ಕಣ್ಣೀರಿಗೆ ಯಾವುದೇ ಧರ್ಮ-ಜಾತಿ-ದೇಶ-ಭಾಷೆಗಳಿಲ್ಲ!

  •  
  •  
  •  
  •  
  •    Views  

ದಿನನಿತ್ಯ ನಮ್ಮ ಸುತ್ತ ಕಾಣಿಸುವ ಬ್ರಹ್ಮಾಂಡದಲ್ಲಿ ಮನಸ್ಸು ಅರಳಿಸುವ ಸೌಂದರ್ಯವೂ ಇದೆ, ತಲ್ಲಣಗೊಳ್ಳುವಂತೆ ಮಾಡುವ ಭಯವೂ ಇದೆ. ಬೆಳ್ಳಂಬೆಳಗ್ಗೆ ಹರ ಕರುಣೋದಯದಂತೆ ಅರುಣೋದಯವಾಗಿ ಮೂಡಿ ಬರುವ ಸೂರ್ಯನ ಹೊಂಗಿರಣಗಳು ಮನಸ್ಸಿಗೆ ಆಹ್ಲಾದವನ್ನುಂಟುಮಾಡಿದರೆ ಸೂರ್ಯಾಸ್ತಮಾನದ ಮರುಘಳಿಗೆ ಸಂಜೆಯ ಕಗ್ಗತ್ತಲು ಆವರಿಸಿ ಮನಸ್ಸಿನಲ್ಲಿ ಭೀತಿಯನ್ನು ಬಿತ್ತುತ್ತದೆ. ನೀಲ ಗಗನದಲ್ಲಿ ಕ್ಷಣ ಕ್ಷಣಕ್ಕೂ ವಿಭಿನ್ನ ಆಕಾರಗಳ ಚಿತ್ತಾರವನ್ನು ಬಿಡಿಸಿ ಮನಮೋಹಕವಾಗಿ ಕಣ್ಣಿಗೆ ಗೋಚರಿಸುವ ಬಿಳಿಯ ಮೋಡಗಳು. ಕಾಳಿದಾಸನು ಮೇಘದೂತದಲ್ಲಿ ವರ್ಣಿಸುವಂತೆ "ಮಂದಂ ಮಂದಂನುದತಿ ಪವನಃ" ಸುತ್ತಲೂ ಆಹ್ಲಾದಕರವಾಗಿ ಬೀಸುವ ಮಂದ ಮಾರುತ. ಚಾಮರ ಬೀಸಿದಂತೆ ಓಲಾಡುವ ಗಿಡಮರಗಳ ಕೊಂಬೆಗಳು. ಅವುಗಳ ಮೇಲೆ ಚಿಲಿಪಿಲಿಗುಟ್ಟುವ ಹಕ್ಕಿಗಳ ಕಲರವ.

