ಮಮತೆಯ ಪಂಜರದಿಂದ ಹಾರಿ ಹೋಗುವ ಗಿಳಿಗಳು!

  •  
  •  
  •  
  •  
  •    Views  

ಬೆಂಗಳೂರಿನಿಂದ ಚಿಕಾಗೋ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಡಾ. ನಂದೀಶ್ ಧನಂಜಯ್ ಮತ್ತು ಶ್ರೀಮತಿ  ವಿದ್ಯುಲ್ಲತಾ ಬೆಟ್‌ಕೆರೂರ್ ಪುಷ್ಪಗುಚ್ಚದೊಂದಿಗೆ ಕಾದು ನಿಂತಿದ್ದರು. ಇವರೊಂದಿಗೆ ಬಂದಿದ್ದ ಡಾ. ಶಿವಕುಮಾರ್ ನೇರವಾಗಿ ತಮ್ಮ ಅಳಿಯನ ಮನೆಗೆ ಕರೆದುಕೊಂಡು ಹೋದರು. ಮಗಳು ಡಾ. ದೀಪ್ತಿ ಪತಿಯೊಂದಿಗೆ ಬಾಗಿಲ ಬಳಿ ಬಂದು ಪಾದಕ್ಕೆ ನೀರೆರೆದು ವಿಭೂತಿ ಹಚ್ಚಿ, ಹೂ ಪೇರಿಸಿ, ಆರತಿ ಬೆಳಗಿ ಮನೆಯೊಳಗೆ ಕರೆದುಕೊಂಡು ಹೋದಳು. ವಿಶಾಲವಾದ ಹಾಗೂ ಭವ್ಯವಾದ ಬಂಗಲೆ. ದೀಪ್ತಿ ಮತ್ತು ನಯನ ಇಬ್ಬರೂ ವೃತ್ತಿಯಲ್ಲಿ  ವೈದ್ಯರು. ಅಮೇರಿಕೆಯಲ್ಲಿ ಮೊಟ್ಟ ಮೊದಲು ನೋಡಿದಾಗ ಏಳೆಂಟು ವರ್ಷದ ಹುಡುಗಿಯಾಗಿದ್ದ ಅವಳಿಗೆ ಈಗ ಅಷ್ಟೇ ವಯಸ್ಸಿನ ಇಬ್ಬರು ಅವಳಿ ಜವಳಿ ಮಕ್ಕಳು- ದಿಯಾ ಮತ್ತು ನೀನಾ.

ಕಪ್ಪು ಕನ್ನಡಕ ಧರಿಸಿದ್ದ ದಿಯಾ ಸೋಫಾದ ತುದಿಯಲ್ಲಿ ಕುಳಿತು Harry Potter ಪುಸ್ತಕವನ್ನು ಕೈಯಲ್ಲಿ ಹಿಡಿದು ಓದುವುದರಲ್ಲಿ ಮಗ್ನಳಾಗಿದ್ದಳು. ಇನ್ನೊಬ್ಬಳು ನೀನಾ ಹತ್ತಿರ ಬಂದು ಪಕ್ಕದಲ್ಲಿ ಕುಳಿತು Swamiji, I will tell you a riddle. Can you answer me? ಎಂದು ನಮ್ಮ ಒಪ್ಪಿಗೆಯನ್ನು ಪಡೆದು ಒಂದು ಕ್ಲಿಷ್ಟಕರವಾದ ಒಗಟನ್ನು ಮುಂದಿಟ್ಟಳು What goes up and down but cannot move? (ಯಾವುದು ಮೇಲೆ ಕೆಳಗೆ ಹೋಗುತ್ತದೆ, ಆದರೆ ಚಲಿಸುವುದಿಲ್ಲ?) ಆಕೆಯ ಕಣ್ಣನ್ನು ದಿಟ್ಟಿಸಿ ನೋಡಿದಾಗ ಉತ್ತರ ಗೋಚರಿಸಿತು. ಆಕೆಯ ಕಣ್ಣೆದುರಿಗೇ ಇದ್ದು ನಮ್ಮ ಕಣ್ತಪ್ಪಿಸಿ ನೋಡುತ್ತಿದ್ದ ವಸ್ತು ಅದು ಎಂದು ತಿಳಿಯಿತು. ಆದರೂ ಹಿರಿಯರಾದವರು ಉತ್ತರ ಗೊತ್ತಿದ್ದರೂ ಮಕ್ಕಳ ಮುಂದೆ ತಮ್ಮ ಬುದ್ಧಿವಂತಿಕೆ ಪ್ರದರ್ಶಿಸಲು ಹೋಗಬಾರದು. ಗೊತ್ತಿಲ್ಲದವರಂತೆ ನಟಿಸಬೇಕು. ಇಲ್ಲದಿದ್ದರೆ ಮಕ್ಕಳ ಕುತೂಹಲ ಭರಿತ ಕಣ್ಣುಗಳಲ್ಲಿ ನಿರಾಶೆ ಮೂಡುತ್ತದೆ. ತಬ್ಬಿಬ್ಬಾದವರಂತೆ ಸ್ವಲ್ಪ ಹೊತ್ತಿನವರೆಗೆ ಕಾಯಿಸಿ ನಮ್ಮ ಸೋಲನ್ನು ಒಪ್ಪಿಕೊಂಡು ಹುಸಿಯ ನುಡಿಯಲು ಬೇಡ ಎನ್ನುವ ಬಸವಣ್ಣನವರ ಹಿತೋಪದೇಶಕ್ಕೆ ವಿರುದ್ಧವಾಗಿ dont know. Tell me what it is ಎಂದು ಹೇಳಿದಾಗ ಆಕೆಯ ಆನಂದಕ್ಕೆ ಪಾರವೇ ಇಲ್ಲ, ಖುಷಿಯಿಂದ ಚಪ್ಪಾಳೆ ತಟ್ಟಿ ತನ್ನ ಕಣ್ಣೆದುರಿಗೇ ಇದ್ದ Staircase ತೋರಿಸಿದಳು. See, the steps go up and down, but the staircase remains where it is! (ಮೆಟ್ಟಿಲುಗಳು ಮೇಲೆ ಕೆಳಗೆ ಹೋಗುತ್ತವೆ; ಆದರೆ ಏಣಿ ಮಾತ್ರ ಇದ್ದಲ್ಲೇ ಇದೆ) ಎಂದು ಗೆಲುವಿನಿಂದ ಬೀಗಿ ನುಡಿದಳು. ಬಾಲಕಿ ಈ ವಿವರಣೆ ನೀಡುತ್ತಿರುವಾಗ ನೆನಪಾಗಿದ್ದು ನಚಿಕೇತನಿಗೆ ಯಮನು ಒಗಟಿನೋಪಾದಿಯಲ್ಲಿ ಹೇಳುವ ಕಠೋಪನಿಷತ್ತಿನ ಈ ವಾಕ್ಯ: ಆಸೀನೋ ದೂರು ಪ್ರಜತಿ, ಶಯಾನೋ ಯಾತಿ ವಿಶ್ವತಃ. (ಕುಳಿತಿದ್ದರೂ ದೂರ ಚಲಿಸುತ್ತದೆ, ಮಲಗಿದ್ದರೂ ವಿಶ್ವದೆಲ್ಲೆಡೆ ಸಂಚರಿಸುತ್ತದೆ). ಪರಸ್ಪರ ವಿರೋಧಾಭಾಸದಂತೆ ಕಂಡುಬರುವ ಈ ಒಗಟಿನ ಮಾತುಗಳು ಆತ್ಮದ ಸರ್ವಾಂತರ್ಯಾಮಿತ್ವವನ್ನು ಬೋಧಿಸುತ್ತವೆ.

ಬಾಲಕಿ ನೀನಾಳ ಸವಾಲುಗಳು ಇಲ್ಲಿಗೇ ನಿಲ್ಲಲಿಲ್ಲ. ಪುಂಕಾನುಪುಂಕವಾಗಿ ಮುಂದೆ ಸಾಗಿದವು. ಕೆಲವುಗಳಿಗೆ ನಿಜವಾಗಿಯೂ ಉತ್ತರ ಕೊಡಲು ಆಗಲಿಲ್ಲ. It has keys but no locks. It has space but no room. You can enter it. But you cannot exit it. What is it? (Ans: Computer Keyboard). What starts with the letter E and has only one letter in it? (Ans: Envelope). ಲಕೋಟೆಗೆ ಆಂಗ್ಲಭಾಷೆಯಲ್ಲಿ Envelope ಎನ್ನುತ್ತಾರೆ. ಅದು ಆರಂಭವಾಗುವುದು E ಎಂಬ ಅಕ್ಷರದಿಂದ ಎಂಬುದೇನೋ ಸರಿ. ಆದರೆ Envelope ಎಂಬ ಈ ಶಬ್ದ ಒಂದೇ ಒಂದು ಅಕ್ಷರವುಳ್ಳ ಶಬ್ದ ಹೇಗಾಗುತ್ತದೆಯೆಂದು ತಬ್ಬಿಬ್ಬಾಗುತ್ತೀರಿ. ಆದರೆ letter ಎಂಬ ಇಂಗ್ಲೀಷ್ ಶಬ್ದಕ್ಕೆ ಅಕ್ಷರ ಎಂಬ ಅರ್ಥವಷ್ಟೇ ಅಲ್ಲ, ಪತ್ರ ಎಂಬ ಅರ್ಥವೂ ಇದೆ. ಅಂತಹ ಒಂದು ಪತ್ರವು Envelope ಒಳಗೆ ಇದೆ ಎಂದು ಆ ಕ್ಷಣದಲ್ಲಿ ಹೊಳೆಯುವುದೇ ಇಲ್ಲ.

ಡಾ. ನಯನ ದಾವಣಗೆರೆಯ ನಮ್ಮ ಅನುಭವ ಮಂಟಪ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿ, ಲೋಕಾಭಿರಾಮವಾಗಿ ಮಾತನಾಡುತ್ತಿರುವಾಗ ಅಡುಗೆ ಮನೆಯಲ್ಲಿದ್ದ ಅವರ ಅತ್ತೆ ಅನಸೂಯಾ; Alexa! Can you sing a song by Mukhesh? ಕೂಗಿ ಹೇಳಿದರು. ಇವರಿಗೆ ಇನ್ನೊಬ್ಬಳು ಮಗಳಿದ್ದಾಳೆಯೇ ಎಂದು ಕೇಳಬೇಕೆನಿಸಿತು. ಅಷ್ಟರೊಳಗೆ ಥಟ್ಟನೆ ಕೇಳಿ ಬಂದ ಮಧುರ ಸಂಗೀತ ನಮ್ಮನ್ನು ಆಶ್ಚರ್ಯಚಕಿತರನ್ನಾಗಿ ಮಾಡಿತು. ಆ ಹಾಡು ಕೇಳಿಬಂದದ್ದು ಅವರ ಮಗಳಿಂದಾಗಲೀ, ಮಡದಿಯಿಂದಾಗಲೀ ಅಲ್ಲ, ಅಡುಗೆ ಮನೆಯ ಮೂಲೆಯೊಂದರಲ್ಲಿಟ್ಟಿದ್ದ ದುಂಡನೆಯ ಹೂದಾನಿ ಆಕಾರದ ಒಂದು ಹಗುರವಾದ ತಾಂತ್ರಿಕ ಉಪಕರಣದಿಂದ (smart