ಹಿಮಾಲಯದ ತಪ್ಪಲಲ್ಲಿ ಏಷ್ಯಾ-ಪೆಸಿಫಿಕ್ ಶಾಂತಿ ಶೃಂಗಸಭೆ

ಭಾರತದ ನೆರೆಯ ರಾಷ್ಟ್ರವಾದ ನೇಪಾಳವನ್ನು ಆಳಿದ ಎರಡು ಪ್ರಮುಖ ರಾಜಮನೆತನಗಳೆಂದರೆ: 1.ಮಲ್ಲ ಮತ್ತು 2.ಷಾ ರಾಜಮನೆತನಗಳು. ಮಲ್ಲರು 12ನೆಯ ಶತಮಾನದಿಂದ 18ನೆಯ ಶತಮಾನದ ಮಧ್ಯಭಾಗದವರೆಗೆ ಆಳ್ವಿಕೆ ನಡೆಸಿದರೆ ಷಾ ವಂಶಸ್ಥರು ಅಲ್ಲಿಂದ (1768) ಮುಂದಕ್ಕೆ 2008 ರವರೆಗೆ ರಾಜ್ಯಭಾರ ಮಾಡಿದರು. ಮಲ್ಲರ ಕುಲದೇವತೆ "ತಲೇಜು ಭವಾನಿ". ಕನ್ನಡದ ತುಳಜಾ ಭವಾನಿ ನೇಪಾಳಿ ಜನರ ಬಾಯಲ್ಲಿ ತಲೇಜು ಭವಾನಿ ಆಗಿರುವಂತೆ ತೋರುತ್ತದೆ. ದುರ್ಗಾದೇವಿಯ ಅವತಾರವೆನಿಸಿದ ಈ ದೇವತೆಯ ವಿಗ್ರಹವನ್ನು ತಂದುಕೊಟ್ಟವನು ಕರ್ನಾಟಕದ ಹರಿಸಿಂಹದೇವ. ಮುಸ್ಲಿಮರ ಧಾಳಿಯಿಂದ ತಲೆಮರೆಸಿಕೊಂಡು ಕಠ್ಮಂಡುವಿಗೆ ಬಂದಾಗ ಈ ದೇವಿಯ ವಿಗ್ರಹವನ್ನು ಜೊತೆಯಲ್ಲಿ ತೆಗೆದುಕೊಂಡು ಬಂದಿದ್ದನೆಂದು ಇಲ್ಲಿಯ ಇತಿಹಾಸಜ್ಞರು ಹೇಳುತ್ತಾರೆ. ಕರ್ನಾಟಕದ ಚಾಲುಕ್ಯವಂಶದ 6ನೆಯ ತಲೆಮಾರಿನ ಈ ಹರಿಸಿಂಹದೇವನು ದಂಡೆತ್ತಿ ಬಂದು ಇಲ್ಲಿಯ ರಾಜನನ್ನು ಸೋಲಿಸಿ ಈ ದೇವಾಲಯವನ್ನು ನಿರ್ಮಿಸಿದನೆಂಬ ವಾದವೂ ಇದೆ.
ಮಲ್ಲ ರಾಜಮನೆತನದ ಕೊನೆಯ ರಾಜನೇ ಜಯಪ್ರಕಾಶ ಮಲ್ಲ. ಈತನನ್ನು ಕುರಿತು ಒಂದು ದಂತಕಥೆ ಇದೆ. ಕುಲದೇವತೆಯಾದ ತಲೇಜು ಭವಾನಿ ಪ್ರತಿದಿನ ರಾತ್ರಿ ಮನುಷ್ಯರೂಪದಲ್ಲಿ ಪ್ರತ್ಯಕ್ಷಳಾಗಿ ರಾಜಾಡಳಿತಕ್ಕೆ ಸಂಬಂಧಿಸಿದಂತೆ ಏನು ಮಾಡಬೇಕೆಂದು ರಾಜನಿಗೆ ಸಲಹೆ ಸೂಚನೆಗಳನ್ನು ಕೊಡುತ್ತಿದ್ದಳಂತೆ. ನಂತರ ಕೆಲಹೊತ್ತು ರಾಜನೊಂದಿಗೆ ಪಗಡೆಯಾಟ ಆಡುತ್ತಿದ್ದಳಂತೆ. ಒಮ್ಮೆ ರಾಜನು ಆಕೆಯ ಸೌಂದರ್ಯಕ್ಕೆ ಮಾರು ಹೋಗಿ ಮನಸ್ಸಿನಲ್ಲಿ ಕಾಮುಕ ಭಾವನೆ ತಾಳಿದ್ದರಿಂದ ದೇವಿಯು ಆಕ್ರೋಶಗೊಂಡು “ನಿನ್ನ ರಾಜ್ಯಭಾರ ಕೊನೆಗೊಳ್ಳಲಿ" ಎಂದು ಶಪಿಸಿ ಅದೃಶ್ಯಳಾದಳಂತೆ! ರಾಜನು ತುಂಬಾ ಪಶ್ಚಾತ್ತಾಪಗೊಂಡು ಕ್ಷಮೆ ಯಾಚಿಸಿದ. ದೇವಿಯು ಆತನ ಕನಸಿನಲ್ಲಿ ಪ್ರತ್ಯಕ್ಷಳಾಗಿ “ಇನ್ನು ಮುಂದೆ ನಾನು ನಿನಗೆ ನೇರವಾಗಿ ಬಂದು