ದೇವರ ನಿಂದೆಯೂ ಭಕ್ತಿಯಾಗಬಲ್ಲುದೆ?

  •  
  •  
  •  
  •  
  •    Views  

ಳೆದ ಮೂರು ಅಂಕಣಗಳಲ್ಲಿ ಪ್ರಸ್ತಾಪಿಸಿದ ಇತ್ತೀಚಿನ ಮೂರು ಮನಮಿಡಿಯುವ ವಾಸ್ತವಿಕ ಘಟನೆಗಳು ಅನೇಕ ಓದುಗರ ಕಣ್ಣಂಚು ಹನಿಗೂಡುವಂತೆ ಮಾಡಿವೆ: 1) ಕೇರಳದ ನಿವೃತ್ತ ಮುಖ್ಯ ಶಿಕ್ಷಕಿಯೊಬ್ಬಳು ತನ್ನ ದುಡಿಮೆಯಿಂದ ಕಟ್ಟಿಸಿದ್ದ ಮನೆಯಲ್ಲಿ ಆಕೆಯ ಮಗನೇ ಇರಗೊಡದೆ ಹೊರದೂಡಲ್ಪಟ್ಟು ರೈಲ್ವೆ ನಿಲ್ದಾಣದಲ್ಲಿ ಭಿಕ್ಷುಕಿಯಾಗಿದ್ದು, ಸಾಮಾಜಿಕ ಜಾಲ ತಾಣದಲ್ಲಿ ವಿಷಯ ತಿಳಿದು ಆಕೆಯ ವಿದ್ಯಾರ್ಥಿನಿಯಾಗಿದ್ದ ಐ.ಎ.ಎಸ್ ಅಧಿಕಾರಿ ಓಡಿ ಬಂದು ನಮಸ್ಕರಿಸಿ ಆಕೆಯ ರಕ್ಷಣೆ ಮಾಡಿದ್ದು, Senior Citizen’s Act ಅಡಿಯಲ್ಲಿ ಮಗನ ವಿರುದ್ಧ ಕೇಸು ದಾಖಲಿಸಿ ಶಿಕ್ಷಿಸಲು ಬರುತ್ತದೆ ಎಂಬ ಕಾನೂನು ಗೊತ್ತಿದ್ದರೂ ಕೋರ್ಟಿನ ಕಟಕಟೆಯಲ್ಲಿ ತನ್ನ ಮಗನನ್ನು ನಿಲ್ಲಿಸಲು ಇಷ್ಟಪಡದ ಆ ಮಹಾತಾಯಿ! 2) ನಮ್ಮ ಮಠದ ಕಾಲೇಜಿನ ನಿವೃತ್ತ ಪ್ರಾಂಶುಪಾಲರ ಪತ್ನಿ ಕ್ಯಾನ್ಸರ್ ಕಾಯಿಲೆಯಿಂದ ಬಳಲುತಿದ್ದು ದುಃಖತಪ್ತ ಪರಿವಾರವನ್ನು ಸಂತೈಸಲು ಹೋಗಿದ್ದು, ಆಶೀರ್ವಾದ ಮಾಡಿ ಆಕೆಗೆಂದು ಕೊಟ್ಟ ಸೇಬಿನ ಹಣ್ಣನ್ನು ತಿನ್ನಲಾಗದೆ ಮರಣ ಹೊಂದಿದ ಮೇಲೆ ಅದನ್ನು ಯಾರು ತಿನ್ನಬೇಕೆಂಬ ಜಿಜ್ಞಾಸೆಯುಂಟಾಗಿದ್ದು, ತಾಯಿಗೆ ಕಾಶಿಯನ್ನು ನೋಡಬೇಕೆಂಬ ಆಸೆ ಇತ್ತು ಎಂದು ತಿಳಿದಿದ್ದ ಮಗ ತಾಯಿಯ ಚಿತಾಭಸ್ಮದೊಂದಿಗೆ ನಾವು ಕೊಟ್ಟ ಹಣ್ಣನ್ನೂ ವಿಮಾನದಲ್ಲಿ ತೆಗೆದುಕೊಂಡು ಹೋಗಿ ಕಾಶಿಯ ಗಂಗೆಯಲ್ಲಿ ವಿಸರ್ಜನೆ ಮಾಡಿದ್ದು! 3) ಐದು ದಶಕಗಳ ಹಿಂದೆ ಆಸ್ಟ್ರಿಯಾ ದೇಶದ ರಾಜಧಾನಿ ವಿಯೆನ್ನಾದಲ್ಲಿ ನಾವು ಓದುತ್ತಿದ್ದಾಗ ಪರಿಚಿತರಾಗಿದ್ದ ಬಂಗಾಲಿ ಬ್ರಾಹ್ಮಣ ದಂಪತಿಗಳು, ಭಾರತೀಯ ರಾಯಭಾರಿ ಕಛೇರಿಯ ಉನ್ನತ ಅಧಿಕಾರಿಗಳಾಗಿದ್ದ ಅವರ ಪತ್ನಿ ಮಾತೃವಾತ್ಸಲ್ಯದಿಂದ ಹಬ್ಬ ಹುಣ್ಣಿಮೆಯಂದು ಮನೆಗೆ ಕರೆದು ನಮಗೆ ಉಣಬಡಿಸುತ್ತಿದ್ದುದು, ಅವರು ಇತ್ತೀಚೆಗೆ ತಾನೆ ಮರಣ ಶಯ್ಯೆಯಲ್ಲಿದ್ದಾಗ ಅವರ ಮಗಳು ಅಳುತ್ತಾ ನಮಗೆ ಫೋನ್ ಮಾಡಿದಾಗ ಮುಂಬೈಗೆ ಹೋಗಿ ದುಃಖತಪ್ತ ಪರಿವಾರವನ್ನು ಸಂತೈಸಿ ಬಂದದ್ದು, ತಾಯಿಗೆ ಬದುಕಿದ್ದಾಗ ತಂದೆಯೊಂದಿಗೆ ಮಠಕ್ಕೆ ಬಂದು ನಮ್ಮ ಆಶೀರ್ವಾದ ಪಡೆಯಬೇಕೆಂಬ ಹಂಬಲವಿತ್ತು ಎಂದು ತಿಳಿದಿದ್ದ ಅವರ ಮಗಳು ತಂದೆಯೊಂದಿಗೆ ತಾಯಿಯ ಚಿತಾಭಸ್ಮವನ್ನು ಸಿರಿಗೆರೆಗೆ ತೆಗೆದುಕೊಂಡು ಬಂದು ನಮ್ಮ ಮಠದ ಶಾಂತಿವನ ಜಲಾಶಯದಲ್ಲಿ ವಿಸರ್ಜನೆ ಮಾಡಿದ್ದು!

