ವಿಶ್ವಗುರು ಬಸವಣ್ಣನವರ ವಚನಗಳು ವಿಶ್ವಕುಟುಂಬ ಕಲ್ಪನೆ ಹೊಂದಿವೆ

  •  
  •  
  •  
  •  
  •    Views  

ದಿನಾಂಕ : ಮೇ-10
ಸ್ಥಳ : ಸಿರಿಗೆರೆ

ಬಸವಣ್ಣನವರ ವಚನಗಳು ಸಾರ್ವಕಾಲಕ್ಕೂ ಯೋಗ್ಯ, ವಿಶ್ವದ ಪ್ರಜಾತಂತ್ರದ ಆಶಯಕ್ಕೆ ಅಪರೂಪದ ಕಾಣಿಕೆ ಎಂದು ಸಿರಿಗೆರೆಯಲ್ಲಿ ಅಣ್ಣನ ಬಳಗದವರು ಅಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷ ಬಿ.ಎಸ್.ಮರುಳಸಿದ್ದಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು

ಪ್ರಸ್ತುತ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯಲ್ಲಿ ಕ್ರಿ.ಶ.1134ರಲ್ಲಿ ಮಾದರಸ ಮತ್ತು ಮಾದಲಾಂಬಿಕೆ ಇವರ ಪುಣ್ಯಗರ್ಭದಲ್ಲಿ ಜನಿಸಿದರು ಸಮಾಜ ಸುಧಾರಕರಾದ ಬಸವಣ್ಣನವರು ವಿಶ್ವಗುರು, ಭಕ್ತಿಭಂಡಾರಿ, ಜಗಜ್ಯೋತಿ, ಮಹಾ ಮಾನವತಾವಾದಿ, ಮಹಾನ್ ನಾಯಕ, ಕರ್ನಾಟಕದ ಮಾರ್ಟಿನ್ ಲೂಥರ್ ಎಂಬ ಅಭಿದಾನಗಳನ್ನು ಹೊಂದಿರುವುದು ಅವರ ಬಹುಮುಖ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿವೆ. ಅವರ ವಚನ ಸಾಹಿತ್ಯ ಕೊಡುಗೆ ಅಮೂಲ್ಯವಾದುದು. ಬಸವಣ್ಣನವರು ನಡೆದ ದಾರಿಯಲ್ಲಿ ನಾವು ಬದುಕುವಂತಾಗಬೇಕು. ಅವರ ವಚನಗಳು ಬದುಕಿಗೆ ದಾರಿದೀಪವಾಗಿವೆ. ಬಸವಣ್ಣನವರು ಅವರು ಬೆಳೆದ ಪರಿಸರ ಮತ್ತು ಸಂಸ್ಕಾರ ವಚನ ಕ್ರಾಂತಿಗೆ ಕಾರಣವಾಯಿತು. 

ಕನ್ನಡ ಸಾಹಿತ್ಯ ವಿಶ್ವ ಸಾಹಿತ್ಯಕ್ಕೆ ನೀಡಿದ ಕೊಡುಗೆಗಳೇ ವಚನಗಳು. ಮೌಲ್ಯಯುತವಾದ ವಚನಗಳು ಜನಸಾಮಾನ್ಯರ ಆಡು ಭಾಷೆಯಲ್ಲಿ ರಚಿತವಾಗಿರುವುದರಿಂದ ಅನುಭವಾಮೃತ ಸಂದೇಶಗಳು ಬಹುಬೇಗ ತಲುಪಿದವು ಎಂದರು. ಹನ್ನೆರಡನೆಯ ಶತಮಾನದಲ್ಲಿದ್ದ, ಮೂಢನಂಬಿಕೆ, ಅಂಧ ಆಚರಣೆಗಳು, ಜಾತೀಯತೆ ಮತ್ತು ಲಿಂಗ ಅಸಮಾನತೆಯ ವಿರುದ್ಧ ಹೋರಾಡಿ ಸಮಾಜವನ್ನು ಸಾಮಾಜಿಕವಾಗಿ, ಆರ್ಥಿಕವಾಗಿ, ಸಾಂಸ್ಕೃತಿಕವಾಗಿ, ಮತ್ತು ಧಾರ್ಮಿಕವಾಗಿ ಸುಧಾರಣೆ ತಂದರು.