ಕಾಣಿಸಿಕೊಳ್ಳುವುದಿಲ್ಲ. ಅಪ್ರಾಪ್ತವಯಸ್ಸಿನ ಕುಮಾರಿಯರಲ್ಲಿ "ನೀನು ನನ್ನನ್ನು ಕಂಡು ಪೂಜಿಸು” ಎಂದು ಹೇಳಿದಳಂತೆ. ದೇವಿಯ ಆಜ್ಞೆಯಂತೆ ಶಾಕ್ತ ಕುಟುಂಬಗಳಲ್ಲಿ ವಿಶೇಷ ಗುಣವುಳ್ಳ ಬಾಲಕಿಯೊಬ್ಬಳನ್ನು ಆಯ್ಕೆಮಾಡಿ ಹಬ್ಬ ಹರಿದಿನಗಳಂದು ಆಕೆಯನ್ನು ದೇವಾಲಯದಲ್ಲಿ ಕೂರಿಸಿ ಪೂಜಿಸುವ, ಮೆರವಣಿಗೆ ಮಾಡುವ "ಕುಮಾರಿ ಸಂಪ್ರದಾಯ" ಈಗಲೂ ಇಲ್ಲಿ ಪ್ರಚಲಿತದಲ್ಲಿದೆ. ಆಕೆ ಏನಾದರೂ ಕಣ್ಣೀರು ಸುರಿಸಿದರೆ ನಾಡಿಗೆ ಒಳ್ಳೆಯದಾಗುವುದಿಲ್ಲವೆಂಬ ನಂಬಿಕೆಯೂ ಜನರಲ್ಲಿದೆ. ಆಕೆ ಪ್ರಾಪ್ತವಯಸ್ಕಳಾದ ಮೇಲೆ ಅವಳ ಸ್ಥಾನದಲ್ಲಿ ಬೇರೊಬ್ಬ ಕುಮಾರಿಯನ್ನು ಆಯ್ಕೆಮಾಡಿ ಆರಾಧಿಸುವ ಪದ್ಧತಿ ಬೆಳೆದು ಬಂದಿದೆ.
ಈ ಕುಮಾರಿ ಸಂಪ್ರದಾಯದ ಪ್ರಕಾರ ಆಯ್ಕೆಯಾದ ಬಾಲಕಿಯರಿಗೆ ಸರಿಯಾದ ಶಿಕ್ಷಣ, ಆಹಾರ ಮತ್ತು ಆರೋಗ್ಯ ಸೌಲಭ್ಯ ನೀಡುತ್ತಿಲ್ಲ, ಅನೇಕ ಕಟ್ಟುಪಾಡುಗಳನ್ನು ವಿಧಿಸಿ ಅವರ ಶೋಷಣೆ ಮಾಡಲಾಗುತ್ತಿದೆ ಎಂದು ಕೆಲವರು ಪ್ರಜ್ಞಾವಂತ ಮಹಿಳೆಯರು ಇಲ್ಲಿಯ ಸಿವಿಲ್ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ (PIL) ಕೇಸನ್ನು 2005 ರಲ್ಲಿ ದಾಖಲಿಸಿದ್ದರು. ಅಮೇರಿಕೆಯ ಸಿನೆಮಾ ಕಂಪನಿಯೊಂದು ಈ ಸಂಪ್ರದಾಯವನ್ನು ಕುರಿತಂತೆ ತಯಾರಿಸುತ್ತಿದ್ದ ಸಾಕ್ಷ್ಯಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಲು "ಕುಮಾರಿ"ಯೊಬ್ಬಳು ಹೋಗಿದ್ದಳು. ಸಂಪ್ರದಾಯದ ಚೌಕಟ್ಟನ್ನು ಮೀರಿ ವಿದೇಶಯಾತ್ರೆ ಕೈಗೊಂಡು ಅಪವಿತ್ರಳಾದಳೆಂಬ ಆರೋಪದ ಮೇಲೆ ದೇವಾಲಯದ ಆಡಳಿತ ಮಂಡಳಿಯು ಅವಳನ್ನು ಕುಮಾರಿ ಸ್ಥಾನದಿಂದ ಪದಚ್ಯುತಿಗೊಳಿಸಿತ್ತು. ಇದನ್ನು ಪ್ರಶ್ನಿಸಿ ಹಾಕಿದ್ದ ಪ್ರಕರಣದ ವಿಚಾರಣೆಯು ಮೂರು ವರ್ಷಗಳ ಕಾಲ ನಡೆದು ಈ ಕುಮಾರಿಯರಿಗೆ ಅಂತಹ ಯಾವುದೇ ನಿರ್ಬಂಧ ಹೇರಕೂಡದು, ಅವರು ಬಯಸಿದಲ್ಲಿಗೆ ಹೋಗಲು ಸ್ವಾತಂತ್ರ್ಯವಿರಬೇಕು, ಅಡ್ಡಿಪಡಿಸಬಾರದು ಎಂದು 2008ರಲ್ಲಿ ನೇಪಾಳದ ನ್ಯಾಯಾಲಯವು ತೀರ್ಪು ನೀಡಿತು.
ತಲೇಜು ಭವಾನಿಯ ಶಾಪದ ಪರಿಣಾಮವೋ ಎನ್ನುವಂತೆ ರಾಜ ಜಯಪ್ರಕಾಶ ಮಲ್ಲನನ್ನು ಯುದ್ಧದಲ್ಲಿ ಸೋಲಿಸಿ ಪೃಥ್ವಿ ನಾರಾಯಣ ಷಾ ನೇಪಾಳದ ರಾಜಗದ್ದುಗೆಯನ್ನೇರಿದನು. ಈತನು ಪಶ್ಚಿಮದ ಮತ್ಸ್ಯಗಂಧೀ ನದಿಯಿಂದ ಪೂರ್ವದ ತ್ರಿಶೂಲೀ ನದಿಯವರೆಗೆ ಹರಡಿದ್ದ ಗೋರ್ಖಾ ಸಾಮ್ರಾಜ್ಯದವನಾಗಿದ್ದರೂ ರಜಪೂತ ಮೂಲದವನು. ಸುಮಾರು 240 ವರ್ಷಗಳ ಕಾಲ ಆಳಿದ ಈ ಎರಡನೆಯ ರಾಜಮನೆತನದವರ ಕಾಲಾವಧಿಯಲ್ಲಿ ನೇಪಾಳವು ಪ್ರಪಂಚದಲ್ಲಿ ಏಕೈಕ ಹಿಂದೂ ರಾಷ್ಟ್ರವೆಂಬ ಖ್ಯಾತಿಯನ್ನು ಪಡೆಯಿತು. ಕಳೆದ ಶತಮಾನದ ಉತ್ತರಾರ್ಧದಲ್ಲಿ ಅನೇಕ ರಾಜಕೀಯ ವಿಪ್ಲವಗಳು ಇಲ್ಲಿ ನಡೆದವು. ರಾಜಮನೆತನದವರಲ್ಲಿಯೇ ಇದ್ದ ಆಂತರಿಕ ಬಿಕ್ಕಟ್ಟು 2001 ಜೂನ್ 1 ರಂದು ಸ್ಫೋಟಗೊಂಡು ಯುವರಾಜ ದೀಪೇಂದ್ರನು ಅರಮನೆಯೊಳಗೆ ನಡೆಸಿದ ಹಠಾತ್ ಗುಂಡಿನ ಧಾಳಿಯಿಂದ ರಾಜ ಬೀರೇಂದ್ರ ಷಾ, ರಾಣಿ ಐಶ್ವರ್ಯಾ ಮೊದಲಾದ ಒಂಬತ್ತು ಜನ ರಾಜಮನೆತನದವರ ಕಗ್ಗೊಲೆಯಾಯಿತು. ಅದರ ಪರಿಣಾಮವಾಗಿ ಕಳೆದ ನಾಲ್ಕಾರು ದಶಕಗಳಿಂದ ರಾಜಪ್ರಭುತ್ವದ ವಿರುದ್ದ ಬಂಡೆದ್ದಿದ್ದ ಜನಾಂದೋಲನವು ಗಟ್ಟಿಗೊಂಡು ರಾಜರ ಆಳ್ವಿಕೆಯನ್ನು ಕೊನೆಗಾಣಿಸಿ 2008ರಲ್ಲಿ ಪ್ರಜಾಪ್ರಭುತ್ವವು ನೆಲೆಗೊಂಡಿತು. ನೇಪಾಳವು ಈಗ ತನ್ನದೇ ಆದ ಸಂವಿಧಾನವನ್ನು ಪಡೆದು ಗಣರಾಜ್ಯವಾಗಿ ರೂಪುಗೊಂಡಿದೆ.
