ಡಾ. ಎಂ.ಜಿ ಈಶ್ವರಪ್ಪನವರದು ಅಪರೂಪದ ವ್ಯಕ್ತಿತ್ವ : ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಬಣ್ಣನೆ
ದಾವಣಗೆರೆ ಜೂನ್ 2:
ಸಾಹಿತ್ಯ, ರಂಗಭೂಮಿ, ಆಡಳಿತ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದು ಡಾ. ಎಂ.ಜಿ.ಈಶ್ವರಪ್ಪನವರದು ಅಪರೂಪದ ವ್ಯಕ್ತಿತ್ವ ಎಂದು ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಬಣ್ಣಿಸಿದರು.
ನಿನ್ನೆ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದ ಜಾನಪದ ವಿದ್ವಾಂಸ ಡಾ. ಎಂ.ಜಿ.ಈಶ್ವರಪ್ಪನವರ ದಾವಣಗೆರೆಯ ನಿವಾಸಕ್ಕೆ ಇಂದು ಪೂಜ್ಯರು ಭೇಟಿ ನೀಡಿ, ಈಶ್ವರಪ್ಪನವರ ಪಾರ್ಥಿವ ಶರೀರಕ್ಕೆ ಪುಷ್ಪ ಮಾಲೆ ಅರ್ಪಿಸಿ ಪೂಜ್ಯರು ಮಾತನಾಡಿದರು.
ಸದಾ ಹಸನ್ಮುಖಿಗಳಾದ ಈಶ್ವರಪ್ಪ, ಉದ್ವೇಗ ಆವೇಶವಿಲ್ಲದ ತಮ್ಮ ವಾಕ್ ಚಾತುರ್ಯದ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದರು. ಖಚಿತ ಮತ್ತು ಸ್ಪಷ್ಟವಾಗಿ ತಮ್ಮ ವಿಚಾರಗಳನ್ನು ಮಂಡಿಸುತ್ತಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸದಾ ತೊಡಗಿಸಿಕೊಂಡಿದ್ದರು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿರಲಿಲ್ಲ.
ಪ್ರತಿಮಾ ಸಭಾದ ಮೂಲಕ ಸದಾ ಚಟುವಟಿಕೆಯಿಂದಿರುತ್ತಿದ್ದರು. ಸಂಕ್ರಾಂತಿ ನಾಟಕದ ಬಸವಣ್ಙನ ಪಾತ್ರದಲ್ಲಿ ನೆನನಪಿನಲ್ಲಿಳಿಯುವಂತೆ ಅಭಿನಯಿಸುತ್ತಿದ್ದರು. ಸ್ನೇಹಜೀವಿಯಾಗಿದ್ದ ಅವರ ಅಗಲಿಕೆ ಸಾಂಸ್ಕೃತಿಕ ವಲಯಕ್ಕೆ ಅಪಾರ ನಷ್ಟ ಉಂಟಾಗಿದೆ ಎಂದು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.
ನೀ ಹುಟ್ಟಿಸಿದಲ್ಲಿ ಹುಟ್ಟಿ, ನೀ ಕೊಂದಲ್ಲಿ ಸಾಯದೆ ಎನ್ನ ವಶವೇ ಅಯ್ಯ.. ಎಂಬಂತೆ ಸಾವು ನಿಶ್ಚಿತ. ದುಃಖ ಸಹಿಸಿಕೊಳ್ಳುವ ಶಕ್ತಿ ಹೊಂದಬೇಕು ಎಂದು ಕುಟುಂಬದ ಸದಸ್ಯರಿಗೆ ಸಾಂತ್ವನ ತಿಳಿಸಿದರು.