ಭಕ್ತಿ ಭಂಡಾರಿ ಬಸವಣ್ಣನವರನ್ನುಕುರಿರು ಉಪನ್ಯಾಸ ನೀಡಿದ ದಾವಣಗೆರೆ ಅನುಭವಮಂಟಪ ಶಾಲೆಯ ಕನ್ನಡ ಅಧ್ಯಾಫಕ ಶರತ್ ಮಾತನಾಡಿ ಹನ್ನೆರಡನೆ ಶತಮಾನ ವಚನ ಚಳುವಳಿಯ ಮೂಲಕ ಮಾಡಿದ ಕ್ರಾಂತಿ ವಿಶ್ವದ ಎಲ್ಲ ಕ್ರಾಂತಿಗೆ ಮೂಲವಾಗಿದೆ. ಪ್ರಪಂಚದ ಮಾನವ ಹಕ್ಕುಗಳ ಪ್ರತಿಪಾದನೆಗಿಂತ ಮುಂಚೆಯೇ ವಿಶ್ವಕ್ಕೆ ಭ್ರಾತೃತ್ವದ ಕಲ್ಪನೆ, ಜಾತ್ಯಾತೀತತೆ, ಲಿಂಗ ಸಮಾನತೆ, ಕಾಯಕ ಪ್ರಜ್ಞೆ ಮತ್ತು ದಾಸೋಹ ಕಲ್ಪನೆಗಳನ್ನು ಸಮಾಜಕ್ಕೆ ಬಸವಣ್ಣನವರು ಪರಿಚಯಿಸಿದ್ದರು. ಬಸವಣ್ಣನವರ ತತ್ತ್ವಾದರ್ಶಗಳಿಂದ ವಿಶ್ವದ ಜನತೆ ಪ್ರೇರೇಪಿತವಾಗಿದೆ ಎಂದರು.

ಪ್ರಸಾದ ನಿಲಯದ ವಿದ್ಯಾರ್ಥಿಗಳು ಬೆಳಗ್ಗೆ 6.30ಕ್ಕೆ ಶಿವಮಂತ್ರ ಲೇಖನ ಕಾರ್ಯಕ್ರಮದಲ್ಲಿ ಭಾಗವಹಸಿ ಬಸವಣ್ಣನವರ ಬಗ್ಗೆ ಉಪನ್ಯಾಸವನ್ನು ಆಲಿಸಿದರು. ಬಸವ ಜಯಂತಿ ಕಾರ್ಯಕ್ರಮದಲ್ಲಿ ಅಣ್ಣನ ಬಳಗದ ಉಪಾಧ್ಯಕ್ಷ ಯು.ಚಂದ್ರಪ್ಪ, ಸಹ ಕಾರ್ಯದರ್ಶಿ ಪ್ರಕಾಶ್ ಬಣಕಾರ, ಶಿಕ್ಷಕ ಎ.ಆರ್.ತಿಪ್ಪೇಸ್ವಾಮಿ ವಸತಿ ನಿಲಯದ ಶಿಕ್ಷಕರಾದ ಸಿ.ಎಸ್.ಗಿರೀಶ್, ಶಿವಕುಮಾರ್, ಆಶಾ, ನಿರ್ಮಲಾ, ನೇತ್ರಾವತಿ, ಉಷಾ ಮತ್ತಿತರರು ಇದ್ದರು. ಬಿ.ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜು, ವಿಜ್ಞಾನ ವಿಭಾಗದ ಕುಮಾರಿ ಮನುಪ್ರಿಯಾ, ಸ್ನೇಯಾ, ಅನುಷಾ ವಚನಗೀತೆ ಕಾರ್ಯಕ್ರಮ ನಡೆಸಿಕೊಟ್ಟರು. ಡಿ.ಎಸ್.ಚೈತ್ರಾ ಸ್ವಾಗತಿಸಿದರು. ವೈ.ಎಂ.ಸೃಷ್ಠಿತಾ ವಂದಿಸಿದರು, ದಾನೇಶ್ವರ ನಿರೂಪಿಸಿದರು.