ಹರಿಹರ ಮಹಾಕವಿ ರಗಳೆಕವಿ ಎಂದೇ ಪ್ರಸಿದ್ಧಿ : ಕನ್ನಡ ಅಧ್ಯಾಪಕಿ ಹೆಚ್. ಜಿ. ಆಶಾ

  •  
  •  
  •  
  •  
  •    Views  

ಸಿರಿಗೆರೆ-22:  ಇಲ್ಲಿನ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಐಕ್ಯಮಂಟಪದ ಆವರಣದಲ್ಲಿ ಅಣ್ಣನ ಬಳಗದವರು ಏರ್ಪಡಿಸಿದ್ದ "ಹರಿಹರ ಮಹಾಕವಿ ಜಯಂತಿ" ಆಚರಣೆ ಕಾರ್ಯಕ್ರಮದಲ್ಲಿ ಕನ್ನಡ ಅಧ್ಯಾಪಕಿ ಹೆಚ್.ಜಿ.ಆಶಾ ಉಪನ್ಯಾಸ ನೀಡಿದರು.

12 ನೆಯ ಶತಮಾನದ ಉತ್ತರಾರ್ಧದಲ್ಲಿ ಜೀವಿಸಿದ್ದ ಪ್ರಸಿದ್ಧ ಶೈವಕವಿ. ಹರಿಹರನು ಕೆಲವು ಕಾಲ ಹೊಯ್ಸಳ ನರಸಿಂಹ ಬಲ್ಲಾಳ ರಾಜನಲ್ಲಿ ಕರಣಿಕನಾಗಿ ಸೇವೆ ಸಲ್ಲಿಸಿದ್ದಾನೆ. ತಂದೆ ಮಹದೇವ ಭಟ್ಟ, ತಾಯಿ ಶರ್ವಾಣಿ ಇವರ ಪುಣ್ಯಗರ್ಭದಲ್ಲಿ ಹಂಪೆಯಲ್ಲಿ ಜನಿಸಿದವರು. ಇವರ ಆರಾಧ್ಯ ದೈವ ಹಂಪೆಯ ವಿರೂಪಾಕ್ಷ.

ಹರಿಹರ ಕನ್ನಡ ಕಾವ್ಯ ಪರಂಪರೆಯಲ್ಲಿ ಬಹುಮುಖ್ಯ ಕವಿಗಳಲ್ಲಿ ಒಬ್ಬರು, ತನ್ನ ಕಾವ್ಯದ ಸತ್ವದಿಂದಲೇ ಜನಸಮುದಾಯದ ಕವಿಯಾಗಿದ್ದು ಹರಿಹರನ ಹೆಗ್ಗಳಿಕೆ. ಹರಿಹರನು ಪಂಪಾ ಕ್ಷೇತ್ರವನ್ನು ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡವರು. ಹಂಪೆಯ ಹರಿಹರ ಎನ್ನುವಷ್ಟರ ಮಟ್ಟಿಗೆ ಅದರಲ್ಲಿ ಲೀನವಾಗಿ ರಗಳೆಯ ಯುಗಾಂತರ ಸೃಷ್ಟಿಸಿದರು ಇವರು. ಹರಿಹರ ಕವಿಗೆ ಕಾವ್ಯ ರಚನೆಯೇ ಜೀವನ, ಜೀವನವೇ ಕಾವ್ಯ ರಚನೆ, ಕಾವ್ಯ ರಚನೆಯೇ ಶಿವಪೂಜೆಯಾಗಿತ್ತು.

ಹರಿಹರನ ರಗಳೆ ಕನ್ನಡ ಸಾಹಿತ್ಯದ ವಿಶೇಷ ಪ್ರಕಾರವಾಗಿದೆ. ಚಂಪುವಿಗೆ ಪಂಪ, ಷಟ್ಪದಿಗೆ ರಾಘವಾಂಕ ತ್ರಿಪದಿಗೆ ಸರ್ವಜ್ಞ ಇದ್ದಂತೆ ರಗಳೆಗೆ ಹರಿಹರನೇ ಸೀಮಾಪುರುಷನಾಗಿದ್ದಾನೆ.

ಹರಿಹರನು “ರಗಳೆ ಕವಿ” ಎಂದೇ ಪ್ರಸಿದ್ಧನಾಗಿದ್ದಾನೆ. 12 ನೆಯ ಶತಮಾನದ ಬಹುಮಹತ್ವದ ಶರಣ ಚಳುವಳಿ ಮತ್ತು ವಚನ ಸಾಹಿತ್ಯದ ಪ್ರಭಾವವು ಹರಿಹರನ ಮೇಲೆ ದಟ್ಟವಾಗಿದೆ. ಮೂಲತಃ ಈತನು ಭಕ್ತಿಕವಿ. ಆತನ ಕಾವ್ಯದ ತುಂಬ ಹಂಪೆಯ ವಿರೂಪಾಕ್ಷನ ಮೇಲಿದ್ದ ಭಕ್ತಿಯು ಎದ್ದು ಕಾಣುತ್ತದೆ. ಅಂತಯೇ ಆತನ ಶಿವಗಣದ ರಗಳೆಗಳಲ್ಲಿ ಶಿವಶರಣರ ಶಿವಭಕ್ತಿಯ ಉಜ್ವಲ ಚಿತ್ರಣವಿದೆ.

