ವಿದ್ಯಾ ಇಲಾಖೆಯು ಈ ಮಾಯಾ ಜಿಂಕೆಯನ್ನು ಕೊಲ್ಲದಿರಲಿ!
ಯಾವುದಾದರೂ ಕಾರ್ಯಕ್ರಮದ ನಿಮಿತ್ತ ಶಿವಮೊಗ್ಗಕ್ಕೆ ಕಾರಿನಲ್ಲಿ ಹೊರಟರೆ ಸಿರಿಗೆರೆಯಿಂದ ಚನ್ನಗಿರಿ-ಹೊಳೆಹೊನ್ನೂರು ಮಾರ್ಗವಾಗಿ ಎರಡು ಗಂಟೆಗಳ ಪ್ರಯಾಣ. ಶಿವಮೊಗ್ಗ ತಲುಪುತ್ತಿದ್ದಂತೆ ಮೊದಲು ಸಿಗುವುದೇ ರೈಲ್ವೆ ಕ್ರಾಸ್. ಅನಂತರ ಕೆಲವೇ ಹೆಜ್ಜೆಗಳ ಅಂತರದಲ್ಲಿ ತುಂಗಾ ನದಿಯ ಮೇಲಿನ ಕಿರಿದಾದ ಹಳೆಯ ಸೇತುವೆ. ಇದಕ್ಕೆ ಸಮಾನಾಂತರವಾಗಿ ಕಾಣಿಸುವುದೇ ರೈಲು ಸಂಚಾರಕ್ಕಾಗಿ ಇರುವ ಮತ್ತೊಂದು ಹಳೆಯ ಸೇತುವೆ. ಸೇತುವೆಯ ಮೇಲೆ ಹೋಗುತ್ತಿದ್ದಂತೆಯೇ ನಮ್ಮ ಬಾಲ್ಯದ ಹಳೆಯ ನೆನಪಿನ ರೀಲುಗಳು ಸುರುಳಿ ಸುರುಳಿಯಾಗಿ ಬಿಚ್ಚುತ್ತಾ ಹೋಗುತ್ತವೆ. ಜೂನ್ ತಿಂಗಳ ವೇಳೆಗೆ ಸೇತುವೆಯ ತಳಭಾಗದ ಸನಿಹಕ್ಕೆ ತುಂಬಿ ಹರಿಯುತ್ತಿದ್ದ ತುಂಗೆ! ಅನಾಮಿಕ ವ್ಯಕ್ತಿಯೊಬ್ಬ ಆಕಸ್ಮಿಕವಾಗಿ ನದಿಗೆ ಬಿದ್ದು ಈಜುತ್ತಾ ದಂಡೆಯನ್ನು ಸೇರಲಾಗದೆ ಜೀವ ಭಯದಿಂದ ಹತ್ತಿರದಲ್ಲಿಯೇ ನೀರಿನಲ್ಲಿ ಮುಳುಗಿದ್ದ ಮರದ ಕೊಂಬೆಗಳನ್ನು ಹಿಡಿದು ನಡೆಸಿದ್ದ ಜೀವನ್ಮರಣದ ಹೋರಾಟ! ಅಸಹಾಯಕತೆಯಿಂದ ನೋಡುತ್ತಿದ್ದ ಜನರ ಕೂಗಾಟ, ಚೀರಾಟಗಳ ಆ ಕರುಣಾಜನಕ ದೃಶ್ಯ ಐದು ದಶಕ ಕಳೆದರೂ ಇನ್ನೂ ಕಣ್ಣಿಗೆ ಕಟ್ಟಿದಂತಿದೆ!....
