೇಕಿಯು ಬಾಹ್ಯ ಆಕರ್ಷಣೆಗೆ ಒಳಗಾಗಿ ತನಗೆ ತಾತ್ಕಾಲಿಕ ಸುಖವನ್ನು ನೀಡುವ ಕೆಟ್ಟದ್ದನ್ನು ಆಯ್ಕೆಮಾಡಿಕೊಳ್ಳುತ್ತಾನೆ. ನಮ್ಮ ಸ್ವಾನುಭವದ ಪ್ರಕಾರ ಉಪಕಾರ ಪಡೆದ ವ್ಯಕ್ತಿ ಕೃತಜ್ಞನಾಗುವುದಿರಲಿ, ಸ್ವಾರ್ಥಸಾಧನೆಗಾಗಿ ಅಪಕಾರ ಮಾಡಲೂ ಹೇಸುವುದಿಲ್ಲ.

ಇದು ಸಮೂಹ ಮಾಧ್ಯಮಗಳ ಯುಗ. ಕೈಲೊಂದು ಮೊಬೈಲು ಇಲ್ಲದ ಹೆಣ್ಣಾಗಲೀ ಗಂಡಾಗಲೀ ಇಲ್ಲ. ವಾಟ್ಸಾಪ್, ಫೇಸ್ಬುಕ್, ಟ್ವಿಟರ್, ಯುಟ್ಯೂಬ್ ಮುಂತಾದ ಸಮೂಹ ಮಾಧ್ಯಮಗಳು ಸಮಕಾಲೀನ ಸಮಾಜ ಜೀವನದ ಅವಿಭಾಜ್ಯ ಅಂಗವಾಗಿವೆ. ಯುವಜನರು ಮತ್ತು ಮಕ್ಕಳು ಸಮೂಹ ಮಾಧ್ಯಮಗಳ ಗೀಳಿಗೆ ಸಿಲುಕಿ ನೈತಿಕ ಅಧಃಪತನಗೊಂಡು ಸರ್ವನಾಶವಾಗುತ್ತಿದ್ದಾರೆ. ಸಮೂಹ ಮಾಧ್ಯಮಗಳ ಸದುಪಯೋಗಕ್ಕಿಂತ ದುರುಪಯೋಗವೇ ಹೆಚ್ಚಾಗಿರುವುದು ಮಾತ್ರ ಸುಳ್ಳಲ್ಲ. ತನಗೆ ಆಗದವರ ತೇಜೋವಧೆ ಮಾಡಲು ಸಮೂಹ ಮಾಧ್ಯಮಗಳಿಗಿಂತ ಕೆಟ್ಟ ಆಯುಧ ಬೇರೊಂದಿಲ್ಲ. ಒಂದು ಅಂದಾಜು ಪ್ರಕಾರ ವಾಟ್ಸಾಪ್ ಕಂಪನಿಯು ಭಾರತೀಯರ 71 ಲಕ್ಷ ಅಕೌಂಟುಗಳನ್ನು ಕಳೆದ ನವಂಬರ್ ತಿಂಗಳಿನಲ್ಲಿ ರದ್ದುಪಡಿಸಿದೆ. ಸಮೂಹ ಮಾಧ್ಯಮಗಳಿಗೆ ನಕಾರಾತ್ಮಕ ಮುಖವಿರುವಂತೆಯೇ ಸಕಾರಾತ್ಮಕ ಶಕ್ತಿಯೂ ಇದೆ. ಹಾಗೆಯೇ ನೊಂದವರ ಕಣ್ಣೀರೊರೆಸಿ ಮುಖದಲ್ಲಿ ನಗೆಮಲ್ಲಿಗೆಯನ್ನು ಅರಳಿಸುವುದೂ ಅವುಗಳ ಸದುಪಯೋಗದಿಂದ ಸಾಧ್ಯ.

ಮಠ ಮತ್ತು ಸಮಾಜದ ಜವಾಬ್ದಾರಿ ಕೆಲಸಕಾರ್ಯಗಳ ನಿರ್ವಹಣೆಯ ಮಧ್ಯೆ ನಮಗೆ ಟಿ.ವಿ ನೋಡಲು ಬಿಡುವಾಗುವುದಿಲ್ಲ. ಪ್ರಯಾಣಿಸುವಾಗ ಮೊಬೈಲ್ ನಲ್ಲೇ ಸುದ್ದಿಗಳನ್ನು ಕೇಳುತ್ತೇವೆ. ಹಾಗೆ ಕೇಳುವಾಗ ಒಂದು ಛಾನಲ್ ನಲ್ಲಿ ಬಿತ್ತರಗೊಂಡ ಸುದ್ದಿ ನಮ್ಮ ಕಣ್ಣಂಚನ್ನು ತೇವಗೊಳ್ಳುವಂತೆ ಮಾಡಿತು. ಕೇರಳದ ಒಂದು ರೈಲ್ವೆ ನಿಲ್ದಾಣದಲ್ಲಿ ಒಬ್ಬ ದೈನೇಸಿ ಮುದುಕಿ ಕುಳಿತಿದ್ದಳು. 

