ವಿದ್ಯಾರ್ಥಿಗಳಿಗೆ ಆರ್ಥಿಕ ಶಿಸ್ತನ್ನು ಕಲಿಸಬೇಕಾದ ಅಗತ್ಯ

  •  
  •  
  •  
  •  
  •    Views  

ನೋ ಭದ್ರಾಃ ಕ್ರತವೋ ಯಂತು ವಿಶ್ವತಃ” ಎಂಬ ಋಷಿವಾಣಿಯೊಂದು ಋಗ್ವೇದದ ಒಂದನೆಯ ಮಂಡಲದಲ್ಲಿದೆ (1.89.1), "ವಿಶ್ವದ ಎಲ್ಲೆಡೆಯಿಂದ ಒಳ್ಳೆಯ ವಿಚಾರಗಳು ಹರಿದು ಬರಲಿ” ಎಂದು ಇದರ ಅರ್ಥ. ಒಂದು ವಿಚಾರ ಒಳ್ಳೆಯದು ಎನಿಸಿಕೊಳ್ಳಬೇಕಾದರೆ ಇನ್ನೊಂದು ಕೆಟ್ಟದ್ದು ಇರಲೇ ಬೇಕು. ಆದಕಾರಣ ಒಳ್ಳೆಯ ವಿಚಾರಗಳಿಗೆ ಮಾತ್ರ ಮನಸ್ಸಿನ ಕಿಟಕಿ ಬಾಗಿಲುಗಳು ಸದಾ ತೆರೆದುಕೊಂಡಿರಲಿ; ಕೆಟ್ಟ ವಿಚಾರಗಳಿಗೆ ಮುಚ್ಚಿರಲಿ ಎಂಬ ವಿವೇಕವೂ ಈ ಋಷಿವಾಣಿಯಲ್ಲಿ ಅಡಗಿದೆ. ಇಂದು ಮಾಧ್ಯಮಗಳಲ್ಲಿ ಬರುತ್ತಿರುವುದು ಬಹುತೇಕ ಅಧಿಕಾರಕ್ಕಾಗಿ ನಡೆಯುತ್ತಿರುವ ಹಗ್ಗ-ಜಗ್ಗಾಟದ ರಾಜಕೀಯ, ಕೊಲೆ, ಸುಲಿಗೆ, ಅತ್ಯಾಚಾರ, ಭ್ರಷ್ಟಾಚಾರ, ರಸ್ತೆ ಅಪಘಾತಗಳು ಇತ್ಯಾದಿ ಕೆಟ್ಟ ಸುದ್ದಿಗಳೇ ಹೆಚ್ಚು. ಅಂತಹ ಸುದ್ದಿಗಳು ಇಲ್ಲದೇ ಹೋದರೆ ಓದುಗರೂ ಸಹ ಬೇಸರಗೊಳ್ಳುವ ಪರಿಸ್ಥಿತಿ ಉಂಟಾಗಿದೆ. ಬೆಳಗಿನ ಕಾಫಿಯನ್ನು ಗುಟುಕರಿಸುವಾಗ "ಇವತ್ತು ಅಂಥಾ ಹೇಳಿಕೊಳ್ಳುವ ಸುದ್ದಿ ಏನೂ ಇಲ್ಲ” ಎಂದು ನೀರಸ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾರೆ. ಇಂತಹ ಕೀಳು ಅಭಿರುಚಿಯನ್ನು ಮಾಧ್ಯಮಗಳು ಸೃಷ್ಟಿಸಿವೆ ಎನ್ನುವುದಕ್ಕಿಂತ ಜನರೇ ತಮ್ಮ ಕುಸಂಸ್ಕಾರದಿಂದ ಇಂತಹ ಕೆಟ್ಟ ಸುದ್ದಿಗಳಿಗೆ ಹಪಹಪಿಸುತ್ತಿದ್ದು ಮಾಧ್ಯಮಗಳು ಅದನ್ನು capitalize ಮಾಡಿಕೊಳ್ಳುತ್ತಿವೆ ಎನ್ನುವುದು ಹೆಚ್ಚು ಸೂಕ್ತವಾದೀತು. ಒಮ್ಮೊಮ್ಮೆ ಎಲ್ಲ ಪತ್ರಿಕೆಗಳೂ ಒಂದೇ ತೆರನಾಗಿ ಕಾಣಿಸುತ್ತವೆ. ಇಡೀ ಮುಖಪುಟ ಯಾವುದೋ ರಾಜಕೀಯ ಪಕ್ಷದ ಅಥವಾ ಕಂಪನಿಯ ಜಾಹೀರಾತಿನಿಂದ ಆವರಿಸಿದ್ದು ಪ್ರಮುಖ ಸುದ್ದಿಗಳು ಒಳಪುಟ ಸೇರುತ್ತವೆ. 

