ತಾಯಿಯ ಮಡಿಲನ್ನು ಸೇರಿದ ವೀರ ಯೋಧ
1999 ರಲ್ಲಿ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ನಡೆದ ಕಾರ್ಗಿಲ್ ಯುದ್ಧ ಈಗ ಇತಿಹಾಸದ ಪುಟ ಸೇರಿದೆ. ಯಾರಿಗೂ ಅಷ್ಟಾಗಿ ನೆನಪಿಲ್ಲ. 21ನೆಯ ಶತಮಾನದ ಶಾಲೆಯ ಮಕ್ಕಳಿಗಂತೂ ಗೊತ್ತೇ ಇಲ್ಲ. ಅಷ್ಟಕ್ಕೂ ಪಠ್ಯಪುಸ್ತಕಗಳಲ್ಲಿ ಸೇರಿದ್ದರೆ ತಾನೆ ಅವರಿಗೆ ಗೊತ್ತಾಗುವುದು. ಅಕಸ್ಮಾತ್ ಸೇರಿದ್ದರೆ ಈಗ ಪರೀಕ್ಷೆ ಮುಗಿದಿರುವುರಿಂದ ಅದೂ ನೆನಪಿರಲು ಸಾಧ್ಯವಿಲ್ಲ. ಇನ್ನು ಮುಂಬರುವ ಚುನಾವಣೆಯ “ಟಿಕೆಟ್ಟು ಹೋರಾಟಗಾರ” ರಿಗಂತೂ ಅದರ ಅವಶ್ಯಕತೆಯೇ ಇಲ್ಲ. ಗಡಿಪ್ರದೇಶದಲ್ಲಿ ಪಾಕಿಸ್ತಾನ, ಚೀನಾ ಅಕ್ರಮವಾಗಿ ಆಕ್ರಮಿಸಿಕೊಂಡ ಭೂಭಾಗಕ್ಕಾಗಿ ಹೋರಾಟ ಮಾಡಿ ಭಾರತದ ಸಾರ್ವಭೌಮತ್ವವನ್ನು ಸಾಧಿಸುವುದು ಅವರ ಗುರಿಯಲ್ಲ. ಅವರ ಹೋರಾಟ ಏನಿದ್ದರೂ ಅಕ್ರಮವಾಗಿ ಹಣ, ಮದ್ಯ ವಿತರಣೆ ಮಾಡಿ ಅಧಿಕಾರ ಪಡೆಯುವುದು. ಅಧಿಕಾರದ ಕಾಲಾವಧಿ ಮುಗಿಯುವುದರೊಳಗೆ ಹಂಚಿದ ಹಣವನ್ನು ಬಡ್ಡಿ, ಚಕ್ರಬಡ್ಡಿ ಸಮೇತ ವಸೂಲಿ ಮಾಡಿಕೊಂಡು ಮುಂದಿನ ಚುನಾವಣೆಗೆ ಬಂಡವಾಳವನ್ನು ಹೆಚ್ಚಿಸಿಕೊಳ್ಳುವುದು. ಕಡ್ಡಾಯವಾಗಿ ಇಂತಿಷ್ಟು ವರ್ಷ ಮಿಲಿಟರಿಯಲ್ಲಿ ಸೇವೆ ಮಾಡಿದವರಿಗೆ ಮಾತ್ರ ಟಿಕೆಟ್ಟು ಕೊಡುವ ನಿಯಮವನ್ನೇನಾದರೂ ರೂಪಿಸಿದ್ದರೆ ಪಕ್ಷ ಪಕ್ಷಗಳಲ್ಲಿ ಈಗ ಭುಗಿಲೆದ್ದಿರುವ ಅತೃಪ್ತರ ಆಕ್ರೋಶ ಇರುತ್ತಿರಲಿಲ್ಲವೇನೋ!