ಕಾಡು ಮೇಡುಗಳಲ್ಲಿ ವನಸಿರಿಯ ಸೊಬಗನ್ನುಟ್ಟು ಮಂದಗಮನೆಯರಂತೆ ಬಳುಕುತ್ತಾ ಜುಳು ಜುಳು ನಿನಾದವ ಮಾಡುತ್ತಾ ಒಂದೆಡೆ ಸಾಗುವ ನದಿಗಳು, ಮತ್ತೊಂದೆಡೆ ಪರ್ವತಗಳ ಪ್ರಪಾತದಲ್ಲಿ ಧುಮ್ಮಿಕ್ಕಿ ಭೋರ್ಗರೆದು "ಕಾಣದ ಕಡಲಿಗೆ ಹಂಬಲಿಸಿ" ಹರಿಯುವ ಅವೇ ನದಿಗಳು. ಗಗನದಲ್ಲಿ ಅಪರೂಪಕ್ಕೆ ಮೂಡುವ ರಂಗುರಂಗಿನ ಕಾಮನಬಿಲ್ಲು ಮನಸ್ಸಿಗೆ ಮುದವನ್ನು ನೀಡಿದರೆ, ಕಾರ್ಮೋಡಗಳು ದಟ್ಟೈಸಿ "ಝಟಿಲ್" ಎಂದು ಕೋಲ್ಮಿಂಚು-ಗುಡುಗು-ಸಿಡಿಲುಗಳು ಆರ್ಭಟಿಸಿದಾಗ ಎದೆ ಜಲ್ ಎನ್ನುತ್ತದೆ. ಒಮ್ಮೊಮ್ಮೆ ಕುಂಭದ್ರೋಣ ಮಳೆ ಸುರಿದು ನದಿಗಳು ಉಕ್ಕಿ ಹರಿದು ಮನೆಮಠಗಳು ಕೊಚ್ಚಿ ಹೋಗುತ್ತವೆ. ಹಳ್ಳಿ ಹಳ್ಳಿಗಳೇ ನಾಮಾವಶೇಷವಾಗುತ್ತವೆ. ದನಕರುಗಳು ಪ್ರವಾಹದಲ್ಲಿ ತೇಲಿ ಹೋಗುತ್ತವೆ. ಹೆಣಗಳು ತೇಲುತ್ತಾ ಜನರ ಬದುಕುಮೂರಾಬಟ್ಟೆ ಆಗುತ್ತದೆ. ನಂದಗೋಕುಲದಂತಿದ್ದ ಹಳ್ಳಿಗಳು ಒಂದೇ ದಿನದಲ್ಲಿ ಸ್ಮಶಾನಗಳಾಗುತ್ತವೆ. ಅಂತಹ ಮುನಿದ ವರುಣನ ಭೀಕರತೆಯೇ ಇತ್ತೀಚೆಗೆ ಉತ್ತರ ಕರ್ನಾಟಕದ ಭಾಗದ ಪ್ರಾಂತ್ಯಗಳಲ್ಲಿ ನಡೆದದ್ದು.

ಕೃಷ್ಣಾ ಮತ್ತು ಮಲಪ್ರಭಾ ನದಿಗಳು ಒಂದುಗೂಡುವ ಪವಿತ್ರ ಕ್ಷೇತ್ರದಲ್ಲಿರುವ ಸಂಗಮನಾಥನನ್ನು ಕುರಿತು "ಕೂಡಲಸಂಗಯ್ಯ ಹೊಳಿಯಾಗ ಹೆಂಗಿದ್ದಿ? ಕಲ್ಲೊತ್ತಿ ಸಣ್ಣ ಮಳಲೊತ್ತಿ ಗಂಗೀಯ ಜಲವೊತ್ತಿ ಲಿಂಗ ನೆನೆದಾನ!" ಎಂದು ಜಲಾವೃತವಾದ ಲಿಂಗವನ್ನು ಕುರಿತು ಮನಕರಗಿ ಮಾನವೀಯ ಭಾವನೆಯನ್ನು