ಅರಬ್ ರಾಷ್ಟ್ರಗಳಲ್ಲಿ ಮಂದಿರ ಮಸೀದಿಗಳು

  •  
  •  
  •  
  •  
  •    Views  

ಳೆದ ಎರಡು ವಾರಗಳಿಂದ ಬಸವ ಜಯಂತಿ ನಿಮಿತ್ತ ಅರಬ್ ರಾಷ್ಟ್ರಗಳಲ್ಲಿ ಪ್ರವಾಸ ಕೈಗೊಂಡಿದ್ದು “ಹವಳ ಮುತ್ತುಗಳ ನಾಡೆನಿಸಿದ” ಒಮಾನ್ ದೇಶದ ರಾಜಧಾನಿ ಮಸ್ಕತ್ ನಿಂದ ಬರೆದ ಹಿಂದಿನ ಅಂಕಣದಿಂದ ಓದುಗರಿಗೆ ತಿಳಿದೇ ಇದೆ. ಕಾರ್ಯಕ್ರಮದ ನಂತರ ಮಸ್ಕತ್ ಬಸವ ಬಳಗದ ಸದಸ್ಯರು ಕೆಲವರು ತುಂಬಾ ಶ್ರದ್ಧಾಭಕ್ತಿಯಿಂದ ಸಕುಟುಂಬ ಪರಿವಾರ ದುಬೈ ಗಡಿ ಪ್ರದೇಶದವರೆಗೂ ಬಂದು ನಮ್ಮನ್ನು ಬೀಳ್ಕೊಟ್ಟರು. ವ್ಯಾಪಾರೋದ್ಯಮಗಳಲ್ಲಿ ನಿಕಟ ಸಂಪರ್ಕ ಹೊಂದಿದ ಮಸ್ಕತ್ ಮತ್ತು ದುಬೈ ನಗರಗಳು ಭಾರತದಿಂದ ಬಹಳ ದೂರ ಏನೂ ಇಲ್ಲ. ವಾಯುಮಾರ್ಗವಾಗಿ ಅರಬ್ಬಿ ಸಮುದ್ರವನ್ನು ದಾಟಿ ಈ ನಗರಗಳನ್ನು ತಲುಪಲು ಹೆಚ್ಚು ಕಡಿಮೆ ಬೆಂಗಳೂರಿನಿಂದ ದೆಹಲಿಗೆ ಹೋದಷ್ಟೇ ಸಮಯವನ್ನು ತೆಗೆದುಕೊಳ್ಳುತ್ತದೆ. ಎರಡೂ ನಗರಗಳಲ್ಲಿ ಬಸವತತ್ವಾಭಿಮಾನಿಗಳು ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಎರಡೂ ದೇಶಗಳಲ್ಲಿರುವ ಭಾರತದ ರಾಯಭಾರಿಗಳು ಮತ್ತು ಭಾರತದಿಂದ ಬಂದು ಇಲ್ಲಿ ನೆಲೆಸಿದ ಎಲ್ಲ ಸಮುದಾಯದವರೂ ಭಾಗವಹಿಸಿದ್ದು ಒಂದು ವಿಶೇಷ. ದುಬೈನಲ್ಲಿ ಈ ಹಿಂದೆ 2012 ರಲ್ಲಿ ಏರ್ಪಡಿಸಿದ್ದ ಬಸವ ಜಯಂತಿಯಲ್ಲಿ ನಾವು ಭಾಗವಹಿಸಿದ್ದು ಇದು ಎರಡನೆಯ ಬಾರಿ.