ವಿಷಯ ಎಲ್ಲಿಂದ ಎಲ್ಲಿಗೋ ಹೋಯಿತು. ಚುನಾವಣೆಯ ಸಮರದ ಈ ಸಂದರ್ಭದಲ್ಲಿ ಕಾರ್ಗಿಲ್ ಯುದ್ಧದ ವಿಷಯ ಪ್ರಸ್ತಾಪ ಮಾಡಲು ಕಾರಣ ಕರ್ನಲ್ ರವೀಂದ್ರನಾಥ ಅವರು ಕಳೆದ ಭಾನುವಾರ ಬೆಳಿಗ್ಗೆ ಅನಿರೀಕ್ಷಿತವಾಗಿ ನಿಧನರಾದ ದಾರುಣ ವಾರ್ತೆ. ಮಿಲಿಟರಿ ಸೇವೆಯಿಂದ ನಿವೃತ್ತಿ ಹೊಂದಿದ ಮೇಲೆ ಬೆಂಗಳೂರಿನಲ್ಲಿ ನೆಲೆಸಿದ್ದ ಅವರು ಮುಂಜಾನೆ ವಾಯುವಿಹಾರ ಹೋಗಿ ಬಂದವರು ಮನೆಯ ಮೆಟ್ಟಿಲು ಏರುವಾಗ ಹಠಾತ್ತನೆ ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದು ಮರಣ ಹೊಂದಿದರು. ಜೀವದ ಹಂಗು ತೊರೆದು ಶತ್ರುಸೈನ್ಯದೊಂದಿಗೆ ಸೆಣಸಾಡಿ ಯುದ್ಧದಲ್ಲಿ ಗೆದ್ದುಬಂದ ಅವರು ಸಾವಿನೊಂದಿಗೆ ಸೆಣಸಾಡಿ ಬದುಕಲು ಆಗಲಿಲ್ಲ. ಅಗಲಿದ ವೀರಯೋಧನ ಆತ್ಮಕ್ಕೆ ಗೌರವ ಸಲ್ಲಿಸಲು ಮತ್ತು ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಲು ದಾವಣಗೆರೆಯ ಅವರ ಮನೆಗೆ ಹೋದಾಗ ಅವರ ಮುಖದ ಕಾಂತಿ ಕುಂದಿರಲಿಲ್ಲ. ಅವರು ತಮ್ಮ ಕಣ್ಣುಗಳನ್ನು ದಾನವಾಗಿ ನೀಡಿದ್ದಾರೆಂದು ತಿಳಿಯಿತು.
ಕರ್ನಾಟಕ ಮೂಲದ ಅವರು ಶ್ರೀನಗರ ಸಮೀಪದ ಕಾರ್ಗಿಲ್ ನ ಆಯಕಟ್ಟು ಪ್ರದೇಶದಲ್ಲಿ 35ರ ಹರೆಯದಲ್ಲಿ ವೀರಾವೇಶದಿಂದ ಹೋರಾಡಿದವರು. ಶತ್ರು ಸೈನ್ಯವನ್ನು ಹಿಮ್ಮೆಟ್ಟಿಸಿ 4590 ಅಡಿ ಎತ್ತರದಲ್ಲಿರುವ ಟೋಲೋಲಿಂಗ್ ಶಿಖರದಲ್ಲಿ ಭಾರತದ ತ್ರಿವರ್ಣಧ್ವಜವನ್ನು ಹಾರಿಸಿದ ಅಪ್ರತಿಮ ವೀರ.
ಇದಕ್ಕಾಗಿ ಅವರಿಗೆ ಆ ವರ್ಷ “ವೀರಚಕ್ರ” ಪ್ರಶಸ್ತಿ ದೊರೆತದ್ದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ಸಂಗತಿ. ನಮ್ಮ ಮಠದ ಆತ್ಮೀಯ ಶಿಷ್ಯರಾಗಿದ್ದ ಹರಿಹರ ತಾಲ್ಲೂಕು ಹೊಳೆಸಿರಿಗೆರೆ ಗ್ರಾಮದ ಬಸಪ್ಪ ಮಾಸ್ತರ್ ಮತ್ತು ಸರೋಜಮ್ಮ ದಂಪತಿಗಳ ಹಿರಿಯ ಮಗನಾಗಿದ್ದ ಅವರನ್ನು ಗೌರವಿಸಲು ದಾವಣಗೆರೆಯಲ್ಲಿ ನಮ್ಮ ಸಮ್ಮುಖದಲ್ಲಿ ಒಂದು ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು. ಆ ಸಂದರ್ಭದಲ್ಲಿ ಅವರಾಡಿದ ಮಾತುಗಳು ಸಭಿಕರಿಗೆ ಮೈರೋಮಾಂಚವನ್ನುಂಟು ಮಾಡಿತು. ಸುಮಾರು 20 ವರ್ಷಗಳ ಹಿಂದೆ ಆಡಿದ ಅವರ ಆ ಮಾತುಗಳು ಇನ್ನೂ ನಮ್ಮ ಕಿವಿಯಲ್ಲಿ ಅನುರಣಿಸುತ್ತಿವೆ.
