ಸ್ವತಂತ್ರ ಭಾರತದ ಪೂರ್ವೋತ್ತರ ಘಟನಾವಳಿಗಳ ಒಂದು ಪಕ್ಷಿನೋಟ
1939 ರಿಂದ 1945ರ ವರೆಗೆ ಸತತ ಆರು ವರ್ಷಗಳ ಕಾಲ ನಡೆದ ಎರಡನೆಯ ಮಹಾಯುದ್ಧ ಮುಕ್ತಾಯಗೊಂಡಿತ್ತು. ಜರ್ಮನಿ ಪರಾಭವಗೊಂಡಿತು. ಸರ್ವಾಧಿಕಾರಿ ಹಿಟ್ಲರ್ ಆತ್ಮಹತ್ಯೆ ಮಾಡಿಕೊಂಡ. ಇಂಗ್ಲೆಂಡ್, ಅಮೆರಿಕಾ ಮೊದಲಾದ ಮಿತ್ರ ರಾಷ್ಟ್ರಗಳು ಗೆಲುವು ಸಾಧಿಸಿದವು. "Success is not final, failure is not fatal: it is the courage to continue that counts" (ಗೆಲುವು ಕೊನೆಯಲ್ಲ, ಸೋಲು, ಸಾವಲ್ಲ, ಕೆಚ್ಚೆದೆಯಿಂದ ಮುನ್ನುಗ್ಗುವುದೇ ಬಹಳ ಮುಖ್ಯ) ಎಂದು ಹೇಳುತ್ತಿದ್ದ ಸರ್ ವಿನ್ಸ್ಟನ್ ಚರ್ಚಿಲ್ ಇಂಗ್ಲೆಂಡಿನ ಪ್ರಧಾನಿಯಾಗಿ ಎರಡನೆಯ ಮಹಾಯುದ್ಧದಲ್ಲಿ ವಿಜಯ ಸಾಧಿಸಿ "ಇಂಗ್ಲೆಂಡಿನ ಸಂರಕ್ಷಕ" ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಯುದ್ಧ ಮುಗಿದ ಮೇಲೆ ಬ್ರಿಟನ್ನಿನ ಲೇಬರ್ ಪಕ್ಷವು ಸಮ್ಮಿಶ್ರ ಸರಕಾರದಿಂದ ಹೊರ ಬಂದು ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಂಡಿತು. ಮುಂದಿನ ಸಾರ್ವತ್ರಿಕ ಚುನಾವಣೆ ನಡೆಯುವವರೆಗೂ ಕನ್ಸರ್ವೇಟಿವ್ ಪಕ್ಷದ ಚರ್ಚಿಲ್ ಸರಕಾರ ಮುಂದುವರಿಯಿತು. ಚುನಾವಣೆ ನಡೆದು ಫಲಿತಾಂಶ ಹೊರಬಿದ್ದಾಗ ಮಾಧ್ಯಮಗಳ ನಿರೀಕ್ಷೆ ಹುಸಿಯಾಗಿತ್ತು. ಮಹಾಯುದ್ಧದಲ್ಲಿ ಗೆಲುವು ಸಾಧಿಸಿಕೊಟ್ಟಿದ್ದ ಚರ್ಚಿಲ್ ಅವರ ಕನ್ಸರ್ವೇಟಿವ್ ಪಕ್ಷ ಹೀನಾಯವಾಗಿ ಸೋಲು ಅನುಭವಿಸಿತು. ಎಲ್ಲ ಲೆಕ್ಕಾಚಾರಗಳನ್ನು ಮೀರಿ ಕ್ಲೆಮೆಂಟ್ ಆಟ್ಲಿಯವರ ಲೇಬರ್ ಪಕ್ಷ ಬಹಳ ಅಂತರದಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದಿತು.
