ಶ್ರೀ ತರಳಬಾಳು ಜಗದ್ಗುರುಗಳವರ ಆಶೀರ್ವಾದ ಪಡೆದ , ಶ್ರೀಮತಿ ಗೀತಾ, ಶಿವರಾಜ್ ಕುಮಾರ್.

  •  
  •  
  •  
  •  
  •    Views  

ದಿನಾಂಕ:28-04-2024
ಸ್ಥಳ : ಸಿರಿಗೆರೆ

ಡಾ.ರಾಜ್ ಕುಮಾರ್, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ, ಪುನೀತ್ ರಾಜ್ ಕುಮಾರ್ ರವರ ಮಠದೊಂದಿಗಿನ ಬಾಂಧವ್ಯದ ನೆನಪು ಹಂಚಿಕೊಂಡ ಶ್ರೀ ಜಗದ್ಗುರುಗಳವರು.
------------------------------------

ನಿಮ್ಮ ಕೈ ಬೆರಳಿಗೆ ಹಚ್ಚುವ ಮಸಿ ಮುಖಕ್ಕೆ ಮೆತ್ತಿದ ಮಸಿಯಾಗದಿರಲಿ! ಎಂದು ಮತದಾರರಿಗೆ ಮಾರ್ಗದರ್ಶನ ಮಾಡಿದ ಶ್ರೀ ಜಗದ್ಗುರುಗಳವರು.
------------------------------------

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶ್ರೀ ಮತಿ ಗೀತಾ ಶಿವರಾಜ್ ಕುಮಾರ್ ಮತ್ತು ಪತಿ, ಖ್ಯಾತ ಚಲನ ಚಿತ್ರ ನಟ ಶ್ರೀ ಶಿವರಾಜ್ ಕುಮಾರ್ ರವರು ಇಂದು ತರಳಬಾಳು ಜಗದ್ಗುರು ಬೃಹನ್ಮಠಕ್ಕೆ ಭೇಟಿ ನೀಡಿದ  ಶಿವರಾಜ್ ಕುಮಾರ್ ಮತ್ತು ಗೀತಾ ದಂಪತಿಗಳು ಐಕ್ಯ ಮಂಟಪಕ್ಕೆ ಆಗಮಿಸಿ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ಕರ್ತೃ ಗದ್ದುಗೆಗೆ ಭಕ್ತಿ ಸಮರ್ಪಿಸಿದರು. ನಂತರ ಪರಮ ಸದ್ಧರ್ಮ ನ್ಯಾಯ ಪೀಠಕ್ಕೆ ಆಗಮಿಸಿ ಪೂಜ್ಯ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರಿಗೆ ಭಕ್ತಿ ಸಮರ್ಪಿಸಿ, ಪೂಜ್ಯರಿಂದ ತರಳಬಾಳು ಪ್ರಸಾದ ಸ್ವೀಕರಿಸಿ ಕೃಪಾಶೀರ್ವಾದ ಪಡೆದರು. 

ಮಠದೊಂದಿಗೆ ಎಸ್ ಬಂಗಾರಪ್ಪನವರ ಭಕ್ತಿ ಬಾಂಧವ್ಯ.
----------------------------------

ದಂಪತಿಗಳನ್ನು ಹರಿಸಿ ಆಶೀರ್ವಚನ ನೀಡಿದ ಶ್ರೀಜಗದ್ಗುರುಗಳು ಗೀತಾ ಶಿವರಾಜ್ ಕುಮಾರ್ ರವರ ತಂದೆ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಎಸ್.ಬಂಗಾರಪ್ಪನವರು ಮಠದ ಬಗ್ಗೆ ಅಪಾರ ಭಕ್ತಿ ಗೌರವ ಹೊಂದಿದವರು. ಹತ್ತಾರು ಬಾರಿ ಮಠಕ್ಕೆ, ಮಠದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ನಾವು ಮತ್ತು ಬಂಗಾರಪ್ಪನವರು ಶಿವಮೊಗ್ಗದಲ್ಲಿ ಜೊತೆಯಾಗಿ ಸಂಗೀತ ಅಭ್ಯಾಸ ಮಾಡಿದವರು. ಎಂದು ಶ್ರೀ ಜಗದ್ಗುರುಗಳವರು ಹಳೆಯ ಬಾಂಧವ್ಯಗಳನ್ನು ಹಂಚಿಕೊಂಡರು. 