ಬಾಡಿದ ಮುಖ, ಮಾಸಿದ ಸೀರೆ, ಸುಕ್ಕುಗಟ್ಟಿದ ನಿತ್ರಾಣಗೊಂಡ ಮೈ, ಗುಳಿಬಿದ್ದ ನಿಸ್ತೇಜವಾದ ಕಣ್ಣುಗಳು, ಎಣ್ಣೆಯನ್ನು ಕಾಣದ ಕೆದರಿದ ಬಿಳಿಯ ತಲೆಕೂದಲು ಹಸಿವೆ ತಾಂಡವವಾಡುತ್ತಿತ್ತು. ನೋಡಿದವರಿಗೆ ಆಕೆ ಭಿಕ್ಷುಕಿ ಎಂಬುದು ಥಟ್ಟನೆ ಗೊತ್ತಾಗುತ್ತಿತ್ತು. ಎಲ್ಲ ಭಿಕ್ಷುಕರಂತೆ ಆಕೆ ಭಿಕ್ಷಾಪಾತ್ರೆ ಹಿಡಿದು ಸದಾಕಾಲ ಬೇಡುತ್ತಿರಲಿಲ್ಲ. ದಿನಕ್ಕೆ ಒಂದು ಹೊತ್ತಿಗೆ ಊಟಕ್ಕಾಗುವಷ್ಟು ಹಣ ದೊರೆತರೆ ಸಾಕು, ಮತ್ತೆ ಯಾರೇನು ಕೊಟ್ಟರೂ ತೆಗೆದುಕೊಳ್ಳುತ್ತಿರಲಿಲ್ಲ. “ಆಸೆಯೆಂಬುದು ಅರಸಿಂಗಲ್ಲದೆ ಶಿವಭಕ್ತರಿಗೆ ಉಂಟೇ ಅಯ್ಯಾ, ಈಸಕ್ಕಿಯಾಸೆ ನಿಮಗೇಕೆ ಮಾರಯ್ಯಾ?” ಎನ್ನುವ ಶರಣೆ ಆಯ್ದಕ್ಕಿ ಲಕ್ಕಮ್ಮನಂತಿದ್ದಳು! 