ನೇಪಾಳವು ಹಿಮಾಲಯದ ಕಣಿವೆಯಲ್ಲಿ 800 ಕಿ.ಮೀ. ಉದ್ದ, 200 ಕಿ.ಮೀ. ಅಗಲವುಳ್ಳ ಪುಟ್ಟ ದೇಶ. ವಿಮಾನದಲ್ಲಿ ಪಯಣಿಸುವಾಗ ಮೇಲಿನಿಂದ ನೋಡಿದರೆ ಕೆಳಗೆ ಸಾಲು ಸಾಲಾಗಿ ಕಾಣಿಸುವ ಕೆಂಪು ಹಂಚಿನ ಮನೆಗಳು ಪರ್ವತಾರೋಹಿಗಳಿಗೆ Red Carpet ಹಾಸಿದಂತೆ ಕಾಣಿಸುತ್ತವೆ. ವಾಸ್ತವವಾಗಿ ಹಿಮಾಲಯ ಪರ್ವತವನ್ನು ಏರುವ ಪರ್ವತಾರೋಹಿಗಳಿಗೆ ನೇಪಾಳದ ಕಡೆಯಿಂದ ಹತ್ತುವುದೇ ಸುಲಭ ಎಂದು ಹೇಳುತ್ತಾರೆ. ಈ ದೇಶವನ್ನು 14 ಪ್ರಾಂತ್ಯಗಳನ್ನಾಗಿ ವಿಂಗಡಿಸಲಾಗಿದೆ. ಅವುಗಳಲ್ಲಿ ಜಗತ್ತಿಗೆ ಶಾಂತಿಸಂದೇಶವನ್ನು ಸಾರಿದ ಗೌತಮ ಬುದ್ಧನ ಜನ್ಮಸ್ಥಾನವಾದ ಲುಂಬಿನಿಯನ್ನು ಬಿಟ್ಟರೆ ಉಳಿದೆಲ್ಲ ಪ್ರಾಂತ್ಯಗಳ ಹೆಸರು ಈ ದೇಶದಲ್ಲಿ ಹರಿಯುವ ನದಿಗಳ ಮತ್ತು ಗುಡ್ಡಬೆಟ್ಟಗಳ ಹೆಸರೇ ಆಗಿವೆ. ಉದಾಹರಣೆಗೆ ಬಾಗ್ಮತೀ, ನಾರಾಯಣೀ, ಗಂಡಕೀ, ಭೇರೀ, ಮಹಾಕಾಳೀ, ಧವಲಗಿರಿ ಇತ್ಯಾದಿ ಈ ದೇಶಕ್ಕೆ ಬರುವ ಯಾವ ಭಾರತೀಯನಿಗೂ ಬೇರೆ ದೇಶಕ್ಕೆ ಬಂದ ಅನುಭವವಾಗುವುದಿಲ್ಲ. ನಮ್ಮದೇ ದೇಶದ ಬೇರೊಂದು ರಾಜ್ಯಕ್ಕೆ ಬಂದಂತೆ ಭಾಸವಾಗುತ್ತದೆ. ಅಪರಿಚಿತರಾದರೂ ಹತ್ತಿರ ಬಂದಾಗ ಗುರುಗಳಿಗೆ ಪಾದ ಮುಟ್ಟಿ ನಮಸ್ಕರಿಸುವ ಧಾರ್ಮಿಕ ಶ್ರದ್ಧೆ ಹಿರಿಯರಿಗೆ ಕೊಡುವ ಗೌರವ, ಅತಿಥಿಗಳಿಗೆ ನಗುಮುಖದಿಂದ ನಮಗೆ ಎಂದು ಕೈಜೋಡಿಸಿ ನೀಡುವ ಸ್ವಾಗತ ಎಲ್ಲವೂ ಭಾರತೀಯ ಸಂಸ್ಕೃತಿಯ ಪ್ರತಿರೂಪ. ಅವರಾಡುವ ನೇಪಾಳೀ ಭಾಷೆಯನ್ನು ಹಿಂದೀ ಬಲ್ಲವರು ಸುಲಭವಾಗಿ ಗ್ರಹಿಸಬಹುದು. ಇಲ್ಲಿಯ ಜನರೊಂದಿಗೆ ಮಾತನಾಡುವಾಗ ಅವರ ನಡೆನುಡಿಗಳಲ್ಲಿ ಭಾರತೀಯ ಧರ್ಮ ಮತ್ತು ಸಂಸ್ಕೃತಿ ಸ್ಪಷ್ಟವಾಗಿ ಗೋಚರಿಸುತ್ತದೆ. ಸಮ್ಮೇಳನದ ಬಿಡುವಿನ ವೇಳೆಯಲ್ಲಿ ಆಕಸ್ಮಿಕವಾಗಿ ಭೇಟಿಯಾದ, ಸ್ಥಳೀಯ ಭದ್ರತಾ ಸಿಬ್ಬಂದಿಯ ಮೇಲುಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದ ಸರಕಾರೀ ಅಧಿಕಾರಿಯೊಂದಿಗೆ ನಡೆದ ಸಂಭಾಷಣೆ ನಮ್ಮನ್ನು ಮೂಕವಿಸ್ಮಿತರನ್ನಾಗಿಸಿತು. ಅವನಿಗೆ ಇಬ್ಬರು ಅಣ್ಣಂದಿರು. ಪಿತ್ರಾರ್ಜಿತ ಆಸ್ತಿಯನ್ನು ಭಾಗ ಮಾಡಿಕೊಂಡು ಬೇರೆ ಬೇರೆ ಇದ್ದರೂ ವಿಶ್ವಾಸದಲ್ಲಿದ್ದಾರೆ. ಅಕ್ಕಂದಿರ ಮದುವೆಯಾಗಿದೆ. ತಂದೆ ಮರಣ ಹೊಂದಿದ್ದಾನೆ. 85 ವರ್ಷದ ತಾಯಿ ಅವನೊಡನೆ ಇದ್ದಾಳೆ ಎಂಬ ಸಂಗತಿ ತಿಳಿದಾಗ “ಓಹೋ! ತಾಯಿ ಕಿರಿಯವನಾದ ನಿಮ್ಮ ಆಶ್ರಯದಲ್ಲಿ ಇದ್ದಾಳೆಯೇ?” ಎಂಬ ನಮ್ಮ ಉದ್ಧಾರಕ್ಕೆ ಆತನು ಸುತರಾಂ ದನಿಗೂಡಿಸದೆ “ಇಲ್ಲ, ನಾನು ತಾಯಿಯ ಆಶ್ರಯದಲ್ಲಿದ್ದೇನೆ" ಎಂದು ಪ್ರತಿಕ್ರಿಯಿಸಿದ. ತನ್ನ ಮೇಲೆ ತಾಯಿಗಿರುವ ಪ್ರೀತಿಯನ್ನು ನೆನೆಸಿಕೊಂಡು ತುಂಬಾ ಭಾವುಕನಾದ! ತಾಯಿಯ ಮೇಲೆ ಅವನಿಗಿರುವ ಮಾತೃಭಕ್ತಿಯನ್ನು ಕಂಡು ನಾವು ಆತನನ್ನು ಹಾಗೆ ಕೇಳಬಾರದಾಗಿತ್ತು ಎಂದು ನಮಗೆ ಮುಜುಗರ ಉಂಟಾಯಿತು.
ಎಪ್ಪತ್ತರ ದಶಕದಲ್ಲಿ ನಮ್ಮ ಲಿಂಗೈಕ್ಯ ಗುರುವರ್ಯರು 750 ಜನ ಶಿಷ್ಯರಿಗೆ ವಿಶೇಷ ರೈಲಿನಲ್ಲಿ ಉತ್ತರ ಭಾರತ ಪ್ರವಾಸ ಏರ್ಪಡಿಸಿ ಕಾಶಿಗೆ ಕರೆದುಕೊಂಡು ಬಂದಿದ್ದರು. ಆಗ ಕಾಶಿಯಲ್ಲಿ ಓದುತ್ತಿದ್ದ ನಮಗೆ ಅವರೊಂದಿಗೆ ಬದರೀನಾಥ್ ಮತ್ತು ಕೇದಾರನಾಥ್ ಕ್ಷೇತ್ರಗಳನ್ನು ನೋಡುವ ಅವಕಾಶ ದೊರೆತಿತ್ತು. ಮುಂದೆ ಅವರು ಪ್ರವಾಸಿಗರೊಂದಿಗೆ ನೇಪಾಳಕ್ಕೆ ಪ್ರಯಾಣ ಬೆಳೆಸಿದಾಗ ಜೊತೆಯಲ್ಲಿ ಹೋಗಲು ವಿದ್ಯಾರ್ಥಿಗಳಾಗಿದ್ದ ನಮಗೆ ಕಾಲಾವಕಾಶವಾಗಿರಲಿಲ್ಲ. ಆಗ ದೊರೆಯದ ಅವಕಾಶ ಎರಡು ವರ್ಷಗಳ ಹಿಂದೆ (2016) ಕಠ್ಮಂಡುವಿನಲ್ಲಿ ಭಯೋತ್ಪಾದನೆಯನ್ನು ಕುರಿತು ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಲು ನೇಪಾಳ ಸರಕಾರದಿಂದಲೇ ಆಹ್ವಾನ ಬಂದಿತ್ತು. ಭಯೋತ್ಪಾದನೆಯನ್ನು ನಿಯಂತ್ರಿಸಲು ಧರ್ಮಗಳ ಮತ್ತು ಧರ್ಮಸಂಸ್ಥೆಗಳ ಪಾತ್ರವೇನು ಎಂಬ ವಿಷಯವಾಗಿ ಆಗ ಮಾತನಾಡಿದ್ದ ಕೆಲವು ವಿಚಾರಗಳನ್ನು ಈ ಅಂಕಣದಲ್ಲಿ ಹಿಂದೆ ಬರೆಯಲಾಗಿದೆ. ಇದೇ ಡಿಸೆಂಬರ್ 1 ಮತ್ತು 2 ರಂದು ಕಠ್ಮಂಡುವಿನಲ್ಲಿ Universal Peace Federation ಸಂಸ್ಥೆಯ ಸಹಯೋಗದೊಂದಿಗೆ ಏರ್ಪಡಿಸಿದ್ದ ಏಷ್ಯಾ-ಫೆಸಿಫಿಕ್ ಶಾಂತಿ ಶೃಂಗ ಸಭೆಯಲ್ಲಿ ಭಾಗವಹಿಸಲು ಮತ್ತೆ ಅದೇ ನೇಪಾಳ ಸರಕಾರದಿಂದ ಆಹ್ವಾನ. Critical Challenges of our Times (ಇಂದಿನ ಕಠಿಣ ಸವಾಲುಗಳು). ನಮ್ಮ ಮಾತುಗಳೂ ಸೇರಿದಂತೆ ಸಭೆಯಲ್ಲಿ ಕೇಳಿಬಂದ ಮುಖ್ಯಾಂಶಗಳು ಇಂತಿವೆ:
• ಧರ್ಮಗಳು ರಾಜಕಾರಣಿಗಳಿಗೆ ಅಧಿಕಾರದ ಗದ್ದುಗೆಯನ್ನೇರಲು ಮೇಲೆ ಪುಟಿಯುವ ಹಲಗೆ(Spring Board)ಗಳಂತಾಗಿವೆ.
• ಈ ಭೂಮಿಯ ಮೇಲೆ ಹೆಚ್ಚು ಹೆಚ್ಚು ಹಿಂದೂಗಳು, ಮುಸಲಾನ್ಯರು, ಕ್ರೈಸ್ತರು ಮತ್ತಿತರ ಧರ್ಮದವರು ಇದ್ದಾರೆ; ನಿಜವಾದ ಮಾನವರು ಇಲ್ಲ.
• ಮನುಷ್ಯನಾಗಿರುವುದಕ್ಕೂ (Human Being), ಮನುಷ್ಯತ್ವ ಹೊಂದಿರುವುದಕ್ಕೂ (Being Human) ತುಂಬಾ ವ್ಯತ್ಯಾಸವಿದೆ.
• ಸರಕಾರಗಳೇ ಭಯೋತ್ಪಾನೆಯನ್ನು ಪ್ರೋತ್ಸಾಹಿಸುತ್ತಿವೆ.
• ನಿಮ್ಮ ಹತ್ತಿರ ಎಷ್ಟು ಸಂಪತ್ತಿದೆ ಎಂಬುದು ಮುಖ್ಯವಲ್ಲ; ನೀವು ಎಷ್ಟನ್ನು ಇತರರೊಂದಿಗೆ ಹಂಚಿಕೊಳ್ಳುತ್ತೀರಿ ಎಂಬುದು ಬಹಳ ಮುಖ್ಯ.
• Bullet ಮತ್ತು Ballet ಗಳ ಮಧ್ಯೆ ಬಹಳ ಅಂತರವಿದೆ.
• ಇತರರಿಗಾಗಿ ಬದುಕದೆ ತಮಗಾಗಿ ಬದುಕುವ ಜನರೇ ಜಾಸ್ತಿ,
• ಪರಸ್ಪರರಲ್ಲಿ ನಂಬಿಕೆ ಮತ್ತು ಗೌರವ ಬಹಳ ಮುಖ್ಯ.
