ರಾಜಕಾರಣ ಅಂದು ಇಂದು

  •  
  •  
  •  
  •  
  •    Views  

ಕೌಟುಂಬಿಕ ಜೀವನದಲ್ಲಿ ವಯಸ್ಸಾದ ತಂದೆ-ತಾಯಿಗಳು ಪ್ರಬುದ್ಧಮಾನಕ್ಕೆ ಬಂದ ಗಂಡುಮಕ್ಕಳಿಗೆ ಮನೆತನದ ಆಸ್ತಿಯನ್ನು ಹಂಚಿಕೆ ಮಾಡಿಕೊಡುತ್ತಾರೆ. ಅನೇಕ ವೇಳೆ ಮಕ್ಕಳೇ ಮನೆಯಲ್ಲಿ ಜಗಳ ಮಾಡಿಕೊಂಡು ತಮ್ಮ ಭಾಗದ ಆಸ್ತಿಯನ್ನು ಕೊಡಬೇಕೆಂದು ಪಟ್ಟುಹಿಡಿಯುತ್ತಾರೆ. ಈಗೀಗ ಹೆಣ್ಣುಮಕ್ಕಳೂ ಸಹ ತಮಗೂ ಆಸ್ತಿಯಲ್ಲಿ ಹಕ್ಕು ಇದೆ, ಪಾಲು ಕೊಡುತ್ತಿಲ್ಲವೆಂದು ತಂದೆ-ತಾಯಂದಿರನ್ನು ಕೋರ್ಟಿನ ಕಟಕಟೆ ಹತ್ತಿಸುತ್ತಿದ್ದಾರೆ. ಅದು ಬೇರೆ ವಿಚಾರ. ಆಸ್ತಿಯಲ್ಲಿ ಎರಡು ವಿಧ. ಒಂದು ಪಿತ್ರಾರ್ಜಿತ ಆಸ್ತಿ ಮತ್ತೊಂದು ಸ್ವಯಾರ್ಜಿತ ಆಸ್ತಿ. ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯನ್ನು ಕೇಳುವ ಹಕ್ಕು ಇದೆಯೇ ಹೊರತು ಸ್ವಯಾರ್ಜಿತ ಆಸ್ತಿಯನ್ನು ಕೇಳುವ ಹಕ್ಕು ಇಲ್ಲ. ಅದನ್ನು ಯಾರಿಗಾದರೂ ಕೊಡಬಹುದು. ಅದನ್ನು ಪ್ರಶ್ನೆ ಮಾಡಲು ಕಾನೂನಿನಲ್ಲಿ ಯಾರಿಗೂ ಅವಕಾಶವಿಲ್ಲ. ಚಿತ್ರದುರ್ಗ ಜಿಲ್ಲೆಯ ಹಿರಿಯ ತಲೆಮಾರಿನ ರಾಜಕೀಯ ಧುರೀಣರಾಗಿದ್ದ ಜಗಳೂರಿನ ಜೆ. ಮಹಮದ್ ಇಮಾಂ ಸಾಹೇಬರಿಂದ ನಮಗೆ ಬಳುವಳಿಯಾಗಿ ಬಂದ ಅವರ "ಸ್ವಯಾರ್ಜಿತ ಆಸ್ತಿ" ಎಂದರೆ ಅವರು ತಮ್ಮ ಇಳಿವಯಸ್ಸಿನಲ್ಲಿ ಬರೆದು ಸ್ವತಃ ಟೈಪ್ ಮಾಡಿ ಬೈಂಡ್ ಮಾಡಿಸಿ ಇಟ್ಟಿದ್ದ ಅವರ ಸುದೀರ್ಘ ರಾಜಕೀಯ ಜೀವನಾನುಭವವುಳ್ಳ ಅಪ್ರಕಟಿತ ಇಂಗ್ಲೀಷ್ ಪುಸ್ತಕದ ಹಸ್ತಪ್ರತಿ. ಇದನ್ನು ಅವರ ದೊಡ್ಡ ಮಗಳಾದ ನೂರುನ್ನೀಸಾ ಬೇಗಂ ಮತ್ತು ಅವರ ಅಣ್ಣ ಖಾಸಿಂ ಸಾಬ್ ಅವರ ಮಗ ನಿವೃತ್ತ ಮುಖ್ಯೋಪಾಧ್ಯಾಯ ಹುಸೇನ್ಮಿಯಾ ಸಾಬ್ ನಮ್ಮ ಕೈಗೆ ತಂದೊಪ್ಪಿಸಿ ಮೂರು ದಶಕಗಳ ಮೇಲಾಯಿತು. 

