ಇಂದು ಶ್ರೀ ಕಾಶಿ ಮಹಾಲಿಂಗ ಸ್ವಾಮಿಗಳವರ 53ನೆಯ ಶ್ರದ್ಧಾಂಜಲಿ ಸಮಾರಂಭ

  •  
  •  
  •  
  •  
  •    Views  

ಶ್ರೀ ಕಾಶಿ ಮಹಾಲಿಂಗ ಸ್ವಾಮಿಗಳವರು ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ವಿರಕ್ತ ಸ್ವಾಮಿಗಳು. ಅರ್ಧ ಶತಮಾನಕ್ಕಿಂತಲೂ ಅಂದರೆ 1917 ರಿಂದ 1972ರ ವರೆಗೆ ಹೆಚ್ಚು ಕಾಲ ಶ್ರೀ ಬೃಹನ್ಮಠದ ಅಭಿವೃದ್ಧಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಪಟ್ಟಾಧ್ಯಕ್ಷರುಗಳಿಗೆ ಸದಾ ಬೆಂಬಲಿಗರಾಗಿ ಭಕ್ತರು ಮತ್ತು ಮಠದ ಬಾಂಧವ್ಯದ ರೂವಾರಿಗಳಾಗಿದ್ದವರು.

ಶ್ರೀ ಕಾಶಿ ಮಹಾಲಿಂಗ ಸ್ವಾಮಿಗಳು ಜನಿಸಿದ್ದು ಇಂದಿನ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ತೂಲಹಳ್ಳಿಯಲ್ಲಿ. ತಂದೆ ಸಿದ್ಧಲಿಂಗನಗೌಡ, ತಾಯಿ ಉಜ್ಜಮ್ಮ, ತೂಲಹಳ್ಳಿಯು ಹಿಂದೆ ಶ್ರೀ ವಿಶ್ವಬಂಧು ಮರುಳಸಿದ್ಧರು ನಡೆದಾಡಿದ ಪುಣ್ಯಭೂಮಿ. ಈ ತರಳಬಾಳು ಪೀಠಕ್ಕೆ ಪಟ್ಟಾಧ್ಯಕ್ಷರನ್ನಾಗಿ ಶ್ರೀ ಗುರುಶಾಂತರಾಜ ದೇಶಿಕೇಂದ್ರ ಮಹಾಸ್ವಾಮಿಗಳವರನ್ನು ಹಾಗೂ ವಿರಕ್ತ ಸ್ವಾಮಿಗಳನ್ನಾಗಿ ಶ್ರೀ ಕಾಶಿ ಮಹಾಲಿಂಗ ಸ್ವಾಮಿಗಳವರನ್ನು ನೀಡಿದೆ. ನಳನಾಮ ಸಂವತ್ಸರದ ಮಾಘ ಶುದ್ಧ ಗುರುವಾರ (1-2-1917) ರಂದು ಶ್ರೀ ಕಾಶಿ ಮಹಾಲಿಂಗ ಸ್ವಾಮಿಗಳವರಿಗೆ ಪಟ್ಟಾಭಿಷೇಕವಾಗಿರುವುದು ಐತಿಹಾಸಿಕತೆಗೆ ಮೆರುಗು ನೀಡಿದೆ. ಇವರಿಗೆ ವಿರಕ್ತ ಮಾರ್ಗಕ್ಕೆ ದಾರಿತೋರಿ, ಆಶೀರ್ವದಿಸಿದವರು ಶ್ರೀ ಶಿವನಂಜುಂಡ ದೇಶಿಕೇಂದ್ರ ಮಹಾಸ್ವಾಮಿಗಳವರು. ಪೂಜ್ಯ ಶ್ರೀ ಕಾಶಿ ಮಹಾಲಿಂಗ ಸ್ವಾಮಿಗಳವರು ಹೆಚ್ಚು ಕಾಲ ಕಾಶಿಯಲ್ಲಿದ್ದು ಅಧ್ಯಯನ ಮಾಡಿದ ಕಾರಣದಿಂದಾಗಿ ಮಹಾಲಿಂಗ ಸ್ವಾಮಿಗಳ ಹೆಸರಿನ ಆರಂಭದಲ್ಲಿ "ಕಾಶಿ" ಸೇರಿಕೊಂಡು ಶ್ರೀ ಕಾಶಿ ಮಹಾಲಿಂಗ ಸ್ವಾಮಿಗಳೆಂದೇ ಪ್ರಸಿದ್ಧರಾಗಿದ್ದಾರೆ. ಇವರಿಗೆ ಕಾಶಿಯ ಪರಿಚಯ ಚೆನ್ನಾಗಿದ್ದುದರಿಂದ ಕಾಶಿಗೂ ಸಿರಿಗೆರೆ ಬೃಹನ್ಮಠದ ಭಕ್ತ ವೃಂದಕ್ಕೂ ನಿಕಟ ಬಾಂಧವ್ಯವನ್ನಿಟ್ಟುಕೊಳ್ಳಲು ನೆರವಾಗಿದ್ದಾರೆ.

