ಸಾಲ ಮನ್ನಾ ಮಾಡಿದ ಮಾತ್ರಕ್ಕೆ ಎಲ್ಲವೂ ಮುಗಿಯುವುದಿಲ್ಲ
ಹಿಂದಿನ ಸಲದ ಆಂಕಣದಲ್ಲಿ ಶೇಕ್ಸ್ಪಿಯರ್ನ ಹ್ಯಾಮ್ಲೆಟ್ನ ನಾಟಕದಲ್ಲಿ ಪೊಲೊನಿಯಸ್ನು ಪ್ಯಾರಿಸ್ಗೆ ಓದಲು ಹೊರಟು ನಿಂತಿದ್ದ ತನ್ನ ಮಗ ಲಿಯಾರ್ಟಿಸ್ಗೆ ಹೇಳುವ ಬುದ್ದಿವಾದವನ್ನು ಉಲ್ಲೇಖಿಸಿ ಮಕ್ಕಳಿಗೆ ಆರ್ಥಿಕ ಶಿಸ್ತನ್ನು ಕಲಿಸುವ ವಿಚಾರವಾಗಿ ಬರೆಯಲಾಗಿತ್ತು. “ಗೆಳೆಯರಿಗೆ ಸಾಲ ಕೊಡುವುದಾಗಲೀ, ಸಾಲ ತೆಗೆದುಕೊಳ್ಳುವುದಾಗಲಿ ಮಾಡಬೇಡ, ಹಾಗೆ ಮಾಡಿದರೆ ಹಣವನ್ನೂ ಕಳೆದುಕೊಳ್ಳುತ್ತೀಯಾ, ಗೆಳೆಯನನ್ನೂ ಕಳೆದುಕೊಳ್ಳುತ್ತೀಯಾ” ಎನ್ನುವ ವ್ಯವಹಾರ ಜ್ಞಾನದ ಅರಿವನ್ನು ಮೂಡಿಸುವ ಪ್ರಯತ್ನವನ್ನು ತಂದೆಯಾದ ಪೊಲೊನಿಯಸ್ ಮಾಡುತ್ತಾನೆ. ಇದು ಅವನ ಜೀವನಾನುಭವದ ಮಾತು. ಹಾಗಾದರೆ ಸಾಲ ಕೊಡುವುದು ತಪ್ಪೆ? ಸಾಲ ಮಾಡುವುದು ತಪ್ಪೆ? ಕಷ್ಟದಲ್ಲಿರುವ ಗೆಳೆಯನಿಗೆ ಸಾಲ ಕೊಟ್ಟು ನೆರವಾಗದಿದ್ದರೆ ಅದೆಂಥಾ ಗೆಳೆತನ! “A friend in need is a friend indeed!" ಎಂಬ ನುಡಿಗಟ್ಟು ಆಂಗ್ಲ ಬಾಷೆಯಲ್ಲಿದ್ದರೆ "ಆಪತ್ತಿಗಾದವನೇ ನಂಟ" ಎನ್ನುತ್ತದೆ ಕನ್ನಡದ ಗಾದೆ! ಆದರೆ ಸಾಲಕ್ಕೂ ಸಹಾಯಕ್ಕೂ ವ್ಯತ್ಯಾಸವಿದೆ. ನಮ್ಮ ಬಾಲ್ಯಜೀವನದ ಒಂದು ಘಟನೆಯನ್ನು ಉಲ್ಲೇಖಿಸಿ ಆ ವಯಸ್ಸಿನಲ್ಲಿ ಸಾಲ ಮತ್ತು ಸಹಾಯದ ಮಧ್ಯೆ ಇರುವ ವ್ಯತ್ಯಾಸದ ಅರಿವು ಅಷ್ಟಾಗಿ ಇರಲಿಲ್ಲವೆಂದು ಸೂಚ್ಯವಾಗಿ ಈ ಹಿಂದೆ ಬರೆಯಲಾಗಿದೆ.