ಅವರು ಸುಮಾರು ಎಂಟುನೂರು ಯೋಧರುಳ್ಳ ರಜಪೂತಾನ್ ರೈಫಲ್ಸ್ ನ ಎರಡು ಸೇನಾಪಡೆಯ ಕಮಾಂಡರ್ ಆಗಿದ್ದರು. ಅವರ ಸೇನಾಪಡೆಯಲ್ಲಿ ರಾಜಸ್ತಾನದ ಯೋಧನೊಬ್ಬನಿದ್ದ. ಅವನಿಗೆ ಮದುವೆಯಾಗಿ ಒಂದು ವರ್ಷವೂ ಆಗಿರಲಿಲ್ಲ. ರಜೆಯ ಮೇಲಿದ್ದ ಅವನಿಗೆ ದಿಢೀರನೆ ಮಿಲಿಟರಿ ಮೇಲಧಿಕಾರಿಗಳಿಂದ ಕರೆ ಹೋಯಿತು. ಪತ್ನಿಗೆ ವಿದಾಯ ಹೇಳಿ ಕಾರ್ಗಿಲ್ನಲ್ಲಿ ಯುದ್ಧ ಮಾಡಲು ಸನ್ನದ್ಧನಾಗಿ ಹೊರಟು ಬಂದಿದ್ದ. ಯುದ್ಧ ಆರಂಭವಾಯಿತು. ಶತ್ರು ಸೈನ್ಯ ಪರ್ವತ ಶ್ರೇಣಿಯ ಮೇಲ್ಬಾಗದಲ್ಲಿತ್ತು. ಇವರು ಕಣಿವೆಯ ಕೆಳಭಾಗದಲ್ಲಿದ್ದರು. ಶತ್ರು ಸೈನ್ಯಕ್ಕೆ ಗೊತ್ತಾಗದಂತೆ ರಾತ್ರಿ ಹೊತ್ತು ಕತ್ತಲಲ್ಲಿ ತೆವಳಿಕೊಂಡು ಮೇಲೇರಬೇಕಾಗಿತ್ತು. ಭೀಕರ ಗುಂಡಿನ ಧಾಳಿ ನಡೆಯಿತು. ಕರ್ನಲ್ ರವೀಂದ್ರನಾಥ್ ರವರ ಹತ್ತಿರದಲ್ಲಿಯೇ ಇದ್ದ ಆ ಯೋಧನಿಗೆ ಗುಂಡು ತಾಗಿತು. ಆತನ ಜೀವ ಉಳಿಸಲು ಮಾಡಿದ ಪ್ರಯತ್ನಗಳೆಲ್ಲವೂ ವಿಫಲವಾದವು. ಕ್ಷಣಾರ್ಧದಲ್ಲಿ ಸಾವನ್ನಪ್ಪಿದ.
ಅವನ ಜೇಬಿನಲ್ಲಿದ್ದ ಒಂದು ಪತ್ರ ಕರ್ನಲ್ ರವರ ಕಣ್ಣಿಗೆ ಬಿತ್ತು. ಮನೆಯಿಂದ ವಿದಾಯ ಹೇಳುವಾಗ ಅವನ ಪತ್ನಿ ಭಾವುಕಳಾಗಿ ಬಿಗಿದಪ್ಪಿ ಅವನ ಜೇಬಿನಲ್ಲಿಟ್ಟಿದ್ದ ಪತ್ರವದು. ಆ ಪತ್ರದಲ್ಲಿ ಅವನ ಪತ್ನಿ ಹೀಗೆ ಬರೆದಿದ್ದಳು: “ಆಗರ್ ಗೋಲೀ ಖಾನಾ ಪಡೇ ತೋ ಛಾತೀ ಪರ್ ಖಾನಾ ಪೀಠ್ ಪರ್ ನಹೀಂ” (ಗುಂಡು ತಾಗುವುದಿದ್ದರೆ ಎದೆಯನ್ನೊಡ್ಡು, ಬೆನ್ನನ್ನು ಒಡ್ಡಬೇಡ!). ಉಳಿದ ಯೋಧರನ್ನು ಧೃತಿಗೆಡದಂತೆ ಹುರಿದುಂಬಿಸಿ ವೀರಾವೇಶದಿಂದ ಹೋರಾಡಿ ಕರ್ನಲ್ ರವೀಂದ್ರನಾಥ್ ಗೆಲುವನ್ನು ಸಾಧಿಸಿದರು. ಇದಲ್ಲವೇ ದೇಶಭಕ್ತಿ!!!
