ಪುಸ್ತಕ ಓದುವ ಹವ್ಯಾಸ ಉಳ್ಳವರಿಗೆ ಒಂಟಿತನ ಕಾಡಿಸುವುದಿಲ್ಲ

  •  
  •  
  •  
  •  
  •    Views  

ರಡು ವಾರಗಳ ಹಿಂದೆ (ನವೆಂಬರ್ 7) ದಾವಣಗೆರೆ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದಲ್ಲಿ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವಿತ್ತು. ವಿಷಯ: "ಮಧ್ಯ ಕರ್ನಾಟಕದ ಕನ್ನಡ ಸಾಹಿತ್ಯ ತಾತ್ವಿಕ ನೆಲೆಗಳು". ಕುಲಪತಿಗಳಾದ ಪ್ರೊಫೆಸರ್ ಶರಣಪ್ಪ ವಿ.ಹಲಸೆಯವರು ನಮ್ಮನ್ನು ಅತ್ಯಂತ ಗೌರವಾದರಗಳಿಂದ ಬರಮಾಡಿಕೊಂಡಿದ್ದರು. ಅದಕ್ಕೆ ವಿಶೇಷ ಕಾರಣವೆಂದರೆ ಈ ವಿಶ್ವವಿದ್ಯಾನಿಲಯದ ಸ್ಥಾಪನೆಗೆ ನಮ್ಮ ಮಠ ವಹಿಸಿದ ಪಾತ್ರ. 2009ರಲ್ಲಿ ದಾವಣಗೆರೆಯಲ್ಲಿ ನಮ್ಮ ಮಠದ ವಾರ್ಷಿಕ ಸಮಾರಂಭವಾದ ತರಳಬಾಳು ಹುಣ್ಣಿಮೆ ಮಹೋತ್ಸವ ನಡೆದಾಗ ಆಗಲೂ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್. ಯಡಿಯೂರಪ್ಪನವರು ನಮ್ಮ ಒತ್ತಾಸೆಗೆ ಮಣಿದು ಮಧ್ಯ ಕರ್ನಾಟಕದ ಕೇಂದ್ರ ಸ್ಥಾನವಾದ ದಾವಣಗೆರೆಯಲ್ಲಿ ನೂತನ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವುದಾಗಿ ಘೋಷಣೆ ಮಾಡಿದ್ದು ಈ ಭಾಗದ ಜನರಿಗೆ ಅಪಾರ ಹರ್ಷವನ್ನುಂಟುಮಾಡಿತ್ತು. ಅದರಂತೆ ಶಿವಗಂಗೋತ್ರಿಯಲ್ಲಿ ಅಸ್ತಿತ್ವಕ್ಕೆ ಬಂದ ನೂತನ ವಿಶ್ವವಿದ್ಯಾನಿಲಯವು ಕಳೆದ ಹತ್ತು ವರ್ಷಗಳ ಕಾಲಾವಧಿಯಲ್ಲಿ ಸುಂದರವಾಗಿ ರೂಪುಗೊಂಡಿರುವುದನ್ನು ತೋರಿಸಬೇಕೆಂಬ ಒತ್ತಾಸೆ ಕುಲಪತಿಗಳಾದ ಪ್ರೊಫೆಸರ್ ಹಲಸೆಯವರದಾಗಿತ್ತು. ವಿಚಾರ ಸಂಕಿರಣ ನಮ್ಮನ್ನು ಬರಮಾಡಿಕೊಳ್ಳಲು ಒಂದು ನೆಪ ಮಾತ್ರವಾಗಿತ್ತು. ಯಾರದಾದರೂ ಬುದ್ಧಿಯನ್ನು ಹಾಳು ಮಾಡಬೇಕೆಂದಿದ್ದರೆ ಅವರನ್ನು ಯಾವುದಾದರೂ ವಿಶ್ವವಿದ್ಯಾನಿಲಯದ ಕುಲಪತಿಗಳನ್ನಾಗಿ ಮಾಡಬೇಕೆಂದು