ಹರಿಹರನ ಶತಕದ್ವಯವು ಪ್ರಮುಖವಾಗಿ ಆತನ ಆತ್ಮಕಥನಗಳೇ ಆಗಿವೆ. ಗಿರಿಜಾ ಕಲ್ಯಾಣ ಹರಿಹರನ ಮಹೋನ್ನತ ಚಂಪೂ ಕಾವ್ಯವಾಗಿದೆ. ಆವರೆಗಿನ ಕನ್ನಡ ಚಂಪೂ ಕೃತಿಗಳಲ್ಲಿ ಕಾಣದ ಕಥಾ ವಿಷಯವು ಇಲ್ಲಿದೆ. ಶೈವ ಪುರಾಣಗಳಲ್ಲಿ ಕಂಡು ಬರುವ ಶಿವಪಾರ್ವತಿಯರ ವಿವಾಹದ ಕಥೆ ಗಿರಿಜಾ ಕಲ್ಯಾಣದ ವಸ್ತು. ಗಿರಿಜೆಯ ಜನನದಿಂದ ಶಿವನೊಡನೆ ಅವಳ ವಿವಾಹದವರೆಗೆ ಮನೋಜ್ಞವಾಗಿ ಅವಳ ಸೌಂದರ್ಯ, ಸೊಬಗು, ಭಕ್ತಿಯ ಕಠೋರತೆ ಇವುಗಳನ್ನು ಸೂಕ್ಷ್ಮವಾಗಿ ಕವಿಯು ಚಿತ್ರಿಸಿದ್ದಾನೆ. 

ಹರಿಹರ ಕವಿಯು ಗಿರಿಜಾ ಕಲ್ಯಾಣ ಎಂಬ ಚಂಪೂಕಾವ್ಯ, ಪಂಪಾಶತಕ, ರಕ್ಷಾಶತಕ, ಮುಡಿಗೆಯ ಅಷ್ಟಕ ಮತ್ತು ಶಿವಶರಣರ ರಗಳೆಗಳನ್ನೂ ರಚಿಸಿದ್ದಾರೆ. ಹರಿಹರನ ರಗಳೆಗಳಂತೂ ಆತನ ಹೆಸರನ್ನು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅಜರಾಮರಗೊಳಿಸಿರುವ ಅಮರ ಕೃತಿಗಳು. ಹರಿಹರನ ನೈಜ ಪ್ರತಿಭೆಯು ಇಲ್ಲಿ ಗೋಚರಿಸುತ್ತದೆ. ಒಟ್ಟು 106 ರಗಳೆಗಳನ್ನು ರಚಿಸಿದ್ದಾರೆ. ಬೇರೆ ಬೇರೆ ಶಿವಶರಣರ ಕಥೆಗಳನ್ನು ಈ ರಗಳೆಗಳಲ್ಲಿ ಹೇಳಲಾಗಿದೆ. ಮುಖ್ಯವಾಗಿ 63 ಪುರಾತನರ, ಅಂದರೆ ತಮಿಳಿನ ಪೆರಿಯ ಪುರಾಣದಲ್ಲಿ ಹೇಳಲಾಗಿರುವ 63 ಶಿವಭಕ್ತರ ಕಥೆಗಳು ಇಲ್ಲಿವೆ. 

ಬಸವರಾಜದೇವರ ರಗಳೆ, ತಿರುನೀಲಕಂಠದೇವರ ರಗಳೆ, ನಂಬಿಯಣ್ಣನ ರಗಳೆ, ಮಹಾದೇವಿಯಕ್ಕನ ರಗಳೆ, ಪ್ರಭುದೇವರ ರಗಳೆ, ಕುಂಬಾರ ಗುಂಡಯ್ಯನ ರಗಳೆ, ಮಾದಾರ ಚೆನ್ನಯ್ಯನ ರಗಳೆ, ಇಳೆಯಾಂಡ ಗುಡಿಮಾರನ ರಗಳೆ ಮತ್ತು ರೇವಣಸಿದ್ಧೇಶ್ವರ ರಗಳೆಗಳು ಹರಿಹರನ ಪ್ರಮುಖ ರಗಳೆಗಳಾಗಿವೆ.

ಅಣ್ಣನ ಬಳಗ ಅಧ್ಯಕ್ಷ ಬಿ.ಎಸ್.ಮರುಳಸಿದ್ದಯ್ಯ ಅಧ್ಯಕ್ಷತೆ ವಹಿಸಿದ್ದರು, ಅಣ್ಣನ ಬಳಗದ ಉಪಾಧ್ಯಕ್ಷ ಯು.ಚಂದ್ರಪ್ಪ,ಕಾರ್ಯದರ್ಶಿ ಕೆ. ವಿಜಯಾಚಾರಿ, ಸದಸ್ಯ ಬಿ.ಎಸ್. ಅರುಣ್ ಕುಮಾರ್, ವಸತಿ ನಿಲಯದ ಶಿಕ್ಷಕರಾದ  ಆಶಾ, ನಿರ್ಮಲಾ, ಸಿ.ಎಸ್.ಗಿರೀಶ್,ಜಿತೇಂದ್ರ, ನಾಗರಾಜ್, ಬಸವರಾಜ್, ಹೇಮಂತ್, ಶ್ರೀನಿವಾಸ ಮತ್ತು ಪವನ್ ವಸತಿ ನಿಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು

ಕಾರ್ಯಕ್ರಮದಲ್ಲಿ ಕುಮಾರಿ  ಎಂ. ಮಾನಸ, ಎಸ್.ಜೆ. ರಮ್ಯ ಮತ್ತು ಬಿ.ಎಂ. ರಕ್ಷಿತಾ  ವಚನ ಗೀತೆ ಹಾಡಿದರು, ಲಲಿತಾ ಸ್ವಾಗತಿಸಿದರು, ಹೊನ್ನೇಶ್ವರಿ ಸಮರ್ಪಿಸಿದರು, ಬಿ.ಸಿಂಚನಾ ನಿರೂಪಿಸಿದರು.