ಈ ಸೃಷ್ಟಿಯಲ್ಲಿ 'ಮನುಷ್ಯ ಜಾತಿ ತಾನೊಂದೇ ವಲಂ!'
ಋಗ್ವೇದದ ದಶಮ ಮಂಡಲದಲ್ಲಿ "ಸಹಸ್ರಶೀರ್ಷಾ ಪುರುಷಃ ಸಹಸ್ರಾಕ್ಷಃ ಸಹಸ್ರಪಾತ್" ಎಂದು ಆರಂಭಗೊಳ್ಳುವ 90 ನೆಯ ಸೂಕ್ತವೇ "ಪುರುಷಸೂಕ್ತ". ಈ ಬ್ರಹ್ಮಾಂಡದಲ್ಲಿರುವ ವಿಶ್ವಾತ್ಮನ ವರ್ಣನೆ ಇದರಲ್ಲಿದೆ. ಶಾಸ್ರೋಕ್ತವಾಗಿ ವೇದಾಧ್ಯಯನ ಮಾಡಿದ ಪುರೋಹಿತರ ಕಂಚಿನ ಕಂಠದಿಂದ ಉದಾತ್ತಾನುದಾತ್ತಸ್ವರಿತ ಸ್ವರಗಳ ಏರಿಳಿತಗಳಲ್ಲಿ ಕೇಳಿ ಬರುವ ಕರ್ಣಾನಂದಕರವಾದ ಈ ಸೂಕ್ತವನ್ನು ಆಳವಾಗಿ ಅಧ್ಯಯನ ಮಾಡಿ ವಿಶ್ಲೇಷಣೆ ನಡೆಸಿದರೆ ಇದರಲ್ಲಿರುವ 16 ಮಂತ್ರಗಳಲ್ಲಿ ಮೂರು ತೆರನಾದ ಅರ್ಥದ ಹೊಳಹುಗಳು ಗೋಚರಿಸುತ್ತವೆ: 1. ತಾತ್ವಿಕ ದರ್ಶನ, 2. ಪ್ರಾಕೃತಿಕ ದರ್ಶನ ಮತ್ತು 3. ಸಾಮಾಜಿಕ "ದರ್ಶನ. ಈ ಸೂಕ್ತದಲ್ಲಿ ಕಂಡುಬರುವ ತಾತ್ವಿಕ ದರ್ಶನಕ್ಕೆ ಜಗವ ನಿಕ್ಷೇಪಿಸಿದ ಕುಕ್ಷಿಯಲ್ಲಿ ಅಕ್ಷಯನಗಣಿತನು! ಸಾಸಿರ ತಲೆ, ಸಾಸಿರ ಕಣ್ಣು, ಸಾಸಿರ ಕೈ, ಸಾಸಿರ ಪಾದ ಸಾಸಿರ ಸನ್ನಿಹಿತ ನಮ್ಮ ಕೂಡಲಸಂಗಯ್ಯ!" ಎನ್ನುವ ಬಸವಣ್ಣನವರ ವಚನ ಭಾಷ್ಯ ಬರೆದಂತಿದೆ.
ಈ ಭೂಮಿಯ ಮೇಲೆ ಮನುಷ್ಯರ ದೈನಂದಿನ ಜೀವನದಲ್ಲಿ ಬಳಕೆಯಾಗುತ್ತಿರುವ ಕುದುರೆ, ಹಸು, ಆಡು, ಕುರಿ ಇತ್ಯಾದಿ ಸಾಕು ಪ್ರಾಣಿಗಳ ವರ್ಣನೆ, ಮನುಷ್ಯನಿಗೆ ವರ್ಷದುದ್ದಕ್ಕೂ ಚೇತೋಹಾರಿ ಅನುಭವವನ್ನು ನೀಡುವ ವಸಂತ, ಗ್ರೀಷ್ಮ, ಶರದ್ ಋತುಗಳ ವರ್ಣನೆ, ಕಣ್ಣೆವೆಗೆ ನಿಲುಕದ ವಿಶಾಲವಾದ ಹರಹು ಉಳ್ಳ ಅಂತರಿಕ್ಷದ ವರ್ಣನೆ, ಆಕಾಶದಲ್ಲಿ ಅನಾದಿ ಕಾಲದಿಂದಲೂ ಮನುಕುಲದ ಅಪರಾಧಗಳಿಗೆ ಖಾಯಂ ಸಾಕ್ಷಿದಾರರಾಗಿರುವ ಸೂರ್ಯ ಮತ್ತು ಚಂದ್ರರ ಉಲ್ಲೇಖ, ಬದುಕಿಗೆ ಆಸರೆಯಾದ ಗಾಳಿ, ಬೆಂಕಿ ಮತ್ತು ದಿಗ್ ದಿಗಂತಗಳ ಉಲ್ಲೇಖವುಳ್ಳ ಈ ಪುರುಷಸೂಕ್ತ ಎರಡನೆಯದಾದ "ಪ್ರಾಕೃತಿಕ ದರ್ಶನ"ವನ್ನು ಮಾಡಿಕೊಡುತ್ತದೆ.