ರಾಷ್ಟ್ರಕವಿ ಕುವೆಂಪುರವರು ಮೈಸೂರು ವಿವಿಯ ಕುಲಪತಿಗಳಾಗಿದ್ದಾಗ ಹೇಳುತ್ತಿದ್ದರಂತೆ. ನಮ್ಮ ಸ್ವಂತ ಅನುಭವದಲ್ಲಿ ಅವರ ಈ ಮಾತನ್ನು ಮುಂದುವರೆಸಿ ಯಾರಾದರೂ ಬುದ್ಧಿಯನ್ನು  ಹಾಳುಮಾಡಬೇಕೆಂದಿದ್ದರೆ ಅವರನ್ನು ಒಂದು ಮಠದ ಸ್ವಾಮಿಗಳನ್ನಾಗಿ ಮಾಡಬೇಕೆಂದು ಹೇಳಬೇಕೆನ್ನಿಸುತ್ತದೆ. ಮಠಗಳಲ್ಲಿ ಆಧ್ಯಾತ್ಮಿಕ ಹಾಗೂ ಬೌದ್ಧಿಕ ಚಿಂತನೆಗಳಿಗಿಂತ ವ್ಯಾವಹಾರಿಕ ಹಗ್ಗಜಗ್ಗಾಟಗಳೇ ಜಾಸ್ತಿ. ಇದರಿಂದ ರೋಸಿ ಹೋಗಿರುವ ನಮಗೆ ಕುಲಪತಿಗಳ ಆಹ್ವಾನ ತವರುಮನೆಯಿಂದ ಬಂದ ಕರೆಯಂತಾಗಿತ್ತು! ಹತ್ತಿಪ್ಪತ್ತು ವರ್ಷಗಳ ಕಾಲ ದೇಶ ವಿದೇಶಗಳ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ, ಅಧ್ಯಾಪನ ಮತ್ತು ಸಂಶೋಧನೆಗಳಲ್ಲಿ ತೊಡಗಿದ್ದ ನಮಗೆ ಉತ್ತರ ರಾಮಚರಿತದಲ್ಲಿ ಮಹಾಕವಿ ಭವಭೂತಿ ವರ್ಣಿಸುವಂತೆ “ತೇ ಹಿ ನೋ ದಿವಸಾ ಗತಾಃ” ಎಂದು ಪರಿತಪಿಸುವಂತಾಗಿದೆ.

ವಿಚಾರ ಸಂಕಿರಣದ ಆರಂಭದಲ್ಲಿ ಕೆಲವು ಪುಸ್ತಕಗಳನ್ನು ಬಿಡುಗಡೆ ಮಾಡಿದಾಗ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊಫೆಸರ್ ಎಸ್.ಬಿ.ರಮೇಶ್ ಅವರು "ಈಗ ಅಂತರಜಾಲದಲ್ಲಿಯೇ E-Books ದೊರೆಯುವುದರಿಂದ ಮುದ್ರಿತ ಪುಸ್ತಕಗಳನ್ನು ಓದುವ ಹವ್ಯಾಸ ಕಡಿಮೆಯಾಗಿದೆ" ಎಂಬ ವಾದವನ್ನು ತಳ್ಳಿಹಾಕಿದರು. ಆಸ್ಪತ್ರೆಗೆ ರೋಗಿಗಳನ್ನು ಅಂಬುಲೆನ್ಸ್ನಲ್ಲಿ ಕರೆದುಕೊಂಡು ಹೋದಂತೆ ಹಂಪಿ ವಿಶ್ವವಿದ್ಯಾನಿಲಯವು ವಾಹನದಲ್ಲಿ ಪುಸ್ತಕಗಳನ್ನು ತುಂಬಿಕೊಂಡು ಹಳ್ಳಿ ಹಳ್ಳಿಗಳಿಗೆ ಹೋಗಿ ಮಾರಾಟ ಮಾಡುವ ವಿನೂತನ ಯೋಜನೆಯನ್ನು ಜಾರಿಗೆ ತಂದಿದ್ದು ಕೆಲವೇ ದಿನಗಳ ಹಿಂದೆಯಷ್ಟೇ 6 ಲಕ್ಷ ರೂ.