ಎಪ್ಪತ್ತರ ದಶಕದಲ್ಲಿ ವಿಯೆನ್ನಾ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವಾಗ ಅಲ್ಲಿಯ ದಿನಪತ್ರಿಕೆಗಳ ಮುಖಪುಟಗಳಲ್ಲಿ ಬರುತ್ತಿದ್ದ ಒಳೊಳ್ಳೆಯ ಸುದ್ದಿಗಳು ನಮ್ಮ ದೇಶದ ಪತ್ರಿಕೆಗಳಲ್ಲಿ ಏಕೆ ಬರುತ್ತಿಲ್ಲ ಎಂಬ ಪ್ರಶ್ನೆ ನಮ್ಮನ್ನು ಬಹಳ ವರ್ಷಗಳಿಂದಲೂ ಕಾಡಿಸುತ್ತಿತ್ತು. ಇತ್ತೀಚೆಗೆ ಬೇಸಿಗೆ ರಜಾ ಮುಗಿದು ಶಾಲೆಗಳಿಗೆ ಮಕ್ಕಳು ಧಾವಿಸುತ್ತಿರುವ ಚೇತೋಹಾರಿ ಸುದ್ದಿಗಳು ಪತ್ರಿಕೆಗಳ ಮುಖಪುಟಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಪರೀಕ್ಷೆಗಳಲ್ಲಿ ಉತ್ತಮ ಅಂಕಗಳ ಕಿರೀಟ ಧರಿಸಿದ ಪ್ರತಿಭಾವಂತ ವಿದ್ಯಾರ್ಥಿಗಳ ಭಾವಚಿತ್ರಗಳು ರಾರಾಜಿಸುತ್ತಿವೆ!

ಗಾಂಧೀಜಿ ತಮ್ಮ ಆತ್ಮಚರಿತ್ರೆಯ ಆರಂಭದ ಪುಟಗಳಲ್ಲಿ ತಮ್ಮ ಶಾಲಾ ದಿನಗಳನ್ನು ಕುರಿತು ಬರೆಯುವಾಗ ತಮ್ಮ ಕೈಬರಹ ಸುಂದರವಾಗಿಲ್ಲವೆಂದು ತುಂಬಾ ವಿಷಾದಿಸಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿರುವಾಗ ಅಲ್ಲಿಯ ವಕೀಲರು ಮತ್ತು ಅಲ್ಲಿಯೇ ಶಿಕ್ಷಣ ಪಡೆದ ವಿದ್ಯಾರ್ಥಿಗಳ ಸುಂದರ ಬರವಣಿಗೆಯನ್ನು ನೋಡಿ ಅವರಿಗೆ ತುಂಬಾ ನಾಚಿಕೆಯಾಯಿತಂತೆ. ಅವರಂತೆಯೇ ಸುಂದರವಾಗಿ ಬರೆಯಲು ಯತ್ನಿಸಿದರೂ ಸಾಧ್ಯವಾಗಲಿಲ್ಲವಂತೆ. ಬಾಲ್ಯದಲ್ಲಿ ಮಾಡಿದ ಉದಾಸೀನದಿಂದಾಗಿ ಹೀಗಾಯಿತೆಂದು ಬಹಳ ಪಶ್ಚಾತ್ತಾಪ ಪಟ್ಟಿದ್ದಾರೆ. “ಕೆಟ್ಟ ಕೈಬರಹವು ಅಪರಿಪೂರ್ಣ ಶಿಕ್ಷಣದ ಕುರುಹು” (Bad handwriting should be regarded as a sign of an imperfect education). ಆದಕಾರಣ ಬಾಲ್ಯದಲ್ಲಿ ಮಕ್ಕಳಿಗೆ ಸುಂದರವಾಗಿ ಬರೆಯುವುದನ್ನು ಕಲಿಸಿಕೊಡಬೇಕು ಎನ್ನುತ್ತಾರೆ ಗಾಂಧೀಜಿ. ಅದಕ್ಕಾಗಿ ಮಕ್ಕಳಿಗೆ ಮೊದಲು ಚಿತ್ರ ಬರೆಯುವುದನ್ನು ಕಲಿಸಿಕೊಡಬೇಕು ಎಂದು ಅವರು ಸಲಹೆ ಮಾಡುತ್ತಾರೆ. ಮಕ್ಕಳಿಗೆ ಪ್ರಕೃತಿಯಲ್ಲಿ ಕಾಣಬರುವ ಹಕ್ಕಿ-ಪಕ್ಷಿಗಳು, ಗಿಡ ಮರಗಳು, ಹೂವು ಹಣ್ಣು ಇತ್ಯಾದಿಗಳ ಚಿತ್ರಗಳನ್ನು ಸುಂದರವಾಗಿ ಬರೆಯಲು ಬಂದರೆ ನಂತರ ಅಕ್ಷರ ಕಲಿಸುವುದು ಸುಲಭ ಎಂಬುದು ಅವರ ಆಶಯ. ಈಗಲೂ ಗ್ರಾಮೀಣ ಪ್ರದೇಶದಲ್ಲಿ ಪ್ರೌಢಶಾಲೆಗೆ ಬರುವ ಮಕ್ಕಳಿಗೆ ಸರಿಯಾಗಿ ಅಕ್ಷರಗಳನ್ನು ಬರೆಯಲು ಮತ್ತು ಓದಲು ಬರುವುದಿಲ್ಲ. ಕನ್ನಡವನ್ನೇ ಸರಿಯಾಗಿ ಓದಲು ಬರೆಯಲು ಬಾರದ ತಮ್ಮ ಮಕ್ಕಳನ್ನು ಇಂಗ್ಲೀಷ್ ಮೀಡಿಯಂ ಶಾಲೆಗಳಿಗೆ ಸೇರಿಸಬೇಕೆಂಬ ಹುಚ್ಚು ಹಂಬಲ ಗ್ರಾಮೀಣ ತಂದೆತಾಯಂದಿರಿಗೆ ಬಹಳವಾಗಿದೆ.

ಮಕ್ಕಳು ಶಾಲೆಗೆ ಹೋಗುತ್ತಿರುವ ದೃಶ್ಯವನ್ನು ನೋಡಿ ನಮ್ಮ ಬಾಲ್ಯದ ದಿನಗಳು ನೆನಪಾದವು. ನಮ್ಮ ಪೂರ್ವಾಶ್ರಮದ ತಂದೆ ಈಶ್ವರಯ್ಯನವರು ನಮ್ಮನ್ನು ಶಿವಮೊಗ್ಗದ ಸರಕಾರಿ ಪ್ರೌಢಶಾಲೆಗೆ ಸೇರಿಸಿದ್ದರು. ಅವರು ಅಷ್ಟಾಗಿ ಓದಿದವರು ಆಗಿಲ್ಲದಿದ್ದರೂ ನಮಗೆ ಚಿಕ್ಕಂದಿನಿಂದಲೂ ಕಟ್ಟುನಿಟ್ಟಾಗಿ ಪ್ರತಿದಿನವೂ ದಿನಾಂಕವನ್ನು ನಮೂದಿಸಿ ಯಾವುದಾದರೂ ಪಾಠ ಅಥವಾ ಪತ್ರಿಕೆಯ ಲೇಖನವನ್ನು ಒಂದು ಪುಟ ಇಂಗ್ಲೀಷ್ ಮತ್ತು ಒಂದು ಪುಟ ಕನ್ನಡವನ್ನು ಪ್ರತಿಲಿಪಿ ಮಾಡುವಂತೆ ಮಾಡಿದ್ದರು. ಹಣಕಾಸಿನ ವಿಷಯದಲ್ಲಿ ಅವರು ತುಂಬಾ ಕಟ್ಟುನಿಟ್ಟು. ಖರ್ಚು ಮಾಡಿದ ಪ್ರತಿಯೊಂದು ಪೈಸೆಗೂ ಲೆಕ್ಕ ಬರೆದಿಡಬೇಕೆಂದು ತಾಕೀತು ಮಾಡಿದ್ದರು. ಅದಕ್ಕಾಗಿ ಒಂದು ಪ್ರತ್ಯೇಕ ನೋಟ್ಬುಕ್ ಕೊಡಿಸಿ ಅದರಲ್ಲಿ ಲೆಕ್ಕ ಬರೆಯುವಂತೆ ಮಾಡಿದ್ದರು. ರೂಂ ಬಾಡಿಗೆ, ಪುಸ್ತಕ, ಪೆನ್ನು, ಸಾಬೂನು, ಟೂತ್ಪೇಸ್ಟ್, ಕೈ ಅಡಿಗೆಗೆ ಬೇಕಾದ ಆಹಾರ ಪದಾರ್ಥಗಳು ಹೀಗೆ ಏನೇ ಖರ್ಚು ಬಂದರೂ ಎಲ್ಲವನ್ನೂ ಬರೆದಿಡಬೇಕಾಗಿತ್ತು. ಆಗಾಗ್ಗೆ ಬಂದು ಲೆಕ್ಕ ತಪಾಸಣೆ ಮಾಡುತ್ತಿದ್ದರು. ಶಿಲ್ಕು ಸರಿ ಇದೆಯೇ ಎಂದು ಪರಿಶೀಲಿಸಿ ಸಹಿ ಮಾಡಿ ಮುಂದಿನ ಖರ್ಚಿಗೆ ಬೇಕಾದ ಹಣವನ್ನು ಕೊಟ್ಟು ನಮ್ಮ ಸಹಿಯನ್ನೂ ಪಡೆಯುತ್ತಿದ್ದರು. ಯಾರಿಂದಲೂ ಸಾಲ ಮಾಡಬಾರದೆಂದೂ, ಯಾರಿಗೂ ಸಾಲ ಕೊಡಬಾರದೆಂದೂ ಕಿವಿಮಾತು ಹೇಳಿದ್ದರು. ಆದರೂ ಒಮ್ಮೆ ಗೆಳೆಯನೊಬ್ಬನಿಗೆ ಸ್ನೇಹವಿಶ್ವಾಸದಲ್ಲಿ ಅನಿವಾರ್ಯವಾಗಿ ಕೊಡಬೇಕಾಗಿ ಬಂತು. ಊರಿನಿಂದ ಎಂ.ಓ. ಬಂದ ತಕ್ಷಣವೇ ಕೊಡುವುದಾಗಿ ಹೇಳಿ ಆತ ನಮ್ಮಿಂದ ಪಡೆದಿದ್ದ. ಅನಿರೀಕ್ಷಿತವಾಗಿ ಬಂದ ನಮ್ಮ ಪೂರ್ವಾಶ್ರಮದ ತಂದೆ ಲೆಕ್ಕ ತಪಾಸಣೆ ಮಾಡಿದಾಗ ಶಿಲ್ಕಿನಲ್ಲಿ ಎಂಟಾಣೆ ಕಡಿಮೆ ಬಂದಿತು. ಸ್ನೇಹಿತನಿಗೆ ಸಾಲವಾಗಿ ಕೊಟ್ಟ ವಿಷಯ ತಿಳಿದು ರೌದ್ರಾವತಾರ ತಾಳಿ ಕಪಾಳಮೋಕ್ಷ ಮಾಡಿದರು. ಗೆಳೆಯನ ಕಷ್ಟಕ್ಕೆ ಮರುಗಿ ಸಹಾಯ ಮಾಡಬಾರದೇ? ಎಂದು ಕೇಳುವ ಧೈರ್ಯ ಆಗಲಿಲ್ಲ. ಸಾಲ ಬೇರೆ ಸಹಾಯ ಬೇರೆ ಎಂಬ ಅರಿವು ಆಗ ನಮಗೆ ಅಷ್ಟಾಗಿ ಇರಲಿಲ್ಲ. 