ಇಲ್ಲಿ ನೆಲೆಸಿರುವ ಭಾರತೀಯರನ್ನು ನೋಡಿದಾಗ ನಮಗೆ ನೆನಪಾಗಿದ್ದು ಪ್ರಸಿದ್ಧ ಭೌತವಿಜ್ಞಾನಿಯಾದ ಐಸಾಕ್ ನ್ಯೂಟನ್. ಮರದಿಂದ ಸೇಬಿನ ಹಣ್ಣು ಕೆಳಗೆ ಬಿದ್ದುದನ್ನು ನೋಡಿ ಅವನು ಕಂಡುಹಿಡಿದದ್ದು ಭೂಮಿಯ “ಗುರುತ್ವಾಕರ್ಷಣೆ”. ಇದು ಭೌತಿಕ ಜಗತ್ತಿನ ಸಿದ್ಧಾಂತವಾದರೆ ಭಾವನಾತ್ಮಕ ಜಗತ್ತಿನಲ್ಲಿ ಕಾಣುವುದು ಇಲ್ಲಿನ ಭಾರತೀಯರ ಹೃದಯದಲ್ಲಿ ಸುಪ್ತವಾಗಿರುವ “ಭರತಭೂಮಿಯ ಆಕರ್ಷಣೆ”! ಇದನ್ನು ಗಣಿತದ ಲೆಕ್ಕಾಚಾರದಿಂದ ಅಳೆಯಲು ಯಾವ ವಿಜ್ಞಾನಿಯಿಂದಲೂ ಸಾಧ್ಯವಿಲ್ಲ. ನಮ್ಮ ಅನುಭವದಲ್ಲಿ ಅಮೇರಿಕಾ, ಇಂಗ್ಲೆಂಡ್ ಮೊದಲಾದ ಪಾಶ್ಚಾತ್ಯ ದೇಶಗಳಿಗೆ ವಲಸೆ ಹೋದ ಭಾರತದ ಐಟಿ-ಬಿಟಿ ಯುವ ಪ್ರತಿಭೆಗಳು ಭಾರತದಲ್ಲಿ ಬೆಳೆದು ಖಾಯಂ ಆಗಿ ರಫ್ತಾದ ಅಪರೂಪದ ಹಣ್ಣುಗಳು! ಅವು ಮರಳಿ ಬರಲು ಸಾಧ್ಯವಿಲ್ಲ. ಆದರೆ ಮಸ್ಕತ್ ಮತ್ತು ದುಬೈ ಮೊದಲಾದ ಮಧ್ಯಪ್ರಾಚ್ಯ (Middle East) ದೇಶಗಳಲ್ಲಿ ನೆಲೆಸಿರುವ ಯುವ ಪ್ರತಿಭೆಗಳು ಒಂದು ವಯೋಮಾನದವರೆಗೆ ಬೆಳೆದು ಮಾಗಿ ಮರಳಿ ಭಾರತಕ್ಕೆ ಬರುವ ಪರಿಪಕ್ವ ಹಣ್ಣುಗಳು! ಏಕೆಂದರೆ ಅಮೇರಿಕೆಯಲ್ಲಿರುವಂತೆ ಅರಬ್ ರಾಷ್ಟ್ರಗಳಲ್ಲಿ ಖಾಯಂ ಆಗಿ ನೆಲೆಸಿ “ಪೌರತ್ವ”ವನ್ನು ಪಡೆಯಲು ಅವಕಾಶವಿಲ್ಲ. ಇಲ್ಲಿಯೇ ಹುಟ್ಟಿ ಬೆಳೆದ ಅವರ ಮಕ್ಕಳಿಗೂ ಈ ದೇಶಗಳ ಪೌರತ್ವ ಸಿಗುವುದಿಲ್ಲ.

ದುಬೈ, ಅಬುಧಾಬಿ, ಷಾರ್ಜಾ ಮೊದಲಾದ ಏಳು ಸಂಸ್ಥಾನಗಳ (Emirates) ಒಕ್ಕೂಟವೇ United Arab Emirates (UAE). ಈ ಒಕ್ಕೂಟವು ಒಂದು ದೇಶವಾಗಿ ರೂಪುಗೊಂಡಿದ್ದು 1971-72 ರಲ್ಲಿ. ಇಲ್ಲಿರುವುದು ಪ್ರಜಾಪ್ರಭುತ್ವವಲ್ಲ, ರಾಜಪ್ರಭುತ್ವ. ಪ್ರತಿಯೊಂದು