ಗಳಿಗೂ ಹೆಚ್ಚು ಮೌಲ್ಯದ ಪುಸ್ತಕಗಳು ಮಾರಾಟವಾಗಿವೆ. ಆದಕಾರಣ ಮುದ್ರಿತ ಪುಸ್ತಕಗಳ ಓದುಗರ ಸಂಖ್ಯೆ ಕಡಿಮೆಯಾಗಿಲ್ಲ ಎಂದು ಸಮರ್ಥಿಸಿಕೊಂಡರು. ಕುಲಪತಿಗಳ ಮಾತು ನಿಜ. ಇದೇ ರೀತಿ ಅಂತರಜಾಲದಲ್ಲಿ E-Paperಗಳು ಲಭ್ಯವಿದ್ದರೂ ಮುದ್ರಿತ ದಿನಪತ್ರಿಕೆಗಳ ಓದುಗರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ವಿದೇಶಗಳಲ್ಲಿರುವ ಅನಿವಾಸಿ ಭಾರತೀಯರು ಅಂತಹ ಆವೃತ್ತಿಗಳನ್ನು ಅನಿವಾರ್ಯವಾಗಿ ಓದುತ್ತಾರೆ. ಆದರೆ ಗಣಕಯಂತ್ರದಲ್ಲಿ ಅಥವಾ ಮೊಬೈಲಿನ ಪುಟ್ಟ ಪರದೆಯ ಮೇಲೆ E-Paper ಗಳನ್ನು ಓದಬಹುದಾದರೂ ಮುದ್ರಿತ ಪತ್ರಿಕೆಯನ್ನು ಓದಿದಾಗ ದೊರೆಯುವ ಸಂತೋಷ ಖಂಡಿತಾ ಸಿಗಲಾರದು. E-Paper ಗಳು ಕಣ್ಣಿಗೆ ಪಟ್ಟಿ ಕಟ್ಟಿದ ಟಾಂಗಾ ಕುದುರೆಗಳಿದ್ದಂತೆ! ಮುದ್ರಿತ ಪತ್ರಿಕೆಗಳು ಯಾವ ನಿರ್ಬಂಧವೂ ಇಲ್ಲದೆ ತೆರೆದ ಮೈದಾನದಲ್ಲಿ ಓಡುವ ಕುದುರೆಗಳಿದ್ದಂತೆ ಎಂದು ನಮಗೆ ಅನ್ನಿಸುತ್ತದೆ. "

ಪುಸ್ತಕಗಳ ಮಹತ್ರ ಬಹಳ ದೊಡ್ಡದು. "Home without books is a body without soul (ಪುಸ್ತಗಳಿಲ್ಲದ ಮನೆ ಆತ್ಮವಿಲ್ಲದ ದೇಹದಂತೆ) ಎಂಬ ಉಕ್ತಿ ಇಂಗ್ಲೀಷಿನಲ್ಲಿದೆ. ಸುತ್ತಲೂ ಪುಸ್ತಕಗಳಿದ್ದರೆ ಲೇಖಕರು “ಹೊತ್ತು ಹೋಗುವುದೆನಗೆ ಸತ್ತವರ ಸಂಗದಲಿ" ಎನ್ನುವ ಕವಿವಾಣಿಯಂತೆ ಕಾಲದ ಪರಿಧಿಯನ್ನು ಮೀರಿ ಗತಿಸಿ ಹೋದವರ ಜೀವನಾನುಭವವನ್ನು ನಮ್ಮದಾಗಿಸಿಕೊಂಡು ನೆಮ್ಮದಿಯಿಂದ ಬದುಕಬಹುದು. ಲೇಖಕರು ದೈಹಿಕವಾಗಿ ಕಣ್ಮುಂದೆ ಇಲ್ಲದಿದ್ದರೂ ಅಕ್ಷರಲೋಕದಲ್ಲಿ ಚಿರಂಜೀವಿಗಳಾಗಿರುವ ಮಹನೀಯರ ಸಹವಾಸ ಪುಸ್ತಕಗಳ ಮೂಲಕ ಸದಾ ಲಭಿಸುತ್ತದೆ. ಗ್ರಂಥಾಲಯಗಳ ಕಪಾಟುಗಳನ್ನು ಎಡತಾಕುವ ಓದುಗ ಮಕರಂದವನ್ನು ಅರಸಿ ಹೊರಟ ದುಂಬಿಯಂತೆ! ಹುಡುಕುವ ಪುಸ್ತಕ ಕೈಗೆಟಕಿದರೆ ಅರಸುವ ಬಳ್ಳಿ ಕಾಲಿಗೆ ತೊಡರಿದಂತೆ ಖುಷಿಯುಂಟಾಗುತ್ತದೆ! ಜ್ಞಾನ ಪಿಪಾಸುವಾದ ಓದುಗನಿಗೆ ಹಸಿವು ನೀರಡಿಕೆ ಎಂಬುದು ಇರುವುದಿಲ್ಲ.