ಸಹಾಯದ ರೂಪದಲ್ಲಿ ಕೊಟ್ಟ ಹಣವು ವಾಪಾಸು ಬರುತ್ತದೆ ಎಂದು ಯಾರೂ ನಿರೀಕ್ಷಿಸುವುದಿಲ್ಲ. ಆದರೆ ಸಾಲವಾಗಿ ಕೊಟ್ಟ ಹಣ ವಾಪಾಸು ಬರುತ್ತದೆ ಎಂಬ ನಿರೀಕ್ಷೆ ಇರುತ್ತದೆ. ಒಂದು ವೇಳೆ ಅದು ವಾಪಾಸು ಬರಲಿಲ್ಲವೆಂದರೆ ಮನಸ್ಸಿಗೆ ಕ್ಲೇಶವುಂಟಾಗುತ್ತದೆ. ಆ ಕ್ಲೇಶದ ಕಾರಣದಿಂದ ಮನಸ್ತಾಪವುಂಟಾಗುತ್ತದೆ. ಪರಿಣಾಮವಾಗಿ ಹಣವೂ ಹೋಗುತ್ತದೆ, ಗೆಳೆತನವೂ ಉಳಿಯುವುದಿಲ್ಲ (Loan oft loses both itself and friend) ಎನ್ನುವ ಜೀವನಾನುಭವದ ಮಾತಿನಲ್ಲಿ ಯಾವ ತಪ್ಪು ಇಲ್ಲ. ಆದರೆ ಹಣದ ಲೇವಾದೇವಿಯೇ ಬೇರೆ ಗೆಳೆತನದಲ್ಲಿ ಕೈಗಡವಾಗಿ ಕೊಡುವುದೇ ಬೇರೆ. ಲೇವಾದೇವಿಯಲ್ಲಿ ಬಡ್ಡಿಯ ಲೆಕ್ಕಾಚಾರವಿರುತ್ತದೆ. ಹಣ ಕೊಟ್ಟು ಹಣ ಸಂಪಾದನೆ ಮಾಡುವ ವ್ಯಾಪಾರೀ ಮನೋಭಾವ ಇರುತ್ತದೆ. ಆದರೆ ಗೆಳೆಯನಿಗೆ ಕೈಗಡವಾಗಿ ಹಣವನ್ನು ಕೊಡುವಾಗ ಹಣ ಸಂಪಾದನೆಯ ಗುರಿ ಇರುವುದಿಲ್ಲ; ಸ್ನೇಹ-ವಿಶ್ವಾಸಗಳ ಆತ್ಮೀಯತೆ ಇರುತ್ತದೆ. ಗೆಳೆಯರಿಗೆ ಸಾಲವಾಗಿ ಅಥವಾ ಕೈಗಡವಾಗಿ ಕೊಟ್ಟ ಹಣ ವಾಪಾಸು ಬರುತ್ತದೆ ಎಂಬ ನಿರೀಕ್ಷೆ ಇದ್ದರೂ ಅದು ಲೇವಾದೇವಿಯಲ್ಲ. ಅದು ಧರ್ಮಾರ್ಥ ಕೊಟ್ಟ ಹಣವಲ್ಲದಿದ್ದರೂ ತಾತ್ಕಾಲಿಕ ಸಹಾಯ ಎಂದು ಬೇಕಾದರೆ ಭಾವಿಸಬಹುದು; ಅದು ಆತ್ಮೀಯತೆಯಲ್ಲಿ ಮಾಡುವ ನೆರವಷ್ಟೆ!
ಈ ಸಂದರ್ಭದಲ್ಲಿ ನೆನಪಾಗುವ ಬಸವಣ್ಣನವರ ಒಂದು ವಚನ ಹೀಗಿದೆ:
ಹಡೆದೊಡವೆ ವಸ್ತುವನು ಮೃಡಭಕ್ತರಿಗಲ್ಲದೆ
ಕಡಬಡ್ಡಿಯ ಕೊಡಲಾಗದು
ಬಂದರೊಂದು ಲೇಸು, ಬಾರದಿದ್ದರೆರಡು ಲೇಸು
ಅಲ್ಲಿದ್ದರೆಯೂ ಲಿಂಗಕ್ಕೆ ಬೋನ, ಇಲ್ಲಿದ್ದರೆಯೂ ಲಿಂಗಕ್ಕೆ
ಬೋನ
ಲಿಂಗದೊಡವೆ ಲಿಂಗಕ್ಕೆ ಸಾರಿತ್ತಾಗಿ
ಬಂದಿತ್ತೆಂಬ ಪರಿಣಾಮವಿಲ್ಲ, ಬಾರದೆಂಬ ದುಃಖವಿಲ್ಲ!
