ನ ಸ್ತ್ರೀ ಸ್ವಾತಂತ್ರ್ಯಮರ್ಹತಿ ಒಂದು ಮರು ಚಿಂತನೆ
ಸಮಕಾಲೀನ ಸಂದರ್ಭದಲ್ಲಿ ಆಗಾಗ ಬಹು ಚರ್ಚಿತವಾಗುವ ಮನುಸ್ಮೃತಿಯ. ಶ್ಲೋಕ "ನ ಸ್ತ್ರೀ ಸ್ವಾತಂತ್ರ್ಯಮರ್ಹತಿ". ಮನುಸ್ಮೃತಿಯೆಂಬುದು ನಮ್ಮ ದೇಶದ ಪ್ರಾಚೀನ ಧರ್ಮಶಾಸ್ತ್ರ ಗ್ರಂಥಗಳಲ್ಲಿ ಪ್ರಮುಖವಾದುದು. ಇಂದು ಸ್ವತಂತ್ರ ಭಾರತದ ಸಂವಿಧಾನವಿದ್ದಂತೆ ಮನುಸ್ಮೃತಿಯನ್ನು ಪುರಾತನ ಕಾಲದ ಸಂವಿಧಾನ ಎನ್ನಬಹುದು. ಹಿಂದಿನ ರಾಜ ಮಹಾರಾಜರುಗಳ ಪ್ರಜಾಪಾಲನೆಗೆ ಅನುಕೂಲವಾಗುವಂತೆ ಕಾನೂನು ಕಟ್ಟಳೆಗಳನ್ನು ಇದು ರೂಪಿಸಿದೆ. ಆಗಿನ ಕಾಲಘಟ್ಟದಲ್ಲಿ ಜಾತಿ ಜಾತಿಗಳ ಮಧ್ಯೆ, ಸ್ತ್ರೀ ಪುರುಷರ ಮಧ್ಯೆ ಅನೇಕ ವಿವಾದಾಸ್ಪದವಾದ ಧಾರ್ಮಿಕ ಹಾಗೂ ಸಾಮಾಜಿಕ ಅಸಮಾನತೆಯ ವೈಪರೀತ್ಯಗಳು ಇದರಲ್ಲಿ ಇರುವುದನ್ನು ಅಲ್ಲಗಳೆಯಲಾಗದು. ಅವುಗಳಲ್ಲಿ ಒಂದು "ನ ಸ್ತ್ರೀ ಸ್ವಾತಂತ್ರ್ಯಮರ್ಹತಿ" (ಸ್ತ್ರೀಯು ಸ್ವಾತಂತ್ರ್ಯಕ್ಕೆ ಅರ್ಹಳಲ್ಲ) ಎಂಬ ವಿವಾದಾಸ್ಪದವಾದ ಮಾತು. (ಮನುಸ್ಮೃತಿ 9.3). ಇದನ್ನು ಓದಿ ಕೆಂಡಾಮಂಡಲರಾದ ಆಧುನಿಕ ಮಹಿಳಾ ಲೇಖಕಿಯರು ಮನು ಸಿಕ್ಕರೆ ಅವನಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಬರೆಯುತ್ತಾರೆ. ಅವರ ಈ ಆಕ್ರೋಶ ಸಹಜವಾದುದೇ ಆಗಿದೆ. ಈ ಹಿನ್ನೆಲೆಯಲ್ಲಿ "ಮೊಲೆ ಮುಡಿ ಬಂದರೆ ಹೆಣ್ಣೆಂಬರು, ಗಡ್ಡಮೀಸೆ ಬಂದರೆ ಗಂಡೆಂಬರು, ಒಳಗೆ ಸುಳಿವಾತ್ಮ ಹೆಣ್ಣೂ ಅಲ್ಲ, ಗಂಡೂ ಅಲ್ಲ ಕಾಣಾ ರಾಮನಾಥ" ಎನ್ನುವ ಶರಣರ ಮಾತು ಹೆಚ್ಚು ಆಪ್ಯಾಯಮಾನವಾಗಿ ಕಂಡುಬರುತ್ತದೆ. ಮಹಿಳೆಯರ ಆಕ್ರೋಶಕ್ಕೆ ಒಳಗಾದ ಮನು ಪ್ರಣೀತವಾದ ಆ ಶ್ಲೋಕದ ಪೂರ್ಣಪಾಠ ಹೀಗಿದೆ.