ಸಂಸ್ಥಾನದ ರಾಜನನ್ನು ಇಲ್ಲಿ ಶೇಖ್ ಎಂದು ಕರೆಯುತ್ತಾರೆ. ಈ “ಸಂಯುಕ್ತ ಅರಬ್ ಸಂಸ್ಥಾನ”ವೆಂಬ ದೇಶದ ಖಾಯಂ ಅಧ್ಯಕ್ಷರು ಹೆಚ್ಚಿನ ಭೂವಿಸ್ತೀರ್ಣವುಳ್ಳ ಅಬುಧಾಬಿಯ ಶೇಖ್. ಉಪಾಧ್ಯಕ್ಷರು ದುಬೈ ಪ್ರಾಂತ್ಯದ ಶೇಖ್. ಈ ಒಕ್ಕೂಟಕ್ಕೆ ತನ್ನದೇ ಆದ ಸಂವಿಧಾನವಿದೆ. ಈ ದೇಶದ ಒಟ್ಟು ಜನಸಂಖ್ಯೆ ಸುಮಾರು 95 ಲಕ್ಷ. ಇದರಲ್ಲಿ ಭಾರತೀಯರು ಸುಮಾರು 40 ಲಕ್ಷ. ಹೆಚ್ಚಿನ ಜನಸಂಖ್ಯೆ ಹೊಂದಿರುವ ಭಾರತೀಯರಿಗೆ ಈ ದೇಶದಲ್ಲಿ ತುಂಬಾ ಗೌರವವಿದೆ. ಕಳೆದ ಎರಡು ವಾರಗಳಿಂದ ಬಸವ ಜಯಂತಿ ನಿಮಿತ್ತ ಅರಬ್ ರಾಷ್ಟ್ರಗಳಲ್ಲಿ ಕೈಗೊಂಡ ಈ ಪ್ರವಾಸದಲ್ಲಿ ನಮಗೆ ಕಾಡಿದ ಪ್ರಶ್ನೆ: ಶತಮಾನಗಳಿಂದ ಭಾರತದಲ್ಲಿ ನಡೆದು ಬಂದಿರುವ ಮಂದಿರ ಮಸೀದಿಗಳ ವಿಧ್ವಂಸಕ ಕೃತ್ಯಗಳಂತೆ ಇಲ್ಲಿಯೂ ಹಿಂದೂ-ಮುಸ್ಲಿಂ ಮತೀಯ ಘರ್ಷಣೆಗಳು ಆಗಿವೆಯೇ? “ಇಲ್ಲ” ಎಂದು ಸ್ಥಳೀಯ ಶಿಷ್ಯರಿಂದ ತಿಳಿದು ಬಂದ ಸಂಗತಿ ನಮ್ಮನ್ನು ಆಶ್ಚರ್ಯಚಕಿತರನ್ನಾಗಿ ಮಾಡಿತು. ಸಂಯುಕ್ತ ಅರಬ್ ಸಂಸ್ಥಾನವಾದ ಈ ದೇಶದ ಸಂವಿಧಾನದಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿರುವುದು ಒಂದು ಪ್ರಮುಖವಾದ ಅಂಶ. ಇದೊಂದು ಮುಸ್ಲಿಂ ರಾಷ್ಟ್ರವಾದರೂ ಇಲ್ಲಿಯ ಸರಕಾರವು ಎಲ್ಲ ಧರ್ಮೀಯರನ್ನೂ ಸಮಾನವಾಗಿ ಕಾಣುತ್ತದೆ. ಬೇರೆ ದೇಶಗಳಿಂದ ಬಂದು ಇಲ್ಲಿ ನೆಲೆಸಿರುವವರಿಗೆ ತಮ್ಮ ಧರ್ಮದ ಪ್ರಕಾರ ಪೂಜೆ ಪ್ರಾರ್ಥನೆ ಮಾಡಲು ಮುಕ್ತ ಅವಕಾಶ ಕಲ್ಪಿಸಿಕೊಟ್ಟಿದೆ. ಹಿಂದೂಗಳಿಗಾಗಲೀ ಮುಸ್ಲಿಮರಿಗಾಗಲೀ ದಾರಿ ಬೀದಿಗಳಲ್ಲಿ ಮೆರವಣಿಗೆ ಉರವಣಿಗೆಗಳನ್ನು ಮಾಡಲು ಮಾತ್ರ ಅವಕಾಶವಿಲ್ಲವೆಂದು ಈ ಹಿಂದೆಯೇ ಬರೆಯಲಾಗಿದೆ.

ದುಬೈನ ಹಳೆಯ ನಗರ ಪ್ರದೇಶದಲ್ಲಿ ಮಂದಿರಗಳನ್ನು ನಿರ್ಮಿಸಿಕೊಳ್ಳಲು ಇಲ್ಲಿಯ ಶೇಖ್ ರಶೀದ್ ಬಿನ್ ಸಯೀದ್ ರವರು 1958 ರಲ್ಲಿ ಅವಕಾಶ ಮಾಡಿಕೊಟ್ಟಿರುವುದನ್ನು ಕೇಳಿ ಅಚ್ಚರಿ ಮೂಡಿತು. ಇತ್ತೀಚೆಗೆ 2022 ರಲ್ಲಿ ದುಬೈ ನಗರದ ಹೊಸ ಬಡಾವಣೆಯಲ್ಲಿ ಒಂದು ಸುಂದರವಾದ ಶಿವನ ಮಂದಿರ ನಿರ್ಮಾಣಗೊಂಡಿರುವುದನ್ನು ಶಿಷ್ಯರು ತೋರಿಸಿದರು. ಇದನ್ನು ಕರ್ನಾಟಕ ಮೂಲದವರೊಬ್ಬರು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಇಲ್ಲಿಗೆ ಹೋದಾಗ ಕನ್ನಡದಲ್ಲಿಯೇ ಚೆನ್ನಾಗಿ ವಿವರಿಸಿದರು. ಅದರ ಪಕ್ಕದಲ್ಲಿಯೇ ಒಂದು ಗುರುದ್ವಾರವಿದ್ದು ಅದರಲ್ಲಿ ಸಿಖ್ ಧರ್ಮೀಯರು ಬೆಳಗಿನಿಂದ ರಾತ್ರಿವರೆಗೆ "ಲಂಗರ್” (ದಾಸೋಹ) ಏರ್ಪಡಿಸಿರುತ್ತಾರೆ. ಶಿವನ ಗುಡಿಗೆ ಬಂದ ಹಿಂದೂಗಳು ಸಹ ಗುರುದ್ವಾರಕ್ಕೆ ಬಂದು ಉಚಿತವಾಗಿ ಭೋಜನ ಮಾಡಲು ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ.

ಶಿವನ ಮಂದಿರ ಮತ್ತು ಗುರುದ್ವಾರದ ಎದುರಿಗೆ ಏಳು ವಿಭಿನ್ನ ಪಂಥಗಳ ಚರ್ಚುಗಳೂ ಇವೆ. ಹತ್ತಿರದಲ್ಲಿಯೇ ಒಂದು ಮಸೀದಿಯೂ ಇದೆ. ಒಂದೇ ತಾಣದಲ್ಲಿ ಎಲ್ಲ ಧರ್ಮೀಯರೂ ಅವರವರ ಧರ್ಮದ ರೀತ್ಯಾ ಪೂಜೆ ಪ್ರಾರ್ಥನೆ ಮಾಡುತ್ತಾ ಬಂದಿದ್ದು ಇದುವರೆಗೂ ಯಾವ ಮತೀಯ ಘರ್ಷಣೆಯೂ ಆಗಿಲ್ಲ. 

ಅಬುಧಾಬಿಯ ಶೇಖ್ ಮೊಹಮ್ಮದ್ ಬಿನ್ ಜಯೀದ್ ರವರು 2015 ರಲ್ಲಿ ಸ್ವಾಮಿ ನಾರಾಯಣ ಪಂಥದವರಿಗೆ ವಿಶಾಲವಾದ 27 ಎಕರೆ ನಿವೇಶನವನ್ನು ಉಚಿತವಾಗಿ ಮುಂಜೂರು ಮಾಡಿಕೊಟ್ಟಿರುತ್ತಾರೆ. ಇದರಲ್ಲಿ 700 ಕೋಟಿ ರೂ. ವೆಚ್ಚದ ಸುಂದರವಾದ ಹಿಂದೂ ದೇವಾಲಯವನ್ನು ರಾಜಸ್ಥಾನದ ಮಾರ್ಬಲ್ ಕಲ್ಲುಗಳಲ್ಲಿ ನಿರ್ಮಾಣ ಮಾಡಲಾಗಿದೆ. ಇದರ ಶಿಲ್ಪಕಲೆ ಅತ್ಯದ್ಭುತವಾಗಿದೆ. ವಿಶಾಲವಾದ ಗೋಪುರದ ಕೆಳಭಾಗದ ನೆಲಹಾಸಿನಲ್ಲಿ (floor) ಪ್ರಪಂಚದ ಎಲ್ಲ ಪ್ರಮುಖ ದೇಶಗಳ ಮಣ್ಣನ್ನು ಸಂಗ್ರಹಿಸಿಟ್ಟು ಆ ಮಣ್ಣು ಕಾಣುವಂತೆ ಅವುಗಳ ಮೇಲೆ ಗಾಜಿನ ಹೊದಿಕೆಯನ್ನು ಅಳವಡಿಸಲಾಗಿದೆ. ಸುತ್ತಲೂ ಇರುವ ಕಂಭಗಳ ಕೆಳಭಾಗದಲ್ಲಿ (base) ಗಂಗಾ, ಯಮುನಾ, ನೈಲ್, ಥೇಮ್ಸ್, ವೋಲ್ಗಾ, ಡೊನಾವ್ ಇತ್ಯಾದಿ ಪ್ರಪಂಚದ ಎಲ್ಲಾ ಪ್ರಮುಖ ನದಿಗಳ ಭೌಗೋಲಿಕ ರೇಖಾಚಿತ್ರದ ಆಕೃತಿಯನ್ನು ಕೆತ್ತಲಾಗಿದೆ. ಅವುಗಳಲ್ಲಿ ಕಾವೇರಿ ನದಿಯೂ ಒಂದು.

