ಪರಿಶುದ್ಧ ಚುನಾವಣೆಯತ್ತ ಒಂದು ಹೆಜ್ಜೆ
"ನಮ್ಮ ಗುರುಗಳಿಗೆ ಇದ್ಯಾಕೆ ಬೇಕಿತ್ತು?" ಎಂಬ ಉದ್ಗಾರ ದಾವಣಗೆರೆ ಭಾಗದ ಶಿಷ್ಯರಿಂದ ಇತ್ತೀಚೆಗೆ ಕೇಳಿಬರುತ್ತಿದೆ. ಇದಕ್ಕೆ ಕಾರಣ ಮುಂಬರುವ ಚುನಾವಣೆ. ಅಷ್ಟಮಠದ ಶಿರೂರು ಶ್ರೀಪಾದಂಗಳವರಂತೆ ಸಿರಿಗೆರೆ ಗುರುಗಳೂ ಸಹ ಚುನಾವಣೆಗೆ ನಿಲ್ಲುವ ನಿರ್ಧಾರ ಮಾಡಿದ್ದಾರೆಯೇ? ಯಾವ ಪಕ್ಷದಿಂದ ಮತ್ತು ಯಾವ ಕ್ಷೇತ್ರದಿಂದ ಎಂಬ ಕುತೂಹಲವೇ? ಪಟ್ಟ ಶಿಷ್ಯರಾದ ದಾವಣಗೆರೆಯ ಶಾಮನೂರರನ್ನು ಹಣಿಯಲು ಅಮಿತ್ ಷಾ ಏನಾದರೂ ಷಡ್ಯಂತ್ರ ನಡೆಸಿದ್ದಾರೆಯೇ? ಉತ್ತರಪ್ರದೇಶದ ಯೋಗಿ ಆದಿತ್ಯನಾಥರಂತೆ ಸಿರಿಗೆರೆ ಗುರುಗಳನ್ನು ಮುಖ್ಯಮಂತ್ರಿ ಗಾದಿಗೆ ತರುವ ನಿಗೂಢ ಆಲೋಚನೆ ಪ್ರಧಾನ ಮಂತ್ರಿ ಮೋದಿಯವರಿಗೆ ಇದೆಯೇ? ಇದಾವುದೂ ಅಲ್ಲ.
ಬಹಳ ವರ್ಷಗಳ ಹಿಂದೆಯೇ ಸಿರಿಗೆರೆ ಗುರುಗಳು ಮುಖ್ಯ ಮಂತ್ರಿಗಳಾಗಿದ್ದರೆಂದರೆ ಅನೇಕರಿಗೆ ಸೋಜಿಗ ಉಂಟಾಗಬಹುದು! ಆದರೆ ಮುಖ್ಯಮಂತ್ರಿ ಚಂದ್ರು ಅವರಂತೆ ಖಾಯಂ ಮುಖ್ಯಮಂತ್ರಿಗಳೂ ಅಲ್ಲ, ಮಾಜಿ ಮುಖ್ಯಮಂತ್ರಿಗಳು ಅಲ್ಲ. ಆಸ್ಟ್ರೇಲಿಯಾದಲ್ಲಿ ಏರ್ಪಾಡಾಗಿದ್ದ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಲು ಹೊರಟಾಗ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬೀಳ್ಕೊಡಲು ಬಂದಿದ್ದ ಶಿಷ್ಯರೊಬ್ಬರು ಹಾರ ಹಾಕುವುದರೊಂದಿಗೆ ಒಂದು ಪತ್ರಿಕೆಯನ್ನು ನಮ್ಮ ಕೈಗೆ ನೀಡಿದರು. ವಿಮಾನವನ್ನೇರಿ ಆ ಪತ್ರಿಕೆಯನ್ನು ಓದಲು ಆರಂಭಿಸಿದಾಗ ತುಂಬಾ ನಗು ಬಂದಿತು. ಚಿತ್ರದುರ್ಗದ ಪ್ರಸಿದ್ಧ ಕಾದಂಬರಿಕಾರರಾದ ಬಿ ಎಲ್ ವೇಣು ಅವರು ಮಠಾಧಿಪತಿಗಳಲ್ಲೆರೂ ಸಂಘಟಿತರಾಗಿ ಪಕ್ಷೇತರರಾಗಿ ಚುನಾವಣೆಗೆ ನಿಂತು ಗೆದ್ದು ನಮ್ಮನ್ನು ಮುಖ್ಯಮಂತ್ರಿಗಳನ್ನಾಗಿಯೂ, ಆದಿ ಚುಂಚನಗಿರಿ ಮಠದ ಹಿರಿಯ ಶ್ರೀಗಳನ್ನು ಹಣಕಾಸು ಸಚಿವರನ್ನಾಗಿಯೂ, ಸುತ್ತೂರು ಮಠದ ಶ್ರೀಗಳವರನ್ನೂ ಶಿಕ್ಷಣ ಸಚಿವರನ್ನಾಗಿಯೂ, ಪೇಜಾವರ ಶ್ರೀಗಳನ್ನು ಮುಜರಾಯಿ ಸಚಿವರನ್ನಾಗಿಯೂ, ಚಿತ್ರದುರ್ಗದ ಮುರುಘಾಶರಣರನ್ನು ವಾರ್ತಾ ಮತ್ತು ಪ್ರಚಾರಖಾತೆ ಸಚಿವರನ್ನಾಗಿಯೂ ವಿಡಂಬನೆ ಮಾಡಿ ಆ ಪತ್ರಿಕೆಯಲ್ಲಿ ಲೇಖನ ಬರೆದಿದ್ದರು. ಅದನ್ನು ಓದಿ ನಸುನಕ್ಕು ಸ್ವದೇಶಕ್ಕೆ ಹಿಂದಿರುಗಿದ ಮೇಲೆ ಪೂರ್ಣಪ್ರಮಾಣದ ಸಚಿವ ಸಂಪುಟವನ್ನು ರಚನೆ ಮಾಡುವುದಾಗಿ ವೇಣು ಅವರಿಗೆ ಫೋನಾಯಿಸುವಂತೆ ನಮ್ಮ ಆಪ್ತಕಾರ್ಯದರ್ಶಿಗೆ ಸೂಚಿಸಿದ ನೆನಪು! ಸ್ವದೇಶಕ್ಕೆ ಹಿಂದಿರುಗಿ ಸಚಿವ ಸಂಪುಟ ರಚನೆ ಪೂರ್ಣಗೊಂಡ ಮೇಲೆ ಸಚಿವ ಸ್ಥಾನ ದೊರೆಯದ ಅತೃಪ್ತ ಮಠಾಧೀಶರು ಹೇಗೆ ಗುಂಪು ಗುಂಪಾಗಿ ಭಿನ್ನಮತೀಯ ಚಟುವಟಿಕೆ ನಡೆಸಿ ಸರಕಾರವನ್ನು ಉರುಳಿಸುವ ಪ್ರಯತ್ನ ನಡೆಸಿದರೆಂಬ ಕಲ್ಪನೆಯನ್ನು ಮಾಡಿಕೊಂಡು ವೇಣುರವರು ಮತ್ತೊಂದು ವಿಡಂಬನಾತ್ಮಕ ಲೇಖನವನ್ನು ಬರೆಯುವುದು ಒಳಿತು.
ಆರಂಭದಲ್ಲಿ ಉಲ್ಲೇಖಿಸಿದ ದಾವಣಗೆರೆಯ ಶಿಷ್ಯರ ಉದ್ಧಾರಕ್ಕೆ ಬೇರೆಯೇ ಕಾರಣವಿದೆ. ಜಗಳೂರಿನಲ್ಲಿ ನಡೆಯಬೇಕಾಗಿದ್ದ ನಮ್ಮ ಮಠದ ವಾರ್ಷಿಕ ಸಮಾರಂಭವಾದ ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ಭೀಕರ ಬರಗಾಲದ ಕಾರಣ ಎರಡು ವರ್ಷಗಳ ಕಾಲ ಮುಂದೂಡಲಾಗಿತ್ತು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಮಂಜೂರು ಮಾಡಿಕೊಟ್ಟಿದ್ದ ರಾಜನಹಳ್ಳಿ ಏತ ನೀರಾವರಿ ಯೋಜನೆಯಿಂದ ಈ ಭಾಗದ ಕೆರೆಗಳನ್ನು ತುಂಬಿಸಿದ ಮೇಲೆಯೇ ಹುಣ್ಣಿಮೆ ಮಹೋತ್ಸವವನ್ನು ನಡೆಸಬೇಕೆಂಬ ಸಂಕಲ್ಪ ನಮ್ಮದಾಗಿತ್ತು. ದೈವಕೃಪೆಯಿಂದ ನಮ್ಮ ಸಂಕಲ್ಪ ಈಡೇರಿ ಕಳೆದ ಜನವರಿ ತಿಂಗಳು ಎಲ್ಲ ಜನಾಂಗದವರೂ ಒಗ್ಗೂಡಿ ನಡೆಸಿದ ಒಂಬತ್ತು ದಿನಗಳ ತರಳಬಾಳು ಹುಣ್ಣಿಮೆ ಮಹೋತ್ಸವವು ತನ್ನ ಚುಂಬಕ ಶಕ್ತಿಯಿಂದ ಲಕ್ಷಾಂತರ ಜನರನ್ನು ಸೆಳೆಯಿತು. ಕೊನೆಯ ದಿನ ಬಂದಿದ್ದ ಈಗಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ನಮ್ಮ ಒತ್ತಾಸೆಯ ಮೇರೆಗೆ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಉಸ್ತುವಾರಿ ಸಚಿವರಾದ ಮಲ್ಲಿಕಾರ್ಜುನ್ ಮತ್ತು ಆಂಜನೇಯ ಅವರ ಒತ್ತಡಕ್ಕೆ ಮಣಿದು ಜಗಳೂರಿನ 46 ಕೆರೆಗಳು ಮತ್ತು ಭರಮಸಾಗರದ ಸುತ್ತಮುತ್ತಲಿನ 33 ಕೆರೆಗಳಿಗೆ ತುಂಗಭದ್ರೆಯಿಂದ ನೀರು ಹರಿಸುವ ಎರಡು ಹೊಸ ಏತನೀರಾವರಿ ಯೋಜನೆಗಳಿಗೆ ಒಟ್ಟು 500 ಕೋಟಿ ರೂ. ಗಳನ್ನು ಕಳೆದ ಫೆಬ್ರವರಿಯಲ್ಲಿ ಮಂಡಿಸಿದ ಬಜೆಟ್ ನಲ್ಲಿ ಸೇರ್ಪಡೆ ಮಾಡಿದ್ದು ಈ ಭಾಗದ ಜನರಿಗೆ ತುಂಬಾ ಸಂತಸವನ್ನುಂಟುಮಾಡಿತು. ಖಾಯಂ ಬರಗಾಲದ ಸೀಮೆಯಾದ ಜಗಳೂರು ಜನರು ತಮ್ಮ ಸಂತಸವನ್ನು ಹಂಚಿಕೊಳ್ಳಲು ಮಠಕ್ಕೆ ಬಂದಿದ್ದರು. ಜನರ ಮುಖದಲ್ಲಿದ್ದ ಮಂದಹಾಸವನ್ನು ನೋಡಿ ಸಂತೋಷವಾದರೂ ನಮ್ಮ ಮನಸ್ಸಿನಲ್ಲಿದ್ದ ಆತಂಕವೇ ಬೇರೆ. ಎಲ್ಲರೂ ಸೇರಿ ಒಗ್ಗಟ್ಟಿನಿಂದ ಆಚರಿಸಿ ಜನಮಾನಸದಲ್ಲಿ ಉಂಟುಮಾಡಿದ ಸಂತಸ ಸಂಭ್ರಮಗಳನ್ನು ಈಗ ಬರುವ ಚುನಾವಣೆ ಒಡೆದು ಹಾಕುವುದಿಲ್ಲವೆ? "ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ" ಎಂಬಂತೆ ಆಗುವುದಿಲ್ಲವೇ? ಇದಕ್ಕೆ ಪರಿಹಾರವೇನು?