ಕೊಟ್ಟ ಸಾಲ ವಾಪಾಸು ಬರದಿದ್ದಾಗ ಮನಸ್ಸಿಗೆ ಕ್ಲೇಶವನ್ನುಂಟುಮಾಡಿಕೊಳ್ಳದೆ ಹೇಗೆ ಸಮಾಧಾನಪಟ್ಟುಕೊಳ್ಳಬೇಕೆಂದು ಬಸವಣ್ಣನವರು ತಾತ್ವಿಕ ದೃಷ್ಟಿಯಿಂದ ಹೇಳಿದ ಮಾತಿದು. ಸಾಲ ಕೊಡುವುದಾದರೆ ಶಿವಭಕ್ತರಿಗೆ ಮಾತ್ರ ಕೊಡಬೇಕು ಎನ್ನುತ್ತಾರೆ. ಅಂದರೆ ಮತೀಯ ದೃಷ್ಟಿಯಿಂದ ಅಲ್ಲ. "ಅವನು ಬೇರೆಯಲ್ಲ, ನಾನು ಬೇರೆಯಲ್ಲ" ಎಂಬ ಆತ್ಮೀಯ ಭಾವ ಉಳ್ಳವರಿಗೆ ಮಾತ್ರ ಕೊಡಬೇಕು ಎಂದು ಇದರ ತಾತ್ಪರ್ಯ. ನೆರವು ಪಡೆದ ಗೆಳೆಯ ಆತ್ಮೀಯನಾಗಿದ್ದರೆ ಅವನು ಹಣವನ್ನು ಹಿಂದಿರುಗಿಸಲು ಎಲ್ಲ ಪ್ರಯತ್ನವನ್ನೂ ಮಾಡುತ್ತಾನೆ. ಒಂದು ವೇಳೆ ವಾಪಾಸು ಬರಲಿಲ್ಲವೆಂದರೆ ಅವನು ಅಸಹಾಯಕನಾಗಿದ್ದಾನೆಂದೇ ಅರ್ಥ. ವ್ಯಕ್ತಿ ತನಗಾಗಿ ತಾನು ಸ್ವಂತಕ್ಕೆ ಖರ್ಚು ಮಾಡಿದರೆ ಅದು ವಾಪಾಸು ಬರಲಿ ಎಂದು ಹೇಗೆ ನಿರೀಕ್ಷಿಸಲು ಬರುವುದಿಲ್ಲವೋ ಹಾಗೆಯೇ ತನ್ನ ಆತ್ಮೀಯನಿಗೆ ಕಷ್ಟದ ಸಂದರ್ಭದಲ್ಲಿ ಕೊಟ್ಟ ಹಣ ವಾಪಾಸು ಬರದಿದ್ದರೆ ಅದು ತನ್ನ ಕಷ್ಟಕ್ಕೆ ತಾನೇ ಮಾಡಿದ ಖರ್ಚೆಂದು ಪರಿಭಾವಿಸಬೇಕು. "ಅವನು ಬೇರೆಯಲ್ಲ, ನಾನು ಬೇರೆಯಲ್ಲ” ಎಂಬ ಭಾವ ಗಟ್ಟಿಗೊಂಡಿದ್ದಲ್ಲಿ ಮಾತ್ರ ಈ ಮನೋಧರ್ಮ ಸಾಧ್ಯ. ಆಗ ಹಣ ಹಿಂತಿರುಗಿ ಬಾರದಿದ್ದರೆ “ನಿನ್ನನ್ನು ನಂಬಿ ನಾನು ಕೆಟ್ಟೆ" ಎಂಬ ಭಾವನೆ ಮೂಡುವುದಿಲ್ಲ. ಮನಸ್ಸಿಗೆ ಕ್ಲೇಶವುಂಟಾಗುವುದಿಲ್ಲ; ಮನಸ್ತಾಪವೂ ಆಗುವುದಿಲ್ಲ; ಗೆಳೆತನಕ್ಕೂ ಬಾಧಕ ಬರುವುದಿಲ್ಲ. ಕೊಟ್ಟ ಹಣ ವಾಪಾಸು ಬಂದರೂ ಸರಿ, ಬರದೇ ಇದ್ದರೂ ಸರಿ. "ಇಲ್ಲಿದ್ದರೆಯೂ ಲಿಂಗಕ್ಕೆ ಬೋನ, ಅಲ್ಲಿದ್ದರೆಯೂ ಲಿಂಗಕ್ಕೆ ಬೋನ!” ಅಂದರೆ ಅವನು