ಸೇತುವೆಯನ್ನು ದಾಟಿ ಬಿ ಹೆಚ್ ರೋಡಿನಲ್ಲಿ ಮುಂದೆ ಸಾಗಿದರೆ ಬಲಕ್ಕೆ ಸಿಗುವುದೇ ಸರ್ಕಾರಿ ಪ್ರೌಢಶಾಲೆ. ಪ್ರತಿಸಾರಿ ಈ ಮಾರ್ಗವಾಗಿ ಪ್ರಯಾಣ ಮಾಡುವಾಗ ಕಾರಿನಲ್ಲಿ ನಮ್ಮ ಪಕ್ಕದಲ್ಲಿ ಕುಳಿತ ಪೂಜಾ ಮರಿಗಳಿಗೆ ಭಾವುಕರಾಗಿ "ಇದು ನಾವು ಓದಿದ ಶಾಲೆ" ಎಂದು ಹೇಳದ ದಿನಗಳಿಲ್ಲ. ಶಾಲಾ ಪ್ರಾಂಗಣದೊಳಗೆ ಪ್ರವೇಶಿಸಿ ಅಲ್ಲಿ ಕುಣಿದಾಡುವ ಮಕ್ಕಳಿಗೂ ಹೇಳಬೇಕೆನ್ನುವ ಮನಸ್ಸಿನ ತುಡಿತ. 1960-63 ರ ಕಾಲಾವಧಿಯಲ್ಲಿ 3 ವರ್ಷಗಳ ಕಾಲ ನಾವು ಓದುತ್ತಿದ್ದ ಈ ಶಾಲೆ ನಮ್ಮ ಪಾಲಿಗೆ ಕಾಡಿನಲ್ಲಿ ಸೀತೆಯ ಕಣ್ಮನ ಸೆಳೆದ ಮಾಯಾ ಜಿಂಕೆಯಂತೆ! ಆದರೆ ಈ ಮಾಯಾಜಿಂಕೆ ಸೀತೆಯನ್ನು ಮೋಸಗೊಳಿಸಿದ ಮಾಯಾವಿ ಮಾರೀಚನಂತಲ್ಲ. ಬಾಲ್ಯದಲ್ಲಿ ನಮ್ಮ ಬದುಕಿನ ದಾರಿಗೆ ಬೆಳಕನ್ನು ನೀಡಿದ ಶಾಲೆ. ಅಪರಿಮಿತವಾದ ಪರಿಧಿಯುಳ್ಳ ವಿಜ್ಞಾನ, ಸಾಹಿತ್ಯ, ಸಂಗೀತ ಇತ್ಯಾದಿ ವಿಷಯಗಳಲ್ಲಿ ಅಂಬೆಗಾಲಿಟ್ಟು ಹೆಜ್ಜೆ ಹಾಕಲು ಕಲಿಸಿದ ಶಾಲೆ; ದಿಗ್‌ದಿಗಂತಗಳಿಗೆ ಕರೆದೊಯ್ದ ಶಾಲೆ !
ನಾವು ಹುಟ್ಟಿದ ಊರು ಶಿವಮೊಗ್ಗೆಯಿಂದ ಚೀಲೂರು-ಹೊನ್ನಾಳಿ ಕಡೆಗೆ 8 ಕಿ.ಮೀ ದೂರದಲ್ಲಿರುವ ಒಂದು ಚಿಕ್ಕಹಳ್ಳಿ. ಅದರ ಹೆಸರು ಸೂಗೂರು, ತುಂಗ-ಭದ್ರೆಯ ಸಂಗಮವಾದ ಕೂಡಲಿಯಿಂದ ಕೂಗಳತೆಯ ದೂರದಲ್ಲಿ ತುಂಗಾ ನದಿಯ ದಂಡೆಯ ಮೇಲಿರುವ ಊರು. ಆಗ ಪ್ರೌಢಶಾಲೆಯವರೆಗೆ ಓದಿದವರ ಸಂಖ್ಯೆ ಕೈಬೆರಳೆಣಿಕೆಯಷ್ಟು ಮಾತ್ರ. ಊರಿನಲ್ಲಿ ಪ್ರಾಥಮಿಕ ಶಾಲೆಯ ಓದು ಮುಗಿದ ಮೇಲೆ ಮಾಧ್ಯಮಿಕ ಶಾಲೆಯನ್ನು ಓದಲು 3 ಕಿ.