ಕನ್ನಡದ ಲೇಖಕಿ, ಸಂಶೋಧಕಿ ಕಮಲಾ ಹಂಪನಾ ನಿಧನಕ್ಕೆ ತರಳಬಾಳು ಜಗದ್ಗುರುಗಳ ಸಂತಾಪ
ಕಮಲಾ ಹಂಪನಾ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಅಧ್ಯಾಪಕಿಯಾಗಿ, ಲೇಖಕಿ, ಸಂಶೋಧಕಿ, ಆಧುನಿಕ ವಚನಕಾರ್ತಿಯಾಗಿ ಕನ್ನಡ ಸೃಜನಶೀಲ ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ಜೈನ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸಂಶೋಧನೆ ನಡೆಸಿದಂತೆ ಕೆಳ ವರ್ಗದ ಸ್ತ್ರೀಯರ ನೋವುಗಳಿಗೂ ಧ್ವನಿಯಾಗಿದ್ದರು.
ಕನ್ನಡದ ಶ್ರೇಷ್ಠ ಕವಿ, ವಿದ್ವಾಂಸರಾದ ಡಾ. ಹಂಪನಾ ಅವರ ಪತ್ನಿಯಾಗಿ, ಜೋಡೆತ್ತಿನಂತೆ ಕನ್ನಡದ ಕೆಲಸ ಮಾಡಿದ್ದರು. ಇವರ ಸಂಶೋಧನೆಯಿಂದ ಅನೇಕ ಹೊಸ ಸಂಗತಿಗಳು ಬೆಳಕಿಗೆ ಬಂದಿವೆ.
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಬಗ್ಗೆ ಅಪಾರ ಗೌರವ, ಅಭಿಮಾನ ಹೊಂದಿದ್ದರು. ಶ್ರೀ ಬೃಹನ್ಮಠದ ವಾರ್ಷಿಕ ಉತ್ಸವವಾದ ತರಳಬಾಳು ಹುಣ್ಣಿಮೆ ಮಹೋತ್ಸವ ಮತ್ತು ಬೆಂಗಳೂರು ತರಳಬಾಳು ಕೇಂದ್ರದಲ್ಲಿ ಜರುಗುವ ಬೆಳದಿಂಗಳ ಕವಿಗೋಷ್ಠಿಯಲ್ಲಿಯೂ ಭಾಗವಹಿಸಿದ್ದರು.
ಶ್ರೀಮತಿ ಕಮಲಾ ಹಂಪನಾ ನಿಧನಕ್ಕೆ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಸಂತಾಪ ಸೂಚಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಆಶಿಸಿದ್ದಾರೆ. ಇವರ ಪತಿ ಡಾ. ಹಂಪನಾ ಮತ್ತು ಕುಟುಂಬ ವರ್ಗದವರಿಗೆ ದುಃಖವನ್ನು ಭರಿಸುವ ಶಕ್ತಿ ಭಗವಂತ ನೀಡಲೆಂದು ಹಾರೈಸಿದ್ದಾರೆ.