ಚುನಾವಣಾ ನೀತಿ ಸಂಹಿತೆ: ಮರುಚಿಂತನೆ ಅಗತ್ಯ

  •  
  •  
  •  
  •  
  •    Views  

ಶ್ರೀನಿವಾಸಪುರ ಎಂಬ ಒಂದು ಸಣ್ಣಹಳ್ಳಿ, ಭೌಗೋಳಿಕವಾಗಿ ಹರಪನಹಳ್ಳಿ ತಾಲೂಕಿನಲ್ಲಿದ್ದರೂ ದಾವಣಗೆರೆ ಜಿಲ್ಲೆಯ ಜಗಲೂರು ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಕೊನೆಯ ಹಳ್ಳಿ. ಸಾಮಾನ್ಯವಾಗಿ ಕೌಟುಂಬಿಕ ಜೀವನದಲ್ಲಿ ತಾಯಂದಿರಿಗೆ ಕೊನೆಯ ಮಗ/ಮಗಳ ಬಗ್ಗೆ ತುಂಬಾ ಪ್ರೀತಿ ಇರುತ್ತದೆಯಂತೆ. ಆದರೆ ವಿಧಾನಸಭಾ ಕ್ಷೇತ್ರಗಳಲ್ಲಿ ರಾಜಕೀಯ ಧುರೀಣರು ಕೊನೆಯ ಹಳ್ಳಿಗಳ ಅಭಿವೃದ್ಧಿ ಕಾರ್ಯಗಳ ಬಗ್ಗೆ ಹೆಚ್ಚು ಗಮನ ಕೊಡದೆ ತುಂಬಾ ಉದಾಸೀನ ಮತ್ತು ತಾತ್ಸಾರ ಮಾಡುತ್ತಾರೆ ಎಂಬುದು ರಾಜ್ಯದ ಎಲ್ಲಾ ಕ್ಷೇತ್ರಗಳ ಕೊನೆಯ ಹಳ್ಳಿಗಳ ಜನರಿಂದ ಕೇಳಿಬರುವ ಸರ್ವೇ ಸಾಮಾನ್ಯ ಆರೋಪ. ಶ್ರೀನಿವಾಸಪುರ ಗ್ರಾಮಸ್ಥರು ತಮ್ಮ ಹಳ್ಳಿಯಲ್ಲಿ ಹೊಸದಾಗಿ ನಿರ್ಮಿಸಿದ ದೇವಾಲಯದ ಉದ್ಘಾಟನೆಯ ಕಾರ್ಯಕ್ರಮಕ್ಕೆ ನಮ್ಮನ್ನು ಆಹ್ವಾನಿಸಲು ಮಠಕ್ಕೆ ಬಂದಿದ್ದರು. 

ಗ್ರಾಮದ ಮುಖಂಡರು “ನಮ್ಮ ಊರಿಗೆ ಡಾಂಬರು ರಸ್ತೆ ಇಲ್ಲ ಬೀದಿ ದೀಪಗಳಿಲ್ಲ, ತಾವು ಕೃಪೆಮಾಡಿ ಶಾಸಕರಿಗೆ ಹೇಳಿ ಮಾಡಿಸಿ ಕೊಡಿ ಬುದ್ಧಿ ಎಂದು ನಿವೇದಿಸಿಕೊಂಡರು. ಕೂಡಲೇ ಜಗಲೂರು ಶಾಸಕರಾದ ಎಸ್.ವಿ ರಾಮಚಂದ್ರ ಅವರಿಗೆ ದೂರವಾಣಿಯಲ್ಲಿ ಕರೆ ಮಾಡಿ ಗ್ರಾಮಸ್ಥರ ಕೋರಿಕೆಯಂತೆ ಈ ಕೆಲಸಗಳನ್ನು ಮಾಡಿಸಿ ಕೊಡಲು ಸೂಚಿಸಿದೆವು. ಆ ಗ್ರಾಮದ ದೇವಸ್ಥಾನದ ಕಾರ್ಯಕ್ರಮಕ್ಕೆ ಹೋಗುವ ವೇಳೆಗೆ ಡಾಂಬರು ರಸ್ತೆಯೂ ಆಗಿತ್ತು; ಬೀದಿ ದೀಪಗಳೂ ಸಹ ಬಂದಿದ್ದವು. ಊರ ಜನರಿಗೆ ಗುರುಗಳು ಅಪರೂಪಕ್ಕೆ ದಯಮಾಡಿಸುತ್ತಿದ್ದಾರೆಂದು ಒಂದೆಡೆ ಖುಷಿಯಾಗಿ ಕುಣಿದು ಕುಪ್ಪಳಿಸಿದರೆ ಮತ್ತೊಂದೆಡೆ ತಮ್ಮ ಊರಿಗೆ ಅವಶ್ಯಕವಾಗಿ ಬೇಕಾಗಿದ್ದ ಡಾಂಬರು ರಸ್ತೆ ಮತ್ತು ಬೀದಿ ದೀಪದ ಬೆಳಕು ದೊರೆತದ್ದು ಖುಷಿಯೋ ಖುಷಿ. ಯುವಕರು ತುಂಬಾ ಉತ್ಸಾಹದಿಂದ ಬೈಕ್ ರಾಲಿ ಮಾಡಿ ನಮ್ಮನ್ನು ಬರಮಾಡಿಕೊಂಡರು.