ಮೆರೆದವರು ಈ ಭಾಗದ ಜನಪದರು. ಅವರು ಇತ್ತೀಚೆಗೆ ಕೃಷ್ಣಾ, ಘಟಪ್ರಭಾ ಮತ್ತು ಮಲಪ್ರಭಾ ನದಿಗಳ ಪ್ರವಾಹದಲ್ಲಿ ಸಿಲುಕಿ ತಮ್ಮ ಜೀವ ಉಳಿಸಿಕೊಳ್ಳುವ ಸಲುವಾಗಿ ಮನೆಮಠ ಬಿಟ್ಟು ಓಡುವಂತಾಗಿದ್ದು ದೇವರಿಗೆ ತನ್ನನ್ನು ಹಾಡಿ ಹರಸಿದ ಭಕ್ತರ ಮೇಲೆ ಅಷ್ಟೂ ಕರುಣೆ ಬೇಡವೇ ಎನಿಸಿತು. ನಾಡಿನಲ್ಲಿ ಇತ್ತೀಚೆಗೆ ಪ್ರವಾಹದ ಭೀಕರತೆ ತಲೆದೋರಿದಾಗ ಮಾಧ್ಯಮಗಳು ಅದರಲ್ಲೂ ವಿದ್ಯುನ್ಮಾನ ಮಾಧ್ಯಮಗಳು ನಿರ್ವಹಿಸಿದ ರೀತಿ ಪ್ರಶಂಸನೀಯವಾದುದು. ಸಂತ್ರಸ್ತರ ದುಃಖ ದುಮ್ಮಾನಗಳನ್ನು ಅವು ಬಿತ್ತರಿಸಿದ ರೀತಿ ನಾಡಿನ ಜನರ ಮನ ಕಲಕುವಂತಿತ್ತು. ಅದೇ ಕಾರಣಕ್ಕೇ ಸಂತ್ರಸ್ತರಿಗೆ ನೆರವಿನ ಮಹಾಪೂರವೇ ಹರಿದು ಬರುವಂತಾಯಿತು. ಅದೇನಿದ್ದರೂ ತಾತ್ಕಾಲಿಕ. ಅವರ ಜೀವನ ನೆಲೆಗೊಳ್ಳಬೇಕೆಂದರೆ ಇನ್ನೂ ಐದಾರು ವರ್ಷಗಳೇ ಬೇಕು.

ಪ್ರವಾಹ ಪರಿಸ್ಥಿತಿಯ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ಒಂದು ಮಧ್ಯಾಹ್ನ ದೂರದರ್ಶನವನ್ನು ವೀಕ್ಷಿಸಿದಾಗ ವರದಿಗಾರರು ಸಂತ್ರಸ್ತ ಮಹಿಳೆಯೊಬ್ಬಳ ಸಂದರ್ಶನವನ್ನು ನಡೆಸುತ್ತಿದ್ದರು. ಆಕೆ ಅಂಗೈಯಲ್ಲಿ ಜೀವಹಿಡಿದು ಎದೆಮಟ್ಟ ನೀರಿನಲ್ಲಿ ನಡೆದು ಬಂದಿದ್ದಳು “ಜೀವ ಉಳಿಸಿಕೊಳ್ಳಾಕ ಮನೆ ಮಠ ಬಿಟ್ಟು ಉಟ್ಟಬಟ್ಟೆಯಲ್ಲೇ ನೀರಾಗ ನಡಕೊಂಡು ಬಂದಿದ್ದೀನೋ ಯಪ್ಪಾ!" ಎಂದು ಕಣ್ಣೀರಿಡುತ್ತಾ ಹೇಳಿದ್ದನ್ನು ಕೇಳಿ ನಮ್ಮ ಮನಸ್ಸು ಕಲಕಿ ಹೋಯಿತು! ಪ್ರವಾಹ ಸಂತ್ರಸ್ತರಿಗೆ ನಮ್ಮ ಮಠದಿಂದ ಏನಾದರೂ ನೆರವು ನೀಡಬೇಕೆಂಬ ಸಂಕಲ್ಪ ಮನಸ್ಸಿನಲ್ಲಿ ಮೂಡಿತು. ತಕ್ಷಣವೇ ಸಿರಿಗೆರೆಯ ಗ್ರಾಮಸ್ಥರ ತುರ್ತು ಸಭೆಯನ್ನು ಕರೆದು ಮಾರನೆಯ ದಿನವೇ ಪರಿಹಾರ ಕಾರ್ಯವನ್ನು ಕೈಗೊಳ್ಳಲು ನಿರ್ಧರಿಸಲಾಯಿತು. ಅಂದಾಜು 2500 ಜನ ಪುರುಷರು, ಮಹಿಳೆಯರು ಮತ್ತು ಮಕ್ಕಳಿಗೆ ಬೇಕಾದ ಉಡುಗೆಗಳನ್ನು ರಾತ್ರೋ ರಾತ್ರಿ ತರಿಸಲಾಯಿತು. ಸಿರಿಗೆರೆ ಮತ್ತು ಸುತ್ತಮುತ್ತಲ ಗೃಹಿಣಿಯರು ಒಂದೇ ರಾತ್ರಿಯಲ್ಲಿ ಹದಿನೈದು ಸಾವಿರ ರೊಟ್ಟಿಗಳನ್ನು ತಟ್ಟಿ ಕೊಟ್ಟರು! ರೊಟ್ಟಿಗಳಿಗೆ ಬೇಕಾದ ವಿಧವಿಧವಾದ ವ್ಯಂಜನಗಳನ್ನೂ ತಯಾರಿಸಿ ಕೊಟ್ಟರು. ಕರುಳ ಬಳ್ಳಿಯ ಯಾವ ಸಂಬಂಧವು ಇಲ್ಲದ ಸಂತ್ರಸ್ಥ ಜನರಿಗಾಗಿ  ಮರುಗಿ ಇಂತಹ ಸಹಾಯಹಸ್ತ ಚಾಚಿದ ಈ ಮಹಿಳೆಯರ  ಹೃದಯವೈಶಾಲ್ಯಕ್ಕೆ ನಮ್ಮ ಮನಸ್ಸು ತುಂಬಿ ಬಂದಿತು. ಇದಲ್ಲವೇ ನಿಜವಾದ ಧರ್ಮ! ನೂರು ಜನ ವಿದ್ಯಾರ್ಥಿಗಳು ಮತ್ತು ನೂರು ಜನ ಗ್ರಾಮಸ್ಥರು ಹೀಗೆ ಒಟ್ಟು ಇನ್ನೂರು ಜನ ಸ್ವಯಂ ಸೇವಕರು ಮಾರನೆಯ ದಿನವೇ ಗದಗ ಜಿಲ್ಲೆಯ ನೆರೆ ಸಂತ್ರಸ್ತ ಹಳ್ಳಿಗಳಲ್ಲಿ ಪರಿಹಾರ ಸಾಮಗ್ರಿಗಳನ್ನು ವಿತರಿಸಲು ನಮ್ಮೊಂದಿಗೆ ಧಾವಿಸಿದರು. ಈ ದಿಢೀರ್ ಪರಿಹಾರ ಕಾರ್ಯಕ್ರಮದಲ್ಲಿ ಗದುಗಿನ ಜಿಲ್ಲಾಧಿಕಾರಿಗಳು, ತಹಶೀಲ್ದಾರರು, ಜಿಲ್ಲಾ ಪೋಲೀಸು ವರಿಷ್ಠಾಧಿಕಾರಿಗಳು, ಜಿಲ್ಲಾ ನ್ಯಾಯಾಧೀಶರು ಮತ್ತು ರಾಜಕೀಯ ಧುರೀಣರು ಭಾಗವಹಿಸಿ ಕೈಜೋಡಿಸಿದರು.