ರೈಲಿನಿಂದ ನಿಲ್ದಾಣಕ್ಕೆ ಬಂದಿಳಿದ ಒಬ್ಬ ವಿದ್ಯಾವಂತ ಯುವತಿ ಭಿಕ್ಷುಕಿಯ ದುಸ್ಥಿತಿಯನ್ನು ನೋಡಿ ಮರುಕಗೊಂಡಳು. ಪ್ಲಾಟ್ ಫಾರಂ ಕ್ಯಾಂಟೀನಿನಿಂದ ಇಡ್ಲಿಯನ್ನು ತಂದುಕೊಟ್ಟಳು. ಬಹಳ ಒತ್ತಾಯಿಸಿದ ಮೇಲೆ ತಿಂಡಿಯನ್ನು ತಿಂದ ನಂತರ ಆ ಮುದುಕಿ ಚೇತರಿಸಿಕೊಂಡಳು. ಯುವತಿಯ ಪ್ರೀತಿಯ ಒತ್ತಾಯಕ್ಕೆ ಮಣಿದು ಕೊನೆಗೂ ತನ್ನ ದುರಂತ ಬದುಕಿನ ಸುರುಳಿಯನ್ನು ಬಿಚ್ಚಿಟ್ಟಳು. ಆಕೆ ಸಾವಿರಾರು ಶಾಲಾ ಮಕ್ಕಳಿಗೆ ಪಾಠ ಮಾಡಿ ಪ್ರತಿಭಾವಂತರನ್ನಾಗಿ ಮಾಡಿದ ಒಬ್ಬ ಹೆಸರಾಂತ ಗಣಿತ ಶಿಕ್ಷಕಿ. ಅವಳು ಶಿಕ್ಷಕ ವೃತ್ತಿಯಿಂದ ನಿವೃತ್ತಿ ಆದ ನಂತರ ಸಮಸ್ಯೆ ಆರಂಭವಾಯಿತು. ಜೀವಮಾನವಿಡೀ ದುಡಿದ ಹಣದಿಂದ ಮನೆ ಕಟ್ಟಿದ್ದಳು. ನಿವೃತ್ತಿಯ ನಂತರ ಗಂಡ ಮತ್ತು ಮಗನ ಅನಾದರಣೆಗೆ ಗುರಿಯಾದಳು. ಒಂದು ದಿನ ಹೆತ್ತ ಮಗನೇ ಆಕೆಯೊಂದಿಗೆ ಜಗಳ ಮಾಡಿ ಮನೆಯಿಂದ ಹೊರಗೆ ಹಾಕಿದ. ಅಕ್ಕ ತಂಗಿಯರು, ಬಂಧು ಬಾಂಧವರು ಯಾರೂ ನೆರವಿಗೆ ಬರಲಿಲ್ಲ. ತುಂಬಾ ಜಿಗುಪ್ಸೆಗೊಂಡ ಆ ಶಿಕ್ಷಕಿಗೆ ಎಲ್ಲಿಗೂ ಹೋಗಲು ಮನಸ್ಸು ಬಾರದೆ ಯಾರನ್ನೂ ನಂಬದ ಮನಃಸ್ಥಿತಿಯಲ್ಲಿ ಆಕೆಗೆ ರೈಲ್ವೆ ಪ್ಲಾಟ್ ಫಾರಂ ಮನೆಯಾಯಿತು; ಭಿಕ್ಷಾಟನೆಯೇ ಹಸಿದೊಡಲು ತುಂಬುವ ಸಾಧನವಾಯಿತು. ಈ ಪ್ರಕರಣವು ಆರಿಗಾರೂ ಇಲ್ಲ; “ಕೆಟ್ಟವಂಗೆ ಕೆಳೆಯಿಲ್ಲ, ಜಗದ ನಂಟ ನೀನೇ ಅಯ್ಯಾ ಕೂಡಲ ಸಂಗಮದೇವಾ” ಎಂಬ ಬಸವಣ್ಣನವರ ವಚನವನ್ನು ನೆನಪಿಗೆ ತಂದುಕೊಡುತ್ತದೆ. 

ಆಕೆಯ ಬಳಿ ತನ್ನ ವಿದ್ಯಾರ್ಥಿಗಳ ಜೊತೆ ತೆಗೆಸಿಕೊಂಡಿದ್ದ ಒಂದು ಹಳೆಯ ಗ್ರೂಪ್ ಫೋಟೋ ಇರುವುದನ್ನು ಆ ವಿದ್ಯಾವಂತ ಯುವತಿ ಗಮನಿಸಿದಳು. ಅದನ್ನು ತನ್ನ ಮೊಬೈಲ್ ಕ್ಯಾಮರಾದಲ್ಲಿ ಕ್ಲಿಕ್ಕಿಸಿ ಈಗಿನ ಫೋಟೋ ಸಹ ತೆಗೆದು ಎರಡನ್ನೂ ಜಾಲತಾಣದಲ್ಲಿ ಹಾಕಿದಳು. “ಇವರ ಬಳಿ ಕಲಿತವರು ಯಾರಾದರೂ ಇದ್ದರೆ ದಯಮಾಡಿ ನೆರವಿಗೆ ಧಾವಿಸಿರಿ” ಎಂಬ ಟಿಪ್ಪಣಿಯೊಂದಿಗೆ ಫೇಸ್ ಬುಕ್ ನಲ್ಲಿ ಹಂಚಿಕೊಂಡಳು. ಆ ಶಿಕ್ಷಕಿಯ ಬಳಿ ಓದಿದವರು ದೇಶ ವಿದೇಶಗಳಲ್ಲಿ ಒಳ್ಳೆಯ ಹುದ್ದೆಗಳಲ್ಲಿದ್ದರು. ತಕ್ಷಣವೇ ಆಕೆಯ ನೆರವಿಗೆ ಬಂದವರು ಅವರ ಹಳೆಯ ವಿದ್ಯಾರ್ಥಿ ಹಾಗೂ ಈಗಿನ ಐ.ಎ.ಎಸ್ ಮಹಿಳಾ ಜಿಲ್ಲಾಧಿಕಾರಿ. 

ವಿಷಯ ತಿಳಿದೊಡನೆ ರೈಲ್ವೆ ನಿಲ್ದಾಣಕ್ಕೆ ಓಡೋಡಿ ಬಂದು ತಮ್ಮ ವಿದ್ಯಾಗುರುವನ್ನು ಕಂಡು ನಮಸ್ಕರಿಸಿದರು. ಯಾರನ್ನೂ ನಂಬದ ಸ್ಥಿತಿಯಲ್ಲಿದ್ದ ಆಕೆಯನ್ನು ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋಗಿ ಎಲ್ಲ ಅನುಕೂಲಗಳನ್ನೂ ತಮ್ಮ ವಿದ್ಯಾಗುರುವಿಗೆ ಕಲ್ಪಿಸಿಕೊಟ್ಟರು. ನಂತರದಲ್ಲಿ ಸಾಮಾಜಿಕ ಜಾಲ ತಾಣದಲ್ಲಿ ಮಾಹಿತಿಯನ್ನು ನೀಡಿದ ಕರುಣಾಮಯಿ ಯುವತಿಯ ಮೊಬೈಲು ಬಿಡುವಿಲ್ಲದಂತೆ ರಿಂಗಣಿಸತೊಡಗಿತು. ದೇಶ ವಿದೇಶಗಳಲ್ಲಿದ್ದ ಅವರ ಹಳೆಯ ವಿದ್ಯಾರ್ಥಿಗಳು ನಾ ಮುಂದು ತಾ ಮುಂದು ಎಂದು ಅವರನ್ನು ಸಾಕಿಕೊಳ್ಳಲು ಹಾತೊರೆದು ಫೋನ್ ಮಾಡತೊಡಗಿದರು. ಆದರೆ ಅವರನ್ನು ಯಾರೂ ಸಾಕುವುದು ಬೇಡ; ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಎಲ್ಲರನ್ನೂ ಮಹಿಳಾ ಜಿಲ್ಲಾಧಿಕಾರಿ ಸಮಾಧಾನ ಪಡಿಸಿದರು. Senior Citizen Act ಕಾಯಿದೆ ಅಡಿಯಲ್ಲಿ ಮಗನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮಹಿಳಾ ಜಿಲ್ಲಾಧಿಕಾರಿ ಮುಂದಾದಾಗ ಆ ವೃದ್ಧೆ ಹೇಳಿದ್ದು: “ಬೇಡಮ್ಮ, ಸ್ವಂತ ಮಗನ ವಿರುದ್ಧ ಕೇಸು ದಾಖಲಿಸಲು ನನಗೆ ಇಷ್ಟವಿಲ್ಲ. ದೇವರು ಇಟ್ಟ ಹಾಗೆ ಇರುತ್ತೇನೆ; ಉಳಿದ ಆಯಸ್ಸನ್ನು ಹೇಗೋ ಸವೆಸುತ್ತೇನೆ”. ತಾಯಿಯನ್ನು ಅಲಕ್ಷಿಸುವ ಮಗನದು ಶಿಕ್ಷಾರ್ಹ ಅಪರಾಧವೆಂಬ ಕಾನೂನು ಆಕೆಗೆ ಗೊತ್ತಿಲ್ಲವೆಂದಲ್ಲ, ಆದರೆ ಹೆತ್ತ ಮಗನನ್ನೇ ಕೋರ್ಟಿನ ಕಟಕಟೆಯಲ್ಲಿ ನಿಲ್ಲಿಸಲು ಆ ಮಹಾತಾಯಿಗೆ ಮನಸ್ಸು ಬರಲಿಲ್ಲ. ಆಕೆಯ ಮಾತೃವಾತ್ಸಲ್ಯ ತನ್ನನ್ನು ತಾನೇ ದಂಡಿಸಿಕೊಳ್ಳುವಂತೆ ಮಾಡಿತು. ಭಾರತೀಯ ತಾಯಂದಿರಿಗೆ ತಮ್ಮ ಮಕ್ಕಳ ಬಗ್ಗೆ ಇರುವ ಇಂತಹ ಮಮತೆಯೇ ಮುಂದಿನ ಸಂಸ್ಕೃತ ಸೂಕ್ತಿಯ ಆಶಯ:

“ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ!”
“ಕೆಟ್ಟ ಮಗ ಹುಟ್ಟಬಹುದು; ಆದರೆ ಕೆಟ್ಟ ತಾಯಿ ಎಲ್ಲಿಯೂ ಇಲ್ಲ”

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 21.3.2024.