ಮೇಲ್ಕಂಡ ಮೂರೂ ಹೃದಯವಿದ್ರಾವಕ ಘಟನೆಗಳು ಕೌಟುಂಬಿಕ ಜೀವನದ ನೆಲೆಯಲ್ಲಿ ವ್ಯಕ್ತಿಗತ ಸಂಬಂಧವಿಲ್ಲದವರಿಗೂ ಮನಕರಗುವಂತೆ ಮಾಡುತ್ತವೆ. ಇದು ಸಹಜವಾದ ಮಾನವೀಯ ಸ್ಪಂದನ. ಸಂಬಂಧಪಟ್ಟ ಕುಟುಂಬಗಳ ನೋವನ್ನು ತಮ್ಮ ನೋವೆಂದು ಸಮೀಕರಿಸಿಕೊಳ್ಳುವ ಉದಾತ್ತ ಭಾವ. ಇದೇ ನಿಜವಾದ ಧರ್ಮ. ಲೌಕಿಕ ಜೀವನದಲ್ಲಿ ಕುಟುಂಬದ ಸದಸ್ಯರ ಮಧ್ಯೆ ಇರುವ ಈ ಭಾವತೀವ್ರತೆಯನ್ನು ಬಸವಣ್ಣನವರು ತಮ್ಮ ಮುಂದಿನ ವಚನದಲ್ಲಿ ತುಂಬಾ ಚೆನ್ನಾಗಿ ಅಭಿವ್ಯಕ್ತಿಗೊಳಿಸಿದ್ದಾರೆ: 

ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ, 
ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ, 
ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ, 
ಇದಾವ ಪರಿಯಲ್ಲಿ ಕಾಡಿತ್ತು ಮಾಯೆ! 
ಈ ಮಾಯೆಯನತಿಗಳೆವರೆ ಎನ್ನಳವಲ್ಲ! 
ನೀವೇ ಬಲ್ಲಿರಿ ಕೂಡಲ ಸಂಗಮದೇವಾ.

