ಭಯೋತ್ಪಾದಕರನ್ನು ಹತ್ತಿಕ್ಕದೆ ವಿಶ್ವಶಾಂತಿ ನೆಲೆಸಲು ಸಾಧ್ಯವಿಲ್ಲ

  •  
  •  
  •  
  •  
  •    Views  

ಮೊನ್ನೆ ಮಂಗಳವಾರ ಬೆಳಗ್ಗೆ ನಿದ್ರೆಯಿಂದ ಎಚ್ಚರಗೊಳ್ಳುತ್ತಿದ್ದಂತೆಯೇ ಆತ್ಮೀಯರಿಂದ ನಮ್ಮ ಸನಿಹವಾಣಿಗೆ ಕರೆ! ಭಾರತೀಯ ವಾಯುಪಡೆಯ ಯೋಧರು ಬೆಳಗಿನ ಜಾವದಲ್ಲಿ ಪಾಕಿಸ್ತಾನದ ಗಡಿಯನ್ನು ಭೇದಿಸಿ ಒಳನುಗ್ಗಿ ಉಗ್ರನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿದ ಸುದ್ದಿಯನ್ನು ದೂರದರ್ಶನದಲ್ಲಿ ನೋಡಲು ಸೂಚಿಸಿದರು. ಬೆಳ್ಳಂ ಬೆಳಗ್ಗೆಯೇ ನಮ್ಮ ವೀರಯೋಧರ ಯಶೋಗಾಥೆಯನ್ನು ಕೇಳಿ ದೂರದರ್ಶನದಲ್ಲಿ ಬಿತ್ತರವಾದ ವಿವರವಾದ ಸುದ್ದಿಯನ್ನು ವೀಕ್ಷಿಸಿದಾಗ ನಿಜಕ್ಕೂ ಹೆಮ್ಮೆಯೆನಿಸಿತು. ಕೇವಲ 21 ನಿಮಿಷಗಳಲ್ಲಿ ಉಗ್ರರ ತಾಣಗಳನ್ನು ಧ್ವಂಸಗೊಳಿಸಿ 300 ಕ್ಕೂ ಹೆಚ್ಚು ಉಗ್ರರನ್ನು ಆಹುತಿ ಪಡೆದು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ ನಮ್ಮ ಭಾರತೀಯ ವಾಯುಪಡೆಯ ಕ್ಷಿಪ್ರ ವೈಮಾನಿಕ ಕಾರ್ಯಾಚರಣೆಯನ್ನು ನೋಡಿ ಮೈ ಪುಳಕಗೊಂಡಿತು. ಮೇಲ್ನೋಟಕ್ಕೆ ಭಾರತೀಯ ಸೇನೆಯ ಮೇಲೆ ಇತ್ತೀಚೆಗೆ ನಡೆದ ಉಗ್ರಗಾಮಿಗಳ ಆತ್ಮಾಹುತಿ ಧಾಳಿಗೆ ಇದು ಪ್ರತೀಕಾರವೆಂಬಂತೆ ತೋರಿದರೂ ವಿಶ್ವಶಾಂತಿಗೆ ಕಂಟಕರಾಗಿದ್ದ ಉಗ್ರಗಾಮಿಗಳನ್ನು ಸದೆಬಡಿಯಲು ನಡೆಸಿದ ದಿಟ್ಟ ಕಾರ್ಯಾಚರಣೆ ಎಂಬುದನ್ನು ಯಾರೂ ಅಲ್ಲಗಳೆಯಲಾಗದು. ಈ ಕಾರ್ಯಾಚರಣೆಯ ಸಂದರ್ಭದಲ್ಲಿ ಪಾಕಿಸ್ತಾನದ ನಾಗರಿಕರಿಗಾಗಲೀ ಸೇನಾ ನೆಲೆಗಳಿಗಾಗಲೀ ಹಾನಿಯಾಗದಂತೆ ನಮ್ಮ ಸೇನೆ ಎಚ್ಚರವಹಿಸಿರುವುದು ಶ್ಲಾಘನೀಯವಾದುದು. ಭಾರತ ಸರಕಾರ ಉಗ್ರರ ವಿರುದ್ಧ ಕೈಗೊಂಡ ಈ ದಿಟ್ಟ ಕ್ರಮ ಭಾರತೀಯರೆಲ್ಲರೂ ಹೆಮ್ಮೆ ಪಡುವಂತಹ ಸಂಗತಿ. ಇದು ಪಾಕಿಸ್ತಾನದ ವಿರುದ್ಧ ಸಾರಿದ ಯುದ್ಧವಲ್ಲ "ಪರಿತ್ರಾಣಾಯ ಸಾಧೂನಾಂ, ವಿನಾಶಾಯ ಚ ದುಷ್ಟತಾಂ" ಎಂದು ಭಗವದ್ಗೀತೆಯು ಹೇಳುವಂತೆ ಶಿಷ್ಟರಾದ ನಾಗರಿಕರನ್ನು ರಕ್ಷಿಸಿ ದುಷ್ಟರಾದ ಭಯೋತ್ಪಾದಕರನ್ನು ಸಂಹಾರ ಮಾಡುವ ಕೆಚ್ಚೆದೆಯ ಕಾಳಗ. ಈ ಸಂದರ್ಭದಲ್ಲಿ ನಮ್ಮ ದೇಶದ ಎಲ್ಲ ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ ಪಕ್ಷಭೇದ ಮರೆತು ಭಾರತ ಸರಕಾರದೊಂದಿಗೆ ಕೈಜೋಡಿಸಿರುವುದು ಶ್ಲಾಘನೀಯವಾದುದು.

ತನ್ನ ನೆಲದಲ್ಲಿಯೇ ಇರುವ ಭಯೋತ್ಪಾದಕರನ್ನು ದಮನಗೊಳಿಸುವ ಕಾರ್ಯ ಸನಿಹದಲ್ಲಿಯೇ ಇರುವ ಪಾಕಿಸ್ತಾನದ ಸೇನೆಯಿಂದ ಏಕೆ ಇದುವರೆಗೂ ಸಾಧ್ಯವಾಗಿಲ್ಲ? ಪಾಕಿಸ್ತಾನದ ನಿಲುವನ್ನು ನೋಡಿದಾಗ ನಮಗೆ ಮಹಾಭಾರತದಲ್ಲಿ ದುರ್ಯೋಧನ ಹೇಳುವ ಮಾತು ಜ್ಞಾಪಕಕ್ಕೆ ಬರುತ್ತದೆ. ಹನ್ನೆರಡು ವರ್ಷಗಳ ವನವಾಸ, ಎರಡು ವರ್ಷಗಳ ಅಜ್ಞಾತವಾಸವನ್ನು ಯಶಸ್ವಿಯಾಗಿ ಮುಗಿಸಿಕೊಂಡು ಬಂದ ಪಾಂಡವರಿಗೆ ಅವರ ರಾಜ್ಯವನ್ನು ಹಿಂದಿರುಗಿಸುವುದು ನಿನ್ನ ಧರ್ಮವಲ್ಲವೇ? ಎಂದು ಶ್ರೀಕೃಷ್ಣನು ಪ್ರಶ್ನಿಸಿದಾಗ ದುರ್ಯೋಧನ ಕೊಡುವ ಉತ್ತರ:

ಜಾನಾಮಿ ಧರ್ಮಂ ನ ಚ ಮೇ ಪ್ರವೃತ್ತಿಃ 