ಪರಿಹಾರ ಸಾಮಗ್ರಿಗಳ ವಿತರಣೆಯನ್ನು ಹೇಗೆ ಮಾಡಬೇಕೆಂಬ ಪ್ರಶ್ನೆ ಎದುರಾದಾಗ ಸಂತ್ರಸ್ತರನ್ನು ಸಾಲಾಗಿ ನಿಲ್ಲಿಸಿ ಸರತಿ ಪ್ರಕಾರ ವಿತರಣೆ ಮಾಡಿದರೆ ಒಮ್ಮೆ ಪಡೆದವರೇ ಮತ್ತೆ ಬಂದು 2-3 ಸಲ ಪಡೆಯುತ್ತಾರೆ ಎಂಬ ಅಪಸ್ವರದ ಮಾತು ವೇದಿಕೆಯ ಮೇಲಿಂದ ಕೇಳಿ ಬಂತು. ಇದು ಯಾವ ಪೂರ್ವಾನುಭವವೂ ಇಲ್ಲದ ನಮ್ಮನ್ನು ಯೋಚನೆಗೆ ಈಡುಮಾಡಿತು. ಧ್ವನಿವರ್ಧಕವನ್ನು ನಮ್ಮ ಮುಂದೆ ತಂದಿಟ್ಟಾಗ ತಕ್ಷಣವೇ ನಮ್ಮ ನಿರ್ಧಾರವನ್ನು ಪ್ರಕಟಿಸಬೇಕಾಗಿತ್ತು. ಎದುರಿಗೆ ಕುಳಿತಿದ್ದ ಮುಗ್ಧ ಗ್ರಾಮೀಣ ಮಹಿಳೆಯರ ಮುಖವನ್ನು ನೋಡಿ ನಮ್ಮ ಮನಸ್ಸಿನಲ್ಲಿ ಮೂಡಿ ಬಂದ ಆಲೋಚನೆಗಳನ್ನು ಮುಚ್ಚು ಮರೆಯಿಲ್ಲದೆ ಬಹಿರಂಗವಾಗಿ ಮುಂದಿಟ್ಟದ್ದು ಹೀಗೆ: “ಪಕ್ಕದ ತಮಿಳು ನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಬಳಿ ದಿನಕ್ಕೊಂದು ಸೀರೆ ಉಟ್ಟರೂ 2-3 ವರ್ಷಗಳು ಉಡಬಹುದಾದಷ್ಟು ಸಂಖ್ಯೆಯ ಸೀರೆಗಳಿದ್ದವಂತೆ. ಹೀಗಾಗಿ ಗ್ರಾಮೀಣ ಬಡ ಮಹಿಳೆಯರಾದ ನೀವು ಒಂದೆರಡು ಸೀರೆಗಳನ್ನು ಹೆಚ್ಚಿಗೆ ಪಡೆದರೆ ತಪ್ಪೇನೂ ಇಲ್ಲ. ಆದರೆ ಒಂದು ಷರತ್ತು: ನೀವು ವಾಪಾಸು ಹೋಗಿ ಆನಂತರ ಪಕ್ಕದ ಮನೆಯ ಮಹಿಳೆಯ ಹತ್ತಿರ ಉಡಲು ಸೀರೆ ಇಲ್ಲದಿದ್ದರೆ ನೀವು ಕಣ್ ತಪ್ಪಿಸಿ ಹೆಚ್ಚುವರಿಯಾಗಿ ಪಡೆದ ಸೀರೆಯನ್ನು ಅವಳಿಗೆ ಕೊಡಬೇಕು!” ಎಂದು ಹೇಳಿದ ಮಾತು  ಮಹಿಳೆಯರ ಮನಸಿಗೆ ನಾಟಿತು. ನಮ್ಮೊಂದಿಗೆ ಅಧಿಕಾರಿಗಳೆಲ್ಲರು ವೇದಿಕೆಯಿಂದ ಕೆಳಗೆ ಇಳಿದು ವಿತರಣೆ ಮಾಡಲು ಆರಂಭಿಸಿದಾಗ ಯಾರೂ ಸಹ ದುರಾಸೆಪಟ್ಟು ಹೆಚ್ಚಿನ ಬಟ್ಟೆಗಳನ್ನು ಪಡೆಯಲು ಮುಂದಾಗಲಿಲ್ಲ. ವಿತರಿಸಿದ ಸೀರೆಯನ್ನು ಮಡಿಲಲ್ಲಿ ಇಟ್ಟುಕೊಂಡದ್ದು ಕಾಣಿಸದೆ ಪುನಾ ನೀಡಲು ಹೋದಾಗ ಈಗಾಗಲೇ ಪಡೆದಿದ್ದೇವೆ ಎಂದು ತೋರಿಸಿ ಪಕ್ಕದಲ್ಲಿ ಸಿಗದೇ ಇರುವವರಿಗೆ ನಮ್ಮಿಂದ ಕೊಡಿಸಿದರು! ಈ ದೇಶದಲ್ಲಿ ಧರ್ಮ ಇನ್ನೂ ಜೀವಂತವಿದೆ. ಧರ್ಮ ಗುರುಗಳ ಮಾತಿನ ಮೇಲೆ ಶ್ರದ್ದೆಯಿದೆ ಎಂಬುದಕ್ಕೆ ಇದಕ್ಕಿಂತ ಬೇರೆ ಪುರಾವೆ ಬೇಕೆ!