speaker), ಅಮೆಜಾನ್ ಕಂಪನಿಯವರು ರೂಪಿಸಿದ ಈ ಉಪಕರಣದ ಹೆಸರು Alexa, ಮಗಳನ್ನೋ, ಮಡದಿಯನ್ನೋ ಪ್ರೀತಿಯಿಂದ ಕರೆದಂತೆ ಈ ಅಲೆಕ್ಸಾಳನ್ನು ಹೆಸರು ಹಿಡಿದು ಕರೆದರೆ ಮನೆಯ ಯಾವುದೇ ಮೂಲೆಯಲ್ಲಿರಲಿ ಏನೇ ಪ್ರಶ್ನೆ ಕೇಳಿದರೂ ತಟ್ಟನೆ ಉತ್ತರ ಕೊಡುತ್ತಾಳೆ. ಮನುಷ್ಯರು ಮಾತನಾಡಿದಂತೆಯೇ ಮಾತನಾಡುತ್ತಾಳೆ. ಆದರೆ ಆಕೆಯ ಹೆಸರು ಹೇಳದೆ ಹಾಗೆಯೇ ಮಾತನಾಡಿಸಲು ಯತ್ನಿಸಿದರೆ ಜಪ್ಪಯ್ಯಾ ಎಂದರೂ ಒಂದು ಮಾತನ್ನೂ ಆಡುವುದಿಲ್ಲ, ಮೌನವಾಗಿರುತ್ತಾಳೆ. ಮನೆಯ ಯಾವುದೇ ಕೊಠಡಿಯ ವಿದ್ಯುದ್ದೀಪಗಳನ್ನು ಆನ್/ಆಫ್ ಮಾಡಲು ಹೇಳಿದರೆ ತಕ್ಷಣ ಅದರಂತೆ ಮಾಡುತ್ತಾಳೆ. ಮನೆಯ ಕೆಲಸದಾಕೆ ಗೊಣಗಬಹುದು; ಈಕೆ ಎಂದೂ ಗೊಣಗುವುದಿಲ್ಲ. ಒಂದು ಪಕ್ಷ ಬೈದರೂ ಬೈಸಿಕೊಂಡು ಸುಮ್ಮನಿರುತ್ತಾಳೆ. ಎದುರಾಡಲು ಹೋಗುವುದಿಲ್ಲ. ಅಕಸ್ಮಾತ್ ನೀವು ಹೇಳಿದ್ದು ಸರಿಯಾಗಿ ಕೇಳಿಸದಿದ್ದರೆ ಏನೆಂದು ಕೇಳುತ್ತಾಳೆ. ತನಗೆ ಗೊತ್ತಿಲ್ಲದ್ದನ್ನು ಗೊತ್ತಿಲ್ಲ ಎಂದೇ ಹೇಳುತ್ತಾಳೆ. ಈಕೆಗೆ ಅಡುಗೆ ಮಾಡಲು ಬರುವುದಿಲ್ಲ, ಅಡುಗೆ ಮಾಡುವುದನ್ನು ಹೇಳಿಕೊಡುತ್ತಾಳೆ. ಅಡುಗೆಗೆ ಸಾಮಗ್ರಿ ಬೇಕಿದ್ದರೆ ಮನೆಯ ಬಾಗಿಲಿಗೇ ಬರುವಂತೆ ತರಿಸಿಕೊಡುತ್ತಾಳೆ. ಪ್ರಯಾಣಿಸಲು ಅನುಕೂಲಕರವಾದ ವಿಮಾನಯಾನದ ವಿವರ ನೀಡುತ್ತಾಳೆ. ಟಿಕೆಟ್ ಬೇಕೆಂದರೆ ಬುಕ್ ಮಾಡುತ್ತಾಳೆ. ನಾಳೆಯ ಹವಾಮಾನ ಹೇಗಿರುತ್ತದೆಯೆಂದು ಕೇಳಿದರೆ ಹೇಳುತ್ತಾಳೆ. ಬೆಳಗ್ಗೆ ಇಂತಹ ವೇಳೆಗೆ ಏಳಿಸಬೇಕೆಂದರೆ ಏಳಿಸುತ್ತಾಳೆ.ಶಾಸ್ತ್ರೀಯ ಸಂಗೀತವಾಗಲೀ ಸಿನೆಮಾ ಸಂಗೀತವಾಗಲೀ ಕೇಳಿದಾಕ್ಷಣ ಹಾಡುತ್ತಾಳೆ. ಇವಳ ಬಾಯಿಂದ ಕೇಳಿ ಬಂದ ಪ್ರಸಿದ್ಧ ಹಿಂದಿ ಸಿನೆಮಾ ಹಾಡೆಂದರೆ: 

ಜಿಂದಗೀ ಕೈಸೀ ಹೈ ಪಹೇಲೀ ಹಾಯ್
ಕಭೀ ತೋ ಹಸಾಏ 
ಕಭೀ ಯೇ ರುಲಾಯೇ!