ಕರ್ನಲ್ ರವೀಂದ್ರನಾಥ್ ಅವರ ತಂದೆ-ತಾಯಂದಿರನ್ನೂ ಅಂದಿನ ಸಭೆಯಲ್ಲಿ ಸನ್ಮಾನಿಸಲಾಯಿತು. ತಂದೆ ಬಸಪ್ಪ ಮೇಷ್ಟ್ರು ಆಧ್ಯಾತ್ಮ ವಿಚಾರಗಳಲ್ಲಿ ತುಂಬಾ ಆಸಕ್ತಿಯುಳ್ಳವರೂ ಮತ್ತು ನಿಷ್ಠುರವಾದಿಗಳೂ ಆಗಿದ್ದರು. ಅವರು ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದು ಶಾಲಾಶಿಕ್ಷಕರಾಗಿ. ನಂತರ ಶಿಕ್ಷಕ ವೃತ್ತಿಗೆ ವಿದಾಯ ಹೇಳಿ ಒಂದು ರೈಸ್ ಮಿಲ್ ಸ್ಥಾಪನೆ ಮಾಡಿ ವ್ಯಾಪಾರ ಉದ್ದಿಮೆಯನ್ನು ಆರಂಭಿಸಿದರು. ಕರ್ನಲ್ ರವೀಂದ್ರನಾಥ್ ಅವರು ಮಿಲಿಟರಿ ಸೇವೆಯಿಂದ ನಿವೃತ್ತರಾದ ಮೇಲೆ ಬೆಂಗಳೂರಿನಲ್ಲಿ ನೆಲೆಸಿ ತಮ್ಮ ತಂದೆಯ ಉದ್ದಿಮೆಗೆ ಹೊಸ ತಿರುವನ್ನು ನೀಡಿದರು. “ಮಾಗೋಡ್ ಲೇಸರ್” ಎಂಬ ಹೆಸರಿನಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಒಂದು ಹೊಸ ಕಂಪನಿಯನ್ನು ಸ್ಥಾಪಿಸಿದರು. ಅಮೇರಿಕೆಯ ಡೆಟ್ರಾಯಿಟ್ ನಗರದಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ಅವರ ಸಹೋದರ ಹಾಲಸ್ವಾಮಿ ಎಲ್ಲರಂತೆ ಆ ದೇಶದಲ್ಲಿ ನೆಲೆಸಲು ಇಷ್ಟಪಡದೆ ಬೆಂಗಳೂರಿಗೆ ಹಿಂದಿರುಗಿ ಅಣ್ಣನ ಉದ್ದಿಮೆಗೆ ಕೈಜೋಡಿಸಿದರು. ಎರಡನೆಯ ಸಹೋದರನಾದ ರಾಜೇಂದ್ರನೂ ನೆರವಾದ. ಮೂವರೂ ಜೊತೆಗೂಡಿ ಭಾರತದಲ್ಲಿಯೇ ಮೊದಲನೆಯದು ಎನಿಸಿದ Waterjet Cutting Machine ಅಳವಡಿಸಿದರು. ಅದರ ಉದ್ಘಾಟನೆಗೆ ಹೋದಾಗ ನೀರಿನಿಂದ ಎಂತಹ ಕಠಿಣವಾದ ಕಬ್ಬಿಣ ಮತ್ತು ಕಲ್ಲನ್ನು ಸಹ ಬೇಕಾದ ಆಕಾರಕ್ಕೆ ಸೀಳುವುದನ್ನು ನೋಡಿ ಆಶ್ಚರ್ಯವುಂಟಾಯಿತು. ಅದರ ಮುಂದುವರಿದ ಭಾಗವಾಗಿ ದಕ್ಷಿಣ ಭಾರತದಲ್ಲಿಯೇ ಮೊದಲನೆಯದೆನಿಸಿದ Laser Cutting ತಂತ್ರಜ್ಞಾನವನ್ನೂ ಅಳವಡಿಸಿದ್ದಾರೆ.
