ಶ್ರೀ ತರಳಬಾಳು ಜಗದ್ಗುರುಗಳವರಿಂದ ಶ್ರೀ ಮರುಳಸಿದ್ದರ ರಥೋತ್ಸವಕ್ಕೆ ಭಕ್ತಿ ಸಮರ್ಪಣೆಯೊಂದಿಗೆ ಚಾಲನೆ.

  •  
  •  
  •  
  •  
  •    Views  

ದಿನಾಂಕ 23-04-2024
ಸ್ಥಳ: ಆನಗೋಡು 

ಆನಗೋಡಿನಲ್ಲಿ ವಿಶ್ವಬಂಧುವಿನ ರಥಪರ್ವವ ದರ್ಶನಗೈದ ಚಂದ್ರ. ಹುಣ್ಣಿಮೆಗೂ ತರಳಬಾಳು ಮಠಕ್ಕೂ ದೈವೀ ಸಂಬಂಧದ ದಿವ್ಯ ಸಾಕ್ಷಾತ್ಕಾರ.
------------------------------------------------

ಮರುಳಸಿದ್ದರ ರಥವನೇರಿ ಭಕ್ತಿ ಸಮರ್ಪಿಸಿದ  ಶ್ರೀ ಜಗದ್ಗುರುಗಳವರ ಭಕ್ತಿ ಸಂಭ್ರಮ
------------------------------------------------

ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಮೂಲಪುರುಷನಾದ ಮರುಳಸಿದ್ಧರು ಈ ನಾಡು ಕಂಡ ಅಪೂರ್ವ ಯೋಗಿ. ರೇವಣಸಿದ್ಧರಿಂದ ದೀಕ್ಷಿತನಾದ ಮರುಳಸಿದ್ಧರು ಸಿದ್ಧ ಪರಂಪರೆಯಲ್ಲಿಯೇ ವಿಭಿನ್ನ ಮತ್ತು ವಿಶಿಷ್ಟ ವ್ಯಕ್ತಿತ್ವ ಹೊಂದಿದವರು. ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದ ಯೋಗಿ ಪುರುಷ. ತನ್ನ ಉದಾತ್ತ ಆಶಯಗಳನ್ನು ಮುಂದುವರಿಸಿಕೊಂಡು ಹೋಗಲು ತೆಲಗುಬಾಳು ಸಿದ್ಧನಿಗೆ "ತರಳಾ.. ಬಾಳು" ಎಂದು ಆಶೀರ್ವದಿಸಿದ ದೂರದೃಷ್ಟಿಯ ನೇತಾರ. ಅವರ ಸದಾಶಯಗಳ ಮುಂದುವರಿಕೆಯೇ "ತರಳಬಾಳು ಗುರು ಪರಂಪರೆ". ಕನ್ನಡದ ಮೊದಲ ವಚನಕಾರ್ತಿ ಅಕ್ಕಮಹಾದೇವಿಗೆ ಲಿಂಗ ದೀಕ್ಷೆ ನೀಡಿ ಆಶೀರ್ವಾದಿಸಿದವರು ಗುರು ಮರುಳಸಿದ್ಧರು. "ಅಕ್ಕನ ಹುಣ್ಣಿಮೆ" ಎಂದೇ ಆಚರಿಸುತ್ತಿರುವ ಚೈತ್ರಮಾಸದ ಸೀಗಿ ಹುಣ್ಣಿಮೆಯ ದಿನವೇ ಸುಕ್ಷೇತ್ರ ಆನಗೋಡಿನಲ್ಲಿ  ಮರುಳಸಿದ್ಧರ ರಥೋತ್ಸವ. ಪ್ರತಿವರ್ಷದ ಪದ್ಧತಿಯಂತೆ ಮಂಗಳವಾರ ಸಂಜೆ 6-೦೦ ಗಂಟೆಗೆ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಮಠದ ಜಂಗಮರ ವಚನ, ಮಂತ್ರಘೋಶಗಳ ನಿನಾದದಲ್ಲಿ ಶ್ರೀ ಮರುಳಸಿದ್ಧರ ರಥೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ  ನಡೆಯಿತು.