ಊರ ಮುಂದಿನ ಕಮಾನಿಗೆ ರಿಬ್ಬನ್ ಕಟ್ಟಿ ರಸ್ತೆ ಉದ್ಘಾಟನೆಗೆ ಸಿದ್ಧಗೊಳಿಸಿದ್ದರು. ಟೇಪು ಕತ್ತರಿಸಿ ಉದ್ಘಾಟನೆ ನೆರವೇರಿಸಬೇಕಾಗಿತ್ತು. ನಾವು ಕಾರಿನಿಂದ ಇಳಿಯುತ್ತಿದ್ದಂತೆಯೇ ದಾವಣಗೆರೆ ಸಂಸದರಾದ ಜಿ.ಎಂ ಸಿದ್ದೇಶ್ವರ್ ಮತ್ತು ಜಗಲೂರು ಶಾಸಕ ಎಸ್.ವಿ ರಾಮಚಂದ್ರ ಅವರೂ ಸಹ ಬಂದರು. ಅವರನ್ನು ರಸ್ತೆ ಉದ್ಘಾಟಿಸಲೆಂದು ಕರೆದಾಗ ಇಬ್ಬರೂ ವಿನೀತರಾಗಿ “ವಿಧಾನ ಪರಿಷತ್ ಚುನಾವಣೆ ಇರುವುದರಿಂದ ನೀತಿ ಸಂಹಿತೆ ಜಾರಿಯಲ್ಲಿದೆ. ಆದ್ದರಿಂದ ನಾವು ಉದ್ಘಾಟಿಸುವಂತಿಲ್ಲ, ತಮ್ಮಿಂದಲೇ ಉದ್ಘಾಟನೆ ಆಗಲಿ!” ಎಂದು ವಿನಂತಿಸಿಕೊಂಡು ಛಾಯಾಗ್ರಾಹಕರಿಗೆ ಸಿಗದಂತೆ ಹಿಂದಕ್ಕೆ ಸರಿದರು. 