ಮೀ. ದೂರದ ಹೋಬಳಿ ಕೇಂದ್ರವಾದ ಹೊಳಲೂರಿಗೆ ಓರಿಗೆ ಸ್ನೇಹಿತರೊಂದಿಗೆ ನಿತ್ಯವೂ ಸೈಕಲ್ ಮೇಲೆ ಹೋಗುತ್ತಿದ್ದೆವು. ಅನಂತರ ಓದಲು ಹತ್ತಿರದಲ್ಲಿ ಯಾವ ಪ್ರೌಢಶಾಲೆಯೂ ಇರಲಿಲ್ಲ. ಶಿವಮೊಗ್ಗೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರವೇಶ ದೊರೆಯಿತು. ಮೊದಮೊದಲು ಹತ್ತಿರದ ಹಳ್ಳಿಯ ಬಂಧುಗಳ ಮನೆಯಲ್ಲಿದ್ದು ಓಡಾಡುತ್ತಿದ್ದ ನಾವು ಅನಂತರ ಪೇಟೆಯಲ್ಲಿಯೇ ಹೊಸಮನೆ ಬಡಾವಣೆಯಲ್ಲಿ ಒಂದು ಬಾಡಿಗೆ ಕೊಠಡಿಯಲ್ಲಿ ಸ್ನೇಹಿತರೊಂದಿಗೆ ವಾಸವಾಗಿದ್ದು, ಕೈಯಡಿಗೆ ಮಾಡಿಕೊಂಡು ಶಾಲೆಗೆ ಓದಲು ಹೋಗುತ್ತಿದ್ದೆವು. ದಿನನಿತ್ಯದ ಖರ್ಚಿನ ಲೆಕ್ಕ ಬರೆಯುವುದನ್ನು ನಾವು ಕಲಿತದ್ದೂ ಈ ವಯಸ್ಸಿನಲ್ಲಿಯೇ. ಯಾರಿಂದಲೂ ಸಾಲ ಮಾಡಬಾರದು ಯಾರಿಗೂ ಸಾಲ ಕೊಡಬಾರದು ಎಂದು ನಮ್ಮ ಪೂರ್ವಾಶ್ರಮದ ತಂದೆ ಈಶ್ವರಯ್ಯನವರು ನಮಗೆ ಕಟ್ಟಪ್ಪಣೆ ಮಾಡಿದ್ದರು. AG ಆಫೀಸಿನವರಂತೆ ಆಗಾಗ್ಗೆ ಬಂದು ಲೆಕ್ಕ ತಪಾಸಣೆ ಮಾಡುತ್ತಿದ್ದರು. ಒಮ್ಮೆ ಅನಿವಾರ್ಯವಾಗಿ ಓರಿಗೆಯವರಿಗೆ ಎಂಟಾಣೆ ಕೈಗಡವಾಗಿ ಕೊಟ್ಟು ಅವರ ಕೆಂಗಣ್ಣಿಗೆ ಗುರಿಯಾಗಿದ್ದೆವು.