ಪಿತಾ ರಕ್ಷತಿ ಕೌಮಾರೇ ಭರ್ತಾ ರಕ್ಷತಿ ಯೌವನೇ ।
ರಕ್ಷಂತಿ ಸ್ಥವಿರೇ ಪುತ್ರಾ ನ ಸ್ತ್ರೀ ಸ್ವಾತಂತ್ರ್ಯಮರ್ಹತಿ ||
"ಬಾಲ್ಯದಲ್ಲಿ ತಂದೆಯು ರಕ್ಷಿಸುತ್ತಾನೆ, ಯೌವನದಲ್ಲಿ ಪತಿಯ ರಕ್ಷಿಸುತ್ತಾನೆ. ಮುಪ್ಪಿನಲ್ಲಿ ಮಕ್ಕಳು ರಕ್ಷಿಸುತ್ತಾರೆ. ಸ್ತ್ರೀಯು ಸ್ವಾತಂತ್ರ್ಯಕ್ಕೆ ಅರ್ಹಳಲ್ಲ ಎಂದು ಇದರ ಅರ್ಥ". ಮಗಳು ಮನೆಗೆ ತಡವಾಗಿ ಬಂದರೆ ತಂದೆ ತಾಯಂದಿರು "ಬೆಳೆದ ಹುಡುಗಿ! ಬುದ್ಧಿ ಬೇಡವೇ ನಿನಗೆ?" ಎಂದು ಗದರಿಸುತ್ತಾರೆ. ಅಣ್ಣ ತಡರಾತ್ರಿ ಬರುತ್ತಾನಲ್ಲಾ ಎಂದು ಆಪಲಾಪ ಮಾಡಿದರೆ "ಏಯ್. ಅವನು ಗಂಡು ಹುಡಗ ಕಣೇ!"" ಎಂದು ಗದರಿಸಿ ಅವಳ ಬಾಯಿ ಮುಚ್ಚಿಸುತ್ತಾರೆ. ಅಂದರೆ ಗಂಡು ಇರುವ ಫ್ರೀಡಂ ಹೆಣ್ಣು ಹುಡುಗಿಗೆ ಇಲ್ಲ. ಅಂದರೆ ಏನು ಅರ್ಥ ಬರುತ್ತದೆಯೋ ಅದೇ ಅರ್ಥ ನ ಸ್ತ್ರೀ ಸ್ವಾತಂತ್ರ್ಯಮರ್ಹತಿ ಎಂಬುದರ ಅರ್ಥ. ಒಟ್ಟಾರೆ ಹೆಣ್ಣು ಅಸುರಕ್ಷಿತಳು ಎಂಬ ಭಾವ ಈ ಶ್ಲೋಕದಲ್ಲಿದೆ. ಹೆಣ್ಣಿನ ಅಂತಹ ಅಸುರಕ್ಷತೆಯನ್ನು ಹೋಗಲಾಡಿಸುವ ಹೊಣೆಗಾರಿಕೆ ಯಾರದು ಎಂದರೆ ಬಾಲ್ಯದಲ್ಲಿ ತಂದೆಯದು, ಯೌವನದಲ್ಲಿ ಗಂಡನದು. ವೃದ್ಧಾಪ್ಯದಲ್ಲಿ ಮಕ್ಕಳದು. ಆದ್ದರಿಂದ ತಂದೆ, ಗಂಡ ಮತ್ತು ಮಕ್ಕಳ ಹೊಣೆಗಾರಿಕೆಯನ್ನು ಇದು ಬೋಧಿಸುತ್ತದೆಯೇ ಹೊರತು ಲಿಂಗಭೇದವನ್ನು ಅಲ್ಲ.