"ಹಸಿವಾದೊಡೆ ಭಿಕ್ಷಾನ್ನಗಳುಂಟು, ತೃಷೆಯಾದೊಡೆ ಕೆರೆ ಹಳ್ಳ ಬಾವಿಗಳುಂಟು, ಶಯನಕ್ಕೆ ಹಾಳು ದೇಗುಲಗಳುಂಟು, ಆತಸಂಗಾತಕ್ಕೆ ಚೆನ್ನಮಲ್ಲಿಕಾರ್ಜುನಯ್ಯಾ ನೀನೆನಗುಂಟು" ಎನ್ನುತ್ತಾಳೆ ಅಕ್ಕಮಹಾದೇವಿ. ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚೆಲುವಂಗೆ ಒಲಿದ ಅಕ್ಕ ತಾನು ಒಬ್ಬಂಟಿಗಳಲ್ಲ ಎಂದು ಪ್ರತಿಪಾದಿಸುತ್ತಾಳೆ. ತನ್ನೊಳಗೆ ಸದಾ ನೆಲೆಸಿರುವ ದೇವರನ್ನೇ ಆತ್ಮಸಂಗಾತಿ ಎಂದು ಪರಿಭಾವಿಸುವ ಆಕೆಗೆ ಒಂಟಿತನ ಎಂದೂ ಕಾಡಿಸಲಿಲ್ಲ. ಹಾಗೆಯೇ -ಪುಸ್ತಕಗಳನ್ನು ಓದುವ ಹವ್ಯಾಸವುಳ್ಳವರಿಗೆ ಒಂಟಿತನ ಎಂದೂ ಕಾಡುವುದಿಲ್ಲ. ಮನುಷ್ಯನ ಬದುಕನ್ನು ಸದಾ ಪರಿವರ್ತನೆ ಮಾಡಬಲ್ಲ ಮಹನೀಯರ ಆತ್ಮಸಂಗಾತದಲ್ಲಿ ಅವರು ಸದಾ ಇರುತ್ತಾರೆ. ಪುಸ್ತಕಗಳ ರೂಪದಲ್ಲಿ ಉನ್ನತ ಚಿಂತಕರು ಸದಾ ಜೀವಂತವಾಗಿದ್ದು ಅವರ ಬದುಕನ್ನು ರೂಪಿಸುತ್ತಾರೆ.