ವಿಶ್ವಬಂಧುವಿನ ರಥ ಸಾಗುವಾಗ ಹುಣ್ಣಿಮೆಯ ಚಂದ್ರನ ಉಪಸ್ಥಿತಿಯು ಹುಣ್ಣಿಮೆಗೂ ತರಳಬಾಳು ಮಠಕ್ಕೂ ದೈವೀ ಸಂಬಂಧದ ದಿವ್ಯ ಸಾಕ್ಷಾತ್ಕಾರವನ್ನು ಪುನಾರಾವರ್ತಿಸಿತು.

ಪರಮ ಪೂಜ್ಯ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಗುರು ಮರುಳಸಿದ್ಧರ ದೇವಾಲಯವನ್ನು ಪ್ರದಕ್ಷಿಣೆ ಹಾಕಿ, ಗರ್ಭಗುಡಿಯನ್ನು ಪ್ರವೇಶಿಸಿ ವಿಶ್ವಬಂಧು ಮರುಳಸಿದ್ದೇಶ್ವರರಿಗೆ ಭಕ್ತಿ ಸಮರ್ಪಿಸಿದರು. ಅಪಾರ ಭಕ್ತರ ಜಯಘೋಷಗಳೊಂದಿಗೆ ರಥದ ಅಂಗಳ ಪ್ರವೇಶಿಸಿ ರಥ ಪ್ರದಕ್ಷಿಣೆಗೈದು ರಥದ ಗಾಲಿಗೆ ಕಾಯಿ ಸಮರ್ಪಿಸಿದರು. ನಂತರ ರಥವನೇರಿದ ಶ್ರೀ ಜಗದ್ಗುರುಗಳವರು ಮರುಳಸಿದ್ದರ ಉತ್ಸವ ಮೂರ್ತಿಗೆ ಪೂಜಾ ಕೈಂಕರ್ಯಗಳೊಂದಿಗೆ ಭಕ್ತಿ ಸಮರ್ಪಿಸಿ. ಪತ್ರೆ ಪುಷ್ಪಗಳನ್ನು ಭಕ್ತರಿಗೆ ಪ್ರೋಕ್ಷಿಸಿ ಆಶೀರ್ವದಿಸಿದರು.

ಅಪಾರ ಭಕ್ತರಿಂದ ಶ್ರೀ ತರಳಬಾಳು ಗುರುಪರಂಪರೆಗೆ ಜಯವಾಗಲಿ, ವಿಶ್ವಬಂಧು ಮರುಳಸಿದ್ದೇಶ್ವರರಿಗೆ ಜಯವಾಗಲಿ, ಶ್ರೀ ತರಳಬಾಳು ಜಗದ್ಗುರುಗಳವರಿಗೆ ಜಯವಾಗಲೆಂದು ಭಕ್ತಿ ಪೂರ್ಣ ಘೋಷಣೆಗಳು ಮುಗಿಲು ಮುಟ್ಟಿದವು.

ಈ ಸಂದರ್ಭದಲ್ಲಿ ಸಾಧು ಸದ್ಧರ್ಮ ಸಮಾಜ ಮತ್ತು ರಾಜ್ಯ ರೈತ ಸಂಘದ ಅಧ್ಯಕ್ಷರಾದ ಶ್ರೀ ಹೆಚ್.ಆರ್.ಬಸವರಾಜಪ್ಪಪವರು, ದೇವಸ್ಥಾನ ಸಮಿತಿಯ ಶ್ರೀ ಮಹೇಶ್ವರಪ್ಪನವರು, ಪದಾಧಿಕಾರಿಗಳು, ಜನಪ್ರತಿನಿಧಿಗಳು, ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಹಾಜರಿದ್ದರು. ರಥೋತ್ಸವದ ನಂತರ ವೇದಿಕೆ ಕಾರ್ಯಕ್ರಮಗಳು ಜರುಗಿದವು. ಶ್ರೀ ಜಗದ್ಗುರುಗಳವರು ಆಶೀರ್ವಚನ ದಯಪಾಲಿಸಿದರು.