ಮಾಧ್ಯಮಗಳಲ್ಲಿ ಮನಕರಗುವ ದೃಶ್ಯಗಳನ್ನು ನೋಡಿ ನಾಡಿನ ಜನರು ನಾನಾ ದಿಕ್ಕುಗಳಿಂದ ಸಂತ್ರಸ್ತರ ಬಳಿಗೆ ಧಾವಿಸಿ ಸಹಾಯ ಹಸ್ತ ಚಾಚಿದರು. ಆದರೆ ವಿತರಣೆಯನ್ನು ಸಮರ್ಪಕವಾಗಿ ಮಾಡಲು ಆಗದೆ ಬೇಸರಪಟ್ಟುಕೊಂಡು ವಾಪಾಸು ಹೋದ ಉದಾಹರಣೆಗಳು ನಮ್ಮ ಗಮನಕ್ಕೆ ಬಂದವು. ಬೆಂಗಳೂರಿನಿಂದ ವೈದ್ಯ ದಂಪತಿಗಳು ಜನರಿಗೆ ಚಿಕಿತ್ಸೆ ನೀಡಲು ಬಂದಿದ್ದರಂತೆ. ನೂಕು ನುಗ್ಗಲಿನಲ್ಲಿ ಆ ಮಹಿಳಾ ವೈದ್ಯರ ಕೊರಳಿಗೆ ಕೈಹಾಕಿ ಬಂಗಾರದ ಸರ ಕಿತ್ತುಕೊಂಡ ಘಟನೆ ನಡೆಯಿತೆಂದು ಗ್ರಾಮದ ಹಿರಿಯರು ವಿಷಾದ ವ್ಯಕ್ತಪಡಿಸಿದರು! ದೂರದ ಪೂನಾದಿಂದ ಬಂದ ತಂಡದವರಿಂದ ಪರಿಹಾರ ಸಾಮಾಗ್ರಿಗಳನ್ನು ಪಡೆಯಲು ನಾ ಮುಂದು ತಾ ಮುಂದು ಎಂಬ ಕಿತ್ತಾಟದಲ್ಲಿ ತಂಡದ ಮುಖ್ಯಸ್ಥನ ಹಲ್ಲುಗಳು ರಕ್ತಸಿಕ್ತವಾಗಿ ಅವರು ತುಂಬಾ ಬೇಸರದಿಂದ ಹಿಂದಿರುಗಿ ಹೋದರೆಂಬುದೂ ತಿಳಿಯಿತು. ಇಂತಹ ಯಾವ ಕಹಿ ಪ್ರಸಂಗಗಳೂ ನಾವು ಹೋದಾಗ ಘಟಿಸಲಿಲ್ಲ. ಅದು ಈ ದೇಶದಲ್ಲಿ ಧರ್ಮಗುರುಗಳ ಬಗೆಗೆ ಜನರಿಗೆ ಇರುವ ಗೌರವ ಮತ್ತು ಭಕ್ತಿಯ ದ್ಯೋತಕ! 

