ಹವಳ ಮುತ್ತುಗಳ ನಾಡಿನಿಂದ ಒಂದು ಪತ್ರ

  •  
  •  
  •  
  •  
  •    Views  

ರಬ್ ರಾಷ್ಟ್ರಗಳಲ್ಲಿ ಹವಳ ಮುತ್ತುಗಳ ನಾಡೆಂದೇ ಪ್ರಸಿದ್ಧಿಯನ್ನು ಪಡೆದ ದೇಶ “ಒಮಾನ್” (Oman). ಇದು ಭೌಗೋಳಿಕವಾಗಿ ಸೌದಿ ಅರೇಬಿಯಾದ ನಂತರ ಎರಡನೆಯ ದೊಡ್ಡ ರಾಷ್ಟ್ರ. ಇದರ ರಾಜಧಾನಿ ಮಸ್ಕತ್. ಎತ್ತರವಾದ ಗುಡ್ಡ ಬೆಟ್ಟಗಳ ತಪ್ಪಲಿನಲ್ಲಿ ಅರಬ್ಬಿ ಸಮುದ್ರ ತೀರದಲ್ಲಿರುವ ನಗರ. ರಸ್ತೆಗಳ ಎಡಬಲಗಳಲ್ಲಿ ಸಾಲಾಗಿ ಬೆಳೆಸಿದ ಖರ್ಜೂರ ಮತ್ತು ಬೇವಿನ ಮರಗಳನ್ನು ಬಿಟ್ಟರೆ ಸುತ್ತಲೂ ಕಣ್ಣು ಹಾಯಿಸಿದಾಗ ಕಂಡುಬರುವ ದೃಶ್ಯ ಬೋಳು ಬೋಳಾದ ಗುಡ್ಡಬೆಟ್ಟಗಳು. ಅವುಗಳ ಮೇಲೆ ಹೆಸರಿಗೆ ಒಂದು ಗಿಡಮರವೂ ಇಲ್ಲ. ಹತ್ತಿರದಿಂದ ನೋಡಿದರೆ ಅಲ್ಲೊಂದು ಇಲ್ಲೊಂದು ಕುರುಚಲು ಗಿಡಗಳು ಮಾತ್ರ ಕಾಣಸಿಗುತ್ತವೆ. ಗುಡ್ಡಬೆಟ್ಟಗಳ ಮೇಲೆ ಬಂಡೆಗಳೂ ಇಲ್ಲ. ನೀರೂ ಇಲ್ಲ. ಕಾಡೂ ಇಲ್ಲ. ಕಾಡೇ ಇಲ್ಲವೆಂದ ಮೇಲೆ ಕಾಡುಮೃಗಗಳಾಗಲೀ, ವನ್ಯಜೀವಿಗಳಾಗಲೀ ಇರಲು ಹೇಗೆ ಸಾಧ್ಯ? ಬೆಟ್ಟಗಳ ಮೇಲೆ ಅನೇಕ ಮನೆಗಳ ನಿರ್ಮಾಣ ನಿರಂತರವಾಗಿ ಸಾಗಿದೆ. ಹೀಗಾಗಿ “ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದೊಡೆ ಎಂತಯ್ಯಾ?...” ಎಂದು ವೈರಾಗ್ಯನಿಧಿ ಅಕ್ಕಮಹಾದೇವಿಯು ಕೇಳುವ ಪ್ರಶ್ನೆ ಇಲ್ಲಿಯ ಜನರಿಗೆ ಅನ್ವಯಿಸುವುದಿಲ್ಲ. ಆದರೆ “ಸಮುದ್ರದ ತಡಿಯಲೊಂದು ಮನೆಯ ಮಾಡಿ ನೆರೆತೊರೆಗಳಿಗಂಜಿದೊಡೆ ಎಂತಯ್ಯಾ?” ಎನ್ನುವ ಅಕ್ಕನ ಪ್ರಶ್ನೆಗೆ ಅನುಗುಣವಾಗಿ ಸಮುದ್ರ ತೀರದಲ್ಲಿರುವ ಮನೆಗಳಿಗೆ ಚಂಡಮಾರುತಗಳು ಅಪ್ಪಳಿಸಿ ಅನಾಹುತ ಉಂಟುಮಾಡಿವೆ.