ಟೇಪು ಕತ್ತರಿಸಿ ಗ್ರಾಮದೊಳಗೆ ಪ್ರವೇಶಿಸುವಾಗ ನಮ್ಮ ಮನದಲ್ಲಿ ಮೂಡಿದ ಪ್ರಶ್ನೆ: ಈ ತರಹದ ನೀತಿ ಸಂಹಿತೆಯ ನಿಯಮ ಸರಿಯೆ? ಧರ್ಮಗುರುಗಳಿಂದ ಉದ್ಘಾಟನೆ ಆಗಲಿ ಎಂಬ ಗೌರವ ಭಾವವೇನೋ ಸರಿ, ಆದರೆ ನೀತಿಸಂಹಿತೆಯ ಕಾರಣ ಚುನಾವಣಾ ಸಂದರ್ಭಗಳಲ್ಲಿ ರಾಜಕೀಯ ಧುರೀಣರು ಯಾವುದೇ ಕಾಮಗಾರಿಯ ಉದ್ಘಾಟನೆ ಮಾಡದಂತೆ ನಿರ್ಬಂಧಿಸುವುದು ಎಷ್ಟರಮಟ್ಟಿಗೆ ಸರಿ? ರಸ್ತೆಯಾಗಲೀ ಬೀದಿ ದೀಪಗಳಾಗಲೀ ಸರಕಾರದ ಬೊಕ್ಕಸದಿಂದ ಮಾಡಿಸಿರುವ ಕಾಮಗಾರಿಗಳೇ. ಅವುಗಳನ್ನು ಸಂಸದರು ಮತ್ತು ಶಾಸಕರು ಉದ್ಘಾಟನೆ ಮಾಡುವುದರಲ್ಲಿ ಏನು ತಪ್ಪಿದೆ? ಆದಕ್ಕೆ ಚುನಾವಣಾ ನೀತಿ ಸಂಹಿತೆ ಏಕೆ ಅಡ್ಡ ಬರಬೇಕು? ಸಾಮಾಜಿಕವಾದ ಕಾರ್ಯವನ್ನು ಮಾಡುವುದಕ್ಕೆ ನೀತಿಸಂಹಿತೆ ಅಡ್ಡ ಬರಬಾರದು. ವೈಯಕ್ತಿಕವಾಗಿ ಯಾರಿಗಾದರೂ ಅನುಕೂಲ ಮಾಡಿಕೊಡಲು ನೀತಿ ಸಂಹಿತೆಯು ನಿರ್ಬಂಧಿಸುವುದಾದರೆ ಸರಿ. ವೈಯಕ್ತಿಕ ಆಸೆ. ಆಮಿಶ ತೋರಿಸಿ ಮತಗಳಿಕೆಯ ಯತ್ನ ಕೆಟ್ಟದ್ದು, ಆದ್ದರಿಂದ ನೀತಿಸಂಹಿತೆ ಅದನ್ನು ನಿರ್ಬಂಧಿಸುವುದು ವಿಹಿತ. ಆದರೆ ಸಾರ್ವಜನಿಕರ ಹಿತಕ್ಕಾಗಿ ಮಾಡುವ ಕೆಲಸವನ್ನು ಮತಗಳಿಕೆಗೆ ಒಡ್ಡುವ ಆಮಿಶ ಎಂದು ಪರಿಗಣಿಸುವುದು ನಮ್ಮ ದೃಷ್ಟಿಯಲ್ಲಿ ತಪ್ಪು.  

ಶ್ರೀನಿವಾಸಪುರದ ಜನರ ಬೇಡಿಕೆಗಳು ಇನ್ನೂ ಕೆಲವು ಇವೆ. ಉದಾಹರಣೆಗೆ ಮಳೆ ಬಂದಾಗ ಹಳ್ಳ ತುಂಬಿ ಹರಿಯುತ್ತದೆ. ಅದನ್ನು ದಾಟಲು ಸೇತುವೆಯಿಲ್ಲ. ಅದನ್ನು ಮಾಡಿಸಿಕೊಡಿ ಎಂಬುದು ಜನರ ಅಳಲು. ಆದರೆ 'ಮಾಡಿಸಿ ಕೊಡುತ್ತೇವೆ' ಎಂದು ಸಂಸದರಿಗಾಗಲೀ ಶಾಸಕರಿಗಾಗಲೀ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ  ಭರವಸೆ ಕೊಡಲು ಆಗಲಿಲ್ಲ, ವರ್ಷದುದ್ದಕ್ಕೂ ಒಂದಲ್ಲ ಒಂದು ಚುನಾವಣೆ ಇದ್ದೇ ಇರುತ್ತದೆ. ನಾಗರಿಕರು ಬೇಡಿಕೆ ಇಡುವಂತಿಲ್ಲ. ನಾಯಕರು ಭರವಸೆ ಕೊಡುವಂತಿಲ್ಲ. ಹೀಗಾದರೆ ಸಾರ್ವಜನಿಕ ಕೆಲಸಕಾರ್ಯಗಳು ಆಗುವ ಬಗೆಯಾದರೂ ಹೇಗೆ? ಕೆಲವರನ್ನು ಹೊರತುಪಡಿಸಿ ನಮ್ಮ ನಾಯಕರು ಜನರಿಗೆ ಹೆಚ್ಚಾಗಿ ಸಿಗುವುದೇ ಚುನಾವಣೆಯ ಸಂದರ್ಭಗಳಲ್ಲಿ, ಅಂತಹ ಸಂದರ್ಭಗಳಲ್ಲಿ ಜನರು ತಮ್ಮ ಬೇಡಿಕೆಗಳನ್ನು ಮುಂದಿಟ್ಟರೆ ಅದಕ್ಕೆ ಬಹಿರಂಗವಾಗಿ ಭರವಸೆ ಕೊಡದಂತೆ ನೀತಿಸಂಹಿತೆಯು ರಾಜಕಾರಣಿಗಳ ಬಾಯಿಗೆ ಬೀಗ ಹಾಕುವುದು ಸರಿಯೇ? 

