ಜೀವನ: ಸಿಹಿ ಕಹಿ ನೆನಪುಗಳ ತೂಗುಯ್ಯಾಲೆ

  •  
  •  
  •  
  •  
  •    Views  

ಜೀವನದ ಸಿಹಿ ಕಹಿ ಅನುಭವಗಳನ್ನು ಒಂದು ಅಂಕಣದಲ್ಲಿ ಯಾರೂ ಬರೆದು ಮುಗಿಸಲು ಆಗುವುದಿಲ್ಲ. ಮೇಲ್ನೋಟಕ್ಕೆ ಒಬ್ಬರ ಅನುಭವಕ್ಕಿಂತ ಇನ್ನೊಬ್ಬರ ಅನುಭವವು ವಿಭಿನ್ನ, ವಿಶಿಷ್ಟವೆಂದು ಕಂಡು ಬಂದರೂ ಅವುಗಳ ಮೂಲ ಸ್ವರೂಪ ಒಂದೇ. ಬಂಗಾರದ ಗಟ್ಟಿ ಒಂದೇ ಆದರೂ ಕಲಾಕಾರನ ಕೌಶಲ್ಯದಿಂದ ವಿಭಿನ್ನ ಆಕಾರದ ಸುಂದರ ಆಭರಣಗಳು ನಿರ್ಮಾಣಗೊಳ್ಳುವಂತೆ! ಕಲಾಕಾರನ ನೈಪುಣ್ಯ ಹಾಗೂ ಆಭರಣ ಧರಿಸುವವರ ಅಭಿರುಚಿಗೆ ಅನುಗುಣವಾಗಿ ಒಬ್ಬರಿಗೆ ಒಂದು ಆಭರಣ ಇಷ್ಟವಾಗಬಹುದು ಇನ್ನೊಬ್ಬರಿಗೆ ಆಗದೇ ಇರಬಹುದು. ಬೇರೆಯವರಿಗೆ ಇಷ್ಟವಾಗಲಿ ಆಗದಿರಲಿ ಬಸವಣ್ಣನವರು ಹೇಳುವಂತೆ “ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು” ಎಂಬ ವಚನದ ಆಶಯಕ್ಕೆ ಅನುಗುಣವಾಗಿ ಮನುಷ್ಯನು ತನ್ನ ಆತ್ಮ ಒಪ್ಪುವಂತೆ ನಡೆದುಕೊಂಡರೆ ಅದೇ ಸಾರ್ಥಕ ಜೀವನ. ಹಾಗೆಯೇ ಸಹಸ್ರಾರು ವರ್ಷಗಳಿಂದ ನಡೆದು ಬಂದ ಮನುಷ್ಯ ಜೀವನದ ಸಿಹಿ ಕಹಿ ಅನುಭವಗಳು ಒಂದೇ ತೆರನಾದರೂ ಅವುಗಳು ಆಯಾಯ ಕಾಲಘಟ್ಟದಲ್ಲಿ ಪ್ರಕಟಗೊಳ್ಳುವ ರೀತಿ ಮಾತ್ರ ವಿಭಿನ್ನವಾಗಿ ಕಂಡು ನೋವು ನಲಿವುಗಳಿಗೆ ಕಾರಣವಾಗುತ್ತವೆ.