ಪುಸ್ತಕಗಳಿಗೆ ಮನುಷ್ಯನ ಬದುಕಿನ ಚಿಂತನೆಯ ದಿಕ್ಕನ್ನೇ ಬದಲಿಸುವ ಕ್ಷಮತೆ ಇದೆ. ಮಹಾತ್ಮಾ ಗಾಂಧೀಜಿಯವರು ಸರ್ವೋದಯ ತತ್ತ್ವದ ಪ್ರತಿಪಾದನೆ ಮಾಡಿದ್ದು ಒಂದು ಪುಸ್ತಕದ ಓದಿನ ಸ್ಪೂರ್ತಿಯಿಂದ ಜಾನ್ ರಸ್ಕಿನ್ ನ "Unto this Last" ಎಂಬ ಗ್ರಂಥವನ್ನು ಗಾಂಧೀಜಿ  ರೈಲು ಪ್ರಯಾಣದ ಸಂದರ್ಭದಲ್ಲಿ ಓದಿದರು. ರಸ್ಕಿನ್ ಮಹಾಶಯ ಕೈಗಾರಿಕಾ ಕ್ರಾಂತಿಯ ಸಂದರ್ಭದಲ್ಲಿ ಶ್ರಮಿಕ ವರ್ಗ ಅನುಭವಿಸಿದ ದುರ್ಭರ ಪ್ರಸಂಗಗಳನ್ನು ಆ ಗ್ರಂಥದಲ್ಲಿ ಕಟ್ಟಿ ಕೊಟ್ಟಿದ್ದಾನೆ. ಅದು ಗಾಂಧೀಜಿಯವರ ಮನಸ್ಸನ್ನು ಸೆಳೆದು ಸರ್ವೋದಯ ಚಿಂತನೆಗೆ ನಾಂದಿ ಹಾಡಿತು! ಆ ಗ್ರಂಥವನ್ನು ಮುಂದೆ ಗಾಂಧೀಜಿಯವರೇ ಗುಜರಾತಿ ಭಾಷೆಗೆ ಅನುವಾದ ಮಾಡಿದರು. ಅನುವಾದದ ಶೀರ್ಷಿಕೆ "ಸರ್ವೋದಯ!”

"ಪುಸ್ತಕ ಬಿಡುಗಡೆ" ಅಥವಾ "ಗ್ರಂಥ ಬಿಡುಗಡೆ" ಎಂಬ ಶಬ್ದಗಳು ಈಗ ಬಳಕೆ ಆಗುವುದು ಅತಿ ಕಡಿಮೆ. ಬದಲಾಗಿ ಈಗ "ಪುಸ್ತಕ ಲೋಕಾರ್ಪಣೆ" ಅಥವಾ "ಗ್ರಂಥ ಲೋಕಾರ್ಪಣೆ" ಎಂಬ ಪದಪುಂಜಗಳು ಚಾಲ್ತಿಗೆ ಬಂದಿವೆ. ಇಂಗ್ಲಿಷ್ನಲ್ಲಿ Book Release ಎಂಬುದು ಹಿಂದೆಯೂ ಇತ್ತು; ಈಗಲೂ ಇದೆ.  "Dedication to the World" ಎಂದು ಬದಲಾಗಿಲ್ಲ! ಕನ್ನಡಕ್ಕೆ ಅನೇಕ ಸಂಸ್ಕೃತ ಶಬ್ದಗಳು ಆಮದಾಗಿ ಬಂದಿದ್ದರೂ ಕನ್ನಡದಲ್ಲಿ ಈ ಹಿಂದೆ "ಲೋಕಾರ್ಪಣೆ" ಎಂಬ ಶಬ್ದದ ಬಳಕೆ ಇರಲಿಲ್ಲ. "ಲೋಕ" ಮತ್ತು "ಅರ್ಪಣೆ" ಎಂಬೆರಡು ಶಬ್ದಗಳು ಪ್ರತ್ಯೇಕವಾಗಿ ಬಳಕೆಯಲ್ಲಿವೆ. ಪುಸ್ತಕದ ಆರಂಭದ ಪುಟದಲ್ಲಿ ಲೇಖಕರು ತಮ್ಮ ಆತ್ಮೀಯರ ಗೌರವಾರ್ಥ "ಅರ್ಪಣೆ" ಮಾಡುವುದು ಸರ್ವವಿದಿತ. "ಪುಸ್ತಕ ಬಿಡುಗಡೆ" ಎಂಬರ್ಥದಲ್ಲಿ "ಲೋಕಾರ್ಪಣೆ" ಎಂಬ ಶಬ್ದ ಪ್ರಯೋಗ ಸಂಸ್ಕೃತದಿಂದ ನೇರವಾಗಿ ಕನ್ನಡಕ್ಕೆ ಬಂದಿಲ್ಲವೆನಿಸುತ್ತದೆ. ಹಿಂದಿಯ ಪ್ರಭಾವ ಕನ್ನಡದ ಮೇಲೆ ಆಗಿರುವ ಕಾರಣದಿಂದ ಅಲ್ಲಿಂದ ಕನ್ನಡಕ್ಕೆ ಆಮದಾಗಿರುವ ಶಬ್ದ "ಲೋಕಾರ್ಪಣೆ", ಅದು ಕನ್ನಡದ "ಪುಸ್ತಕ ಬಿಡುಗಡೆ" ಶಬ್ದಪ್ರಯೋಗವನ್ನು ಮೂಲೆಗೆ ತಳ್ಳಿದೆ. "ಲೋಕಾರ್ಪಣೆ" ಎಂಬುದು ಗ್ರಂಥಗಳಿಗೆ ಮಾತ್ರ ಸೀಮಿತವಾಗಿಲ್ಲ. ಸಾರ್ವಜನಿಕರಿಗೆ ಉಪಯೋಗವಾಗುವ ಯಾವುದೇ ಯೋಜನೆ, ಕಟ್ಟಡ, ಜಲಾಶಯ ಲೋಕಾರ್ಪಣೆ ಆಗಬಹುದು. ಲೋಕಾರ್ಪಣೆ ಒಂದು ಒಳ್ಳೆಯ ಸುಸಂಸ್ಕೃತ ಶಬ್ದವಾದರೂ "ಪುಸ್ತಕ ಬಿಡುಗಡೆ" ಎಂಬುದರ ಪರ್ಯಾಯ ಆಗಲಾರದು. ಹಿಂದಿಯಿಂದ ಕನ್ನಡಕ್ಕೆ ಬಂದ "ಲೋಕಾರ್ಪಣೆ" ಎಂಬ ಶಬ್ದವು ಭಾಷೆಯಲ್ಲಿ ಕೊಡುಕೊಳ್ಳು ಹೇಗೆ ನಿರಂತರ ಪ್ರಕ್ರಿಯೆಯಾಗಿದೆ ಎಂಬುದರ ದ್ಯೋತಕ. ಹಿಂದಿಯಲ್ಲಿ "ಪುಸ್ತಕ ಬಿಡುಗಡೆ"ಯ ಅರ್ಥದಲ್ಲಿ ಹೆಚ್ಚು ಬಳಕೆಯಲ್ಲಿರುವ ಶಬ್ದ "ಪುಸ್ತಕ್ ವಿಮೋಚನ್",

ಪುಸ್ತಕಗಳನ್ನು ಪ್ರತಿಷ್ಠಿತ ವ್ಯಕ್ತಿಗಳಿಂದ ಬಿಡುಗಡೆ ಮಾಡಿಸುವುದು ರೂಢಿ. ಪುಸ್ತಕ ಬಿಡುಗಡೆಗಾಗಿಯೇ ಒಂದು ಪ್ರತ್ಯೇಕ ಸಮಾರಂಭ ಏರ್ಪಡಿಸುವುದುಂಟು. ಅದರಲ್ಲಿ ಪುಸ್ತಕ ಬಿಡುಗಡೆಯೇ ಪ್ರಧಾನವಾಗಿರುತ್ತದೆ. ಪುಸ್ತಕ ಬಿಡುಗಡೆ ಮಾಡುವವರು