ಸಿರಿಗೆರೆಯಲ್ಲಿ ಮಳೆಗಾಗಾಗಿ ಪ್ರಾರ್ಥಿಸಿ ಇಂದು ಶ್ರೀ ಕಾಶಿ ಮಹಾಲಿಂಗ ಸ್ವಾಮಿಗಳ ಪರೇವು

  •  
  •  
  •  
  •  
  •    Views  


ರ್ನಾಟಕದಲ್ಲಿ ಸಾವಿರಾರು ಮಠಗಳಿದ್ದು, ಅಲ್ಲಿರುವ ಸ್ವಾಮಿಗಳ ಸಂಖ್ಯೆ ಅದಕ್ಕೂ ತ್ರಿಗುಣವಾಗಿಯೇ ಇದೆ. ಇವುಗಳಲ್ಲಿ ಕೆಲವು ಮಠಗಳು ನಾಡಿನ ಹಿತಕ್ಕೋಸ್ಕರ ಜಾತಿ-ಮತ-ಕುಲಗಳನ್ನು ಮೀರಿ, “ಸರ್ವೇಜನಾಃ ಸುಖಿನೋ ಭವಂತು", “ಬಹುಜನ ಹಿತಾಯಾ, ಬಹುಜನ ಸುಖಾಯಾ” ಎಂಬತೆ ಕೆಲಸ ಮಾಡುತ್ತಾ ಬಂದಿವೆ. ಅವುಗಳಲ್ಲಿ ಚಿತ್ರದುರ್ಗ ಜಿಲ್ಲೆಯ ಸಿರಿಗೆರೆಯಲ್ಲಿರುವ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಪ್ರಮುಖವಾದುದು.  ಈ ಮಠದ ವಿರಕ್ತಮೂರ್ತಿಗಳಾಗಿದ್ದ ಶ್ರೀ ಕಾಶಿ ಮಹಲಿಂಗಸ್ವಾಮಿಗಳವರನ್ನು ಕುರಿತು ಹೇಳುವುದೇ ಈ ಲೇಖನದ ಉದ್ದೇಶ. 