ಇನ್ನು ಮೂರನೆಯದಾದ "ಸಾಮಾಜಿಕ ದರ್ಶನ"ವನ್ನು ಪುರುಷ ಸೂಕ್ತವು ಈ ಕೆಳಗಿನ ಸಾಲುಗಳಲ್ಲಿ ಮಾಡಿಕೊಡುತ್ತದೆ:
ಬ್ರಾಹ್ಮಣೋಸ್ಯ ಮುಖಮಾಸೀತ್ ಬಾಹೂ ರಾಜನ್ಯಃ ಕೃತಃ |
ಊರೂ ತದಸ್ಯ ಯಧ್ವೈಶ್ಯಃ ಪದ್ಬ್ಯಾಂ ಶೂದ್ರೋ ಅಜಾಯತ |
ಈ ಸೂಕ್ತದಲ್ಲಿ ಬರುವ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಶಬ್ದಗಳನ್ನು ಉಲ್ಲೇಖಿಸಿ ಕೆಲವರು ಇಲ್ಲಿ ಮೇಲು ಕೀಳುಗಳ ತಾರತಮ್ಯವಿದೆ ಎಂದು ವಾದಿಸುವುದುಂಟು. ಅವರ ಈ ತಪ್ಪು ಗ್ರಹಿಕೆಗೆ ಕಾರಣ ಸಮಕಾಲೀನ ಸಮಾಜದಲ್ಲಿ ಕಂಡುಬರುವ ಶ್ರೇಣೀಕೃತ ಜಾತಿಪದ್ಧತಿ. ಆದರೆ ವೇದೋಪನಿಷತ್ತುಗಳ ಕಾಲದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬುವುಗಳು ವರ್ಣಗಳಾಗಿದ್ದವೇ ಹೊರತು ಜಾತಿಗಳಾಗಿರಲಿಲ್ಲ. ವೇದಾಧ್ಯಯನ ಮಾಡುವ ಕ್ಷಮತೆ ಇದ್ದವನು ಬ್ರಾಹ್ಮಣನಾದರೆ, ಬಾಹುಬಲವುಳ್ಳವ ಕ್ಷತ್ರಿಯನಾಗುತ್ತಿದ್ದ. ವ್ಯಾಪಾರ ವಾಣಿಜ್ಯಗಳಲ್ಲಿ ಆಸಕ್ತಿಯಿದ್ದವ ವೈಶ್ಯನೆನಿಸಿದರೆ ಸೇವಾವೃತ್ತಿಗಳಲ್ಲಿ ತೊಡಗುವವ ಶೂದ್ರನಾಗುತ್ತಿದ್ದ. ಬ್ರಾಹ್ಮಣನ ಮಗ ಬ್ರಾಹ್ಮಣನೇ ಆಗಿರಬೇಕಾಗಿರಲಿಲ್ಲ. ಅವನು ಬಾಹುಬಲವುಳ್ಳವನಾಗಿದ್ದರೆ ಕ್ಷತ್ರಿಯನಾಗುತ್ತಿದ್ದ. ವ್ಯಾಪಾರ ಉದ್ದಿಮೆಯ ಜಾಣ್ಮೆಯುಳ್ಳವನಾಗಿದ್ದರೆ ವೈಶ್ಯನಾಗುತ್ತಿದ್ದ. ಸೇವಾಕಾರ್ಯಗಳಲ್ಲಿ ತೊಡಗಿದ್ದ ಶೂದ್ರನ ಮಗ ಅಧ್ಯಯನಶೀಲನಾಗಿದ್ದರೆ ಬ್ರಾಹ್ಮಣನಾಗುತ್ತಿದ್ದ. ಇದಕ್ಕೆ ಛಾಂದೋಗ್ಯ ಉಪನಿಷತ್ತಿನಲ್ಲಿ ಬರುವ "ಸತ್ಯಕಾಮ ಜಾಬಾಲ"ನ ಪ್ರಕರಣವೇ ಸಾಕ್ಷಿ. ಗುರುವು ನಿನ್ನ ತಂದೆ ಯಾರೆಂದು ಕೇಳಿದಾಗ ಅವರಿವರ ಮನೆಯಲ್ಲಿ ಪರಿಚಾರಿಕೆಯಾಗಿದ್ದ ತನ್ನ ತಾಯಿಗೂ ನನ್ನ ತಂದೆ ಯಾರೆಂದು ಗೊತ್ತಿಲ್ಲವೆಂದು ಮುಚ್ಚುಮರೆಯಿಲ್ಲದೆ ಬಾಲಕ ಜಾಬಾಲ ಹೇಳುತ್ತಾನೆ. ಅವನ ಸತ್ಯನಿಷ್ಠೆಗೆ ಮನಸೋತ ಗುರುವು ಅವನನ್ನು "ಸತ್ಯಕಾಮ" ಎಂದು ಹೊಗಳಿ ತನ್ನ ಶಿಷ್ಯನನ್ನಾಗಿ ಸ್ವೀಕರಿಸುತ್ತಾನೆ. ವೇದಾಧ್ಯಯನಕ್ಕೆ ಅನುವು ಮಾಡಿಕೊಡುತ್ತಾನೆ (ಸಮಿಧಂ ಸೌಮ್ಯ ಆಹರ. ಉಪ ತ್ವಾ ನೇಷ್ಯೇ. ನ ಸತ್ಯಾದ್ ಅಗಾ ಇತಿ - ಛಾಂದೋಗ್ಯ 4.4.5). ಆದಕಾರಣ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ಈ ನಾಲ್ಕು ವರ್ಣಗಳು ವ್ಯಕ್ತಿಯ ಕ್ಷಮತೆ, ಪ್ರವೃತ್ತಿ, ಗುಣಕರ್ಮಾನುಸಾರ ನಿಗದಿಯಾಗುತ್ತಿದ್ದ ಸಾಮಾಜಿಕ ವರ್ಗಗಳಾಗಿದ್ದವೇ ಹೊರತು ಹುಟ್ಟಿನಿಂದ ನಿರ್ಧರಿಸಿದ ವಿಭಾಗಗಳಾಗಿರಲಿಲ್ಲ. ಬ್ರಾಹ್ಮಣನ ಮನೆಯಲ್ಲಿ ವೇದಾಧ್ಯಯನದ ಪರಿಸರವಿದ್ದ ಕಾರಣ ಆತನ ಮಗನೂ ಬ್ರಾಹ್ಮಣನಾಗುವ ಸಂಭವವೇ ಹೆಚ್ಚು ಇತ್ತು. ಅದರಂತೆ ಕ್ಷತ್ರಿಯ, ವೈಶ್ಯ ಮತ್ತು ಶೂದ್ರರ ಮಕ್ಕಳು. ಅಂದರೆ ಈ ನಾಲ್ಕು ವರ್ಣಗಳು ವ್ಯಕ್ತಿಯ ಕ್ಷಮತೆ, ಪ್ರವತ್ತಿ, ಗುಣ ಕರ್ಮಾನುಸಾರ ನಿಗದಿಯಾಗುತ್ತಿದ್ದ ಸಾಮಾಜಿಕ ವರ್ಗಗಳೇ ಹೊರತು ಹುಟ್ಟಿನಿಂದ ನಿರ್ಧರಿಸಿದ ವಿಭಾಗಗಳಾಗಿರಲಿಲ್ಲ.