ಲೌಕಿಕ ಜೀವನದಲ್ಲಿ ಕುಟುಂಬದ ಸದಸ್ಯರ ಮಧ್ಯೆ ಇರುವ ಗಾಢವಾದ ಪ್ರೀತಿಯಂತೆ ಪಾರಲೌಕಿಕ ಜೀವನದಲ್ಲಿ ದೇವರು ಮತ್ತು ಭಕ್ತನ ಮಧ್ಯೆ ಇರುವ ನಿರ್ವ್ಯಾಜ ಪ್ರೀತಿಯೇ ಭಕ್ತಿ. “ಸಾ ಪರಾನುರಕ್ತಿರೀಶ್ವರೇ” ಎನ್ನುತ್ತದೆ ನಾರದ ಭಕ್ತಿಸೂತ್ರ. ಅದನ್ನೇ ಶರಣರು “ಶರಣಸತಿ ಲಿಂಗಪತಿ” ಎಂದು ಕರೆದಿದ್ದಾರೆ. ಗಂಡ ಹೆಂಡಿರ ಮಧ್ಯೆ ಇರುವ ಪ್ರೀತಿಯಂತೆಯೇ ದೇವರು ಮತ್ತು ಭಕ್ತನ ಮಧ್ಯೆ ಇರುವುದೇ ಭಕ್ತಿ. ಗಂಡ ಹೆಂಡಿರ ಮಧ್ಯೆ ಪ್ರೀತಿ ಗಾಢವಾದಾಗ ಸಲುಗೆಯು ಹೆಚ್ಚುತ್ತದೆ. ಅದೇ ರೀತಿ ಭಕ್ತಿಯು ತೀವ್ರವಾದಾಗ ಭಗವಂತನಲ್ಲಿ ಭಕ್ತನ ಸಲುಗೆ ಹೆಚ್ಚುತ್ತದೆ. ಅಂತಹ ಸಲುಗೆಯಲ್ಲಿ ಭಕ್ತರು ಎಷ್ಟೋ ಸಲ ದೇವರನ್ನೇ ತರಾಟೆಗೆ ತೆಗೆದುಕೊಳ್ಳುವುದನ್ನು ನಾವು ಕಾಣಬಹುದು. ಬಸವಣ್ಣನವರ ಈ ವಚನವನ್ನೇ ಗಮನಿಸಿ: 

ನರ ಕೂರಂಬಿನಲೆಚ್ಚ, ಅವಂಗೊಲಿದೆಯಯ್ಯಾ, 
ಅರಳಂಬಿನಲೆಚ್ಚ ಕಾಮನನುರುಹಿದೆಯಯ್ಯಾ, 
ಇರುಳು ಹಗಲೆನ್ನದೆ ಪ್ರಾಣಿಘಾತಕವ ಮಾಡಿದ 
ಬೇಡನ ಕೈಲಾಸಕೊಯ್ದೆಯಯ್ಯಾ,
ಎನ್ನನೇತಕ್ಕೊಲ್ಲೆ ಕೂಡಲಸಂಗಮ ದೇವಾ?

ಹರಿತವಾದ ಬಾಣಗಳಿಂದ ನಿನ್ನನ್ನು ಹೊಡೆದ ಅರ್ಜುನನಿಗೆ ಪಾಶುಪತಾಸ್ತ್ರವನ್ನು ಅನುಗ್ರಹಿಸಿದೆ. ಕೋಮಲವಾದ ಹೂಬಾಣಗಳನ್ನು ನಿನ್ನ ಮೇಲೆ ಬಿಟ್ಟ ಮನ್ಮಥನನ್ನು ಕೆಂಗಣ್ಣಿನಿಂದ ನೋಡಿ ಸುಟ್ಟು ಬೂದಿಮಾಡಿದೆ. ಕಾಡಿನಲ್ಲಿ ಬೇಟೆಯಾಡಿ ಪ್ರಾಣಿವಧೆ ಮಾಡುತ್ತಿದ್ದ ಬೇಡರ ಕಣ್ಣಪ್ಪನಿಗೆ ಕೈಲಾಸಪದವಿಯನ್ನು ಅನುಗ್ರಹಿಸಿದೆ. ಆದರೆ ನನ್ನ ಮೇಲೆ ನಿನ್ನ ಅನುಗ್ರಹವಿಲ್ಲವೇಕೆ ದೇವರೇ? ಎಂದು ಬಸವಣ್ಣನವರ ಭಕ್ತಿಸಂಪನ್ನ ಹೃದಯ ಕೂಡಲಸಂಗನನ್ನು ತರ್ಕಬದ್ಧವಾಗಿ ಪ್ರಶ್ನಿಸುತ್ತದೆ. ಲೌಕಿಕ ಜೀವನದಲ್ಲಿ ಆತ್ಮೀಯ ಗೆಳೆಯನ ನಡವಳಿಕೆಯನ್ನು ಗಮನಿಸಿ ನಿನಗೇನಾದರೂ ಬುದ್ಧಿ ಇದೆಯೇ?” ಎಂದು ಕೇಳುವ ಧಾಟಿಯಲ್ಲಿವೆ. ಇಲ್ಲಿಯ ಮಾತುಗಳು. ಇದೇ ಧಾಟಿಯಲ್ಲಿ ಪುರಂದರದಾಸರು ಪುರಾಣ ಪುಣ್ಯಕಥೆಗಳನ್ನು ಉದಾಹರಿಸಿ ತರ್ಕಬದ್ಧವಾದ ವಾದವನ್ನು ಮುಂದಿಟ್ಟು ದೇವರನ್ನು ಹಂಗಿಸುವ ಈ ಮುಂದಿನ ಪದ್ಯವನ್ನು ಗಮನಿಸಿ:


ಆರು ಬದುಕಿದರಯ್ಯಾ ಹರಿ ನಿನ್ನ ನಂಬಿ 
ತೋರು ಈ ಜಗದೊಳಗೆ ಒಬ್ಬರನು ಕಾಣೆ

ಕಲಹ ಬಾರದ ಮುನ್ನ ಕರ್ಣನನು ನೀ ಕೊಂದೆ 
ಸುಲಭದಲಿ ಕೌರವರ ಮನೆಯ ಮುರಿದೆ
ನೆಲನ ಬೇಡುತ ಪೋಗಿ ಬಲಿಯ ತನುವನು ತುಳಿದೆ 
ಮೊಲೆಯನುಣಿಸಲು ಬಂದ ಪೂತನಿಯ ಕೊಂದೆ

ತಿರಿದುಂಬ ದಾಸರ ಕೈಲಿ ಕಪ್ಪವ ಕೊಂಬೆ 
ಗರುಡವಾಹನ ನಿನ್ನ ಚರಿಯವ ಅರಿಯೆ
ದೊರೆ ಪುರಂದರವಿಠಲ ನಿನ್ನನ್ನು ನಂಬಿದರೆ 
ತಿರುಪೆಯೂ ಪುಟ್ಟಲೊಲ್ಲದು ಕೇಳು ಹರಿಯೆ

ದೇವರ ವರ್ತನೆ ತರ್ಕಾತೀತ. ಏಕೆ ಹೀಗೆಂದು ಸಮರ್ಥನೆ ನೀಡಲು ಬರುವುದಿಲ್ಲ. ದೇವರ ವಿಷಯವಾಗಿ ಹೇಳುವಾಗ ಅಘಟಿತ ಘಟನೆಗಳು ಸಂಭವಿಸುತ್ತವೆಯೆಂಬುದು ಭಕ್ತಿಸಂಪನ್ನ ಹೃದಯದ ಬಲವಾದ ನಂಬಿಕೆ. ಇದು ಮೇಲು ನೋಟಕ್ಕೆ ನಿಂದೆ ಎನಿಸಿದರೂ ಭಕ್ತನ ನಿರ್ವ್ಯಾಜ ಭಕ್ತಿಯ ನಿವೇದನೆಯ ಪರಿ. ಭಕ್ತನು ದೇವರೊಂದಿಗೆ ಬೆಳೆಸಿಕೊಂಡಿರುವ ಆತ್ಮೀಯತೆಯ ಪ್ರತೀಕ. “ನಿನ್ನ ಮಗ ಕಳ್ಳ” ಎಂದು ಪಕ್ಕದ ಮನೆಯ ಮಹಿಳೆಯ ಮಗನ ಮೇಲೆ ಆರೋಪಿಸಿ ಸಿಟ್ಟಿಗೇಳುವ ತಾಯಿ ತನ್ನ ಮುದ್ದು ಮಗುವಿನ ಲಾಲನೆ ಪೋಷಣೆ ಮಾಡುವಾಗ ತಾನೇ ಪ್ರೀತಿಯಿಂದ ತನ್ನ ಮಗನನ್ನು “ಛೀ, ಕಳ್ಳ” ಎಂದು ಮೂದಲಿಸುತ್ತಾಳೆ. ಒಂದು ನಿಂದೆಯಾದರೆ ಮತ್ತೊಂದು ನಿಂದಾಸ್ತುತಿ. ಕಿಲಕಿಲ ನಕ್ಕು ನಿದ್ದೆಹೋಗುವ ಮಗುವನ್ನು ಕಂಡ ತಾಯಿಯ ಆನಂದಕ್ಕೆ ಪಾರವೇ ಇಲ್ಲ. ಇಂತಹ ನಿಂದಾಸ್ತುತಿಯೂ ದೇವರನ್ನು ಒಲಿಸುವ ಒಂದು ಬಗೆ! ನಿಜವಾದ ಭಕ್ತನ ಹೃದಯದಲ್ಲಿ ಆವಿರ್ಭವಿಸುವ ಭಕ್ತಿಯ ಸ್ಪಂದನ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ.18-4-2024.