ಮಠಗಳಲ್ಲಿ ಪಟ್ಟಾಧ್ಯಕ್ಷರು, ಚರಮೂರ್ತಿಗಳು ಮತ್ತು ವಿರಕ್ತರು ಎಂಬ ಮೂರು ರೀತಿಯ ಸ್ವಾಮಿಗಳಿರುತ್ತಿದ್ದರು. ಪಟ್ಟಾಧ್ಯಕ್ಷರು ಸಮಾಜದ ಸಂಪೂರ್ಣ ಜವಾಬ್ದಾರಿಯನ್ನು ನೋಡಿಕೊಳ್ಳುವುದು, ಚರಮೂರ್ತಿಗಳು ಪಟ್ಟಾಧ್ಯಕ್ಷರು ಹೇಳಿದ ಕೆಲಸಗಳನ್ನು ಓಡಾಡಿಕೊಂಡು ಮಾಡುವುದು, ವಿರಕ್ತರು ಪಟ್ಟಾಧ್ಯಕ್ಷರು ಮತ್ತು ಚರಪಟ್ಟಾಧ್ಯಕ್ಷರಿಗೆ ಸೂತ್ರವನ್ನು ಕೊಟ್ಟು, ಆಶೀರ್ವದಿಸಿ,  ಮಠದ ಕಾರ್ಯಗಳು ಸಾಂಗವಾಗಿ ನಡೆದುಕೊಂಡು ಹೋಗಲು ನೆರವಾಗುತ್ತಿದ್ದರು. ಈ ವಿರಕ್ತ ಗುಂಪಿಗೆ ಸೇರಿದವರೇ ಶ್ರೀ ಕಾಶಿ ಮಹಲಿಂಗಸ್ವಾಮಿಗಳವರು. ಇವರು ಈಗಿನ ಕೊಟ್ಟೂರು ತಾಲ್ಲೂಕಿನ ತೂಲಹಳ್ಳಿ ಗ್ರಾಮದ ದಿದ್ದಿಗೆರ ಸಿದ್ಧಲಿಂಗಪ್ಪ ಮತ್ತು ದ್ಯಾಮವ್ವ ಎಂಬ ಶರಣ ದಂಪತಿಗಳಿಗೆ 09-02-1905 ರಲ್ಲಿ ಜನಿಸಿದರು. ಇವರ ಜನ್ಮನಾಮ ಮಹಲಿಂಗಯ್ಯ. ಬಾಲ್ಯದಲ್ಲಿ ಇವರಿಗೆ ನಾಟಕ, ಬಯಲಾಟಗಳಲ್ಲಿ ಅಭಿನಯಿಸುವ ಆಸಕ್ತಿಯಿತ್ತು. ಒಮ್ಮೆ ಒಂದು ನಾಟಕದ ತಂಡದಲ್ಲಿ ಸಿರಿಗೆರೆಗೆ ಬಂದು ಅಭಿನಯಿಸಿದ್ದರು. ಆಗ ಇವರ ಅಭಿನಯ ನೋಡಿದ ಅಂದಿನ ಪೀಠಾಧಿಪತಿಗಳು, ಈ ಹುಡುಗ ತುಂಬ ಚುರುಕಾಗಿದ್ದಾನೆ;  ಚನ್ನಾಗಿ ಅಭಿನಯಿಸುತ್ತಾನೆ. ಇವನನ್ನು ಮಠಕ್ಕೆ ವಟುವನ್ನಾಗಿ ಸ್ವೀಕರಿಸಬಹುದೆಂದು ಮನಸ್ಸಿನಲ್ಲಿಯೇ ನಿಶ್ಚಯಿಸಿದರು. ಅದಕ್ಕಾಗಿ ಈ ಹುಡುಗನನ್ನು ಕರೆದು ವಿಚಾರಿಸಿದಾಗ, ನನ್ನ ನೆಂಟನಾದ ಶಂಕರಯ್ಯ ಎಂಬುವನು ಮೈದೂರಿನಲ್ಲಿ ಅಧ್ಯಾಪಕನಾಗಿದ್ದಾನೆ. ಅವನಿಗೂ ಸನ್ಯಾಸ ದೀಕ್ಷೆ ನೀಡುವುದಾದರೆ ನಾನು ಸಹ ಬರುವೆನು ಎಂದರು. ಆಗ ಸಮಾಜದ ಪ್ರಮುಖರು ಹೋಗಿ ಶಂಕರಯ್ಯನನ್ನು ಕೇಳಿದರು. ಶಂಕರಯ್ಯನು ತನ್ನ ತಂದೆ ತಾಯಿಗಳಿಗೆ ಒಬ್ಬನೇ ಮಗನಾಗಿದ್ದರೂ ಸಮಾಜದ ಒಳಿತಿಗೆ ಸ್ವಾಮಿಗಳಾಗಲು ಒಪ್ಪಿದರು. ಹಾಗಾಗಿ ಶ್ರೀ ಶಂಕರಯ್ಯನವರು ಶ್ರೀ ಗುರುಶಾಂತರಾಜ ದೇಶಿಕೇಂದ್ರ ಮಹಾಸ್ವಾಮಿಗಳು ಎಂಬ ಅಭಿಧಾನದಿಂದ ಬೃಹನ್ಮಠದ ೧೯ನೆಯ ಜಗದ್ಗುರುಗಳಾದರು. ಶ್ರೀ ಮಹಾಲಿಂಗಯ್ಯನವರು ಶ್ರೀ ಮಹಲಿಂಗಸ್ವಾಮಿಗಳಾಗಿ ವಿರಕ್ತ ದೀಕ್ಷೆ ಪಡೆದರು. ಈ ಇಬ್ಬರಿಗೂ 1917ರಲ್ಲಿ ಯಲಹಂಕ  ಮಠದ ವಿರಕ್ತ  ಮೂರ್ತಿಗಳಾದ ಶ್ರೀ ನಂಜುಂಡಸ್ವಾಮಿಗಳವರು ಸನ್ಯಾಸ ಪದವಿ ನೀಡಿದರು. ಸನ್ಯಾಸ ದೀಕ್ಷೆ ಪಡೆದ ಮೇಲೆ   ಶ್ರೀ ಮಹಲಿಂಗಸ್ವಾಮಿಗಳವರು ಬೆಂಗಳೂರಿನಲ್ಲಿ ಸಂಸ್ಕೃತ ಅಭ್ಯಾಸ ಮಾಡಿದರು. ಮುಂದೆ ಕಾಶಿಗೆ ತೆರಳಿ ಅಲ್ಲಿ ಸಂಸ್ಕೃತದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಿದರು. ಅಲ್ಲಿ ಮೈಸೂರಿನ ಗೌರಿಶಂಕರ ಶಾಸ್ತ್ರಿಗಳು ಮತ್ತು ಗುಳೇದಗುಡ್ಡ ಮಠದ ಶ್ರೀ ಗುರುಸಿದ್ಧಪಟ್ಟದ ದೇವರು ಇವರ ಸಹಪಾಠಿಗಳಾಗಿದ್ದರು. ಕಾಶಿಯಲ್ಲಿ "ಕಾವ್ಯತೀರ್ಥ" ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಿರಿಗೆರೆಗೆ ಬಂದರು.   ಶ್ರೀ ಮಹಲಿಂಗಸ್ವಾಮಿಗಳವರು ದೀರ್ಘ ಕಾಲ ಕಾಶಿಯಲ್ಲಿದ್ದು ಬಂದಿದ್ದರರಿಂದ  ಹೆಸರಿನ ಹಿಂದೆ "ಕಾಶಿ" ಎಂಬುದು ಸೇರಿಕೊಂಡು ಶ್ರೀ ಕಾಶಿ ಮಹಲಿಂಗಸ್ವಾಮಿಗಳವರು ಎಂದೇ ಪ್ರಸಿದ್ಧರಾಗಿದ್ದರು. 