• ಶಾಂತಿ ಮತ್ತು ಅಭಿವೃದ್ಧಿ ಒಂದೇ ನಾಣ್ಯದ ಎರಡು ಮುಖಗಳು,
• ಶಾಂತಿ ಕೇವಲ ಒಂದು ದೇಶಕ್ಕಲ್ಲ; ಎಲ್ಲ ದೇಶಗಳಿಗೂ ಬೇಕು,
• ಒಂದು ದೇಶದಲ್ಲಿ ಆಗುವ ದುಷ್ಕೃತ್ಯಗಳು ಮತ್ತೊಂದು ದೇಶದ ಮೇಲೆ ದುಷ್ಪರಿಣಾಮವನ್ನು ಉಂಟುಮಾಡುತ್ತವೆ.
• ಭಯೋತ್ಪಾದನೆಯನ್ನು ನಿಯಂತ್ರಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾನೂನನ್ನು ತರಬೇಕು.
• ಪರಸ್ಪರರ ಅಭಿವೃದ್ಧಿ ಪರಸ್ಪರರನ್ನು ಅವಲಂಬಿಸಿದೆ.
• ಕೆಲವು ದ್ವೀಪಗಳಿಗೆ ಪ್ರಾಕೃತಿಕ ಸವಾಲುಗಳನ್ನು ಎದುರಿಸಲು ಸ್ವಂತ ಸಂಪನ್ಮೂಲಗಳಿಲ್ಲ. ಎಷ್ಟೋ ದ್ವೀಪಗಳು ಕುಸಿಯುತ್ತಿದ್ದು ಸಮುದ್ರದಲ್ಲಿ ಮುಳುಗಿಹೋಗುವ ಭಯದಲ್ಲಿವೆ.
• ರಾಷ್ಟ್ರಪ್ರೇಮ (Nationalism) ಇರುವಂತೆ ಅಂತಾರಾಷ್ಟ್ರೀಯ ಪ್ರೇಮವೂ (Inter-nationalism) ಅತ್ಯಾವಶ್ಯಕ
• ಓಟನ್ನು ನೀಡುವ ಸ್ವಾತಂತ್ರ್ಯವಿದ್ದರೂ ಜನರು ಬಡವರಾಗಿಯೇ ಉಳಿದು ಹತಾಶರಾಗಿದ್ದಾರೆ.
• ಭ್ರಷ್ಟಾಚಾರದ ವಿರುದ್ಧ ಸೆಟೆದು ನಿಲ್ಲುವ ನಾಗರಿಕರು ಬೇಕಾಗಿದ್ದಾರೆ.
• ಹೆಚ್ಚಿನ ಶಸ್ತ್ರಾಸ್ತ್ರಗಳು ದೇಶಗಳನ್ನು ಹೆಚ್ಚು ಹೆಚ್ಚು ಬಡತನಕ್ಕೆ ನೂಕುತ್ತಿವೆ.
• ವಿಶ್ವದಲ್ಲಿ ಬಲವಂತವಾಗಿ ಶಾಂತಿಯನ್ನು ತರಲು ಸಾಧ್ಯವಿಲ್ಲ. ಪರಸ್ಪರರು ಮುಕ್ತಸಮಾಲೋಚನೆ ನಡೆಸಿ ಸಹಕರಿಸಿದರೆ ಮಾತ್ರ ಸಾಧ್ಯ.
• ಒಬ್ಬರಿಗೆ ಒಂದು ಮಾನದಂಡ, ಇನ್ನೊಬ್ಬರಿಗೆ ಬೇರೊಂದು ಮಾನದಂಡವಾದರೆ ಸಮಸ್ಯೆಗಳು ಎಂದೂ ಬಗೆಹರಿಯುವುದಿಲ್ಲ.
• ದೇಶವನ್ನು ಮುನ್ನಡೆಸುವ ನೇತಾರನಿಗೆ 1. Confidence, 2.Character, 3. Conviction and 4. Communication Skill ಇರಬೇಕು.
• ಮಾಧ್ಯಮಗಳಲ್ಲಿ ನಂಬಿಕೆ ಮರೆಯಾಗುತ್ತಿದೆ.
• ನಂಬಿಕೆ ಬರಬೇಕೆಂದರೆ ಸತ್ಯವಾದಿಗಳಾಗಬೇಕು.
• ಮಾಧ್ಯಮಗಳಿಗೆ ನೈತಿಕ ಹೊಣೆಗಾರಿಕೆ ಇರಬೇಕು.