ಈ ದೇಶದ ಹಿಂದಿನ ರಾಜನಾದ ಸುಲ್ತಾನ್ ಖಬೂಸ್ ಬಿನ್ ಸೈಯದ್ 1970 ರಲ್ಲಿ ಅಧಿಕಾರಕ್ಕೆ ಬಂದ ಮೇಲೆ ಆರೋಗ್ಯ, ಶಿಕ್ಷಣ, ಆರ್ಥಿಕ ಮತ್ತು ಅನೇಕ ಆಡಳಿತ ಸುಧಾರಣೆಗಳನ್ನು ಜಾರಿಗೆ ತಂದರು. ಒಮಾನ್ ದೇಶಕ್ಕೂ ಮತ್ತು ಭಾರತಕ್ಕೂ ವಾಣಿಜ್ಯೋದ್ಯಮದ ನಂಟು ನೂರಾರು ವರ್ಷಗಳಿಂದ ಇದೆ. 50 ವರ್ಷಗಳ ಕಾಲ ಆಳ್ವಿಕೆ ನಡೆಸಿದ ಸುಲ್ತಾನ್ ಖಬೂಸ್ ರವರನ್ನು ಅವರ ತಂದೆ ನಮ್ಮ ದೇಶದ ಪೂನಾ ನಗರದಲ್ಲಿ ಓದಲು ಕಳುಹಿಸಿದ್ದರು. ಆಗ ಅವರಿಗೆ ಶಂಕರ್ ದಯಾಲ್ ಶರ್ಮಾರವರು ಅಧ್ಯಾಪಕರಾಗಿದ್ದರಂತೆ. “ಇನ್ನಿತರ ಅರಬ್ ದೇಶಗಳ ಜನರು ಒಂಟೆಗಳನ್ನು ಹತ್ತಿಕೊಂಡು ಪಶ್ಚಿಮದ ಕಡೆ ಮರುಭೂಮಿಗೆ ಹೋದರೆ, ಒಮಾನಿಗಳು ದೋಣಿಗಳನ್ನು ಹತ್ತಿ ಭಾರತದ ಕಡೆ ಹೋಗುತ್ತಾರೆ!” ಎಂದು ಸುಲ್ತಾನ್ ಖಬೂಸ್ ಭಾರತದ ಬಗ್ಗೆ ಅಭಿಮಾನದಿಂದ ಹೇಳುತ್ತಿದ್ದರಂತೆ. ಮುಂದೆ 1996 ರಲ್ಲಿ ಶಂಕರ್ ದಯಾಲ್ ಶರ್ಮಾರವರು ಭಾರತದ ರಾಷ್ಟ್ರಪತಿಗಳಾಗಿ ಮಸ್ಕತ್ ಗೆ ಬಂದಾಗ ಅವರು ಸ್ವತಃ ವಿಮಾನ ನಿಲ್ದಾಣಕ್ಕೆ ಹೋಗಿ ಬರಮಾಡಿಕೊಂಡರಂತೆ. 

“ನಾನು ಭಾರತದ ರಾಷ್ಟ್ರಪತಿಗಳಾದ ಶಂಕರ್ ದಯಾಲ್ ಶರ್ಮಾರವರನ್ನು ಅವರ ನೆಚ್ಚಿನ ವಿದ್ಯಾರ್ಥಿಯಾಗಿ ಬರಮಾಡಿಕೊಳ್ಳುತ್ತಿದ್ದೇನೆ; ಒಮಾನ್ ದೇಶದ ಸುಲ್ತಾನನಾಗಿ ಅಲ್ಲ!” ಎಂದು ಭಾವುಕರಾಗಿ ನುಡಿದರಂತೆ. 