ಶ್ರೀ ತರಳಬಾಳು ಗುರುಪರಂಪರೆಯ 21ನೆಯ ಜಗದ್ಗುರುಗಳವರಾದ ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರಿಗೆ ನಾಮಕರಣ ಶಾಸ್ತ್ರ ನೆರವೇರಿಸಿದ ಹಿರಿಮೆ ಶ್ರೀ ಕಾಶಿ ಮಹಾಲಿಂಗ ಸ್ವಾಮಿಗಳವರದ್ದಾಗಿದೆ.

ಶ್ರೀ ತರಳಬಾಳು ಜಗದ್ಗುರು ಸದ್ಧರ್ಮ ಪೀಠದ 19 ಮತ್ತು 20ನೆಯ ಜಗದ್ಗುರುಗಳವರ ಕಾಲದಲ್ಲಿ ಅತ್ಯಂತ ನಿಷ್ಠೆ ಮತ್ತು ಶ್ರದ್ಧೆಯಿಂದ ದುಡಿದ ಶ್ರೀ ಕಾಶಿ ಮಹಾಲಿಂಗ ಸ್ವಾಮಿಗಳವರು ಸರ್ವಜನಾದರಣೀಯರು. ಎಲ್ಲಾ ಜಗದ್ಗುರುಗಳವರ ಪ್ರೀತಿಗೆ ಪಾತ್ರರಾದವರು. ಶಾಂತ ಮೂರ್ತಿಗಳು. ಇವರು ಶಿಷ್ಯವೃಂದಕ್ಕೆ ದೈವಸ್ವರೂಪಿ ಗಳಾಗಿದ್ದರು. ಕಾಶಿ ಮಹಾಲಿಂಗ ಸ್ವಾಮಿಗಳು ಇದ್ದಾರೆಂದರೆ ಅಲ್ಲಿ ಹತ್ತಿಪ್ಪತ್ತು ಮಕ್ಕಳು ಸುತ್ತ ನೆರೆದಿರುತ್ತಿದ್ದರು. ಹೊರ ಹೊರಟರೆ ಮಕ್ಕಳು ಅಡ್ಡ ಬರುತ್ತಿದ್ದರು. ಪೂಜ್ಯರಿಗೆ ಮಕ್ಕಳು ಎಷ್ಟೇ ತೊಂದರೆ ಕೊಟ್ಟರೂ ಅವರನ್ನು ಬೆದರಿಸುತ್ತಿರಲಿಲ್ಲ. ಬದಲಾಗಿ ಅವರನ್ನು ಪ್ರೀತಿಸುತ್ತಿದ್ದರು. ತಮ್ಮ ನಿಲುವಂಗಿಯ ಜೇಬಿನಲ್ಲಿ ಗೋಡಂಬಿ, ದ್ರಾಕ್ಷಿ, ಒಣಕೊಬ್ಬರಿ, ಮಿಠಾಯಿ ಮಕ್ಕಳಿಗೆ ಪ್ರಿಯವಾದ ತಿನಿಸುಗಳನ್ನು ಇಟ್ಟುಕೊಂಡಿರುತ್ತಿದ್ದರು. ತಮ್ಮ ಹತ್ತಿರ ಮಕ್ಕಳು ಬಂದಕೂಡಲೇ ಜೇಬಿನಿಂದ ಅವುಗಳನ್ನು ತಗೆದು ಮಕ್ಕಳಿಗೆ ಹಂಚಿ ಬಿಡುತ್ತಿದ್ದರು. ಮಕ್ಕಳ ಮೇಲಿನ ಮಮತೆಯ ಕಾರಣದಿಂದಾಗಿ ಸಿರಿಗೆರೆಯ ಕಿಂದರಜೋಗಿ ಎಂದು ಕರೆಯುತ್ತಿದ್ದರು.

