ಬಹುಜನರ ಹಿತ ಯಾವುದರಲ್ಲಿದೆ?
ಬದುಕಿನ ಅನೇಕ ವಿಷಮ ಪ್ರಸಂಗಗಳಲ್ಲಿ ಯಾವುದು ಸರಿ, ಯಾವುದು ತಪ್ಪು ಎಂದು ನಿರ್ಧರಿಸುವುದು ಬಹಳ ಕಠಿಣ. ಗಣಿತದ ಲೆಕ್ಕಾಚಾರದಂತೆ ಗುಣಿಸಿ, ಭಾಗಿಸಿ, ಕೂಡಿ, ಕಳೆದು ನಿಖರವಾಗಿ ಹೇಳಲು ಬರುವುದಿಲ್ಲ. ಮರದ ಮೇಲೆ ಹತ್ತು ಹಕ್ಕಿಗಳು ಕುಳಿತಿರುತ್ತವೆ ಬಂದೂಕುಧಾರಿಯೊಬ್ಬ ಗುಂಡು ಹಾರಿಸುತ್ತಾನೆ ಒಂದು ಹಕ್ಕಿ ಸತ್ತು ಕೆಳಕ್ಕೆ ಬೀಳುತ್ತದೆ. "ಮರದ ಮೇಲೆ ಉಳಿದ ಹಕ್ಕಿಗಳು ಎಷ್ಟು?" ಎಂದು ನರ್ಸರಿ ಶಾಲೆಯ ಮಕ್ಕಳನ್ನು ಕೇಳಿದರೆ ಬರುವ ಮುಗ್ಧತೆಯ ಉತ್ತರ: "ಒಂಬತ್ತು!" ಶಾಲೆಯಲ್ಲಿ ಕಲಿಸಿದ ಗಣಿತದ ಲೆಕ್ಕಾಚಾರ ಇಲ್ಲಿ ತಪ್ಪುತ್ತದೆ. ನಿಮ್ಮ ಉತ್ತರ ತಪ್ಪು ಎಂದರೆ ಮಕ್ಕಳು ಗಲಿಬಿಲಿಗೊಂಡು ಲೆಕ್ಕದಲ್ಲಿ ಏನು ತಪ್ಪಾಗಿದೆಯೆಂದು ಯೋಚನೆ ಮಾಡುತ್ತಾರೆಯೇ ಹೊರತು ಗುಂಡಿನ ಶಬ್ದಕ್ಕೆ ಹೆದರಿ ಉಳಿದ ಹಕ್ಕಿಗಳೆಲ್ಲವೂ ಹಾರಿಹೋಗುತ್ತವೆಯೆಂಬ ಆಲೋಚನೆ ಮಕ್ಕಳ ಮುಗ್ಧ ಮನಸ್ಸಿನಲ್ಲಿ ತಕ್ಷಣವೇ ಮೂಡುವುದಿಲ್ಲ. ನಂತರ ತಿಳಿಹೇಳಿದಾಗ ನಕ್ಕು ನಲಿದಾಡುತ್ತವೆ.
ವಿಜ್ಞಾನದಲ್ಲಿ ನೀರಿನ ರಾಸಾಯನಿಕ ಸೂತ್ರ H2O ಎಂಬುದು ಯಾವ ದೇಶಕ್ಕೆ ಹೋದರೂ ಅಷ್ಟೇ ಇರುತ್ತದೆ. ಯಾರೂ ಬೇರೆ ಉತ್ತರ ನೀಡಲು ಸಾಧ್ಯವಿಲ್ಲ. ವಿಜ್ಞಾನದಲ್ಲಿ ಇವು ಈಗಾಗಲೇ ಸಾಬೀತು ಆಗಿರುವ ಅಂಶಗಳು. ಆದರೆ ಬದುಕಿನ ಪ್ರಸಂಗಗಳು ಮಾತ್ರ ಹಾಗಲ್ಲ. ಅವು ಸಾಪೇಕ್ಷ. ಒಬ್ಬರ ದೃಷ್ಟಿಯಿಂದ ಸರಿ ಎನಿಸಿದ್ದು ಬೇರೊಬ್ಬರ ದೃಷ್ಟಿಗೆ ತಪ್ಪಾಗಿ ಗೋಚರಿಸಬಹುದು. ಆಯಾಯ ಸಂದರ್ಭ ಸನ್ನಿವೇಶಗಳಿಗೆ ಅನುಗುಣವಾಗಿ ಸರಿ ತಪ್ಪುಗಳನ್ನು ನಿರ್ಧರಿಸಬೇಕಾಗುತ್ತದೆ. ಉದಾಹರಣೆಗೆ ಯಾರಾದರೂ ಕೊಲೆ ಮಾಡಿದರೆ ಅವನನ್ನು ಕೊಲೆಗಡುಕ ಎಂದು ನ್ಯಾಯಾಲಯ ತೀರ್ಮಾನಿಸಿ ಭಾರತೀಯ ದಂಡ ಸಂಹಿತೆಯ ಪ್ರಕಾರ ಅವನಿಗೆ ಮರಣ ದಂಡನೆಯನ್ನೋ ಜೀವಾವಧಿ ಶಿಕ್ಷೆಯನ್ನೋ ವಿಧಿಸುತ್ತದೆ. ಅದೇ ವ್ಯಕ್ತಿ ಒಬ್ಬ ಸೈನಿಕನಾಗಿದ್ದರೆ ಅವನು ದೇಶದ ಗಡಿಯಲ್ಲಿ ದೇಶದ ರಕ್ಷಣೆಗಾಗಿ ಯುದ್ಧಭೂಮಿಯಲ್ಲಿ ಹೋರಾಡಿ ಶತ್ರುವನ್ನು ಹತ್ಯೆಗೈದರೆ ವೀರಯೋಧನೆಂದು ಅವನನ್ನು "ವೀರಚಕ್ರ", "ಪರಮವೀರ ಚಕ್ರ" ಗಳಿಂದ ಸನ್ಮಾನಿಸಲಾಗುತ್ತದೆ. ಎರಡೂ ಸಹ ಕೊಲೆಯ ಪ್ರಕರಣಗಳೇ. ಆದರೆ ಒಂದು ನೀತಿಬಾಹಿರವಾದ ಬರ್ಬರ ಕೃತ್ಯ ಎಂದು ಖಂಡನೆಗೆ ಒಳಗಾಗುತ್ತದೆ, ಮತ್ತೊಂದು ವೀರೋಚಿತವಾದ ಸಾಹಸ ಕೃತ್ಯ ಎಂದು ಪ್ರಶಂಸೆಗೆ ಪಾತ್ರವಾಗುತ್ತದೆ. ಅದು ಕೊಲೆ ಹೌದೇ ಅಲ್ಲವೇ ಎಂಬುದು ಆಯಾಯ ಸಮಯ ಸಂದರ್ಭಗಳಿಗೆ ಅನುಗುಣವಾಗಿ ನಿರ್ಧಾರವಾಗುತ್ತದೆ. ಕೊಲೆಯಾದವರಿಬ್ಬರೂ ಶತ್ರುಗಳೇ. ಯುದ್ಧಭೂಮಿಯ ಕೊಲೆಯಲ್ಲಿ ಸ್ವಾರ್ಥವಿಲ್ಲ, ದೇಶದ ಹಿತವಿದೆ. ವೈಯಕ್ತಿಕ ನೆಲೆಗಟ್ಟಿನ ಮೇಲೆ ಶತ್ರು ಆಗಿದ್ದರೆ ಅದು ಕೊಲೆ ಎನಿಸಿಕೊಳ್ಳುತ್ತದೆ. ವೈಯಕ್ತಿಕ ಶತ್ರುತ್ವವಿಲ್ಲದೆ ದೇಶದ ಹಿತಕ್ಕಾಗಿ ಜೀವದ ಹಂಗು ತೊರೆದು ಮಾಡುವ ಹೋರಾಟ ಮತ್ತು ಹತ್ಯೆಯಲ್ಲಿ ಸ್ವಾರ್ಥವಿಲ್ಲ. ಆದ್ದರಿಂದ ಅದು ಕೊಲೆಯಲ್ಲ, ಶತ್ರುನಾಶ ಮತ್ತು ದೇಶ ರಕ್ಷಣೆ.