ಹೆಣ್ಣನ್ನು ನೋಡಿಕೊಂಡು ಹೋದ ಮೇಲೆ ಗಂಡಿನ ಕಡೆಯವರು ಹೆಣ್ಣಿನ ಕಡೆಯವರಿಂದ ನಿರೀಕ್ಷಿಸಿದಷ್ಟು ವರದಕ ಸಿಗುವುದಿಲ್ಲವೆಂದು ಗೊತ್ತಾದಾಗ “ತಮ್ಮ ಮಗಳನ್ನೇ ನಮ್ಮ ಮನೆಯ ಸೊಸೆಯನ್ನಾಗಿ ಮಾಡಿಕೊಳ್ಳಬೇಕೆಂಬ ಬಲವಾದ ಆಸೆ ನಮಗೆ ಇತ್ತು. ಆದರೆ ಏನು ಮಾಡುವುದು, ನಮ್ಮೂರ ಹನುಮಪ್ಪದೇವರು ವರ ಕೊಡಲಿಲ್ಲ! ಎಂಬ ಜಾರಿಕೆಯ ಉತ್ತರ ಕೊಟ್ಟಂತೆ ಆಗುವುದಿಲ್ಲವೇ? ನಮ್ಮ ಚುನಾವಣಾ ನೀತಿಸಂಹಿತೆಯು ನಮ್ಮ ರಾಜಕಾರಣಿಗಳನ್ನು ಯಾವುದೇ ಕಾಮಗಾರಿಗೆ 'ವರ' ಕೊಡದ ಹನುಮಪ್ಪದೇವರನ್ನಾಗಿ ಮಾಡಿದೆ; ಇದು ರಾಜಕಾರಣಿಗಳಿಗೆ ವರದಾನವಾಗಿದೆಯೇ ಹೊರತು ನಾಗರೀಕರಿಗೆ ಹಿಡಿಶಾಪವಾಗಿದೆ. ಜನರ ಬಳಿಗೆ ರಾಜಕೀಯ ಧುರೀಣರು ಹೆಚ್ಚಾಗಿ ಬರುವುದು ಚುನಾವಣೆಗಳ ಸಂದರ್ಭದಗಳಲ್ಲಿ ಮಾತ್ರ ಆ ಸಂದರ್ಭದಲ್ಲಿ ಜನರು ತಮ್ಮ ಅಳಲನ್ನು ಹೇಳಿಕೊಂಡರೂ ಭರವಸೆ  ಕೊಡುವಂತಿಲ್ಲವೆಂದರೆ ಹೇಗೆ? ಚುನಾವಣೆ ಮುಗಿದ ಮೇಲೆ ಜನರು ತಮ್ಮ ಕಷ್ಟ ಕಾರ್ಪಣ್ಯಗಳನ್ನು ಹೇಳಿಕೊಳ್ಳಲು ಧುರೀಣರು 2 ಇದ್ದಲ್ಲಿಗೇ ಹೋಗಬೇಕು. ಅವರು ಸಿಕ್ಕರೆ ಸಿಕ್ಕರು, ಇಲ್ಲದಿದ್ದರೆ ಇಲ್ಲ! 

