ಬಿಸ್ತುವಳ್ಳಿ : ಶ್ರೀ ಕಲ್ಲೇಶ್ವರ ರಥೋತ್ಸವದಲ್ಲಿ ತೇರನೇರಿ ಪುಷ್ಪಾರ್ಚನೆಯೊಂದಿಗೆ ಆಶೀರ್ವದಿಸಿದ ಡಾ.ಶ್ರೀಗಳವರು
ದಿನಾಂಕ: 28-04-2024
ಸ್ಥಳ: ಬಿಸ್ತುವಳ್ಳಿ , ಜಗಳೂರು ತಾಲ್ಲೂಕು.
ಭಕ್ತಿ ಸಂಭ್ರಮದಿಂದ ನಡೆದ ಬಿಸ್ತುವಳ್ಳಿಯ ಶ್ರೀ ಕಲ್ಲೇಶ್ವರ ರಥೋತ್ಸವ.
----------------------------------------------
ತೇರನೇರಿ ಪತ್ರ ಪುಷ್ಪಗಳಿಂದ ಆಶೀರ್ವಾದಿಸಿದ ಶ್ರೀ ತರಳಬಾಳು ಜಗದ್ಗುರುಗಳವರು.
----------------------------------------------
ತೇರಿನ ಸಂಭ್ರಮವನ್ನು ನೂರ್ಮಡಿಗೊಳಿಸಿದ ಶ್ರೀ ಜಗದ್ಗುರುಗಳವರು ವಯೋಲಿನ್ ವಾದನ..!
----------------------------------------------
ಮನುಷ್ಯ ಮನುಷ್ಯರ ನಡುವಿನ ಸಂಬಂಧಗಳ ಬೆಸುಗೆಯ ಇನ್ನೊಂದು ಆಯಾಮವೇ ರಥೋತ್ಸವಕ್ಕೆ ಇದೆ. ರಥೋತ್ಸವ ಎಂದರೆ ನಮ್ಮ ಕುಟುಂಬಗಳು, ಸಮಾಜಗಳಿಂದ ಉದ್ಭವಿಸಿರುವ ಸಮಸ್ಯೆಗಳ ವಾತಾವರಣದಿಂದ ಸೌಹಾರ್ದತೆ, ಶಾಂತಿಯೆಡೆಗೆ ಸಾಗುವುದಾಗಿದೆ.
ತೇರಿನ ನೆಪದಲ್ಲಿ ವರ್ಷಕ್ಕೊಮ್ಮೆ ತೌರಿಗೆ ಬರುವ ಹೆಣ್ಣು ಮಕ್ಕಳ ಸಂಭ್ರಮ. ಊರುಗಳಿಂದ ಬಂದಿಳಿಯುವ ಬೀಗರು ನೆಂಟರಿಷ್ಟರ ಸಡಗರ. ಹೋಳಿಗೆ ತುಪ್ಪದ ರಸದೌತಣ. ತೇರಿನ ಕಳಸ ನೋಡಲೆಂದೇ ಬರುವ ನವ ವಧುವರರ ಜೀವನೋತ್ಸಾಹ. ಮಕ್ಕಳ ಆಟಕ್ಕೆ ಸಜ್ಜಾದ ರಂಕಲು ರಾಟೆಗಳ ಭರಾಟೆ. ಮೇಕಪ್ಪು ತುಂಬಿದ, ತುಂಟ ನಗೆಯ ತರುಣ–ತರುಣಿಯರ ನೋಟದ ಬೇಟ.
ಜನರ ಭಕ್ತಿ ಪರಿಷೆ, ಜನಪದರ ಹಾಡು, ಕೃಷಿ ಹಾಗೂ ಅವಿಭಕ್ತ ಕುಟುಂಬದ ಗ್ರಾಮೀಣ ಪರಂಪರೆಯನ್ನು ಬಿಟ್ಟು ಯಾವುದೇ ಜಾತ್ರೆಗೆ ಅಸ್ತಿತ್ವ ಇಲ್ಲ. ಹೊಸಬೆಳಕಿನ ನೀವು ಸಂಭ್ರಮ ನೀಡುವ ಜಾತ್ರೆ, ರಥೋತ್ಸವಗಳು ಬದುಕಿಗೆ ಸ್ಪೂರ್ತಿ.
ಜಗಳೂರು ತಾಲ್ಲೂಕಿನ ಬಿಸ್ತುವಳ್ಳಿಯ ಇಂದು ಸಂಜೆ ಶ್ರೀ ಕಲ್ಲೇಶ್ವರ ಸ್ವಾಮಿಯ ರಥೋತ್ಸವ ಪರಮ ಪೂಜ್ಯ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಭಕ್ತರ ಭಕ್ತಿ ಸಂಭ್ರಮದಲ್ಲಿ ನಡೆಯಿತು. ರಥವನೇರಿ ಶ್ರೀ ಜಗದ್ಗುರುಗಳವರು ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ, ಪತ್ರೆ ಪುಷ್ಪಗಳನ್ನು ಭಕ್ತರ ಶಿರದ ಮೇಲೆ ಹಾಕುವ ಮೂಲಕ ಆಶೀರ್ವಾದಿಸಿದರು.
ರಥೋತ್ಸವದ ನಂತರ ಶ್ರೀ ಜಗದ್ಗುರುಗಳವರು ವಯೋಲಿನ್ ವಾದನವು ನೆರೆದಿದ್ದ ಭಕ್ತರ ಭಕ್ತಿಯ ಕರಾಡನಕ್ಕೆ ಸಾಕ್ಷಿಯಾಯಿತು. ರಾಷ್ಟ್ರಕವಿ ದಿವಂಗತ ಜಿ.ಎಸ್.ಶಿವರುದ್ರಪ್ಪನವರ ಎದೆ ತುಂಬಿ ಹಾಡಿದೆನು ಭಾವಗೀತೆಯು ಶ್ರೀ ಜಗದ್ಗುರುಗಳವರ ವಯೋಲಿನ್ ವಾದನದ ಕೃತಿಯಾಯಿತು. ಪೂಜ್ಯ ಶ್ರೀ ಜಗದ್ಗುರುಗಳವರ ವಾದನವು ಮನಸ್ಸಿಗೊಂದು ಚೈತನ್ಯ ತಂದುಕೊಡುವ ಅಪೂರ್ವ ಶಕ್ತಿಯಾಗಿ ಮನಸ್ಸು ಮತ್ತು ದೇಹದ ಉಲ್ಲಾಸವನ್ನು ಹೆಚ್ಚಿಸಿತು.
ಕನ್ನಡ ನಾಡಿನ ಜಲಋಷಿ, ಬಹುಭಾಷಾ ವಿದ್ವಾಂಸರು, ವಿದ್ವತ್ ಪೂರ್ಣ ಸಂತಶ್ರೇಷ್ಠರಾದ ಶ್ರೀ ತರಳಬಾಳು ಜಗದ್ಗುರು ಡಾ॥ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಬನಾರಸ್ ಹಿಂದೂ ವಿಶ್ವ ವಿದ್ಯಾನಿಲಯದ ವಯೊಲಿನ್ ಡಿಪ್ಲೊಮಾದಲ್ಲಿ ಪ್ರಥಮ ರ್ಯಾಂಕ್ ಪಡೆದ ಪ್ರತಿಭಾನ್ವಿತರು. ಶ್ರೀ ಜಗದ್ಗುರುಗಳವರು ಶಿವಮೊಗ್ಗದಲ್ಲಿ ಶಾಲಾ ಬಾಲಕರಾಗಿರುವಾಗಲೇ ಪಿಟೀಲು ನುಡಿಸುವುದನ್ನು ಖಾಸಗಿ ಶಿಕ್ಷಕರಿಂದ ಅಭ್ಯಾಸ ಮಾಡಿದರು. ಸ್ವಾರಸ್ಯದ ಸಂಗತಿ: ಶಿವಮೊಗ್ಗದಲ್ಲಿ ಆಗ ಲಾಯರ್ ಆಗಿದ್ದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರು ಮೃದಂಗ ಮತ್ತು ಹಾಡುಗಾರಿಕೆ ಕಲಿಯುತ್ತಿದ್ದ ಸಹಪಾಠಿ!
ಮುಂದೆ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಅಧ್ಯಯನದ ಸಂದರ್ಭದಲ್ಲಿ ಪಿಟೀಲು ಚೌಡಯ್ಯನವರು ಸ್ಥಾಪಿಸಿದ ಬಿಡಾರಂ ಕೃಷ್ಣಪ್ಪನವರ ಅಯನಾರ್ ಕಲಾ ಶಾಲೆಯಲ್ಲಿ ಪಿಟೀಲು ಕಲಿಯುವುದು ಮಂದುವರೆಯಿತು. ಬನಾರಸ್ ನಲ್ಲಿ ತರಗತಿಗಳು ಮುಗಿದ ನಂತರ ಸಂಜೆ ಹೊತ್ತು ನಡೆಯುತ್ತಿದ್ದ ವಯೊಲಿನ್ ಡಿಪ್ಲೊಮಾ ತರಗತಿ ಸೇರಿದರು. ಚೆನ್ನೈನ ವಿದ್ವಾನ್ ವೆಂಕಟರಾಮಾನುಜಂ ಅವರು ಶಿಕ್ಷಕರು. ಕರ್ನಾಟಕ ಸಂಗೀತದ ಬಹು ದೊಡ್ಡ ವಿದ್ವಾಂಸರವರು. ಆಕಾಶವಾಣಿಯಲ್ಲಿ ಸಂಗೀತ ಕಚೇರಿ ನೀಡುತ್ತಿದ್ದರು. ಒಮ್ಮೆ ದೆಹಲಿಯ ಆಕಾಶವಾಣಿಯಲ್ಲಿ ಅವರ ಪಿಟೀಲು ಕಚೇರಿ ನಡೆದಾಗ ತಂಬೂರಿ ಸಾಥ್ ನೀಡಿದ್ದು ಆಗ ವಿದ್ಯಾರ್ಥಿಯಾಗಿದ್ದ ಶ್ರೀ ಗುರುಗಳೇ! ವಯೋಲಿನ್ ಡಿಪ್ಲೊಮಾದಲ್ಲಿ ಪ್ರಥಮ ರ‍್ಯಾಂಕ್ ನ ಗರಿಯು ಮುಡಿಗೇರಿತು!