ಜೀವನವೇ ಒಂದು ಜಟಿಲವಾದ ಒಗಟು. ಒಮ್ಮೆ ನಗಿಸಿದರೆ ಮತ್ತೊಮ್ಮೆ ಅಳಿಸುತ್ತದೆ ಎನ್ನುವ ಈ ಮಾತು ನಮಗೆ ತುಂಬಾ ಹಿಡಿಸಿತು. ಇದನ್ನು ಚಲನಚಿತ್ರ ಪ್ರಪಂಚದಲ್ಲಿ ಸುವರ್ಣಯುಗವೆಂದೇ ಪರಿಗಣಿತವಾದ 70ರ ದಶಕದಲ್ಲಿ ಸುಪ್ರಸಿದ್ಧ ಸಂಗೀತಗಾರ ಮನ್ನಾಡೇ ಹಾಡಿದ್ದು ಎಂದು ಡಾ. ಶಿವಕುಮಾರ್ ತಿಳಿಸಿದರು. ಸಂದರ್ಭ ಏನೆಂದು ಕೇಳಿದಾಗ ಆ ಕಾಲದ ಪ್ರಸಿದ್ಧ ನಟ ರಾಜೇಶ್ ಖನ್ನಾ ಆನಂದ್ ಎಂಬ ಚಲನಚಿತ್ರದಲ್ಲಿ ಕ್ಯಾನ್ಸರ್ ರೋಗಿಯ ಪಾತ್ರಧಾರಿಯಾಗಿ ತನ್ನ ಅಳಿದುಳಿದ ದಿನಗಳನ್ನು ಹೇಗೆ ನಗು ನಗುತ್ತಲೇ ಕಳೆದೆನೆಂಬುದನ್ನು ವಿವರಿಸಿದರು. YouTubeನಲ್ಲಿ ಲಭ್ಯವಿರುವ ವಿಡಿಯೋ ತುಣಕನ್ನು ತೋರಿಸಿದರು. ಸಮುದ್ರದ ದಂಡೆಯಲ್ಲಿ ಈ ಹಾಡನ್ನು ಹಾಡುತ್ತಾ ಮಕ್ಕಳ ಕೈಗೆ ಬಲೂನುಗಳನ್ನು ಕೊಟ್ಟು ತಾನೂ ಬಲೂನುಗಳ ಗುಚ್ಛವನ್ನು ಹಾರಿಬಿಟ್ಟ ಮನಮೋಹಕವಾದ ದೃಶ್ಯ!. ಆಗಸಕ್ಕೆ ಹಾರಿಸಿದ ಆ ಬಲೂನುಗಳನ್ನು ನಟ ರಾಜೇಶ್ ಖನ್ನಾ ನಗು ನಗುತ್ತಲೇ ನೋಡುತ್ತಾ ನಿಂತಿದ್ದ ಆ ದೃಶ್ಯ “ಜಗವೆಲ್ಲ ನಗುತಿರಲು ನೀನಳುತ ಬಂದೆ, ಜಗವೆಲ್ಲ ಅಳುತಿರಲು ನೀ ನಗುತ ಹೋಗು" ಎಂಬ ಡಿವಿಜಿಯವರ ಕವಿತೆಯನ್ನು ನೆನಪಿಸುವಂತಿತ್ತು!