"ಧರ್ಮವು ಜನರನ್ನು ಒಂದುಗೂಡಿಸುತ್ತದೆ; ಜಾತಿಯು ಜನರನ್ನು ವಿಘಟಿಸುತ್ತದೆ" ಎಂಬ ಮಾತು ಈಗ ಹಳತಾಗಿದೆ. ರಾಜಕೀಯವು ಜಾತಿಗಳನ್ನು ಒಂದುಗೂಡಿಸುತ್ತದೆ, ಹಾಗೆಯೇ ಒಂದೇ ಜಾತಿಯ ಜನರ ಮಧ್ಯೆ ಬಿರುಕನ್ನೂ ಮೂಡಿಸುತ್ತದೆ. ಒಂದು ಜಾತಿಯ ಜನರು ತಮ್ಮ ಜಾತಿಯವರಿಗೆ ಮತ ನೀಡುತ್ತಾರೆಂದು ಹೇಳಲಾಗುವುದಿಲ್ಲ. ಎಲ್ಲ ಜಾತಿಯ ಮತದಾರರು ತಮ್ಮ ತಮ್ಮ ಪಕ್ಷದ ಯಾವುದೇ ಜಾತಿಯ ಅಭ್ಯರ್ಥಿಗಳಿಗೆ ಮತ ನೀಡುವುದರಿಂದ ಅಷ್ಟರಮಟ್ಟಿಗೆ ಜನರು ಜಾತ್ಯತೀತ. ಚುನಾವಣೆಗಳಲ್ಲಿ ಜಾತಿಯ ಪ್ರಾಬಲ್ಯಕ್ಕಿಂತ ಗುಂಪುಗಳ ಪ್ರಾಬಲ್ಯ ಜಾಸ್ತಿ, ಚುನಾವಣೆ ಎಂದರೆ ಭ್ರಷ್ಟಾಚಾರದ ತಾಯಿಬೇರು ಎಂಬುದನ್ನು ಕಳೆದ ಅಂಕಣದಲ್ಲಿ ವಿಸ್ತೃತವಾಗಿ ಬರೆಯಲಾಗಿದೆ. "ಬೀಜ ಮೊದಲೋ ಮರ ಮೊದಲೋ?" ಎಂಬಂತೆ ಜನರನ್ನು ರಾಜಕಾರಣಿಗಳು ಭ್ರಷ್ಟರನ್ನಾಗಿಸಿದ್ದಾರೋ, ಜನರು ರಾಜಕಾರಣಿಗಳನ್ನು ಭ್ರಷ್ಟರನ್ನಾಗಿಸಿದ್ದಾರೋ ಎಂಬ ಪ್ರಶ್ನೆಗೆ ಖಚಿತವಾಗಿ ಉತ್ತರಿಸುವುದು ಕಷ್ಟ. ಒಟ್ಟಾರೆ ಅಧಿಕಾರ ಲಾಲಸೆ, ಹಣದ ದಾಹ ಇಬ್ಬರನ್ನೂ ಭ್ರಷ್ಟರನ್ನಾಗಿಸಿದೆ. ಎಲ್ಲ ಪಕ್ಷಗಳ ಅಭ್ಯರ್ಥಿಗಳೂ ಕೋಟ್ಯಂತರ ರೂ. ಖರ್ಚು ಮಾಡುತ್ತಾರೆ. ಜನರೂ ಎಲ್ಲರಿಂದ ಹಣ ಪಡೆಯುತ್ತಾರೆ. ಮತದಾರರಿಗೆ ಹಣ ಮತ್ತು ಮದ್ಯದ ಆಮಿಷವನ್ನು ಒಡ್ಡುವ ರಾಜಕಾರಣಿಗಳು ಭ್ರಷ್ಟರಾದರೆ ಅದನ್ನು ಪಡೆದು ಓಟು ಮಾಡುವ ಜನರೇನು ನೀತಿವಂತರೇನಲ್ಲ; ಭ್ರಷ್ಟಾತಿಭ್ರಷ್ಟರು. ಹೆಚ್ಚಿಗೆ ಹಣ ಮತ್ತು ಮದ್ಯ ಹಂಚಿದ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾನೆಂಬ ಭರವಸೆ ಏನೂ ಇಲ್ಲ. ಆದರೂ ಹಂಚದೇ ಚುನಾವಣೆ ನಡೆಸಲು ಸಾಧ್ಯವಿಲ್ಲವೆಂಬ ವಿಪರೀತ ಸ್ಥಿತಿ.
ಇದಕ್ಕೆ ಪರಿಹಾರವಿಲ್ಲವೇ? ಜಗಳೂರು ಕ್ಷೇತ್ರದಲ್ಲಿ ಪರಿಶುದ್ಧ ಚುನಾವಣೆ ನಡೆಸಲು ಸಾಧ್ಯವಿಲ್ಲವೇ? ಎಂಬ ನಮ್ಮ ಪ್ರಶ್ನೆಗೆ ಮಠಕ್ಕೆ ಬಂದಿದ್ದ ಜನರು ಮೂಕವಿಸ್ಮಿತರಾದರು. ಸಾವರಿಸಿಕೊಂಡು ಒಬ್ಬೊಬ್ಬರೆ ಎದ್ದುಬಂದು ಕೆಳಕಂಡಂತೆ ಸ್ಪಂದಿಸಿದರು.