ಜಗತ್ತಿನಲ್ಲಿ ಅತ್ಯಂತ ಶಾಂತಿಪ್ರಿಯವಾದ ರಾಷ್ಟ್ರಗಳಲ್ಲಿ ಒಂದಾದ ಒಮಾನ್ ದೇಶದ ಒಟ್ಟು ಜನಸಂಖ್ಯೆ ಸುಮಾರು 47ಲಕ್ಷ. ಇದರಲ್ಲಿ ಶೇಕಡ 88.9 ಜನರು ಮುಸ್ಲಿಮರು. ಇತರ ಧರ್ಮೀಯರ ಪೈಕಿ ಶೇಕಡ 5.5 ಹಿಂದೂಗಳು. ಶೇಕಡ 3.6 ಜನರು ಕ್ರೈಸ್ತರು. ಬಹುಸಂಖ್ಯಾತರು ಮುಸ್ಲಿಮರಾದರೂ ಯಾವುದೇ ಮತೀಯ ಘರ್ಷಣೆ ಇಲ್ಲಿ ಇರುವುದಿಲ್ಲ ಎಂಬುದು ಪ್ರಶಂಸನೀಯ. ಮುಸ್ಲಿಮರಾದಿಯಾಗಿ ಯಾರಿಗೂ ದಾರಿಬೀದಿಗಳಲ್ಲಿ ಮೆರವಣಿಗೆ ಉರವಣಿಗೆಗಳನ್ನು ಮಾಡಲು ಅವಕಾಶವಿರುವುದಿಲ್ಲ. ಆಯಾಯ ಧರ್ಮೀಯರು ತಮ್ಮ ತಮ್ಮ ಮನೆಗಳಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸಲು ಯಾವ ಬಾಧಕವೂ ಇಲ್ಲ. ಒಂದು ವಿಶೇಷವೆಂದರೆ ಹಳೆಯ ಮಸ್ಕತ್ ನಗರದಲ್ಲಿ “ಅಲ್ ఆలం ಅರಮನೆ”ಯ ಹತ್ತಿರ “ಮೋತೀಶ್ವರ್ ಮಂದಿರ್” ಎಂಬ ನೂರಾರು ವರ್ಷಗಳ ಪ್ರಾಚೀನ ಶಿವದೇವಾಲಯವಿದೆ. ಹಿಂದಿಯಲ್ಲಿ “ಮೋತಿ” ಎಂದರೆ ಮುತ್ತು. ಕ್ರಿ.ಶ. 1507 ರಿಂದಲೂ ಭಾರತ ಮತ್ತು ಈ ದೇಶದ ಮಧ್ಯೆ ಮುತ್ತು ರತ್ನಗಳ ವ್ಯಾಪಾರ ವ್ಯವಹಾರವಿದ್ದುದರಿಂದ ಈ ದೇವಾಲಯಕ್ಕೆ ಮೋತೀಶ್ವರ್ ಮಂದಿರ್ ಎಂಬ ಹೆಸರು ಬಂದಂತಿದೆ. ಇದರಲ್ಲಿ ಮಹಾಶಿವರಾತ್ರಿ, ರಾಮನವಮಿ, ಗಣೇಶ ಚತುರ್ಥಿ ಇತ್ಯಾದಿ ಅನೇಕ ಹಿಂದೂ ಹಬ್ಬಗಳನ್ನು ಆಚರಿಸಲಾಗುತ್ತಿದೆ. ಈ ಶಿವದೇವಾಲಯದ ಸಮೀಪದಲ್ಲಿಯೇ ಕೃಷ್ಣದೇವಾಲಯವನ್ನು ಇಲ್ಲಿ ನೆಲೆಸಿರುವ ಗುಜರಾತಿಗಳು ಇತ್ತೀಚೆಗೆ 1987 ರಲ್ಲಿ ನಿರ್ಮಾಣ ಮಾಡಿರುತ್ತಾರೆ. ಶ್ರೀಕೃಷ್ಣನ ದೇವಾಲಯ ಇದ್ದಲೆಲ್ಲಾ ಶಿವನ ದೇವಾಲಯವಿರುವುದು ವಾಡಿಕೆ. ಉದಾಹರಣೆಗೆ ಬೃಂದಾವನದಲ್ಲಿ “ಗೋಪೀಶ್ವರ್ ಮಹಾದೇವ್”, ಮಥುರಾದಲ್ಲಿ “ಭೂತೇಶ್ವರ ಮಹಾದೇವ್, ಗೋವರ್ಧನದಲ್ಲಿ “ಚಕ್ರೇಶ್ವರ ಮಹಾದೇವ್”, ನಂದಗಾಂವ್ ನಲ್ಲಿ “ನಂದೀಶ್ವರ ಮಹಾದೇವ್” ಇತ್ಯಾದಿ. ಹಾಗೆಯೇ ಮಸ್ಕತ್ ನಲ್ಲಿ ನಿರ್ಮಾಣವಾದ ಪ್ರಾಚೀನ ಶಿವದೇವಾಲಯದ ಗರ್ಭಗುಡಿಯಲ್ಲಿರುವ ದೇವರ ಹೆಸರು “ಮೋತೀಶ್ವರ್ ಮಹಾದೇವ್”!