ಅದೇ ರೀತಿ ನೈತಿಕತೆಯೂ ಸಹ ಸಾಪೇಕ್ಷ. ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ... ಇವು ಸಾಪೇಕ್ಷವಾದವುಗಳು. ರಸ್ತೆ ಅಪಘಾತದಲ್ಲಿ ಯಾರಾದರೂ ಮೃತಪಟ್ಟರೆ ನೋಡಿದವರು ಮೃತನ ಸಮೀಪದ ಬಂಧುಗಳಿಗೆ ವಿಷಯವನ್ನು ನೇರವಾಗಿ ಹೇಳುವುದಿಲ್ಲ. “ತುಂಬಾ ಸೀರಿಯಸ್ ಆಗಿದೆ. ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ. ಗಾಬರಿಯಾಗುವುದು ಬೇಡ, ಬೇಗನೆ ಹೊರಟು ಬನ್ನಿ” ಎಂದೇ ಸುಳ್ಳು ಹೇಳುತ್ತಾರೆ. ಹಾಗೆ ಸುಳ್ಳು ಹೇಳುವುದರಲ್ಲಿ ಸ್ವಾರ್ಥ ಇರುವುದಿಲ್ಲ. ನಿಜ ಸಂಗತಿಯನ್ನು ಹೇಳಿದರೆ ದುರ್ದೈವೀ ಕುಟುಂಬವರ್ಗದವರಿಗೆ ಮಾನಸಿಕವಾಗಿ ಆಘಾತವಾಗುತ್ತದೆಯೆಂಬ ಅಳುಕು ಇರುತ್ತದೆ. ಆ ಕಾಳಜಿಯಿಂದ "ಸೀರಿಯಸ್" ಎಂದು ಸುಳ್ಳನ್ನೇ ಹೇಳಿದರೂ ಇಲ್ಲಿ ನುಡಿಯುವ "ಹುಸಿ" ಮತ್ತೊಬ್ಬರ ಹಿತಕ್ಕಾಗಿ. ಆದ್ದರಿಂದ ಅದು ಕ್ಷಮ್ಯ!
ನೈತಿಕ ದೃಷ್ಟಿಯಿಂದ ಯಾವುದು ಸರಿಯಾದ ನಡವಳಿಕೆ? ಕೊಲೆಯಲ್ಲಿ ನೈತಿಕತೆ ಇರಲು ಸಾಧ್ಯವೇ? (Morality in Murder) ಎಂಬ ಗಹನವಾದ ವಿಚಾರಗಳನ್ನು ಕುರಿತು ಹಾರ್ವರ್ಡ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಪ್ರೊಫೆಸರ್ Michael Sandel ತಮ್ಮ ಉಪನ್ಯಾಸದ ಆರಂಭದಲ್ಲಿ ಉಲ್ಲೇಖಿಸಿದ ಕೆಲವು ವಿಷಮ ಪ್ರಸಂಗಗಳು ಹೀಗಿವೆ:
1.ಹೆದ್ದಾರಿಯಲ್ಲಿ ಒಂದು ಕಾರು ವೇಗವಾಗಿ ಚಲಿಸುತ್ತಿತ್ತು. ಕಾರು ಸೇತುವೆಯ ಹತ್ತಿರ ಬರುತ್ತಿದ್ದಂತೆಯೇ ಎದುರಿನಲ್ಲಿ ಐದು ಜನ ಕಾರ್ಮಿಕರು ಕೆಲಸ ಮಾಡುತ್ತಿರುವುದು ಕಣ್ಣಿಗೆ ಬೀಳುತ್ತದೆ. ಚಾಲಕ ತಕ್ಷಣವೇ ಕಾರನ್ನು ನಿಲ್ಲಿಸಲು ಪ್ರಯತ್ನಿಸುತ್ತಾನೆ. ಆದರೆ ಕಾರಿನ ಬ್ರೇಕ್ ಫೇಲಾಗುತ್ತದೆ. ತುಂಬಾ ಗಾಬರಿಗೊಳ್ಳುತ್ತಾನೆ. ನೇರವಾಗಿ ಕಾರನ್ನು ನಡೆಸಿದರೆ ಐದೂ ಜನರ ಹೆಣ ಬೀಳುತ್ತವೆ. ಎಡಗಡೆ ಎತ್ತರದ ದಿಬ್ಬವಿದೆ, ಹೋಗಲು ಬರುವಂತಿಲ್ಲ. ರಸ್ತೆಯ ಬಲಬದಿಯಲ್ಲಿ ಒಬ್ಬನೇ ಒಬ್ಬ ಕೆಲಸ ಮಾಡುತ್ತಿದ್ದಾನೆ. ಕಾರನ್ನು ಬಲಗಡೆಗೆ ತಿರುಗಿಸಿದರೆ ಅವನು ಸಾಯುತ್ತಾನೆ. ಈಗ ಚಾಲಕ ಏನು ಮಾಡಬೇಕು? ನೇರವಾಗಿ ಕಾರನ್ನು ನಡೆಸಬೇಕೇ ಅಥವಾ ಬಲಗಡೆಗೆ ತಿರುಗಿಸಬೇಕೇ? ಐದು ಜನರ ಪ್ರಾಣವನ್ನು ಉಳಿಸಬೇಕೇ? ಅಥವಾ ಒಬ್ಬನ ಸಾವಿಗೆ ಕಾರಣನಾಗಬೇಕೇ? ತಕ್ಷಣವೇ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ. ಯೋಚಿಸಲು ಹೆಚ್ಚು ಅವಕಾಶವಿಲ್ಲ. ನಿಮಗೆ ಇಂತಹ ಸಂದರ್ಭ ಎದುರಾಗಿದ್ದರೆ ಏನು ಮಾಡುತ್ತಿದ್ದಿರಿ? ಪ್ರಾಧ್ಯಾಪಕರ ಈ ಪ್ರಶ್ನೆಗೆ ಬಹಳ ಜನ ವಿದ್ಯಾರ್ಥಿಗಳಿಂದ ಬಂದ ಉತ್ತರ. "ಒಬ್ಬನು ಸತ್ತರೂ ಪರವಾಯಿಲ್ಲ. ಐದು ಜನರ ಪ್ರಾಣ ಉಳಿಯುವುದರಿಂದ ಬಲಕ್ಕೆ ತಿರುಗಿಸುವುದೇ ಸರಿ!”
2.ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಐವರನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಗುತ್ತದೆ. ತುರ್ತು ಚಿಕಿತ್ಸಾ ವಿಭಾಗದಲ್ಲಿದ್ದ ವೈದ್ಯರು ಪರೀಕ್ಷೆ ನಡೆಸಿ ತುರ್ತಾಗಿ ಆಪರೇಷನ್ ಮಾಡಲು ಸರ್ಜರಿ ವಿಭಾಗಕ್ಕೆ ಕಳುಹಿಸಿಕೊಡುತ್ತಾರೆ. ಅವರಲ್ಲಿ ಒಬ್ಬನ ಸ್ಥಿತಿಯಂತೂ ತುಂಬಾ ಚಿಂತಾಜನಕವಾಗಿರುತ್ತದೆ. ಅವನಿಗೆ ಶಸ್ತ್ರಚಿಕಿತ್ಸೆಯನ್ನು ಮಾಡಬೇಕೆಂದರೆ ಇಡೀ ದಿನ ಬೇಕಾಗುತ್ತದೆ. ಅವನೊಬ್ಬನೆ ಚಿಕಿತ್ಸೆಯಲ್ಲಿ ತೊಡಗಿದರೆ ಉಳಿದ ನಾಲ್ವರು ಸಾಯುತ್ತಾರೆ. ಈಗ ಸರ್ಜನ್ ಏನು ಮಾಡಬೇಕು? ಯಾರ ಚಿಕಿತ್ಸೆಯನ್ನು ಮೊದಲು ಮಾಡಬೇಕು? ಪ್ರಾಧ್ಯಾಪಕರ ಈ ಪ್ರಶ್ನೆಗೂ ವಿದ್ಯಾರ್ಥಿಗಳಿಂದ ಬಂದ ಉತ್ತರ: “ಒಬ್ಬನ ಕಾರಣಕ್ಕಾಗಿ ನಾಲ್ವರು ಸಾಯುವಂತಾಗಬಾರದು. ಒಬ್ಬನು ಸತ್ತರೂ ಪರವಾಗಿಲ್ಲ, ಆದ್ಯತೆಯ ಮೇಲೆ ಉಳಿದ ನಾಲ್ವರ ಶಸ್ತ್ರಚಿಕಿತ್ಸೆ ಮಾಡುವುದೇ ಸರಿ".