ಅದನ್ನು ಗಂಗೇಚ ಯಮುನೇ ಚೈವ ಗೋದಾವರಿ ಸರಸ್ವತಿ| ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸಂನ್ನಿಧಿಂ ಕುರು| ಎಂದು ಮದುವೆ ಮೊದಲಾದ ಮಂಗಲ ಮುಹೂರ್ತಗಳಲ್ಲಿ ಪುರೋಹಿತರು ಹೇಳುವ ಕಲಶ ಸ್ಥಾಪನೆಯ ಸಂಸ್ಕೃತ ಮಂತ್ರ ಸ್ಮರಣೆಗೆ ಬಂದಿತು. “ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆ, ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು” ಎಂಬ ರಾಷ್ಟ್ರಕವಿ ಕುವೆಂಪುರವರ ಕವಿತೆಯೂ ನೆನಪಾಯಿತು. ಇತ್ತೀಚೆಗೆ ಭಾರತದ ಪ್ರಧಾನಿ ಮೋದಿಯವರು ಉದ್ಘಾಟನೆ ಮಾಡಿದ ಈ ದೇವಾಲಯವನ್ನು ತೋರಿಸಲು ದುಬೈ ಶಿಷ್ಯರು ನಮ್ಮನ್ನು ಕರೆದೊಯ್ದಾಗ ದೇವಾಲಯದಲ್ಲಿದ್ದ ಯುವ ಸಾಧುಗಳಾದ ಅನಂತನಯನಾನಂದದಾಸ್ ರವರು ತುಂಬಾ ಗೌರವಾದರಗಳಿಂದ ನಮ್ಮನ್ನು ಬರಮಾಡಿಕೊಂಡು ಟಿ.ವಿ ಸಂದರ್ಶನವನ್ನೂ ನಡೆಸಿದರು. ಲೋಕಾಭಿರಾಮವಾಗಿ ಮಾತನಾಡುವಾಗ ಬಹಳ ವರ್ಷಗಳ ಹಿಂದೆ ನಡೆದ ಒಂದು ಘಟನೆಯನ್ನು ಅವರಿಗೆ ವಿವರಿಸಿದೆವು. 

ಬೃಂದಾವನದಲ್ಲಿರುವ ಚೈತನ್ಯ ಸಂಪ್ರದಾಯದ ಶ್ರೀವತ್ಸ ಗೋಸ್ವಾಮಿಯವರ ಆಶ್ರಮದಲ್ಲಿ ಗುಜರಾತ್ ಮೂಲದ ಸ್ವಾಮಿ ನಾರಾಯಣ ಪಂಥದ ಭದ್ರೇಶ ಸ್ವಾಮೀಜಿಯವರು ಆಗಮಿಸಿದ್ದರು. ಗೋಸ್ವಾಮಿಯವರು ನಾವು ಕರ್ನಾಟಕದವರೆಂದು ನಮ್ಮ ಪರಿಚಯವನ್ನು ಅವರಿಗೆ ಮಾಡಿಕೊಟ್ಟರು.  ಆಗ ಭದ್ರೇಶ ಸ್ವಾಮೀಜಿಯವರು “ಕರ್ನಾಟಕ್ ಮೇ ಏಕ್ ಸ್ವಾಮೀಜಿ ಹೈಂ ಜೋ ಮಹರ್ಷಿ ಪಾಣಿನೀ ಕೇ ಅಷ್ಟಾಧ್ಯಾಯೀ ಸೂತ್ರೋಂ ಪರ್ ಗಣಕಯಂತ್ರ ಮೇಂ ಏಕ್ ಅದ್ಭುತ್ ತಂತ್ರಾಂಶ್ ಬನಾಯೇ ಹೈಂ, ಉನ್ ಕೋ ಆಪ್ ಜಾನತೇ ಹೈಂ?” (ಕರ್ನಾಟಕದಲ್ಲಿರುವ ಒಬ್ಬ ಸ್ವಾಮೀಜಿಯವರು ಮಹರ್ಷಿ ಪಾಣಿನಿಯ ಅಷ್ಟಾಧ್ಯಾಯೀ ಸೂತ್ರಗಳ ಮೇಲೆ ಒಂದು ಅದ್ಭುತ ತಂತ್ರಾಂಶವನ್ನು ರೂಪಿಸಿದ್ದಾರೆ. ಅವರು ತಮಗೆ ಗೊತ್ತೇ?) ಎಂದು ನಮ್ಮನ್ನು ಕೇಳಿದರು. ನಾವೇ ಅವರು ಎಂದು ಹೇಳಿಕೊಳ್ಳಲು ಮುಜುಗರ ಪಟ್ಟುಕೊಂಡ ನಮ್ಮನ್ನು ನೋಡಿ ಆತ್ಮೀಯ ಮಿತ್ರರಾದ ಶ್ರೀವತ್ಸ ಗೋಸ್ವಾಮಿಯವರೇ “ಜಿನಕೇ ಬಾರೆ ಮೇಂ ಆಪ್ ಜಾನನಾ ಚಾಹತೇ ಹೈಂ ವೇ ಆಪ್ ಕೇ ಸಾಮನೇ ಹೀ ಬೈಠೇ ಹುಏ ಹೈಂ!” (ಯಾರ ಬಗ್ಗೆ ತಾವು ತಿಳಿದುಕೊಳ್ಳಲು ಬಯಸುತ್ತಿದ್ದೀರೋ ಅವರು ತಮ್ಮ ಮುಂದೆಯೇ ಕುಳಿತಿದ್ದಾರೆ) ಎಂದು ಗೋಸ್ವಾಮಿಯವರು ನಸುನಗುತ್ತಾ ಅವರಿಗೆ ಹೇಳಿದರು. ಇದನ್ನು ಕೇಳಿದ ತಕ್ಷಣವೇ ಭದ್ರೇಶ ಸ್ವಾಮೀಜಿಯವರು ಭಾವುಕರಾಗಿ ಕುರ್ಚಿಯಿಂದ ಮೇಲೆದ್ದು ನಮಗೆ ದೀರ್ಘದಂಡ ನಮಸ್ಕಾರಗಳನ್ನು ಮಾಡಿದರು. ಈ ಘಟನೆಯನ್ನು ನಿರೂಪಿಸಿದ ತಕ್ಷಣವೇ ಅಬುಧಾಬಿ ಹಿಂದೂ ದೇವಾಲಯದ ಯುವ ಸಾಧು “ಮೈ ವಹೀಂ ಭದ್ರೇಶ ಸ್ವಾಮೀಜಿ ಕೇ ಶಿಷ್ಯ್ ಹೂಂ” (ಭದ್ರೇಶ ಸ್ವಾಮೀಜಿಯವರ ಶಿಷ್ಯ ನಾನು) ಎಂದು ಹೇಳಿ ತುಂಬಾ ಸಂತಸಪಟ್ಟರು. ಕೂಡಲೇ ಭಾರತಕ್ಕೆ ಫೋನ್ ಮಾಡಿ ಅವರ ಗುರುಗಳೊಂದಿಗೆ ಗುಜರಾತಿ ಭಾಷೆಯಲ್ಲಿ ನಮ್ಮ ಬಗ್ಗೆ ಹೇಳಿ ಉಭಯ ಕುಶಲೋಪರಿ ಮಾತನಾಡಲು ತಮ್ಮ ಮೊಬೈಲನ್ನು ನಮ್ಮ ಕೈಗೆ ಕೊಟ್ಟರು! "World is small" ಎಂಬ ಪ್ರಸಿದ್ಧ ಆಂಗ್ಲ ನುಡಿಗೆ ಇದೊಂದು ಉದಾಹರಣೆ.

ಇದೇ ರೀತಿ ಬೆಂಗಳೂರು ವಿಮಾನ ನಿಲ್ದಾಣದಿಂದ ಮಸ್ಕತ್ಗೆ ಹೊರಡುವಾಗ Departure Lounge ನಲ್ಲಿ ಕುಳಿತಿದ್ದ ನಮ್ಮನ್ನು ನೋಡಿ ಅಪರಿಚಿತ ಯುವಕನೊಬ್ಬ ನಮ್ಮ ಹತ್ತಿರ ಬಂದು ಶಿರಸಾಷ್ಟಾಂಗ ನಮಸ್ಕಾರವನ್ನು ಮಾಡಿದ. ಯಾರೆಂದು ಕೇಳಿದಾಗ “ನಾನು ತಮ್ಮ ಅರಸೀಕೆರೆ ಡಿಗ್ರಿ ಕಾಲೇಜಿನಲ್ಲಿ ಓದಿದ ವಿದ್ಯಾರ್ಥಿ. ಈಗ ನಾನು ಫ್ರಾನ್ಸ್ ನಲ್ಲಿ Artificial Intelligence (AI) ಮುಖ್ಯಸ್ಥನಾಗಿದ್ದೇನೆ.