ಚರ್ಚಿಲ್ ದೇಶಕ್ಕಾಗಿ ಮಾಡಿದ ಸೇವೆಯನ್ನು ಬ್ರಿಟನ್ನಿನ ಜನರು ಅಷ್ಟು ಬೇಗ ಮರೆತು ಬಿಟ್ಟರೇ? ಎಂಬ ಪ್ರಶ್ನೆಗೆ "ಬ್ರಿಟಿಷ್ ನಾಗರಿಕರು ಭಾರತೀಯರಂತೆ ಘೋಷಣೆಗಳು ಮತ್ತು ಭಾವನೆಗಳಿಗೆ ಮನ ಸೋಲುವವರಲ್ಲ. ಚರ್ಚಿಲ್ ಬಗ್ಗೆ ಅಲ್ಲಿಯ ಜನರಿಗೆ ಇದ್ದ ಗೌರವಾದರಗಳೇನು ಕಡಿಮೆಯಾಗಿರಲ್ಲಿಲ್ಲ. ಭಯಭೀಕರವಾದ ಯುದ್ಧದ ಸಂದರ್ಭದಲ್ಲಿ ಅಪ್ರತಿಮ ಮೇಧಾವಿ ಚರ್ಚಿಲ್ ನೇತೃತ್ವದ ಕನ್ಸರ್‌ವೇಟಸ್ ವಾರ್ಟಿ ಇದ್ದುದು ಸರಿ ಆದರೆ ಶಾಂತಿಯುತವಾದ ದಿನಗಳಲ್ಲಿ ದೇಶದ ಆಡಳಿತ ನಡೆಸಲು ಲೇಬರ್ ಪಾರ್ಟಿಯೇ ಸರಿ ಎಂಬ ತೀರ್ಮಾನಕ್ಕೆ ಬ್ರಿಟಿಷ್ ನಾಗರಿಕರು ಬಂದಿದ್ದರು. ಒಂದು ರೀತಿಯಲ್ಲಿ ಆಟ್ಲಿಯವರ ಲೇಬರ್ ಪಾರ್ಟಿ ಅಧಿಕಾರಕ್ಕೆ ಬಂದದ್ದು ಒಳ್ಳೆಯದೇ ಆಯಿತು. ಭಾರತಕ್ಕೆ ಸ್ವಾತಂತ್ರ್ಯ ದೊರೆಯಲು ಅದು ನೆರವಾಯಿತು? ಎನ್ನುತ್ತಾರೆ ಸ್ವತಂತ್ರ ಭಾರತದ ಪೂರ್ವೋತ್ತರಗಳನ್ನು ಬಲ್ಲವರಾಗಿದ್ದ ನಾಡಿನ ಹಿರಿಯ ರಾಜಕೀಯ ಮುತ್ಸದ್ದಿ ಜಗಳೂರಿನ ಇಮಾಂ ಸಾಹೇಬರು ಜಾತಿಯಿಂದ ಮುಸ್ಲಿಮರಾಗಿದ್ದರೂ ನಮ್ಮ ಗುರು ಪಿತಾಮಹರಾದ ಶ್ರೀ ಗುರುಶಾಂತರಾಜ ದೇಶಿಕೇಂದ್ರ ಮಹಾಸ್ವಾಮಿಗಳವರ ಕಾಲದಿಂದಲೂ ನಮ್ಮ ಮಠದ ಪಟ್ಟ ಶಿಷ್ಯರಾಗಿದ್ದ ಅವರು ಜನಸಾಮಾನ್ಯರ ಬಾಯಲ್ಲಿ "ಇಮ್ಮಣ್ಣ, ಇಮ್ಮಣ್ಣ" ಎಂದೇ ಗೌರವಾದರಗಳಿಗೆ ಭಾಜನರಾಗಿದ್ದರು. ಮೈಸೂರು ಮಹಾರಾಜರ ಆಳ್ವಿಕೆಯಲ್ಲಿ ಸಚಿವರಾಗಿ ನಂತರ ಸ್ವತಂತ್ರ ಭಾರತದ ಸಂಸದರಾಗಿ ಸಕ್ರಿಯ ರಾಜಕಾರಣದಲ್ಲಿ ತೊಡಗಿದ್ದ ಅವರು ಅಖಂಡ ಭಾರತದ ಕನಸುಗಾರರಾಗಿದ್ದರು. 60 ರ ದಶಕದಲ್ಲಿ ಆಂಗ್ಲ ಭಾಷೆಯಲ್ಲಿ ಅವರು ಸ್ವತಃ ಬರೆದು ಅವರೇ ಟೈಪ್ ರೈಟರ್ ನಲ್ಲಿ ಟಂಕಣಿಸಿ ಶುದ್ದೀಕರಿಸಿದ ಹಸ್ತಪ್ರತಿಯು ನಮ್ಮ ಮಠದಿಂದ ಪ್ರಕಟಿಸಲು ಸಿದ್ಧಗೊಳ್ಳುತ್ತಿದ್ದು ಈ ಅಪ್ರಕಟಿತ ಗ್ರಂಥದಲ್ಲಿರುವ ಕೆಲವು ವಿಚಾರಗಳನ್ನು ಇಲ್ಲಿ ಕ್ರೋಢೀಕರಿಸಿ ನಿರೂಪಿಸಲಾಗಿದೆ.
ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟಿಷ್ ಸರಕಾರ ಜಪಾನ್ ವಿರುದ್ಧ ದಾಳಿ ಮಾಡಲು ಭಾರತೀಯರ ಸಹಕಾರವನ್ನು ಬಯಸಿತ್ತು. ಅಂದು ಸರಕಾರದ ಪರವಾಗಿ ಸರ್ ಸ್ಟಾಫೋರ್ಡ್ ಕ್ರಿಪ್ಸ್ ಎಂಬುವರು ಭಾರತಕ್ಕೆ ಬಂದು ಸ್ವಾತಂತ್ರ್ಯ ಚಳುವಳಿ ನಡೆಸುತ್ತಿದ್ದ ಕಾಂಗ್ರೆಸ್ ಮುಖಂಡರೊಂದಿಗೆ ಮಾತುಕತೆ ನಡೆಸಿದರು. ಭಾರತಕ್ಕೆ ಸಾರ್ವಭೌಮತ್ವವನ್ನು (Dominion Status) ಕೊಡುವುದಾಗಿ ಹೇಳಿ ಅವರ ಮನವೊಲಿಸುವ ಪ್ರಯತ್ನ ನಡೆಸಿದರು. ಆದರೆ ಮಹಾತ್ಮ ಗಾಂಧೀಜಿ ಸಮ್ಮತಿಸಲಿಲ್ಲ. ಮಾತುಕತೆ ವಿಫಲಗೊಂಡವು. ಯುದ್ಧಕ್ಕೆ ಸಹಕಾರ ನೀಡಲು ಒಪ್ಪದೆ ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಪಟ್ಟು ಹಿಡಿದ ಗಾಂಧೀಜಿ ಮತ್ತಿತರ ಕಾಂಗ್ರೆಸ್ ಮುಖಂಡರನ್ನು ಮಹಾಯುದ್ಧ ಮುಗಿಯುವವರೆಗೂ ಜೈಲಿಗೆ ತಳ್ಳಲಾಯಿತು. ಯುದ್ಧದ ಅನಂತರ ಬ್ರಿಟನ್ನಲ್ಲಿ ಚುನಾವಣೆ ನಡೆದು ಲೇಬರ್ ಪಕ್ಷ ಅಧಿಕಾರಕ್ಕೆ ಬಂದು ಆಟ್ಲಿ ಪ್ರಧಾನಿಯಾದ ಮೇಲೆ ಭಾರತಕ್ಕೆ ಸ್ವಾತಂತ್ರ್ಯ ಕೊಡಲು ನಿರ್ಧರಿಸಲಾಯಿತು. ಲಾರ್ಡ್ ಪೆತಿಕ್ ಲಾರೆನ್ಸ್, ಸರ್ ಸ್ಟಾಫೋರ್ಡ್ ಕ್ರಿಪ್ಸ್ ಮತ್ತು ಎ.ವಿ ಅಲೆಕ್ಸಾಂಡರ್ ಇವರನ್ನೊಳಗೊಂಡ ಒಂದು ತಂಡ ಇಂಗ್ಲೆಂಡಿನಿಂದ ಭಾರತಕ್ಕೆ ಬಂದಿತು. ಬ್ರಿಟಿಷ್ ಸರಕಾರ ಕೈಗೊಂಡ ನಿರ್ಧಾರವನ್ನು ಪ್ರಕಟಿಸಿ ತಮ್ಮದೇ ಸರಕಾರವನ್ನು ರಚಿಸಿಕೊಳ್ಳಲು ಬೇಕಾದ ಕಾರ್ಯವಿಧಾನವನ್ನು ರೂಪಿಸಿಕೊಳ್ಳಲು ಕಾಂಗ್ರೆಸ್, ಮುಖಂಡರಿಗೆ ಸೂಚಿಸಿದಾಗ ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿರುವ ರಾಜ್ಯಗಳನ್ನು ಪ್ರತ್ಯೇಕ ದೇಶವನ್ನಾಗಿ ಮಾಡಬೇಕೆಂದು ಜಿನ್ನಾ ನೇತೃತ್ವದ ಮುಸ್ಲಿಂ ಲೀಗ್ ದೇಶ ವಿಭಜನೆಯ ಪಟ್ಟು ಹಿಡಿಯಿತು. ಮಹಾತ್ಮಾ ಗಾಂಧೀಜಿ, ಮೌಲಾನಾ ಆಜಾದ್ ಮತ್ತು ಡಾ. ಸೈಯದ್ ಮಹಮ್ಮದ್ ಬಲವಾಗಿ ವಿರೋಧಿಸಿದರು. ಭಾರತದ ವೈಸ್ರಾಯ್ ಆಗಿದ್ದ ಲಾರ್ಡ್ ವೇವಲ್ ಅವರೊಂದಿಗೆ ನಡೆದ ಸುದೀರ್ಘ ಮಾತುಕತೆಯ ಅನಂತರ ಭಾರತವು ಒಂದು ಸಂಯುಕ್ತ ಸಂಸ್ಥಾನ. (Federal Government) ಆಗಬೇಕು. ಎಲ್ಲ ರಾಜ್ಯಗಳೂ ಇದಕ್ಕೆ ಸೇರ್ಪಡೆಯಾಗಬೇಕು, ಅವುಗಳಿಗೆ ಸಂಪೂರ್ಣ ಸ್ವಾಯತ್ತತೆ ಇರಬೇಕು, ವಿದೇಶಾಂಗ ವ್ಯವಹಾರ, ರಕ್ಷಣೆ ಮತ್ತು ಸಂಪರ್ಕ (Foreign Affairs, Defence and Communication) ಮಾತ್ರ ಫೆಡರಲ್ ಸರಕಾರಕ್ಕೆ ಇರಬೇಕು, ತನ್ನದೇ ಆದ ಸಂವಿಧಾನವನ್ನು ರೂಪಿಸಿಕೊಳ್ಳಲು ಒಂದು ರಾಜ್ಯಾಂಗ ವಿಧಾಯಕ ಸಭೆ (Constituent Assembly) ರಚನೆಯಾಗಬೇಕು ಎಂಬ ಪ್ರಸ್ತಾವನೆಗಳಿಗೆ ಕಾಂಗ್ರೆಸ್ ಮತ್ತು ಲೀಗ್ ಎರಡೂ ತಾತ್ಕಾಲಿಕವಾಗಿ ಒಪ್ಪಿಗೆ ನೀಡಿದವು. ಕಾಂಗ್ರೆಸ್ ವತಿಯಿಂದ ಜವಾಹರ್ ಲಾಲ್ ನೆಹರೂ, ಸರದಾರ್ ವಲ್ಲಭಾ ಬಾಯಿ ಪಟೇಲ್, ರಾಜಗೋಪಾಲಾಚಾರಿ, ಬಾಬು ರಾಜೇಂದ್ರ ಪ್ರಸಾದ್, ಜಗಜೀವನ್ ರಾಂ ಮತ್ತು ಮುಸ್ಲಿಂ ಲೀಗ್ ವತಿಯಿಂದ ಲಿವಖತ್ ಆಲಿಖಾನ್, ಅಬ್ದುಲ್ ರಬ್ ನಿಸ್ತಾರ್, ಮಂಡಲ್ ಇವರನ್ನೊಳಗೊಂಡ ಒಂದು ತಾತ್ಕಾಲಿಕ ಸರಕಾರ ಅಸ್ತಿತ್ವಕ್ಕೆ ಬಂದಿತು. ಸರದಾರ್ ವಲ್ಲಭಬಾಯಿ ಪಟೇಲ್ರವರು ಗೃಹಮಂತ್ರಿಗಳಾದರು; ಲಿವಾಖತ್ ಆಲಿ ಖಾನ್ ಹಣಕಾಸು ಸಚಿವರಾದರು, ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿಗೆ ನೀಡಿದ್ದ ಮುಸ್ಲಿಂ ಲೀಗ್ ಮಂತ್ರಿಗಳು ಸರಕಾರವು ಸುಗಮವಾಗಿ ಕಾರ್ಯ ನಿರ್ವಹಿಸಲು ಸಹಕಾರ ನೀಡಲಿಲ್ಲ. ಭಾರತದ ಸಂವಿಧಾನವನ್ನು ರೂಪಿಸಲು ನೇಮಕಗೊಂಡಿದ್ದ ರಾಜ್ಯಾಂಗ ವಿಧಾಯಕ ಸಭೆಯಲ್ಲಿ ಭಾಗವಹಿಸಲು ಮುಸ್ಲಿಂ ಲೀಗ್ ಪ್ರತಿನಿಧಿಗಳು ನಿರಾಕರಿಸಿದರು. ಅಖಂಡ ಭಾರತದ ಸ್ವಾತಂತ್ರ್ಯಕ್ಕಾಗಿ ಒಟ್ಟುಗೂಡಿ ಹೋರಾಟ ಮಾಡಿದ್ದ ಮುಸ್ಲಿಂ ಲೀಗ್ ಮುಖಂಡರ ಹಠಮಾರಿತನದಿಂದಾಗಿ ಕೊನೆಗೂ ದೇಶವು ಭಾರತ ಮತ್ತು ಪಾಕಿಸ್ತಾನಗಳಾಗಿ ವಿಭಜನೆಗೊಂಡು ರಕ್ತದ ಮಡುವಿನಲ್ಲಿ ಮುಳುಗುವಂತಾಯಿತು. ಜೀವನದುದ್ದಕ್ಕೂ ಅಹಿಂಸೆಯ ಮಂತ್ರವನ್ನು ಜಪಿಸುತ್ತಾ “ಈಶ್ವರ ಅಲ್ಲಾ ತೇರೇ ನಾಮ್ ಸಬ್ ಕೋ ಸನ್ಮತಿ ದೇ ಭಗವಾನ್" ಎಂದು ಎಲ್ಲರನ್ನೂ ಒಂದು ಮಾಡುತ್ತಾ ಬಂದ ಪ್ರಾರ್ಥನಾ ಸಭೆಯೇ ಮಸಣದ ತಾಣವಾಗಿ ಗಾಂಧೀಜಿಯವರ ಭೌತಿಕ ಶರೀರವನ್ನು ಚಿತೆಗೇರುವಂತೆ ಮಾಡಿತು.
ಗಾಂಧೀಜಿಯವರ ಕೃಪೆಯಿಂದ ಜವಾಹರ ಲಾಲ್ ನೆಹರೂ ಪ್ರಶ್ನಾತೀತ ನೇತಾರರಾಗಿ ಹೊರಹೊಮ್ಮಿ ಭಾರತದ ಮೊದಲ ಪ್ರಧಾನಿಯಾದರು. ನೆಹರೂರವರನ್ನು ಸರಿಗಟ್ಟಬಲ್ಲ ಛಾತಿಯುಳ್ಳ ಧೀಮಂತ ನಾಯಕರು ಅನೇಕರು ಇದ್ದರೂ ಇಲ್ಲದಂತಿದ್ದರು. ಸುಭಾಶ್ಚಂದ್ರ ಭೋಸರು ಜೀವಂತ ಇದ್ದರೆ ನೆಹರೂ ಅವರಿಗೆ ಬಲವಾದ ಪ್ರತಿಸ್ಪರ್ಧಿಯಾಗುತ್ತಿದ್ದರು. ಅವರು ಅನೇಕ ವಿಚಾರಗಳಲ್ಲಿ ಗಾಂಧೀಜಿಯವರನ್ನು ಒಪ್ಪುತ್ತಿರಲಿಲ್ಲ. ಗಾಂಧೀಜಿ ಸೂಚಿಸಿದ್ದ ಪಟ್ಟಾಭಿ ಸೀತಾರಾಮಯ್ಯನವರನ್ನು ಸೋಲಿಸಿ ಕಾಂಗ್ರೆಸ್ ಅಧ್ಯಕ್ಷ ಗಾದಿಯನ್ನೇರಿದ ಛಲಗಾರರು ಅವರು. ಇವರಂತೆ ಇನ್ನೊಬ್ಬ ಧೀಮಂತ ನಾಯಕರೆಂದರೆ ಜಯಪ್ರಕಾಶ ನಾರಾಯಣ್ರವರು. ಸ್ವಾತಂತ್ರ್ಯ ಚಳುವಳಿಯಲ್ಲಿ ಲೋಕನಾಯಕರೆಂದೇ ಖ್ಯಾತಿವೆತ್ತ ಅವರು ಯಾವುದೇ ರಾಜಕೀಯ ಸ್ಥಾನಮಾನಗಳನ್ನು ಬಯಸಿದವರಲ್ಲ. ಸರ್ವೋದಯ ಕಾರ್ಯದಲ್ಲಿ ನಿರತರಾಗಿದ್ದವರು. 7ರ ದಶಕದಲ್ಲಿ ಆಗಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರ ವಿರುದ್ಧ ಬಂಡೆದ್ದು ದೇಶಾದ್ಯಂತ ಸಂಚರಿಸಿ ಯುವಕರನ್ನು ಹುರಿದುಂಬಿಸಿ "ಸಮಗ್ರ ಕ್ರಾಂತಿ"ಯ ಕಹಳೆಯನ್ನು ಮೊಳಗಿಸಿದವರು. ಮತ್ತೊಬ್ಬ ಧೀಮಂತ ನಾಯಕರೆಂದರೆ ಸರದಾರ್ ವಲ್ಲಭಬಾಯಿ ಪಟೇಲರು. ಅವರು ನೆಹರೂ ಅವರಿಗಿಂತ ಹೆಚ್ಚು ದಕ್ಷರೂ, ವ್ಯವಹಾರ ಚತುರರೂ ಆಗಿದ್ದರು. ಭಾರತ ಸ್ವತಂತ್ರಗೊಂಡ ಮೇಲೆ ತಾಂತ್ರಿಕವಾಗಿಬ್ರಿಟಿಷರ ಆಧಿಪತ್ಯದಿಂದ ಮುಕ್ತಗೊಂಡ ಎಲ್ಲ ರಾಜ ಮಹಾರಾಜರ ಸ್ವತಂತ್ರ ಆಳ್ವಿಕೆಯ ಹಕ್ಕನ್ನು ಪಡೆದವರಾದರು. "ಉಕ್ಕಿನ ಮನುಷ್ಯ" ಎಂದೇ ಖ್ಯಾತಿವೆತ್ತ ಸರದಾರ್ ವಲ್ಲಭಬಾಯಿ ಪಟೇಲ್ ಆಗಿನ ರಾಜ-ಮಹಾರಾಜರುಗಳನ್ನು ಒಡಂಬಡಿಸಿ, ಅವರ ರಾಜ್ಯಗಳನ್ನು ಸ್ವತಂತ್ರ ಭಾರತದಲ್ಲಿ ವಿಲೀನಗೊಳ್ಳುವಂತೆ ಮಾಡಿ ಅವಶ್ಯಕತೆ ಇದ್ದೆಡೆಯಲ್ಲಿ ಸೇನೆಯನ್ನು ನುಗ್ಗಿಸಿ ಎಲ್ಲ ರಾಜ್ಯಗಳನ್ನು ಒಂದುಗೂಡಿಸಿ ಅಖಂಡ ಭಾರತವನ್ನು ನಿರ್ಮಾಣ ಮಾಡಿದವರು.
