"ಕುದುರೆ ಲಾಯ"ಗಳಾಗುತ್ತಿರುವ ಪಂಚತಾರಾ ಹೋಟೆಲುಗಳು!
ಕರ್ನಾಟಕದ ಈಗಿನ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಪದೇ ಪದೇ ಬಳಕೆಯಾಗುತ್ತಿರುವ ಶಬ್ದವೆಂದರೆ "ಕುದುರೆ ವ್ಯಾಪಾರ ಸರಕಾರ ರಚನೆ ಮಾಡುವಾಗ ಅಥವಾ ಇರುವ ಸರಕಾರವನ್ನು ಬೀಳಿಸುವಾಗ ನಡೆಯುವ ರಾಜಕೀಯ ವಿದ್ಯಮಾನಗಳನ್ನು ಕುರಿತು ಮಾಧ್ಯಮಗಳಲ್ಲಿ ಧಾರಾಳವಾಗಿ ಬಳಕೆಯಾಗುವ ನುಡಿಗಟ್ಟಿದು. ಅಧಿಕಾರದ ಚುಕ್ಕಾಣಿ ಹಿಡಿಯಲು ಬಹುಮತವಿಲ್ಲದ ಒಂದು ರಾಜಕೀಯ ಪಕ್ಷದವರು ಮತ್ತೊಂದು ರಾಜಕೀಯ ಪಕ್ಷದವರನ್ನು ತಮ್ಮತ್ತ ಸೆಳೆದುಕೊಳ್ಳಲು ಮಾಡುವ ಹುನ್ನಾರವೇ "ಕುದುರೆ ವ್ಯಾಪಾರ". ಇದೊಂದು ಅನೈತಿಕ ನಡವಳಿಕೆಯೆಂದು ಎಲ್ಲ ರಾಜಕೀಯ ಪಕ್ಷದವರೂ ಪರಸ್ಪರ ದೂಷಣೆ ಮಾಡುತ್ತಾರೆ. ಆದರೆ ಯಾರೂ ಇದಕ್ಕೆ ಹೊರತಲ್ಲ. ಅನೈತಿಕ ಮಾರ್ಗವನ್ನೇ ಅನುಸರಿಸಿ ನೀತಿಸಂಹಿತೆಯ ಲಗಾಮು ಹರಿದುಕೊಂಡು ಬೆಂಗಳೂರಿಗೆ ನಾಗಾಲೋಟದಿಂದ ಓಡಿ ಬಂದ ಈ "ಕುದುರೆ"ಗಳಿಗೆ ನೀತಿಯ ಮಾತನ್ನು ಆಡುವ ಯಾವ ನೈತಿಕತೆಯೂ ಇಲ್ಲ.
Horse-trading ಅಂದರೆ "ಕುದುರೆ ವ್ಯಾಪಾರ"ದ ನಿಜವಾದ ಅರ್ಥ ಏನು? ಇದು ಹೇಗೆ ಬಳಕೆಗೆ ಬಂತು? ಒಂದೊಂದು ಭಾಷೆಯಲ್ಲಿ ಶಬ್ದಗಳ ಪ್ರಯೋಗ ಒಂದೊಂದು ತೆರನಾಗಿರುತ್ತದೆ. ಶಾಬ್ದಿಕ ಅರ್ಥ ಒಂದೇ ಆಗಿದ್ದರೂ ಬಳಕೆಯಲ್ಲಿ ಬೇರೆ ಅರ್ಥವೇ ಅಡಗಿರುತ್ತದೆ. ಉದಾಹರಣೆಗೆ ನಾನೂರ ಇಪ್ಪತ್ತು (420) ಎಂಬ ಸಂಖ್ಯೆಯನ್ನು ಇಂಗ್ಲೀಷಿನಲ್ಲಿ "four twenty" ಎಂದು ಹೇಳುವಾಗ ಅಥವಾ ಹಿಂದಿಯಲ್ಲಿ "ಚಾರ್ ಸೌ ಬೀಸ್" ಎಂದು ಹೇಳುವಾಗ ಧ್ವನಿಸುವ ವ್ಯಂಗ್ಯಾರ್ಥ ಕನ್ನಡದಲ್ಲಿ ಇಲ್ಲ. "ಕುದುರೆ ವ್ಯಾಪಾರ" ಎಂಬ ಶಬ್ದದಲ್ಲಿರುವ ವ್ಯಂಗ್ಯಾರ್ಥ "ಎತ್ತಿನ ವ್ಯಾಪಾರ" ಎಂಬ ಶಬ್ದದಲ್ಲಿ ಇಲ್ಲ. ಎತ್ತು ಜನಸಾಮಾನ್ಯರ ವಾಹನ. ಕುದುರೆ ಶ್ರೀಮಂತರ, ಅಧಿಕಾರಸ್ಥರ ವಾಹನ ಆಗಿತ್ತು. ರಾಜಮಹಾರಾಜರುಗಳ ಸೇನೆಯಲ್ಲಿ ಅಶ್ವದಳ ಎಂಬ ವಿಶೇಷ ಸೇನಾ ಪಡೆಯೇ ಇರುತ್ತಿತ್ತು. ಎತ್ತು ಶ್ರಮಜೀವಿಗಳ ಸಂಕೇತವಾದರೆ, ಕುದುರೆ ಅಧಿಕಾರಸ್ಥರ ಸಂಕೇತ. ಪ್ರಜಾತಂತ್ರದಲ್ಲಿ ಈ "ಕುದುರೆ"ಗಳನ್ನು ಸವಾರಿ ಮಾಡಬಲ್ಲವರೇ ಅಧಿಕಾರಕ್ಕೆ ಬರಲು ಸಾಧ್ಯ.
ವಾಸ್ತವವಾಗಿ "ಕುದುರೆ ವ್ಯಾಪಾರ" ಇಂಗ್ಲೀಷಿನಿಂದ ಕನ್ನಡಕ್ಕೆ ಎರವಲಾಗಿ ಬಂದ ಪದ. ಕೃಷಿಕರ ನಾಡಾದ ನಮ್ಮಲ್ಲಿ ಎತ್ತಿನ ವ್ಯಾಪಾರ ಹೆಚ್ಚು ಪ್ರಚಲಿತವಾಗಿದೆಯೇ ಹೊರತು ಕುದುರೆ ವ್ಯಾಪಾರ ಅಲ್ಲ. ಹಾಸನ, ಹಾವೇರಿ, ಕೂಡಲಿ, ರಾಂಪುರ ಮೊದಲಾದ ಕಡೆಗಳಲ್ಲಿ ಬಹಳ ಹಿಂದಿನಿಂದಲೂ ನಡೆಯುತ್ತಾ ಬಂದಿರುವ ಪ್ರಸಿದ್ಧವಾದ ದನಗಳ ಜಾತ್ರೆ ಯಾರಿಗೆ ಗೊತ್ತಿಲ್ಲ? ಹಾಸನದ ಮಾರ್ಗವಾಗಿ ಪ್ರಯಾಣಿಸುವವರಿಗೆ ದನಗಳ ಜಾತ್ರೆ ನಡೆಯುವ ಸ್ಥಳದಲ್ಲಿ ಒಂದು ಎತ್ತಿನ ದೊಡ್ಡ ವಿಗ್ರಹವೇ ಕಾಣಸಿಗುತ್ತದೆ. ಈಗೀಗ ಟ್ರ್ಯಾಕ್ಟರುಗಳು ಬಂದ ಮೇಲೆ ಈ ದನಗಳ ಜಾತ್ರೆ ಕಡಿಮೆಯಾಗುತ್ತಿವೆ. ಆದರೆ ಪಂಚಾಯಿತಿಯಿಂದ ಹಿಡಿದು ವಿಧಾನಸಭೆಯವರೆಗೆ ವರ್ಷದುದ್ದಕ್ಕೂ ಈ ಲಂಗುಲಗಾಮಿಲ್ಲದ ಕುದುರೆಗಳ ಜಾತ್ರೆಗಳೇ ಜೋರಾಗಿ ನಡೆಯುತ್ತಿವೆ. ಇತ್ತೀಚೆಗೆ ನಡೆದ ಕರ್ನಾಟಕದ ಚುನಾವಣೆ ಇಡೀ ರಾಷ್ಟ್ರರಾಜಕಾರಣದಲ್ಲಿ ಅನೇಕ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.
