ಒಮಾನ್ ದೇಶದ ಮಸ್ಕತ್ ನಗರದಲ್ಲಿ ನಡೆಯುತ್ತಿರುವ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ತರಳಬಾಳು ಜಗದ್ಗುರುಗಳವರು
ದಿನಾಂಕ: 17-5-2024
ಸ್ಥಳ : ಮಸ್ಕತ್, ಒಮಾನ್ ದೇಶ
ಬಸವಣ್ಣನವರ ವಚನಗಳು ಜೀವನಕ್ಕೆ ಸದಾ ಮಾರ್ಗದರ್ಶಿ : ರಾಯಭಾರಿ ಶ್ರೀ ಅಮಿತ್ ನಾರಂಗ್
----------------------------------------
ಶ್ರೀ ತರಳಬಾಳು ಜಗದ್ಗುರುಗಳವರ ವಚನ ಮೊಬೈಲ್ ಆಪ್ ಬಗ್ಗೆ ತುಂಬು ಪ್ರಶಂಸೆ ವ್ಯಕ್ತಪಡಿಸಿದ ಮಸ್ಕತ್ ರಾಯಭಾರಿ.
--------------------------------------
ಮಸ್ಕತ್ ನಗರದಲ್ಲಿ ಬಸವ ಶಿಲಾಮೂರ್ತಿ ಸ್ಥಾಪಿಸಲು ಶ್ರೀ ಜಗದ್ಗುರುಗಳವರ ಸಲಹೆ. ಮಠದಿಂದ ಪುತ್ಥಳಿಯ ನೀಡಿಕೆ.
---------------------------------------
ಶ್ರೀ ಜಗದ್ಗುರುಗಳವರಿಗೆ ಭಕ್ತಿ ಸ್ವಾಗತ ಸಮರ್ಪಿಸಿದ ಮಸ್ಕತ್ ಬಸವ ಬಳಗ
--------------------------------------
ಒಮಾನ್ ದೇಶದ ಮಸ್ಕತ್ ನಗರದಲ್ಲಿ ಇಂದು ಬಸವ ಬಳಗ ಮಸ್ಕತ್ ಸಂಘಟನೆಯಿಂದ ಆಯೋಜನೆಗೊಂಡಿರುವ ಬಸವ ಜಯಂತಿ ಕಾರ್ಯಕ್ರಮವನ್ನು ಶ್ರೀ ತರಳಬಾಳು ಜಗದ್ಗುರು ಶ್ರೀ ೧೧೦೮ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಮಸ್ಕತ್ ನಲ್ಲಿರುವ ಭಾರತದ ರಾಯಭಾರಿಗಳಾದ ಶ್ರೀ ಅಮಿತ್ ನಾರಂಗ್ ರವರು ಉದ್ಘಾಟಿಸಿ ಬಸವಣ್ಣನವರ ತತ್ವ ಆದರ್ಶಗಳು, ಮಾನವೀಯ ಮೌಲ್ಯಗಳು ಜೀವನಕ್ಕೆ ಮಾರ್ಗದರ್ಶಿ ಎಂದು ಅಭಿಪ್ರಾಯಪಟ್ಟರು.
ಶ್ರೀ ತರಳಬಾಳು ಮಠದಿಂದ ಹೊರ ತಂದಿರುವ ಬಸವಾದಿ ಶರಣರ ವಚನಗಳ ಮೊಬೈಲ್ ಆಪ್ ವೀಕ್ಷಿಸಿ ಸಭೆಯಲ್ಲಿ ಪ್ರಸ್ತಾಪಿಸಿ ತುಂಬಾ ಪ್ರಶಂಸೆಯ ಮಾತುಗಳನ್ನು ಹೇಳಿದರು. ತಮ್ಮ ಮೊಬೈಲ್ ನಲ್ಲಿ ಆಪ್ ಹಾಕಿಸಿಕೊಂಡು ವಚನಗಳು ಇಂಗ್ಲಿಷ್, ಹಿಂದಿ ಸೇರಿದಂತೆ ವಿವಿಧ ಭಾಷೆಗಳಿಗೆ ಅನುವಾದವಿಗಿರುವುದನ್ನು ನೋಡಿ ತುಂಬಾ ಖುಷಿ ಪಟ್ಟರು.