ಹಾರ್ವರ್ಡ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಂದ ಬಂದ ಈ ಮೇಲಿನ ಪ್ರತಿಕ್ರಿಯೆ "ಬಹುಜನ ಹಿತಾಯ, ಬಹುಜನ ಸುಖಾಯ” ಅಂದರೆ ಹೆಚ್ಚು ಜನರಿಗೆ ಹಿತವಾಗುವಂತಹ, ಹೆಚ್ಚು ಜನರ ಸುಖಕ್ಕೆ ಕಾರಣವಾಗುವಂತಹ ಕೆಲಸವನ್ನೇ ಮಾಡಬೇಕು ಎಂಬ ಭಾರತೀಯ ಧರ್ಮಶಾಸ್ತ್ರಗಳ ಬೋಧನೆಗೆ ಅನುಗುಣವಾಗಿದೆ. ಆದರೆ ಎಲ್ಲ ಸಂದರ್ಭಗಳಲ್ಲೂ "ಬಹುಜನ ಹಿತಾಯ" ಮಾನದಂಡವಾಗಲಾರದು ಎಂದರೆ ಅಚ್ಚರಿಪಡಬೇಕಾಗಿಲ್ಲ. ಪ್ರಾಧ್ಯಾಪಕರು ಉದಾಹರಿಸಿದ ಮುಂದಿನ ಪ್ರಸಂಗವನ್ನು ಗಮನಿಸಿ:
3.ಒಂದು ಆಸ್ಪತ್ರೆಗೆ ಐದು ಜನ ರೋಗಿಗಳು ಬರುತ್ತಾರೆ. ಅವರನ್ನು ತೀವ್ರ ನಿಗಾ ಘಟಕದಲ್ಲಿರಿಸುತ್ತಾರೆ. ಒಬ್ಬನಿಗೆ ಕಿಡ್ನಿ ಹಾಳಾಗಿದೆ, ಎರಡನೆಯವನಿಗೆ ಲಿವರ್ ಹಾಳಾಗಿದೆ, ಮೂರನೆಯವನಿಗೆ ಶ್ವಾಸಕೋಶ ಹಾಳಾಗಿದೆ, ನಾಲ್ಕನೆಯವನಿಗೆ ಪ್ಯಾಂಕ್ರಿಯಾಸ್ (ಮೇದೋಜೀರಕಾಂಗ) ಹಾಳಾಗಿದೆ. ಐದನೆಯವನಿಗೆ ಹೃದಯವೇ ಹಾಳಾಗಿದೆ. ಬದಲಿ ಅಂಗಾಂಗ ಕಸಿಯಿಂದ ಮಾತ್ರ ಅವರು ಉಳಿಯಬಲ್ಲರು. ಅವರೆಲ್ಲರೂ ಅಂಗಾಂಗ ದಾನಿಗಳಿಗಾಗಿ ಕಾಯುತ್ತಿದ್ದಾರೆ. ತಕ್ಷಣವೇ ಅಂಗಾಂಗ ಕಸಿ ಮಾಡದಿದ್ದರೆ ಅವರು ಬದುಕಿ ಉಳಿಯುವುದಿಲ್ಲ. ಆದರೆ ನೀಡಬಲ್ಲ ದಾನಿಗಳು ಯಾರೂ ಸಿಗುತ್ತಿಲ್ಲ. ಕಣ್ಣೆದುರಿಗೇ ಅವರೆಲ್ಲರೂ ಸಾಯುತ್ತಾರಲ್ಲಾ ಎಂದು ಅಂಗಾಂಗ ಕಸಿಮಾಡಬಲ್ಲ ವೈದ್ಯರ ತಂಡ ಹತಾಶಗೊಳ್ಳುತ್ತದೆ. ಇದೇ ಸಂದರ್ಭಕ್ಕೆ ಸರಿಯಾಗಿ ಒಬ್ಬ ಆರೋಗ್ಯವಂತ ಮನುಷ್ಯ ಅದೇ ಆಸ್ಪತ್ರೆಗೆ ಬರುತ್ತಾನೆ. ಸಂಪೂರ್ಣ ಆರೋಗ್ಯದಿಂದಿದ್ದರೂ ಒಂದು ಸಲ "ಚೆಕ್ ಅಪ್" ಮಾಡಿಸಿಕೊಳ್ಳೋಣ ಎಂಬ ಇರಾದೆಯಿಂದ ಬಂದಿರುತ್ತಾನೆ. ವೈದ್ಯರು ತೀವ್ರ ನಿಗಾ ಘಟಕದಲ್ಲಿದ್ದ ಐದು ಜನ ನತದೃಷ್ಟರ ಆರೋಗ್ಯ ತಪಾಸಣೆ ಮುಗಿಸಿಕೊಂಡು ಬರುವ ವೇಳೆಗೆ ಅವನು ಪಕ್ಕದ ಕೊಠಡಿಯಲ್ಲಿ ವೈದ್ಯರಿಗಾಗಿ ಕಾದೂ ಕಾದೂ ನಿದ್ದೆ ಹೋಗಿರುತ್ತಾನೆ. ಈಗ ಪ್ರಶ್ನೆ: ನಿದ್ದೆಯಲ್ಲಿರುವ ಮನುಷ್ಯನ ಯಾವ ಅಂಗದಲ್ಲೂ ದೋಷವಿಲ್ಲ. ಒಳಗಿನ ಐದು ಜನ ರೋಗಿಗಳನ್ನು ಬದುಕಿಸಲು ಈ ಮನುಷ್ಯನ ಅಂಗಾಂಗಗಳನ್ನು ತೆಗೆದು ಕಸಿ ಮಾಡಿದರೆ ಹೇಗೆ? ಅವನೊಬ್ಬ ಸತ್ತರೂ ಐದು ಜನರ ಪ್ರಾಣ ಉಳಿಯುತ್ತದೆಯಲ್ಲವೇ? ಹಾಗೆ ವೈದ್ಯರು ಮಾಡಬಹುದೇ? ಎಂಬ ಪ್ರಶ್ನೆಗೆ ವಿದ್ಯಾರ್ಥಿಗಳು ಯಾರೂ ಸಮ್ಮತಿಸುವುದಿಲ್ಲ. ಆದರೆ ಒಬ್ಬ ವಿದ್ಯಾರ್ಥಿ ಮಾತ್ರ ಎಲ್ಲರೂ ವಿಸ್ಮಯಗೊಳ್ಳುವ ರೀತಿಯಲ್ಲಿ ಬೇರೊಂದು ಪರಿಹಾರೋಪಾಯವನ್ನು ಸೂಚಿಸುತ್ತಾನೆ. ಆ ಐವರು ರೋಗಿಗಳಲ್ಲಿ ಯಾರು ಮೊದಲು ಸಾಯುತ್ತಾರೋ ಅವನ ಅಂಗಾಂಗಗಳನ್ನು ಉಳಿದ ನಾಲ್ವರಿಗೆ ಕಸಿಮಾಡಿ ಬದುಕಿಸಬಹುದಲ್ಲವೇ!