ಶ್ರೀಜಗದ್ಗುರುಗಳು ಈಗಲೂ ಸಮಯ ಸಿಕ್ಕರೆ (ಅದು ಸಿಗುವುದು ದುರ್ಲಭ!) ಪಿಟೀಲಿನ ತಂತಿಗಳ ಮೇಲೆ ಕಮಾನು ಆಡಿಸುತ್ತಾರೆ. ತ್ಯಾಗರಾಜರ ಕೃತಿಗಳನ್ನು, ವಚನಗಳನ್ನು ಮತ್ತು ಭಾವಗೀತೆಗಳನ್ನು ಇಷ್ಟಪಟ್ಟು ನುಡಿಸುತ್ತಾರೆ. ಪ್ರತಿ ವರ್ಷ ಹಿರಿಯ ಗುರುಗಳವರ ಶ್ರದ್ಧಾಂಜಲಿಯ ದಿನದಂದು ಐಕ್ಯ ಮಂಟಪದಲ್ಲಿ ಪರಮಾರಾಧ್ಯ ಮಹಾಗುರುವಿಗೆ ಸಂಗೀತದದೊಂದಿಗೆ ಭಕ್ತಿ ಸಮರ್ಪಿಸುವ ದೃಶ್ಯ ಕಣ್ಣಾಲಿಗಳನ್ನು ತರುತ್ತದೆ.
ಪೂಜ್ಯರಿಗೆ ತುಂಬಾ ಪ್ರಿಯವಾದ ಭಾವಗೀತೆ ಜಿ.ಎಸ್ ಶಿವರುದ್ರಪ್ಪನವರ ಎದೆ ತುಂಬಿ ಹಾಡಿದೆನು . ಅದಕ್ಕೆ ಕಾರಣವನ್ನು ಅವರ ಮಾತುಗಳಲ್ಲೇ ತಿಳಿಯಿರಿ. "ಈ ಹಾಡನ್ನು ಕೇಳಿದಾಗಲೆಲ್ಲಾ ನಮ್ಮ ಮತ್ತು ನಮ್ಮ ಲಿಂಗೈಕ್ಯ ಗುರುವರ್ಯರ ಸಂಬಂಧವನ್ನು ಕುರಿತೇ ಜಿ.ಎಸ್.ಎಸ್ ಬರೆದಿದ್ದಾರೇನೋ ಎಂಬ ಭಾವನೆ ನಮ್ಮ ಹೃದಯದಲ್ಲಿ ಸಹಜವಾಗಿ ಮೂಡಿಬರುತ್ತದೆ. ಎಷ್ಟೇ ಆಗಲಿ ಇದು ಗುರು-ಶಿಷ್ಯ ಸಂಬಂಧವನ್ನು ಕುರಿತದ್ದೇ ತಾನೆ. ಇದಕ್ಕಿಂತ ಭಿನ್ನವಾದ ಶಬ್ದಗಳಲ್ಲಿ ನಮ್ಮ ಗುರುವರ್ಯರ ಬಗ್ಗೆ ನಮಗಿರುವ ಮಧುರ ಭಾವನೆಗಳನ್ನು ಅಭಿವ್ಯಕ್ತಗೊಳಿಸಲು ಸಾಧ್ಯವಿಲ್ಲ ಎನಿಸುತ್ತದೆ." ಈ ಕವಿತೆಯ ಭಾವದಿಂದ ನಮ್ಮ ಬಾಲ್ಯ ಜೀವನದ ಘಟನೆ ನೆನಪಾಗಿ ಹೃದಯ ಗದ್ಗದಗೊಳ್ಳುತ್ತದೆ; ಕಂಠ ಬಿಗಿಯುತ್ತದೆ, ಕಣ್ಣೆವೆ ಹನಿಗೂಡುತ್ತದೆ!
ಅಂದ ಹಾಗೆ ಒಂದು ಚಿಕ್ಕ ಮಾಹಿತಿ: ಮಹಾರಾಜಾ ಕಾಲೇಜಿನಲ್ಲಿ ಜಿ.ಎಸ್ ಶಿವರುದ್ರಪ್ಪನವರು ಶ್ರೀಜಗದ್ಗುರುಗಳವರ ಅಧ್ಯಾಪಕರು!
<