ಮತ್ತೊಬ್ಬ ಟಿ.ಎನ್. ಶೇಷನ್ ಗಾಗಿ ಭಾರತ ದೇಶ ಕಾಯುತ್ತಿದೆ….!

  •  
  •  
  •  
  •  
  •    Views  

ಮ್ಮ ದೇಶದ ಲೋಕಸಭಾ ಚುನಾವಣೆಯ ಫಲಿತಾಂಶ ಎಲ್ಲ ಚುನಾವಣೋತ್ತರ ಸಮೀಕ್ಷೆಗಳನ್ನು ತಲೆಕೆಳಗಾಗಿಸಿದೆ. ನಿರ್ದಿಷ್ಟ ದಿನಾಂಕದಂದು ಕೆಲವೇ ಗಂಟೆಗಳಲ್ಲಿ ಫಲಿತಾಂಶ ಪ್ರಕಟವಾಗಲಿದ್ದರೂ ಕಾಯಲಾಗದ ಜನರ ಕುತೂಹಲ ತಣಿಸಲು ದೂರದರ್ಶನಗಳಲ್ಲಿ ಚರ್ಚೆ ನಡೆಯುತ್ತಲೇ ಇರುತ್ತದೆ. ಫಲಿತಾಂಶದ ನಂತರ ಶಿಷ್ಯರೊಬ್ಬರಿಂದ ನಮ್ಮ ಮೊಬೈಲ್ ಗೆ ಬಂದ ಒಂದು ಪ್ರತಿಕ್ರಿಯೆಯ ಸಾರಾಂಶ: “ಹೆಚ್ಚಿನ ಸೀಟುಗಳನ್ನು ಪಡೆದ ಪಕ್ಷ ಗೆದ್ದೆನೆಂದು ಬೀಗುವಂತಿಲ್ಲ. ಕಡಿಮೆ ಸೀಟುಗಳನ್ನು ಪಡೆದ ಪಕ್ಷ ಸೋತೆನೆಂದು ವ್ಯಥೆಪಡುವಂತಿಲ್ಲ”. ಆದರೆ ಭಾರತೀಯ ಮತದಾರರು ಇದೆಲ್ಲವನ್ನೂ ಯೋಚನೆ ಮಾಡಿಯೇ ಪ್ರಜ್ಞಾಪೂರ್ವಕವಾಗಿ ಹೀಗೆ ಮತದಾನ ಮಾಡಿದ್ದಾರೆಂದು ಹೇಳಲು ಬರುವುದಿಲ್ಲ. ಆಯಾಯ ಕ್ಷೇತ್ರಗಳ ರಾಜಕೀಯ ದೊಂಬರಾಟ ಇಂತಹ ಪರಿಸ್ಥಿತಿಯನ್ನುಂಟು ಮಾಡಿದೆಯೆಂದು ಬೇಕಾದರೆ ಹೇಳಬಹುದು. ಎರಡನೇ ಮಹಾಯುದ್ಧದಲ್ಲಿ (1939-45) ವಿಜಯ ಸಾಧಿಸಿದ ಆಗಿನ ಇಂಗ್ಲೆಂಡ್ ಪ್ರಧಾನಿ ಸರ್ ವಿನ್ ಸ್ಟನ್ ಚರ್ಚಿಲ್ “ಇಂಗ್ಲೆಂಡಿನ ಸಂರಕ್ಷಕ” ನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೆ ಯುದ್ಧ ಮುಗಿದ ನಂತರ ಇಂಗ್ಲೆಂಡಿನಲ್ಲಿ ನಡೆದ ಚುನಾವಣೆಯ ಫಲಿತಾಂಶವು ಮಾಧ್ಯಮಗಳ ನಿರೀಕ್ಷೆಯನ್ನು ಹುಸಿಯಾಗಿಸಿತ್ತು. ಮಹಾಯುದ್ಧದಲ್ಲಿ ಗೆಲುವು ಸಾಧಿಸಿಕೊಟ್ಟಿದ್ದ ಚರ್ಚಿಲ್ ರವರ ಕನ್ಸರ್ವೇಟಿವ್ ಪಕ್ಷ ಹೀನಾಯವಾಗಿ ಸೋಲು ಅನುಭವಿಸಿತು. ಎಲ್ಲ ಲೆಕ್ಕಾಚಾರಗಳನ್ನು ಮೀರಿ ಕ್ಲೆಮೆಂಟ್ ಆಟ್ಲಿಯವರ ಲೇಬರ್ ಪಕ್ಷ ಬಹಳ ಅಂತರದಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದಿತು.