ಸಾಹಿತಿಗಳಾಗಿದ್ದರೆ ಮೊದಲೇ ಅದನ್ನು ಓದಿಕೊಂಡು ಸಾಕಷ್ಟು ಟಿಪ್ಪಣಿಗಳನ್ನು ಮಾಡಿಕೊಂಡು ಬಂದಿರುತ್ತಾರೆ. ಬಿಡುಗಡೆಗೊಳ್ಳುವ ಪುಸ್ತಕದ ಅಭ್ಯಾಸಪೂರ್ಣವಾದ ಪರಿಚಯ, ರಸ ವಿಮರ್ಶೆಯನ್ನು ಅವರು ಮಾಡಿಕೊಡುತ್ತಾರೆ. ಪುಸ್ತಕ ವಿಮರ್ಶೆಯಲ್ಲಿರುವಂತೆ ನೇತ್ಯಾತ್ಮಕ ಅಂಶಗಳನ್ನು ಸಾಮಾನ್ಯವಾಗಿ ಪ್ರಸ್ತಾಪ ಮಾಡುವುದಿಲ್ಲ. ಓದಿಗೆ ಅವರ ಮಾತುಗಳು ದಿಕ್ಸೂಚಿಯಾಗಿರುತ್ತವೆ. ಪುಸ್ತಕ ಬಿಡುಗಡೆಗಾಗಿಯೇ ಪ್ರತ್ಯೇಕವಾಗಿ ನಡೆಯುವ ಸಮಾರಂಭ ಒಳ್ಳೆಯದೆಂದೇ ಹೇಳಬೇಕು. ಏಕೆಂದರೆ ಅಲ್ಲಿ ಗ್ರಂಥವನ್ನು ಕುರಿತ ಸಮಗ್ರ ಮಾಹಿತಿ ದೊರೆಯುತ್ತದೆ. ಗ್ರಂಥಕರ್ತನಿಗೂ ಸಹ ಮಹತ್ವ ಸಿಗುತ್ತದೆ. ಕೆಲವು ಸಲ ಪ್ರಧಾನ ಸಮಾರಂಭದ ಉದ್ದೇಶ ಬೇರೆಯದೇ ಆಗಿದ್ದು ಅದರಲ್ಲಿ ಪುಸ್ತಕ ಬಿಡುಗಡೆಯ ಕಾರ್ಯಕ್ರಮವನ್ನೂ ಬೆಸೆಯುವುದು ಉಂಟು. ಅಂತಹ ಸಂದರ್ಭದಲ್ಲಿ ಪುಸ್ತಕವನ್ನು ಕುರಿತ ಒಳನೋಟಗಳು ಸಭಿಕರಿಗೆ ದೊರೆಯುವುದು ಕಷ್ಟ. ಅಂತಹ ಒಳನೋಟಗಳಿಗೆ ಸಭಿಕರು ಮಾನಸಿಕವಾಗಿ ಸಿದ್ಧವೂ ಆಗಿರುವುದಿಲ್ಲ. ಬಿಡುಗಡೆ ಮಾಡಬೇಕಾದವರು ಪ್ರತಿಷ್ಠಿತ ರಾಜಕೀಯ ವ್ಯಕ್ತಿಗಳಾಗಿದ್ದರೆ ಅವರು ಔಪಚಾರಿಕವಾಗಿ ಲೇಖಕರನ್ನು ಕುರಿತು ಒಂದೆರಡು ಮಾತುಗಳನ್ನು ಹೇಳಿದರೆ ಹೆಚ್ಚು! ರಾಜಕೀಯದ ಹಗ್ಗ ಜಗ್ಗಾಟದಲ್ಲಿ ಪುಸ್ತಕವನ್ನು ಓದಲು ಅವರಿಗೆ ಸಮಯಾವಕಾಶವಾದರೂ ಹೇಗೆ ದೊರೆತೀತು? ಅಂತೂ ಪುಸ್ತಕ ಬಿಡುಗಡೆಯ ಶಾಸ್ತ್ರ ಮುಗಿಸಿ ಭಾಷಣ ಆರಂಭಿಸುತ್ತಾರೆ.