- ಪ್ರಜಾಪ್ರಭುತ್ವ ಇರುವುದು ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ, ಆದರೆ ಈಗಿನ ಚುನಾವಣೆಗಳು ದುಡ್ಡಿನಿಂದ, ದುಡ್ಡಿಗಾಗಿ, ದುಡ್ಡಿಗೋಸ್ಕರ. ರಾಜಕೀಯ ಶುದ್ದೀಕರಣದ ಪ್ರಯೋಗಕ್ಕೆ ಎಲ್ಲರೂ ಸಹಕರಿಸಿ ಪ್ರಜಾಪ್ರಭುತ್ವವನ್ನು ಉಳಿಸಬೇಕಾಗಿದೆ.
- ಹಣ ಹೆಂಡವಿಲ್ಲದೆ ಚುನಾವಣೆ ಮಾಡುವುದು ದೊಡ್ಡ ಸಾಧನೆ. ಚುನಾವಣೆ ದುಡ್ಡಿನಮಯ. ದುಡ್ಡಿದ್ದ ಶ್ರೀಮಂತರು ಮಾತ್ರ ಚುನಾವಣೆ ಮಾಡಲು ಸಾಧ್ಯ ಎಂಬಂತಾಗಿದೆ. ನಾವೆಲ್ಲರೂ ಹೋರಾಟ ಮಾಡಬೇಕು. ಹಣ ಮತ್ತು ಮದ್ಯ ಮುಕ್ತ ಚುನಾವಣೆಗೆ ನನ್ನ ಸಂಪೂರ್ಣ ಬೆಂಬಲವಿದೆ.
- ಇದು ಸಾಧ್ಯನಾ ಎಂಬ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿದೆ. ಇದನ್ನು ಸಾಧ್ಯ ಮಾಡಲು ಎಲ್ಲರೂ ಪ್ರಯತ್ನಿಸಬೇಕು. ಇದಕ್ಕೆ ನಾನು ಒಪ್ಪುತ್ತೇನೆ.
- ದುಡ್ಡು ಹಂಚದೇ ಇದ್ದರೂ ಜನ ಮತ ಹಾಕುತ್ತಾರೆ, ಚುನಾವಣೆ ನಡೆಯುತ್ತದೆ ಎಂಬುದು ಜನರಿಗೆ ಮನವರಿಕೆ ಆಗಬೇಕು. ಚುನಾವಣೆಯಲ್ಲಿ ಒಬ್ಬರು ಗೆಲ್ಲುತ್ತಾರೆ, ಒಬ್ಬರು ಸೋಲುತ್ತಾರೆ. ನಾನೇ ಗೆಲ್ಲಬೇಕೆಂಬ ಹಠ ಸಾಧನೆ ಅಭ್ಯರ್ಥಿಗಳ ಮನಸ್ಸಿನಲ್ಲಿ ಇರಬಾರದು.
- ಹಣ ಹಂಚಿದರೆ ಹೆಚ್ಚಿನ ಪ್ರಮಾಣದ ಮತದಾನ ಆಗುತ್ತದೆ. ಹಂಚದಿದ್ದರೆ ಕಡಿಮೆ ಪ್ರಮಾಣದ ಮತದಾನವಾಗುತ್ತದೆ. ಒಂದೆರಡು ಚುನವಾಣೆಗಳಲ್ಲಿ ಹಣ ಹಂಚದೇ ಇದ್ದರೆ ಹಣ ಹಂಚದಿರುವುದೇ ಚುನಾವಣೆಯ ಸಹಜ ಲಕ್ಷಣವಾಗುತ್ತದೆ. ಸ್ಪರ್ಧಿಗಳು ಸಮಾಜಮುಖಿಯಾಗಿ ಅಭಿವೃದ್ಧಿ ಕೆಲಸ ಮಾಡಲು ಮುಂದಾಗಬೇಕು. ಇದೊಂದು ಒಳ್ಳೆಯ ಪ್ರಯೋಗ, ಎಲ್ಲರೂ ಬೆಂಬಲಿಸೋಣ. ಜಗಳೂರನ್ನು ಮಾದರಿ ಕ್ಷೇತ್ರವನ್ನಾಗಿ ಮಾಡೋಣ.