ಉಂಡರೆ ತಾನು ಉಂಡಂತೆ, ತನ್ನ ಹತ್ತಿರ ಇದ್ದರೂ ದೇವರಿಗೆ ಅರ್ಪಣೆ, ಅವನ ಹತ್ತಿರ ಇದ್ದರೂ ದೇವರಿಗೆ ಅರ್ಪಣೆ. ಆಗ ಬರಲಿಲ್ಲವೆಂಬ ವ್ಯಥೆ ಇರುವುದಿಲ್ಲ. ಆದರೆ ವ್ಯಾವಹಾರಿಕ ಜೀವನದಲ್ಲಿ ಈ ವಚನದ ಆಶಯದಂತೆ ನಡೆದುಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಇದಕ್ಕೆ ಬಹುದೊಡ್ಡ ಆಧ್ಯಾತ್ಮಿಕ ಸಾಧನೆಯೇ ಬೇಕು.
ಬಡ್ಡಿ ವಿಚಾರದಲ್ಲಿ ಸಾಲ ಕೊಡುವವರ ಮನೋಧರ್ಮ ಹೇಗಿರಬೇಕೆಂದು ಬಸವಣ್ಣನವರು ಮೇಲಿನ ವಚನದಲ್ಲಿ ವಿವರಿಸಿದರೆ ಬಡ್ಡಿಗಾಗಿ ಸಾಲವನ್ನೇ ಕೊಡಬಾರದೆನ್ನುತ್ತದೆ ಇಸ್ಲಾಂ ಧರ್ಮ. ಇಸ್ಲಾ೦ ಧರ್ಮಗ್ರಂಥವಾದ ಕುರಾನ್ ಬಡ್ಡಿ ವ್ಯವಹಾರವನ್ನು ನಿಷೇಧಿಸುತ್ತದೆ. ಅಲ್ಲಿ ಸಾಲ ನೀಡಿದವರು ಸಾಲಗಾರನಿಂದ ಬಡ್ಡಿ ಪಡೆಯುವಂತಿಲ್ಲ. ಅರಬ್ ರಾಷ್ಟ್ರಗಳಲ್ಲಿ ಬ್ಯಾಂಕುಗಳೂ ಸಹ ಬಡ್ಡಿ ಪಡೆಯುವಂತಿಲ್ಲ. ಬಡ್ಡಿಯನ್ನು ಪಡೆಯದಿದ್ದರೆ ಬ್ಯಾಂಕುಗಳು ನಡೆಯುವುದಾದರೂ ಹೇಗೆ! ಅಲ್ಲಿನ ಬ್ಯಾಂಕುಗಳು ಅದಕ್ಕೆ ಬೇರೆ ದಾರಿಯನ್ನು ಕಂಡುಕೊಂಡಿವೆ. ಸಾಲ ಪಡೆದವರು ಬ್ಯಾಂಕನ್ನು ತಮ್ಮ ದುಡಿಮೆಯ ಪಾಲುದಾರನನ್ನಾಗಿ ಮಾಡಿಕೊಳ್ಳಬೇಕು. ಪಾಲುದಾರನಾದ ಬ್ಯಾಂಕಿಗೆ ಇಂತಿಷ್ಟು ಎಂದು ಲಾಭಾಂಶವನ್ನು ನೀಡಬೇಕು. ಹಾಗೆ ಬಂದ ಹಣವನ್ನು ಪಾಲುದಾರಿಕೆಯಿಂದ ಬಂದ ಲಾಭಾಂಶವೆಂದು ಬ್ಯಾಂಕುಗಳು ಜಮಾ ತೆಗೆದುಕೊಳ್ಳುತ್ತವೆ. ಇದೇ ಸೂತ್ರವನ್ನೇ ಜನಸಾಮಾನ್ಯರೂ ಅನುಸರಿಸುತ್ತಾರೆ. ಬಡ್ಡಿ ಇಲ್ಲ; ಲಾಭಾಂಶ ಕೊಡಬೇಕು! ಇದು ಒಂದು ರೀತಿಯಲ್ಲಿ "ಅಳಿಯ ಅಲ್ಲ, ಮಗಳ ಗಂಡ" ಎಂದು ಅನ್ನಿಸಿದರೂ ಇಲ್ಲಿ ಒಂದು ಧರ್ಮಸೂಕ್ಷ್ಮವಿದೆ. ಉದ್ದಿಮೆಯಲ್ಲಿ ಹೆಚ್ಚಿಗೆ ಲಾಭಾಂಶ ಬಂದರೆ ಬ್ಯಾಂಕಿಗೆ ಲಾಭವಾಗುತ್ತದೆ. ಒಂದು ವೇಳೆ ನಷ್ಟವಾದರೆ ಬ್ಯಾಂಕುಗಳಿಗೂ ನಷ್ಟವೇ!