ಶ್ರೀ ಕಾಶಿ ಮಹಾಲಿಂಗ ಸ್ವಾಮಿಗಳವರು ಮಂತ್ರ ಸಿದ್ಧಿ, ವಾಕ್ ಸಿದ್ಧಿ ಪಡೆದ ಸಂತರಾಗಿದ್ದರು. ಅವರು ಏನಾದರೂ ನುಡಿದರೆ ಅದರಂತೆ ನಡೆಯುತ್ತಿತ್ತು. ಬಹಳ ಕಾಲ ಮಕ್ಕಳಾಗದಿದ್ದ ದಂಪತಿಗಳು ಅವರನ್ನು ಭಕ್ತಿಯಿಂದ ನೆನೆದಲ್ಲಿ ಮಕ್ಕಳಾಗುತ್ತವೆ ಎಂಬ ಪ್ರತೀತಿ ಜನಜನಿತವಾಗಿತ್ತು. ಹಾಗಾಗಿ ತಮ್ಮ ಮಕ್ಕಳಿಗೆ ಕಾಶಿ ಎಂದು ಹೆಸರಿಟ್ಟವರೂ ಇದ್ದಾರೆ. ಕಾಶಿ ಗುರುಗಳು 12-4-1972ರ ಬುಧವಾರ ಬೆಳಗ್ಗೆ 9.30 ಕ್ಕೆ ನಿಜೈಕ್ಯರಾದರು. ಅವರು ದೈವಾಧೀನರಾದ ಚೈತ್ರ ಶುದ್ಧ ತ್ರಯೋದಶಿಯಂದು ಪ್ರತಿ ವರ್ಷ ಸಿರಿಗೆರೆಯಲ್ಲಿ ಭಜನಾ ಸ್ಪರ್ಧೆಗಳನ್ನು ಆಯೋಜಿಸುವುದರ ಮೂಲಕ ಜಾನಪದ ಕಲೆಗಳ ಪುನರುಜ್ಜಿವನಕ್ಕೆ ಮಾರ್ಗ ಮಾಡಿಕೊಟ್ಟಂತಾಗಿದೆ.

ಶ್ರೀ ತರಳಬಾಳು ಜಗದ್ಗುರು ಬೃಹನ್ಮಠಕ್ಕೆ ಸುಮಾರು 850 ವರ್ಷಗಳ ಇತಿಹಾಸವಿದೆ. ಈ ಮಠದ ಏಳಿಗೆಗಾಗಿ ಅನೇಕ ವಿರಕ್ತ ಸ್ವಾಮಿಗಳು ಶ್ರಮಿಸಿ ಹೋಗಿದ್ದಾರೆ. ಇವರಲ್ಲಿ 20ನೆಯ ಶತಮಾನದಲ್ಲಿದ್ದ ಶ್ರೀ ಕಾಶಿ ಮಹಾಲಿಂಗ ಸ್ವಾಮಿಗಳವರ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ. ಅದಕ್ಕೆ ಮುಖ್ಯ ಕಾರಣ ಶ್ರೀಗಳವರ ಸರಳ, ಸ್ವಚ್ಛ, ಸ್ಪಟಿಕದಂತಹ ಬದುಕು. ಅವರ ಸ್ಮರಣೆ ನಮ್ಮೆಲ್ಲರ ಬದುಕಿಗೆ ದಾರಿದೀಪ.