ಜಾನಾಮ್ಯಧರ್ಮಂ ನ ಚ ಮೇ ನಿವೃತ್ತಿಃ | 
ಕೇನಾಪಿ ದೇವೇನ ಹೃದಿ ಸ್ಥಿತೇನ 
ಯಥಾ ನಿಯುಕ್ತೋಸ್ಮಿ ತಥಾ ಕರೋಮಿ ।।

ಇದರ ಭಾವಾರ್ಥ: ಧರ್ಮವೇನೆಂಬುದು ನನಗೆ ಚೆನ್ನಾಗಿ ಗೊತ್ತಿದೆ. ಆದರೆ ಏನು ಮಾಡಲಿ ಅದರಂತೆ ನಡೆಯಲು ನನಗೆ ಮನಸ್ಸಿಲ್ಲ. ಅಧರ್ಮವೇನೆಂಬುದೂ ನನಗೆ ಚೆನ್ನಾಗಿ ಗೊತ್ತಿದೆ. ಆದರೆ ಅದರಿಂದ ಹಿಂದೆ ಸರಿಯಲು ನನಗೆ ಮನಸ್ಸು ಬರುತ್ತಿಲ್ಲ. "ನನ್ನ ಹೃದಯದಲ್ಲಿ ನೆಲೆಸಿರುವ ದೇವರು ಯಾವ ರೀತಿ ಪ್ರೇರಣೆ ಮಾಡುತ್ತಾನೋ ಅದರಂತೆ ಮಾಡುತ್ತೇನೆ". ಮೊದಲನೆಯ ಎರಡು ಸಾಲುಗಳಲ್ಲಿ ದುರ್ಯೋಧನ ಹೇಳುವ ಮಾತು ಸರಿ, ಸತ್ಯಸ್ಯ ಸತ್ಯ. ಎಲ್ಲರ ಬದುಕಿನಲ್ಲಿ ಸಹಜವಾಗಿ ಕಂಡುಬರುವ ಮಾನಸಿಕ ದ್ವಂದ್ವ. ಆದರೆ ಕೊನೆಯ ಎರಡು ಸಾಲುಗಳಲ್ಲಿ ಅವನು ಹೇಳುವ ಮಾತು ಅರ್ಥಹೀನ. ಅದು ದುರ್ಯೋಧನನ ಹೃದಯದಲ್ಲಿರುವ ದೇವರು ಮಾಡಿದ ಸತ್ಪ್ರೇರಣೆ ಅಲ್ಲ; ಅವನ ಮನಸ್ಸಿನಲ್ಲಿರುವ ಸೈತಾನ ಮಾಡಿದ ಕೆಟ್ಟ ಪ್ರಚೋದನೆ! ಪಾಕಿಸ್ತಾನದ ಮನಃಸ್ಥಿತಿಯು ಮಹಾಭಾರತದ ದುರ್ಯೋಧನನ ಈ ಎಡಬಿಡಂಗಿ ಸ್ಥಿತಿಗಿಂತ ಭಿನ್ನವಲ್ಲ. ತನ್ನ ನೆಲದಲ್ಲಿ ಉಗ್ರರು ಇರುವ ವಿಚಾರ ಅದಕ್ಕೆ ಗೊತ್ತಿದೆ. ಆದರೆ ಗೊತ್ತಿಲ್ಲವೆಂಬಂತೆ ನಾಟಕವಾಡುತ್ತಿದೆ. ಅವಕಾಶ ಸಿಕ್ಕಾಗಲೆಲ್ಲಾ ಭಾರತದ ಮೇಲೆ ಪ್ರಚ್ಚನ್ನ ಯುದ್ಧದಲ್ಲಿ ತೊಡಗಲಿ ಎಂಬ ಕೂಟಯುದ್ದ ನೀತಿ ಅದರದು. ಉಗ್ರರ ನೆಲೆಗಳು ಎಲ್ಲೆಲ್ಲಿ ಇವೆ ಎಂಬುದು ಆ ದೇಶಕ್ಕೆ ತಿಳಿಯದ ವಿಷಯವೇನಲ್ಲ, ಈಗಲೂ ಪಾಕಿಸ್ತಾನವನ್ನು ನಿಯಂತ್ರಿಸುತ್ತಿರುವುದು ಸೇನೆ ಮತ್ತು ಅದರ ಕೃಪಾಪೋಷಿತ ಉಗ್ರಗಾಮಿ ಸಂಘಟನೆಗಳು ಎಂಬುದು ಗುಟ್ಟೇನಲ್ಲ! ಒಸಾಮಾ ಬಿನ್ ಲಾಡೆನ್ ತನ್ನ ನೆಲದಲ್ಲಿ ಇಲ್ಲ ಎಂದೇ ಪಾಕ್ ವಾದಿಸುತ್ತಿತ್ತು. ಒಂದು ದಿನ ರಾತ್ರಿ ಅಮೆರಿಕಾದ ಸೇನೆ ಅವನ ಅಡಗುದಾಣವನ್ನ ಭೇದಿಸಿ ಸೆರೆ ಹಿಡಿದು ತಡಮಾಡದೆ ಕೊಂದು ಹೆಣವನ್ನು ಸಮುದ್ರಕ್ಕೆ ಎಸೆದು ಜಲಸಮಾಧಿ ಮಾಡಿ ಹೋಯಿತು. ಅದನ್ನೇ ಭಾರತದ ವಾಯುಪಡೆ ಈಗ ಮಾಡಿರುವುದು.

ತನ್ನ ನೆಲದಲ್ಲಿರುವ ಉಗ್ರಸಂಘಟನೆಗಳನ್ನು ಮಟ್ಟಹಾಕುವ ಕೆಲಸವನ್ನು ಪಾಕ್ ಆರಂಭದಿಂದಲೂ ಮಾಡಲಿಲ್ಲ. ಈಗಲೂ ಮಾಡುತ್ತಿಲ್ಲ. ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್ನಲ್ಲಿ ಇದೇ ಫೆಬ್ರವರಿ 7 ರಿಂದ 11ರವರೆಗೆ ನಡೆದ ವಿಶ್ವಶಾಂತಿ ಶೃಂಗಸಭೆಯಲ್ಲಿ (World Summit) ನಾವು ಭಾಗವಹಿಸಿದ್ದು ನಿಮಗೆ ಗೊತ್ತು. ಅಲ್ಲಿ ಭಾಗವಹಿಸಿದ್ದ ಪ್ರಪಂಚದ 110 ರಾಷ್ಟ್ರಗಳ ರಾಜಕೀಯ ಮತ್ತು ಧಾರ್ಮಿಕ ನೇತಾರರೆಲ್ಲರೂ ಶಾಂತಿಯನ್ನು ಬಯಸಿ ಸಹಿ ಹಾಕಿದ್ದರು. ಆದರೆ ಶಾಂತಿ ಎಂಬುದು ಕೇವಲ ಶೃಂಗ ಸಭೆಗಳಲ್ಲಿ ಮಾತನಾಡುವ ವಿಷಯವಾಗಿದೆಯೇ ಹೊರತು ಕಾರ್ಯರೂಪಕ್ಕೆ ತರುವ ಅಜೆಂಡಾ ಆಗಿಲ್ಲ. ಅಲ್ಲಿಂದ ಹಿಂದಿರುಗಿ ಬಂದ ಒಂದೆರಡು ದಿನಗಳಲ್ಲಿಯೇ ಎಂತಹ ಭೀಕರ ದುರಂತ ಕಾಶ್ಮೀರದ ಪುಲ್ವಾಮಾದಲ್ಲಿ ನಡೆದುಹೋಯಿತು! ಭಾರತೀಯ ಸೇನಾ ತುಕಡಿಯ ಮೇಲೆ ಉಗ್ರಗಾಮಿಗಳ ಆತ್ಮಾಹುತಿ ಧಾಳಿ ನಡೆದು 40 ಜನ ಯೋಧರು ವೀರಮರಣವನ್ನು ಅಪ್ಪಿ ಹುತಾತ್ಮರಾಗಿ ಹೋದರು. ಅವರಲ್ಲಿ ಕರ್ನಾಟಕದ ಯೋಧನೂ ಒಬ್ಬ. ಪಾಪ, ಹೊಸದಾಗಿ ಮದುವೆಯಾಗಿತ್ತು. ತನ್ನದಲ್ಲದ ತಪ್ಪಿಗೆ ನವವಧು ವಿಧವೆಯಾಗಿ ಹೋದಳು! ಭಾರತೀಯ ವಾಯುಪಡೆ ಉಗ್ರರ ಮೇಲೆ ನಡೆಸಿದ ಧಾಳಿ ಆಕೆಯ ಹೃದಯವನ್ನು ತಟ್ಟಿತು. ಆಕೆ ತನ್ನ ಗಂಡನ ಸಮಾಧಿ ಬಳಿ ನಿಂತು ದೂರದಲ್ಲಿರುವ ವಾಯು ಸೇನೆಯ ವೀರಯೋಧರಿಗೆ ಸೆಲ್ಯೂಟ್ ಹೊಡೆದು ಆಡಿದ ಮಾತುಗಳು ಹೃದಯವಿದ್ರಾವಕವಾಗಿದ್ದವು.

ಪಾಕಿಸ್ತಾನದ ನಾಗರಿಕರಿಗಾಗಲೀ, ಪಾಕ್ ಸೈನಿಕರಿಗಾಗಲೀ ಯಾವ ಪ್ರಾಣಹಾನಿಯನ್ನು ಭಾರತೀಯ ವಾಯುಪಡೆ ಮಾಡಿಲ್ಲ. ಉಗ್ರರ ನೆಲೆಗಳನ್ನು ಮಾತ್ರ ಧ್ವಂಸಗೊಳಿಸಿದೆ. ಇದಕ್ಕಾಗಿ ಪಾಕಿಸ್ತಾನ ಕೃತಜ್ಞವಾಗಿರಬೇಕಾಗಿದೆ. ಇದರ ಬದಲು ಭಾರತದ ಮೇಲೆ ಮರುಧಾಳಿ ಮಾಡಲು ಪಾಕ್ ಯತ್ನಿಸುತ್ತಿರುವುದು ತನ್ನ ನೆಲದಲ್ಲಿ ಬೀಡುಬಿಟ್ಟಿರುವ ಭಯೋತ್ಪಾದಕರನ್ನು ಪೋಷಿಸಿಕೊಂಡು ಬಂದಿರುವುದನ್ನು ಬಹಿರಂಗವಾಗಿ ನಾಚಿಕೆಯಿಲ್ಲದೆ ಜಗತ್ತಿನ ಮುಂದೆ ಒಪ್ಪಿಕೊಂಡಂತಾಗಿದೆ. ಮನೆಯಿಂದ ಹೊರಬಂದಾಗ ದರೋಡೆಕೋರನೊಬ್ಬ ಹಿಂದಿನಿಂದ ಚಾಕು ಹಿಡಿದು ಹಲ್ಲೆ ಮಾಡಲು ಯತ್ನಿಸುತ್ತಿರುವುದನ್ನು ಕಂಡು ಪಕ್ಕದ ಮನೆಯವರು ಧಾವಿಸಿ ಬಂದು ರಕ್ಷಣೆ ಮಾಡಿದರೆ ನಮ್ಮ ಮನೆಯ ಮುಂದೆ ನಿಂತಿದ್ದ ದರೋಡೆಕೋರನನ್ನು ನೀವೇಕೆ ಹಿಡಿದು ಪೋಲೀಸರ ವಶಕ್ಕೆ ಕೊಟ್ಟಿರಿ ಎಂದು ಕೇಳಿದರೆ ನಗೆಪಾಟಲಾಗುತ್ತದೆಯಲ್ಲವೇ!