ಸಾಲದ ಬಗ್ಗೆ ಅನೇಕ ಗಾದೆ ಮಾತುಗಳಿವೆ: "ಕೊಟ್ಟವನು ಕೋಡಂಗಿ ಇಸಕೊಂಡವನು ಈರಭದ್ರ" ಎಂಬುದೊಂದು ಗಾದೆ. ಬಡ್ಡಿ ವ್ಯವಹಾರವನ್ನು ಒಂದು ಉದ್ದಿಮೆಯಾಗಿ ಮಾಡಿಕೊಂಡವರಿಗೆ ಎಚ್ಚರಿಕೆ ನೀಡುವ ಗಾದೆ ಇದಾಗಿದೆ. ಹಾಗಯೇ “ಬೈದರೆ ಬಡ್ಡಿ ಹೋಯಿತು, ಒದ್ದರೆ ಅಸಲೇ ಹೋಯಿತು" ಎಂಬ ಗಾದೆ ಮಾತೂ ಸಹ ಇದನ್ನೇ ಧ್ವನಿಸುತ್ತದೆ. ಸಾಲದ ಬಲೆಯಲ್ಲಿ ಬಿದ್ದ ಮನುಷ್ಯನೇ ಆಗಲಿ ದೇಶವೇ ಆಗಲಿ ಎದ್ದು ನಿಲ್ಲುವುದು ಕಷ್ಟ. ಹಾಸಿಗೆ ಇದ್ದಷ್ಟು ಕಾಲು ಚಾಚುವವನು ನೆಮ್ಮದಿಯಿಂದ ಬದುಕಲು ಸಾಧ್ಯ. ಇಲ್ಲದಿದ್ದರೆ,
ಸಾಲವನು ಕೊಂಬಾಗ ಹಾಲೋಗರುಂಡಂತೆ
ಸಾಲಿಗನು ಬಂದು ಎಳೆವಾಗ ಕಿಬ್ಬದಿಯ
ಕೀಲು ಮುರಿದಂತೆ ಸರ್ವಜ್ಞ
ಸುಲಭವಾಗಿ ಸಾಲ ಸಿಗುತ್ತದೆಯೆಂದು ಸಾಲ ಮಾಡುವವರು ಸಾಲ ವಸೂಲಾತಿಗೆ ಬಂದ ಸಾಲಿಗನಿಂದ ಕಿಬ್ಬದಿಯ ಕೀಲು ಮುರಿಸಿಕೊಳ್ಳಬೇಕಾಗುತ್ತದೆ ಎಂದು ಸರ್ವಜ್ಞ ಎಚ್ಚರಿಸಿದರೆ ಇದಕ್ಕೆ ತದ್ವಿರುದ್ಧವಾದ ಚಿಂತನೆಯನ್ನು ಚಾರ್ವಾಕ ಮಾಡಿದ್ದಾನೆ. ಸಾಲ ಪಡೆಯುವವರನ್ನು ಚಿತಾವಣೆ ಮಾಡುವ ಅವನ ಮಾತಿನ ಧಾಟಿ ಹೀಗಿದೆ:
ಯಾವಜ್ಜೀವೇತ್ ಸುಖಂ ಜೀವೇತ್ ಋಣಂ ಕೃತ್ವಾ ಘೃತಂ
ಪಿಬೇತ್ ।
ಭಸ್ಮೀಭೂತಸ್ಯ ದೇಹಸ್ಯ ಪುನರಾಗಮನಂ ಕುತಃ? ||
(ಬದುಕಿರುವಷ್ಟು ಕಾಲ ಸುಖವಾಗಿ ಜೀವಿಸು
ಕಡ ತಂದಾದರೂ ತಿನ್ನು ತುಪ್ಪವನು
ಸತ್ತು ಸುಟ್ಟು ಬೂದಿಯಾದ ಮೇಲೆ
ಹುಟ್ಟಿ ಬರುವುದೇ ಮತ್ತೆ ನಿನ್ನ ಈ ದೇಹ?)