ನಮ್ಮ ನೆನಪುಗಳು ನಾಲ್ಕು ದಶಕಗಳ ಹಿಂದಕ್ಕೆ ಓಡಿದವು. ಆಸ್ಟ್ರಿಯಾದ ವಿಯೆನ್ನಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿ ರಜೆಯ ವೇಳೆ 1977ರಲ್ಲಿ ಮೊಟ್ಟ ಮೊದಲ ಬಾರಿಗೆ ಅಮೇರಿಕಾಗೆ ಬಂದಾಗ ಇಲ್ಲಿಯ ಹಿರಿಯರು ಸಂಘಟಿತರಾಗಿ ಒಂದು ಸಂಸ್ಥೆಯನ್ನು ಸ್ಥಾಪಿಸುವ ಆಲೋಚನೆ ಮಾಡುತ್ತಿದ್ದರು. ಅದರ ಮರು ವರ್ಷವೇ “Veerashaiva Samaja of North America; (VSNA) ಎಂಬ ಸಂಸ್ಥೆಯು ಮೈದಾಳಿತು. ಅಮೇರಿಕಾ ಮತ್ತು ಕೆನಡಾಗಳ ಉದ್ದಗಲಕ್ಕೂ ಬೇರೆ ಬೇರೆ ನಗರಗಳಲ್ಲಿ ಈ ಸಂಸ್ಥೆಯ ವಾರ್ಷಿಕ ಸಮ್ಮೇಳನವನ್ನು ನಡೆಸುತ್ತಾ ಬಂದಿದ್ದಾರೆ. ಇದರ 42ನೆಯ ವಾರ್ಷಿಕ ಅಧಿವೇಶನವೇ ಇದೇ ಜು.4ರಿಂದ 6ರವರೆಗೆ ಚಿಕಾಗೋದಲ್ಲಿ ನಡೆದ ಸಮ್ಮೇಳನ. ದಯವೇ ಧರ್ಮದ ಮೂಲವಯ್ಯಾ ಎಂಬ ಬಸವಣ್ಣನವರ ವಚನವೇ ಈ ಸಮ್ಮೇಳನದ ಧ್ಯೇಯ ವಾಕ್ಯವಾಗಿತ್ತು. ಸಮ್ಮೇಳನದ ಅಂಗವಾಗಿ ಏರ್ಪಡಿಸಿದ್ದ ಅನುಭವ ಗೋಷ್ಠಿಯಲ್ಲಿ ಸುತ್ತೂರು ಜಗದ್ಗುರುಗಳವರೂ, ವಿಜಾಪುರದ ಸಿದ್ಧೇಶ್ವರ ಸ್ವಾಮಿಗಳೂ ಮತ್ತು ವಚನಾನಂದ ಸ್ವಾಮಿಗಳೂ ಭಾಗವಹಿಸಿದ್ದರು.