ಸಿರಿಗೆರೆಗೆ ಬಂದ ಮೇಲೆ ಪಟ್ಟಾಧ್ಯಕ್ಷರಾದ ಶ್ರೀ ಗುರುಶಾಂತರಾಜ ದೇಶಿಕೇಂದ್ರ ಮಹಾಸ್ವಾಮಿಗಳವರಿಗೆ ಹೆಗಲಿಗೆ ಹೆಗಲು ಕೊಟ್ಟು ಹಗಲಿರೆಳನ್ನದೆ ಶ್ರೀಮಠದ ಅಭಿವೃದ್ಧಿಗೆ, ಶಿಷ್ಯರ ಏಳಿಗೆಗೆ ಶ್ರಮಿಸಿದರು. ಆಗಿನ ಕಾಲದಲ್ಲಿ ದೀಪಾರಾಧನೆ ಕಾಣಿಕೆಗಾಗಿ ಹಳ್ಳಿಗಳನ್ನು ತಿರುಗಬೇಕಾಗಿತ್ತು. ಆ ಕಾಲದಲ್ಲಿ ಈಗಿನಂತೆ ರಸ್ತೆ ಸೌಕರ್ಯಗಳಿರಲಿಲ್ಲ. ಪೆಟ್ಟಿಗೆ ಗಾಡಿಯಲ್ಲಿ ಸಂಚಾರ ಮಾಡುತ್ತಿದ್ದರು. ಶಿಷ್ಯರಾದರೊ ಬಡತನ, ಅನಕ್ಷರತೆಯಿಂದ ಕೂಡಿದ್ದವರು. ಅವರಿಗೆಲ್ಲ ತಿಳುವಳಿಕೆ ಮೂಡಿಸುವ ಜವಬ್ದಾರಿ ಗುರುಗಳಾದಾಗಿತ್ತು. ಇನ್ನು ಹಳ್ಳಿಗಳಲ್ಲಿ ಬಿಡಾರ ಮಾಡಲು ಯೋಗ್ಯವಾದ ಮನೆಗಳೂ ಇರುತ್ತಿರಲಿಲ್ಲ. ಊರಿನ ದೇವಾಲಯದಲ್ಲಿಯೇ ವಾಸ ಮಾಡುವ ಪರಿಸ್ಥಿತಿಯಿತ್ತು. 