ವಿಶ್ವಾತ್ಮನ ಮುಖದಿಂದ ಬ್ರಾಹ್ಮಣ, ಬಾಹುಗಳಿಂದ ಕ್ಷತ್ರಿಯ, ತೊಡೆಗಳಿಂದ ವೈಶ್ಯ ಮತ್ತು ಪಾದಗಳಿಂದ ಶೂದ್ರ ಹುಟ್ಟಿದ ಎಂದು ಪುರುಷಸೂಕ್ತ ಹೇಳಿರುವುದರಲ್ಲಿ ಮೇಲುಕೀಳುಗಳನ್ನು ಕಾಣುವುದು ಸರಿಯಲ್ಲ. ಬುದ್ದಿಯು ತಲೆಯೊಳಗಿರುವ ಮೆದುಳಿನಲ್ಲಿ ಇರುತ್ತದೆಯೇ ಹೊರತು ಪಾದಗಳಲ್ಲಿ ಇರಲು ಸಾಧ್ಯವಿಲ್ಲ. ಹಾಗೆಂದ ಮಾತ್ರಕ್ಕೆ ತಲೆ ಶ್ರೇಷ್ಠ, ಪಾದ ಕನಿಷ್ಠ ಎಂದು ಭಾವಿಸಬೇಕಾಗಿಲ್ಲ. ಭಾರತೀಯ ಸಂಸ್ಕೃತಿಯಲ್ಲಿ ಪಾದಗಳನ್ನು ಮುಟ್ಟಿ ನಮಸ್ಕರಿಸುತ್ತಾರೆಯೇ ಹೊರತು ತಲೆಗೆ ಯಾರೂ ನಮಸ್ಕರಿಸುವುದಿಲ್ಲ. ತಲೆ ಶ್ರೇಷ್ಠ ಎನ್ನುವುದಾದರೆ ತಲೆಗೇಕೆ ನಮಸ್ಕಾರ ಮಾಡುವುದಿಲ್ಲ? ಪಾದಗಳು ಕನಿಷ್ಠ ಎನ್ನುವುದಾದರೆ ಅವುಗಳಿಗೇಕೆ ನಮಸ್ಕಾರ ಮಾಡುತ್ತಾರೆ?
ಆದರೆ ದುರಂತವೆಂದರೆ ಈ ವರ್ಣಗಳು ಕ್ರಮೇಣ ಜಾತಿಗಳಾಗಿ ರೂಪುಗೊಂಡವು. ಬಾಹ್ಮಣನ ಮಗ ಬ್ರಾಹ್ಮಣನಾಗುತ್ತಾನೆಂಬ ನಿರೀಕ್ಷೆ ಹುಸಿಯಾಯಿತು. ಪಂಡಿತ ಪುತ್ರನಿಗೆ ಋಗ್ವೇದದ ಒಂದೂ ಋಕ್ಕು ಬಾರದಿದ್ದರೂ ಅವನೂ ಚತುರ್ವೇದಿ ಎನಿಸಿಕೊಳ್ಳತೊಡಗಿದ! ಹೀಗಾಗಿ ಹುಟ್ಟಿನ ಆಧಾರದ ಮೇಲೆ ಒಂದು ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆ ಕಾಣಿಸಿಕೊಂಡಿತು. ಅಲ್ಲಿಂದ ಆರಂಭವಾಯಿತು ಮೇಲು, ಕೀಳು! ಇದೇ ದೇಶದ ಸಕಲ ದುರಂತಗಳ ಹೇತು! ಹಾಗೆ ನೋಡಿದರೆ ಗೋತ್ರ ಪುರುಷರಾದ ಪ್ರಾಚೀನ ಋಷಿಮುನಿಗಳೆಲ್ಲರೂ ಆಧುನಿಕ ಪರಿಭಾಷೆಯಲ್ಲಿ ಹೇಳುವುದಾದರೆ ದಲಿತ ವರ್ಗಕ್ಕೆ ಸೇರಿದವರು. ಬಸವಣ್ಣನವರ ಈ ಮುಂದಿನ ವಚನವನ್ನು ಗಮನಿಸಿ:
ವ್ಯಾಸ ಬೋಯಿತಿಯ ಮಗ
ಮಾರ್ಕಂಡೇಯ ಮಾತಂಗಿಯ ಮಗ
ಮಂಡೋದರಿ ಕಪ್ಪೆಯ ಮಗಳು
ಕುಲವನರಸದಿರಿಂ ಭೋ! ಕುಲದಿಂದ ಮುನ್ನೇನಾದಿರಿಂ ಭೋ!