ಮನುವು ಈ ಕಟ್ಟಳೆಯನ್ನು ರೂಪಿಸಿದ್ದ ಕಾಲದಲ್ಲಿ ಪುರುಷರಿಗೆ ಮಾತ್ರ ಸ್ವಾತಂತ್ರ್ಯ ಇತ್ತು, ಮಹಿಳೆಯರಿಗೆ ಇರಲಿಲ್ಲ. ಎಂದರ್ಥವಲ್ಲ, ಆಗ ಇದ್ದದ್ದು ಪ್ರಜಾಪ್ರಭುತ್ವ ಅಲ್ಲ, ರಾಜಪ್ರಭುತ್ವ, ಹೆಂಗಸರಿಗಾಗಲೀ ಗಂಡಸರಿಗಾಗಲೀ ಯಾರಿಗೂ ಯಾವ ಸ್ವಾತಂತ್ರ್ಯವೂ ಇಲ್ಲದ ಕಾಲವದು. ರಾಜನು ಪ್ರಜಾವತ್ಸಲನಾಗಿದ್ದರೆ ಪ್ರಜೆಗಳು ನೆಮ್ಮದಿಯಿಂದ ಬಾಳುತ್ತಿದ್ದರು. ಅವನು ಪ್ರಜಾಪೀಡಕನಾಗಿದ್ದರೆ ತಮ್ಮ ಹಣೆಬರಹವನ್ನು ಹಳಿದುಕೊಂಡು ಬದುಕುತ್ತಿದ್ದರು! "ರಾಮ ರಾಜ್ಯ ಆಳಿದರೂ ರಾಗಿ ಬೀಸೋದು ತಪ್ಪೋದಿಲ್ಲ" ಎಂದು ಸಮಾಧಾನ ಪಟ್ಟುಕೊಳ್ಳುತ್ತಿದ್ದರು. ಇಲ್ಲಿ ಸ್ವಾತಂತ್ರ್ಯ ಎಂದರೆ ಪ್ರಜಾಪ್ರಭುತ್ವದಲ್ಲಿ ಬಳಕೆಯಲ್ಲಿರುವ Freedom ಎಂಬ ಅರ್ಥದಲ್ಲಿ ಅಲ್ಲ. ಮನುವು ಹೆಣ್ಣಿಗೆ ಸ್ವಾತಂತ್ರ್ಯವಿಲ್ಲ ಎಂದರೆ "Women are not entitled for freedom" ಎಂದರ್ಥವಲ್ಲ. "Women are not free, they are not safe for biological reasons" ಎಂದರ್ಥ. ಸ್ತ್ರೀಯರ ಶಾರೀರಿಕ ಅಸಹಾಯಕತೆಯ ಕಾರಣ ಬಾಲ್ಯದಲ್ಲಿ ತಂದೆಯೂ, ಯೌವನದಲ್ಲಿ ಗಂಡನೂ, ಮುಪ್ಪಿನಲ್ಲಿ ಮಗನೂ ರಕ್ಷಣೆ ಮಾಡಬೇಕು ಎಂಬ ಹೊಣೆಗಾರಿಕೆಯನ್ನು ವಿಧಿಸುವ ಈ ಶ್ಲೋಕವನ್ನು ಪ್ರತ್ಯೇಕವಾಗಿ ಓದಿದಾಗ ಯಾವ ತಪ್ಪು ಕಾಣಿಸುವುದಿಲ್ಲ. ಇದು ಮಹಿಳೆಯರ ಬಗ್ಗೆ ಇರಬೇಕಾದ ಕಾಳಜಿಯನ್ನು ತೋರಿಸುತ್ತದೆ. ಆದರೆ ನಿಜವಾಗಿ ಆಕ್ಷೇಪಿಸಬೇಕಾಗಿರುವುದು ಇದರ ಹಿಂದಿನ ಶೋಕದಲ್ಲಿರುವ ಕಟ್ಟಳೆಯನ್ನು:
ಅಸ್ವತಂತ್ರಾಃ ಸ್ತ್ರೀಯಃ ಕಾರ್ಯಾಃ ಪುರುಷೈಃ ಪ್ರೈರ್ದಿವಾನಿಶಂ |