1977-79 ರ ಕಾಲಾವಧಿಯಲ್ಲಿ ಆಸ್ಟ್ರಿಯಾ ದೇಶದ ವಿಯೆನ್ನಾ ವಿಶ್ವವಿದ್ಯಾನಿಲಯದಲ್ಲಿ ಉನ್ನತ ವ್ಯಾಸಂಗ ಮಾಡಲು ಹೋದಾಗ ಅಲ್ಲಿ ನಮಗೆ ಯಾವ ಭಾರತೀಯರ ಪರಿಚಯವೂ ಇರಲಿಲ್ಲ. ಆಗ ಅಲ್ಲಿದ್ದ ಭಾರತೀಯರ ಸಂಖ್ಯೆಯೂ ಕೈಬೆರಳೆಣಿಕೆಯಷ್ಟು ಮಾತ್ರ. ಅವರೆಲ್ಲರೂ ಉನ್ನತ ಹುದ್ದೆಗಳಲ್ಲಿ ಇದ್ದರು. ನಮ್ಮ ವಯಸ್ಸಿನ ವಿದ್ಯಾರ್ಥಿಗಳಂತೂ ಇರಲೇ ಇಲ್ಲ. ವಿಶ್ವವಿದ್ಯಾನಿಲಯದಲ್ಲಿ ಪ್ರವೇಶ ಪಡೆಯಲು ಜರ್ಮನ್ ಭಾಷೆಯ ಜ್ಞಾನ ಕಡ್ಡಾಯವಾಗಿತ್ತು. ನಮಗೆ ಫೆಲೋಷಿಪ್ ನೀಡಿದ Afro- Asian Institute ವಿದ್ಯಾರ್ಥಿನಿಲಯಕ್ಕೆ ಹೋಗಿ ಪ್ರವೇಶಾತಿಯ ದಾಖಲಾತಿಗಳನ್ನು ಕೊಟ್ಟು ನಮ್ಮ ರೂಂ ಕೀ ಪಡೆದೆವು. ಕೊಠಡಿಯನ್ನು ಪ್ರವೇಶಿಸಿ ಬ್ಯಾಗೇಜನ್ನು ಇಟ್ಟು ಮಂಚದ ಮೇಲೆ ಮಲಗಿದಾಗ ಸುದೀರ್ಘ ಪ್ರಯಾಣದ ಆಯಾಸದಿಂದ ನಿದ್ರೆ ಆವರಿಸಿತು. ಎಚ್ಚರಗೊಂಡಾಗ ಕಗ್ಗತ್ತಲು ಆವರಿಸಿತ್ತು. ಕೊಠಡಿಯಲ್ಲಿ ವಿದ್ಯುದ್ದೀಪದ ಗುಂಡಿ ಎಲ್ಲಿದೆಯೆಂದು ಕತ್ತಲಲ್ಲಿಯೇ ಹುಡುಕಿ ಒತ್ತಿ ಅವೇಳೆಯಲ್ಲಿ ಯಾರೊಂದಿಗೂ ಮಾತನಾಡಲಾಗದೆ ಹಸಿದ ಹೊಟ್ಟೆಯಲ್ಲಿಯೇ ಮತ್ತೆ ಮಲಗಿದೆವು. ಬೆಳಗ್ಗೆ ಎದ್ದು ಸ್ನಾನಪೂಜಾದಿಗಳನ್ನು ಮುಗಿಸಿಕೊಂಡು ಬೆಳಗಿನ ಉಪಾಹಾರಕ್ಕೆ ಬೇಕಾದ ಬ್ರೆಡ್ ಬಟರ್ ಮತ್ತು ಹಾಲನ್ನು ಹತ್ತಿರದಲ್ಲಿಯೇ ಇದ್ದ ಗ್ರಾಸರಿ ಶಾಪ್ ನಿಂದ ತೆಗೆದುಕೊಂಡು ಬಂದು ವಿದ್ಯಾರ್ಥಿಗಳಿಗಾಗಿಯೇ ಸ್ವಯಂ ಪಾಕ ಮಾಡಿಕೊಳ್ಳಲು ಇದ್ದ kitchen ನಲ್ಲಿ ಬ್ರೆಡ್ ಟೋಸ್ಟ್ ಮಾಡಿಕೊಂಡು ಬೆಳಗಿನ ಉಪಾಹಾರ ಮುಗಿಸಿ ವಿಶ್ವವಿದ್ಯಾನಿಲಯಕ್ಕೆ ಹೋಗಿ ಪ್ರವೇಶಾತಿ ಪಡೆದೆವು. ಕ್ರಮೇಣ ಅಕ್ಕಪಕ್ಕದ ಕೊಠಡಿಗಳಲ್ಲಿ ನಮ್ಮಂತೆಯೇ ಉನ್ನತ ವ್ಯಾಸಂಗಕ್ಕೆ ಬಂದಿದ್ದ ಬೇರೆ ಬೇರೆ ದೇಶದ ನಿಲಯನಿವಾಸಿಗಳ ಪರಿಚಯವಾಯಿತು.