ಸಾಕ್ಷಾತ್ ಅಗಸ್ತ್ಯ ಕಬ್ಬಿಲ, ದುರ್ವಾಸ ಮುಚ್ಚಿಗ, ಕಶ್ಯಪ ಕಮ್ಮಾರ
ಕೌಂಡಿನ್ಯನೆಂಬ ಋಷಿ ಮೂರು ಭುವನವರಿಯೆ
ನಾವಿದ ಕಾಣಿಂಭೋ!
ಋಷಿಮೂಲ ಮತ್ತು ನದಿಮೂಲವನ್ನು ನೋಡಬಾರದು ಎಂಬ ನಾಣ್ಣುಡಿ ಬಂದಿರುವುದು ಇದೇ ಕಾರಣಕ್ಕೇ! ಋಷಿ ಮೂಲವನ್ನು ಹುಡುಕುತ್ತಾ ಹೊರಟರೆ ಮನಸ್ಸು ಪೂರ್ವಾಗ್ರಹಕ್ಕೆ ಒಳಗಾಗುತ್ತದೆ! ವ್ಯಕ್ತಿಯ ವ್ಯಕ್ತಿತ್ವ, ಗುಣಶೀಲಗಳಿಗೆ ಅನುಗುಣವಾಗಿ ಗುರುತಿಸುವ ಸಾಮಾಜಿಕ ಸನ್ನಿವೇಶ ಇರುವವರೆಗೆ ಎಲ್ಲವೂ ಚೆನ್ನಾಗಿತ್ತು. ಆದರೆ ಹುಟ್ಟಿನ ಆಧಾರದ ಮೇಲೆ ವ್ಯಕ್ತಿಯ ಸ್ಥಾನಮಾನವನ್ನು ನಿರ್ಧರಿಸುವ ಸಾಮಾಜಿಕ ಸನ್ನಿವೇಶ ರೂಪುಗೊಂಡಾಗ ಧರ್ಮವು ಜಾತಿಗಳಾಗಿ, ಜಾತಿಗಳು ಉಪಜಾತಿಗಳಾಗಿ, ನಾನಾ ಪಂಗಡಗಳಾಗಿ ಅವನತಿಗೊಂಡು ಎಲ್ಲ ಸಾಮಾಜಿಕ ವಿಷಮತೆಗಳು ತಲೆದೋರಿದವು!
ಹೀಗೆ ಧರ್ಮವು ಜಾತಿ, ಉಪಜಾತಿಗಳಾಗಿ ಅವನತಿಗೊಂಡರೂ ಸಹ ಸಮಾಜಶಾಸ್ತ್ರಜ್ಞರು ಈ ಜಾತಿ-ಉಪಜಾತಿಗಳಲ್ಲೂ ಒಂದು ವಿಶೇಷ ಧನಾತ್ಮಕ ಗುಣವನ್ನು ಕಾಣುತ್ತಾರೆ. ಮನುಷ್ಯ ಸ್ವಭಾವತಃ ಸ್ವಾರ್ಥಿ; ಎಲ್ಲವೂ ತನಗೇ ಬೇಕು, ತನ್ನ ಮಡದಿ ಮಕ್ಕಳಿಗೇ ಬೇಕು ಎಂಬ ಸ್ವಭಾವದವನು. ಜಾತಿಯ ಅಭಿಮಾನದ ಕಾರಣಕ್ಕೆ ಅವನು ತನ್ನ ಈ ಸೀಮಿತ ಹಂಬಲವನ್ನು ತೊರೆದು ತನ್ನ ಜಾತಿಯ ಜನರಿಗಾದರೂ ಒಳಿತನ್ನು ಮಾಡಲು ಮುಂದಾಗುತ್ತಾನೆ. ತನ್ನ ಜಾತಿಯ ಜನರಿಗಾಗಿ ತ್ಯಾಗಕ್ಕೆ, ದಾನ-ಧರ್ಮಕ್ಕೆ ಮುಂದಾಗುತ್ತಾನೆ. "ತಾನು ತನ್ನ ಕುಟುಂಬ" ಎಂಬ ಸ್ವಾರ್ಥಪೂರಿತ ವರ್ತುಲದಿಂದ ಅವನು ಬೇರೆಯವರ (ಅವರು ತನ್ನ ಜಾತಿಗೆ ಸೇರಿದ್ದರೆ!) ಒಳಿತಿನ ಬಗೆಗೆ ಚಿಂತಿಸುತ್ತಾನೆ. ಆದ್ದರಿಂದ ಜಾತಿಯೂ ಸಹ ವ್ಯಕ್ತಿಯ ಸೀಮಿತ ವರ್ತುಲವನ್ನು ವಿಸ್ತರಿಸುತ್ತದೆ ಎಂಬುದು ಅವರ ಅಂಬೋಣ!