ಶ್ರೀಗಳವರು ವಾಕ್ ಸಿದ್ಧಿಗೆ ಪ್ರಸಿದ್ಧರಾಗಿದ್ದರು. ಒಮ್ಮೆ ಹರಿಹರ ತಾಲ್ಲೂಕಿನ ಹಳ್ಳಿಯೊಂದರಲ್ಲಿ ಮೊಕ್ಕಾಂ ಮಾಡಿದಾಗ, ಪೂಜ್ಯರ ಮರಿ ಒಂದು ಮನೆಯಲ್ಲಿ ಹಾಲನ್ನು ಕೇಳಿದ್ದಾನೆ. ಆ ಮನೆಯ ಯಜಮಾನ “ನಮ್ಮ ಮನೆಯಲ್ಲಿ ಹಸು ಹಾಲು ಕೊಡುವುದಿಲ್ಲ" ಎಂದು ಹೇಳಿದ್ದನ್ನು ಗುರುಗಳಿಗೆ ವರದಿ ಮಾಡಿದ್ದಾನೆ. ಅದಕ್ಕೆ ಶ್ರೀಗಳು, “ಹೌದು ಕಣೋ ಹಸು ಹಾಲು ಕೊಡದಿಲ್ಲ" ಎಂದಿದ್ದಾರೆ. ಸಂಜೆ ಯಜಮಾನ ಹಾಲು ಕರೆಯಲು ಹೋದಾಗ ಹಸು ಹಾಲು ಕೊಡಲಿಲ್ಲ. ಆಗ ಅವನಿಗೆ ತನ್ನ ತಪ್ಪಿನ ಅರಿವಾಗಿ ಪೂಜ್ಯರ ಬಳಿ ಬಂದು ಕ್ಷಮೆಯಾಚಿಸಿದನು. ಆನಂತರ ಹಸು ಹಾಲು ನೀಡಿತಂತೆ. ಹೀಗೆ ಪೂಜ್ಯ ಕಾಶಿ ಮಹಲಿಂಗಸ್ವಾಮಿಗಳವರ ಬಗ್ಗೆ ಇಂತಹ ಅನೇಕ ಪ್ರಸಂಗಗಳು ಪ್ರಚಲಿತದಲ್ಲಿದ್ದವು. 

1938 ರಲ್ಲಿ ಶ್ರಿಮಠದಲ್ಲಿ ನಡೆದ ಕಹಿ ಪ್ರಸಂಗದಲ್ಲಿ ಶ್ರೀ ಗುರುಶಾಂತರಾಜ ದೇಶಿಕೇಂದ್ರ ಮಹಾಸ್ವಾಮಿಗಳವರು ಅಕಾಲ ಮೃತ್ಯುವಿಗೆ ತುತ್ತಾದರು. ಆಗ ಶಿಷ್ಯರೆಲ್ಲರೂ ಶ್ರೀಮಠವನ್ನು ಮುನ್ನೆಡೆಸುವ ಜವಾಬ್ದಾರಿ ನಿರ್ವಹಿಸಲು ಪೂಜ್ಯರಲ್ಲಿ ಭಿನ್ನವಿಸಿಕೊಂಡರು. ಅದಕ್ಕೆ ಪೂಜ್ಯರು, “ಮುಂಬರುವ ಸ್ವಾಮಿಗಳಿಗೆ ಬೆನ್ನೆಲುಬಾಗಿ ನಿಂತು ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ ವಿನಾ ನಾವೇ ಅಧಿಕಾರ ಸೂತ್ರ ಹಿಡಿಯಲಾರೆವು" ಎಂದಿದ್ದಾರೆ. ದಿಗ್ಬ್ರಾಂತರಾದ ಶಿಷ್ಯ ಮಂಡಳಿಯು ಇದಕ್ಕೆ ಪರಿಹಾರ ಸೂಚಿಸಲು ಕೇಳಿದಾಗ, ಯಲಹಂಕ ಮಠದಲ್ಲಿರುವ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳವರ ಹೆಸರನ್ನು ಸೂಚಿಸುತ್ತಾರೆ. “ಅವರಿಂದ ಶ್ರೀಮಠಕ್ಕೆ ಉಜ್ವಲ ಭವಿಷ್ಯವಿದೆ. ಶ್ರೀ ಗುರುಶಾಂತರಾಜ ದೇಶಿಕೇಂದ್ರ ಮಹಾಸ್ವಾಮಿಗಳವರ ಸದಾಶಯವೂ ಸಹ ಇದೇ ಆಗಿತ್ತು" ಎಂದು ನುಡಿಯುತ್ತಾರೆ. ಅದರಂತೆ ಸಮಾಜದ ಮುಖಂಡರು ಯಲಹಂಕ ಮಠದ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳವರನ್ನು ಸಿರಿಗೆರೆ ಮಠದ ಉತ್ತರಾಧಿಕಾರಿಯನ್ನಾಗಿ ಆಯ್ಕೆಮಾಡಿದರು. 1940ರ ಬಸವ ಜಯಂತಿಯ ಶುಭ ಸಂದರ್ಭದಲ್ಲಿ ಶ್ರೀ ಮದುಜ್ಜಯಿನಿ ಸದ್ಧರ್ಮ ಸಿಂಹಾಸನಧೀಶ ಶ್ರೀ ತರಳಬಾಳು ಜಗದ್ಗುರು ಶ್ರೀ ೧೧೦೮ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಎಂಬ ಅಭಿಧಾನದಿಂದ ಪೀಠಾಲಂಕಾರ ಮಾಡಿದರು. ಅಂದಿನಿಂದ ಶ್ರೀ ಜಗದ್ಗುರುಗಳೊಂದಿಗೆ 32 ವರ್ಷಗಳ ಕಾಲ ಜೊತೆಗಿದ್ದು , ಶ್ರೀಮಠದ ಶ್ರೇಯೋಭಿವೃದ್ಧಿಗೆ ಶ್ರಮಿಸಿದರು. 