"ಗೋಕುಲಾಷ್ಟಮಿಗೂ ಇಮಾಂಸಾಹೇಬ್ಗೂ ಏನು ಸಂಬಂಧ" ಎನ್ನುವಂತೆ ಸಿರಿಗೆರೆ ಮಠಕ್ಕೂ ಜಗಳೂರಿನ ಇಮಾಂ ಸಾಹೇಬರಿಗೂ ಏನು ಸಂಬಂಧ? ಎಂದು ಓದುಗರು ಹುಬ್ಬೇರಿಸಬಹುದು. ಇದಕ್ಕೆ ಉತ್ತರ ಅವರನ್ನು ಕುರಿತು 198ರಲ್ಲಿ ಪ್ರಕಟವಾದ "ನಾಡಶಿಲ್ಪಿ" ಎಂಬ ಗ್ರಂಥಕ್ಕೆ ನಮ್ಮ ಪರಮಾರಾಧ್ಯ ಗುರುವರ್ಯರಾದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಬರೆದು ಕಳುಹಿಸಿದ ಈ ಮುಂದಿನ ಸಂದೇಶದಲ್ಲಿದೆ: “ನಮ್ಮ ಮಠದ ಇತಿಹಾಸದಲ್ಲಿ ಜಾತ್ಯತೀತ ಸಿದ್ಧಾಂತಕ್ಕೆ ಮೊಟ್ಟಮೊದಲನೇ ಸಹಾಯಕರು ಇವರೇ, ಹುಟ್ಟಿನಿಂದ ಮುಸ್ಲಿಮರಾಗಿದ್ದರೂ ಇವರಿಗೆ ತಾವು ಮುಸ್ಲಿಮರೆಂದು ಗೊತ್ತಿದೆಯೋ ಇಲ್ಲವೋ ಎನ್ನುವಷ್ಟರಮಟ್ಟಿಗೆ ಜಾತಿಯ ಸೋಂಕಿಲ್ಲದ ವ್ಯಕ್ತಿ. ನಮ್ಮ ಮಠದ ಶಿಷ್ಯ ಮಂಡಳಿಯಲ್ಲಿ ಪ್ರಮುಖರಾದ ನಿವೃತ್ತ ಹೈಕೋರ್ಟ್ ಅಡ್ವಕೇಟ್ ಜನರಲ್ ಜಿ. ಚೆನ್ನಪ್ಪನವರು ಮತ್ತು ಮಾಜಿ ಮಂತ್ರಿಗಳಾದ ಎಲ್. ಸಿದ್ದಪ್ಪ. ಇವರಿಬ್ಬರೊಂದಿಗೆ ಸಾಹೇಬರ ಆತ್ಮೀಯತೆ ಅನ್ಯಾದೃಶವಾದುದು. ನಮಗೆ ಚೆನ್ನಪ್ಪ, ಸಿದ್ದಪ್ಪನವರೆಷ್ಟೋ ಇಮಾಮರೂ ಅಷ್ಟೇ ಆತ್ಮೀಯರು. ನಮ್ಮ ಮಠದ ಆಂತರಿಕ ವಿಷಯದಲ್ಲಿಯೂ, ಅಭಿವೃದ್ಧಿಯ ವಿಷಯದಲ್ಲೂ ಇವರ ಸಲಹೆ ಸಹಕಾರ ಅಸದೃಶ. ಜನಸಾಮಾನ್ಯರ ಬಾಯಲ್ಲಿ "ಇಮ್ಮಣ್ಣ" ಎಂದೇ ಪ್ರಸಿದ್ಧರಾಗಿದ್ದ ಇಮಾಂ ಸಾಹೇಬರು ಜಾತಿಯಿಂದ ಮುಸ್ಲಿಮರಾಗಿದ್ದರೂ ಯಾರೂ ಅವರನ್ನು ಬೇರೆಯವರೆಂದು ತಿಳಿದುಕೊಳ್ಳಲಾರರು. ಯಾರಿಗೋ ಅಜ್ಜ, ಯಾರಿಗೋ ಚಿಕ್ಕಪ್ಪ, ಯಾರಿಗೋ ದೊಡ್ಡಪ್ಪ, ಯಾರಿಗೋ ಮಾವ" ಎಂದು ನಮ್ಮ ಗುರುವರ್ಯರು ಇಮಾಮರ ವ್ಯಕ್ತಿತ್ವದ ಗುಣಗಾನ ಮಾಡಿದ್ದಾರೆ. "ಯಾರನ್ನು ಕಂಡರೂ ಸ್ನೇಹ, ಯಾರಿಗೂ ಅವರಲ್ಲಿ ದ್ವೇಷವಿಲ್ಲ. ಇಮಾಮರು ಅಜಾತ ಶತ್ರು” ಎಂದಿದ್ದಾರೆ ರಾಷ್ಟ್ರನಾಯಕ ಎಸ್ ನಿಜಲಿಂಗಪ್ಪನವರು. “ಕೆಲವರಿಗೆ ಮೂರು ಕಾಸಿನ ಅಧಿಕಾರ ಬಂದರೆ ಆರು ಕಾಸಿನ ದುರಹಂಕಾರ ಬರುತ್ತದೆ". ಆದರೆ ಇಮಾಮರು ಅಧಿಕಾರದಲ್ಲಿದ್ದಾಗ ಎಂದೂ ಅಹಂಕಾರದಿಂದ ಮೆರೆದವರಲ್ಲ ಎಂದು ಕಡಿದಾಳು ಮಂಜಪ್ಪವನರು ಬರೆದಿದ್ದಾರೆ. “ಅಧಿಕಾರೇತರ ವ್ಯಕ್ತಿಯಾಗಿ ಸಂವಿಧಾನ ನಿರ್ಮಾಣ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿ ನೈಜ ಜನಹಿತ ಕಾರ್ಯದಿಂದ ಸರ್ವ ಜನರ ಆದರ ಗಳಿಸಿದ ಇಮಾಂ ಸಾಹೇಬರು ಜಾತ್ಯತೀತತೆಗೆ ಒಂದು ದೃಷ್ಟಾಂತ. 1960ರಲ್ಲಿ ಮುಂಬಯಿಯಲ್ಲಿ ಹಿಂದೂ ಮುಸ್ಲಿಮರಲ್ಲಾದ ಘರ್ಷಣೆಯ ಕಾಲದಲ್ಲಿ ಅವರು ವಹಿಸಿದ ಪಾತ್ರ ಇಂದಿಗೂ ಅವರ ಚಿರ ನೆನಪನ್ನು ನಮ್ಮಲ್ಲಿಉಳಿಸಿದೆ” ಎಂದು ಮುಂಬಯಿ ಹೈಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಸಿ. ಛಾಗಲಾ ಸ್ಮರಿಸಿದ್ದಾರೆ. “ಸರ್ವೋದಯ ತತ್ವಗಳ ಆಧಾರದ ಮೇಲೆ ರಾಜಕೀಯ ಜೀವನ ನಡೆಸಿದ ನಿಃಸ್ಪೃಹ ರಾಜಕೀಯ ಮುತ್ಸದ್ದಿ” ಎಂದು ಜಯಪ್ರಕಾಶ್ ನಾರಾಯಣ್ ರವರು ಬಣ್ಣಿಸಿದ್ದಾರೆ.

ಇಮಾಂ ಸಾಹೇಬರು ಸ್ವತಂತ್ರ ಭಾರತದ ಪೂರ್ವೋತ್ತರಗಳನ್ನು ಹತ್ತಿರದಿಂದ ಬಲ್ಲವರು. ಜಗಳೂರಿನ ಪ್ರಪ್ರಥಮ ಮುನಿಸಿಪಲ್ ಅಧ್ಯಕ್ಷರಾಗಿ ನಾಗರಿಕ ಸೌಲಭ್ಯಗಳನ್ನು ಒದಗಿಸುವಲ್ಲಿ ಹೆಚ್ಚಿನ ಪರಿಶ್ರಮ ವಹಿಸಿದರು. 1936 ರಿಂದ 1940ರ ಅವಧಿಯಲ್ಲಿ ಚಿತ್ರದುರ್ಗ ಜಿಲ್ಲಾ ಬೋರ್ಡಿನ ಅಧ್ಯಕ್ಷರಾಗಿದ್ದರು. ಮೈಸೂರು ಮಹಾರಾಜರ ಕಾಲದಲ್ಲಿ ಖಾಸಗಿ ಮಂತ್ರಿಗಳಾಗಿ ನೇಮಕಗೊಂಡಿದ್ದ ಅವರು ರೈಲ್ವೆ, ನೀರಾವರಿ, ಲೋಕೋಪಯೋಗಿ, ಶಿಕ್ಷಣ, ಸಹಕಾರ, ಪೋಲೀಸ್, ಕೈಗಾರಿಕೆ ಇತ್ಯಾದಿ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿ ಮಹಾರಾಜರಿಂದ ಮುಷೀರ್-ಉಲ್-ಮುಲ್ಕ್ ಪ್ರಶಸ್ತಿ ಪಡೆದವರು. ಸುಮಾರು 30 ವರ್ಷಗಳಿಗೂ ಹೆಚ್ಚು ಕಾಲ ರಾಜ್ಯದ ರಾಜಕೀಯದಲ್ಲಿಯೂ, 5 ವರ್ಷಗಳ ಕಾಲ ಲೋಕಸಭಾ ಸದಸ್ಯರಾಗಿ ಕೇಂದ್ರದ ರಾಜಕೀಯದಲ್ಲಿಯೂ ಸೇವೆ ಸಲ್ಲಿಸಿದವರು.

1966ರಲ್ಲಿ ಪ್ರಕಟವಾದ ಅವರ "ಮೈಸೂರು ಆಗ ಮತ್ತು ಈಗ" ಎಂಬ ಗ್ರಂಥದಲ್ಲಿ ರಾಜಕೀಯ ಕುರಿತು ಅವರು ಬರೆದ ಮಾತುಗಳು ತುಂಬಾ ಮನನೀಯವಾಗಿವೆ: "ರಾಜಕೀಯದಲ್ಲಿ ಒಂದು ಸ್ಥಾನ ಪಡೆಯುವುದು ಉದರಪೋಷಣೆಗಲ್ಲ; ಅದು ಶಾಶ್ವತವಾದ ಜೀವನಮಾರ್ಗವೂ ಅಲ್ಲ. ಇಂತಹ ಅವಕಾಶವು ದೊರೆಯುವುದು ಜನಸೇವೆಗೋಸ್ಕರ. ನೈಜವಾದ ಸೇವೆಯನ್ನು ಸಲ್ಲಿಸಿ ಕೃತಾರ್ಥನಾಗಬೇಕೆಂದು ಬಯಸುವವನು ಸ್ವಾರ್ಥ ತ್ಯಾಗ ಮಾಡಲು ಸಿದ್ಧನಾಗಿರಬೇಕು. ಅದಿಲ್ಲದೆ ರಾಜಕೀಯ ಸ್ಥಾನಮಾನವನ್ನು ಸ್ವಾರ್ಥ ಸಾಧನೆಗಾಗಿ ದುರುಪಯೋಗ ಮಾಡಿದರೆ ಅದು ನಂಬಿಕೆ ದ್ರೋಹವಾಗಿ ಹೀನಕಾರ್ಯವಾಗುತ್ತದೆ" ಎಂಬ ಅವರ ಮಾತುಗಳು ಇಂದಿನ ಪ್ರಕ್ಷುಬ್ಧ ರಾಜಕಾರಣಕ್ಕೆ ಚಾಟ ಬೀಸಿದಂತಿವೆ. ಮೈಸೂರು ಮಹಾರಾಜರ ಕಾಲದಲ್ಲಿ ಸಚಿವರಾಗಿದ್ದ ಇಮಾಂರವರು ತಮ್ಮ ನಾಲ್ಕು ವರ್ಷಗಳ ಸಚಿವ ಪದವಿಯ ಅವಧಿಯು ಮುಗಿದ ಮೇಲೆ ಬೆಂಗಳೂರಿನಲ್ಲಿಯೇ ವಾಸಮಾಡಬೇಕೆಂದು ಅವರ ಸ್ನೇಹಿತರಿಂದ ಒತ್ತಾಯ ಬರುತ್ತದೆ. ಬೆಂಗಳೂರಿನಲ್ಲಿಯೇ ಇದ್ದರೆ ಆಗಿಂದಾಗ್ಗೆ ದಿವಾನರನ್ನು, ಇತರೆ ಅಧಿಕಾರಿಗಳನ್ನು ಕಾಣುತ್ತಿರಬಹುದೆಂದೂ, ಅದರಿಂದ ಬೇರೆ ಯಾವುದಾದರೂ ಒಂದು ಪದವಿ ದೊರೆಯಬಹುದೆಂದೂ ಅವರ ಹಿತೈಷಿಗಳು ಆಶಿಸಿದ್ದರು. ಇಮಾಂರವರಿಗೆ ಸ್ನೇಹಿತರ ಸಲಹೆ ಸರಿತೋರಲಿಲ್ಲ. ಬೆಂಗಳೂರನ್ನು ಬಿಟ್ಟು ಸೀದಾ ಸ್ವಂತ ಊರಾದ ಜಗಳೂರಿಗೆ ಬಂದು ತಮ್ಮ ವ್ಯವಸಾಯ ವೃತ್ತಿಯನ್ನು ಮುಂದುವರಿಸಿದರು.