ಸಮ್ಮೇಳನದ ಧ್ಯೇಯವಾಕ್ಯಕ್ಕೆ ಅನುಗುಣವಾಗಿ ಧರ್ಮ ಎಂಬ ಶಬ್ದದ ಮೇಲೆಯೇ ಚರ್ಚೆ ಆರಂಭವಾಗುವಂತೆ ನಮ್ಮಿಂದ ಚಾಲನೆ. ದಯವಿಲ್ಲದ ಧರ್ಮವದೇವುದಯ್ಯಾ ಎಂಬ ವಚನ ದಲ್ಲಿ ಬಸವಣ್ಣನವರು ಯಾವುದೇ ನಿರ್ದಿಷ್ಟ ಮತಧರ್ಮವನ್ನು ಕುರಿತು ಟೀಕಿಸಿಲ್ಲ, ಧರ್ಮ ಎಂಬ ಶಬ್ದವನ್ನು ವಚನ ಸಾಹಿತ್ಯದಲ್ಲಾಗಲೀ, ಸಂಸ್ಕೃತ ದರ್ಶನ ಶಾಸ್ತ್ರದಲ್ಲಾಗಲೀ ಇಂದು ಬಳಕೆಯಲ್ಲಿರುವ Religion ಎಂಬ ಅರ್ಥದಲ್ಲಿ ಬಳಸಿಯೇ ಇಲ್ಲ. ಹಿಂದೂ ಧರ್ಮ, ಬೌದ್ಧ ಧರ್ಮ, ಜೈನ ಧರ್ಮ, ಕ್ರೈಸ್ತ ಧರ್ಮ, ಇಸ್ಲಾಂ ಧರ್ಮ ಇತ್ಯಾದಿ ಮತಧರ್ಮಗಳ ಹೆಸರುಗಳನ್ನು ಜೋಡಿಸಿ ಹೇಳುವುದೇ ಧರ್ಮ ಶಬ್ದದ ಅರ್ಥವ್ಯಾಪ್ತಿಯನ್ನು ಕುಗ್ಗಿಸಿದಂತೆ! ಧರ್ಮ ಶಬ್ದಕ್ಕೆ ಸದಾಚಾರ (pious deed), ಸನ್ನಡತೆ (good conduct), ನ್ಯಾಯ (justice), ಕರ್ತವ್ಯ (duty), ದಾನ (charity), ನೈತಿಕೆತೆ (morality), ಗುಣ (natural quality) ಹೀಗೆ ಇನ್ನೂ ಅನೇಕ ಅರ್ಥಗಳಿವೆ. ಸಂಸ್ಕೃತ ವಾಙ್ಮಯದಲ್ಲಿ ಅಪಾರ ಪಾಂಡಿತ್ಯವನ್ನು ಪಡೆದಿದ್ದ ಬಸವಣ್ಣನವರು ಪ್ರಾಚೀನ ಗ್ರಂಥವಾದ ಗೌತಮ ಧರ್ಮಸೂತ್ರದ ಆರಂಭದಲ್ಲಿ ಬರುವ ವೇದೋ ಧರ್ಮಮೂಲಮ್ (ವೇದವೇ ಧರ್ಮದ ಮೂಲ) ಎಂಬ ಮಾತನ್ನು ಒಪ್ಪದೆ ದಯವೇ ಧರ್ಮದ ಮೂಲವಯ್ಯಾ ಎಂದು ಪರಿಷ್ಕರಿಸಿ ಹೇಳಿದ್ದಾರೆ. ಜ್ಯೋತಿಷ್ಟೋಮೇನ ಸ್ವರ್ಗಕಾಮೋ ಯಚೇತ, ಪಶುಮಾಲಭೇತ ಎಂದು ಯಜ್ಞಯಾಗಾದಿಗಳಲ್ಲಿ ಪ್ರಾಣಿಬಲಿಯನ್ನು ವಿಧಿಸುವ ವೇದವು (ಕರ್ಮಕಾಂಡ) ಧರ್ಮದ ಮೂಲ ಹೇಗಾಗಬಲ್ಲುದು? ಆದಕಾರಣ ಧರ್ಮದ ಮೂಲ ವೇದವಲ್ಲ ದಯವೇ ಧರ್ಮದ ಮೂಲ, ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿಯೂ ಎಂಬ ಮಾನವೀಯ ಭಾವನೆ ಯನ್ನು ಬಸವಣ್ಣನವರು ಈ ವಚನದಲ್ಲಿ ಪ್ರತಿಪಾದಿಸಿದ್ದಾರೆ. ಗೋಷ್ಠಿಯಲ್ಲಿ ಇದಕ್ಕೆ ಪೂರಕವಾದ ಪ್ರತಿಕ್ರಿಯೆಗಳು ಕೇಳಿ ಬಂದವೇ ಹೊರತು ಯಾವ ವಿರೋಧವೂ ವ್ಯಕ್ತವಾಗಲಿಲ್ಲ.