ಸಮಕಾಲೀನ ಸಾಮಾಜಿಕ ಸಂದರ್ಭದಲ್ಲಿಯೂ ವ್ಯಕ್ತಿಯು ಕೈಗೊಳ್ಳುವ ಉದ್ಯೋಗದಿಂದ ತರತಮ ಭಾವಗಳು ಉಂಟಾಗಿರುವುದನ್ನು ಗಮನಿಸಬಹುದು. ಇಂಜಿನಿಯರಿಂಗ್ ಮತ್ತು ವೈದ್ಯಕೀಯ ವೃತ್ತಿಯವರ ಬಗೆಗೆ ಸಮಾಜದಲ್ಲಿ ವಿಶೇಷ ಸ್ಥಾನಮಾನವಿದೆ. ಇಂಜಿನಿಯರುಗಳಲ್ಲೂ ಸಹ ತರತಮ ಭಾವವಿದೆ. ಕನ್ಯಾ ಪಿತೃಗಳ ಆದ್ಯತೆ ಸಾಫ್ಟ್‌ವೇರ್ ಗಂಡುಗಳೇ ಹೊರತು ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಇಂಜಿನಿಯರುಗಳಲ್ಲ! ಅದಕ್ಕೆ ಕಾರಣ ಅವರು ಗಳಿಸುವ ಕಾಂಚಾಣದ ಗಮ್ಮತ್ತು ಮತ್ತು ಅಮೆರಿಕೆಯಲ್ಲಿ ಅವರಿಗೆ ಇರುವ ವಿಪರೀತ ಬೇಡಿಕೆ. ವ್ಯಕ್ತಿಯ ಆರ್ಥಿಕ ಬೌದ್ಧಿಕ ಕ್ಷಮತೆ ಮತ್ತು ಅಧಿಕಾರಗಳಿಗನುಸಾರವಾಗಿ ಸಾಮಾಜಿಕ ಸ್ತರಗಳು ರೂಪುಗೊಳ್ಳುತ್ತವೆ. ವೇದೋಪನಿಷತ್ತುಗಳ ಕಾಲದ ಅನಂತರ ಸ್ಮೃತಿ ಪುರಾಣಗಳ ಕಾಲಘಟ್ಟದಲ್ಲಿ ಇದೇ ರೀತಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ವರ್ಗಗಳು ಜಾತಿಗಳಾಗಿ ಸಾಮಾಜಿಕ ಸ್ತರಗಳಾಗಿ ರೂಪುಗೊಂಡಿವೆ. ಯಾವುದೇ ದೇಶ ಕಾಲದಲ್ಲಿಯೂ ಇಂತಹ ಸಾಮಾಜಿಕ ಸ್ತರಗಳು ಸಾಮಾನ್ಯವಾಗಿ ಇದ್ದೇ ಇರುತ್ತವೆ.
ನಮ್ಮ ದೇಶದಲ್ಲಿ ಜಾತಿಯಿಲ್ಲದ ಮನುಷ್ಯನೇ ಇಲ್ಲವೆನ್ನಬಹುದು. ಜಾತಿ ವಿನಾಶಕ್ಕೆ ಬಸವಾದಿ ಶರಣರು ಶ್ರಮಿಸಿದ್ದು ಇತಿಹಾಸ. ಆದರೆ ಅವರ ಹೋರಾಟವೂ ಕ್ರಮೇಣ ಒಂದು ಜಾತಿಯಾಗಿ, ನಾನಾ ಉಪಜಾತಿಗಳಾಗಿ ವಿಘಟನೆಗೊಂಡಿರುವುದು ಸುಳ್ಳಲ್ಲ. ಜಾತಿಭೂತವನ್ನು ಹೊಡೆದೋಡಿಸಲು ಯಾರೇ ಶ್ರಮಿಸಿದರೂ “ಹೋದೆಯಾ ಪಿಶಾಚಿ ಅಂದರೆ ಬಂದೆ ಗವಾಕ್ಷೀಲಿ!" ಎಂಬಂತೆ ಅದು ಭಾರತೀಯ ಜನಜೀವನದಲ್ಲಿ ಪುನಾ ಪುನಾ ವಕ್ಕರಿಸಿಕೊಂಡಿರುವುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ.