ವಿಷಯೇಷು ಚ ಸಜ್ಜಂತ್ಯಃ ಸಂಸ್ಥಾಪ್ಯಾ ಆತ್ಮನೋ ವಶೇ ||
- ( ಮನುಸ್ಮೃತಿ 9.2)
"ಪುರುಷರು ಹಗಲಿರಳೂ ಹೆಣ್ಣುಮಕ್ಕಳನ್ನು ತಮ್ಮ ಆಧೀನದಲ್ಲಿ ಇಟ್ಟುಕೊಳ್ಳಬೇಕು. ವಿಷಯಲೋಲುಪತೆಯಲ್ಲಿ ತೊಡಗುವ ಸ್ತ್ರೀಯರನ್ನು ತಮ್ಮ ಅಂಕೆಯಲ್ಲಿ ಇಟ್ಟುಕೊಳ್ಳಬೇಕು" ಎಂಬ ಈ ಕಟ್ಟಳೆ ಇಡೀ ಸ್ತ್ರೀ ಕುಲವನ್ನೇ ಅವಮಾನಿಸಿದಂತೆ. ಪುರುಷ ಪ್ರಾಧಾನ್ಯತೆಯನ್ನು (male domination) ಮೆರೆದಂತೆ. ಎಲ್ಲ ಪುರುಷರೂ ಸಕಲ ಸದ್ಗುಣ ಸಂಪನ್ನರೇನೂ ಅಲ್ಲ. ಪುರುಷರೆಲ್ಲರೂ ಸದಾಚಾರ ಸಂಪನ್ನರಾಗಿದ್ದರೆ ಮಹಿಳೆಯರನ್ನು ರಕ್ಷಿಸಬೇಕಾದ ಈ ಸಮಸ್ಯೆಯೇ ಇರುತ್ತಿರಲಿಲ್ಲ. ಬೆಂಗಳೂರಿನಿಂದ ಕೆಲವೇ ಗಂಟೆಗಳ ದೂರದಲ್ಲಿರುವ ದುಬೈನಲ್ಲಿ ಮನುವಿನ ಯಾವ ಧರ್ಮಶಾಸ್ತ್ರವೂ ಇಲ್ಲ. ಆದರೆ ಅಲ್ಲಿಯ ಮಹಿಳೆಯರು ತಡರಾತ್ರಿಯಲ್ಲಿ ಒಂಟಿಯಾಗಿ ಸಂಚರಿಸಿದರೆ ಯಾವ ಭಯವೂ ಇಲ್ಲ. "ನನ್ನ ಮಗಳು ಮಧ್ಯರಾತ್ರಿಯಲ್ಲಿ ಮನೆಗೆ ಬಂದರೂ ನನಗೆ ಯಾವ ಯೋಚನೆಯೂ ಇಲ್ಲ. ಆದರೆ ರಾತ್ರಿ ವೇಳೆ ಕಾರು ಚಲಿಸುವಾಗ ನಿದ್ದೆಗಣ್ಣಿನಲ್ಲಿ ಅಪಘಾತವಾದರೆ ಹೇಗೆ ಎಂಬ ಒಂದೇ ಯೋಚನೆ ನನ್ನನ್ನು ಕಾಡಿಸುತ್ತದೆ" ಎನ್ನುತ್ತಾರೆ ಅಲ್ಲಿರುವ ಭಾರತೀಯ ಸಂಜಾತ ತಂದೆ. ಹೀಗೆಂದ ಮಾತ್ರಕ್ಕೆ ಅಲ್ಲಿರುವ ಪುರುಷರೆಲ್ಲರೂ ಸಾಧುಸಂತರೆಂದೇನೂ ಅಲ್ಲ. ಅಲ್ಲಿ ಮಹಿಳೆಯರು ಸುರಕ್ಷಿತವಾಗಿರಲು ಕಾರಣ ಅಲ್ಲಿರುವ ಜನರಿಗೆ ಮಹಿಳೆಯರ ಮೇಲೆ ಗೌರವಾದರಗಳು ಇದೆ ಎಂದೂ ಅಲ್ಲ. ಮಹಿಳೆಯರನ್ನು ಕೆಣಕಿದರೆ ತಮ್ಮ ಕೊರಳನ್ನು ಕತ್ತರಿಸಿ ಹಾಕುತ್ತಾರೆ ಎಂಬ ಪ್ರಾಣ ಭೀತಿಯಿಂದ!