- ಇದೊಂದು ಸೂಕ್ಷ್ಮ ವಿಚಾರ. ಕಷ್ಟಕರವಾದುದು. ಆದರೂ ಕಷ್ಟಪಟ್ಟು ಮುಂದಿನ ಪೀಳಿಗೆಗೆ ಕೊಡಬೇಕಾಗದ ಬಳುವಳಿ.
ನಮ್ಮ ಗುರುಗಳಿಗೆ ಇದೆಲ್ಲಾ ಏಕೆ ಬೇಕಿತ್ತು, ಇದು ಎಲ್ಲಿಯಾದರೂ ಸಾಧ್ಯವೇ ಎಂಬ ಸಂದೇಹದ ಪ್ರಶ್ನೆಗೆ ನಮ್ಮ ಉತ್ತರವಿಷ್ಟೆ: ನಾಡಿನಾದ್ಯಂತ ನಮ್ಮನ್ನು, ನಮ್ಮಂತೆ ಅನೇಕ ಮಠಾಧೀಶರನ್ನು ಸಭೆ ಸಮಾರಂಭಗಳಿಗೆ ಆಹ್ವಾನಿಸುತ್ತಾರೆ. ಆಗ ಹೇಳಿದ ಹಿತನುಡಿಗಳನ್ನು ಜನರು ಪಾಲಿಸುತ್ತಾರಾ? ಸಾವಿರಾರು ವರ್ಷಗಳಿಂದ ಸಾಧುಸಂತರು ಹೇಳುತ್ತಾ ಬಂದ ಉಪದೇಶದ ಮಾತುಗಳಂತೆ ಜನರು ನಡೆದುಕೊಂಡಿದ್ದಾರಾ? ಉಪದೇಶದ ಮಾತುಗಳು ಗೋರ್ಕಲ್ಲ ಮೇಲೆ ಬೋರ್ಗರೆದು ಸುರಿದ ಮಳೆಯಂತೆ ವ್ಯರ್ಥವಾಗಿಲ್ಲವೇ? ಹಾಗೆಂದು ಉಪದೇಶ ಮಾಡುವುದೇ ಬೇಡವೆಂದು ಹೇಳಲು ಸಾಧ್ಯವೇ? ಉಪದೇಶದ ಮಾತುಗಳು "ಸಿದ್ಧಾಂತ" (theory) ಇದ್ದಂತೆ, ಅದನ್ನು ಕಾರ್ಯರೂಪಕ್ಕೆ ತರುವುದು "ಪ್ರಯೋಗ" (practical) ಇದ್ದಂತೆ. ಅಂತಹ ವಿನೂತನ ಪ್ರಯೋಗವನ್ನು ನಡೆಸಲು ಈಗ ಜಗಳೂರು ಕ್ಷೇತ್ರದಲ್ಲಿ ಸಿದ್ಧತೆ ನಡೆದಿದೆ.
ಇಂಥವರಿಗೇ ಓಟು ಕೊಡಿ ಎಂದು ಹೇಳುತ್ತಿಲ್ಲ. ಯಾರಿಗಾದರೂ ಟಿಕೆಟ್ ಕೊಡಲಿ. ಜನರು ಯಾರಿಗಾದರೂ ಓಟು ಹಾಕಲಿ - ಅದು ನಮಗೆ ಮುಖ್ಯವಲ್ಲ. ಚುನಾವಣೆಯಲ್ಲಿ ಅಪಮಾರ್ಗ ಮತ್ತು ಭ್ರಷ್ಟಮಾರ್ಗವನ್ನು ಯಾರೂ ಅನುಸರಿಸಬಾರದು. ಇದಕ್ಕೆ ಜಗಳೂರು ಕ್ಷೇತ್ರ ಮುಂಬರುವ ಚುನಾವಣೆಯಲ್ಲಿ ಇಡೀ ದೇಶಕ್ಕೇ ಮಾದರಿಯಾಗಲಿ ಎಂಬುದೇ ನಮ್ಮ ಆಶಯ. ಇದು ಸಾಧ್ಯವೇ ಇಲ್ಲವೆನ್ನುವುದಾದರೆ ನೀತಿಸಂಹಿತೆಯನ್ನು ಕೈಬಿಟ್ಟು "ಅಕ್ರಮ ಸಕ್ರಮ"ದಂತೆ ಚುನಾವಣಾ ಅಕ್ರಮಗಳನ್ನು ಶಾಸನಬದ್ಧವಾಗಿ ಸಕ್ರಮಗೊಳಿಸಬೇಕೇ?
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 15.3.2018