ನಮ್ಮ ದೇಶದ ಎಲ್ಲ ಮಠ ಮಂದಿರಗಳೂ ಜಾತಿಗಳ ಆಧಾರದ ಮೇಲೆ ನಿರ್ಮಾಣಗೊಂಡಿವೆ. ಜಾತಿಗಳ ನಿರ್ಮೂಲನೆ ಈ ದೇಶದಲ್ಲಿ ಎಂದೂ ಸಾಧ್ಯವಿಲ್ಲ. ಯಾವುದೇ ಮಠದವರು ತಮ್ಮ ಮಠಕ್ಕೆ ಜಾತಿ ಇಲ್ಲ ಎಂದು ಹೇಳಿಕೊಂಡರೆ ಅದು ವಾಸ್ತವ ಸಂಗತಿಯಲ್ಲ. ತಮ್ಮದು ಒಂದು ಜಾತಿಯ ಮಠ ಎಂದು ಹೇಳಿಕೊಳ್ಳಲು ಯಾರೂ ನಾಚಿಕೆ ಪಟ್ಟುಕೊಳ್ಳಬೇಕಾಗಿಲ್ಲ. ಅದು ಕೀಳರಿಮೆಯೂ ಆಗಬಾರದು.
ಸ್ವಾಮಿಗಳಾದವರು ಮಠದ ಅಧಿಪತಿಗಳಾದರೂ ಮಠ ಅವರ ಸ್ವಂತ ಆಸ್ತಿಯಲ್ಲ. ಅದು ಆಯಾಯ ಮಠದ ಶಿಷ್ಯರಿಗೆ ಸೇರಿದ್ದು. ಶಿಷ್ಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಯಾವ ಮಾತನ್ನೂ ಗುರುಗಳಾದವರು ಆಡಬಾರದು. “ಗುರುವಿಗೆ ಅಂಜಿ ಶಿಷ್ಯರೂ, ಶಿಷ್ಯರಿಗೆ ಅಂಜಿ ಗುರುವೂ ನಡೆದುಕೊಳ್ಳಬೇಕು" ಎಂಬುದು ನಮ್ಮ ಗುರುವರ್ಯರ ಆಣತಿ. "ಮುಂಡೇ ಮುಂಡೇ ಮತಿರ್ಭಿನ್ನಾ" ಎನ್ನುವಂತೆ ವೈಚಾರಿಕ ಭಿನ್ನತೆ ಇರುವುದು ಸಹಜ. ಒಬ್ಬರು ಆಡಿದ ಮಾತುಗಳನ್ನು ಮತ್ತೊಬ್ಬರು ಯಥಾವತ್ತಾಗಿ ಹೇಳುತ್ತಾರೆಂದು ನಂಬುವುದು ಕಷ್ಟ. ಹೇಳಿಕೆ ಮಾತುಗಳಿಗೆ ಕಿವಿಸೋತು ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಪ್ರತಿಕ್ರಿಯಿಸುವುದು ಅಪಾಯಕಾರಿ. ಈ ದೇಶದಲ್ಲಿ ವಾಕ್ ಸ್ವಾತಂತ್ರ್ಯವಿದೆಯೆಂದು ವೈಚಾರಿಕತೆ ಮೆರೆಯಲು ಹೋಗಿ ವಿವಾದಾಸ್ಪದ ಬಹಿರಂಗ ಹೇಳಿಕೆಗಳಿಂದ ಸಾಮಾಜಿಕ ಸಾಮರಸ್ಯವನ್ನು ಕದಡಬಾರದು.
ನಮ್ಮ ಮಠವೂ ಸೇರಿದಂತೆ ಎಲ್ಲ ಮಠಗಳ ಅಡಿಪಾಯವೇ ಜಾತಿ, ಜಾತಿಯ ಆಧಾರದ ಮೇಲೆ ಮಠಗಳು ಆರಂಭವಾಗಿದ್ದರೂ ಆ ಸೀಮಿತ ಚೌಕಟ್ಟನ್ನು ಮೀರಿ ಜಾತ್ಯತೀತವಾಗಿ ಎಲ್ಲ ಸಮಾಜದವರ ಒಳಿತನ್ನು ಮಾಡಲು ಸಾಧ್ಯವಿದೆ. ಈ ವಿಷಯದಲ್ಲಿ ನಮ್ಮ ಮಠಕ್ಕೆ ಮೇಲುಪಂಕ್ತಿ ಹಾಕಿಕೊಟ್ಟವರೆಂದರೆ ಮೊನ್ನೆಯ ದಿನವಷ್ಟೇ 27 ನೆಯ ಶ್ರದ್ಧಾಂಜಲಿಯನ್ನು ಆಚರಿಸಲಾದ ನಮ್ಮ ಪರಮಾರಾಧ್ಯ ಗುರುಗಳಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು. ಜಾತಿ ಮತ ಭೇದವಿಲ್ಲದೆ ತುಳಿತಕ್ಕೆ ಒಳಗಾಗಿದ್ದ ಎಲ್ಲ ವರ್ಗದ ಗ್ರಾಮೀಣ ಮಕ್ಕಳನ್ನು ಸ್ವಾತಂತ್ರ್ಯ ಪೂರ್ವದಲ್ಲಿಯೇ ಶೈಕ್ಷಣಿಕವಾಗಿ ಮೇಲೆತ್ತಲು ಅವರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಬಾಯಿಯೇ ಇಲ್ಲದ ಶಿಷ್ಯರಿಗೆ ಬಾಯನ್ನು ನೀಡಿದವರು ನಮ್ಮ ಗುರುವರ್ಯರು. ಕೀಳರಿಮೆಯಿಂದ ನರಳುತ್ತಿದ್ದ ಶಿಷ್ಯರಲ್ಲಿ ವಿಶ್ವಾಸವನ್ನು ತುಂಬಿದವರು. ಅವರ ಜಾತ್ಯತೀತ ದೃಷ್ಟಿಕೋನವನ್ನು ಕನ್ನಡನಾಡು ಮರೆಯುವಂತೆಯೇ ಇಲ್ಲ. ನಮ್ಮ ಮಠದ ಶಿಷ್ಯರಾದ ಅಂತಾರಾಷ್ಟ್ರೀಯ ಖ್ಯಾತ ಸಮಾಜಶಾಸ್ತ್ರಜ್ಞ ಡಾ. ಹಿರೇಮಲ್ಲೂರ ಈಶ್ವರನ್ ಅವರು ಹಾಲೆಂಡ್ ದೇಶದ ವಧುವನ್ನು ವರಿಸಲು ಬಯಸಿದಾಗ ಶ್ರೀ ಗುರುಗಳವರೇ ಮುಂದೆ ನಿಂತು ಹಾಲೆಂಡಿನ Obin B Sitter ಎಂಬ ವಧುವಿಗೆ "ಶೈಲಜಾ" ಎಂದು ಮರುನಾಮಕರಣ ಮಾಡಿ ಮಠದಲ್ಲಿ ಮದುವೆ ಮಾಡಿಸಿದರು.
ವಾಸ್ತವವಾಗಿ ಜಾತಿ ಎಂದರೆ ಪ್ರಾಣಿ/ಸಸ್ಯಶಾಸ್ತ್ರದಲ್ಲಿ Species ಎಂದರ್ಥ Caste ಅಲ್ಲ. ಈ ಸೃಷ್ಟಿಯಲ್ಲಿ ಹುಲಿ, ಸಿಂಹ, ಆನೆ, ಕುದುರೆ ಇತ್ಯಾದಿ ಪಶು ಪಕ್ಷಿ ಪ್ರಾಣಿ, ಸಕಲ ಸಸ್ಯ ರಾಶಿಗಳಲ್ಲಿರುವಂತೆ ಮನುಷ್ಯ ಕುಲವೂ ಸಹ ಒಂದು ಜಾತಿಗೆ (Species) ಸೇರಿದ್ದು! ಈ ಅರ್ಥದಲ್ಲಿಯೇ ಪಂಪ ಮಹಾಕವಿ ಹೇಳಿದ್ದು "ಮನುಷ್ಯ ಜಾತಿ ತಾನೊಂದೆ ವಲಂ!"
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 26.9.2019