ವಾರಕ್ಕೊಮ್ಮೆ ಅಥವಾ ಅವಶ್ಯಕತೆ ಬಿದ್ದಾಗ ಹಾಸ್ಟೆಲ್ ಹತ್ತಿರ ಇದ್ದ ಗ್ರಾಸರಿ ಶಾಪ್ ಗೆ ಹೋಗಿ ನಮಗೆ ಬೇಕಾದ ಆಹಾರ ಸಾಮಾಗ್ರಿಗಳನ್ನು ಕೊಂಡು ತರುತ್ತಿದ್ದೆವು. ಒಂದು ವಾರಕ್ಕೆ ಬೇಕಾದ ಆಹಾರ ಸಾಮಾಗ್ರಿಗಳನ್ನು ಕೊಳ್ಳಲು ಕನಿಷ್ಟ 500 ಆಸ್ಟ್ರಿಯನ್ ಷಿಲ್ಲಿಂಗ್ ಗಳು ಬೇಕಾಗುತ್ತಿದ್ದವು. ಪ್ರತಿ ಸಾರಿ ಖರೀದಿಸುವಾಗ ಭಾರತದ ರೂಪಾಯಿಗಳಲ್ಲಿ ಎಷ್ಟಾಗುತ್ತದೆ ಎಂದು ಲೆಕ್ಕ ಹಾಕುತ್ತಿದ್ದು ತುಂಬಾ ದುಬಾರಿ ಎನಿಸುತ್ತಿತ್ತು. ಕ್ರಮೇಣ ಈ ಲೆಕ್ಕಾಚಾರ ಮಾಡುವುದನ್ನು ಬಿಟ್ಟು ಅಲ್ಲಿಯ ಮೌಲ್ಯಕ್ಕೆ ಮನಸ್ಸು ಹೊಂದಿಕೊಂಡಿತು. ಒಮ್ಮೆ ಹಾಸ್ಟೆಲ್ನಿಂದ ಕೆಲವೇ ಹೆಜ್ಜೆಗಳ ದೂರದಲ್ಲಿದ್ದ ಅಂಗಡಿಯಲ್ಲಿ ಆಹಾರ ಸಾಮಾಗ್ರಿಗಳನ್ನು ಖರೀದಿಸಲು ಹೋಗಿ ಬಿಲ್ ಪಾವತಿಸಲು ಕೌಂಟರ್ನಲ್ಲಿ ಸಾಲಾಗಿ ನಿಂತಾಗ ನಮ್ಮ ಎದುರುಗಡೆ ಒಬ್ಬ ಮಹಿಳೆ ನಿಂತಿದ್ದಳು. ಹಣೆಯ ಮೇಲೆ ಕುಂಕುಮ ಧರಿಸಿ ಸೀರೆಯುಟ್ಟಿದ್ದ ಆ ಗೃಹಿಣಿಯನ್ನು ನೋಡಿ ಮುಖಚರ್ಯೆಯಿಂದ ಬಂಗಾಲಿ ಇರಬೇಕು ಎನಿಸಿತು. ಆ ಮಹಿಳೆಯೂ ಸಹ ನಮ್ಮನ್ನು ನೋಡಿ ಭಾರತೀಯ ವಿದ್ಯಾರ್ಥಿಯೇ ಇರಬೇಕು ಎಂದು ಭಾವಿಸಿ ಮಾತನಾಡಿಸಿದರು. “ನನ್ನ ಹೆಸರು ಆರತಿ ಮುಖರ್ಜಿ, ನನ್ನ ಪತಿ ಅಸೀಮ್ ನಾಥ್ ಮುಖರ್ಜಿ ವಿಯೆನ್ನಾದ ಭಾರತೀಯ ರಾಯಭಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ, ನಮ್ಮ ನಿವಾಸ ಹತ್ತಿರದಲ್ಲಿಯೇ ಇದೆ. ವಾರಾಂತ್ಯದಲ್ಲಿ ಮನೆಗೆ ಬನ್ನಿ” ಎಂದು ಪ್ರೀತಿಯಿಂದ ಆಹ್ವಾನಿಸಿದರು. ಅದರಂತೆ ಅವರ ಮನೆಗೆ ಹೋದಾಗ ತಮ್ಮ ಪತಿ ಮತ್ತು 4 ವರ್ಷದ ಬಾಲಕಿ ದೇವಿಕಾಳ ಪರಿಚಯ ಮಾಡಿಕೊಟ್ಟರು. ಸುದೀರ್ಘ ಸಂಭಾಷಣೆಯ ನಂತರ ರುಚಿ ರುಚಿಯಾದ ಭಕ್ಷಭೋಜ್ಯಗಳನ್ನು ಉಣಬಡಿಸಿದರು. 