ನಮಗೆ ನೆನಪಿರುವ ಮಟ್ಟಿಗೆ ಆಗ ಇದ್ದದ್ದು ಇಡೀ ಶಿವಮೊಗ್ಗ ನಗರಕ್ಕೆ ಮೂರೇ ಮೂರು ಪ್ರೌಢಶಾಲೆಗಳು - ದೇಶೀಯ ವಿದ್ಯಾಶಾಲೆ, ನ್ಯಾಷನಲ್ ಹೈಸ್ಕೂಲ್ ಎಂಬ ಎರಡು ಖಾಸಗಿ ಪ್ರೌಢಶಾಲೆಗಳು ಮತ್ತು ನಾವು ಪ್ರವೇಶ ಪಡೆದಿದ್ದ ಸರ್ಕಾರಿ ಪ್ರೌಢಶಾಲೆ. ಈಗಿನಂತೆಯೇ ಖಾಸಗಿ ಶಾಲೆಗಳಲ್ಲಿ ಪ್ರವೇಶ ದೊರಕುವುದು ಕಷ್ಟವಾಗಿತ್ತು. ಬಡ ಮಕ್ಕಳಿಗೆ ಸರ್ಕಾರಿ ಪ್ರೌಢಶಾಲೆ ಬಿಟ್ಟರೆ ಬೇರೆಡೆ ಅವಕಾಶವಿರಲಿಲ್ಲ. ಆದರೆ ಅಂದಿನ ದಿನಮಾನಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಪ್ರೌಢಶಾಲೆಗಳಲ್ಲಿ ಈಗಿರುವಷ್ಟು ಹೆಚ್ಚಿನ ಗುಣಮಟ್ಟದ ಅಂತರ ಇರಲಿಲ್ಲ. ಉಪಾಧ್ಯಾಯ ವೃತ್ತಿಯಲ್ಲಿ ಉನ್ನತ ಆದರ್ಶಗಳನ್ನು ಇರಿಸಿಕೊಂಡಿದ್ದ ತಿಮ್ಮಣ್ಣಾಚಾರ್ (ಸಸ್ಯಶಾಸ್ತ್ರ), ಮುಳುಗುಂದ ನಾಗರಾಜ (ಭೌತಶಾಸ್ತ್ರ), ಶಿಖರಪ್ಪ (ಬೀಜಗಣಿತ), ವಿ. ಎಸ್. ಕುಲಕರ್ಣಿ (ರೇಖಾಗಣಿತ), ಆಚಾರ್ಯ ಗಣಪತಿ (ಹಿಂದಿ) ಮೊದಲಾದ ಒಳ್ಳೊಳ್ಳೆಯ ಅಧ್ಯಾಪಕರು ಆಗ ನಮಗೆ ದೊರೆತಿದ್ದರು. ಸಂಸ್ಕೃತ ಪಾಠಮಾಡುತ್ತಿದ್ದ ಪಂಡಿತರಾದ ಪ್ರಹ್ಲಾದಾಚಾರ್ ಅವರು ಕೆಲವೊಮ್ಮೆ ಶಬ್ದರೂಪಗಳನ್ನು ಬಾಯಿಪಾಠ ಮಾಡಲು ಹಚ್ಚಿ ಟೇಬಲ್ ಮೇಲೆ ಕಾಲುಗಳನ್ನಿಟ್ಟು ಕುರ್ಚಿಗೆ ಒರಗಿ ಕಣ್ಮುಚ್ಚಿ ಕೇಳುತ್ತಾ ತೂಕಡಿಸುತ್ತಿದ್ದರು. ಅವರನ್ನು ನೆನೆಸಿಕೊಂಡಾಗಲೆಲ್ಲಾ "ಶಿವನ ಧನುಸ್ಸನ್ನು ಮುರಿದವರು ಯಾರು?" ಎಂಬ ಶಾಲಾ ತನಿಖಾಧಿಕಾರಿಗಳ ಪ್ರಶ್ನೆಗೆ ಕನ್ನಡ ತರಗತಿಯ ವಿದ್ಯಾರ್ಥಿಗಳು ಹೆದರಿ "ನಾನಲ್ಲ, ನಾನಲ್ಲ" ಎಂದು ಉತ್ತರ ಕೊಟ್ಟರು ಎಂಬ ಬೀಚಿಯವರ ಹಾಸ್ಯ ಕಥೆ ನೆನಪಾಗುತ್ತದೆ. ನಮಗಿಂತಲೂ ಹೆಚ್ಚಿನ ಬುದ್ದಿವಂತ ಸಹಪಾಠಿಗಳು ನಮ್ಮ ತರಗತಿಯಲ್ಲಿದ್ದರು. ಇನ್ನೂ ದೇಶಭಕ್ತಿಗೀತೆಗಳ ಆದರ್ಶದ ಗುಂಗಿನಲ್ಲಿದ್ದ ಕಾಲವದು. ಗಾಂಧೀಜಿಯ ಕರೆಯಂತೆ ಸ್ವಾತಂತ್ರ್ಯ ಹೋರಾಟಗಾರರು ಖಾದಿ ಬಟ್ಟೆಯನ್ನು ಧರಿಸಿ ನೂಲಿನ ಬಟ್ಟೆಯನ್ನು "ಹಾಕು ಬೆಂಕಿಗೆ; ಉರಿಲಿ ಧಗ ಧಗ" ಎನ್ನುತ್ತಿದ್ದ ದೇಶಭಕ್ತಿಗೀತೆಯನ್ನು ಭಾವಾವೇಶದಿಂದ ಹಾಡುತ್ತಿದ್ದವರು ಸಹಪಾಠಿಯಾದ ಪಿ.ಎಸ್. ಭಗವಾನ್.