ಕಾಶ್ಮೀರದಲ್ಲಿ ಬಹು ಸಂಖ್ಯಾತರು ಮುಸ್ಲಿಮರಾಗಿದ್ದರೂ ಅದನ್ನು ಆಳುತ್ತಿದ್ದವರು ಹಿಂದೂ ದೊರೆ. ಸ್ವತಂತ್ರ ಭಾರತದಲ್ಲಿ ವಿಲೀನಗೊಳಿಸಲು ಮರುಮಾತಿಲ್ಲದೆ ಒಪ್ಪಿಗೆ ನೀಡಿದರು. ಅಲ್ಲಿಯ ಜನರು ಸಹ ಭಾರತದಲ್ಲಿಯೇ ಇರಲು ಒಲವು ತೋರಿಸಿದರು. ಇದು ತಮಗೆ ಸೇರಬೇಕೆಂದು ಪಾಕಿಸ್ತಾನ ತಂಟೆ ಮಾಡಿದಾಗ ಸರದಾರ್ ಪಟೇಲರು ಯಶಸ್ವಿಯಾಗಿ ಮಿಲಿಟರಿ ಕಾರ್ಯಾಚರಣೆ ಕೈಗೊಂಡರು. ನೆಹರೂ ಅವರು ಅನಾವಶ್ಯಕವಾಗಿ ಈ ಪ್ರಕರಣವನ್ನು ವಿಶ್ವ ಸಂಯುಕ್ತ ರಾಷ್ಟ್ರ ಸಂಸ್ಥೆಗೆ ತೆಗೆದುಕೊಂಡು ಹೋಗಿ ತಪ್ಪು ಮಾಡಿದರು. ಈ ವಿವಾದವು ದಶಕಗಳಿಂದ ಎರಡೂ ರಾಷ್ಟ್ರಗಳ ಮಧ್ಯೆ ದ್ವೇಷದ ದಳ್ಳುರಿ ಹಬ್ಬುವಂತೆ ಮಾಡಿದೆ. ಎರಡೂ ದೇಶಗಳ ಜನಸಾಮಾನ್ಯರ ಅಭ್ಯುದಯಕ್ಕೆ ಬಳಕೆಯಾಗಬೇಕಾಗಿದ್ದ ಕೋಟ್ಯಂತರ ರೂ. ಗಳು ಗಡಿಪ್ರದೇಶ ಕಾಯಲು ಮಿಲಿಟರಿ ಕಾರ್ಯಾಚರಣೆಗೆ ಬಳಕೆಯಾಗುತ್ತಿರುವುದು ವಿಷಾದನೀಯ.
ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಂಸ್ಥೆಯನ್ನು ವಿಸರ್ಜಿಸಬೇಕು. ಅದು ತನ್ನ ಗುರಿಯನ್ನು ಸಾಧಿಸಿದೆ. ಇನ್ನು ಮುಂದೆ ಅದನ್ನು ಒಂದು ರಾಜಕೀಯ ಪಕ್ಷವನ್ನಾಗಿಸಿ ಅದರ ಗೌರವ ಘನತೆಗಳನ್ನು ಕಳೆಯಬಾರದು. ಸ್ವತಂತ್ರ ಭಾರತದಲ್ಲಿ ಯಾರು ಬೇಕಾದರೂ ಅವರವರ ಆದರ್ಶ ತತ್ವಗಳಿಗೆ (ideologies) ಅನುಗುಣವಾಗಿ ಹೊಸ ಹೊಸ ಪಕ್ಷಗಳನ್ನು ಕಟ್ಟಿಕೊಳ್ಳಬಹುದು ಎಂಬುದು ಮಹಾತ್ಮಾ ಗಾಂಧೀಜಿಯವರ ಆಶಯವಾಗಿತ್ತು. ಆದರೆ ಅಧಿಕಾರದ ಗದ್ದುಗೆಯನ್ನೇರಲು ತವಕಿಸುತ್ತಿದ್ದ ಕಾಂಗ್ರೆಸ್ಸಿಗರು ಆ ಹೆಸರು ಇದ್ದರೇನೇ ಅಧಿಕಾರದ ಚುಕ್ಕಾಣಿ ಹಿಡಿಯಲು ದಾರಿ ಸುಗಮ ಎಂದು ಕಾಂಗ್ರೆಸ್ ಸಂಸ್ಥೆಯನ್ನು ವಿಸರ್ಜಿಸಲು ಇಂಬುಗೊಡಲಿಲ್ಲ.
"The days of sacrifice came to an end and the era of power and corruption commenced!" ( ಸೇವೆ ಮತ್ತು ತ್ಯಾಗ ಭಾವನೆಯ ದಿನಗಳು ಕೊನೆಗೊಂಡವು; ಅಧಿಕಾರ ಲಾಲಸೆ ಮತ್ತು ಭ್ರಷ್ಟಾಚಾರಗಳ ಯುಗ ಆರಂಭಗೊಂಡಿತು. -ಜೆ. ಮಹಮ್ಮದ್ ಇಮಾಮ್).
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 15.8.2019