ದೂರದ ದೇಶದಲ್ಲಿದ್ದು ಅನಿವಾರ್ಯವಾಗಿ ಸ್ವಯಂಪಾಕ ಮಾಡಿಕೊಂಡು ಉಣ್ಣುತ್ತಿದ್ದ ನಮಗೆ ಬಂಗಾಲಿ ಬ್ರಾಹ್ಮಣರಾದ ಅವರ ಮನೆಯಲ್ಲಿ ಎರಡು ವರ್ಷಗಳ ಕಾಲ ತಿಂಗಳಲ್ಲಿ ಒಂದೆರಡು ಬಾರಿ ಮತ್ತು ಹಬ್ಬ ಹರಿದಿನಗಳಲ್ಲಿ ರುಚಿ ರುಚಿಯಾದ ಊಟ ಮತ್ತು ತಾಯ್ತನದ ಪ್ರೀತಿ ಎರಡೂ ದೊರೆತವು. ಅವರ ಬಂಧುಗಳಾದ ವಿಯೆನ್ನಾದಲ್ಲಿರುವ United Nations International Atomic Energy (IAEA) ಜೀವ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದ ರಾಮೇಂದ್ರನಾಥ್ ಮುಖರ್ಜಿ ಮತ್ತು ಅವರ ಪತ್ನಿ ಉಮಾ ಮುಖರ್ಜಿಯವರ ಪರಿಚಯ ಮಾಡಿಕೊಟ್ಟರು. ಅದೇ ರೀತಿ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಹತ್ತಿರದ ಬಂಧುಗಳನ್ನೂ ಪರಿಚಯಿಸಿದರು.

ಭಾರತಕ್ಕೆ ಹಿಂದಿರುಗಿದ ಮೇಲೆ ಆಗಿನ ಕಾಲದಲ್ಲಿ ಈಗಿನಂತೆ ಮೊಬೈಲ್ ಫೋನ್ ಇಲ್ಲದ ಕಾರಣ ಇವರೆಲ್ಲರ ಸಂಪರ್ಕ ತಪ್ಪಿಹೋಯಿತು. ವಿಶ್ವಸಂಸ್ಥೆಯಲ್ಲಿದ್ದ ಡಾ. ರಾಮೇಂದ್ರನಾಥ್ ಮುಖರ್ಜಿಯವರು ಅನೇಕ ವರ್ಷಗಳ ಹಿಂದೆ ನಿವೃತ್ತರಾದ ಮೇಲೆ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆಂದು ನಮಗೆ ಗೊತ್ತಿರಲೇ ಇಲ್ಲ. ಒಮ್ಮೆ ಅವರು ಬೆಂಗಳೂರಿನ ಇಂಗ್ಲಿಷ್ ಪತ್ರಿಕೆಯೊಂದರ ಯಾವುದೋ ಸುದ್ದಿಯಲ್ಲಿ ನಮ್ಮ ಭಾವಚಿತ್ರ ಪ್ರಕಟಗೊಂಡಿರುವುದನ್ನು ಗಮನಿಸಿ ಯಾರಿಂದಲೋ ಮಾಹಿತಿ ಪಡೆದು ಬೆಂಗಳೂರಿನ ಆರ್.