SSLC ಫಲಿತಾಂಶ ಹೊರಬಂದಾಗ ಹಳ್ಳಿಯಲ್ಲಿ ಭತ್ತದ ಗದ್ದೆಯ ಕೆಲಸದಲ್ಲಿದ್ದೆವು. ಮಧ್ಯಾಹ್ನ ಬುತ್ತಿ ಗಂಟನ್ನು ತಲೆಯ ಮೇಲಿಟ್ಟುಕೊಂಡು ಬಂದ ನಮ್ಮ ಪೂರ್ವಾಶ್ರಮದ ತಾಯಿ ಶ್ರೀಮತಿ ಗಂಗಮ್ಮನವರು "ನೀನು ಪರೀಕ್ಷೆಯಲ್ಲಿ ಫೇಲಾಗಿದ್ದೆಯಂತೆ"ಎಂದು ಹೇಳಿದಾಗ ಎದೆಗುಂದಲಿಲ್ಲ. ಹುಬ್ಬು ಗಂಟಿಕ್ಕಿ "ಅದು ಸಾಧ್ಯವಿಲ್ಲ, ನಿನಗೆ ಯಾರೋ ಸುಳ್ಳು ಹೇಳಿದ್ದಾರೆ. ಫಸ್ಟ್ ಕ್ಲಾಸಿನಲ್ಲಿ ಪಾಸಾಗಿರಲೇಬೇಕು" ಎಂದು ಗಟ್ಟಿಯಾಗಿ ವಾದಿಸಿದಾಗ ಹೆಚ್ಚು ಹೊತ್ತು ಅದುಮಿಡಲಾಗದ ಸಂತೋಷದಿಂದ ಹೊರಹೊಮ್ಮಿದ ತಾಯಿಯ ಆ ಮುಗುಳು ನಗೆ ಅವಿಸ್ಮರಣೀಯ! "ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ!”
1963ರಲ್ಲಿ ನಡೆದ SSLC ಪರೀಕ್ಷೆಯಲ್ಲಿ ನಮ್ಮನ್ನೂ ಒಳಗೊಂಡಂತೆ 12ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದೆವು. ಶಿವಮೊಗ್ಗದಲ್ಲಿದ್ದ ಇನ್ನಿತರ ಖಾಸಗಿ ಪ್ರೌಢಶಾಲೆಗಳನ್ನು ಮೀರಿಸುವಂತೆ ಬಂದಿದ್ದ ನಮ್ಮ ಸರ್ಕಾರಿ ಪ್ರೌಢಶಾಲೆಯ ಈ ಫಲಿತಾಂಶ ಆ ದಿನಗಳಲ್ಲಿ ಒಂದು ವಿಶೇಷ ಸುದ್ದಿಯಾಗಿತ್ತು. ಶಾಲೆಗೆ ಹೆಚ್ಚಿನ ಕೀರ್ತಿಯನ್ನು ತಂದ ನಮ್ಮೆಲ್ಲರ ಮೇಲೆ ಅಧ್ಯಾಪಕರೆಲ್ಲರಿಗೂ ವಿಶೇಷ ಅಭಿಮಾನ ಉಂಟಾಗಿತ್ತು. ಅವರಲ್ಲಿ ಅನೇಕರು ಈಗ ಬದುಕಿಲ್ಲ. ಆದರೆ ಅವರ ಸ್ಮರಣೆ ಮಾತ್ರ ನಮ್ಮ ಮನಸ್ಸಿನಲ್ಲಿ ಸದಾ ಅಚ್ಚ ಹಸಿರಾಗಿದೆ. ನಮ್ಮೆಲ್ಲರ ವ್ಯಕ್ತಿತ್ವದ ವಿಕಾಸದಲ್ಲಿ ಅವರು ವಹಿಸಿದ ಕಾಳಜಿಯನ್ನು ನಾವೆಂದೂ ಮರೆಯುವಂತಿಲ್ಲ. ಅವರೆಲ್ಲರಿಗೂ ನಮ್ಮ ಮತ್ತು ನಮ್ಮ ಸಹಪಾಠಿಗಳ ಪರವಾಗಿ ತುಂಬು ಹೃದಯದ ಕೃತಜ್ಞತೆಗಳು.