ಹಿಂದಿನ ದಿನಮಾನಗಳಲ್ಲಿ ಗ್ರಂಥ ಬಿಡುಗಡೆ ಮಾಡಿದವರು ಪುಸ್ತಕದ ಗಂಟನ್ನು ಬಿಚ್ಚಿ ಪುಸ್ತಕವೊಂದನ್ನು ಹಿಡಿದು ಕೈ ಮೇಲೆತ್ತಿ ಸಭಿಕರಿಗೆ ಪ್ರದರ್ಶಿಸುತ್ತಿದ್ದರು. ಈಗ ಕಾಲ ಬದಲಾಗಿದೆ. ಬಿಡುಗಡೆ ಮಾಡಿದವರು ವೇದಿಕೆಯಲ್ಲಿ ಇರುವವರಿಗೆಲ್ಲಾ ಪುಸ್ತಕಗಳನ್ನು ನೀಡುತ್ತಾರೆ. ಎಲ್ಲರೂ ಎದ್ದು ನಿಂತು ಪುಸ್ತಕವನ್ನು ಎದೆಯ ಮಟ್ಟಕ್ಕೆ ಹಿಡಿದು ಫೋಟೋಗ್ರಾಫರ್ಗಳಮುಂದೆ ನಿಲ್ಲುತ್ತಾರೆ. ಇದೇಕೋ ನಮಗೆ ಸರಿ ಅನಿಸುತ್ತಿಲ್ಲ. ಮದ್ರಾಸು ಹೈಕೋರ್ಟಿನ ನ್ಯಾಯಮೂರ್ತಿಗಳಾದ ಪಿ.ಎನ್. ಪ್ರಕಾಶ್ ಅವರು ಚೆನ್ನೈನಲ್ಲಿ ಇತ್ತೀಚೆಗೆ ಒಂದು ಪುಸ್ತಕ ಬಿಡುಗಡೆ ಮಾಡಿದರು. ನ್ಯಾಯಮೂರ್ತಿಗಳಾಗುವ ಮುನ್ನ ಪ್ರಸಿದ್ದ ಕ್ರಿಮಿನಲ್ ಲಾಯರ್ ಆಗಿದ್ದ ಅವರು ಪುಸ್ತಕದ ಪುಟಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ "ಈ ಪುಸ್ತಕದಲ್ಲಿರುವ Fraud ಎಂಬ ಅಧ್ಯಾಯ ಆರಂಭವಾಗುವುದು ಪುಟ 420” ಎಂದು ಹೇಳಿದಾಗ ಸಭೆ ನಗೆಗಡಲಿನಲ್ಲಿ ತೇಲಿತು. ಕಳೆದ 11 ವರ್ಷಗಳಿಂದ ಬರೆಯುತ್ತಾ ಬಂದಿರುವ ನಮ್ಮ ಈ ಅಂಕಣದ ಈ ಸಂಖ್ಯೆಯು 420. ಭಾರತೀಯ ದಂಡ ಸಂಹಿತೆಯಲ್ಲಿ ಇದರ ಅರ್ಥ ಏನೆಂದು ಎಲ್ಲರಿಗೂ ಗೊತ್ತಿರುವ ಸಂಗತಿ. ಅಂತಹ “Four Twenty" ಅಥವಾ "ಚಾರ್ ಸೌ ಬೀಸ್" ಕೆಲಸ ಮಾಡಿದ ಕಳ್ಳರನ್ನು ಹಿಡಿದು ಅವರ ಕೈಯಲ್ಲಿ ಅಪರಾಧಿಗಳ ಸಂಖ್ಯೆಯುಳ್ಳ ಸ್ಲೇಟುಗಳನ್ನು ಕೊಟ್ಟು ನಿಲ್ಲಿಸಿ ಅವರೊಂದಿಗೆ ಪೋಲೀಸರು ತೆಗೆಸಿಕೊಂಡ ಸಾಹಸ ಕೃತ್ಯಗಳ ಫೋಟೋಗಳು ಪತ್ರಿಕೆಗಳಲ್ಲಿ ಆಗಾಗ್ಗೆ ಪ್ರಕಟವಾಗುತ್ತಿರುತ್ತವೆ. ನಮ್ಮ ಪುಸ್ತಕ ಬಿಡುಗಡೆ ಸಮಾರಂಭಗಳ ದೃಶ್ಯಗಳು ಹಾಗೆ ಕಾಣದಿರಲಿ! ಇನ್ನು ಮುಂದಾದರೂ ಪ್ರತಿಷ್ಠಿತರು ಎದೆಯ ಮಟ್ಟಕ್ಕೆ ಹಿಡಿಯದೆ ಕೈ ಮೇಲೆತ್ತಿ ಬಿಡುಗಡೆಗೊಳ್ಳುವ ಪುಸ್ತಕದ ಹಿರಿಮೆಯನ್ನು ಎತ್ತಿ ತೋರಿಸುವಂತಾಗಲಿ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 21.11.2019