ಪರಮಪೂಜ್ಯ ಶ್ರೀ ಜಗದ್ಗುರುಗಳವರು ಆಶೀರ್ವಚನ ದಯಪಾಲಿಸಿ ಬಹಿರಂಗ ಶುದ್ಧಿಯಷ್ಟೇ ಅಂತರಂಗ ಶುದ್ಧಿಗೂ ಒತ್ತು ನೀಡಿದ ಮತ್ತು ಕಾಯಕವೇ ಕೈಲಾಸ ಎಂಬ ಮಹೋನ್ನತ ಆದರ್ಶವನ್ನು 12ನೇ ಶತಮಾನದಲ್ಲೇ ಇಡೀ ಜಗತ್ತಿಗೆ ನೀಡಿದ ವಿಶ್ವಗುರು ಬಸವೇಶ್ವರರು ಸಾಮಾಜಿಕ ಕ್ರಾಂತಿಯ ಹರಿಕಾರರು. 900 ವರ್ಷಗಳ ಹಿಂದೆ ಬಸವಾದಿ ಶರಣರು ವಚನಗಳ ಮೂಲಕ ಬಿತ್ತಿದ ಆದರ್ಶ ಸಮಾಜ ಪರಿಕಲ್ಪನೆ ಇಂದಿಗೂ ಪ್ರಸ್ತುತ. ಜಗತ್ತು ಇಂದು ಎದುರಿಸುತ್ತಿರುವ ಹೆಚ್ಚಿನ ಸಮಸ್ಯೆಗಳಿಗೆ ಶರಣರ ವಚನಗಳಲ್ಲಿ ಪರಿಹಾರವಿದೆ ಎಂದು ಅಭಿಪ್ರಾಯಪಟ್ಟರು
Women Empowerment ಬಗ್ಗೆ ಮಾತನಾಡುವಾಗ ಸಭಾಂಗಣಕ್ಕೆ ತಮ್ಮನ್ನು ಬಸವ ಬಳಗದ ಮಹಿಳೆಯರನೇಕರು ಕೈಯಲ್ಲಿ ಆರತಿ ಹಿಡಿದು ಭಕ್ತಿಯಿಂದ ಬರಮಾಡಿಕೊಂಡದ್ದನ್ನು ಪ್ರಸ್ತಾಪಿಸಿದ ಶ್ರೀ ಜಗದ್ಗುರುಗಳವರು "ನಮ್ಮ ಮಹಿಳೆಯರು ಮಂಗಳ ಕಾರ್ಯಗಳ ಸಂದರ್ಭದಲ್ಲಿ ಕೈಯಲ್ಲಿ ಆರತಿ ಹಿಡಿಯುವುವಂತೆ, ವಿಷಮ ಸನ್ನಿವೇಶಗಳಲ್ಲಿ ವೀರ ವನಿತೆ ಓಬವ್ವನಂತೆ ಕೈಯಲ್ಲಿ ಒನಕೆಯನ್ನೂ ಹಿಡಿಯಬಲ್ಲರು, ವೀರರಾಣಿ ಕಿತ್ತೂರು ಚೆನ್ನಮ್ಮನಂತೆ ಕೈಯಲ್ಲಿ ಖಡ್ಗವನ್ನೂ ಹಿಡಿಯಬಲ್ಲರು" ಎಂದು ನುಡಿದಾಗ ಸಭೆಯಲ್ಲಿ ಕರತಾಡನ ಮೊಳಗಿತು.
ಇಂಗ್ಲೆಂಡ್ ದೇಶದ ಲ್ಯಾಂಬೆತ್ ಬಳಿ ಬಸವ ಪುತ್ಥಳಿ ಸ್ಥಾಪಿತವಾಗಿರುವಂತೆ ಮಸ್ಕತ್ ನಗರದಲ್ಲಿ ಬಸವ ಶಿಲಾಮೂರ್ತಿಯನ್ನು ಸ್ಥಾಪಿಸುವಂತೆ ಬಸವ ಬಳಗಕ್ಕೆ ಶ್ರೀ ಜಗದ್ಗುರುಗಳವರು ಸಲಹೆ ನೀಡಿದರು. ಬಸವ ಶಿಲಾಮೂರ್ತಿಯನ್ನು ಮಠದ ವತಿಯಿಂದ ನೀಡುವುದಾಗಿ ಘೋಷಿಸಿದ ಪೂಜ್ಯರು ಪ್ರತಿಮೆ ಸ್ಥಾಪನೆಗೆ ನಿಯಮಾನುಸಾರ ಮುಂದುವರೆಯುವಂತೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರುಗಳವರು ಬಸವಾದಿ ಶರಣರ 22 ಸಾವಿರಕ್ಕೂ ಹೆಚ್ಚು ವಚನಗಳ ಮೊಬೈಲ್ ಆಪ್ ಪ್ರಾತ್ಯಕ್ಷಿಕೆ ನೀಡಿದರು.
ಕಾರ್ಯಕ್ರಮವು ಮಸ್ಕತ್ ನಲ್ಲಿರುವ ಕೃಷ್ಣ ದೇವಾಲಯದ ಸಭಾಂಗಣದಲ್ಲಿ ಆಯೋಜನೆಗೊಂಡಿತ್ತು. ಬಸವ ಬಳಗದ ಪದಾಧಿಕಾರಿಗಳು, ಬಸವಾಭಿಮಾನಿಗಳು ಕಾರ್ಯಕ್ರಮದಲ್ಲಿ ಸಾಕ್ಷಿಯಾದರು.