ಮಕ್ಕಳಿಗೆ ಅಚ್ಚುಮೆಚ್ಚಿನವರಾಗಿದ್ದ ಶ್ರೀ ಕಾಶಿ ಮಹಲಿಂಗಸ್ವಾಮಿಗಳವರು ಸದಾ ತಮ್ಮ ನಿಲುವಂಗಿಯ ಜೇಬಿನಲ್ಲಿ ಮಕ್ಕಳಿಗೆ ಪ್ರಿಯವಾದ ಮಿಠಾಯಿಗಳನ್ನು ಇಟ್ಟುಕೊಂಡಿರುತ್ತಿದ್ದರು. ಕಿಂದರಿ ಜೋಗಿಯಂತೆ ಇವರ ಸುತ್ತ ಮಕ್ಕಳ ದಂಡೇ ಸೇರುತಿತ್ತು. ತಮ್ಮ ಬಳಿಗೆ ಬರುವ ಮಕ್ಕಳಿಗೆ ತಮ್ಮ ಜೇಬಿನಲ್ಲಿರುವ ಮಿಠಾಯಿಗಳನ್ನು ನೀಡಿ ನಲಿಸುತ್ತಿದ್ದರು. 

1947 ರಲ್ಲಿ ಒಂದು ದಿನ ಶಿವಮೊಗ್ಗ ತಾಲ್ಲೂಕಿನಲ್ಲಿ ಸಂಚರಿಸುತ್ತಿರುವಾಗ ಹರಮಘಟ್ಟಕ್ಕೆ ಹೋಗಿದ್ದರು. ಆಗ ಗಂಗಮ್ಮ ಈಶ್ವರಯ್ಯ ಎಂಬ ಶರಣ ದಂಪತಿಗಳ ಚೊಚ್ಚೊಲ ಕೂಸಿಗೆ "ಶಿವಮೂರ್ತಿ" ಎಂದು ನಾಮಕಾರಣ ಮಾಡಿ, ಹರಸಿದರು. ಆ ಮಗುವೇ ಮುಂದೆ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ 21ನೆಯ ಪೀಠಾಧೀಪತಿಗಳಾಗಿ ಜಗಬೆಳಗುವ ಜಗದ್ಗುರುಗಳಾದುದು ಯೋಗಾಯೋಗವೆಂದೇ ಹೇಳಬಹುದು.

67 ವರ್ಷಗಳ ಕಾಲ ಜೀವಿಸಿದ್ದ ಪೂಜ್ಯ ಶ್ರೀ ಕಾಶಿ ಮಹಲಿಂಗಸ್ವಾಮಿಗಳವರು 1972ರ ಏಪ್ರಿಲ್ 12ರಂದು ಲಿಂಗದಲ್ಲು ಲೀನರಾದರು. ಪೂಜ್ಯರ ಆದರ್ಶನೀಯ ವ್ಯಕ್ತಿತ್ವ ನಮಗೆಲ್ಲ ಇಂದು ದಾರಿದೀಪವಾಗಿದೆ.

ಡಾ. ಎಂ ಈಶ್ವರ ಶರ್ಮ
ವಿಶ್ರಾಂತ ಹಿಂದಿ ಪ್ರಾಧ್ಯಾಪಕರು, 
# 3018/99"ನಿಹಾರಿಕಾ"
16ನೆಯ ತಿರುವು, ತರಳಬಾಳು ಬಡಾವಣೆ, 
ದಾವಣಗೆರೆ 577005
ಚರವಾಣಿ:  94484 06656