ಆಧ್ಯಾತ್ಮಿಕ ಶಿಕ್ಷಣ ಮನಸ್ಸಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ : ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್. ಮರುಳಸಿದ್ದಯ್ಯ

  •  
  •  
  •  
  •  
  •    Views  

ಸಿರಿಗೆರೆ, ಜೂನ್ 14:

ಆಧ್ಯಾತ್ಮಿಕತೆ ಆತಂಕವನ್ನು ಕಡಿಮೆ ಮಾಡುತ್ತದೆ. ಮನಸ್ಸನ್ನು ಅತ್ಯಂತ ಶಾಂತ ಹಾಗೂ ಉತ್ತಮ ಸ್ಥಿತಿಯಲ್ಲಿರಲು ಸಹಾಯ ಮಾಡುತ್ತದೆ. ಒಳ್ಳೆಯ ಆಲೋಚನೆಗಳು ಮನಸ್ಸಿನಲ್ಲಿ ಮೂಡಿಸಲು ಸಹಕಾರಿಯಾಗುತ್ತದೆ ಎಂದು ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್.ಮರುಳಸಿದ್ದಯ್ಯ ತಿಳಿಸಿದರು.

ಇಲ್ಲಿನ ಶ್ರೀ ಗುರುಶಾಂತೇಶ್ವರ ದಾಸೋಹ ಮಂಟಪದಲ್ಲಿ ಅಣ್ಣನ ಬಳಗ ಹಾಗೂ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಸ್ಮಾರಕ ಬಾಲಕರ ವಸತಿ ನಿಲಯದ ಸಹಯೋಗದಲ್ಲಿ ಆಯೋಜಿಸಿದ್ದ “ಸಂಸ್ಕಾರ-ಸಂಸ್ಕೃತಿ-ಯೋಗ ಸಪ್ತಾಹ”ದಲ್ಲಿ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿ “ಆಧ್ಯಾತ್ಮಿಕ ಶಿಕ್ಷಣ” ಕುರಿತು ಬಿ.ಎಸ್. ಮರುಳಸಿದ್ದಯ್ಯ ಉಪನ್ಯಾಸ ನೀಡಿದರು.

ನಮ್ಮನ್ನು ನಾವು ಅರಿತುಕೊಳ್ಳುವದೇ ಆಧ್ಯಾತ್ಮಿಕತೆ. ಧ್ಯಾನದ ಮೂಲಕ ಸ್ಥೂಲ ಶರೀರದಿಂದ ಬಿಡುಗಡೆಯಾಗಿ ಸೂಕ್ಷ್ಮ ಶರೀರ ಕುರಿತು ತಿಳಿದುಕೊಳ್ಳಬೇಕು. ಅಹಂ ಬ್ರಹ್ಮಾಸ್ಮಿ ತತ್ವದಿಂದ ಆನಂದದಿಂದ ಇರುವುದೇ ಆಧ್ಯಾತ್ಮಿಕತೆ. ಆಧ್ಯಾತ್ಮಿಕತೆಯು ವಸ್ತುನಿಷ್ಠ ಮತ್ತು ವ್ಯಕ್ತಿನಿಷ್ಠ ಪರಿಕಲ್ಪನೆಯಾಗಿದ್ದು, ವಿಭಿನ್ನ ಜನರಿಗೆ ವಿಭಿನ್ನ ಅರ್ಥವನ್ನು ಹೊಂದಿದೆ. ಸಾಮಾನ್ಯ ಆಧಾರವೆಂದರೆ ಪರಿಕಲ್ಪನೆಯು ಉನ್ನತ ಶಕ್ತಿಯಲ್ಲಿ ನಂಬಿಕೆಯನ್ನು ಪ್ರತಿನಿಧಿಸುತ್ತದೆ.

ಆಧ್ಯಾತ್ಮಿಕತೆಯು ನಿಮಗೆ ಜೀವನದ ಅರ್ಥವನ್ನು ಒದಗಿಸುತ್ತದೆ. ಕೇವಲ ಉಸಿರಾಟ ಮತ್ತು ಜೀವನದ ದಿನಗಳನ್ನು ಕಳೆಯುವುದಕ್ಕಿಂತ ಹೆಚ್ಚಿನ ಉದ್ಧೇಶದ ಅರ್ಥವನ್ನು ನೀಡುತ್ತದೆ. ಇದು ಇತರ ಅಭ್ಯಾಸಗಳ ನಡುವೆ ಕವನ ಮತ್ತು ಕಲೆಯಂತಹ ಚಟುವಟಿಕೆಗಳೊಂದಿಗೆ ನಿಮ್ಮನ್ನು ಸದಾ ಕ್ರೀಯಾಶೀಲ ಹಾಗೂ ಚಟುವಟಿಕೆಯಿಂದ ಇರುವಂತೆ ಪ್ರೇರೇಪಿಸುತ್ತದೆ.