ಚಾರ್ವಾಕನ ಈ ಸಿಹಿ ಮಾತುಗಳಿಗೆ ಕಿವಿಗೊಡದೆ ಇನ್ನೊಬ್ಬರ ಸಾಲದ ಋಣದಲ್ಲಿ ಸಾಯಬಾರದು ಎಂಬುದೇ ಭಾರತೀಯರ ಮನೋಧರ್ಮ. ಆದರೂ ಸಾಲದ ಬಾಧೆಯಲ್ಲಿ ಈ ನಾಡಿನ ರೈತರು ನೇಣುಗಂಬಕ್ಕೆ ಏರುವಂತಾಗಿದೆ. ರೈತರ ಸಾಲವನ್ನು ಮನ್ನಾ ಮಾಡುವುದಾಗಿ ರಾಜಕೀಯ ಮುಖಂಡರು ನಿತ್ಯವೂ ಭರವಸೆಯನ್ನೇನೋ ಕೊಡುತ್ತಿದ್ದಾರೆ. ಅದು ಕಾರ್ಯರೂಪಕ್ಕೆ ಬರುವ ದಿನವನ್ನು ಈ ನಾಡಿನ ರೈತರು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಆದರೆ ಸಾಲ ಮನ್ನಾ ಮಾಡಿದ ಮಾತ್ರಕ್ಕೆ ಎಲ್ಲವೂ ಮುಗಿಯುವುದಿಲ್ಲ. ಮತ್ತೆ ರೈತರು ಸಾಲ ಮಾಡದೇ ಇರುವುದಿಲ್ಲ. ಅದಕ್ಕೆ ಕಾರಣಗಳೇನೆಂಬುದನ್ನು ಆಡಳಿತ ನಿರ್ವಹಣೆ ಮಾಡುವವರು ಗಮನಿಸಿ ಕಾರ್ಯತತ್ಪರರಾಗಬೇಕು. ಸಾಲ ಮನ್ನಾ ಮಾಡುವುದರ ಜೊತೆಗೆ ರೈತರು ಇನ್ನೆಂದೂ ಕೃಷಿಗಾಗಿ ಸಾಲ ಮಾಡದಂತೆ ಕೆರೆಗಳಿಗೆ ನೀರು ಮತ್ತು ವಿದ್ಯುತ್ ಪೂರೈಕೆ ಮಾಡಿದರೆ ಈ ನಾಡಿನ ನೇಗಿಲ ಯೋಗಿಯು ತನ್ನ ಭೂಮಿಯಲ್ಲಿ ಚಿನ್ನ ಬೆಳೆಯಬಲ್ಲನು. ಬೆಳೆದ ಬೆಳೆಗೆ ಯೋಗ್ಯ ಬೆಲೆಯನ್ನು ನಿಗದಿಪಡಿಸಿದರೆ ತನ್ನ ಸಾಲವನ್ನೇ ಏಕೆ ಸರಕಾರದ ಸಾಲವನ್ನೂ ತೀರಿಸಬಲ್ಲನು!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 21.6.2018