ಪರಿಹಾರ ವಿತರಣೆಯ ಎರಡನೆಯ ಹಂತ ಬೆಳಗಾಂ ಜಿಲ್ಲೆ ಗೋಕಾಕ್ ತಾಲ್ಲೂಕಿನ ಹಳ್ಳಿಗಳಲ್ಲಿ ನಡೆಯಿತು. ಸುಮಾರು 100 ವರ್ಷಗಳ ಹಿಂದೆ ಇಂತಹ ಭೀಕರ ಪ್ರವಾಹವು ಘಟಪ್ರಭಾ ಮತ್ತು ಮಲಪ್ರಭಾ ದಂಡೆಯ ಹಳ್ಳಿಗಳನ್ನು ನಾಶ ಮಾಡಿತ್ತಂತೆ. ಈಗ ಅದರ ಪುನರಾವರ್ತನೆಯಾಗಿದೆ. ವಾಪಾಸು ಬರುವಾಗ ಗೋಕಾಕ ಜಲಪಾತದ ಸಮೀಪದಲ್ಲಿ ಬ್ರಿಟಿಷರು 1887 ರಲ್ಲಿ ಸ್ಥಾಪಿಸಿದ್ದ ಹತ್ತಿ ಗಿರಣಿ ಕಾಣಿಸಿತು. ಗೋಕಾಕಿನಿಂದ ಈ ಗಿರಣಿಗೆ ಕಾರ್ಮಿಕರು ಬರಲು ಆ ಕಾಲದಲ್ಲಿ ನಿರ್ಮಾಣ ಮಾಡಿದ್ದ ತೂಗು ಸೇತುವೆಯು ಮೊನ್ನೆ ಮೊನ್ನೆವರೆಗೂ ಸುಸ್ಥಿತಿಯಲ್ಲಿದ್ದು ಭೀಕರ ಪ್ರವಾಹದಿಂದ ಜಖಂ ಆಗಿ ಓಡಾಡಲು ಬಾರದಂತೆ ಆಗಿದೆ. ಅದೇ ರೀತಿ ಹಿಡಕಲ್ ಡ್ಯಾಂ ನ ಕೆಳಭಾಗದಲ್ಲಿರುವ ಸೇತುವೆಯೂ ಜಖಂ ಆಗಿದೆ.

ಗೋಕಾಕಿನಿಂದ ವಾಪಾಸು ಬಂದ ಅನಂತರ ಮಹಿಳೆಯರು, ಪುರುಷರು ಮತ್ತು ಮಕ್ಕಳು ನಮ್ಮ ಮಠದಿಂದ ಪಡೆದ ಬಟ್ಟೆಗಳನ್ನೇ ಧರಿಸಿ ಕಣ್ಣಂಚಿನಲ್ಲಿ ಸಂತಸ ತುಂಬಿಕೊಂಡು ಫೋಟೋ ತೆಗೆಸಿಕೊಂಡು ಕಳಿಸಿದ್ದಾರೆ. ತವರು ಮನೆಯವರಿಂದ ಗೌರಿಹಬ್ಬಕ್ಕೆ ಪಡೆದ ಬಟ್ಟೆಗಳೇನೋ ಎಂಬಂತಾಗಿದೆಯೆಂದು ತಾಯಂದಿರು ಉದ್ಗರಿಸಿದ್ದಾರೆ. ಮೂರನೆಯ ಹಂತದ ಪರಿಹಾರ ವಿತರಣೆ ಹಾವೇರಿ ಜಿಲ್ಲೆಯ ಹಳ್ಳಿಗಳಲ್ಲಿ ಇದೇ ಸೆಪ್ಟೆಂಬರ್ 20 ರಂದು ನಡೆಯಲೇರ್ಪಾಡಾಗಿದೆ. ಈ ತಿಂಗಳು ನಡೆಯಲಿರುವ ನಮ್ಮ ಲಿಂಗೈಕ್ಯ ಗುರುವರ್ಯರ ಶ್ರದ್ಧಾಂಜಲಿ ಸಮಾರಂಭವನ್ನು ಒಂದು ದಿನಕ್ಕೆ (ಸೆಪ್ಟೆಂಬರ್ 24) ಸೀಮಿತಗೊಳಿಸಿ ಉಳಿದ ದಿನಗಳನ್ನು ಪ್ರವಾಹ ಸಂತ್ರಸ್ತರ ಪರಿಹಾರ ಕಾರ್ಯಕ್ರಮವನ್ನಾಗಿ ರೂಪುಗೊಳಿಸಿದೆ.