ಈ ಘಟನೆಯ ಹಿನ್ನೆಲೆಯಲ್ಲಿ ನಮಗೆ ನೆನಪಾಗುತ್ತಿರುವುದು ಶೇಕ್ಸ್ ಪಿಯರನ "ಹ್ಯಾಮ್ಲೆಟ್" ನಾಟಕದ ಒಂದನೆಯ ಅಂಕದ ಮೂರನೆಯ ದೃಶ್ಯದಲ್ಲಿ ಬರುವ ಮಾತುಗಳು:

Neither a borrower nor a lender be; 
For loan oft loses both itself and friend!
ಯಾರಲ್ಲಿಯೂ ಸಾಲ ಮಾಡಬೇಡ 
ಯಾರಿಗೂ ಸಾಲ ಕೊಡಬೇಡ, ಕುಮಾರ 
ಸಾಲದಿಂದ ಹಣವನ್ನೂ ಕಳೆದುಕೊಳ್ಳುತ್ತೀಯಾ 
ಗೆಳೆಯನನ್ನೂ ಕಳೆದುಕೊಳ್ಳುತ್ತೀಯಾ!

ವಿದ್ಯಾರ್ಥಿಗಳು ತಮ್ಮ ಖರ್ಚಿನ ಮೇಲೆ ಹಿಡಿತ ಇಟ್ಟುಕೊಳ್ಳಲು ಇಂದಿನ ಪೋಷಕರು ಇಂತಹ ಎಚ್ಚರಿಕೆ ಕೊಡುವುದು ಅಗತ್ಯವಾಗಿದೆ. ಕೇವಲ ಖರ್ಚಿಗೆ ಹಣವನ್ನು ಧಾರಾಳವಾಗಿ ಕೊಟ್ಟರೆ ಸಾಲದು, ಅದರ ಉಪಯೋಗ ಹೇಗೆ ಆಗುತ್ತಿದೆ ಎಂದು ಪರಿಶೀಲಿಸಿ ಕಾಲಕಾಲಕ್ಕೆ ಮಕ್ಕಳಿಗೆ ಹಣದ ಮಹತ್ವ ತಿಳಿಸಿಕೊಡುವುದೂ ಸಹ ಶಿಕ್ಷಣದ ಭಾಗವೇ ಆಗಿರುತ್ತದೆ. ಇಂಥ ಆರ್ಥಿಕ ಶಿಸ್ತನ್ನು ಮಕ್ಕಳಿಗೆ ಕಲಿಸಿದರೆ ಮುಂದೆ ಅವರ ಜೀವನದಲ್ಲೂ ಅದು ಮುಂದುವರಿಯುತ್ತದೆ.

ನಾಟಕದಲ್ಲಿ ಬರುವ ಸನ್ನಿವೇಶ: ಲಿಯಾರ್ಟಿಸ್ ಎಂಬ ಯುವಕ ಫ್ರಾನ್ಸ್ ದೇಶದ ಸಾರ್ಬೋನ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನಕ್ಕಾಗಿ ಹೋಗಲು ಹಡಗನ್ನು ಹತ್ತುವ ಸಂದರ್ಭ. ಆತನ ತಂದೆಯಾದ ಪೊಲೊನಿಯಸ್ "ಇನ್ನೂ ಇಲ್ಲೇ ಇದ್ದೀಯಾ? ಸ್ವಲ್ಪವೂ ಬುದ್ದಿ ಬೇಡ ನಿನಗೆ. ಹಡಗು ಹೊರಡಲು ಸಿದ್ದವಾಗಿ ನಿಂತಿದೆ. ಲಂಗರಿನ ಮೇಲೆ ರಭಸವಾಗಿ ಗಾಳಿ ಬೀಸುತ್ತಿದೆ. ಹೊರಡು ಬೇಗ" ಎಂದು ಗದರಿಸುತ್ತಾನೆ. ಹಡಗು ಹತ್ತಿಸುವ ಪೂರ್ವದಲ್ಲಿ ತನ್ನ ಮಗನಿಗೆ dos and don"ts ಏನು ಮಾಡಬೇಕು, ಏನು ಮಾಡಬಾರದು ಎಂಬ ವಿಚಾರವಾಗಿ ಸುದೀರ್ಘವಾದ ಹಿತನುಡಿಗಳನ್ನು ಹೇಳುತ್ತಾನೆ. ಆ ಹಿತನುಡಿಗಳ ಆಯ್ದ ಪಾಠದ ನಮ್ಮ ಕನ್ನಡ ಭಾವಾನುವಾದ ಹೀಗಿದೆ: 