ಶಿವಣ್ಣನಿಗೆ ರಾಜ್ ಕುಮಾರ್  ಮತ್ತು ಪುನೀತ್ ಮಠಕ್ಕೆ ಭೇಟಿದ ಸಂದರ್ಭ ವಿವರಿಸಿದ ಶ್ರೀ ಜಗದ್ಗುರುಗಳವರು.
-----------------------------------

ಇದೇ ಮೊದಲ ಬಾರಿಗೆ ಶಿವರಾಜ್ ಕುಮಾರ್ ಮಠಕ್ಕೆ ಆಗಮಿಸಿರುವುದಾಗಿ ತಿಳಿಸಿದಾಗ, 1983 ರಲ್ಲಿ ನಿಮ್ಮ ತಂದೆಯವರು ವರನಟರಾದ ಡಾ.ರಾಜ್ ಕುಮಾರ್ ರವರು ಬಾಲಕ ಪುನೀತ್ ರಾಜ್ ಕುಮಾರ್ ಜೊತೆ ಮಠಕ್ಕೆ ಆಗಮಿಸಿದ್ದರು. ಹಿರಿಯ ಗುರುಗಳಿಗೆ ಬಿನ್ನವತ್ತಳೆ ಸಮರ್ಪಿಸಿದ್ದರು. ನಮ್ಮ ಮಠ ಮತ್ತು ಗುರುಗಳ ಬಗ್ಗೆ ಅಪಾರ ಭಕ್ತಿ ಹೊಂದಿದವರು. ಅಂದು

ಶ್ರೀ ತರಳಬಾಳು ಜಗದ್ಗುರು ಲಿಂಗೈಕ್ಯ ಶ್ರೀ ಶಿವಕುಮಾರ  ಶಿವಾಚಾರ್ಯ ಮಹಾಸ್ವಾಮಿಗಳವರ ಆಶೀರ್ವಾದ ಪಡೆದಿದ್ದರು. ಪೂಜ್ಯರ ಸಮ್ಮುಖದಲ್ಲಿ "ಕಾಣದಂತೆ ಮಾಯವಾದನು ನಮ್ಮ ಶಿವ".... ಹಾಡನ್ನು ಹಾಡಿದ್ದ ಪುನೀತ ಪ್ರತಿಭೆಯನ್ನು ಕಂಡ ಪೂಜ್ಯದ್ವಯರು ಬೆಟ್ಟದ ಹೂವು ಭಾನೆತ್ತರಕ್ಕೆ ಬೆಳೆಯಲೆಂದು ಆಶೀರ್ವದಿಸಿದ್ದರು. ಡಾ.ರಾಜ್ ಕುಟುಂಬದೊಡನೆ ಆತ್ಮೀಯ ಸಂಬಂಧ ಇಟ್ಟುಕೊಂಡಿದ್ದ ತರಳಬಾಳು ಕಲಾಸಂಘದ ಅಂದಿನ ಸಂಗೀತ ಉಪಾಧ್ಯಾಯರಾಗಿದ್ದ ರಾಜುಮೇಷ್ಟ್ರುರವರು  ತರಳಬಾಳು ಮಠ ಮತ್ತು ರಾಜ್ ಕುಟುಂಬದ ಸಂಪರ್ಕ ಸೇತುವೆಯಾಗಿದ್ದರು. ಎಂದು ಶ್ರೀ ಜಗದ್ಗುರುಗಳವರು 40 ವರ್ಷಗಳ ಹಿಂದೆ ಡಾ.ರಾಜ್ ಕುಮಾರ್ ಆಗಮಿಸಿದ್ದ ಫೋಟೋ ಗಳನ್ನು  ಶಿವರಾಜ್ ಕುಮಾರ್ ರವರಿಗೆ ತೋರಿಸಿದಾಗ ಶಿವರಾಜ್ ಕುಮಾರ್ ಮೊಗದಲ್ಲಿ ಆಶ್ಚರ್ಯ ಮತ್ತು ಸಂತೋಷ ಹುಕ್ಕಿ ಬಂದಿತು.

ಸ್ವಾತಂತ್ರ್ಯ  ಪೂರ್ವದಿಂದಲೂ, ಶ್ರೀ ಮಠದ ಅನುಸರಣೆಯಲ್ಲಿರುವ ಸರ್ವಜಾತಿ  ಏಕಪಂಕ್ತಿ ಪ್ರಸಾದದ ವ್ಯವಸ್ಥೆಯನ್ಶು ಕಂಡು ಮುಕ್ತಕಂಠದಿಂದ ಡಾ.ರಾಜ್ ಪ್ರಶಂಸಿದ್ದರು. ಶ್ರೀ ಬೃಹನ್ಮಠದ  ಪ್ರಸಾದದ ಒಂದು ಪ್ರಾಕಾರವಾದ ಉಪ್ಪಿನಕಾಯಿಯ ರುಚಿಗೆ ಮಾರುಹೋಗಿದ್ದ ವರನಟ ತಮ್ಮ ನಿವಾಸಕ್ಕೆ ಕೇಳಿ ಪಡೆದುಕೊಂಡು ಹೋಗಿದ್ದರು. ಎಂದು ಸಂತೋಷದಿಂದ ವಿಷಯ ಹಂಚಿಕೊಂಡರು.

ಆದರ್ಶ ಕುಟುಂಬದ ತಂದೆಯವರ ಮಾನವೀಯ ಗುಣ  ತಾಯಿ ಹೃದಯದ ಸಹನೆ ಯಾವುದೇ ಸುದ್ದಿಗಳಿಗೆ ಆಹಾರವಾಗದೆ ಯಾರಿಗು ಅವಮಾನಿಸದ ಯಾರೊಂದಿಗು ದ್ವೇಷ ಬೆಳೆಸದ ವ್ಯಕ್ತಿತ್ವದ ನಗು ಮಖದ ಪುನೀತ್ ರಾಜ್ ಕುಮಾರ್  ಕಳೆದುಕೊಂಡ ನೋವು ಎಲ್ಲರಿಗೂ ಇದೆ.  ಅಪ್ಪು ಬೆಟ್ಟದ ಹೂವಿನೊಂದಿಗೆ ದೇವರ ಚರಣದಲ್ಲಿ ಲೀನವಾಗಿದ್ದಾರೆ. ಸರಳ, ಮುಗ್ಧ ಮನಸ್ಸಿನ ಪುನೀತ್ ರಾಜ್ ಕುಮಾರ್ ಅವರು  ಚಿಕ್ಕ ವಯಸ್ಸಿನಲ್ಲಿಯೇ ಚಿತ್ತರಂಗಕ್ಕೆ ಕಾಲಿಟ್ಟು ಅಪಾರವಾದ ಅಭಿಮಾನಿ ಬಳಗವನ್ನು ಹೊಂದಿದ್ದರು. ಇಂತಹ ಪ್ರತಿಭಾವಂತ,ಸರಳ,ಮಾನವೀಯತೆಯನ್ನು ನಿಜ ಜೀವನದಲ್ಲಿ ಅಂತರ್ಗತವಾಗಿಸಿಕೊಂಡಿದ್ದ ನಟನನ್ನು 46ನೇ ವಯಸ್ಸಿನಲ್ಲಿಯೇ ಕಳೆದುಕೊಂಡಿರುವುದು, ಎಲ್ಲರಿಗೂ ನುಂಗಲಾಗರದ ಕ್ಷಣ ಎಂದು ಶ್ರೀ ಜಗದ್ಗುರುಗಳವರು ಅಭಿಪ್ರಾಯ ಪಟ್ಟರು.

ಚುನಾವಣೆಗಳು ಮಾರಿಹಬ್ಬಗಳಂತಾಗಿವೆ.
----------------------------------------

ಪ್ರಸ್ತುತ ಚುನಾವಣೆಗಳ ಬಗ್ಗೆ ಮಾತನಾಡಿದ ಶ್ರೀ ಜಗದ್ಗುರುಗಳವರು, ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರಿಗಿಂತ, ಇಂದು ದೇಶದ ಅಧಿಕಾರ ಗದ್ದುಗೆಯನ್ನು ಏರಲು ರಾಜಕೀಯ ಪಕ್ಷದ ಟಿಕೆಟ್ಟಿಗಾಗಿ ಹೋರಾಡುವ ಟಿಕೆಟ್ಟು ಹೋರಾಟಗಾರರ ಸಂಖ್ಯೆಯೇ ಜಾಸ್ತಿಯಾಗಿದೆ.ದೇಶ ಸೇವೆಗಿಂತ ಸ್ವಾರ್ಥ ಲಾಲಸೆ ಮೇರೆ ಮೀರಿ ಬೆಳೆದಿದೆ. ಪಕ್ಷದಿಂದ ಪಕ್ಷಕ್ಕೆ ಜಿಗಿಯುವ ಈ (ವಾ)ನರರಿಗೆ ಸಾರ್ವಜನಿಕ ಜೀವನದಲ್ಲಿ ಸಹಜವಾಗಿ ಇರಬೇಕಾದ ಕನಿಷ್ಠ ನಾಚಿಕೆಯೂ ಇಲ್ಲದಾಗಿದೆ. ಇತ್ತೀಚಿನ ಚುನಾವಣೆಗಳನ್ನು ನೋಡಿದರೆ ಸ್ವತಃ ದೇವರೇ  ಚುನಾವಣೆಗೆ ನಿಂತರೂ ಗೆಲ್ಲಲು ಸಾಧ್ಯವಿಲ್ಲ ಎಂಬ ವಾತಾವರಣ ನಿರ್ಮಾಣವಾಗಿದೆ. “