ಜನರ ಕಷ್ಟಕ್ಕೆ ಮರುಗುವುದೇ ಧರ್ಮ. ಧರ್ಮವೆಂಬುದು ಈಗೀಗಲಂತೂ ವೇದಿಕೆಯ ಮೇಲಿನ ಭಾಷಣದ ಸರಕಾಗಿ ಕ್ಲೀಷೆಗೆ ಒಳಗಾಗಿದೆ. ಕೆಲವರಿಗಂತೂ ಧರ್ಮದ ಬಗ್ಗೆ ಪ್ರವಚನ ನೀಡುವುದು ಪೂರ್ಣಾವಧಿಯ ಕೆಲಸವಾಗಿದೆಯೇ ಹೊರತು ಆತ್ಮೋನ್ನತಿ ಮತ್ತು ಆತ್ಮಜಾಗೃತಿಯ ದಾರಿಯಾಗಿಲ್ಲ. ಗಂಟೆಗಟ್ಟಲೆ ಧರ್ಮದ ಬಗೆಗೆ ಪ್ರವಚನ ನೀಡಿ ಚಪ್ಪಾಳೆ ಗಿಟ್ಟಿಸಿಕೊಳ್ಳುವುದಕ್ಕಿಂತ ನೊಂದವರ ಕಣ್ಣೀರನ್ನು ಕೈಲಾದಷ್ಟು ಮಟ್ಟಿಗಾದರೂ ಒರೆಸಲು ಮುಂದಾದರೆ ಅದಕ್ಕಿಂತಲೂ ದೊಡ್ಡ ಧರ್ಮಬೇರೊಂದಿಲ್ಲ! ಅದಕ್ಕಿಂತಲೂ ಮತ್ತೆ ಯಾವ ಕಲ್ಯಾಣವೂ ಇರಲಾರದು! ಮನುಷ್ಯನ ಕಣ್ಣೀರಿಗೆ ಯಾವುದೇ ಜಾತಿಯಿಲ್ಲ, ಧರ್ಮವಿಲ್ಲ, ದೇಶವಿಲ್ಲ, ಭಾಷೆಯಿಲ್ಲ. ಹಾಗೆಯೇ ನೊಂದವರ ಕಣ್ಣೀರನ್ನು ಒರೆಸುವ ಕೈಗಳಿಗೂ ಸಹ ಯಾವುದೇ ಜಾತಿ, ಧರ್ಮ, ದೇಶ, ಭಾಷೆಗಳೆಂಬುವು ಇಲ್ಲ! ಇದನ್ನು ಪ್ರವಾಹ ಸಂತ್ರಸ್ತರ ನೆರವಿಗೆ ನಾಡಿನ ನಾನಾ ಭಾಗಗಳಿಂದ ಧಾವಿಸಿದ ಜನರು "ದಯವೇ ಧರ್ಮದ ಮೂಲವಯ್ಯಾ" ಎನ್ನುವಂತೆ ನಿಜವಾದ ಧರ್ಮದ ಹಿರಿಮೆಗರಿಮೆಗಳನ್ನು ತೋರಿಸಿಕೊಟ್ಟಿದ್ದಾರೆ. ಅವರೆಲ್ಲರೂ ಧನ್ಯರು, ಧನ್ಯರು, ಧನ್ಯರು! ಇಂಥವರ ಸಂತತಿ ಸಾವಿರವಾಗಲಿ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 12.9.2019