ಇಲ್ಲಿ ಮಳೆ ವರ್ಷಕ್ಕೆ ನಾಲ್ಕು ಇಂಚು ಬಂದರೆ ಹೆಚ್ಚಿನ ಮಾತು. ಆದಕಾರಣ ಮಸ್ಕತ್ ನಗರದ ರಸ್ತೆಗಳಲ್ಲಿ ಡ್ರೈನೇಜ್ ಗಳನ್ನು ನಿರ್ಮಾಣ ಮಾಡಿಲ್ಲ. ಬೆಂಗಳೂರಿನಲ್ಲಿ ನೀರಿನ ಅಭಾವ ಉಂಟಾಗಿ ಮಹಿಳೆಯರು ಕೊಡ ಹಿಡಿದು ಬೀದಿಗೆ ಬರುವಂತಾದ ಕೆಟ್ಟ ಪರಿಸ್ಥಿತಿ ಇಲ್ಲಿಯ ಮಹಿಳೆಯರಿಗೆ ಬಂದಿಲ್ಲ. ಸಮುದ್ರದ ನೀರನ್ನು ಪರಿಷ್ಕರಿಸಿ ಯಥೇಚ್ಛವಾಗಿ ಮನೆ ಮನೆಗೂ ದೊರೆಯುವಂತೆ ಮಾಡಲಾಗಿದೆ. ವಿದ್ಯುಚ್ಛಕ್ತಿಯ ಕೊರತೆಯೂ ಇಲ್ಲ. ಇಲ್ಲಿ ನದಿಗಳಾಗಲೀ, ಕೆರೆಕಟ್ಟೆಗಳಾಗಲೀ ಇಲ್ಲ. ಹಳ್ಳಕೊಳ್ಳಗಳು ಮಾತ್ರ ಇವೆ. ಅವುಗಳನ್ನು “ವಾಡಿ” (Wadi) ಎಂದು ಕರೆಯುತ್ತಾರೆ. ಅಪರೂಪಕ್ಕೆ ಮಳೆ ಧಾರಾಕಾರವಾಗಿ ಸುರಿದಾಗ ಭೂಮಿಯಲ್ಲಿ ನೀರು ಇಂಗದೆ ಎತ್ತರದ ಗುಡ್ಡಬೆಟ್ಟಗಳ ಕಣಿವೆಗಳಿಂದ ರಭಸವಾಗಿ ಈ ವಾಡಿಗಳಲ್ಲಿ ಹರಿದು ಬಂದು ಇಲ್ಲಿ ದೊಡ್ಡ ಅನಾಹುತಗಳನ್ನು ಮಾಡಿರುವುದೂ ಉಂಟು. ಇಂತಹ 120 ವಾಡಿಗಳನ್ನು ಗುರುತಿಸಿ ರಸ್ತೆ ಬದಿಯಲ್ಲಿ ಎಚ್ಚರಿಕೆಯ ಸೂಚನಾ ಫಲಕಗಳನ್ನು ಹಾಕಿದ್ದರೂ ಜನರು ಉದಾಸೀನ ಮಾಡಿ ದೈತ್ಯಾಕಾರದ ಸುನಾಮಿ ಅಲೆಯಂತೆ ದಿಢೀರನೆ ಬಂದು ಅಪ್ಪಳಿಸಿ ಮೃತಪಟ್ಟಿರುವುದೂ ಉಂಟು. ಬೆಂಗಳೂರಿನಿಂದ ಹೊರಡುವ ಮುಂಚೆ ಇಂತಹ ಅನಾಹುತದಲ್ಲಿ 30 ಜನರು ಸತ್ತು ಹೋದ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿತ್ತು.

