ವೈಚಾರಿಕ ಕ್ರಾಂತಿಯ ಕಹಳೆ ಮೊಳಗಿಸಿದ ಆನಗೋಡಿನಲ್ಲಿ ಮರುಳಸಿದ್ಧರ ರಥೋತ್ಸವ
ಬಸವಾದಿ ಶಿವಶರಣರ ಹಿರಿಯ ಸಮಕಾಲೀನ ಮರುಳಸಿದ್ಧರ ನಡೆ ಧೀರೋದಾತ್ತವಾದುದು. ಅಜ್ಞಾನ, ಮೂಢನಂಬಿಕೆ, ಕಂದಾಚಾರಗಳ ವಿರುದ್ಧ ಅವರು ಸಾರಿದ ಸಮರ ಅಂದಿನ ಪಟ್ಟಭದ್ರರ ಎದೆ ನಡುಗಿಸುವಂತಿತ್ತು. ಅದಕ್ಕಾಗಿ ಅವರು ನಡೆದ ದಾರಿ ಮುಳ್ಳಿನದಾಗಿದ್ದರೂ ಇಟ್ಟ ಹೆಜ್ಜೆ ದೃಢವಾಗಿತ್ತು. ಧರ್ಮ, ದೇವರು ಹೆಸರಿನಲ್ಲಿ ನಡೆಯುವ ಕಂದಾಚಾರಗಳು ಮಾನವನ ಸೃಷ್ಟಿ ಮತ್ತು ಸ್ವಾರ್ಥಪೂರಿತವಾದುದು. ಅಂತಹ ಕಂದಾಚಾರಗಳಿಂದ ಸಮಾಜ ಅಜ್ಞಾನದ ಕತ್ತಲೆಯ ಕೂಪದಲ್ಲಿಯೇ ನರಳುತ್ತದೆ. ಇವುಗಳನ್ನು ಬುಡ ಸಹಿತ ತೆಗೆಯದೆ ಹೋದರೆ ಶತಶತಮಾನಗಳ ಕಾಲ ಮುಂದುವರಿಯುತ್ತವೆ ಎಂದು ಮರುಳಸಿದ್ಧರು ಲೋಕ ಸಂಚಾರ ಕೈಗೊಂಡರು. ತಾನು ಹುಟ್ಟಿದ ಊರಾದ ಕಗ್ಗಲುಪುರದಲ್ಲಿಯೇ ಮಾರಿ ಜಾತ್ರೆಯ ಹೆಸರಿನಲ್ಲಿ ನಡೆಯುತ್ತಿದ್ದ ಪ್ರಾಣಿಬಲಿ ವಿರೋಧಿಸಿದರು. ಅದು ಅಲ್ಲಿಗೆ ನಿಲ್ಲದೆ ತಾವು ನಡೆದಾಡಿದೆಡೆಗಳಲ್ಲೆಲ್ಲ ವೈಚಾರಿಕತೆಯ ಕಹಳೆ ಊದಿ, ಜನತೆಯನ್ನು ಎಚ್ಚರಿಸಿದರು. ಹೀಗೆ ಸಾಗಿ ಬಂದ ದಾರಿಯಲ್ಲಿ ಯಜ್ಞದ ಹೆಸರಿನಲ್ಲಿ ಆಹಾರ ಪದಾರ್ಥಗಳು ಬೆಂಕಿಗೆ ಆಹುತಿಯಾಗವುದನ್ನು ಕಂಡು ಮರುಗಿದರು. "ದಯವೇ ಧರ್ಮದ ಮೂಲ" ಎಂಬುದು ಮಾನವತೆ. ಹಸಿದ ಹೊಟ್ಟೆಯ ಮುಂದೆ ಧಾರ್ಮಿಕ ಕರ್ಮಾಚರಣೆ ಸಲ್ಲದು ಎಂದು ಬೇತೂರು ಗ್ರಾಮದಲ್ಲಿ ನಡೆಯುತ್ತಿದ್ದ ಯಜ್ಞ ಕಾರ್ಯಗಳನ್ನು ಪ್ರತಿಭಟಿಸಿದರು. ಅದರ ಫಲವಾಗಿ ಮರುಳಸಿದ್ಧರನ್ನು ಹಗೇವಿಗೆ ಹಾಕಿ ಸುಡಲು ಪ್ರಯತ್ನಿಸಿದರು. ಆ ಪ್ರಯತ್ನ ವಿಫಲವಾದಾಗ ತುಂಬಿದ ಅಣಜಿ ಕೆರೆಯಲ್ಲಿ ಕೈಕಾಲುಗಳನ್ನು ಕಟ್ಟಿ ಮುಳುಗಿಸಿದರು. ಅದಕ್ಕೂ ಸೋಲೊಪ್ಪದ ಮರುಳಸಿದ್ಧರ ಮೇಲೆ ಉಚ್ಚಂಗಿದುರ್ಗದ ಪಾಂಡ್ಯ ಅರಸನ ಸೇನೆಯ ಸಹಾಯದಿಂದ ದಾಳಿ ಮಾಡಿಸಿದರು. ಆಗ ಅರಸನ ಆನೆಯ ಸೊಂಡಿಲು ತಿರುವಿ ದಂತಛೇದನ ಮಾಡಿದಾಗ ಮರುಳಸಿದ್ಧರ ವಿರೋಧಿಗಳ ಎದೆ ಝಲ್ಲೆಂದಿತು. ಬೌದ್ಧಿಕ ತಿಳಿವಳಿಕೆಯಿಂದ ಸಾಧ್ಯವಾಗದೇ ಇದ್ದಾಗ ದೈಹಿಕ ಕಸರತ್ತಿನ ಮೂಲಕ ಉತ್ತರ ನೀಡಿದ ಮರುಳಸಿದ್ಧರನ್ನು ಅಲ್ಲಿಯ ಜನತೆ ಹಾರ ತುರಾಯಿಗಳಿಂದ ಗೌರವಿಸಿತು. ಆನೆಯ ಕೋಡನ್ನು ಮುರಿದು ಧಾರ್ಮಿಕ ಮೂಲಭೂತವಾದಿಗಳಿಗೆ ತಕ್ಕ ಪಾಠ ಕಲಿಸಿದ ಸ್ಥಳವೇ ಇಂದು ಆನಗೋಡು ಕ್ಷೇತ್ರವಾಗಿದೆ. ಇಂದಿಗೂ ಆನಗೋಡು ಸುತ್ತಮುತ್ತಲ ಸಿದ್ಧನೂರು, ಹುಳುಪನಕಟ್ಟೆ, ಅಣಜಿ, ಬೇತೂರು, ಕುರುಡಿ ಮುಂತಾದ ಗ್ರಾಮಗಳು ಮರುಳಸಿದ್ಧರ ಕ್ರಾಂತಿಕಾರಕ ಹೆಜ್ಜೆಗಳ ಗುರುತಿನ ಐತಿಹಾಸಿಕ ಸ್ಥಳಗಳಾಗಿವೆ.
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಮೂಲಪುರುಷನಾದ ಮರುಳಸಿದ್ಧರು ಈ ನಾಡು ಕಂಡ ಅಪೂರ್ವ ಯೋಗಿ. ರೇವಣಸಿದ್ಧರಿಂದ ದೀಕ್ಷಿತನಾದ ಮರುಳಸಿದ್ಧರು ಸಿದ್ಧ ಪರಂಪರೆಯಲ್ಲಿಯೇ ವಿಭಿನ್ನ ಮತ್ತು ವಿಶಿಷ್ಟ ವ್ಯಕ್ತಿತ್ವ ಹೊಂದಿದವರು. ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದ ಯೋಗಿ ಪುರುಷ. ತನ್ನ ಉದಾತ್ತ ಆಶಯಗಳನ್ನು ಮುಂದುವರಿಸಿಕೊಂಡು ಹೋಗಲು ತೆಲಗುಬಾಳು ಸಿದ್ಧನಿಗೆ "ತರಳಾ.. ಬಾಳು" ಎಂದು ಆಶೀರ್ವದಿಸಿದ ದೂರದೃಷ್ಟಿಯ ನೇತಾರ. ಅವರ ಸದಾಶಯಗಳ ಮುಂದುವರಿಕೆಯೇ "ತರಳಬಾಳು ಗುರು ಪರಂಪರೆ". ಕನ್ನಡದ ಮೊದಲ ವಚನಕಾರ್ತಿ ಅಕ್ಕಮಹಾದೇವಿಗೆ ಲಿಂಗ ದೀಕ್ಷೆ ನೀಡಿ ಆಶೀರ್ವಾದಿಸಿದವರು ಗುರು ಮರುಳಸಿದ್ಧರು. "ಅಕ್ಕನ ಹುಣ್ಣಿಮೆ" ಎಂದೇ ಆಚರಿಸುತ್ತಿರುವ ಚೈತ್ರಮಾಸದ ಸೀಗಿ ಹುಣ್ಣಿಮೆಯ ದಿನವೇ ಸುಕ್ಷೇತ್ರ ಆನಗೋಡಿನಲ್ಲಿ ಮರುಳಸಿದ್ಧರ ರಥೋತ್ಸವ. ಪ್ರತಿವರ್ಷದ ಪದ್ಧತಿಯಂತೆ ಇದೇ ಏಪ್ರಿಲ್ 23ರ ಮಂಗಳವಾರ ಸಂಜೆ 5-೦೦ ಗಂಟೆಗೆ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಸಮ್ಮುಖದಲ್ಲಿ ಮರುಳಸಿದ್ಧರ ರಥೋತ್ಸವ ನೆರವೇರಲಿದೆ.
- ನಾಗರಾಜ ಸಿರಿಗೆರೆ
ಕನ್ನಡ ಅಧ್ಯಾಪಕ
ಶ್ರೀ ಮರುಳಸಿದ್ದೇಶ್ವರ ಪ್ರೌಢಶಾಲೆ, ಆನಗೋಡು