ಮತದಾರರು 18 ವರ್ಷಕ್ಕೆ ಮೇಲ್ಪಟ್ಟ ಪ್ರೌಢವಯಸ್ಕರೇ ಆಗಿರುತ್ತಾರೆ. ಮಗು ಬೆಲ್ಲ ತಿನ್ನುತ್ತದೆಯೆಂದು ತಾಯಿ ಮಗುವಿನ ಎಳೆಯ ಕೈಗಳಿಗೆ ಸಿಗದಂತೆ ಎತ್ತರದಲ್ಲಿ ಬೆಲ್ಲ ಎತ್ತಿಡುತ್ತಾಳೆ. ನೀತಿ ಸಂಹಿತೆ ಹಾಗೆ ಮಾಡಿದಂತಾಗಿದೆ. ಜನರು ಚಿಕ್ಕ ಮಕ್ಕಳೇನೂ ಅಲ್ಲ; ದಡ್ಡರೂ ಅಲ್ಲ, ರಸ್ತೆ ಮಾಡಿಕೊಡುವುದಾಗಿ ರಾಜಕೀಯ ಧುರೀಣರು ಹೇಳಿದ ಮಾತ್ರಕ್ಕೆ ಮತದಾರರು ಮೋಸ ಹೋಗಿಬಿಡುತ್ತಾರೆಂದು ಹೇಳಲು ಆಗುವುದಿಲ್ಲ. ಸಾರ್ವಜನಿಕ ಕೆಲಸಗಳನ್ನು ಮಾಡಿಸಿಕೊಡುತ್ತೇನೆಂದು ಹೇಳಿ ಮಾಡಿಸಿಕೊಟ್ಟವರಿಗೆ ಮತ ನೀಡಿದರೆ ತಪ್ಪೇನು? ಭರವಸೆ ಕೊಟ್ಟೂ ತಪ್ಪಿದರೆ ಮುಂದಿನ  ಚುನಾವಣೆಯಲ್ಲಿ ಜನ ಅವರಿಗೆ ಪಾಠ ಕಲಿಸಿಯೇ ಕಲಿಸುತ್ತಾರೆ! ಆ ಭಯದಿಂದಲಾದರೂ ನಾಗರಿಕರು ಕೇಳಿದ ಕೆಲಸವನ್ನು ಮಾಡಿಸಿ ಕೊಡಲೇಬೇಕಾಗುತ್ತದೆ. ಚುನಾವಣೆಯ ಸಂದರ್ಭದಲ್ಲಿ ನಾಗರಿಕರು ಕೇಳಲು ಅವಕಾಶವಿರಬೇಕು; ನಾಯಕರು ನೀತಿ ಸಂಹಿತೆಯ ಸಬೂಬುಹೇಳಿ ಭರವಸೆಕೊಡದೆಹಿಂದೆಸರಿಯುವಂತಾಗಬಾರದು.ಚುನಾವಣೆಯ ಸಂದರ್ಭದಲ್ಲಿ ಯಾವ ಭರವಸೆಯನ್ನೂ ಕೊಡಬಾರದು ಎಂದು ನೀತಿ ಸಂಹಿತೆ ಅಡ್ಡ ಬಂದರೆ ನಮ್ಮ ರಾಜಕೀಯ ಧುರೀಣರು ಯಾವ ಕೆಲಸವನ್ನೂ ಮಾಡದೆ ಜಡಭರತರಾಗುವುದಕ್ಕೆ ಒಂದು ಒಳ್ಳೆಯ 'ನೆಪ' ಸಿಕ್ಕಂತಾಗುತ್ತದೆ! 

ನಮ್ಮ ದೇಶದಲ್ಲಿ ಯುಗಾದಿ, ದೀಪಾವಳಿ, ದಸರಾ, ಗಣೇಶೋತ್ಸವ, ಕಾರ್ತೀಕ, ಮೊಹರಂ, ಈದ್ ಮಿಲಾದ್, ಕ್ರಿಸ್ಮಸ್ ಇತ್ಯಾದಿ ಅನೇಕ ಧಾರ್ಮಿಕ ಹಬ್ಬಗಳು ಹೇಗೆ ನಿರ್ದಿಷ್ಟ ದಿನಾಂಕಗಳಂದು ನಡೆಯುತ್ತವೆಯೋ, ಹಾಗೆಯೇ ನಾಲ್ಕು ವರ್ಷಗಳಿಗೊಮ್ಮೆ ಅಮೇರಿಕದಲ್ಲಿ ಅಧ್ಯಕ್ಷರ ಚುನಾವಣೆ, ಅಧಿಕಾರ ಸ್ವೀಕಾರ, ಮುಕ್ತಾಯ ಎಲ್ಲವೂ ಕ್ಯಾಲೆಂಡರ್ ಪ್ರಕಾರ ನಿರ್ದಿಷ್ಟ ದಿನಾಂಕಗಳಂದೇ ನಡೆಯುತ್ತದೆ. ಅಧ್ಯಕ್ಷರು ಮರಣ ಹೊಂದಿದರೆ ಉಪಾಧ್ಯಕ್ಷರು ಅಧಿಕಾರ ವಹಿಸಿಕೊಳ್ಳುತ್ತಾರೆ. ಉಪಾಧ್ಯಕ್ಷರು ಮರಣ ಹೊಂದಿದರೆ ಸಭಾಧ್ಯಕ್ಷರು, ಅವರು ಮೃತಪಟ್ಟರೆ ಶ್ರೇಷ್ಠ ನ್ಯಾಯಮೂರ್ತಿಗಳು ಅಧಿಕಾರ ವಹಿಸಿಕೊಂಡು ಆಡಳಿತ ನಡೆಸುತ್ತಾರೆ. ಮುಂದಿನ 5 ವರ್ಷಗಳ ವರೆಗೆ ಅಧ್ಯಕ್ಷರ ಮರು ಚುನಾವಣೆ ನಡೆಯುವುದಿಲ್ಲ. 

ನಮ್ಮಲ್ಲಿ ಚುನಾವಣೆಗಳು ಸಕಾಲಕ್ಕೆ ಬಾರದ ಮಳೆಯಂತೆ. ಮಳೆ | ಯಾವಾಗ ಬರುತ್ತದೋ ಗೊತ್ತಿಲ್ಲ, ಯಾವಾಗ ನಿಲ್ಲುತ್ತದೆಯೋ | ಗೊತ್ತಿಲ್ಲ! ಬಂದಾಗ ಹಣದ ಝಣತ್ಕಾರ, ಸುರಾಪಾನದ ಸುರಿಮಳೆ ಯಂತೂ ನಿಜ! ಗ್ರಾಮ-ತಾಲ್ಲೂಕು-ಜಿಲ್ಲೆ-ರಾಜ್ಯ ಯಾವುದೇ ಚುನಾವಣೆಗಳು ಇರಲಿ ಅವೆಲ್ಲವೂ ಐದು ವರ್ಷಕ್ಕೊಮ್ಮೆ ನಿಗದಿತ ವೇಳೆಯಲ್ಲಿ ನಡೆಯುವಂತಾಗಬೇಕು. ದೇಶದ ಎಲ್ಲ ಚುನಾವಣೆಗಳು ಒಂದೇ ಸಲಕ್ಕೆ ಮುಗಿಯಬೇಕು. ಇದರಿಂದ ಚುನಾವಣೆಯ ಕಾರಣ ಜನರಲ್ಲಿ ಉಂಟಾದ ವಿದ್ವೇಷಗಳು ತಣ್ಣಗಾಗುತ್ತವೆ; ಜನರು ತಂತಮ್ಮ ಕಾಯಕದಲ್ಲಿ ತೊಡಗಿಕೊಳ್ಳುತ್ತಾರೆ. ಅವರ ಒಳಿತಿಗಾಗಿ ಸರಕಾರಗಳು ಚಿಂತನೆ ಮಾಡಿ ಕಾರ್ಯೋನ್ಮುಖ | ವಾಗಲು ಸಹ ಅವಕಾಶವಾಗುತ್ತದೆ. ಇಲ್ಲದಿದ್ದರೆ ದೇಶವು ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ತಿಲಾಂಜಲಿ ನೀಡಿ ಚುನಾವಣೆಗಳ ಚಕ್ರದಲ್ಲಿ ಗಿರಕಿ ಹೊಡೆಯುವಂತಾಗುತ್ತದೆ. ವಿಭಿನ್ನ ರಾಜಕೀಯ ಪಕ್ಷಗಳ ಆಳ್ವಿಕೆಯಲ್ಲಿರುವ ರಾಜ್ಯಗಳು ಅಧಿಕಾರದ ಕಾಲಾವಧಿ ಯಲ್ಲಿ ವ್ಯತ್ಯಾಸವಿದ್ದರೆ ವಿಶೇಷ ನಿಯಮ ಮಾಡಿ 'ಕಡಿಮೆ ಇದರೆ ಜಾಸ್ತಿ ಮಾಡಿ, ಜಾಸ್ತಿ ಇದ್ದರೆ ಕಡಿಮೆ ಮಾಡಿ' ಎಲ್ಲ ಚುನಾವಣೆಗಳೂ ಒಂದೇ ಸಲಕ್ಕೆ ಬರುವಂತೆ ಹೊಂದಿಸಿಕೊಳ್ಳಬೇಕು. ಹೀಗೆ ಮಾಡಿದಲ್ಲಿ ಆಡಳಿತಾರೂಢ ಪಕ್ಷವು ನಿರಾತಂಕವಾಗಿ ಆಡಳಿತ ನಡೆಸಲು ಅನುಕೂಲವಾಗುತ್ತದೆ. ಇಲ್ಲದಿದ್ದರೆ ವರ್ಷದುದ್ದಕ್ಕೂ ನಡೆಯುವ ಒಂದಲ್ಲ ಒಂದು ಚುನಾವಣೆಯ ಕಡೆ ಗಮನ ಹರಿಸಬೇಕಾಗುತ್ತದೆಯೋ ಹೊರತು ನಾಗರಿಕರ ಒಳಿತಿಗೆ ಮಾಡಬೇಕಾದ ಕೆಲಸ ಮಾಡಲು ಆಗುವುದಿಲ್ಲ. 