ಆತ್ಮೀಯ ಶಿಷ್ಯರೊಬ್ಬರು ಕೆಲವು ದಿನಗಳ ಹಿಂದೆ ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೇನೆಯ ಮೇಲೆ ನಡೆಯುತ್ತಿರುವ ಹಿಂಸಾಚಾರದ ಕೆಲವು ವಿಡಿಯೋ ತುಣುಕುಗಳನ್ನು ನಮಗೆ ಕಳುಹಿಸಿದ್ದರು. ಅವುಗಳಲ್ಲಿ ಕಂಡ ದೃಶ್ಯ: ಗಡಿ ಭಾಗದ ಹಳ್ಳಿಗಳಲ್ಲಿ ಸೈನಿಕರು ಸಂಚರಿಸುವಾಗ ಹಳ್ಳಿಯ ಪಡ್ಡೆ ಹುಡುಗರು ಅವರ ಮೇಲೆ ಕಲ್ಲು ಎಸೆಯುತ್ತಿದ್ದರು. ಹಿಂದಿನಿಂದ ತಿವಿದು ಗೇಲಿ ಮಾಡುತ್ತಿದ್ದರು. ಕೈಯಲ್ಲಿ ಬಂದೂಕು ಇದ್ದರೂ ಹೆದರಿಸದೆ ಹಿಂಸೆ ಮತ್ತು ಅವಮಾನಗಳನ್ನು ನಮ್ಮ ಸೈನಿಕರು ಏಕೆ ಸಹಿಸಿಕೊಂಡು ಹೇಡಿಗಳಂತೆ ಹೋಗುತ್ತಿದ್ದಾರೆ ಎಂದು ನಮಗೆ ಅರ್ಥವಾಗಲಿಲ್ಲ. ನಂತರ ಕೇಳಿದಾಗ ತಿಳಿದು ಬಂದ ವಿಚಾರ: ಮೇಲಧಿಕಾರಿಗಳ ಆದೇಶವಿಲ್ಲದೆ ಯಾರ ಮೇಲೂ ಗುಂಡು ಹಾರಿಸುವಂತಿಲ್ಲ. ದಾರಿಯಲ್ಲಿ ಉಗುಳಿದರೆ ಸಾಕು, ಕೆನ್ನೆಗೆ ಬಾರಿಸುತ್ತಾರೆ. ಆದರೆ ಯೋಧರ ಕೈಯಲ್ಲಿ ಆಯುಧವಿದ್ದೂ ಅದನ್ನು ಬಳಸಲು ಸಾಧ್ಯವಿಲ್ಲದಂತಹ ಅಸಹಾಯಕ ಪರಿಸ್ಥಿತಿ. ನಮ್ಮ ಸೈನಿಕರ ಸಹನೆ ದೊಡ್ಡದು. ಅವರ ಈ ಸಹನೆಯನ್ನು ಕಂಡು ನಮಗೆ ನೆನಪಾದ ಒಂದು ನೀತಿಕಥೆ: ಒಂದು ಸರ್ಪವಿತ್ತು. ಅದಕ್ಕೆ ಒಂದು ಆಲೋಚನೆ ಬಂತು. ತಾನು ಒಳ್ಳೆಯವನಾಗಬೇಕು. ಹಿಂಸೆಯನ್ನು ಸಂಪೂರ್ಣವಾಗಿ ತೊರೆದು ಸಜ್ಜನನಾಗಬೇಕು. ಅದು ಒಬ್ಬ ಋಷಿಯ ಹತ್ತಿರ ಹೋಗಿ ತನ್ನ ಮನದ ಇಂಗಿತವನ್ನು ಹೇಳಿತು. ಋಷಿ ಹೇಳಿದರು  "ಹಾಗಿದ್ದರೆ ನೀನು ಯಾರನ್ನೂ ಕಚ್ಚಬೇಡ. ಹಿಂಸೆಯನ್ನು ತ್ಯಜಿಸು”. ಅಂದಿನಿಂದ ಋಷಿಗಳ ಮಾತನ್ನು ಅದು ಪಾಲಿಸತೊಡಗಿತು. ಹಾವು ಕಚ್ಚುವುದಿಲ್ಲ; ಸಾಧು ಪ್ರಾಣಿ ಎಂದು ತಿಳಿದ ಕೂಡಲೇ ಜನ ಭಯಪಡುವುದನ್ನು ಬಿಟ್ಟರು. ಹೆಂಗಸರು ಅದನ್ನೇ ತಲೆಯ ಮೇಲೆ ಸಿಂಬೆ ಮಾಡಿಕೊಂಡು ನೀರ ಕೊಡಗಳನ್ನು ಹೊರಲು ಆರಂಭಿಸಿದರು. ಮಕ್ಕಳು ಕೀಟಲೆ ಮಾಡಿ ಹಿಂಸೆ ಪಡಿಸತೊಡಗಿದರು. ಹಾವಿಗೆ ಜೀವನವೇ ಬೇಸರವಾಗಿ ಪುನಃ ಋಷಿಯ ಬಳಿಗೆ ಹೋಯಿತು. ಹಾವಿನ ಕರುಣೆಯ ಕಥೆಯನ್ನು ಕೇಳಿದ ಋಷಿ ಹೇಳಿದ "ನಾನು ಕಚ್ಚಬೇಡ ಎಂದು ನಿನಗೆ ಹೇಳಿದ್ದೆನೇ ಹೊರತು ಬುಸುಗುಟ್ಟಬೇಡ ಎಂದು ಹೇಳಿರಲಿಲ್ಲವಲ್ಲ?" ಜಮ್ಮು ಕಾಶ್ಮೀರದ ನಮ್ಮ ಸೈನಿಕರ ಸ್ಥಿತಿ ಆ ಸರ್ಪದ ಸ್ಥಿತಿಯಂತಿತ್ತು, ಸೇನೆಗೆ ಮುಕ್ತ ಅವಕಾಶ ಕೊಟ್ಟರೆ ಏನೆಲ್ಲಾ ಮಾಡಬಲ್ಲದು ಎಂಬುದಕ್ಕೆ ವೈಮಾನಿಕ ಧಾಳಿಯ ಈ ಸಂದರ್ಭವು ಪುರಾವೆಯಾಗಿ ನಿಲ್ಲುತ್ತದೆ ಸೈನಿಕರು ತಮ್ಮ ಜೀವದ ಹಂಗು ತೊರೆದು ದೇಶದ ಸುಭದ್ರತೆಗೆ ಹೋರಾಟ ನಡೆಸಿದ್ದಾರೆ. ರಾಜಕೀಯ ನೇತಾರರ ನಿರ್ಧಾರಗಳು ಅವರ ತ್ಯಾಗ ಮತ್ತು ಬಲಿದಾನಗಳಿಗೆ ಪೂರಕವಾಗಿರಬೇಕು.

