ಲಿಂಗಾಯತ ಜಾತಿಯಲ್ಲ ಲಿಂಗಾಯತ ಒಂದು ಧರ್ಮ: ಶ್ರೀ ತರಳಬಾಳು ಜಗದ್ಗುರುಗಳವರು
ದಿನಾಂಕ:2.5.2024
ಸ್ಥಳ : ಸಿರಿಗೆರೆ
ಲಿಂಗಾಯತ ಜಾತಿಯಲ್ಲ, ಅದೊಂದು ಧರ್ಮ. ಜಾತಿ, ವಯಸ್ಸು, ಲಿಂಗ, ಪಂಗಡ, ಪ್ರಾಂತ್ಯ ಪ್ರದೇಶಗಳನ್ನು ಮೀರಿ ಇಷ್ಟಲಿಂಗ ಧರಿಸಿದವರು ಲಿಂಗವಂತರಾಗುತ್ತಾರೆ. ಕೇವಲ ಹುಟ್ಟಿನಿಂದಲ್ಲದೆ ಅಂಗದ ಮೇಲೆ ಲಿಂಗ ಧರಿಸಿ ಶರಣಸತಿ ಲಿಂಗಪತಿ ಭಾವ ಹೊಂದುವುದಾಗಿದೆ ಎಂದು ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಆಶೀರ್ವಚನ ದಯಪಾಲಿಸಿದರು.
ಇಲ್ಲಿನ ಐಕ್ಯಮಂಟಪದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಕರ್ತೃ ಗದ್ದುಗೆಯಲ್ಲಿ ಅಣ್ಣನ ಬಳಗದವರು ಆಯೋಜಿಸಿದ್ದ ಜಂಗಮ ದೀಕ್ಷೆ ಹಾಗೂ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮದ ಪಾವನ ಸಾನ್ನಿಧ್ಯ ವಹಿಸಿ, ಜಂಗಮವಟುಗಳಿಗೆ ಇಷ್ಟಲಿಂಗ ಕರುಣಿಸಿ ಮಂತ್ರೋಪದೇಶ ನೀಡಿ ಆಶೀರ್ವದಿಸಿದರು.
ಉಳ್ಳವರು ಶಿವಾಲಯವ ಮಾಡುವರು:
ನಾನೇನ ಮಾಡುವೆ? ಬಡವನಯ್ಯಾ.
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರ ಹೊನ್ನ ಕಳಸವಯ್ಯಾ.
ಕೂಡಲಸಂಗಮದೇವ, ಕೇಳಯ್ಯಾ:
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲಾ!
ಶರೀರದಲ್ಲಿರುವ ಆತ್ಮವನ್ನು ಎಂದಿಗೂ ಅಪವಿತ್ರಗೊಳಿಸಬಾರದು. ಭೂಮಿಯಲ್ಲಿ ಧರಿಸಿದ ಈ ಶರೀರವನ್ನು ವೃತ ಕೆಡಿಸಲಾಗದು ಸದಾ ಭಗವಂತನ ನೆನಪಿನಲ್ಲಿರಬೇಕು. ಅದಕ್ಕಾಗಿ ಗುರುವು ಶಿಷ್ಯನಿಗೆ ಲಿಂಗಧಾರಣೆ ಸಂಸ್ಕಾರ ನೀಡಿ ಆತ್ಮವನ್ನು ಪವಿತ್ರ ಗೊಳಿಸುತ್ತಾನೆ. ಲಿಂಗ ದೇವರ ಕುರುಹು ಬ್ರಹ್ಮಾಂಡದಲ್ಲಿರುವ ವಿಶ್ವ ಚೈತನ್ಯದ ಸಂಕೇತ. ಕರಿಯನ್ನು ಕನ್ನಡಿಯಲ್ಲಿ ತೋರಿಸಿದಂತೆ ಕೈಯಲ್ಲಿ ಕೈಯಲ್ಲಿರುವ ಲಿಂಗದಲ್ಲಿ ಭಗವಂತನನ್ನು ತೋರಿಸುವ ಸಂಕೇತ ದೇವರು ಸರ್ವತ್ರ ಸರ್ವಾಂತರ್ಯಾಮಿ ದೇವರನ್ನು ಕಾಣಲು ಗುರುಗಳು ಅನುಗ್ರಹಿಸದ ದೂರದರ್ಶಕವೇ ಇಷ್ಟಲಿಂಗ ಎಂದು ತಿಳಿಸಿದರು.