ತಾವು ಪಯಣಿಸುತ್ತಿರುವ ವಿಮಾನದಲ್ಲಿಯೇ ಪ್ಯಾರಿಸ್ ಗೆ ಹೋಗುತ್ತಿದ್ದೇನೆ. ತಮ್ಮ ದರ್ಶನ ಭಾಗ್ಯ ದೊರೆತದ್ದು ನನ್ನ ಸೌಭಾಗ್ಯ. ತಮ್ಮ ಕಾಲೇಜಿನಲ್ಲಿ ನನಗೆ ಶಿಕ್ಷಣ ದೊರೆಯದೇ ಹೋಗಿದ್ದರೆ ಇಲ್ಲಿಯವರೆಗೂ ನಾನು ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ” ಎಂದು ತುಂಬಾ ಗದ್ಗದಿತ ಕಂಠದಿಂದ ನುಡಿದ. ನಮ್ಮ ಮಠದ ಶಾಲಾಕಾಲೇಜುಗಳಲ್ಲಿ ಓದಿದ ಇಂತಹ ಅನೇಕ ಪ್ರತಿಭಾನ್ವಿತ ವಿದ್ಯಾರ್ಥಿ/ವಿದ್ಯಾರ್ಥಿನಿಯರು, ಯುವದಂಪತಿಗಳು ಮಸ್ಕತ್, ದುಬೈ ಮತ್ತು ಅಬುಧಾಬಿಯಲ್ಲಿ ಭೇಟಿಯಾಗಿದ್ದು ಅವರ ಸಾಧನೆಯನ್ನು ನೋಡಿ ತುಂಬಾ ಹೆಮ್ಮೆ ಎನಿಸಿತು. ದುಬೈನಿಂದ ಮರುಪ್ರಯಾಣ ಮಾಡುವ ಮುನ್ನಾದಿನ ಮಧ್ಯಾಹ್ನ ಷಾರ್ಜಾದಲ್ಲಿದ್ದ ಶಿಷ್ಯರೊಬ್ಬರು ಬಹಳ ಒತ್ತಾಸೆಯಿಂದ ನಮ್ಮನ್ನು ಅವರ ಮನೆಗೆ ಬರಮಾಡಿಕೊಂಡಿದ್ದರು. ಅನೇಕ ಸ್ನೇಹಿತರನ್ನೂ ಕರೆದು ದಾಸೋಹ ವ್ಯವಸ್ಥೆ ಮಾಡಿದ್ದರು. ಅವರೊಟ್ಟಿಗೆ ಕೆಲಸ ಮಾಡುತ್ತಿದ್ದ ಭಾರತದ ಮುಸ್ಲಿಂ ಸ್ನೇಹಿತನೊಬ್ಬ ದುಬೈ ಬಿಟ್ಟು ದೂರದ ಆಫ್ರಿಕಾದ ನೈಜೀರಿಯಾ ದೇಶದಲ್ಲಿ ನೆಲೆಸಿದ್ದ. ನಾವು ಅವರ ಮನೆಗೆ ಬರುವ ವಿಷಯ ತಿಳಿದು ಹತ್ತಾರು ಗಂಟೆಗಳ ಕಾಲ ವಿಮಾನದಲ್ಲಿ ಪ್ರಯಾಣ ಮಾಡಿ ನೈಜೀರಿಯಾದಿಂದ ಬಂದಿದ್ದ. ಎಲ್ಲರೊಡನೆ ಮಾತನಾಡುತ್ತಿದ್ದಾಗ ಇದ್ದಕ್ಕಿದ್ದಂತೆಯೇ ಅವರ ಮನೆಯೊಳಗೆ ಪ್ರವೇಶಿಸಿದ ಆ ಮುಸ್ಲಿಂ ಯುವಕ “ನಾನು ದಾವಣಗೆರೆಯ ತಮ್ಮ ಅನುಭವ ಮಂಟಪದ ವಸತಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿ. ತಮ್ಮ ದರ್ಶನ ಪಡೆಯಲು ಬಂದಿದ್ದೇನೆ” ಎಂದು ತುಂಬಾ ಭಾವುಕನಾಗಿ ತನ್ನ ಪರಿಚಯವನ್ನು ಮಾಡಿಕೊಂಡಾಗ ಎಲ್ಲರೂ ಹರ್ಷೋದ್ಗಾರ ವ್ಯಕ್ತಪಡಿಸಿದರು. 