2016ರಲ್ಲಿ ನೇಪಾಳದಲ್ಲಿ ಶಾಂತಿ ಶೃಂಗಸಭೆ ನಡೆದಾಗ ವೇದಿಕೆಯ ಮೇಲೆ ನಮ್ಮ ಪಕ್ಕದಲ್ಲಿ ಪಾಕ್ ಸಂಸತ್ ಸದಸ್ಯರೊಬ್ಬರು ಇದ್ದರು. ಅವರ ತಂದೆ ದೇಶ ವಿಭಜನೆಗೊಂಡಾಗ ಲಾಹೋರ್ನಲ್ಲಿ ದೊಡ್ಡ ಉದ್ಯಮಿ. ಅವರು ಮುಸ್ಲಿಮರಾದರೂ ಅವರ ಪಾಲುದಾರ ಒಬ್ಬ ಹಿಂದೂ, ದೇಶ ವಿಭಜನೆಯಾದಾಗ ಆ ಹಿಂದೂ ಗೆಳೆಯ ಭಾರತಕ್ಕೆ ಬರದೆ ಲಾಹೋರಿನಲ್ಲಿಯೇ ಉಳಿದರು. ಆಗ ನಡೆದ ಕೋಮು ಹಿಂಸಾಚಾರದ ಸಂದರ್ಭದಲ್ಲಿ ಹಿಂದೂ ಗೆಳೆಯನಿಗೆ ಮತ್ತು ಅವನ ಕುಟುಂಬವರ್ಗದವರಿಗೆ ತಮ್ಮ ಮನೆಯಲ್ಲಿ ಆಶ್ರಯ ಮತ್ತು ರಕ್ಷಣೆ ಒದಗಿಸಿದವರು ಈ ಮುಸ್ಲಿಂ ಸಂಸದರ ತಂದೆ! ಅದನ್ನು ಅರಿತು ಅವರ ಮನೆ ಬಾಗಿಲಿಗೆ ಬಂದ ಧಾಳಿಕೋರರನ್ನು ಕುರಿತು "ಖಬರ್ದಾರ್ ಕೋಯೀ ಇನ್ಕೋ ನಹೀ ಛೂಯೇಗಾ!" ಎಂದು ಬೆದರಿಸಿ ಕಳುಹಿಸಿದರಂತೆ. ಪಾಕಿಸ್ತಾನದ ಜನಸಾಮಾನ್ಯರಿಗೆ ಭಾರತೀಯರ ಮೇಲೆ ದ್ವೇಷವಿಲ್ಲ. ಭಾರತದ ಕಡೆ ಕೈತೋರಿಸಿ ದ್ವೇಷವನ್ನು ಸೃಷ್ಟಿಸಿ ಅಧಿಕಾರ ಉಳಿಸಿಕೊಳ್ಳುವ ಅಲ್ಲಿನ ರಾಜಕಾರಣಿಗಳ ಕೀಳು ರಾಜಕೀಯ ಆ ದೇಶವನ್ನು ಈಗ ದಿವಾಳಿಯ ಅಂಚಿಗೆ ತಂದು ನಿಲ್ಲಿಸಿದೆ. ಭಾರತದ ವೀಳಯದ ಎಲೆಗೆ ದೊಡ್ಡ ಮಾರುಕಟ್ಟೆ ಪಾಕಿಸ್ತಾನ. ಭಾರತದ ಸಿನೆಮಾಗಳು ಪಾಕ್ನಲ್ಲಿ ಜನಪ್ರಿಯ.

ದುಬೈನಲ್ಲಿ ಹಿಂದೊಮ್ಮೆ ಪ್ರಯಾಣ ಮಾಡುತ್ತಿದ್ದಾಗ ಪಾಕಿಸ್ತಾನದ ಮುಸ್ಲಿಂ ಟ್ಯಾಕ್ಸಿ ಡ್ರೈವರ್ ಹಿಂದೀ ಚಲನಚಿತ್ರಗೀತೆಯನ್ನು ಗುನುಗುತ್ತಿದ್ದ. ನಮ್ಮ ಪಕ್ಕದಲ್ಲಿದ್ದ ಶಿಷ್ಯರು ಅವನೊಂದಿಗೆ ಮಾತು ಆರಂಭಿಸಿದರು:

"Why do you hate Indians?"
"No Sir, we do not hate Indians."
"ದಿಲ್ ಸೇ ಬೋಲೋ, ದಿಮಾಗ್ ಸೇ ನಹೀಂ!”
"ಮೈಂ ದಿಲ್ ಸೇ ಹೀ ಬೋಲ್ರಹಾ ಹೂಂ, ಸಾಬ್. 
Believe me Sir, we do not hate Indians. But we do hate the politicians!"

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ: 28.2.2019