ಒಮ್ಮೆ ವ್ಯಾಸರಾಯರು ತಮ್ಮ ಶಿಷ್ಯರಿಗೆ ಬಾಳೆಹಣ್ಣನ್ನು ನೀಡಿ ಯಾರಿಗೂ ಕಾಣದಂತೆ ತಿಂದು ಬನ್ನಿ ಎಂದು ಹೇಳಿದರಂತೆ. ಎಲ್ಲಾ ಶಿಷ್ಯರು ತಮಗೆ ತಿಳಿದ ಜಾಗದಲ್ಲಿ ಅವಿತು ತಿಂದು ಬಂದರು. ಆದರೆ ಕನಕದಾಸ ಎಲ್ಲಿ ಹೋದರು ಭಗವಂತ ನೋಡುತ್ತಿರುವುದರಿಂದ ತಿನ್ನಲಾಗದೇ ವಾಪಸು ತಂದಿದ್ದೇನೆ ಎಂದರು. ಭಗವಂತ ಸರ್ವವ್ಯಾಪಿ, ಸರ್ವಂತರಾಮಿ ಎಂದು ತಿಳಿಸಿದ ಕನಕದಾಸರನ್ನು ತಮ್ಮ ಶಿಷ್ಯರನ್ನಾಗಿ ಸ್ವೀಕರಿಸಿದರು ಎಂದರು. ಇಂದು ಭಕ್ತರು ಲಿಂಗ ಪೂಜೆ ಮಾಡುವುದು ಎರಿದರೆ ನೆನೆಯದು ಹುರುಳಿಲ್ಲ ನೆನೆಯದು ಎಂಬಂತಾಗಿದೆ ಲಿಂಗ ನೆನೆಯುದಲ್ಲ ಮನಸ್ಸು ನೆನೆಯಬೇಕು, ಮನಸ್ಸು ದೇವರೊಂದಿಗೆ ಸಂಭಾಷಿಸುವ ಸಾಧನ ಇಷ್ಟಲಿಂಗವಾಗಬೇಕಾಗಿದೆ. ಪರಿಶುದ್ಧ ಮನಸ್ಸುಳ್ಳವ ನೈತಿಕ ಶಕ್ತಿಯನ್ನು ಮೈಗೂಡಿಸಿಕೊಂಡರೆ ಯಾವುದೇ ಶಕ್ತಿಯನ್ನು ಎದುರಿಸಬಹುದು ಅಂತಹ ನೈತಿಕ ನೆಲಗಟ್ಟಿನ ಜೀವನವನ್ನು ಸಾಗಿಸಬೇಕೆಂದು ಜಂಗಮ ವಟುಗಳಿಗೆ ಕರೆ ನೀಡಿದರು. ವಂದನೆ ಮತ್ತು ನಿಂದನೆಗಳು ಸಮಯಾವರ್ತಿಗಳು ಅವುಗಳಿಗೆ ಮನಸ್ಸು ಹಿಗ್ಗದೆ ಕುಗ್ಗದೆ ಸಮಾಧಾನ ಸ್ಥಿತಿಯಲ್ಲಿರಬೇಕು ಎಂದರು.