ಎಳವೆಯಲ್ಲಿ ಶಿಕ್ಷಣ ಪಡೆದಿದ್ದ ಆತನ ಹೃದಯದಲ್ಲಿ ಜಾತಿಯ ಸೋಂಕು ಇರಲಿಲ್ಲ. ಧನ್ಯತೆಯ ಭಾವ ತುಂಬಿದ ಆ ಯುವಕನ ಮುಖವನ್ನು ನೋಡಿ ನಾವು ಮೂಕವಿಸ್ಮಿತರಾದೆವು!

ದುಬೈನ ಅಲ್ ಮನ್ ಖೂಲ್ ಎಂಬ ಬಡಾವಣೆಯಲ್ಲಿ ಹಿಂದೂಗಳು ದೀಪಾವಳಿಯ ಸಂದರ್ಭದಲ್ಲಿ ತಮ್ಮ ಮನೆಗಳ ಮುಂದೆ ಜಗಮಗಿಸುವ ವಿದ್ಯುದ್ದೀಪಾಲಂಕಾರ ಮಾಡಿರುವುದನ್ನು ನೋಡಲು ವಿಭಿನ್ನ ಧರ್ಮೀಯರೂ ಸಂಭ್ರಮದಿಂದ ಬರುತ್ತಾರೆ. 

ಇದೆಲ್ಲವನ್ನೂ ನೋಡಿದಾಗ ಭಾರತದಲ್ಲಿ ಎಲ್ಲ ಧರ್ಮಗಳೂ ನಿಂತ ನೀರಾಗಿ ಪಾಚಿ ಕಟ್ಟಿವೆ. ಧರ್ಮಗುರುಗಳೆನಿಸಿದವರು ತಮ್ಮ ಧರ್ಮಬಾಹಿರ ನಡವಳಿಕೆಗಳಿಂದ ಹಾವಸೆಗಲ್ಲ ಮೇಲೆ ಜಾರಿ ಬೀಳುತ್ತಿದ್ದಾರೆ. ತಮ್ಮ ಸುತ್ತ ಇರುವವರನ್ನೂ ಸಹ ಜಾರಿಸಿ ಬೀಳಿಸುತ್ತಿದ್ದಾರೆ. ಧರ್ಮಪಥದಲ್ಲಿ ನಡೆಯುವವರ ವಿರುದ್ಧ ಷಡ್ಯಂತ್ರ ರೂಪಿಸುತ್ತಾರೆ. “ಧರ್ಮಂ ಪ್ರವಕ್ಷ್ಯಂತ್ಯಧರ್ಮಜ್ಞಾಃ ತಸ್ಮಾತ್ ಕ್ಷೀಯತೇ ಧರ್ಮಃ” ಎಂದು ಶ್ರೀಮದ್ಭಾಗವತವು ಹೇಳುವಂತೆ ಧರ್ಮದ ನಿಜವಾದ ಅರಿವು ಇಲ್ಲದವರು ಧರ್ಮಬೋಧೆ ಮಾಡುತ್ತಿರುವುದರಿಂದ ಧರ್ಮವು ಕ್ಷೀಣಿಸುತ್ತಿದೆ. “ಬಳ‍್ಳಿಗುರುಡರು ಸೇರಿ ಹಳ್ಳವನು ಬಿದ್ದಂತೆ ಒಳ್ಳೆಯ ಗುರುವಿನುಪದೇಶವಿಲ್ಲದಿರೆ ಎಲ್ಲಿಹುದು ಮುಕ್ತಿ ಸರ್ವಜ್ಞ?” ಎನ್ನುವಂತಾಗಿದೆ. ಈಗೀಗಲಂತೂ ಅನೇಕ “ಧರ್ಮಗುರುಗಳು” ಪ್ರಚ್ಛನ್ನ ರಾಜಕಾರಣಿಗಳಾಗಿದ್ದಾರೆ. ಹೀಗಾಗಿ ದೀಪ ಹಚ್ಚುವ ಬದಲು ಬೆಂಕಿ ಹಚ್ಚಲು ಧರ್ಮಗಳು ರಾಜಕೀಯಕ್ಕೆ ದುರ್ಬಳಕೆಯಾಗುತ್ತಿವೆ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ.30-5-2024.