• ಮಾಧ್ಯಮಗಳೂ ಸಹ ಭಯೋತ್ಪಾದಕರ ಕೈಯಲ್ಲಿರುವ ಬಾಂಬ್ ಗಳಂತಾಗಿವೆ.
• ನಾಗರಿಕರಿಗೆ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಬೇಕಾದ ಸತ್ಯಸಂಗತಿಗಳನ್ನು ಮಾಧ್ಯಮಗಳು ನೀಡಬೇಕಾಗಿದೆ.
• ಶಾಂತಿಯನ್ನು ಕೇವಲ ಘೋಷಣೆಗಳಿಂದ, ಗೊತ್ತುವಳಿಗಳಿಂದ ಸಾಧಿಸಲು ಸಾಧ್ಯವಿಲ್ಲ.
• ದೇವರು ಮನುಷ್ಯನಿಗೆ ಎರಡು ಕಣ್ಣು, ಎರಡು ಕಿವಿಗಳನ್ನು ಕೊಟ್ಟಿದ್ದರೂ ಸರಿಯಾಗಿ ನೋಡುತ್ತಿಲ್ಲ, ಸರಿಯಾಗಿ ಕೇಳಿಸಿಕೊಳ್ಳುತ್ತಿಲ್ಲ. ಒಂದೇ ನಾಲಿಗೆ ಕೊಟ್ಟಿದ್ದರೂ ಎರಡು ನಾಲಿಗೆಯುಳ್ಳ ಹಾವಿನಂತೆ ಮನುಕುಲಕ್ಕೆ ವಿಷಜಂತುವಾಗಿದ್ದಾನೆ.
ನಮ್ಮ ದೇಶದ ಮಾಜಿ ಪ್ರಧಾನಿ ದೇವೇಗೌಡರೂ ಸಹ ಆಹ್ವಾನಿತರಾಗಿ ಬಂದು ಮುಖ್ಯಸಭೆಯಲ್ಲಿ ಮಾತನಾಡಿದರು. ಅವರ ನಂತರ ಪಾಕಿಸ್ತಾನದ ಮಾಜಿ ಪ್ರಧಾನಿ ಸೈಯದ್ ಯೂಸುಫ್ ಗಿಲಾನಿ ಸಹ ಮಾತನಾಡಿದರು. ನೇಪಾಳದ ಪ್ರಧಾನಿ ಕೆ.ಪಿ. ಶರ್ಮಾ, ಮಾಜಿ ಪ್ರಧಾನಿ ಮಾಧವ ಕುಮಾರ್ ನೇಪಾಲ್, ಶ್ರೀಲಂಕಾ, ಕಾಂಬೋಡಿಯಾ, ಜಪಾನ್, ಕೊರಿಯಾ, ಇಂಡೋನೇಷ್ಯಾ, ಥೈಲ್ಯಾಂಡ್, ಫಿಲಿಫೈನ್ಸ್, ಮ್ಯಾನ್ಮಾರ್, ಬರ್ಮಾ ಮೊದಲಾದ ಜಗತ್ತಿನ ಇನ್ನಿತರ 50 ರಾಷ್ಟ್ರಗಳಿಂದ ಬಂದಿದ್ದ ಹಾಲಿ/ ಮಾಜಿ ಅಧ್ಯಕ್ಷರು, ಪ್ರಧಾನಿಗಳು, ಸಭಾಧ್ಯಕ್ಷರು ಮತ್ತಿತರ ರಾಜಕೀಯ ಧುರೀಣರು, ವಿಭಿನ್ನ ಮತಪಂಥಗಳ ಧರ್ಮಗುರುಗಳು ಮತ್ತು ಸುದ್ದಿ ಮಾಧ್ಯಮದವರು ಆಡಿದ ಮೇಲ್ಕಂಡ ಮಾತುಗಳನ್ನು ಹತ್ತಿರದಲ್ಲಿಯೇ ಇದ್ದ ಎಂದೂ ಮಾಜಿ ಆಗದ ಈ ಜಗತ್ತಿನ ಭೂತ-ಭವಿಷ್ಯದ್-ವರ್ತಮಾನ ಕಾಲಗಳ ಶಾಶ್ವತ ಒಡೆಯನಾದ, ನಿತ್ಯ ಪರಿಪೂರ್ಣನೆನಿಸಿದ ಪಶುಪತಿನಾಥನು ತಲೆದೂಗಿ ಕೇಳಿಸಿಕೊಂಡು ಗಹಗಹಿಸಿ ನಗುತ್ತಿದ್ದನು!
ಕಠ್ಮಂಡು(ನೇಪಾಳ)
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 6.12.2018