ಅನೇಕ ಲೇಖಕರು ತಾವು ಬರೆದ ಪುಸ್ತಕಗಳನ್ನು ತಮ್ಮ ಮುದ್ದಿನ ಮಡದಿ ಮಕ್ಕಳಿಗೆ ಅರ್ಪಣೆ ಮಾಡುತ್ತಾರೆ. ಆದರೆ ಇಮಾಂರವರು ಹಾಗೆ ಮಾಡದೆ ಈ ಪುಸ್ತಕವನ್ನು ಅವರು "ರಾಜಕೀಯದಲ್ಲಿ ಮುಂದುವರಿಯಲು ನನ್ನನ್ನು ಪ್ರೋತ್ಸಾಹಿಸಿ ದೇಶಸೇವೆಯನ್ನು ಮಾಡಲು ಅವಕಾಶ ಕಲ್ಪಿಸಿಕೊಟ್ಟ ಚಿತ್ರದುರ್ಗ ಜಿಲ್ಲೆಯ ಪ್ರಜೆಗಳಿಗೆ ಈ ಪುಸ್ತಕವನ್ನು ಕಾಣಿಕೆಯಾಗಿ ಅರ್ಪಿಸಿದ್ದೇನೆ" ಎಂದು ಅರ್ಪಣೆ ಮಾಡಿದ್ದಾರೆ. ಅವರ ಈ ಪುಸ್ತಕವು ನಮ್ಮ ಮಠದಿಂದ ಮರುಮುದ್ರಣಗೊಂಡಿದ್ದು ಇದೇ ತಿಂಗಳು ಜಗಳೂರಿನಲ್ಲಿ ನಡೆಯಲಿರುವ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಬಿಡುಗಡೆಯಾಗಲಿದೆ. ನಮ್ಮ ಲಿಂಗೈಕ್ಯ ಗುರುವರ್ಯರ ಕಾಲದಲ್ಲಿ 1950ರಲ್ಲಿ ಮೊಟ್ಟಮೊದಲಿಗೆ ಸಿರಿಗೆರೆಯಿಂದ ಹೊರಗೆ ಇದೇ ಜಗಳೂರಿನಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ನಡೆದಾಗ ಇಮಾಂ ಸಾಹೇಬರು ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಅದರ ಯಶಸ್ಸಿಗೆ ಕಾರಣರಾದವರು ಎಂಬ ಸಂಗತಿ ಇಲ್ಲಿ ಸ್ಮರಣೀಯ.