ಮನಸ್ಸಿಗೆ ಬಂದದ್ದೆಲ್ಲವೂ ನಾಲಗೆಯ ಮೇಲೆ ಬಾರದಿರಲಿ 
ಅಪ್ರಬುದ್ಧ ಆಲೋಚನೆಗಳು ಕ್ರಿಯೆಯಾಗಿ 
ರೂಪುಗೊಳ್ಳದಿರಲಿ.

ಎಲ್ಲರೊಂದಿಗೆ ಸ್ನೇಹ-ವಿಶ್ವಾಸದಿಂದಿರು 
ಯಾರೊಂದಿಗೂ ಒರಟಾಗಿ ವರ್ತಿಸಬೇಡ ಮಗನೇ!

ನಿಜವಾದ ಗೆಳೆಯರು ಯಾರೆಂದು ಸರಿಯಾಗಿ ಗುರುತಿಸಿಕೊ 
ಹಣಕ್ಕಾಗಿ ನಿನ್ನ ಹತ್ತಿರ ಸುಳಿಯುವವರನ್ನು ದೂರವಿಡು!

ಯಾರೊಂದಿಗೂ ಜಗಳಕ್ಕೆ ಇಳಿಯಬೇಡ ಮಗನೇ 
ಕಾಲುಕೆರೆದು ಜಗಳವಾಡಲು ಬರದಂತೆ ಎಚ್ಚರ ವಹಿಸು

ಎಲ್ಲರಿಗೂ ಕಿವಿಗೊಡು, ಕೆಲವರಿಗೆ ಮಾತ್ರ ದನಿಗೊಡು, 
ಯಾರು ಏನೇ ಹೇಳಿದರೂ ನಂಬಿ ಮೋಸಹೋಗಬೇಡ 
ವಿಚಾರ ಮಾಡಿ ನಿನ್ನ ಸ್ವಂತ ತೀರ್ಮಾನ ತೆಗೆದುಕೊ

ಮೋಜು ಮಸ್ತಿ ಮಾಡಲು ಹೋಗಬೇಡ 
ಹಾಸಿಗೆ ಇದ್ದಷ್ಟು ಕಾಲು ಚಾಚು ಕುಮಾರ! 
ಸಭ್ಯತೆಯಿಂದ ಕೂಡಿರಲಿ ನಿನ್ನ ಉಡುಪು 
ಆದರೆ ಪ್ರದರ್ಶನ ಪ್ರಿಯತೆ ಬೇಡ!

ಯಾರಲ್ಲಿಯೂ ಸಾಲ ಮಾಡಬೇಡ 
ಯಾರಿಗೂ ಸಾಲ ಕೊಡಬೇಡ, ಕುಮಾರ! 
ಸಾಲದಿಂದ ಹಣವನ್ನೂ ಕಳೆದುಕೊಳ್ಳುತ್ತೀಯಾ 
ಗೆಳೆಯನನ್ನೂ ಕಳೆದುಕೊಳ್ಳುತ್ತೀಯಾ, ಎಚ್ಚರ!

ಎಲ್ಲಕ್ಕೂ ಮಿಗಿಲಾಗಿ, 
ನಿನ್ನ ಆತ್ಮಕ್ಕೆ ಅಂಜಿ ನೀ ನಡೆದುಕೊ 
ಆಗ ನಿನ್ನಿಂದ ಯಾವ ತಪ್ಪೂ ಆಗದು 
ನೆನಪಿರಲಿ ಕುಮಾರ, ಹೋಗಿ ಬಾ 
ಚಿರಾಯುವಾಗು!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 7.6.2018