ಸಮ್ಮೇಳನದ ಕೊನೆಯಲ್ಲಿ ಸಂಸ್ಥೆಗಾಗಿ ದುಡಿದು ಅಗಲಿ ಹೋದ ಹಿರಿಯ ಜೀವಗಳ ಸಂಸ್ಮರಣೆ ಮಾಡಲಾಯಿತು. ಇಲ್ಲಿರುವ ಭಾರತೀಯರನ್ನು ನೋಡಿದಾಗ ಬಸವಣ್ಣನವರ ಮಾತಿನಲ್ಲಿ ಹೇಳುವುದಾದರೆ ಕಾಲಲ್ಲಿ ಕಟ್ಟಿದ ಗುಂಡು, ಕೊರಳಲ್ಲಿ ಕಟ್ಟಿದ ಬೆಂಡು, ತೇಲಲೀಯದು ಗುಂಡು, ಮುಳುಗಲೀಯದು ಬೆಂಡು ಎಂಬ ಅಸಹಾಯಕ ಸ್ಥಿತಿ ಇವರದು. ಇತ್ತ ಭಾರತಕ್ಕೆ ಮರಳುವಂತೆಯೂ ಇಲ್ಲ, ಇಲ್ಲೇ ಇರುವಂತೆಯೂ ಇಲ್ಲ. ಅಂತಹ ಮನಸ್ಥಿತಿ. ಅಕ್ಕಮಹಾದೇವಿಯು ಹೇಳುವಂತೆ ಆಯುಷ್ಯ ಹೋಗುತ್ತಿದೆ, ಭವಿಷ್ಯ ತೊಲಗುತ್ತಿದೆ. ಕೂಡಿರ್ದ ಸತಿಸುತರು ತಮತಮಗೆ ಹರಿದು ಹೋಗುತ್ತೈದಾರೆ;. ಅನೇಕರಿಗೆ ಈಗ ಒಂಟಿತನ (lonliness) ಕಾಡಿಸುತ್ತಿದೆ. ಮೊನ್ನೆ ದೂರವಾಣಿಯಲ್ಲಿ ಮಾತನಾಡಿಸಿದಾಗ ಹಿಂದಿನದೆಲ್ಲವನ್ನೂ ನೆನೆಸಿಕೊಂಡು ಕೆಲವರು ಕಣ್ಣೀರು ಸುರಿಸಿದರು. ಎಳೆಯ ವಯಸ್ಸಿನಲ್ಲಿ ತಂದೆತಾಯಂದಿರ ಮಮತೆಯ ಪಂಜರದೊಳಗಿದ್ದು ರೆಕ್ಕೆ ಬಲಿತ ಮೇಲೆ ಇಲ್ಲಿಗೆ ಹಾರಿಬಂದ ಗಿಳಿಗಳು ಇವರು. ಇಲ್ಲಿಯೇ ಹುಟ್ಟಿ ಬೆಳೆದ ಇವರ ಗಿಳಿಮರಿಗಳು ಇವರ ಮಮತೆಯ ಪಂಜರದಿಂದ ಹಾರಿ ಹೋಗಿ ಈಗ ತಮ್ಮದೇ ಆದ ಗೂಡು ಕಟ್ಟಿಕೊಂಡಿವೆ! ಭವ್ಯವಾದ ಇವರ ಬಂಗಲೆಗಳು ಖಾಲಿ ಪಂಜರಗಳಾಗಿವೆ!

ಗಿಳಿಯು ಪಂಜರದೊಳಿಲ್ಲ  ರಾಮ ರಾಮ 
ಬರಿದೆ ಪಂಜರವಾಯಿತಲ್ಲ! 

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 15.7.2019