ಶಿವದೀಕ್ಷೆ ಮತ್ತು ಜಂಗಮದೀಕ್ಷೆ ಪಡೆದ 80 ಜಂಗಮವಟುಗಳು ನಮ್ಮ ದೃಷ್ಟಿಯಲ್ಲಿ ದೇಹವೇ ದೇವಾಲಯಗಳಂತೆ ನಿರ್ಮಾಣವಾಗಿವೆ. ಜಂಗಮರು ಸಮಾಜ ಮತ್ತು ಶ್ರೀಮಠದ ಕೊಂಡಿಯಾಗಿ ಕೆಲಸ ನಿರ್ವಹಿಸಬೇಕು ಮಠ ಮತ್ತು ಸಮಾಜದ ಏಳಿಗಗೆ ಶ್ರಮಿಸಬೇಕು,ಸಮಾಜದ ಅಭಿವೃದ್ದಿಗೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದರು. ಇಂದು ಮಠ, ಜಂಗಮರು ವಿದ್ಯೆ, ವ್ಯವಹಾರ, ತೋಟ, ಇತ್ಯಾದಿ ಕಾಯಕದಿಂದ ಉತ್ತಮ ಸ್ಥಿತಿಯಲ್ಲಿ ಜೀವಿಸುತ್ತಿದ್ದಾರೆ. ಇಂದು ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಇಷ್ಟಲಿಂಗ ದೀಕ್ಷೆಯಂತಹ ಕಾರ್ಯಕ್ರಮಗಳು ಅವರ ನೈತಿಕ ಭವಿಷ್ಯವನ್ನು ರೂಪಿಸಲು ಸಹಾಯಕವಾಗುತ್ತವೆ, ಮಕ್ಕಳು ಸಂಸ್ಕಾರವಂತರಾಗಬೇಕು. ಶಾಂತಿವನ ಮತ್ತು ಶ್ರೀಮಠದಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳು ಎಲ್ಲರಿಗೂ ಮಾದರಿಯಾಗಬೇಕು. 40 ಜಂಗಮವಟುಗಳಿಗೆ ಜಂಗಮ ದೀಕ್ಷೆ ನೀಡಲಾಯಿತು. ಶಾಂತಿವನ, ಶ್ರೀಮಠ ಹಾಗೂ ವಿವಿಧ ಸ್ಥಳಗಳಿಂದ ಆಗಮಿಸಿದ ಸುಮಾರು 60 ವಟುಗಳಿಗೆ ಇಷ್ಟಲಿಂಗ ಕರುಣಿಸಿ ಆಶೀರ್ವಚನವನ್ನು ದಯಪಾಲಿಸಿದರು.
ಈ ರೀತಿ ಬಾಲ್ಯದಲ್ಲಿ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಗಳು ನಿರಂತರವಾಗಿ ನಡೆಯಬೇಕೆಂದು ಅಣ್ಣನ ಬಳಗದ ಅಧ್ಯಕ್ಷರಿಗೆ ಸೂಚಿಸಿದರು. ಈ ಕಾರ್ಯಕ್ರಮ ನಮಗೆ ತುಂಬಾ ಸಂತೋಷವನ್ನು ತಂದಿದೆ ತಮ್ಮ ಭಾವನೆಯನ್ನು ವ್ಯಕ್ತಪಡಿಸಿದರು.
ನಿವೃತ್ತ ಪ್ರಾಧ್ಯಾಪಕ ಡಾ. ಈಶ್ವರ ಶರ್ಮಾ, ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್ ಮರುಳಸಿದ್ದಯ್ಯ, ಪುರೋಹಿತರಾದ ಮರುಳಸಿದ್ದ ಶಾಸ್ರ್ತಿ, ಮೋಹನ್ ಕುಮಾರ್, ಸತೀಶ್, ಪೌರೋಹಿತ್ಯ ಕಾರ್ಯ ನೆರವೇರಿಸದರು. ಜಂಗಮ ತರಬೇತಿ ಶಿಬಿರದ ಸಂಚಾಲಕರಾದ ಎಸ್.ಆರ್. ಮಲ್ಲಿಕಾರ್ಜುನಯ್ಯ, ಪೋಷಕರು ಹಾಗೂ ಸಿರಿಗರೆ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.