ಟಿ ನಗರದಲ್ಲಿರುವ ತರಳಬಾಳು ಕೇಂದ್ರಕ್ಕೆ ದಂಪತಿಗಳು ಖುದ್ದಾಗಿ ಬಂದು ಕಂಡಾಗ ನಮಗಾದ ಸಂತೋಷಕ್ಕೆ ಪಾರವೇ ಇಲ್ಲ. ಅವರ ಮುಖಾಂತರ ಅವರ ಬಂಧುಗಳಾದ ವಿಯೆನ್ನಾದ ಭಾರತೀಯ ರಾಯಭಾರಿ ಕಚೇರಿಯಲ್ಲಿದ್ದ ಅಸೀಮ್ ನಾಥ್ ಮುಖರ್ಜಿಯವರು ನಿವೃತ್ತರಾದ ಮೇಲೆ ದೆಹಲಿಯಲ್ಲಿ ನೆಲೆಸಿದ್ದಾರೆಂದು ತಿಳಿಯಿತು. ದೆಹಲಿಗೆ ಹೋದಾಗಲೆಲ್ಲಾ ಅವರು ಮತ್ತು ಅವರ ಪತ್ನಿ ಆರತಿ ಮುಖರ್ಜಿ ತಪ್ಪದೆ ತಮ್ಮ ಮನೆಗೆ ಆಹ್ವಾನಿಸಿ ವಿವಿಧ ಭಕ್ಷ್ಯಭೋಜ್ಯಗಳನ್ನು ಉಣಬಡಿಸುತ್ತಿದ್ದು ವಿಯೆನ್ನಾದಲ್ಲಿ ತೋರಿದ ಅವರ ತಾಯ್ತನದ ಪ್ರೀತಿ ನೆನಪಿಗೆ ಬರುತ್ತಿತ್ತು.

ವಿಯೆನ್ನಾದಲ್ಲಿ ಅವರ ಮನೆಗೆ ಹೋದಾಗಲೆಲ್ಲಾ ನಮ್ಮೊಂದಿಗೆ ಆಟವಾಡುತ್ತಿದ್ದ ಅವರ 4 ವರ್ಷದ ಮಗಳು ದೇವಿಕಾ ಈಗ ಎರಡು ಮಕ್ಕಳ ತಾಯಿಯಾಗಿ Siemens India ಕಂಪನಿಯಲ್ಲಿ ಕೆಲಸಮಾಡುತ್ತಿರುವ ತನ್ನ ಪತಿ ಸುಪ್ರಕಾಶ್ ಚೌಧರಿಯೊಂದಿಗೆ ಮುಂಬೈನಲ್ಲಿ ನೆಲೆಸಿದ್ದಾಳೆ. 15 ದಿನಗಳ ಹಿಂದೆ ದೂರವಾಣಿ ಕರೆ ಮಾಡಿ ಅಳುತ್ತಾ “ನನ್ನ ತಾಯಿ ಮರಣಶಯ್ಯೆಯಲ್ಲಿದ್ದಾಳೆ. ತಮ್ಮನ್ನು ನೆನೆಸಿಕೊಂಡು ತುಂಬ ಕನವರಿಸುತ್ತಿದ್ದಾಳೆ. ತಾವು ಬಂದು ಆಶೀರ್ವದಿಸಲು ಸಾಧ್ಯವೇ?” ಎಂದು ಕೇಳಿದಾಗ ಮನಸ್ಸಿಗೆ ತುಂಬಾ ವ್ಯಥೆಯಾಯಿತು. ತಕ್ಷಣವೇ ಹಳ್ಳಿಯ ಬೇರೊಂದು ಕಾರ್ಯಕ್ರಮವನ್ನು ಮುಗಿಸಿಕೊಂಡು ಸಿರಿಗೆರೆಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕಾರಿನಲ್ಲಿ ಪಯಣಿಸುವಾಗಲೇ ಹಿಂದಿನ ಅಂಕಣವನ್ನು ಬರೆದು ಮುಗಿಸಿ ಸಂಪಾದಕರಿಗೆ ಕಳುಹಿಸಿ  ಮುಂಬೈಗೆ ಧಾವಿಸಿ ಅವರ ಮನೆಗೆ ಹೋದಾಗ 