ಗಾಂಧೀಜೀ 1927 ರಲ್ಲಿ ಈ ಶಾಲೆಯ ಆವರಣದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಉದ್ದೇಶಿಸಿ ಮಾತನಾಡಿದ ಒಂದು ಅಪರೂಪದ ಭಾವಚಿತ್ರವಿದೆ. ನಾವು ಓದುತ್ತಿದ್ದ ಈ ಸರ್ಕಾರಿ ಪ್ರೌಢಶಾಲೆಗೆ ಹೀಗೆ ನೂರಾರು ವರ್ಷಗಳ ಇತಿಹಾಸವಿದೆಯೆಂದು ಆಗ ನಮಗೆ ಅಷ್ಟಾಗಿ ತಿಳಿದಿರಲಿಲ್ಲ. ಪಿಟೀಲನ್ನು ನುಡಿಸಲು ಕಲಿಯುತ್ತಿದ್ದ ನಮಗೆ ಸ್ವಲ್ಪಮಟ್ಟಿಗೆ ಸಂಗೀತ ಜ್ಞಾನವಿತ್ತು. ಸಾಹಿತ್ಯದ ಜ್ಞಾನ ಎಳ್ಳಷ್ಟೂ ಇರಲಿಲ್ಲ. ಒಮ್ಮೆ ಶಾಲೆಯಲ್ಲಿ ಪ್ರಸಿದ್ಧ ಹಾಸ್ಯ ಸಾಹಿತಿ "ಕೈಲಾಸಂ" ಕುರಿತು ಏರ್ಪಡಿಸಿದ್ದ ಸಮಾರಂಭವನ್ನು ಯಾರದೋ ಕೈಲಾಸ ಸಮಾರಾಧನೆ ಎಂದು ಭಾವಿಸಿದ್ದೆವು! ನಮ್ಮ ಪರಮಾರಾಧ್ಯ ಗುರುವರ್ಯರ ಆಣತಿಯಂತೆ ಮೈಸೂರು ಮಹಾರಾಜ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತವನ್ನು ಐಚ್ಛಿಕ ವಿಷಯಗಳನ್ನಾಗಿ ಆಯ್ಕೆ ಮಾಡಿಕೊಂಡು ಓದುವಾಗ ನೆನೆಸಿಕೊಂಡು ನಗು ಬಂದಿತ್ತು.