ಚುನಾವಣೆಗಳು ಮಾರಿಹಬ್ಬಗಳಂತಾಗಿವೆ. ಜನರು ತಿಳಿದೂ ತಿಳಿದೂ ಹರಕೆಯ ಕುರಿಗಳಾಗುತ್ತಿದ್ದಾರೆ. "ಹಬ್ಬಕ್ಕೆ ತಂದ ಹರಕೆಯ ಕುರಿ ತೋರಣಕ್ಕೆ ತಂದ ತಳಿರ ಮೇಯಿತ್ತು!" ಎಂಬಂತೆ ಮತದಾರರು ರಾಜಕಾರಣಿಗಳು ಒಡ್ಡುವ ಆಮಿಷಗಳಿಗೆ ಬಲಿಯಾಗುತ್ತಿದ್ದಾರೆ. ಮಾರಿಹಬ್ಬದ ದಿನ ಹರಕೆಯ ಕುರಿಗಳನ್ನು ಮೆರವಣಿಗೆ ಮಾಡುವಂತೆ ಅಭ್ಯರ್ಥಿಗಳು ಮತದಾರರನ್ನು ಓಲೈಸಿ ಮೆರೆಸುತ್ತಾರೆ. ಮತದಾನ ಮುಗಿದ ಮಾರನೆಯ ದಿನವೇ "ನೀನು ಯಾರೋ ಮತ್ತೆ ನಾನು ಯಾರೋ" ಎಂಬಂತಹ ಪರಿಸ್ಥಿತಿ! ನಿರ್ಮಾಣವಾಗಿದೆ ಎಂದು ಚುನಾವಣಾ ಸಂದರ್ಭಗಳನ್ನು ವಿಶ್ಲೇಷಿಸಿದರು.

ಪ್ರಜ್ಞಾವಂತ ಮತದಾರರೇ! ದೇಶದ ಜವಾಬ್ದಾರಿಯುತ ನಾಗರಿಕರಾಗಿ ತಪ್ಪದೆ ನಿಮ್ಮ ಮತ ಚಲಾಯಿಸಿರಿ. ಮತದಾನ ಮಾಡುವಾಗ ನಿಮ್ಮ ಕೈಬೆರಳಿಗೆ ಹಚ್ಚುವ ಮಸಿ ಒಂದು ತಿಂಗಳಲ್ಲಿ ಅಳಿಸಿ ಹೋಗಬಹುವು. ಆದರೆ ಅದು ಮುಂದಿನ ಐದು ವರ್ಷಗಳ ಕಾಲ ನಿಮ್ಮ ಮುಖಕ್ಕೆ ಮೆತ್ತಿದ ಮಸಿಯಾಗದಿರಲಿ. ನೀವು ಹಾಕುವ ಓಟು ತಾಯಂದಿರು. ಮಗುವಿನ ಹಾಲು ಗಲ್ಲದ ಮೇಲೆ ಪ್ರೀತಿಯಿಂದ ಇಡುವ ದೃಷ್ಟಿಬೊಟ್ಟಿನಂತಿರಲಿ! ಎಂದು ಸಂದೇಶ ಕರುಣಿಸಿದರು.

ಈ ಸಂದರ್ಭದಲ್ಲಿ ಶಿಕಾರಿಪುರ ತಾಲ್ಲೂಕಿನ ಕಳೆದ ವಿಧಾನ ಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿ ಶ್ರೀ ನಾಗರಾಜ್ ಗೌಡ, ಸೊರಬ ತಾಲೂಕಿನ ಕಾಂಗ್ರೆಸ್ ಮುಖಂಡರಾದ ಶ್ರೀ ಆನವಟ್ಟಿ ರುದ್ರಗೌಡ ಪಾಟೀಲ್, ಶಿಕಾರಿಪುರ, ಶಿವಮೊಗ್ಗದ ನೂರಾರು ಭಕ್ತರು ಹಾಜರಿದ್ದರು.