ದಾವಣಗೆರೆ: ಮನಸ್ಸಿನ ಹತೋಟಿಗೆ ಯೋಗ ಬಹುಮುಖ್ಯ ಸಾಧನ : ತರಳಬಾಳು ಶ್ರೀ

  •  
  •  
  •  
  •  
  •    Views  

ದಾವಣಗೆರೆ: ಬಂಧನಕ್ಕೂ ಮುಕ್ತಿಗೂ ಮನಸ್ಸೇ ಮೂಲಕಾರಣ ಮನಸ್ಸು ಹತೋಟಿಯಲ್ಲಿರ ಬೇಕಾದರೆ ಯೋಗ ಬಹು ಮುಖ್ಯ ಸಾಧನ. ಮನುಷ್ಯನ ಮನಸ್ಸು ನೀರಿದ್ದಂತೆ, ಸರೋವರಕ್ಕೆ ಕಲ್ಲು ಎಸೆದರೆ ತರಂಗಗಳು ಉಂಟಾಗುತ್ತದೆ. ಹಾಗೇ ಮಾನವನ ಮನಸ್ಸಿಗೆ ದೈನಂದಿನ ಜೀವನದಲ್ಲಿ ಕಷ್ಟಗಳು ಇರುತ್ತದೆ. ಆದರೆ ಅದನ್ನೆಲ್ಲಾ ನಿಭಾಯಿಸಬೇಕು ಅದಕ್ಕೆ ಸದೃಢ ಮನಸ್ಸು ಬೇಕು ಎಂದು ಸಿರಿಗೆರೆ ತರಳಬಾಳು ಶ್ರೀಮಠದ ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಹೈಸ್ಕೂಲ್ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ, ಮಹಾನಗರ ಪಾಲಿಕೆ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿ.ವಿ, ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ, ಜಿಲ್ಲಾ ಯೋಗ ಒಕ್ಕೂಟ, ದಾವಣಗೆರೆ ಈವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ 10 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತಾನಾಡಿದರು.ಮನಸ್ಸು ಹತೋಟಿಯಲ್ಲಿದ್ದರೆ ಸಂತೋಷದಿಂದ ಇರಲು ಸಾಧ್ಯ, ಮನಸ್ಸು ನಮ್ಮನ್ನು ಆಟವಾಡಿಸಲು ಬಿಡಬಾರದು. ಮನಸ್ಸನ್ನು ನಿಯಂತ್ರಣದಲ್ಲಿ ಹಾಗೂ ಹತೋಟಿಯಲ್ಲಿಡುವುದು ಯೋಗದ ಉದ್ದೇಶ ಎಂದರು.

ನಿತ್ಯ ಪ್ರಾರ್ಥನೆ, ಧ್ಯಾನ ಮಾಡುವುದು ಒಳ್ಳೆಯದು. ಮಾನವ ದಾರಿ ತಪ್ಪಲು ಕಾರಣ ಮನಸ್ಸು ಹತೋಟಿಯಲ್ಲಿ ಇಲ್ಲದಿರುವುದು. ಯೋಗ ದಿನಾಚರಣೆ ಹಾಗೂ ಯೋಗ ಅಭ್ಯಾಸ ಒಂದು ದಿನದ ಆಚರಣೆ ಮಾತ್ರವಲ್ಲ, ದಿನನಿತ್ಯದ ಅಭ್ಯಾಸವಾಗಿರಬೇಕು ಎಂದು ತಿಳಿಸಿದರು. ಮನಸ್ಸಿಗೆ ದುಃಖವಾದಾಗ ವೈರಾಗ್ಯ ಎನ್ನುತ್ತಾರೆ. ವೈರಾಗ್ಯ ಎಂದರೆ ಕಾಡಿಗೆ ಹೋಗುವುದಲ್ಲ, ಮನಸ್ಸನ್ನು ಕಸಿಗೊಳಿಸುವುದು. ಶರೀರ ಪಳಗಿಸುವುದು ಮನಸ್ಸು ಪಳಗಿಸುವುದು ಇದು ಯೋಗದಿಂದ ಸಾಧ್ಯ ಹಾಗೂ ಯೋಗದ ಮುಖ್ಯ ಗುರಿ. ಯೋಗಾಸನದಲ್ಲಿ ದೃಢತೆ ಇರಬೇಕು ಹಾಗೂ ಆನಂದ ಇರಬೇಕು. ಯೋಗದಿಂದ ಸ್ಥಿರತೆ ಬರಬೇಕು. ಆಗ ಅದರ ಫಲ ಸಾಧ್ಯ, ನಿತ್ಯ ಜೀವನದಲ್ಲಿ ಜೀವನ ಕ್ರಮ ಆಗಬೇಕು.

ಇತ್ತೀಚಿನ ದಿನಗಳಲ್ಲಿ ಒತ್ತಡದ ಬದುಕಿನಿಂದ ಯುವ ಸಮೂಹ ಮಾನಸಿಕ ತೊಳಲಾಟಕ್ಕೆ ಒಳಗಾಗುತ್ತಾರೆ ಇಂದು ಮೊಬೈಲ್ ನಿಂದಾಗಿ ಅನೇಕ ಒತ್ತಡಗಳುಂಟಾಗುತ್ತಿವೆ. ಅನೇಕ ಯುವ ದಂಪತಿಗಳ ಸಮಸ್ಯೆ ಮೊಬೈಲ್ ಆಗಿದೆ. ಕೌಟುಂಬಿಕ ಜೀವನದಲ್ಲಿ ದೊಡ್ಡ ಕೋಲಾಹಲ ಮಾಡಿದೆ. ಆದರೆ ದೋಷ ಇರುವುದು ನಿಮ್ಮ ಮನಸ್ಸಿನಲ್ಲೇ ಹೊರತು ಮೊಬೈಲ್‍ನಲ್ಲಿ ಅಲ್ಲ. ಎಲ್ಲಕ್ಕೂ ಮೂಲ ಕಾರಣ ಮನಸ್ಸು, ಅದನ್ನು ನಿಯಂತ್ರಣ ಮಾಡಲು ಯೋಗ ಸಹಕಾರಿ ಎಂದರು.

ವಿಶ್ವದಲ್ಲೆಡೆ ಇಂದು ಯೋಗ ದಿನ ನಡೆಯುತ್ತಿದೆ. ಯೋಗ ದಿನನಿತ್ಯದ ಜೀವನ ಕ್ರಮವಾಗಲಿ ಮನಸ್ಸು ಜೋಪಾನ ಮಾಡಲು ಯೋಗ ಸಹಕಾರಿ ಎಂಬುದನ್ನು ತಿಳಿಯಬೇಕು ಎಂದರು. ಸಾವಿರಾರು ವರ್ಷದಿಂದ ಯೋಗ ನಮ್ಮ ದೇಶದಲ್ಲಿ ಪ್ರಚಲಿತವಾಗಿದೆ. ಅಧಿಕೃತವಾಗಿ ವಿಶ್ವ ಸಂಸ್ಥೆ ಯಿಂದ ಅಂಗೀಕಾರವಾಗಿದ್ದು ಸುಮಾರು 195 ರಾಷ್ಟ್ರಗಳು ಯೋಗ ದಿನಾಚರಣೆಯನ್ನು ಆಚರಣೆ ಮಾಡುತ್ತಿವೆ. ಪತಂಜಲಿ ಶ್ರೀ ಗಳ ಯೋಗ ಸೂತ್ರದ ಸಂಖ್ಯೆ 195 ಯೋಗದಿನ ಆಚರಣೆ ಮಾಡುತ್ತಿರುವುದು 195 ರಾಷ್ಟ್ರಗಳು ಒಂದೊಂದು ಸೂತ್ರ ಒಂದೊಂದು ದೇಶದ ಪ್ರತೀಕವಾಗಿದೆ ಎಂದರು.

ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ಮಾನಸಿಕ ಏಕಾಗ್ರತೆಯನ್ನು ಕಾಪಾಡಿಕೊಳ್ಳಲು ಯೋಗ ಮತ್ತು ಧ್ಯಾನ ಬಹಳ ಮುಖ್ಯ. ಈ ಬಾರಿಯ ಯೋಗ ದಿನವನ್ನು ಸ್ವಂತ ಮತ್ತು ಸಮಾಜಕ್ಕಾಗಿ ಯೋಗ ಎಂಬ ಘೋಷದಡಿ ಆಚರಿಸಲಾಗುತ್ತಿದೆ. ಯೋಗಾಭ್ಯಾಸದಿಂದ ಆರೋಗ್ಯಕರ ಜೀವನ ನಡೆಸಬೇಕು ಎಂದರು. ಯೋಗ ಎಂಬುದು ಒಂದು ದಿನದ ಚಟುವಟಿಕೆ ಅಲ್ಲ, ಅದು ಜೀವನದ ಒಂದು ಭಾಗ, ಪ್ರತಿಯೊಬ್ಬರು ಪ್ರತಿದಿನ ಯೋಗ ಮಾಡುವುದರಿಂದ ಉತ್ತಮ ಆರೋಗ್ಯ, ನಿರ್ಮಲ ಮನಸ್ಸು ಹಾಗೂ ಮನಃಶಾಂತಿ ಹೊಂದಲು ಸಾಧ್ಯ. ಯೋಗಾಭ್ಯಾಸದಿಂದ ದೀರ್ಘಾವಧಿವರೆಗೆ ಯಾವುದೇ ಕ್ಲಿಷ್ಟಕರ ಆರೋಗ್ಯ ಸಮಸ್ಯೆಗಳಿಗೆ ಒಳಗಾಗದಂತೆ ಜೀವನ ನಡೆಸಬಹುದಾಗಿದೆ. ಯೋಗ ಹಾಗೂ ಪ್ರಾಣಾಯಾಮದಿಂದ ನಮ್ಮ ಸಂಪೂರ್ಣ ಆರೋಗ್ಯ ಕಾಪಾಡಲು ಸಾಧ್ಯ, ಇಂದಿನ ಜೀವನ ಶೈಲಿ, ಮಧುಮೇಹ, ಒತ್ತಡ ತಡೆಗೆ ಯೋಗ ಸಹಾಯಕಾರಿ ಎಂದರು.