ಚರ್ಚಿಲ್ ರವರು ಒಮ್ಮೆ ಬಿ.ಬಿ.ಸಿ ಯಲ್ಲಿ ಸಂದರ್ಶನ ನೀಡಲು ಟ್ಯಾಕ್ಸಿಯನ್ನು ಮಾಡಿಕೊಂಡು ಹೋಗಿದ್ದರಂತೆ. ಕಾರಿನಿಂದ ಕೆಳಗಿಳಿಯುವಾಗ ಟ್ಯಾಕ್ಸಿ ಡ್ರೈವರ್ ಗೆ “ಇನ್ನು ಮುಕ್ಕಾಲು ಗಂಟೆಯೊಳಗೆ ಸಂದರ್ಶನ ಮುಗಿಸಿಕೊಂಡು ಬರುತ್ತೇನೆ, ಅಲ್ಲಿಯವರೆಗೂ ಇಲ್ಲೇ ಇದ್ದು ಕಾಯಪ್ಪಾ” ಎಂದು ಹೇಳಿದರಂತೆ. ಅದಕ್ಕೆ ಟ್ಯಾಕ್ಸಿ ಚಾಲಕ ನಿರಾಕರಿಸಿ “ಸಾರ್, ಕ್ಷಮಿಸಿ, ನನಗೆ ಕಾಯಲು ಆಗುವುದಿಲ್ಲ. ಮನೆಗೆ ಹೋಗಿ ಆಕಾಶವಾಣಿಯಲ್ಲಿ ಬರುವ ಚರ್ಚಿಲ್ ರವರ ಭಾಷಣವನ್ನು ಕೇಳಬೇಕು” ಎಂದನಂತೆ. ಆಶ್ಚರ್ಯಚಕಿತರಾದ ಚರ್ಚಿಲ್ ತಾನು ಯಾರೆಂದು ತೋರ್ಪಡಿಸಿಕೊಳ್ಳದೆ ಖುಷಿಯಿಂದ ಟ್ಯಾಕ್ಸಿ ಡ್ರೈವರ್ ಗೆ 10 ಪೌಂಡ್ ಹಣವನ್ನು ಕೊಟ್ಟರಂತೆ. ಹೆಚ್ಚಿನ ಹಣವನ್ನು ಪಡೆದ ಟ್ಯಾಕ್ಸಿ ಡ್ರೈವರ್ ದಿಲ್ ಖುಷ್ ఆಗಿ ಹೇಳಿದನಂತೆ “ಎಷ್ಟು ಗಂಟೆಯಾದರೂ ಪರವಾಗಿಲ್ಲ ಸಾರ್! ನೀವು ಬರುವವರೆಗೂ ಇಲ್ಲೇ ಇದ್ದು ಕಾಯುತ್ತಿರುತ್ತೇನೆ. ಚರ್ಚಿಲ್ ಭಾಷಣ ತಗೊಂಡು ನಾನೇನು ಮಾಡಲಿ” ಎಂದನಂತೆ! ಆತನ ಮನಸ್ಥಿತಿಯನ್ನು ಗಮನಿಸಿದ ಚರ್ಚಿಲ್ ಹೀಗೆ ಬರೆಯುತ್ತಾರೆ: “You can see how principles have been modified in favour of money: nations sold for money, honour for money; families split for money, friends separated for money, people killed for money, made slaves to money". ಹಣ ಮನುಷ್ಯರ ಮನಸ್ಸನ್ನು ಹೇಗೆ ಬದಲಾಯಿಸಬಹುದು ಎಂಬುದಕ್ಕೆ ಇದೊಂದು ಒಳ್ಳೆಯ ಉದಾಹರಣೆ. ಹಣದ ಕಾರಣದಿಂದ ವ್ಯಕ್ತಿಯ ಗೌರವ ಹರಾಜಾಗುತ್ತದೆ. ಹಣಕ್ಕಾಗಿ ಕುಟುಂಬಗಳು ಒಡೆದು ಹೋಗುತ್ತವೆ. ಹಣದ ಕಾರಣಕ್ಕಾಗಿ ಆತ್ಮೀಯ ಗೆಳೆಯರಲ್ಲಿ ಮನಸ್ತಾಪ ಉಂಟಾಗುತ್ತದೆ. ಹಣಕ್ಕಾಗಿ ಕೊಲೆ ದರೋಡೆಗಳು ನಡೆಯುತ್ತವೆ. 