2012 ರಲ್ಲಿ ಇಲ್ಲಿಯ ಸರಕಾರ ಮಸ್ಕತ್ ನಿಂದ ಸುಮಾರು 90 ಕಿ.ಮೀ ದೂರದಲ್ಲಿರುವ 246 ಅಡಿ ಎತ್ತರದ 28 ಕಿ.ಮೀ ಸುತ್ತಳತೆಯ ಒಂದು ಡ್ಯಾಂ ಕಟ್ಟಿಸಿದೆ. ಇದು ನೀರಾವರಿ ಸೌಲಭ್ಯಕ್ಕಾಗಿ ಅಲ್ಲ: ದಿಢೀರನೆ ಕಣಿವೆ ಪ್ರದೇಶದಿಂದ ವಾಡಿಯಲ್ಲಿ ನೀರು ಹರಿದು ಬಂದಾಗ ಉಂಟಾಗುವ ಅನಾಹುತಗಳನ್ನು ತಪ್ಪಿಸಲು. ಎರಡು ದಿನಗಳ ಹಿಂದೆ ಮಸ್ಕತ್ ಗೆ ಆಗಮಿಸಿದ ದಿನವೇ ಇಲ್ಲಿಯ ದೊಡ್ಡ ಕಂಪನಿಯ ಉನ್ನತ ಅಧಿಕಾರಿಗಳಾದ ಶಿವಕುಮಾರ್ ಕೆಂಚನಗೌಡ್ರು ಮತ್ತು ರೇಣುಕಮೂರ್ತಿಯವರು ಈ ಡ್ಯಾಂ ತೋರಿಸಲು ನಮ್ಮನ್ನು ಕರೆದುಕೊಂಡು ಹೋದರು.

2022 ರಲ್ಲಿ ಮಹಾರಾಷ್ಟ್ರ ಮೂಲದ ಅವರ ಆತ್ಮೀಯ ಸ್ನೇಹಿತರಾದ 42 ವರ್ಷದ ಶಶಿಕಾಂತ ಮಹಾಮನೆ ದುಬೈನಲ್ಲಿ ನೆಲೆಸಿದ್ದು ತನ್ನ ಮಡದಿ ಮಕ್ಕಳೊಂದಿಗೆ ಮಸ್ಕತ್ ಗೆ ಪ್ರವಾಸ ಬಂದಿದ್ದರು. ಬೀಚ್ ನಲ್ಲಿ ಬೇರೊಂದು ವಾಡಿ ಸಮೀಪ ಫೋಟೋ ತೆಗೆಯಲು ಹೋದಾಗ ತನ್ನ 5 ವರ್ಷದ ಮಗ ಮತ್ತು 9 ವರ್ಷದ ಮಗಳೊಂದಿಗೆ ಕೊಚ್ಚಿ ಹೋದ ದಾರುಣ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ತೋರಿಸಿದರು. ದಂಡೆಯಲ್ಲಿ ನಿಂತು ಅಸಹಾಯಕಳಾಗಿ ಗೋಳಿಡುತ್ತಿದ್ದ ಅವರ ಸ್ನೇಹಿತರ ಪತ್ನಿ ಮತ್ತು ಹಿರಿಯ ಮಗಳ ಕಣ್ಣೀರ ಕೋಡಿ ಆ ವಾಡಿಯ ಪ್ರವಾಹವನ್ನು ಬಾನೆತ್ತರಕ್ಕೆ ಉಕ್ಕೇರಿಸಿತ್ತು!

ಆ ಕರುಣಾಜನಕ ದೃಶ್ಯವನ್ನು ಈ ಮುಂದಿನ ಲಿಂಕ್ ಒತ್ತಿ ನೋಡಬಹುದು:

https://youtube.com/shorts/hdDaTbtvsl4?si=cPle0jxoS7B2IRs3

ಅದನ್ನು ನೋಡಿ ನಮ್ಮ ನೆನಪಿಗೆ ಬಂದ ಬಸವಣ್ಣನವರ ವಚನ:

ನೀ ಹುಟ್ಟಿಸಿದಲ್ಲಿ ಹುಟ್ಟಿ, ನೀ ಕೊಂದಲ್ಲಿ ಸಾಯದೆ 
ಎನ್ನ ವಶವೇ ಅಯ್ಯಾ?
ನೀವಿರಿಸಿದಲ್ಲಿ ಇರದೆ ಎನ್ನ ವಶವೇ ಅಯ್ಯಾ? 
ಅಕಟಕಟಾ! “ಎನ್ನವನೆನ್ನವನೆ”ನ್ನಯ್ಯಾ 
ಕೂಡಲ ಸಂಗಮದೇವಯ್ಯಾ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ.16-5-2024.