ನಮ್ಮ ಒತ್ತಾಸೆಗೆ ಮಣಿದು ಸರಕಾರ ಕೈಗೊಂಡ 1,200 ಕೋಟಿ ರೂ.ಗಳ ಭರಮಸಾಗರ ಮತ್ತು ಜಗಲೂರು ಜೋಡಿ ಏತ ನೀರಾವರಿ ಯೋಜನೆಯು ರಾಜ್ಯಾದ್ಯಂತ ಪ್ರಖ್ಯಾತಿಯನ್ನು ಪಡೆದು ಈ ಭಾಗದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. 56 ಕಿಲೋಮೀಟರ್ ದೂರದ ತುಂಗಭದ್ರಾ ನದಿಯಿಂದ ಐದು ಅಡಿ ವ್ಯಾಸದ ಪೈಪ್ ಮೂಲಕ ಹರಿದು ಬಂದು ತುಂಬುತ್ತಿರುವ ಒಂದು ಸಾವಿರ ಎಕರೆ ವಿಸ್ತೀರ್ಣದ ಭರಮಸಾಗರ ಕೆರೆ ಈಗ ಪ್ರವಾಸೀ ತಾಣವಾಗಿದೆ. ಹತ್ತಾರು ಕಿ.ಮೀ ದೂರದಲ್ಲಿರುವ ಒಂದು ಸಾವಿರ ಅಡಿಯಷ್ಟು ಕೊರೆದರೂ ನೀರು ಸಿಗದಿದ್ದ ಬೋರ್ವೆಲ್ಗಳಲ್ಲಿ ಈಗ ನೀರು ಉಕ್ಕಿ ಹರಿಯುತ್ತಿದೆ. 

ಕೆಲವು ದಿನಗಳ ಹಿಂದೆ ಬೆಂಗಳೂರಿನ ನಮ್ಮ ತರಳಬಾಳು ಕೇಂದ್ರದಲ್ಲಿದ್ದಾಗ ನಮಗೆ ಒಂದು ಅನಿರೀಕ್ಷಿತ ಮೊಬೈಲ್ ಕರೆ ಬಂದಿತು. ಆಚೆ ಬದಿಯಲ್ಲಿ ಇದ್ದವರು ಅಂತಾರಾಷ್ಟ್ರೀಯ ಖ್ಯಾತಿಯ ರಾಜೇಂದ್ರ ಸಿಂಗ್, ಬೆಂಗಳೂರಿಗೆ ಬಂದಿದ್ದ ಅವರು ನಮ್ಮ ದರ್ಶನಾಶೀರ್ವಾದ ಪಡೆಯಲು ಬಯಸಿ ಕರೆಮಾಡಿದ್ದರು. ರಾಜಸ್ಥಾನದಲ್ಲಿ ಬತ್ತಿ ಹೋಗಿದ್ದ ನದಿಯೊಂದಕ್ಕೆ ಮರುಜೀವ ನೀಡಿ ಮತ್ತೆ ತುಂಬಿ ಹರಿಯುವಂತೆ ಮಾಡಿದ ಕೀರ್ತಿ ಅವರದ್ದು. ಅದಕ್ಕೇ ಅವರನ್ನು Waterman ಎಂದೇ ಕರೆಯುತ್ತಾರೆ! ಕೆಲವು ವರ್ಷಗಳ ಹಿಂದೆ ರಾಜಾಸ್ಥಾನಕ್ಕೆ ಹೋದಾಗ ಒಂದು ವಾಹನದಲ್ಲಿ ನಮ್ಮನ್ನು ಕೂರಿಸಿ ಸ್ವತಃ ಅವರೇ ಚಾಲಕರಾಗಿ ಗುಡ್ಡಬೆಟ್ಟಗಳ ತಪ್ಪಲಿನಲ್ಲಿ ಕರೆದುಕೊಂಡು ಹೋಗಿ ರೈತರ ನೆರವಿನಿಂದ ಕಟ್ಟಿಸಿದ ಅನೇಕ 'ಚೋಹಡ್' (ಕೆರೆ) ಗಳನ್ನು ತೋರಿಸಿದರು. ಆರಂಭದಿಂದಲೂ ನಮ್ಮ ಕೆರೆ ತುಂಬಿಸುವ ಅನೇಕ ಯೋಜನೆಗಳಿಗೆ ಪ್ರೇರೇಪಣೆಯಾಗಿ ನಿಂತಿರುವ ರಾಜೇಂದ್ರ ಸಿಂಗ್ ಅವರಿಗೆ ಭರಮಸಾಗರ ಕೆರೆಯನ್ನು ತೋರಿಸಬೇಕೆಂಬ ಆಸೆ ನಮ್ಮ ಮನಸ್ಸಿನಲ್ಲಿ ಚಿಗುರಿತು. ಅವರೂ ಸಹ ಕಳೆದ ಭಾನುವಾರ ಬರಲು ಒಪ್ಪಿದ್ದರು! 