ಕುದುರೆ ವ್ಯಾಪಾರವಿರಲಿ ಎತ್ತಿನ ವ್ಯಾಪಾರವಿರಲಿ. ಅವುಗಳನ್ನು ಮಾರಾಟ ಮಾಡಲು ಜಾತ್ರೆಗೆ ಮಾಲೀಕರು ಹೊಡೆದುಕೊಂಡು ಬಂದಿರುತ್ತಾರೆ, ಅವುಗಳನ್ನು ಖರೀದಿಸಲು ಉತ್ಸುಕರಾಗಿರುವ ಖರೀದಿದಾರರೂ ಕಂತೆ ಕಂತೆ ನೋಟುಗಳನ್ನು ತೊಡೆಯ ಜೇಬಿನಲ್ಲಿಟ್ಟುಕೊಂಡು ಬಂದಿರುತ್ತಾನೆ. ಇಬ್ಬರ ಜೇಬಿನಲ್ಲಿರುವ ಹಣವನ್ನು ದೋಚಲು ಕಳ್ಳರೂ ಬಂದಿರುತ್ತಾರೆ. ವ್ಯಾಪಾರವೆಂದರೆ ಅಲ್ಲಿ ಮಾರುವವನೂ ಇರಬೇಕು ಕೊಳ್ಳುವವನೂ ಇರಬೇಕು. ಇಬ್ಬರಿಗೂ ವ್ಯಾಪಾರ ಕುದುರಿಸಲು ಕೆಲವು ವೇಳೆ ದಲ್ಲಾಳಿಯ ಅಗತ್ಯವೂ ಇರುತ್ತದೆ. ಅವನಿದ್ದರೆ ವ್ಯಾಪಾರ ಬೇಗ ಕುದುರುತ್ತದೆ. ಮಾರುವವನ ಬೆಲೆ ಆಕಾಶದೆತ್ತರದಲ್ಲಿ ಇರುತ್ತದೆ; ಕೊಳ್ಳುವವನ ಬೆಲೆ ಪಾತಾಳದ ಕೆಳಗೆ ಇರುತ್ತದೆ. ಅವರಿಬ್ಬರ ಮಧ್ಯೆ ಚೌಕಾಸಿ ನಡೆಯುತ್ತದೆ. ದಲ್ಲಾಳಿಯು ಮುಸುಕಿನೊಳಗೆ ಮುಷ್ಟಿಯನ್ನಿರಿಸಿ ಕೈಬೆರಳು ಸನ್ನೆ ಮಾಡಿದಾಗ ಮಾರುವವನು ಸ್ವಲ್ಪ ಸ್ವಲ್ಪ ಕೆಳಗೆ ಇಳಿಯುತ್ತಾನೆ. ಕೊಳ್ಳುವವನು ಸ್ವಲ್ಪ ಸ್ವಲ್ಪ ಮೇಲೆ ಏರುತ್ತಾನೆ. ಕೊನೆಗೆ ದಲ್ಲಾಳಿಯ ಕೈಚಳಕದಿಂದ ವ್ಯಾಪಾರ ಕುದುರುತ್ತದೆ. ವ್ಯವಹಾರ ಮುಗಿದು ಮಾರುವವನಿಗೆ ಕೊಳ್ಳುವವನಿಂದ ಹಣ ಸಂದಾಯವಾಗುತ್ತದೆ. ಮಾರಿದವನು ಹೆಚ್ಚಿನ ಬೆಲೆಗೆ ಮಾರಿದೆನೆಂದು ಬೀಗುತ್ತಾನೆ. ಕೊಳ್ಳುವವನು ಅಗ್ಗದಲ್ಲಿ ಕೊಂಡೆನೆಂದು ತೃಪ್ತಿ ಪಟ್ಟುಕೊಳ್ಳುತ್ತಾನೆ. ಎರಡೂ ಕಡೆಯಿಂದ ದಲ್ಲಾಳಿಗೆ ಅವನ ರುಸುಮೂ ಸಹ ಸಂದಾಯವಾಗುತ್ತದೆ!