166 ವರ್ಷಗಳ ಸುದೀರ್ಘ ಇತಿಹಾಸವನ್ನು ಉಳ್ಳ ಈ ಸರ್ಕಾರಿ ಪ್ರೌಢಶಾಲೆಯಲ್ಲಿ ನಮಗಿಂತಲೂ ಹಿಂದೆ ಓದಿ ನಾಡಿನ ಉನ್ನತ ಸ್ಥಾನಮಾನಗಳನ್ನು ಅಲಂಕರಿಸಿದ ಹಳೆಯ ವಿದ್ಯಾರ್ಥಿಗಳೆಂದರೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ನಿಟ್ಟೂರು ಶ್ರೀನಿವಾಸರಾಯರು, ಮಾಜಿ ರಾಜ್ಯಪಾಲರೂ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳೂ ಆದ ಎಂ. ರಾಮಾಜೋಯಿಸ್‌ರವರು, ಕೇಂದ್ರ ಭೂ ಸಂಶೋಧನಾ ಇಲಾಖೆ ನಿವೃತ್ತ ಉಪ ಮಹಾನಿರ್ದೇಶಕರಾದ ಎಸ್.ಆರ್.ರಾವ್ ಅವರು, ಮೇಲ್ಮನೆಯ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿಯವರು, ಇತಿಹಾಸ ಸಂಶೋಧಕರಾದ ಎಚ್ ಖಂಡೋಬರಾವ್‌ರವರು, ಶಿವಮೊಗ್ಗ ಕೈಗಾರಿಕಾ ಪಿತಾಮಹರೆನಿಸಿದ ಟಿ.ವಿ. ನಾರಾಯಣಶಾಸ್ತ್ರಿಯವರು, ಉದ್ಯಮಿ ಟಿ.ಆರ್. ಅಶ್ವತ್ಥನಾರಾಯಣ ಶೆಟ್ಟಿಯವರು, ಮಾಜಿ ಎಂ.ಎಲ್.ಸಿ. ಮೀರ್ ಅಜೀಜ್ ಅಹಮ್ಮದ್ ಅವರು, ಖ್ಯಾತ ಗಾಯಕ ಶಿವಮೊಗ್ಗ ಸುಬ್ಬಣ್ಣ ಮೊದಲಾದವರು.
ಸುಮಾರು 11 ವರ್ಷಗಳ ಹಿಂದೆ ಇದೇ ಅಂಕಣದಲ್ಲಿ ಬರೆದ ಮೇಲಿನ ವಿಚಾರಗಳನ್ನು ನೆನೆಪಿಸಿಕೊಳ್ಳಲು ಒಂದು ಪ್ರಮುಖ ಕಾರಣವಿದೆ. ಒಂದು ಕಾಲದಲ್ಲಿ 2500 ಕ್ಕೂ ಹೆಚ್ಚು ಓದುತ್ತಿದ್ದ ಈ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ ಈಗ 180ಕ್ಕೆ ಇಳಿದಿದ್ದು ಶಾಲೆಯನ್ನು ಮುಚ್ಚುವ ದಾರುಣ ಪರಿಸ್ಥಿತಿ ಉಂಟಾಗಿದೆಯೆಂದು ಇದೇ ಪತ್ರಿಕೆಯಲ್ಲಿ ಕೆಲವು ದಿನಗಳ ಹಿಂದೆ ಬಂದ ದಾರುಣ ವರದಿಯನ್ನು ಓದಿ ಮನಸ್ಸಿಗೆ ಖೇದವೆನಿಸಿತು. ಅಂತಹ ತಪ್ಪನ್ನು ವಿದ್ಯಾ ಇಲಾಖೆ ಮಾಡಬಾರದು. ಈ "ಮಾಯಾ ಜಿಂಕೆ"ಯನ್ನು ಕೊಲ್ಲಬಾರದು. ಸರಕಾರವು ಈ ಶಾಲೆಯನ್ನು ಮುಚ್ಚುವ ಆಲೋಚನೆ ಮಾಡದೆ ಮೊರಾರ್ಜಿ ದೇಸಾಯಿ ಶಾಲೆ, ನವೋದಯ ಶಾಲೆಗಳಂತೆ ಪ್ರತಿಭಾನ್ವಿತ ಬಡ ಮಕ್ಕಳಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸುವ ನಿರ್ಧಾರ ಕೈಗೊಳ್ಳಬೇಕು. ಪೋಷಕರು ಇತಿಹಾಸ ಪ್ರಸಿದ್ಧವಾದ ಈ ಶಾಲೆಯಲ್ಲಿ ತಮ್ಮ ಮಕ್ಕಳ ಪ್ರವೇಶಕ್ಕಾಗಿ ಹಾತೊರೆಯುವಂತೆ ಮಾಡಬೇಕು.
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ: 7.11.2019