ಆಗ ತಟ್ಟನೆ ನಮಗೆ ನೆನಪಾಗಿದ್ದು ವಿಜಯ ಕರ್ನಾಟಕ ಪತ್ನಿಕೆಯು ನಮ್ಮ ಸಮ್ಮುಖದಲ್ಲಿ ಭರಮಸಾಗರದಲ್ಲಿ 'ಕೆರೆ ಹಬ್ಬ' ಏರ್ಪಡಿಸಬೇಕೆಂಬ ವಿಶೇಷ ಕಾರ್ಯಕ್ರಮ, ಪತ್ರಿಕೆಯ ಸಂಪಾದಕರೊಂದಿಗೆ ಸಮಾಲೋಚಿಸಿ ನವೆಂಬರ್ 27 ರಂದು 'ಕೆರೆಹಬ್ಬ' ಎಂದು ನಿಗದಿ ಮಾಡಲಾಯಿತು. ಈ ಕೆರೆ ಹಬ್ಬಕ್ಕೆ ರಾಜೇಂದ್ರ ಸಿಂಗ್ರವರನ್ನು ದೂರವಾಣಿಯಲ್ಲಿ ಒಪ್ಪಿಸಿದ್ದೂ ಆಯಿತು. ಅವರಿಗಿಂತ ಉತ್ತಮ ಅತಿಥಿ ಸಿಗುವುದು ಕಷ್ಟ ಎಂದು ಸಂಪಾದಕರೂ ಉದ್ಗಸಿದರು. ಆದರೆ ಮಾರನೇ ದಿನವೇ ವಿಧಾನ ಸುತ್ ಚುನಾವಣೆ ಘೋಷಣೆ ಆಯಿತು. ಕೆರೆ ಹಬ್ಬದಲ್ಲಿ ಶಾಸಕರು, ಸಂಸದರು, ಮಂತ್ರಿಗಳು ಯಾರೂ ಭಾಗವಹಿಸುವಂತಿಲ್ಲ. ಕಾರಣ ಚುನಾವಣಾ ನೀತಿ ಸಂಹಿತೆಯ ಗುಮ್ಮ! ಏತನ್ಮಧ್ಯೆ ರಾಜೇಂದ್ರ ಸಿಂಗ್ ಅವರು ಆಫ್ರಿಕಾಕ್ಕೆ ಹೋಗುತ್ತಿದ್ದಾರೆ. ಹೀಗಾಗಿ ಕೆರೆ ಹಬ್ಬವನ್ನು ಅನಿವಾರ್ಯವಾಗಿ ಮುಂದೂಡುವ ಪ್ರಸಂಗ ಎದುರಾಯಿತು. 

ಚುನಾವಣಾ ನೀತಿ ಸಂಹಿತೆ ಎಂಬುದು ಧರ್ಮದ ಒಂದು ಭಾಗ, ಅದು ಕೇವಲ ಚುನಾವಣೆ ಕಾಲಾವಧಿಗೆ ಮಾತ್ರ ಮೀಸಲಾಗಿರಬಾರದು; ಬದಲಾಗಿ ಎಲ್ಲಕಾಲಕ್ಕೂ ಎಲ್ಲರ ಬದುಕಿನ ಅವಿಭಾಜ್ಯ ಅಂಗವಾಗಬೇಕು. ಅದು ಸಾರ್ವಜನಿಕರ ಹಿತದೃಷ್ಟಿಯಿಂದ ರೂಪಿಸುವ ಒಳ್ಳೆಯ ಕಾರ್ಯಗಳಿಗೆ ಅಡ್ಡಬರುವ 'ಗುಮ್ಮ' ಅಗಬಾರದು. ಇದರ ಬಗ್ಗೆ ಮರು ಚಿಂತನೆ ಅಗತ್ಯ.

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ ಪತ್ರಿಕೆ
ದಿನಾಂಕ.18-11-2021
ಬಿಸಿಲು ಬೆಳದಿಂಗಳು