ಕುದುರೆ/ಎತ್ತುಗಳ ವ್ಯಾಪಾರ ಅವುಗಳ ಮಾಲೀಕ ಮತ್ತು ಖರೀದಿದಾರರ ಮಧ್ಯೆ ನಡೆಯುತ್ತದೆಯೇ ಹೊರತು ಕುದುರೆ ಎತ್ತುಗಳೊಂದಿಗೆ ನಡೆಯುವುದಿಲ್ಲ. ಆದರೆ "ಕುದುರೆ ವ್ಯಾಪಾರ"ವೆಂದು ಆಪಾದಿಸಲಾಗುವ ರಾಜಕೀಯ ಸನ್ನಾಹವು ತೆರೆಮರೆಯಲ್ಲಿ ಕುದುರೆ ಮಾಲೀಕರೊಂದಿಗೂ ನಡೆಯುತ್ತದೆ; ನೇರವಾಗಿ ಕುದುರೆಗಳೊಂದಿಗೂ ನಡೆಯುತ್ತದೆ. ಮಾರುಕಟ್ಟೆಯಲ್ಲಿ ನಡೆಯುವ ಕುದುರೆ ವ್ಯಾಪಾರಕ್ಕೂ ಈ ರಾಜಕೀಯ ಕುದುರೆ ವ್ಯಾಪಾರಕ್ಕೂ ಇನ್ನೊಂದು ಪ್ರಮುಖ ವ್ಯತ್ಯಾಸವಿದೆ. ಇಲ್ಲಿ ದಲ್ಲಾಳಿಗಳು ಇರುತ್ತಾರಾದರೂ ಯಾವುದೇ ಚೌಕಾಸಿ ವ್ಯಾಪಾರ ಇರುವುದಿಲ್ಲ. ಮಾಲೀಕರು ತಮ್ಮ ಕುದುರೆಗಳನ್ನು ಬಿಸಿಲಿನಲ್ಲಿ ಕಟ್ಟಿಹಾಕುವುದಿಲ್ಲ. ಪಂಚತಾರಾ ಹೋಟೆಲುಗಳ ಹವಾನಿಯಂತ್ರಿತ ಕೊಠಡಿಗಳಲ್ಲಿ ಕಟ್ಟಿಹಾಕುತ್ತಾರೆ. ಕುದುರೆಗಳು ವಿರೋಧಿ ಪಾಳಯದವರ ಆಮಿಷಗಳಿಗೆ ಒಳಗಾಗದಂತೆ ಕಣ್ಣು ಕಿವಿಗಳಿಗೆ ಪಟ್ಟಿ ಕಟ್ಟುತ್ತಾರೆ. ಕಣ್ಣಿ ಕಿತ್ತುಕೊಂಡು ಓಡಿಹೋಗದಂತೆ ಎಲ್ಲ ರೀತಿಯ ಎಚ್ಚರ ವಹಿಸುತ್ತಾರೆ. ಈ ಕುದುರೆಗಳನ್ನು ಇಷ್ಟಪಟ್ಟವರು ಅವುಗಳ ಮಾಲೀಕರು ಹಾಕುವ ಹುಲ್ಲು, ಹುರುಳಿ ಕಾಳಿಗಿಂತ ರುಚಿಕಟ್ಟಾದ ತಿಂಡಿ ತಿನಿಸು ನೀಡಲು ಸಾರೋದ್ಧಾರವಾಗಿ ಮೇಯಲು ಅನುಕೂಲವಾಗುವಂತೆ ದೊಡ್ಡ ದೊಡ್ಡ ಹುಲ್ಲುಗಾವಲುಗಳು ಕರೆದೊಯ್ಯಲು ಸಿದ್ಧರಿರುತ್ತಾರೆ. ಕುದುರೆಯ ಒಡೆಯರು ತಮ್ಮ ಕುದುರೆಯನ್ನು ಸುತಾರಾಂ ಮಾರಲು ಸಿದ್ಧರಿರುವುದಿಲ್ಲ; ಅಷ್ಟೇ ಅಲ್ಲ ಸಾಧ್ಯವಾದರೆ ವಿರೋಧಿ ಲಾಯದ ಕುದುರೆಗಳ ಲಗಾಮುಗಳನ್ನು ಹೇಗಾದರೂ ಹಿಡಿದು ತಮ್ಮ ಲಾಯಕ್ಕೆ ಎಳೆದು ತರುವ ಸನ್ನಾಹ ನಡೆಸುತ್ತಾರೆ! ಪರಿಸ್ಥಿತಿಗೆ ಅನುಗುಣವಾಗಿ ಈ ಆಧುನಿಕ ಸುಸಜ್ಜಿತ "ಕುದುರೆ ಲಾಯ"ಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತಾ ಹೋಗುತ್ತವೆ. ಇದು horse-trade ಅಲ್ಲ vote-trade.
ಇಂದಿನ ರಾಜಕೀಯ ವಿದ್ಯಮಾನಗಳನ್ನು "ಕುದುರೆ ವ್ಯಾಪಾರ" ವೆಂದು ಹೇಳುವುದೇ ತಪ್ಪು. ಇದನ್ನು "ಪ್ರೇಮಿಗಳ ಪಲಾಯನ" (Elopement of Love Birds) ಎಂದು ಹೇಳುವುದು ಹೆಚ್ಚು ಸಮಂಜಸವಾಗಬಹುದು. ಕಾಲೇಜಿಗೆ ಹೋಗುವ ಮಗಳು ತನ್ನ ಸಹಪಾಠಿ ಹುಡುಗನ ಜೊತೆಗೆ ಸುತ್ತಾಡುತ್ತಾಳೆ. ಅವರಿಬ್ಬರ ಮಧ್ಯೆ ಪ್ರೇಮಾಂಕುರವಾಗುತ್ತಿದೆ ಎಂಬ ಮಾಹಿತಿ ಹೇಗೋ ತಿಳಿದ ಪೋಷಕರು ಮಾಡುವ ಮೊದಲ ಕೆಲಸವೆಂದರೆ ಅವಳನ್ನು ರೂಮಿನಲ್ಲಿ ಕೂಡಿಹಾಕುವುದು. “ನೀನು ಓದಿ ನಮ್ಮನ್ನು ಉದ್ದಾರ ಮಾಡುವುದು ಅಷ್ಟರಲ್ಲೇ ಇದೆ. ಇಂದಿನಿಂದ ನೀನು ಕಾಲೇಜಿಗೆ ಹೋಗುವುದೂ ಬೇಡ, ಮುಂದೆ ಓದುವುದೂ ಬೇಡ. ನಾವು ನೋಡುವ ಹುಡುಗನ್ನು ಮದುವೆ ಮಾಡಿಕೊಂಡು ನೆಟ್ಟಗೆ ಸಂಸಾರ ಮಾಡು, ಸಾಕು!"" ಎಂದು ಧಮಕಿ ಹಾಕುತ್ತಾರೆ. ಅವಳ ಅಣ್ಣನಿಗೋ ತಮ್ಮನಿಗೋ ಅವಳ ಮೇಲೆ ಒಂದು ಕಣ್ಣಿಡಲು ತಾಕೀತು ಮಾಡುತ್ತಾರೆ. ಅವಳ ಮೊಬೈಲನ್ನು ಕಸಿದುಕೊಂಡು ಹುಡುಗನನ್ನು ಸಂಪರ್ಕಿಸದಂತೆ ಮಾಡುತ್ತಾರೆ. ಹುಡುಗಿ ವಿಹ್ವಲಳಾಗಿ ತನ್ನನ್ನು ಮಾತಾಡಿಸಲು ಬಂದ ಗೆಳತಿಯ ಮೂಲಕ ತನ್ನ ಪ್ರೇಮಿಗೆ ಸಂದೇಶ ಕಳಿಸುತ್ತಾಳೆ. ಕೊನೆಗೆ ಹುಡುಗನ ಕೋರಿಕೆಯಂತೆ ಅವಳು ಒಂದೆರಡು ಬಟ್ಟೆಗಳನ್ನು ಬ್ಯಾಗಿಗೆ ತುರುಕಿಕೊಂಡೋ ಅಥವಾ ಉಟ್ಟ ಬಟ್ಟೆಯಲ್ಲಿಯೋ ತನ್ನನ್ನು ಬಂಧಿಸಿರುವ ಭದ್ರ ಕೋಟೆಯನ್ನು ಹೇಗೋ ಭೇದಿಸಿ ಪ್ರೇಮಿಯೊಂದಿಗೆ ಪಲಾಯನ ಮಾಡುತ್ತಾಳೆ. ಸ್ವಲ್ಪ ತಡವಾಗಿ ವಿಷಯ ತಿಳಿದ ಪೋಷಕರು ಏನೂ ಮಾಡಲಾಗದೆ ಕೈ ಕೈ ಹಿಸುಕಿಕೊಳ್ಳುತ್ತಾ ದೇವರಿಗೆ ಮೊರೆಯಿಟ್ಟು ಅಂಗಲಾಚುತ್ತಾರೆ.
ಈಗಿನ ರಾಜಕೀಯ ವಿದ್ಯಮಾನವನ್ನು "ಕುದುರೆ ವ್ಯಾಪಾರ" ಎಂದು ಕರೆಯುವುದು ಯಾರಿಗೆ ಅವಮಾನ ಎನಿಸದಿದ್ದರೂ ಅದು ಕುದುರೆಗಳಿಗೆ ಮಾಡಿದ ದೊಡ್ಡ ಅವಮಾನವೇ ಸರಿ! ಅತಿ ದೊಡ್ಡ ಪಕ್ಷವಾದರೂ ಸರಕಾರ ರಚನೆ ಮಾಡಲು ಸರಳ ಬಹುಮತ ಪಡೆಯದ ಪಕ್ಷವು ಅಧಿಕಾರ ಹಿಡಿಯಲು ಬೇರೆ ಪಕ್ಷದವರನ್ನು ಸೆಳೆಯಲು ಮಾಡುವ ತಂತ್ರಗಾರಿಕೆಗಳು ಕುದುರೆ ವ್ಯಾಪಾರವೆಂಬುದರಲ್ಲಿ ಸಂದೇಹವಿಲ್ಲ. ಆದರೆ ಹುಲ್ಲು ಹುರುಳಿಗಳು ಹಾಗೂ ಹುಲ್ಲುಗಾವಲುಗಳ ಆಸೆ ತೋರಿಸಿ, ಎರಡೂ ಲಾಯಗಳ ನಡುವಿನ ಬೇಲಿಯನ್ನು ತಾತ್ಕಾಲಿಕವಾಗಿಯಾದರೂ ಕಿತ್ತು ಹಾಕಿ ಅಧಿಕಾರ ಹಂಚಿಕೆಯ ಚೌಕಾಸಿ ವ್ಯವಹಾರ ಮಾಡಿಕೊಳ್ಳುವುದನ್ನೂ ಸಹ ಕುದುರೆ ವ್ಯಾಪಾರವೆಂದೇ ಹೇಳಬೇಕಾಗುತ್ತದೆ. ಇದು ಕುದುರೆ ವ್ಯಾಪಾರವಲ್ಲದಿದ್ದರೆ ಲಾಯದ ವ್ಯಾಪಾರವಂತೂ ನಿಜ, ಆದರೆ ಇದನ್ನು "ಅಪವಿತ್ರ ಮೈತ್ರಿ" ಎಂದು ಕರೆಯುವುದು ಖಂಡಿತಾ ತಪ್ಪು. ಏಕೆಂದರೆ ಚುನಾವಣಾ ಪ್ರಕ್ರಿಯೆಯಿಂದ ಹಿಡಿದು ಸರಕಾರ ರಚನೆಯಾಗುವವರೆಗೂ "ಪವಿತ್ರ" ಎಂದು ಹೇಳಿಕೊಳ್ಳುವುದೇನೂ ಈಗ ಉಳಿದಿಲ್ಲ. ಚುನಾವಣೆಯನ್ನು "ಹೇಗಾದರೂ" ಮಾಡಿ ಗೆಲ್ಲಬೇಕು; ಅಧಿಕಾರವನ್ನೂ "ಹೇಗಾದರೂ" ಮಾಡಿ ಹಿಡಿಯಬೇಕು ಎಂಬುದೇ ಮುಖ್ಯವಾಗಿರುವಾಗ ಇಲ್ಲಿ "ಪವಿತ್ರ"ವೂ ಇಲ್ಲ; "ಅಪವಿತ್ರ"ವೂ ಇಲ್ಲ. All is fair in love and war ಎಂಬುದನ್ನು ಬದಲಾಯಿಸಿ All is fair in love and politics ಎಂದು ಹೇಳಬೇಕಾಗಿ ಬಂದಿದೆ!
ಸ್ವಾತಂತ್ರ್ಯಪೂರ್ವದಲ್ಲಿ ನಡೆದ ಹೋರಾಟದಲ್ಲಿ ದೇಶದ ವಕೀಲರುಗಳ ಪಾತ್ರ ಬಹಳ ದೊಡ್ಡದು. ಯಶಸ್ವೀ ವಕೀಲರುಗಳು ಚಳುವಳಿಯನ್ನು ಕಟ್ಟಿ ಬೆಳೆಸಿದರು. ಹಣವನ್ನು ದುಡಿಯುವುದೇ ಪ್ರಮುಖವಾಗಿದ್ದರೆ ಅವರು ಚಳುವಳಿಯಲ್ಲಿ ಭಾಗವಹಿಸುವ ಅವಶ್ಯಕತೆಯೇ ಇರುತ್ತಿರಲಿಲ್ಲ. ದೇಶ ಕಟ್ಟುವ ಸಲುವಾಗಿ ತುಂಬಾ ಹಣ ಸಂಪಾದನೆ ಮಾಡುವ ತಮ್ಮ ವೃತ್ತಿಯನ್ನು ಅವರು ಕಳೆದುಕೊಂಡರು. ಈಗ ರಾಜಕೀಯದಲ್ಲಿ ವಕೀಲರು ಕಡಿಮೆ, ಉದ್ಯಮಿಗಳೇ ಹೆಚ್ಚು. ಏನಾದರೂ ಸರಿ, ಹೇಗಾದರೂ ಸರಿ ಗದ್ದುಗೆ ಹಿಡಿಯುವ ಹಪಾಹಪಿಯ ಈ ಕಾಲದಲ್ಲಿ ಪ್ರಾಮಾಣಿಕನೊಬ್ಬ ಚುನಾವಣೆಗೆ ಸ್ಪರ್ಧಿಸುವುದು, ಸ್ಪರ್ಧಿಸಿದರೂ ಗೆದ್ದು ಬರುವುದು ಕನಸಿನ ಮಾತಾಗಿದೆ. ಹೀಗಾಗಿ ಪ್ರಜಾಪ್ರಭುತ್ವದ ತಳಹದಿಯಾದ ಚುನಾವಣೆ ಅತಿದೊಡ್ಡ ವ್ಯಂಗ್ಯವಾಗಿಬಿಟ್ಟಿದೆ.
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 24.5.2018