ಇದು ಭಾವನೆ ಅಥವಾ ನಂಬಿಕೆಯ ಗುರುತಿಸುವಿಕೆಯಾಗಿದ್ದು ಅದು ನಮ್ಮ ಮನಸ್ಸನ್ನು ಉನ್ನತ ಕಾಸ್ಮಿಕ್ ಶಕ್ತಿಗೆ ಸಂಪರ್ಕಿಸಲು ಸಹಾಯ ಮಾಡುತ್ತದೆ. ನಮ್ಮ ದೈನಂದಿನ ಜೀವನದಲ್ಲಿ ಅಭ್ಯಾಸವನ್ನು ಅಳವಡಿಸಿಕೊಳ್ಳುವ ಪ್ರಯೋಜನಗಳನ್ನು ಅರ್ಥಮಾಡಿಕೊಳ್ಳಲು ಭೌತಿಕ ಸ್ವಯಂ ಮೇಲೆ ಆಧ್ಯಾತ್ಮಿಕತೆಯ ಪರಿಣಾಮಗಳನ್ನು ವಿಭಜಿಸುವ ಬಹು ಅದ್ಯಯನಗಳನ್ನು ನಡೆಸಲಾಗಿದೆ. ಆತಂಕ, ಖಿನ್ನತೆ ಮತ್ತು ವಿಘಟನೆಯಂತಹ ಮಾನಸಿಕ ಆರೋಗ್ಯ ಸಮಸ್ಯೆಗಳೊಂದಿಗೆ ವ್ಯವಹರಿಸುವಾಗ ಆಧ್ಯಾತ್ಮಿಕತೆಯು ಸಾಕಷ್ಟು ಪರಿಣಾಮಕಾರಿದೆ ಎಂಬುದು ತಿಳಿದು ಬರುತ್ತದೆ. ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಆಧ್ಯಾತ್ಮಿಕತೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಆಧ್ಯಾತಿಕ ಶಿಕ್ಷಣವು ಮೌಲ್ಯಗಳ ಮೇಲೆ ಕೇಂದ್ರೀಕರಿಸಲು ಅನುವು ಮಾಡಿಕೊಡುತ್ತದೆ. ಸಹಾನುಭೂತಿ ಮತ್ತು ಗೌರವದಿಂದ ಜೀವನವನ್ನು ನಡೆಸಲು ಮಾರ್ಗದರ್ಶನ ಮಾಡುತ್ತದೆ ಎಂದರು.

ಸಾಂಪ್ರದಾಯಿಕವಾಗಿ ಆಧ್ಯಾತ್ಮಿಕತೆಯು ಮರು ರಚನೆಯ ಧಾರ್ಮಿಕ ಪ್ರಕ್ರಿಯೆಯನ್ನು ಉಲ್ಲೇಖಿಸುತ್ತದೆ. ಮನುಷ್ಯನ ಮೂಲ ಆಕಾರವನ್ನು ಚೇತರಿಸಿಕೊಳ್ಳುವ ಗುರಿಯನ್ನು ಹೊಂದಿದೆ. “ಆಧ್ಯಾತ್ಮಿಕ” ಎಂಬ ಪದವು ಆತ್ಮಕ್ಕೆ ಸಂಬಂಧಿಸಿದ ಅರ್ಥವನ್ನು ಒಳಗೊಂಡಿದೆ. ಇದು ಪ್ರೆಂಚ್ ಭಾಷೆಯ “ಸ್ಪಿರಿಟ್” ಪದದಿಂದ ಬಂದಿದೆ ಎಂದರು. 

ಆಧ್ಯಾತ್ಮಿಕ ಶಿಕ್ಷಣ ಇಂದಿನ ಅಗತ್ಯವಾಗಿದೆ. ಇಂದಿನ ಶಿಕ್ಷಣ ಕೇವಲ ಭೌತಿಕ ವಿಷಯಕ್ಕೆ ಸೀಮಿತವಾಗಿದೆ. ಪರಿಣಾಮವಾಗಿ ಮಕ್ಕಳಲ್ಲಿ ಸಮಗ್ರ ಕುಟುಂಬ, ದೇಶದ ಕಲ್ಪನೆಯ ಭಾವನೆ ಕ್ಷೀಣವಾಗುತ್ತಿದೆ. ಕೇವಲ ಆರ್ಥಿಕ ಸಂಪಾದನೆ ಮುಖ್ಯ ಗುರಿಯಾಗಿದೆ. ಆದ್ದರಿಂದ ಕೇವಲ ಅಂಕಗಳಿಕೆ ಮಾತ್ರವಲ್ಲದೇ ಜೀವನದಲ್ಲಿ ಸವಾಲುಗಳನ್ನು ಎದುರಿಸುವ ಧೈರ್ಯವನ್ನು ಬೆಳಸಿಕೊಳ್ಳಲು ಮತ್ತು ಯಶಸ್ಸು ಗಳಿಸಲು ಆಧ್ಯಾತ್ಮಿಕ ಶಿಕ್ಷಣ ಸಹಾಯ ಮಾಡುತ್ತದೆ. 

ಪರಮಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ನಿಮಗೆ ಉಚಿತ ವಸತಿ ಮತ್ತು ಪ್ರಸಾದದ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದಾರೆ. ಅದರ ಸದುಪಯೊಗಪಡಿಸಿಕೊಳ್ಳಬೇಕು ಎಂದರು. ಬೆಳಗ್ಗೆ ಬೇಗೆ ಎದ್ದು ನಿತ್ಯಕರ್ಮ ಮುಗಿಸಿ ಸ್ನಾನ ಮಾಡಿ, ನಂತರ ಹಣೆಯ ಮೇಲೆ ವಿಭೂತಿ ಧರಿಸಿ ಭಗವಂತನನ್ನು ಧ್ಯಾನಿಸುವುದು, ಸ್ಮರಿಸುವುದು ವಿದ್ಯಾರ್ಥಿಗಳ ಆದ್ಯ ಕರ್ತವ್ಯವಾಗಿದೆ. ನಿಮ್ಮ ಮುಂದಿನ ಭವ್ಯ ಭವಿಷ್ಯವನ್ನು ರೂಪಿಸಿಕೊಳ್ಳಲು ಆಧ್ಯಾತ್ಮಿಕ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ ಎಂದರು. ವಸತಿ ನಿಲಯದ ಎಲ್ಲಾ ನಿಯಮಗಳನ್ನು ಪಾಲಿಸಿ ವಸತಿ ನಿಲಯವೇ ನಿಮ್ಮ ಸ್ವಂತ ನಿಲಯ ಎಂದು ಭಾವಿಸಿ ಸ್ವಚ್ಛತೆಯನ್ನು ಕಾಪಾಡಬೇಕು ಎಂದರು. ನಿಮ್ಮ ತಂದೆ ತಾಯಿಗಳ ಕನಸನ್ನು ನನಸು ಮಾಡುವಲ್ಲಿ ಸಿರಿಗೆರೆಯ ಕಲಿಕಾ ಪರಿಸರ ಅನುಕೂಲ ಮಾಡಿಕೊಡುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಯೋಗದ ಬಗ್ಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಹೆಚ್.ಎ. ನವೀನ್ ಕುಮಾರ್ ಯೋಗ ಹಾಗೂ ಪ್ರಾಣಾಯಾಮದ ಮಹತ್ವವನ್ನು ತಿಳಸಿದರು. ಚಟುವಟಿಕೆಗಳ ಮೂಲಕ ವಿವಿಧ ಆಸನಗಳನ್ನು ಮಾಡಿಸಿದರು. 

ವಸತಿ ನಿಲಯದ ಎಲ್ಲಾ ವಿದ್ಯಾರ್ಥಿಗಳು ಶ್ವೇತ ವಸ್ತ್ರಧಾರಿಯಾಗಿ ಕೆಂಪು ಮೇಲು ಹೊದಿಕೆ ಧರಿಸಿ ಹಣೆಗೆ ವಿಭೂತಿ ಧರಿಸಿ ಕುಳಿತಿರುವುದು ಆಧ್ಯಾತ್ಮಿಕ ವಾತಾವರಣವನ್ನು ನಿರ್ಮಿಸಿತ್ತು. ಕೆ.ನಿತನ್ ವಿದ್ಯಾರ್ಥಿಗಳಿಗೆ ವಚನಗಳನ್ನು ಹೇಳಿಕೊಟ್ಟರು. ನಿಲಯ ಪಾಲಕರಾದ ಕೆ.ಎನ್.ನಟರಾಜ್, ಶಿಕ್ಷಕ ಬಿ.ಎಸ್. ಅರುಣ್ ಕುಮಾರ್, ವಸತಿ ನಿಲಯದ ಶಿಕ್ಷಕರಾದ ಸಿ.ಎಸ್.ಗಿರೀಶ್, ಜಿತೇಂದ್ರ, ಪವನ್, ಶ್ರೀನಿವಾಸ್, ನವೀನ್, ಹೇಮಂತ್, ಬಸವರಾಜ್, ನಾಗರಾಜ್, ಶಿವಪ್ಪ ಕೋಟಿ, ಮತ್ತು ಶಿವಕುಮಾರ ಇದ್ದರು.