ನಮ್ಮ ದೇಶದಲ್ಲಿ ಎಂತಹ ಭೀಕರ ಬರಗಾಲ ಬಂದರೂ ಚುನಾವಣೆ ಬಂದರೆ ಹಣದ ಹೊಳೆ ಗುಪ್ತಗಾಮಿನಿಯಾಗಿ ಹರಿಯುತ್ತದೆ. ಇದನ್ನು ತಡೆಗಟ್ಟಬೇಕೆಂದು ಪ್ರಯತ್ನ ಮಾಡಿದ ನಮ್ಮ ದೇಶದ ಮುಖ್ಯ ಚುನಾವಣಾಧಿಕಾರಿಯಾಗಿದ್ದ ಟಿ.ಎನ್. ಶೇಷನ್ ತಮ್ಮ ಬದುಕಿನ ಅವಧಿಯಲ್ಲಿಯೇ ದಂತಕತೆಯಾದರು. ಚುನಾವಣಾ ಆಯೋಗಕ್ಕೆ ಒಂದು ಘನತೆ, ಗೌರವವನ್ನು ತಂದುಕೊಟ್ಟರು. ಅವರು ಬರುವುದಕ್ಕೆ ಮುಂಚೆ ಚುನಾವಣಾಧಿಕಾರಿಗಳು ಸರಕಾರದ ಬಾಲಂಗೋಚಿಗಳಾಗಿದ್ದರು. ಶೇಷನ್ ರವರು ಇಡೀ ಚುನಾವಣಾ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕಗೊಳಿಸಿ ಚುನಾವಣಾ ಆಯೋಗವನ್ನು ಪ್ರಜಾಪ್ರಭುತ್ವದ “ಕಾವಲು ನಾಯಿ” ಯನ್ನಾಗಿಸಿದರು. ಮತದಾರರನ್ನು ಒಲಿಸಿಕೊಳ್ಳಲು ಹಣ, ಹೆಂಡ ಇತ್ಯಾದಿ ಚುನಾವಣಾ ಅಕ್ರಮಗಳ ಮೂಲಕ ಗೆದ್ದು ಬರುತ್ತಿದ್ದ ರಾಜಕಾರಣಿಗಳು ಪತರಗುಟ್ಟಿ ಹೋದರು. ಶೇಷನ್ ರವರ ಅಧಿಕಾರವನ್ನು ಮೊಟುಕುಗೊಳಿಸಲು ಇಬ್ಬರು ಚುನಾವಣಾಧಿಕಾರಿಗಳನ್ನು ನೇಮಿಸಲಾಯಿತಾದರೂ ಅವರು ಸೊಪ್ಪು ಹಾಕಲಿಲ್ಲ.

ಚುನಾವಣೆಯ ಅಕ್ರಮಗಳನ್ನು ತುಳಿದು ಹಾಕಲು ಹುಟ್ಟಿದ ಮದಗಜ ಟಿ.ಎನ್.ಶೇಷನ್ ರವರು. ಅವರ ಆತ್ಮಕಥೆ "Through the Broken Glass” ಅವರು ಮರಣ ಹೊಂದಿದ ನಾಲ್ಕು ವರ್ಷಗಳ ನಂತರ ಬೆಳಕು ಕಂಡಿತು. 

ಅದರಲ್ಲಿ ಅವರು ಚುನಾವಣಾ ಸುಧಾರಣೆಗಾಗಿ ತೆಗೆದುಕೊಂಡ ಕ್ರಮಗಳು ಹಾಗೂ ಅದಕ್ಕಾಗಿ ಅನೇಕ ರಾಜಕಾರಣಿಗಳ ಕೆಂಗಣ್ಣಿಗೆ ಗುರಿಯಾದ ಸಂದರ್ಭಗಳನ್ನು ದಾಖಲಿಸಿದ್ದಾರೆ. ತೀರಾ ವಿಡಂಬನೆಯ ಸಂಗತಿಯೆಂದರೆ ಭ್ರಷ್ಟ ರಾಜಕಾರಣಿಗಳಿಗೆ ಸಿಂಹಸ್ವಪ್ನವಾಗಿದ್ದ ಶೇಷನ್ ರವರು ತಮ್ಮ ನಿವೃತ್ತಿಯ ನಂತರ ಸ್ವತಃ ಚುನಾವಣೆಗೆ ಸ್ಪರ್ಧಿಸಿ ಹೀನಾಯವಾಗಿ ಸೋತರು! ಅವರೊಬ್ಬರೇ ಅಲ್ಲ ನಮ್ಮ ದೇಶಕ್ಕೆ ಅಪ್ರತಿಮ ಸಂವಿಧಾನವನ್ನು ಒದಗಿಸಿಕೊಟ್ಟ ಅಂಬೇಡ್ಕರ್ ರವರೂ ಸಹ ದೇಶದ ಮೊದಲ ಚುನಾವಣೆಯಲ್ಲಿ ಸೋತರು.

ಪರ್ಣ ಕುಟೀರದ ಬಳಿ ಸುಳಿದಾಡಿದ ಮಾಯಾಜಿಂಕೆಯನ್ನು ನೋಡಿ ಆಕರ್ಷಿತಳಾದ ಸೀತೆಯು ಅದನ್ನು ತಂದುಕೊಡಲು ಶ್ರೀರಾಮನನ್ನು ಒತ್ತಾಯಿಸಿದ ರಾಮಾಯಣದ ಪ್ರಸಂಗವನ್ನು ನೀವು ಬಲ್ಲಿರಿ. ಅಂಥದೇ ಒಂದು ಪ್ರಸಂಗ ಶೇಷನ್ ರವರ ಜೀವನದಲ್ಲಿ ನಡೆಯಿತು. ಚುನಾವಣೆಯ ಸಂದರ್ಭ, ಉತ್ತರ ಪ್ರದೇಶದ ಹಳ್ಳಿಗಾಡಿನ ಕೊಂಪೆಯಲ್ಲಿ ಶೇಷನ್ ತಮ್ಮ ಪತ್ನಿಯೊಂದಿಗೆ ಕಾರಿನಲ್ಲಿ ಹೋಗುತ್ತಿರುತ್ತಾರೆ. ದಾರಿಯಲ್ಲಿ ಮರದ ಮೇಲೆ ಹಕ್ಕಿಯ ಗೂಡೊಂದು ಶೇಷನ್ ಪತ್ನಿಯ ಕಣ್ಣಿಗೆ ಬೀಳುತ್ತದೆ. ಅದು ತನ್ನ ಮನೆಯನ್ನು ಸಿಂಗರಿಸಲು ಚೆನ್ನಾಗಿರುತ್ತದೆ ಎಂದು ಆಸೆಪಟ್ಟು ಅದನ್ನು ತರಿಸಿಕೊಡಲು ಪತಿಯನ್ನು ಕೇಳುತ್ತಾರೆ. ಶೇಷನ್ ತನ್ನ ಸೆಕ್ಯುರಿಟಿ ಗಾರ್ಡಿಗೆ ಸೂಚನೆ ಕೊಡುತ್ತಾರೆ. ಗಾರ್ಡ್ ಕೆಳಗಿಳಿದು ಹೋಗಿ ಅಲ್ಲಿ ದನ ಕಾಯುತ್ತಿದ್ದ ಹುಡುಗನಿಗೆ “ಆ ಹಕ್ಕಿಯ ಗೂಡನ್ನು ಕಿತ್ತು ತಂದು ಕೊಡು, ನಿನಗೆ ಹತ್ತು ರೂಪಾಯಿ ಕೊಡುತ್ತೇನೆ” ಎಂದು ಹೇಳುತ್ತಾನೆ. 