ಕಾಯಿಲೆಗಳಿಗೆ ಮೂಲಕಾರಣ ಒತ್ತಡ ಇದನ್ನು ಕಡಿಮೆ ಮಾಡಲು ಯೋಗ ಸಹಕಾರಿ, ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಯೋಗದ ಉಪಯುಕ್ತತೆ ತಿಳಿಸಿ ಮಕ್ಕಳಲ್ಲಿ ಏಕಾಗ್ರತೆ, ಒತ್ತಡ ಮುಕ್ತಕ್ಕೆ ಯೋಗ ಸಹಾಯವಾಗುತ್ತದೆ ಎಂದರು. ಮನುಷ್ಯನಿಗೆ ದೈಹಿಕ-ಮಾನಸಿಕ ಆರೋಗ್ಯ ಹಾಗೂ ಯೋಗಕ್ಷೇಮಕ್ಕೆ ಯೋಗವು ಅವಶ್ಯವಾಗಿದೆ. ಹಾಗಾಗಿ ಪಾಲಕರು ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಯೋಗವನ್ನು ಕಲಿಸಬೇಕು, ಇದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಡಾ.ವೆಂಕಟೇಶ್.ಎಂ.ವಿ ಮಾತನಾಡಿ ನಮ್ಮ ಹಿರಿಯರು, ಗುರುಗಳು, ಋಷಿಮುನಿಗಳು ಸಾಧಕರು ಹೊಸ ಪೀಳಿಗೆಗೆ ನೀಡಿದ ಅಮ್ಯೂಲ್ಯ ಕೊಡುಗೆ ಯೋಗ, ಯೋಗದಿಂದ ಹತ್ತು ಹಲವು ಉಪಯೋಗಗಳಿವೆ. ಮಾನಸಿಕವಾಗಿ, ಭೌತಿಕ ವಾಗಿ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಯೋಗ ಸಹಕಾರಿಯಾಗಿದೆ. ತಲ್ಲಣದ ಬದುಕು, ಒತ್ತಡದ ಜೀವನದಿಂದ ಮುಕ್ತವಾಗಿರಲು ಯೋಗ ಬೇಕಿದೆ. ಜೊತೆಗೆ ತಲ್ಲಣವಾದ ಮನಸ್ಸು ಹಾಗೂ ಸಮಾಜ ಸರಿಪಡಿಸಲು ಯೋಗ ಪರಿಣಾಮಕಾರಿ ಅಸ್ತ್ರ. ನಾವು ಆರೋಗ್ಯವಂತರಾದರೆ ಸಮಾಜ, ದೇಶ ಸದೃಢ ಸಾಧ್ಯ, ನಮ್ಮ ಕ್ಷೇಮಕ್ಕಾಗಿ ಸಮಾಜದ ಕ್ಷೇಮಕ್ಕಾಗಿ ಯೋಗ ಅತ್ಯವಶ್ಯಕ ಎಂದರು.

ಈ ವೇಳೆ ಯೋಗಗುರು ವೈದ್ಯ ಶ್ರೀ ಚೆನ್ನಬಸವಣ್ಣ ಸ್ವಾಮಿ ಯೋಗದ ಮಹತ್ವ ಸಾರುವ ಮೂಲಕ ಯೋಗಾಸನದ ವಿವಿಧ ಭಂಗಿಗಳನ್ನು ಹೇಳಿಕೊಟ್ಟರು.

ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್, ಜಿಲ್ಲಾ ಪಂಚಾಯತ್ ಸಿಇಓ ಡಾ.ಸುರೇಶ್ ಬಿ.ಇಟ್ನಾಳ್, ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾದ ಡಾ ನಾಗರಾಜ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ್ ಮಠದ್, ತಹಶೀಲ್ದಾರ್ ಅಶ್ವಥ್, ಆಯುಕ್ತೆ ರೇಣುಕಾ, ಡಿಹೆಚ್‍ಒ ಡಾ.ಷಣ್ಮುಖಪ್ಪ, ಡಿಡಿಪಿಐ ಕೊಟ್ರೇಶ್, ಆಯುಷ್ ಇಲಾಖೆಯ ಅಧಿಕಾರಿ ಯೋಗೇಂದ್ರ ಕುಮಾರ್, ಯೋಗ ಒಕ್ಕೂಟದ ಅಧ್ಯಕ್ಷರಾದ ವಾಸುದೇವ ರಾಯ್ಕರ್, ಬಿ.ಎಸ್.ಸಿ ಉಮಾಪತಿ ಹಾಗೂ ಉಪಸ್ಥಿತರಿದ್ದರು.