ಹಳ್ಳಿಯ ಜನರಿಗೆ ಪರದೇಶಗಳನ್ನು ತೋರಿಸಬೇಕೆಂಬ ಹಂಬಲದಿಂದ ನಮ್ಮ ಮಠದಿಂದ 1994 ಮತ್ತು 2000 ಇಸವಿಗಳಲ್ಲಿ ಎರಡು ಬಾರಿ “ವಿಶ್ವಶಾಂತಿ ಯಾತ್ರೆ”ಯನ್ನು ಏರ್ಪಡಿಸಿದ್ದೆವು. ಮೊದಲನೆಯ ಬಾರಿ ನೂರು ಜನರೂ, ಎರಡನೆಯ ಬಾರಿ ನೂರೈವತ್ತು ಜನರೂ ನಮ್ಮ ಜೊತೆಯಲ್ಲಿ ಪ್ರವಾಸ ಬಂದಿದ್ದರು. ಬೆಂಗಳೂರನ್ನೂ ನೋಡದ ಹಳ್ಳಿಯ ಜನರೊಂದಿಗೆ ಕೈಗೊಂಡ ಈ ಯಾತ್ರೆಗಳ ರೋಚಕ ಅನುಭವವನ್ನು ಕುರಿತು ಇದೇ ಅಂಕಣದಲ್ಲಿ ಬಹಳ ಹಿಂದೆ ಬರೆಯಲಾಗಿದೆ. ಎರಡನೆಯ ಬಾರಿ ಕೈಗೊಂಡಿದ್ದ ಪ್ರವಾಸದಲ್ಲಿ ಕರ್ನಲ್ ರವೀಂದ್ರನಾಥ್ ಅವರ ತಂದೆ-ತಾಯಿ ಭಾಗವಹಿಸಬೇಕಾಗಿತ್ತು. ಆದರೆ ಅಮೇರಿಕಾದ ವೀಸಾ ಸಿಗದ ಕಾರಣ ಅವರು ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ತಂದೆ ಬಸಪ್ಪ ಮೇಷ್ಟ್ರು ಪ್ರವಾಸಕ್ಕಾಗಿ ಕಟ್ಟಿದ್ದ ಹಣವನ್ನು ತಮಗಾಗಿ ಉಳಿಸಿಕೊಳ್ಳಲು ಬಯಸದೆ ಅವರ ಹಳ್ಳಿಯಲ್ಲಿ ತಲೆಯ ಮೇಲೆ ಸೂರಿಲ್ಲದ ಬಡ ಜನರಿಗೆ ಮನೆ ಕಟ್ಟಿಕೊಳ್ಳಲು ತಮ್ಮ ಬೆಲೆಬಾಳುವ ಜಮೀನಿನಲ್ಲಿಯೇ ಉಚಿತವಾಗಿ ನಿವೇಶನಗಳನ್ನು ಹಂಚಿ ನೆರವಾದರು.
ಅವರ ಪತ್ನಿ ಶ್ರೀಮತಿ ಸರೋಜಮ್ಮ ಅಷ್ಟಾಗಿ ಓದಿದವಳಲ್ಲ. ತುಂಬಾ ಗುರುಭಕ್ತಿ ಪರಾಯಣೆ. ಗಂಡನಂತೆಯೇ ಪರದೇಶ ನೋಡಲು ಅವಕಾಶ ವಂಚಿತಳಾದರೂ ಹತಾಶಳಾಗದೆ ಪ್ರವಾಸ ಹೊರಟವರೆಲ್ಲರ ಹಿತಾಕಾಂಕ್ಷಿಯಾಗಿ ನಾವು ಪ್ರವಾಸ ಹೊರಟ ದಿನದಿಂದ ಹಿಡಿದು ಮರಳಿ ಸ್ವದೇಶಕ್ಕೆ ಬರುವವರೆಗೂ ಒಂದು ತಿಂಗಳ ಕಾಲ ಪ್ರತಿನಿತ್ಯವೂ ತಮ್ಮ ಮನೆಯ ಪೂಜಾಗೃಹದಲ್ಲಿ ಕುಳಿತು ದೇವರನ್ನು ಬೇಡಿಕೊಂಡ ಸಂಗತಿ ನಮಗೆ ಗೊತ್ತಿರಲಿಲ್ಲ. ಬೆಂಗಳೂರಿನಲ್ಲಿ ಅವರ ಮಕ್ಕಳು ಸ್ಥಾಪಿಸಿದ ಉದ್ದಿಮೆಯ ಉದ್ಘಾಟನೆಗೆಂದು ಹೋದಾಗ ಅವರು