ಆ ಹುಡುಗ ಒಪ್ಪುವುದಿಲ್ಲ. ಶೇಷನ್ ಸ್ವತಃ ಹುಡುಗನನ್ನು ಕರೆಸಿ ಆ ಗೂಡನ್ನು ತಂದುಕೊಟ್ಟರೆ ಐವತ್ತು ರೂಪಾಯಿ ಕೊಡುವುದಾಗಿ ಹೇಳಿದರೂ ಆ ಹುಡುಗ ಒಪ್ಪುವುದಿಲ್ಲ. “ಸರ್ ನೀವು ಎಷ್ಟೇ ಹಣ ಕೊಟ್ಟರೂ ನಾನದನ್ನು ಕಿತ್ತು ತಂದುಕೊಡಲಾರೆ. ಆ ಗೂಡಿನಲ್ಲಿ ಇನ್ನೂ ಕಣ್ಣೇ ಬಿಡದ ಎಳೆಯ ಹಕ್ಕಿ ಮರಿಗಳಿವೆ. ತಾಯಿ ಹಕ್ಕಿ ಮರಿಗಳಿಗೆ ಗುಟುಕು ಕೊಡಲು ಹಾರಿ ಬಂದಾಗ ಗೂಡೇ ಇಲ್ಲದಿರುವುನ್ನು ನೋಡಿ ಆ ತಾಯಿ ಹಕ್ಕಿಗೆ ಎಷ್ಟು ನೋವಾಗಬೇಡ ಹೇಳಿ!” ಎಂದು ಆ ಹುಡುಗ ಕೊಟ್ಟ ಉತ್ತರ ಶೇಷನ್ ರನ್ನು ದಂಗುಬಡಿಸುತ್ತದೆ. ಸೂಕ್ಷ್ಮ ಸಂವೇದನೆಯ ಅವನ ಮಾತನ್ನು ಕೇಳಿ “ಒಬ್ಬ ಅನಕ್ಷರಸ್ಥ ದನಕಾಯುವ ಹಳ್ಳಿಯ ಹುಡುಗನಿಗೆ ಇರುವ ಪರಿಜ್ಞಾನ ಬುದ್ದಿವಂತನೆನಿಸಿದ ಐ.ಎ.ಎಸ್ ಅಧಿಕಾರಿಯಾದ ನನಗೆ ಇಲ್ಲವಲ್ಲಾ. ಇದಕ್ಕಾಗಿ ನಾನು ಬದುಕಿನುದ್ದಕ್ಕೂ ಪಶ್ಚಾತ್ತಾಪ ಪಟ್ಟಿದ್ದೇನೆ. ನನ್ನ ಎಲ್ಲಾ ಡಿಗ್ರಿಗಳು, ಐ.ಎ.ಎಸ್ ಸ್ಥಾನಮಾನ, ಹಣ ಅಂತಸ್ತುಗಳೆಲ್ಲವೂ ಈ ಹಳ್ಳಿ ಹೈದನ ಕಾಲಿನ ಧೂಳಿಗೆ ಸಮ!” ಎಂದು ಶೇಷನ್ ಹಿಂಜರಿಕೆಯಿಲ್ಲದೆ ಬರೆಯುತ್ತಾರೆ. 

ದಿನೇ ದಿನೇ ಸ್ವಾತಂತ್ರ್ಯ ಹೋರಾಟಗಾರರ ಸಂಖ್ಯೆ ಕ್ಷೀಣಿಸುತ್ತಿದೆ. ಟಿಕೆಟ್ಟು ಹೋರಾಟಗಾರರ ಸಂಖ್ಯೆ ಮೇರೆ ಮೀರಿ ಬೆಳೆಯುತ್ತಿದೆ! ಈಗ ನಡೆಯುತ್ತಿರುವುದು ಮತದಾನವಲ್ಲ; ಮತಗಳ ಮಾರಾಟ! ಜಾತ್ಯತೀತ ದೇಶದಲ್ಲಿ ಜಾತಿ ಜಾತಿಗಳ ಸಂಘರ್ಷ! ಹಣ, ಹೆಂಡ, ಸೀರೆ, ಕುಕ್ಕರ್ ಗಳ ಸೀಟಿಯ ಆರ್ಭಟ! ಚುನಾವಣೆಗಳು ಪ್ರಜಾಪ್ರಭುತ್ವದ ಅಣಕವಾಗಿವೆ. ಮತಗಟ್ಟೆಗಳು ಅಭ್ಯರ್ಥಿಗಳ ಜೂಜಾಟದ ಕೇಂದ್ರಗಳಾಗಿವೆ. ಇಂತಹ ಅಕ್ರಮ ಎಸಗುವವರನ್ನು ಹೆಡೆಮುರಿ ಕಟ್ಟಲು ಮತ್ತೊಬ್ಬ “ಶೇಷನ್”ಗಾಗಿ ದೇಶ ಕಾಯುತ್ತಿದೆ! 

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ.13-6-2024.