ಸ್ವತಂತ್ರ ಭಾರತದಲ್ಲಿ ಮಹಿಳೆಯರು ಮತ್ತು ಪುರುಷರು ಸಮಾನತೆ ಇದೆಯೆಂದು ಹೇಳುತ್ತೇವೆ. ಆದರೆ ವಾಸ್ತವವಾಗಿ ಎಲ್ಲಿದೆ? ಸ್ವಾತಂತ್ರ್ಯ ಸಿಕ್ಕಿದ ಸಮಕಾಲೀನ ಸಂದರ್ಭದಲ್ಲೂ ಮಹಿಳೆಯ ಸ್ಥಿತಿಯಲ್ಲಿ ಸುಧಾರಣೆ ಆಗಿದೆಯಾ ಎಂಬುದು ಯಕ್ಷಪ್ರಶ್ನೆ! "ಮಧ್ಯರಾತ್ರಿಯಲ್ಲಿ ಮಹಿಳೆ ಒಂಟಿಯಾಗಿ ರಸ್ತೆಗಳಲ್ಲಿ ನಿರಾತಂಕವಾಗಿ ಸಂಚರಿಸಲು ಸಾಧ್ಯವಾಗುವವರೆಗೆ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಗಾಂಧೀಜಿ ಹೇಳುತ್ತಿದ್ದರು. ಮನುಸ್ಮೃತಿ ಈಗ ಇಲ್ಲದಿದ್ದರೂ ಜನರ ಮನಸ್ಥಿತಿ ಮಾತ್ರ ಈಗಲೂ ಹಾಗೆಯೇ ಇದೆ. ಈಗ ಸ್ರೀ-ಪುರುಷ ಸಮಾನತೆ ಇದೆ ಎಂದು ಎಷ್ಟು ದೊಡ್ಡದಾಗಿ ಹೇಳಿಕೊಂಡರು ವಾಸ್ತವವಾಗಿ ಇಂದಿನ ಸಾಮಾಜಿಕ ಸನ್ನಿವೇಶದಲ್ಲಿ ಅದು ಇಲ್ಲ! ಗೃಹಿಣಿಯರು ಮನೆಯ ನಾಲ್ಕು ಗೋಡೆಗಳ ಮಧ್ಯೆ ಬಂಧಿತರಾಗದೆ ಹೊರಗೆ ಹೋಗಿ ದುಡಿಯುವ ಸ್ವಾತಂತ್ರ್ಯವೇನೋ ಸಿಕ್ಕಿದೆ. ಆದರೆ ದುಡಿಮೆಯಿಂದ ಬಂದ ಹಣವನ್ನು ಸ್ವಂತಕ್ಕೆ ಬಳಸಿಕೊಳ್ಳುವ ಸ್ವಾತಂತ್ರ್ಯ ಈಗಲೂ ಅನೇಕ ಮಹಿಳೆಯರಿಗೆ ಇಲ್ಲ. ಗಂಡನಂತೆ ಸಾಫ್ಟ್‌ವೇರ್ ಇಂಜಿನಿಯರಾಗಿ ಕೆಲಸ ಮಾಡಿ ಗಂಡನಿಗಿಂತಲೂ ಹೆಚ್ಚು ಸಂಬಳ ಸಂಪಾದಿಸಿದರೂ ಮನೆಗೆ ಬಂದಾಗ ಅವಳೇ ಅಡುಗೆ ಮಾಡಬೇಕಾಗಿದೆಯೇ ಹೊರತು ಮನುಕಾಲದ ಪರಿಸ್ಥಿತಿ ಏನೂ ಬದಲಾಗಿಲ್ಲ. ಕೈತುಂಬಾ ತಂದ ಸಂಬಳವನ್ನು ಆಕೆ ತನ್ನ ಕೈಯಲ್ಲಿಟ್ಟುಕೊಳ್ಳುವಂತಿಲ್ಲ. ಗಂಡನಿಗೆ/ ಅತ್ತೆಮಾವಂದಿರ ಕೈಗೆ ಕೊಡಬೇಕೆಂಬ ಕಾಟ. ಈಗ ಮನುವಿನ ಕಾಲದಿಂದ ಮುಂದೆ ಬಂದ ನವನಾಗರಿಕ ಸಮಾಜದಲ್ಲಿ ಮತ್ತೊಂದು ರೀತಿಯ ವಿನೂತನ ಸ್ವಾತಂತ್ರ್ಯ ಹರಣ ನಡೆದಿದೆ. ಅದೆಂದರೆ ಗಂಡನಿಗೆ ಹೆಂಡತಿಯ ಕೈಯಲ್ಲಿರುವ ಮೊಬೈಲ್ ಮೇಲೆ ವಕ್ರದೃಷ್ಟಿ, ಹೆಂಡತಿಗೆ ಗಂಡನ ಕೈಯಲ್ಲಿರುವ ಮೊಬೈಲ್ ಮೇಲೆ ವಕ್ರದೃಷ್ಟಿ, ಯಾರು ಯಾವ ಪ್ರೇಯಸಿ/ಪ್ರಿಯಕರನೊಂದಿಗೆ ಸರಸ ಸಲ್ಲಾಪ ಮಾಡುತ್ತಿದ್ದಾರೆಂದು ಮೊಬೈಲ್ ಕರೆ/SMS ಗಳ ತಪಾಸಣೆ, ಸಂಭಾಷಣೆಯನ್ನು ಆಲಿಸುವ ಕಳ್ಳಗಿವಿ ಮತ್ತು ಧ್ವನಿಮುದ್ರಿಕೆಯ ಬೇಹುಗಾರಿಕೆ. ಇದರಿಂದ ಉಂಟಾದ ವಿರಸ ದಾಂಪತ್ಯ ಪ್ರಕರಣಗಳು ಅದೆಷ್ಟೋ ನಮ್ಮ ನ್ಯಾಯಪೀಠದ ಮುಂದಿವೆ.
ನಾವು ಕಂಡಂತೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಪತಿ-ಪತ್ನಿಯರು ತಾವು ಸಂಪಾದಿಸಿದ ಹಣವನ್ನು ತಮ್ಮ ಸ್ವಂತ ಅಕೌಂಟಿನಲ್ಲಿಟ್ಟುಕೊಳ್ಳುತ್ತಾರೆ. ಕೌಟುಂಬಿಕ ಜೀವನದ ಖರ್ಚಿಗಾಗಿ ಇಬ್ಬರ ಹೆಸರಿನಲ್ಲಿ ಬೇರೊಂದು ಜಂಟಿ ಖಾತೆ ಇದ್ದು ಇಬ್ಬರೂ ಅದಕ್ಕೆ ತಮ್ಮ ಸಂಬಳದಲ್ಲಿ ಇಂತಿಷ್ಟು ಹಣವೆಂದು ಜಮಾ ಮಾಡುತ್ತಾರೆ. ಹಾಗೆ ಮಾಡಿದರೂ ಸಹ ಕೌಟುಂಬಿಕ ಸಮಸ್ಯೆ ಏನೂ ಬಗೆಹರಿಯುವುದಿಲ್ಲ. ಗಂಡ ತನ್ನ ಅಕೌಂಟಿನಲ್ಲಿರುವ ಹಣವನ್ನು ಯಾವುದಕ್ಕೆ ಖರ್ಚು ಮಾಡುತ್ತಾನೆ. ಹೆಂಡತಿ ತನ್ನ ಅಕೌಂಟಿನಲ್ಲಿರುವ ಹಣವನ್ನು ಯಾವುದಕ್ಕೆ ಖರ್ಚು ಮಾಡುತ್ತಾಳೆ ಎಂಬುದನ್ನು ಇಬ್ಬರೂ ಹದ್ದಿನ ಕಣ್ಣಿನಿಂದ ನೋಡುತ್ತಾರೆ. ಗಂಡ ಏನಾದರೂ ತನ್ನ ತಂದೆತಾಯಿ, ಸಹೋದರ/ಸಹೋದರಿಯರಿಗೆ, ಸಹಾಯ ಮಾಡಿದರೆ ಹೆಂಡತಿ ಆಕ್ಷೇಪಿಸುತ್ತಾಳೆ. ಅದೇ ರೀತಿ ಹೆಂಡತಿಯೇನಾದರೂ ತನ್ನ ಹೆತ್ತವರಿಗೆ ಅಣ್ಣ/ತಮ್ಮಂದಿರಿಗೆ ಖರ್ಚು ಮಾಡಿದರೆ ಗಂಡ ಸಿಡಿಮಿಡಿಗೊಳ್ಳುತ್ತಾನೆ. ಇದರಿಂದ ಇಬ್ಬರ ಮಧ್ಯೆ ವಿರಸ ಉಂಟಾಗಿ ವಿವಾಹ ವಿಚ್ಛೇದನಕ್ಕೂ ಕಾರಣವಾಗಿವೆ. ತಮ್ಮನ್ನು ಸಾಕಿ ಸಲಹಿ ದೊಡ್ಡವರನ್ನಾಗಿ ಮಾಡಿದವರಿಗೆ ನೆರವಾಗುವುದು ತಮ್ಮ ಕರ್ತವ್ಯ ಎಂದು ಯಾರೂ ಪರಿಭಾವಿಸುವುದಿಲ್ಲ.
ನವ ವಧೂವರರ ಮದುವೆ ಸಂದರ್ಭದಲ್ಲಿ ಸಾಂಪ್ರದಾಯಿಕವಾಗಿ ಅನೇಕ ಶಾಸ್ತ್ರಗಳನ್ನು ಅನುಸರಿಸಿ ಮಂಗಳ ವಾದ್ಯಗಳನ್ನು ಮೊಳಗಿಸಿ ತಾಳಿ ಕಟ್ಟಿಸುತ್ತಾರೆ. "ಮಾಂಗಲ್ಯತಂತುನಾನೇನ...", "ಧರ್ಮೇ ಚ ಅರ್ಥೇ ಚ ಕಾಮೇ ಚ ನಾತಿಚರಾಮಿ" ಇತ್ಯಾದಿ ಅರ್ಥಪೂರ್ಣವಾದ ಮಂತ್ರಗಳನ್ನು ಪುರೋಹಿತರು ತಮ್ಮ ಕಂಚಿನ ಕಂಠದಿಂದ ಹೇಳುತ್ತಾರೆ. ಈ ಮಂತ್ರಗಳ ಅರ್ಥವನ್ನು ತಿಳಿದುಕೊಳ್ಳುವ ವ್ಯವಧಾನ ಹಸೆ ಮಣೆಯ ಮೇಲೆ ಕುಳಿತ ಮದುಮಕ್ಕಳಿಗೂ ಇರುವುದಿಲ್ಲ; ಮದುವೆಗೆ ಬಂದ ಬಂಧು ಬಾಂಧವರಿಗೂ ಇರುವುದಿಲ್ಲ. ನಮ್ಮ ಆಶೀರ್ವಾದಕ್ಕೆಂದು ಬರುವ ಮದುಮಕ್ಕಳಿಗೆ ಅವರಿಗೆ ಸುಲಭವಾಗಿ ಅರ್ಥವಾಗುವ ಭಾಷೆಯಲ್ಲಿ ನಾವು ಹೇಳುವ ಕಿವಿಮಾತೆಂದರೆ ನಿಮ್ಮ ದಾಂಪತ್ಯ ಜೀವನ ಯಶಸ್ವಿಯಾಗಲು ನೀವು ಮಾಡಬೇಕಾದುದು:
"If you are wrong, you must accept it
If you are right, you must keep your mouth shut"
(ನೀವು ತಪ್ಪು ಮಾಡಿದರೆ ಅದನ್ನು ಒಪ್ಪಿಕೊಳ್ಳಬೇಕು,
ನಿಮ್ಮದು ಸರಿಯೆನಿಸಿದರೆ ಬಾಯಿ ಮುಚ್ಚಿಕೊಂಡು
ತೆಪ್ಪಗಿರಬೇಕು!)
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 24.10.2019