ನಿತ್ಯವೂ ಪೂಜಾಗೃಹದಲ್ಲಿ ಕುಳಿತು ದೇವರಿಗೆ ದೀಪ ಹಚ್ಚಿ ಅನನ್ಯ ಶ್ರದ್ಧಾಭಕ್ತಿಯಿಂದ “ಓಂ ಶಾಂತಿ, ವಿಶ್ವ ಶಾಂತಿ” ಎಂದು ಅವರು ಸ್ವತಃ ಬರೆದಿಟ್ಟಿದ್ದ ಅದೆಷ್ಟೋ ಸಹಸ್ರ ಸಹಸ್ರ ಶಾಂತಿಮಂತ್ರ ಲೇಖನದ ನೋಟ್ ಬುಕ್ ಗಳನ್ನು ಪಾದಪೂಜೆಯ ಸಂದರ್ಭದಲ್ಲಿ ಆ ತಾಯಿ ನಮ್ಮ ಕೈಗೆ ನೀಡಿದಾಗ ಮಂತ್ರಮುಗ್ಧರಾದೆವು. ನಮ್ಮ ಪ್ರವಾಸದ ಯಶಸ್ಸಿಗೆ ನಮ್ಮ ಪ್ರಯತ್ನಕ್ಕಿಂತ ಇಂತಹ ಅನೇಕ ಶಿಷ್ಯರ ಗುಪ್ತಭಕ್ತಿಯೇ ಕಾರಣವಾಗಿದ್ದಿರಬೇಕು ಎನಿಸಿತು.
ಮಗ ಕರ್ನಲ್ ರವೀಂದ್ರನಾಥ್ರನ್ನು ಸನ್ಮಾನಿಸುವಾಗ ತಾಯಿ ಸರೋಜಮ್ಮನವರಿಗೂ ಶಾಲು ಹೊದಿಸಿ ಸನ್ಮಾನಿಸುವ ವೇಳೆ ನಾವು ಕೇಳಿದ ಪ್ರಶ್ನೆ: “ನಿಮ್ಮ ಮಗ ಯುದ್ಧದಲ್ಲಿ ಮಡಿದಿದ್ದರೆ ನಿಮಗೆ ಏನೆನಿಸುತ್ತಿತ್ತು?” ಅದಕ್ಕೆ ಆ ತಾಯಿ ತಟ್ಟನೆ ಕೊಟ್ಟ ಉತ್ತರ: “ಬುದ್ದಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನನಿತ್ಯ ನಡೆಯುವ ಅಪಘಾತಗಳಲ್ಲಿ ಎಷ್ಟೋ ಜನ ಸಾಯುತ್ತಾರೆ. ಅಂಥದ್ದರಲ್ಲಿ ನನ್ನ ಮಗ ದೇಶಕ್ಕಾಗಿ ಹೋರಾಡಿ ಸತ್ತಿದ್ದರೆ ಈ ಸನ್ಮಾನಕ್ಕಿಂತ ಹೆಚ್ಚಿನ ಸಂತೋಷ ಪಡುತ್ತಿದ್ದೆ!”
ಸಹೃದಯ ಓದುಗರೇ, ಇದಲ್ಲವೇ ದೇಶಭಕ್ತಿ!!! ಈಗ ಆ ಮೂವರೂ ಇಲ್ಲ. ಆದರೆ ಅವರ ಜೀವನಾದರ್ಶ ನಮ್ಮ ಕಣ್ಮುಂದಿದೆ. “ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ” (ತಾಯಿ ಮತ್ತು ತಾಯ್ನಾಡು ಸ್ವರ್ಗಕ್ಕಿಂತಲೂ ಮಿಗಿಲು) ಎಂಬ ಸೂಕ್ತಿಗೆ ಅನುಗುಣವಾಗಿ ಬಾಳಿ ತಾಯಿಯ ಮಡಿಲನ್ನು ಸೇರಿದ ಕರ್ನಲ್ ರವೀಂದ್ರನಾಥ್ ದೇಶದ ಜನತೆಯ ನೆನಪಿನಲ್ಲಿ ಚಿರಾಯುವಾಗಿ ನೆಲೆಸಲಿ!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 12.4.2018