ಅವರ ತಾಯಿ ಶ್ರೀಮತಿ ಆರತಿ ಮುಖರ್ಜಿ ಸಾವು-ಬದುಕಿನ ಹೋರಾಟದಲ್ಲಿದ್ದಳು. ಕಣ್ತೆರೆದು ನೋಡುವ ಸ್ಥಿತಿಯಲ್ಲಿ ಇರಲಿಲ್ಲ. ಮಾತನಾಡಿಸಲು ಪ್ರಯತ್ನಿಸಿದಾಗ ಅದುವರೆಗೆ ಆಕ್ಸಿ ಮೀಟರ್ ನಲ್ಲಿ 77 ಇದ್ದದ್ದು ನಮ್ಮ ಮಾತು ಆ ಸಾಧ್ವಿಗೆ ಕೇಳಿಸಿತೋ ಏನೋ 88ಕ್ಕೆ ಏರಿಕೆಯಾಯಿತು. ಮಾರನೆಯ ದಿನವೂ ಮತ್ತೊಮ್ಮೆ ಮಾತನಾಡಿಸಲು ಯತ್ನಿಸಿದಾಗ ಅದೇ ರೀತಿ ಏರಿಕೆಯಾಯಿತು. ಪತಿ ಮ್ಲಾನವದನರಾಗಿ ಕುಳಿತಿದ್ದರು. ಅವರನ್ನು ಸಮಾಧಾನ ಪಡಿಸಿ ಮುಂಬೈನಿಂದ ಸಿರಿಗೆರೆಗೆ ಹಿಂದಿರುಗಿ ಬರುವ ವೇಳೆಗೆ ಅವರ ಪತ್ನಿಯ ಪ್ರಾಣ ಪಕ್ಷಿ ಹಾರಿಹೋದ ದಾರುಣ ಸುದ್ದಿ ಬಂತು.

ಎರಡು ದಿನಗಳ ನಂತರ ಅವರ ಮಗಳು ಅಳುತ್ತಾ ಮತ್ತೆ ದೂರವಾಣಿ ಕರೆ ಮಾಡಿದಳು. “ಗುರುಗಳೇ! ನನ್ನ ತಾಯಿಗೆ ತಂದೆಯೊಂದಿಗೆ ತಮ್ಮ ಮಠಕ್ಕೆ ಬಂದು ತಮ್ಮ ಆಶೀರ್ವಾದ ಪಡೆಯಬೇಕೆಂಬ ಆಸೆ ಬಹಳವಾಗಿತ್ತು. ಆದಕಾರಣ ನನ್ನ ತಂದೆಯನ್ನು ಮುಂದಿನ ವಾರ ಜೊತೆಗೆ ಕರೆದುಕೊಂಡು ಬಂದು ನನ್ನ ತಾಯಿಯ ಚಿತಾಭಸ್ಮವನ್ನು ತಮ್ಮ ಮಠದ ಶಾಂತಿವನ ಜಲಾಶಯದಲ್ಲಿ ವಿಸರ್ಜನೆ ಮಾಡಲು ಅವಕಾಶ ಕಲ್ಪಿಸಿಕೊಡುವಿರಾ?” ಎಂದು ದೈನ್ಯದಿಂದ ಕೇಳಿದಳು. ನಮ್ಮ ಹೃದಯ ಕರಗಿ ಸಹಮತಿ ಸೂಚಿಸಿದಾಗ ದುಃಖತಪ್ತ ಪರಿವಾರಕ್ಕೆ ಆದ ಸಮಾಧಾನ ಅಸದಳ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ.4-4-2024.