ಇಮಾಂ ಅವರ ರಾಜಕೀಯ ಜೀವನಕ್ಕೆ ಪ್ರೇರೇಪಣೆಯೆಂದರೆ ಅವರ ತಾತಂದಿರಾದ ಫಕೀರ್ ಸಾಹೇಬರು. ಅವರು ಜಗಳೂರಿನಲ್ಲಿ ಒಬ್ಬ ಪ್ರಮುಖ ವ್ಯಕ್ತಿಯಾಗಿ ಸ್ಥಳೀಯ ಸಂಸ್ಥೆಗಳಾದ ಮುನಿಸಿಪಾಲಿಟಿ ಮತ್ತು ತಾಲ್ಲೂಕು ಬೋರ್ಡುಗಳ ಸದಸ್ಯರಾಗಿದ್ದರು. ಅವರ ಆತ್ಮೀಯ ಸ್ನೇಹಿತರಾಗಿದ್ದ ಶ್ರೀ ಸಂಕಪ್ಪನವರು ಜಗಳೂರಿನ ಪಟೇಲರಾಗಿದ್ದರು. ಪ್ರತಿದಿನವೂ ಇಬ್ಬರೂ ಮನೆಯಲ್ಲಿ ಕುಳಿತು ಚರ್ಚಿಸುತ್ತಿದ್ದ ವಿಷಯಗಳನ್ನು ಏಳೆಂಟು ವರ್ಷದ ಬಾಲಕರಾಗಿದ್ದ ಇಮಾಂ ಶ್ರದ್ದೆಯಿಂದ ಕೇಳಿಸಿಕೊಳ್ಳುತ್ತಿದ್ದರು. ಒಮ್ಮೆ ಸಂಕಪ್ಪನವರು ಮನೆಗೆ ಬಂದು ಅವರ ತಾತನವರೊಡನೆ ಸಂಭಾಷಣೆ ಮಾಡತೊಡಗಿದರು. ಆಗ ಮೈಸೂರು ಮಹಾರಾಜರ ಕಾಲದಲ್ಲಿದ್ದ ಪ್ರಜಾಪ್ರತಿನಿಧಿ ಸಭೆಗೆ ಪ್ರತಿ ತಾಲ್ಲೂಕಿನಿಂದ ಇಬ್ಬರು ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಿದ್ದರು. ಪ್ರಜಾಪ್ರತಿನಿಧಿ ಸಭೆ ವರ್ಷದಲ್ಲಿ ಮೈಸೂರು ದಸರಾ ಉತ್ಸವದಂದು ಒಂದು ಸಾರಿ, ಮಹಾರಾಜರ ವರ್ಧಂತಿಯಂದು ಒಂದು ಸಾರಿ ಹೀಗೆ ಎರಡು ಬಾರಿ ಮೈಸೂರಿನಲ್ಲಿ ದಿವಾನರ ಅಧ್ಯಕ್ಷತೆಯಲ್ಲಿ ಸಭೆ ಸೇರುತ್ತಿತ್ತು. ಪ್ರಜಾಪ್ರತಿನಿಧಿಗಳ ಅಹವಾಲುಗಳನ್ನು ಕೇಳಿ ಮೈಸೂರು ಸಂಸ್ಥಾನದ ಆಗುಹೋಗುಗಳನ್ನು, ಜನರ ಹಿತದೃಷ್ಟಿಯಿಂದ ಕೈಗೊಳ್ಳಬೇಕಾದ ಯೋಜನೆಗಳನ್ನು ರೂಪಿಸುತ್ತಿತ್ತು. ಈ ಪ್ರಜಾಪ್ರತಿನಿಧಿ ಸಭೆಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಕಳುಹಿಸುವ ವಿಚಾರದಲ್ಲಿ ಸಂಕಪ್ಪನವರು ಪ್ರಸ್ತಾಪಿಸಿದಾಗ ಇಮಾಂ ಅವರ ತಾತ ಫಕೀರ ಸಾಹೇಬರು: “ಸಂಕಣ್ಣ, ನನಗೆ ಬೇಡ. ನಾನು ಈಗಾಗಲೇ ಒಂದು ಸಲ ದಸರಾ ಮೆಂಬರಾಗಿ ಹೋಗಿ ಬಂದಿದ್ದೇನೆ. ನೀನೇ ದಸರಾ ಮೆಂಬರಾಗಿ ಹೋಗಪ್ಪ” ಎಂದು ಪ್ರತಿಕ್ರಿಯಿಸಿದರು. "ಇಲ್ಲಾ, ನೀನೇ ಹೋಗು" ಎಂದು ಸಂಕಣ್ಣ, "ನನಗೆ ಬೇಡ, ನೀನೇ ಹೋಗು" ಎಂದು ಇಮಾಂ ಅವರ ತಾತ. ಇಬ್ಬರಲ್ಲಿ ಯಾರು ಮೆಂಬರ್ ಆಗಬೇಕೆಂದು ನಿರ್ಧಾರ ಕೈಗೊಳ್ಳಲಾಗದೆ ಅಮಲ್ದಾರರ ಕಛೇರಿಯಿಂದ ಕರೆ ಬಂದು ಇಬ್ಬರೂ ಅಲ್ಲಿಗೆ ಹೋದರು. ಆಗಿನ ಕಾಲದಲ್ಲಿ ವರ್ಷಕ್ಕೆ ಒಂದು ನೂರು ರೂಪಾಯಿ ಅಥವಾ ಅದಕ್ಕಿಂದ ಹೆಚ್ಚು ಭೂಕಂದಾಯವನ್ನು ಕೊಡುವವರು ಮಾತ್ರ ಮತದಾರರಾಗಿರುತ್ತಿದ್ದರು. ಅಂತಹ ಅರ್ಹತೆಯುಳ್ಳವರು ಜಗಳೂರು ತಾಲ್ಲೂಕಿನಲ್ಲಿ 60 ರಿಂದ 70 ಜನ ಮಾತ್ರ ಇದ್ದರು. ಅವರಲ್ಲಿ 30 ಜನರು ಮಾತ್ರ ಮತದಾನ ಮಾಡಲು ಆ ದಿನ ಹಾಜರಿದ್ದರು. ಅಮಲ್ದಾರ್ ಸಾಹೇಬರು ಎಲ್ಲರಿಗೂ ಒಂದೊಂದು ಚೀಟಿಯನ್ನು ಕೊಟ್ಟು ನಿಮಗೆ ಇಷ್ಟವಿರುವ ಇಬ್ಬರ ಹೆಸರುಗಳನ್ನು ಬರೆಯಿರಿ ಎಂದು ಹೇಳಿದರು. ಮತದಾರರು ತಮಗೆ ಬೇಕಾದ ಇಬ್ಬರ ಹೆಸರು ಬರೆದು ಕಾಗದವನ್ನು ಮಡಿಸಿ ಅಮಲ್ದಾರರ ಮೇಜಿನ ಮೇಲೆ ಇಟ್ಟರು. ಆ ಚೀಟಿಗಳನ್ನು ತೆರೆದು ಪರಾಂಬರಿಸಿದ ಅಮಲ್ದಾರರು ಇಮಾಂ ಅವರ ತಾತ ಫಕೀರ್ ಸಾಹೇಬರನ್ನೂ ಮತ್ತು ಬಿಳಿಚೋಡು ಶಾನುಭೋಗರಾದ ಮೂಡ್ಲಗಿರಿರಾಯರನ್ನೂ ಮೈಸೂರು ಪ್ರಜಾಪ್ರತಿನಿಧಿ ಸಭೆಗೆ ಆಯ್ಕೆಯಾಗಿದ್ದಾರೆಂದು ಘೋಷಣೆ ಮಾಡಿದರು. ಇದು ಅಂದಿನ ರಾಜಕಾರಣ. ತಾಲ್ಲೂಕ್ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಲು ಸದಸ್ಯರಿಗೆ "ತೀರ್ಥಯಾತ್ರೆ" ಏರ್ಪಡಿಸುವ ಇಂದಿನ ಸ್ವಾರ್ಥ ರಾಜಕಾರಣ ಎಲ್ಲರಿಗೂ ಗೊತ್ತಿರುವ ಸಂಗತಿ.

ಇಮಾಂ ಅವರು ಇಳಿ ವಯಸ್ಸಿನಲ್ಲಿ ಜಾರಿಬಿದ್ದು ಕಾಲುಮುರಿದುಕೊಂಡಿದ್ದರು. ನಮ್ಮ ಮಠದ ಅಭಿಮಾನಿಗಳಾಗಿದ್ದ ಅವರ ಕ್ಷೇಮ ಸಮಾಚಾರವನ್ನು ವಿಚಾರಿಸಿಕೊಂಡು ಬರಲು ದಾವಣಗೆರೆಯ ಅವರ ಮನೆಗೆ ಹೋದಾಗ ಮಾತಿನ ಪ್ರಸಂಗದಲ್ಲಿ ಈಗಿನ ರಾಜಕಾರಣಿಗಳನ್ನು ಕಂಡು ನಿಮಗೆ ಏನೆನ್ನಿಸುತ್ತದೆಯೆಂದು ಕೇಳಿದ ನಮ್ಮ ಪ್ರಶ್ನೆಗೆ ಅವರು ಥಟ್ಟನೆ ಕೊಟ್ಟ ಉತ್ತರ: “ಕ್ಯಾಕರಿಸಿ ಉಗಿಯಬೇಕೆನ್ನಿಸುತ್ತದೆ!” ಮೂರು ದಶಕಗಳ ಹಿಂದೆ ಬೇಸರಗೊಂಡು ಆಡಿದ್ದ ಅವರ ಈ ಕಟುವಾದ ಮಾತು ಅಂದಿಗಿಂತಲೂ ಇಂದು ಹೆಚ್ಚು ಅರ್ಥಪೂರ್ಣವಾಗಿದೆ! (ಸಶೇಷ)

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 18.1.2018