ಮೊದಲಿನ ಎರಡು ಪ್ರಕರಣಗಳಲ್ಲಿ ಕೆಲವರ ಭಿನ್ನಾಭಿಪ್ರಾಯವಿದ್ದರೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲರದೂ ಒಂದೇ ಅಭಿಪ್ರಾಯ: "ಐವರನ್ನು ಉಳಿಸಲು ಒಬ್ಬ ಅಮಾಯಕನ ಪ್ರಾಣ ತೆಗೆಯುವುದು ನೈತಿಕತೆಯಲ್ಲ, ಕೊಲೆ ಎನಿಸುತ್ತದೆ”. ಹಾಗಾದರೆ ರಸ್ತೆ ಅಪಘಾತದ ಪ್ರಕರಣಗಳಲ್ಲಿ "ಒಬ್ಬನ ಪ್ರಾಣ ಹೋದರೂ ಪರವಾಗಿಲ್ಲ, ಐವರ ಪ್ರಾಣವನ್ನು ಉಳಿಸುವುದು ಲೇಸು" ಎಂಬ "ಬಹುಜನ ಹಿತಾಯ" ವಾದ ಎಲ್ಲಿ ಸೋತಿತು? ಮೊದಲನೆಯ ಎರಡು ಪ್ರಕರಣಗಳಲ್ಲಿ ಆಡಿದ ನೈತಿಕತೆಯ ಮಾತು ಮೂರನೆಯ ಪ್ರಕರಣದಲ್ಲಿ ಎಲ್ಲಿ ಹೋಯಿತು?
ಪಾಶ್ಚಾತ್ಯ ದಾರ್ಶನಿಕರಲ್ಲಿ ಒಂದು ಕ್ರಿಯೆಯಿಂದ ಉಂಟಾಗುವ ಪರಿಣಾಮಗಳನ್ನು ಗಮನದಲ್ಲಿರಿಸಿಕೊಂಡು” ಸರಿತಪ್ಪುಗಳನ್ನು ನಿರ್ಧರಿಸಬೇಕೆಂದು ಕೆಲವರು (Consequentialists) ಪ್ರತಿಪಾದಿಸಿದರೆ ಮತ್ತೆ ಕೆಲವರು (Categorical) “ಮಾಡುವ ಕ್ರಿಯೆಯನ್ನು ಗಮನದಲ್ಲಿರಿಸಿಕೊಂಡು" ನಿರ್ಧರಿಸಬೇಕೆಂದು ಪ್ರತಿಪಾದಿಸುತ್ತಾರೆ. ಎರಡನೆಯವರ ವಾದ ಬಹುಮಟ್ಟಿಗೆ "ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ” ಎಂಬ ಭಗವದ್ಗೀತೆಯ ಉಪದೇಶಕ್ಕೆ ಪೂರಕವಾಗಿದೆ. ಪರಿಣಾಮ ಏನೇ ಆಗಿರಲಿ ತಾನು ಮಾಡಬೇಕಾದ ಕರ್ತವ್ಯ ಹೌದೋ ಅಲ್ಲವೋ ಎಂಬುದನ್ನು ಗಮನದಲ್ಲಿರಿಸಿಕೊಂಡು ಕಾರ್ಯಮಗ್ನನಾಗಬೇಕು. ಪರಿಣಾಮ ತನಗೆ ಎಷ್ಟೇ ಪ್ರತಿಕೂಲವಾಗಿದ್ದರೂ ತಾನು ಮಾಡಬೇಕಾದ ಕರ್ತವ್ಯಗಳಿಂದ ವಿಮುಖನಾಗಬಾರದು ಎಂಬುದು ಗೀತೆಯ ಸಂದೇಶ. ಇನ್ನು "ಬಹುಜನ ಹಿತಾಯ" ಎಂಬ ಹಿತೋಕ್ತಿಯಲ್ಲಿರುವ ಆಶಯ ಒಬ್ಬನನ್ನು ಕೊಂದು ಐವರನ್ನು ಬದುಕಿಸುವುದಲ್ಲ. ಬಹುಜನರಒಳಿತಿಗಾಗಿ ತನ್ನ ಸ್ವಾರ್ಥವನ್ನು ತ್ಯಾಗ ಮಾಡುವುದು, ತನ್ನನ್ನೇ ಸಮರ್ಪಿಸಿಕೊಳ್ಳುವುದು.
"ನ ಕರ್ಮಣಾ ನ ಪ್ರಜಯಾ ಧನೇನ,
ತ್ಯಾಗೇನೈಕೇನಾಮೃತತ್ವಮಾನಶುಃ”
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 8.11.2018